Azadi Ka Amrit Mahotsav: ಸ್ವಾತಂತ್ರ್ಯ ಚಳುವಳಿಯಲ್ಲಿ ಮಹಿಳೆಯರನ್ನು ಒಗ್ಗೂಡಿಸಿದ ಉಮಾಬಾಯಿ ಕುಂದಾಪುರ ಬಗ್ಗೆ ನಿಮಗೆಷ್ಟು ಗೊತ್ತು?

| Updated By: Rakesh Nayak Manchi

Updated on: Aug 12, 2022 | 8:00 AM

ಭಾರತವನ್ನು ಬ್ರಿಟಿಷ್ ದಾಸ್ಯದಿಂದ ಮುಕ್ತಗೊಳಿಸುವಿಲ್ಲ ಹೋರಾಟ ಮಾಡಿದವರ ಪೈಕಿ ಕರ್ನಾಟಕದ ಉಮಾಬಾಯಿ ಕುಂದಾಪುರ ಅವರು ಕೂಡ ಒಬ್ಬರು. ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕರು ಮೃತರಾದಾಗ ನಡೆದ ಮೃತದೇಹದ ಭವ್ಯ ಮೆರವಣಿಗೆಯನ್ನು ನೋಡಿದ ಉಮಾಬಾಯಿ ಸ್ವಾತಂತ್ರ್ಯ ಚಳುವಳಿಗೆ ಧುಮುಕಿ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.

Azadi Ka Amrit Mahotsav: ಸ್ವಾತಂತ್ರ್ಯ ಚಳುವಳಿಯಲ್ಲಿ ಮಹಿಳೆಯರನ್ನು ಒಗ್ಗೂಡಿಸಿದ ಉಮಾಬಾಯಿ ಕುಂದಾಪುರ ಬಗ್ಗೆ ನಿಮಗೆಷ್ಟು ಗೊತ್ತು?
ಉಮಾಬಾಯಿ ಕುಂದಾಪುರ
Follow us on

ಭಾರತವನ್ನು ಬ್ರಿಟಿಷ್ ದಾಸ್ಯದಿಂದ ಮುಕ್ತಗೊಳಿಸುವಲ್ಲ ಹೋರಾಟ ಮಾಡಿದವರ ಪೈಕಿ ಕರ್ನಾಟಕದ ಉಮಾಬಾಯಿ ಕುಂದಾಪುರ ಅವರು ಕೂಡ ಒಬ್ಬರು. ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕರು ಮೃತರಾದಾಗ ನಡೆದ ಮೃತದೇಹದ ಭವ್ಯ ಮೆರವಣಿಗೆಯನ್ನು ನೋಡಿದ ಉಮಾಬಾಯಿ ಸ್ವಾತಂತ್ರ್ಯ ಚಳುವಳಿಗೆ ಧುಮುಕಿ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ತನಗೆ ಬರಬಹುದಾಗಿದ್ದ ಪ್ರಶಸ್ತಿ ಪುರಸ್ಕಾರ, ಸರಕಾರದ ಉನ್ನತ ಹುದ್ದೆಗಳನ್ನೆಲ್ಲಾ ತ್ಯಜಿಸಿದರು. ಸ್ವಾತಂತ್ರ್ಯ ಸಂಗ್ರಾಮದ ವೇಳೆ ಮನೆಯಲ್ಲೇ ಕುಳಿತಿದ್ದ ಮಹಿಳೆಯರನ್ನೆಲ್ಲಾ ಹೋರಾಟದಲ್ಲಿ ಭಾಗಿಯಾಗುವಂತೆ ಮಾಡಿದ ಅಪರೂಪದ ಮಹಿಳೆ ಇವರಾಗಿದ್ದಾರೆ.

ಉಮಾಬಾಯಿಯವರು 1892ರ ಮಾ.25ರಂದು ಕುಂದಾಪುರದ ಬ್ರಾಹ್ಮಣ ಕುಟುಂಬದಲ್ಲಿ ಜನಿಸುತ್ತಾರೆ. ಇವರ ಬಾಲ್ಯದ ಹೆಸರು ಭವಾನಿ ಗೋಳಿಕೇರಿ. ಇವರ ತಂದೆ ಗೋಳಿಕೇರಿ ಕೃಷ್ಣರಾವ್ ಮತ್ತು ತಾಯಿ ತುಂಗಾಬಾಯಿ. 1898ರಲ್ಲಿ ತನ್ನ ಸಹೋದರರ ಜೊತೆಗೆ ಉಮಾಬಾಯಿಯವರೂ ಮುಂಬಯಿ ಮಹಾನಗರವನ್ನು ಸೇರಿಕೊಂಡರು. 1905ರಲ್ಲಿ ತಮ್ಮ 12ನೇ ವಯಸ್ಸಿನಲ್ಲಿ ಸಂಜೀವರಾವ್ ಕುಂದಾಪುರ ಅವರನ್ನು ಮದುವೆಯಾದರು.

ಉಮಾಬಾಯಿ ಅವರ ಮಾವ ಆನಂದರಾವ್ ಕುಂದಾಪುರ ಸುಧಾರಣಾವಾದಿ ಮತ್ತು ಮಹಿಳಾ ಸಬಲೀಕರಣದ ಕುರಿತಾಗಿ ಹೆಚ್ಚಿನ ಒಲವಿದ್ದ ಹಿನ್ನೆಲೆ ಉಮಾಬಾಯಿ ಅವರ ಶಿಕ್ಷಣ ವಿವಾಹದ ನಂತರವೂ ಮುಂದುವರಿಯಿತು. ಸುಮಾರು 25 ವರ್ಷದ ವಯಸಿನ ತನಕ ಆನಂದರಾವ್ ಸೊಸೆ ಉಮಾಬಾಯಿಗೆ ವಿದ್ಯಾಭ್ಯಾಸದ ವಿಷಯದಲ್ಲಿ ಹೆಚ್ಚಿನ ಸಹಾಯ ಮಾಡಿದರೂ ತನ್ನ ದುರ್ಬಲ ಆರೋಗ್ಯದ ಕಾರಣದಿಂದಾಗಿ ವಿದ್ಯಾಭ್ಯಾಸವನ್ನು ಮುಂದುವರಿಸಲಾಗಲಿಲ್ಲ. ಹೀಗಾಗಿ ಪಿಯುಸಿ ವಿದ್ಯಾಭ್ಯಾಸವನ್ನಷ್ಟೇ ಪಡೆದರು. ಅಂದಿನ ಕಾಲದಲ್ಲಿ ದಕ್ಷಿಣ ಕನ್ನಡದಲ್ಲಿ ಮೆಟ್ರಿಕ್ಯುಲೇಷನ್ ವಿದ್ಯಾಭ್ಯಾಸವನ್ನು ಪಡೆಯುವುದು ದೊಡ್ಡ ಸಾಧನೆಯೇ ಆಗಿತ್ತು. ಹೀಗಾಗಿ ಉಮಾಬಾಯಿಯವರನ್ನು ಮುಂಬೈನ ಸಾರಸ್ವತ ಮಹಿಳಾ ಸಮಾಜವು ಅವರನ್ನು ಕರೆದು ಗೌರವಿಸಿತು.

1920ರ ಆ.1ರಂದು ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ್ ತಿಲಕ್ ಅವರು ಮೃತರಾದರು. ಇವರ ಮೃತದೇಹದ ಭವ್ಯ ಮೆರವಣಿಗೆಯು ನೋಡಿದ ಉಮಾಬಾಯಿ ಅವರಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕುವಂತೆ ಮಾಡಿತು. ಅದರಂತೆ ಸ್ವಇಚ್ಛೆಯಿಂದ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದರು. 1920ರ ಸೆ.4ರಂದು ಮಹಾತ್ಮ ಗಾಂಧೀಜಿಯವರು ಅಸಹಕಾರ ಚಳುವಳಿಗೆ ಕರೆಕೊಟ್ಟಾಗ ಉಮಾಬಾಯಿ ಅವರು ತನ್ನ ಪತಿ ಸಂಜೀವರಾವ್ ಮತ್ತು ಸಹೋದರ ರಘುರಾಮರಾವ್ ಜೊತೆ ಸೇರಿ ಭಾಗವಹಿಸಿದರು. ಉಮಾಬಾಯಿ ಅವರು ಮನೆಮನೆಗೆ ತೆರಳಿ ಮಹಿಳೆಯರನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಲು ಪ್ರೇರೇಪಿಸಿದರು.

ಉಮಾಬಾಯಿ ತನ್ನ 31ನೇ ವರ್ಷದಲ್ಲೇ ತನ್ನ ಪತಿಯನ್ನು ಕಳೆದುಕೊಂಡರು. ಪತಿಯ ಮರಣಾನಂತರ  ಅವರು ಮಾವನೊಂದಿಗೆ ಹುಬ್ಬಳ್ಳಿಗೆ ಹಿಂತಿರುಗಿದರು. ಆನಂದರಾವ್ ಅವರು ಹುಬ್ಬಳ್ಳಿಯಲ್ಲಿ ಕರ್ನಾಟಕ ಪ್ರೆಸ್ ಅನ್ನು ಆರಂಭಿಸಿದರು. ಅಷ್ಟೇ ಅಲ್ಲದೆ, ಡಾ. ನಾ. ಸು. ಹರ್ಡೀಕರ್ ಅವರು ಭಾರತೀಯ ಯುವಕರನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸುವಂತೆ ಪ್ರೇರೇಪಿಸುವ ಸಲುವಾಗಿ 1923ರಲ್ಲಿ ಹುಬ್ಬಳ್ಳಿಯಲ್ಲಿ ಆರಂಭಿಸಿದ ಹಿಂದೂಸ್ತಾನಿ ಸೇವಾ ದಳವನ್ನು ಸೇರಿಕೊಂಡು ಮಹಿಳಾ ವಿಭಾಗದ ಮುಖ್ಯಸ್ತೆಯಾಗಿಯೂ ಆಯ್ಕೆಯಾದರು.

1924ರ ಸುಮಾರಿಗೆ ಮಹಾತ್ಮಾ ಗಾಂಧಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ಉಮಾಬಾಯಿ ಅವರು ಅತ್ಯುತ್ಸಾಹದಿಂದ ಭಾಗಿಯಾದರು. ರಾಜ್ಯಾದ್ಯಂತ ತಿರುಗಾಡಿ ಸುಮಾರು 150ಕ್ಕಿಂತ ಹೆಚ್ಚು ಮಂದಿ ಮಹಿಳೆಯರನ್ನು ಅದರಲ್ಲೂ ಮನೆಯಲ್ಲಿ ಕುಳಿತ ವಿಧವೆಯರನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸುವಂತೆ ಮಾಡಿದರು. ಈ ಸಮ್ಮೇಳನವು ಉಮಾದೇವಿಯವರನ್ನು ಹಲವಾರು ರಾಷ್ಟ್ರೀಯ ನಾಯಕರ ಸಂಪರ್ಕಕ್ಕೆ ಬರುವಂತೆ ಮಾಡಿತು.

ಸ್ವಾತಂತ್ರ್ಯ ಹೋರಾಟದಲ್ಲಿ ತೀವ್ರವಾಗಿ ಭಾಗವಹಿಸುತ್ತಿದ್ದ ಉಮಾಬಾಯಿಯವರನ್ನು 1932ರಲ್ಲಿ ಬ್ರಿಟೀಷ್ ಸರ್ಕಾರವು ಬಂಧಿಸಿ 4 ತಿಂಗಳವರೆಗೆ ಯರವಾಡದ ಕಾರಗೃಹದಲ್ಲಿ ಇರಿಸಿತು. ಜೈಲಿನಲ್ಲಿ ಇದ್ದ ಸಮಯದಲ್ಲಿ ಮಾವ ಆನಂದರಾವ್ ತೀರಿಕೊಂಡ ಸುದ್ದಿ ಉಮಾಬಾಯಿಗೆ ತಲುಪಿತು. ತನಗೆ ಎಲ್ಲಾ ರೀತಿಯಲ್ಲಿ ಬೆಂಬಲವಾಗಿ ನಿಂತ ಮಾವ ಆನಂದರಾಯರ ನಿಧನದ ವಿಷಯ ಕೇಳಿ ಕುಸಿದುಹೋದರು. ಈ ವೇಳೆ ಅದೇ ಕಾರಗೃಹದಲ್ಲಿದ್ದ ಸರೋಜಿನಿ ನಾಯ್ಡು ಉಮಾಬಾಯಿಯವರಿಗೆ ಧೈರ್ಯ ತುಂಬಿದರು. ಸಂಗ್ರಾಮಕ್ಕೆ ಸಂಬಂಧಿಸಿದ ಎಲ್ಲಾ ಕಾರ್ಯಚಟುವಟಿಕೆಗಳನ್ನು ಗುಪ್ತವಾಗಿ ನಿರ್ವಹಿಸುವಂತೆ ಸಲಹೆ ನೀಡಿದರು.

ಜೈಲು ಶಿಕ್ಷೆ ಮುಗಿಸಿ ಅವರು ಹಿಂತಿರುಗುವ ಹೊತ್ತಿಗೆ ಬ್ರಿಟಿಷ್ ಸರ್ಕಾರವು ಆನಂದರಾವ್ ಸ್ಥಾಪಿಸಿದ್ದ ಕರ್ನಾಟಕ ಪ್ರೆಸ್ ಪತ್ರಿಕೆಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು ಮತ್ತು ತಿಲಕ್ ಕನ್ಯಾ ಶಾಲೆಗೆ ಬೀಗ ಜಡಿದಿತ್ತು. ಅಲ್ಲದೆ ಅವರು ಪ್ರಾರಂಭಿಸಿದ ಸ್ವಯಂಸೇವಾ ಸಂಘಟನೆ ಭಗಿನಿ ಮಂಡಲವನ್ನು ಕಾನೂನುಬಾಹಿರವೆಂದು ಘೋಷಿಸಲಾಗಿತ್ತು. ಆದರೆ ಇದರಿಂದ ಎದೆಗುಂದದ ಉಮಾಬಾಯಿ ತನ್ನ ಸಣ್ಣ ಮನೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಆಶ್ರಯ ನೀಡಲು ಪ್ರಾರಂಭಿಸಿದರು.

1942ರಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿಯ ಹಾಗೂ ಸ್ವಾತಂತ್ರ್ಯ ಸಂಗ್ರಾಮದ ಕಾವೇರುತ್ತಿದ್ದ ಸಮಯದಲ್ಲಿ ಭೂಗತರಾಗಿದ್ದುಕೊಂಡು ಸಂಗ್ರಾಮದಲ್ಲಿ ಭಾಗವಹಿಸುತ್ತಿದ್ದ ಹಲವಾರು ಮಂದಿ ಹೋರಾಟಗಾರರು ಉಮಾಬಾಯಿಯವರ ಮನೆಯಲ್ಲಿ ಬಂದು ತಂಗುತ್ತಿದ್ದರು. ಬ್ರಿಟೀಷರ ಕಣ್ಣುತಪ್ಪಿಸಿ ಅವರಿಗೆ ಆಹಾರ, ವಸತಿಯ ಸೌಲಭ್ಯವನ್ನು ಒದಗಿಸುವ ಕೆಲಸವನ್ನು ಉಮಾಬಾಯಿಯವರು ಮಾಡುತ್ತಿದ್ದರು.

ಭಾರತವು ಸ್ವಾತಂತ್ರ್ಯ ಪಡೆಯುವ ಹೊತ್ತಿಗೆ ಉಮಾಬಾಯಿಯವರ ಹೆಸರು ಸಾಕಷ್ಟು ಪ್ರಸಿದ್ಧಿಯಾಗಿತ್ತು. ತಾನು ಮಾಡಿದ ಕೆಲಸಕಾರ್ಯಗಳಿಂದ ಹಲವು ರಾಷ್ಟ್ರೀಯ ನಾಯಕರ ಗಮನ ಸೆಳೆದಿದ್ದರು ಇದನ್ನು ಬಳಸಿಕೊಂಡು ರಾಜಕೀಯ ಪ್ರವೇಶಿಸುವ ಹಲವು ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದವು. ಸ್ವಾತಂತ್ರ್ಯ ಹೋರಾಟಗಾರರಿಗೆ ಕೊಡಮಾಡುವ ರಾಷ್ಟ್ರೀಯ ಮತ್ತು ರಾಜ್ಯ ಸರ್ಕಾರದ ಪಿಂಚಣಿಯನ್ನು ಮತ್ತು ಮುಂಚೂಣಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ತಾಮ್ರಪತ್ರ ಪ್ರಶಸ್ತಿಯನ್ನೂ ಸ್ವೀಕರಿಸಲು ಒಪ್ಪಲಿಲ್ಲ. ಅವರು ಸಾಮಾನ್ಯ ಸ್ವಯಂಸೇವಕಿಯಾಗಿಯೇ ಇರಲು ಬಯಸಿದರು. ಉಮಾಬಾಯಿ ಅವರು 1992ರಲ್ಲಿ ಹುಬ್ಬಳ್ಳಿಯಲ್ಲಿ ನಿಧನರಾದರು.