ಆಗಸ್ಟ್ ತಿಂಗಳು ಆಗಷ್ಟೇ ಕಳೆದು ಚಳಿಗಾಲದ ಆಗಮನಕ್ಕೆ ಪ್ರಕೃತಿ ಸಜ್ಜುಗೊಳ್ಳುತ್ತಿದ್ದ ಸಮಯ. ಸ್ವೀಡನ್ ನ ದಕ್ಷಿಣದಂಚಿನಲ್ಲಿ ಬಾಲ್ಟಿಕ್ ಸಮುದ್ರ ತೀರದಿಂದ ಮಾರು ದೂರದಲ್ಲಿದ್ದ ಫಾಲ್ಸ್ ಟರ್ಬೊ ಎಂಬ ಒಂದು ಹಳ್ಳಿ ಅದು. ಅಲ್ಲಿನ ಕ್ಯಾಂಪಿಂಗ್ ಜಾಗವೊಂದರಲ್ಲಿ ಹಸಿರು ಬಣ್ಣದ ಚಿಕ್ಕ ಟೆಂಟಿನೊಳಗೆ ಮುರುಟಿಕೊಂಡು ಮಲಗಿದ್ದೆ ನಾನು. ಭರ್ರೋ ಎಂದು ಬೀಸುತ್ತಿದ್ದ ಗಾಳಿ ನೀನೋ ನಾನೋ ಎಂಬಂತೆ ನಮ್ಮ ಟೆಂಟಿನ ಜೊತೆ ವಾಗ್ವಾದಕ್ಕಿಳಿದಿತ್ತು. ದಪ್ಪದ ಕೋಟು, ಟೊಪ್ಪಿ, ಕೈಗವಸು, ಕಾಲುಚೀಲಗಳನ್ನು ಹಾಕಿಕೊಂಡೇ ಮಲಗುವ ಚೀಲದೊಳಗೆ ಜಾರಿದ್ದರೂ ಕೊರೆಯುವ ಚಳಿಗೆ ಹೊಟ್ಟೆಯಾಳದಿಂದ ನಡುಕ ಹುಟ್ಟಿ ಇನ್ನು ನಿದ್ರಿಸಲು ಸಾಧ್ಯವೇ ಇಲ್ಲ ಎಂದು ಖಚಿತವಾಗಿತ್ತು. ಪಕ್ಕದಲ್ಲೇ ಮಲಗಿದ್ದ ನನ್ನ ಗಂಡನ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಹಾಗೂ ಹೀಗೂ ಒದ್ದಾಡಿ ಆ ಸುಧೀರ್ಘ ರಾತ್ರಿಯನ್ನು ಕಳೆದು, ನಸುಕು ಕಣ್ಣೊಡೆಯುವ ಹೊತ್ತಿಗೆ ನಮ್ಮ ಪುಟ್ಟ ಮನೆಯಿಂದ ಹೊರಗೆ ಹಾರಿದ್ದೆವು!
-ಸುಚೇತಾ ಕೆ. ನಾರಾಯಣ್
ಸ್ಕ್ಯಾಂಡಿನೇವಿಯಾ ಪ್ರಾಂತ್ಯದ ಉತ್ತರದ ಕಾಡುಗಳು, ಬೆಟ್ಟ ಗುಡ್ಡಗಳು ಬೇಟೆಯ ಹಕ್ಕಿಗಳೆಂದು (ಬರ್ಡ್ಸ್ ಆಫ್ ಪ್ರೇ) ಕರೆಸಿಕೊಳ್ಳುವ ಹದ್ದು, ಗಿಡುಗಗಳಂತಹ ಪಕ್ಷಿಗಳು ಸಂತಾನಾಭಿವೃದ್ಧಿ ಮಾಡುವ ಜಾಗ. ವಸಂತ ಋತುವಿನ ಆರಂಭದಲ್ಲಿ ದಕ್ಷಿಣ ದೇಶಗಳಿಂದ ವಲಸೆ ಬರುವ ಇವು ಬೇಸಿಗೆ ಕಾಲದಲ್ಲಿ ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ಮರಿಗಳು ಬೆಳೆದು ಹಾರಲು ಕಲಿತವೆಂದರೆ ತಂದೆ, ತಾಯಿಯರ ಕರ್ತವ್ಯ ಮುಗಿದಂತೆ. ವಾತಾವರಣದ ತಾಪಮಾನ ಶೂನ್ಯಕ್ಕಿಳಿಯುವ ಮೊದಲು ಅಲ್ಲಿಂದ ಹೊರಟು ಬೆಚ್ಚಗಿನ ಜಾಗಗಳನ್ನು ತಲುಪಿಕೊಳ್ಳುವುದು ಮುಂದಿನ ಕೆಲಸ. ಹೀಗೆ ಹೊರಟ ವೈಟ್ ಟೈಲ್ಡ್ ಈಗಲ್, ಹನಿ ಬುಝರ್ಡ್, ಮೆರ್ಲಿನ್, ಸ್ಪಾರೋ ಹಾಕ್, ಹಾಬಿ ಮುಂತಾದ ಬೇಟೆಯ ಹಕ್ಕಿಗಳು ಆಫ್ರಿಕಾ, ಏಷ್ಯಾ ಖಂಡದವರೆಗೂ ಪ್ರಯಾಣ ಬೆಳೆಸುತ್ತವೆ. ಇವು ನೀರಿನ ಹಕ್ಕಿಗಳಲ್ಲವಾದ್ದರಿಂದ ಆದಷ್ಟು ಭೂಮಿಯನ್ನು ಕಾಲಡಿಗೆ ಇಟ್ಟುಕೊಂಡೇ ಹಾರುತ್ತವೆ. ನೀರೆಂದರೆ ವಿಪರೀತ ಭಯಪಡುವ ಇವುಗಳಿಗೆ ಸವಾಲೆಂಬಂತೆ ಎದುರಾಗುವುದು ವಿಶಾಲವಾದ ಬಾಲ್ಟಿಕ್ ಸಮುದ್ರ. ಹಾಗಾಗಿ ಸ್ವೀಡನ್ನಿಂದ ನೇರವಾಗಿ ಪೋಲೆಂಡ್ ತಲುಪದೆ ಸ್ವೀಡನ್ ದೇಶದ ದಕ್ಷಿಣದಲ್ಲಿ ಹೊರಚಾಚಿಕೊಂಡಿರುವಂತಹ ಫಾಲ್ಸ್ ಟರ್ಬೊದವರೆಗೂ ಬಂದು ಅಲ್ಲಿಂದ ಕಣ್ಣಳತೆಯಲ್ಲೇ ಕಾಣುವ ಡೆನ್ಮಾರ್ಕ್ಗೆ ಹಾರಿಬಿಡುತ್ತವೆ. ಸಾವಿರಾರು ಹಕ್ಕಿಗಳು ಇದೇ ಮಾರ್ಗವನ್ನು ಅನುಸರಿಸುವುದರಿಂದ ಸೆಪ್ಟೆಂಬರ್ ನಿಂದ ಅಕ್ಟೋಬರ್ ತಿಂಗಳ ಕೊನೆಯವರೆಗೂ ಫಾಲ್ಸ್ ಟರ್ಬೊ ಎಂಬ ಪುಟ್ಟ ಹಳ್ಳಿ ಪಕ್ಷಿ ಕಾಶಿಯಾಗಿ ಬದಲಾಗುತ್ತದೆ. ನೂರಾರು ಪಕ್ಷಿವೀಕ್ಷಕರು ತಿಂಗಳುಗಟ್ಟಲೆ ಬೆಳಿಗ್ಗೆಯಿಂದ ಸಂಜೆಯವರೆಗೂ ತಮ್ಮ ದುರ್ಬೀನು ಹಿಡಿದು ಪ್ರತಿಯೊಂದು ಹಕ್ಕಿಗಳನ್ನೂ ಗಮನಿಸಿ ಲೆಕ್ಕವಿಡುತ್ತಾರೆ. ವರ್ಷವೂ ಸೆಪ್ಟೆಂಬರ್ ತಿಂಗಳಲ್ಲಿ ನಡೆಯುವ ಫಾಲ್ಸ್ ಟರ್ಬೊ ಬರ್ಡ್ ಫೆಸ್ಟಿವಲ್ ಗೆ ಹಲವೆಡೆ ಗಳಿಂದ ಪಕ್ಷಿಪ್ರೇಮಿಗಳು ಆಗಮಿಸಿ ಸಂಭ್ರಮಿಸುತ್ತಾರೆ.
ಅಲ್ಲಿ ನಡೆಯುತ್ತಿದ್ದ ಬರ್ಡ್ ಫೆಸ್ಟಿವಲ್ ನಲ್ಲಿ ಭಾಗಿಯಾಗಲೆಂದು ನಾವೂ ಅಂದು ಫಾಲ್ಸ್ ಟರ್ಬೊ ನಲ್ಲಿದ್ದೆವು. ಮಲಗಿ ರಾತ್ರಿ ಕಳೆಯುವುದು ಸಾಹಸವೆನಿಸಿ ಹೊತ್ತು ಮೂಡುವ ಮೊದಲೇ ಎದ್ದು ಆಚೀಚೆ ಓಡಾಡತೊಡಗಿದೆವು. ನಡೆದಷ್ಟೂ ಬೆಚ್ಚಗೆನಿಸಿ, ಹಾಗೇ ಹೆಜ್ಜೆ ಇಡುತ್ತಾ ಬಾಲ್ಟಿಕ್ ಸಮುದ್ರ ತೀರ ತಲುಪಿದೆವು. ನಮ್ಮ ದೇಶದಲ್ಲಿನ ಸಮುದ್ರಗಳಂತೆ ಸದ್ದು ಮಾಡುವ ಭಾರೀ ಅಲೆಗಳ ಕಡಲಲ್ಲ ಅದು. ಕಲ್ಲು ಬಂಡೆಗಳ ನಡುವೆ ಕುಳಿತ ಪ್ರಶಾಂತ ಸರೋವರವೇನೋ ಎನ್ನುವಷ್ಟು ನಿಶ್ಯಬ್ದವಾಗಿತ್ತು. ಅಲ್ಲಲ್ಲಿ ಕಪ್ಪು ಕಪ್ಪಾಗಿ ತೇಲುತ್ತಿದ್ದ ಹಂಸ ಪಕ್ಷಿಗಳಿದ್ದವು. ಗುಂಪು ಗುಂಪಾಗಿ ಈಜುತ್ತಿದ್ದ ಬಾತುಗಳಿದ್ದವು. ಕೆಲ ಹೊತ್ತಿಗೆ ದೂರದ ದಿಗಂತದಲ್ಲಿ ತೆಳುವಾದ ಬೆಳಕ ಎಳೆ ಕಂಡಿತು. ಸಮಯ ಕಳೆದಂತೆ ಮುಂದಿದ್ದ ಕರಿ ಮರಗಳ ಸಾಲಿನ ಬೆನ್ನಿಗೆ ಕೇಸರಿ ಬಣ್ಣ ಹರಡಿತು. ಆಗಸದ ತುಂಬೆಲ್ಲ ಚಿತ್ತಾರ. ಅಕ್ಕ ಪಕ್ಕದ ಪೊದೆಗಳಲ್ಲಿ ಹಕ್ಕಿಗಳ ಗಿಜಿಗಿಜಿ ಮೊದಲಾಯಿತು. ನಿಧಾನವಾಗಿ ಸೂರ್ಯ ಮರಗಳ ಮರೆಯಲ್ಲಿ ಇಣುಕಿದ. ಮಾತುಗಳೂ ಮರೆತುಹೋಗುವ ಕ್ಷಣಗಳವು. ಮನಸ್ಸು ಮಾತ್ರ ಮೂಡಲ ಮನೆಯ ಮುತ್ತಿನ ನೀರಿನ ಎರಕಾವಾ ಹೊಯ್ದ ಎಂದು ಬೇಂದ್ರೆಯವರ ಹಾಡ ಗುನುಗಿತ್ತು. ಆ ಸುಂದರ ಮುಂಜಾನೆ, ಶಾಂತ ಕಡಲ ದಡ, ನೀರವತೆ, ಅದನ್ನು ಬೇಧಿಸಲೆಂಬಂತೆ ಆಗಾಗ ಕೇಳಿಬರುತ್ತಿದ್ದ ಹಕ್ಕಿಗಳ ಚಿಲಿಪಿಲಿ ಪ್ರತಿಯೊಂದೂ ಸ್ವರ್ಗಸದೃಶವೆನಿಸಿತ್ತು. ನನ್ನವನ ಜೊತೆಯಲ್ಲಿ ಬೆಚ್ಚಗೆ ಕುಳಿತು ನಾನಂತೂ ಆ ಅಪೂರ್ವ ದೃಶ್ಯವನ್ನು ಕಣ್ತುಂಬಿಕೊಂಡೆ.
ಸೂರ್ಯ ಮೇಲೆ ಬಂದಂತೆಲ್ಲ ಕಪ್ಪಾದ ಆಕೃತಿಗಳು ಬಣ್ಣ ತಳೆಯತೊಡಗಿದವು. ಆಕಾಶ ತಿಳಿ ನೀಲಿಯಾದರೆ ನೆಲವೆಲ್ಲ ಹಸಿರಾಯಿತು. ಹೆತರ್ (Heather ) ಎಂದು ಕರೆಯಲ್ಪಡುವ ಗುಲಾಬಿ ಬಣ್ಣದ ಕಾಡು ಹೂವುಗಳು ಅರಳಿ ನಿಂತು ಪರಿಮಳ ಬೀರುತ್ತಿದ್ದವು. ಇಬ್ಬನಿಯ ಜವನಿಕೆ ಎಲ್ಲೆಲ್ಲೂ ಹರಡಿ ಮಾಯಾಲೋಕವೊಂದನ್ನು ಸೃಜಿಸಿತ್ತು. ಗುಳುಮುಳುಕ ಹಕ್ಕಿಗಳು, ಮಲ್ಲಾರ್ಡ್, ಟೀಲ್ ಮುಂತಾದ ಬಾತು ಕೋಳಿಗಳ ಜೊತೆಗೆ ಕೆಂಪು ಕೊಕ್ಕಿನ ಬಿಳಿಯ ಮೈಯ್ಯ ಹಂಸ ಪಕ್ಷಿಗಳು ಜಲವಿಹಾರ ಮಾಡುತ್ತಿರುವಂತಿತ್ತು. ಇವೆಲ್ಲದರೊಳಗೆ ನಾವೂ ಒಂದಾಗಿ ಅಲ್ಲಿ ಕೂತಿರುವ ಸಮಯದಲ್ಲಿ ಬಕ ಪಕ್ಷಿಯ ಜಾತಿಗೆ ಸೇರಿದ ಜವುಗಿನ ಹಕ್ಕಿಯೊಂದು ಸಮೀಪದಲ್ಲಿ ಬಂದಿಳಿಯಿತು. ನಾವು ಹತ್ತಿರದಲ್ಲಿ ಕುಳಿತಿದ್ದ ಪರಿವೆಯೇ ಇಲ್ಲದೆ ಆ ಸುಂದರ ಬೆಳಗನ್ನು ಸವಿಯುತ್ತಿದೆಯೆಂಬಂತೆ ಸೂರ್ಯನೆಡೆಗೆ ಮುಖ ಮಾಡಿ ನಿಂತುಬಿಟ್ಟಿತು. ಬೂದು ಬಣ್ಣದ ಮೈ, ಕಪ್ಪು ನೀಲಿ ಮಿಶ್ರಿತ ಪುಕ್ಕಗಳು, ತಲೆಯ ಮೇಲೆ ಸಣ್ಣ ನೀಲಿ ಗರಿಗಳು, ಮೀನು ಹಿಡಿಯುವುದಕ್ಕೆ ಅನುಕೂಲವಾಗುವಂತೆ ಉದ್ದವಾದ ಕೆಂಪು ಕೊಕ್ಕು, ಜವುಗು ಪ್ರದೇಶಗಳಲ್ಲಿ ಆರಾಮಾಗಿ ನಡೆಯಲು ಸಹಾಯಮಾಡುವ ನೀಳವಾದ ಕೆಂಪು ಕಾಲುಗಳಿದ್ದ ಗ್ರೇ ಹೆರಾನ್ ಎಂಬ ಪಕ್ಷಿ ಅದು. ತಪಸ್ಸಿಗೆ ನಿಂತಂತೆ ನಿಂತ ಅದರ ಭಾವ ಭಂಗಿ ನೋಡುತ್ತಾ ಪ್ರಕೃತಿಯ ಅಪೂರ್ಣ ಚಿತ್ರವೊಂದು ಪರಿಪೂರ್ಣವಾದಂತೆನಿಸಿ ಒಂದಷ್ಟು ಫೋಟೋ ಸೆರೆಹಿಡಿದೆವು.
ಅಂದು ಚಳಿಗೆ ಹೆದರಿ ನಡೆದು ಬಂದವರಿಗೆ ಮತ್ತೆ ಮತ್ತೆ ಮೆಲುಕು ಹಾಕುವಂತಹ ಅದ್ಭುತ ಮುಂಜಾವು ದರ್ಶನವಿತ್ತಿತ್ತು. ನಮ್ಮ ನೆನಪಿನ ಜೋಳಿಗೆಗೆ ಹೊಸದೊಂದು ಕ್ಷಣ ಸೇರ್ಪಡೆಯಾಯಿತು. ಆದರೆ ಅಷ್ಟರಲ್ಲಾಗಲೇ ಸಮಯ 7 ಗಂಟೆ ಸಮೀಪಿಸುತ್ತಿತ್ತು. ಅಂದಿನ ನಮ್ಮ ಕಾರ್ಯಕ್ರಮಗಳ ಪಟ್ಟಿ ದೊಡ್ಡದಿತ್ತು. ಅಲ್ಲದೆ ಹೊಟ್ಟೆ ಬೆಳಗಿನ ಕಾಫಿ ಕೇಳುತ್ತಿತ್ತು.ಇನ್ನೊಂದಷ್ಟು ಹೊತ್ತು ಅಲ್ಲೇ ಇರುವ ಮನಸ್ಸಿದ್ದರೂ ನಿರ್ವಾಹವಿಲ್ಲದೆ ಬಂದ ದಾರಿಯ ಮತ್ತೆ ಹಿಡಿದೆವು.
ಇದನ್ನೂ ಓದಿ : ನಾನೆಂಬ ಪರಿಮಳದ ಹಾದಿಯಲಿ: ಕಾಜಾಣ ಪ್ರೆಸೆಂಟ್ ಮೇಡಮ್ ಕೆಂಬೂತ ಪ್ರೆಸೆಂಟ್ ಮೇಡಮ್ ಗುಬ್ಬಚ್ಚಿ ಅಬ್ಸೆಂಟ್ ಮೇಡಮ್
Published On - 10:28 am, Thu, 8 July 21