Christmas 2020 | ಕೆಲವರು ಸದಾ ಪ್ರಸ್ತುತ; ಉದಾಹರಣೆಗೆ ಯೇಸುಕ್ರಿಸ್ತ

ಮನುಷ್ಯನೊಬ್ಬ ಮನುಷ್ಯನಂತೆ ಬದುಕಿದರೆ ಸಾಕು, ಅದೇ ಎಲ್ಲಕ್ಕೂ ಮಿಗಿಲು ಎಂದು ಹೇಳಿದವನು, ಸ್ವತಃ ಬದುಕಿ ತೋರಿಸಿದವನು ಯೇಸುಕ್ರಿಸ್ತ. ಕ್ರೈಸ್ತ ಧರ್ಮದ ಮತೀಯ ಆಚರಣೆಗಳು, ಶಿಲುಬೆ, ಚರ್ಚು ಇತ್ಯಾದಿಗಳ ಪರಿಧಿಯಿಂದ ಆಚೆಗೆ ಯೇಸುಕ್ರಿಸ್ತನನ್ನು ಓರ್ವ ಶುದ್ಧ ಅನುಭಾವಿಯಾಗಿ ನೋಡುವ ಪ್ರಯತ್ನ ಇಲ್ಲಿದೆ.

Christmas 2020 | ಕೆಲವರು ಸದಾ ಪ್ರಸ್ತುತ; ಉದಾಹರಣೆಗೆ ಯೇಸುಕ್ರಿಸ್ತ
ಮಾಗಿದವನ ಬದುಕು ಮಗುವಿನಂತೆ ಇರಬೇಕು ಎಂದವರು ಯೇಸುಕ್ರಿಸ್ತ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Dec 25, 2020 | 11:51 AM

ಮನುಷ್ಯನೊಬ್ಬ ಮನುಷ್ಯನಂತೆ ಬದುಕಿದರೆ ಸಾಕು, ಅದೇ ಎಲ್ಲಕ್ಕೂ ಮಿಗಿಲು ಎಂದು ಹೇಳಿದವನು, ಸ್ವತಃ ಬದುಕಿ ತೋರಿಸಿದವನು ಯೇಸುಕ್ರಿಸ್ತ. ಕ್ರೈಸ್ತ ಧರ್ಮದ ಮತೀಯ ಆಚರಣೆಗಳು, ಶಿಲುಬೆ, ಚರ್ಚು ಇತ್ಯಾದಿಗಳ ಪರಿಧಿಯಿಂದ ಆಚೆಗೆ ಯೇಸುಕ್ರಿಸ್ತನನ್ನು ಓರ್ವ ಶುದ್ಧ ಅನುಭಾವಿಯಾಗಿ ನೋಡುವ ಪ್ರಯತ್ನ ಇಲ್ಲಿದೆ.

ಯೇಸುಕ್ರಿಸ್ತ ಈ ಕಾಲಕ್ಕೆ ಎಷ್ಟು ಪ್ರಸ್ತುತ ಎಂಬ ಪ್ರಶ್ನೆಯೇ ಅಪ್ರಸ್ತುತ. ಯೇಸುವನ್ನು ಕೇವಲ ಒಂದು ಧರ್ಮಕ್ಕೆ ಸೀಮಿತವಾದ ವ್ಯಕ್ತಿಯಾಗಿ ಮಾತ್ರ ನೋಡುವವರಿಗೆ ಅವರೆಷ್ಟು ಪ್ರಸ್ತುತ ಎಂಬ ಪ್ರಶ್ನೆ ಮೂಡಲು ಸಾಧ್ಯ. ಅವನನ್ನು ಒಂದು ಆಶಯವಾಗಿಯೋ, ಸಂಸ್ಕೃತಿಯಾಗಿಯೋ, ಸಂಸ್ಕಾರವಾಗಿಯೋ, ಬಂಧುವಾಗಿಯೋ ನೋಡುವವರ ಮನದಲ್ಲಿ ಇಂಥ ಪ್ರಶ್ನೆ ಎಂದಿಗೂ ಬರುವುದಿಲ್ಲ.

ಕ್ರಿಸ್ತ ಎಂದಿಗೂ ತನ್ನನ್ನು ತಾನು ದೇವರು ಎಂದು ಹೇಳಿಕೊಳ್ಳಲಿಲ್ಲ. ‘ನಾನು ದೇವರ ಮಗ, ದೇವರ ಬಳಿಗೆ ನಿನ್ನನ್ನೂ ಕರೆದೊಯ್ಯುವ ದಾರಿ ನನಗೆ ಗೊತ್ತು. ಅದಕ್ಕಾಗಿಯೇ ನಾನು ಭೂಮಿಗೆ ಬಂದೆ’ ಎಂದು ಹೇಳಿಕೊಳ್ಳುವಷ್ಟು ವಿನಯ ಆತನಲ್ಲಿತ್ತು.  ‘ನೀನು ಇತರರಿಗೆ ಎಷ್ಟು ಕರುಣೆ ತೋರುವೆಯೋ, ಎಷ್ಟರಮಟ್ಟಿಗೆ ಪ್ರೀತಿಸುವೆಯೋ ನಿನಗೂ ದೇವರ ಕರುಣೆ, ಪ್ರೀತಿ ಅಷ್ಟರಮಟ್ಟಿಗೆ ಸಿಗುತ್ತದೆ’ ಎಂದು ಅತ್ಯಂತ ಸರಳವಾಗಿ ನಿತ್ಯದ ಬದುಕಿನಲ್ಲಿಯೇ ಅಧ್ಯಾತ್ಮದ ನೆಲೆಗಳನ್ನು ಕಾಣುವ ದಾರಿ ತೋರಿಸಿಕೊಟ್ಟವ ಯೇಸುಕ್ರಿಸ್ತ.

ಯಾವುದೇ ಧರ್ಮಕ್ಕೆ ಸೇರಿದವರಾಗಿದ್ದರೂ ದೇವರ ಅಸ್ತಿತ್ವ ಒಪ್ಪುವವರು ಕ್ರಿಸ್ತನ ಉಪದೇಶಗಳನ್ನು ನಿರಾಕರಿಸಲಾರರು. ಆದರೆ ದೇವರು ಎನ್ನುವ ಪರಿಕಲ್ಪನೆಯನ್ನೇ ಅಲ್ಲಗಳೆಯುವ ನಾಸ್ತಿಕರು, ದೇವರಿದ್ದಾನೋ ಇಲ್ಲವೋ ಗೊತ್ತಿಲ್ಲ ಎನ್ನುವ ಏಥಿಸ್ಟರಿಗೂ ಕ್ರಿಸ್ತನ ಉಪದೇಶಗಳನ್ನು ನಿರಾಕರಿಸಲು ಆಗುವುದಿಲ್ಲ ಎನ್ನುವುದು ಕ್ರಿಸ್ತನ ಮೇಲ್ಮೆ ಅದೆಷ್ಟು ದೊಡ್ಡದು ಎಂದು ತೋರಿಸಿಕೊಡುತ್ತದೆ. ಈ ಮಾತು ಹೇಳಲು ಕಾರಣವಿದೆ.

ಯೇಸುಕ್ರಿಸ್ತನು ಭೌತಿಕ ಶರೀರದಿಂದ ನಿರ್ಗಮಿಸಿದ ನಂತರ ಕ್ರೈಸ್ತಧರ್ಮ ತಳೆದ ಆಯಾಮಗಳು ಹಲವು. ಕ್ಯಾಥೊಲಿಕ್, ಪ್ರೊಟೆಸ್ಟಂಟ್, ಪ್ಯುರಿಟನ್ಸ್​, ಸಿರಿಯನ್, ರಷ್ಯನ್ ಆರ್ಥೊಡಾಕ್ಸ್​.. ಹೀಗೆ ಹಲವು ಪಂಥಗಳಾಗಿ ಕ್ರೈಸ್ತಧರ್ಮದ ಕವಲುಗಳು ಬೆಳೆದವು. ಆದರೆ, ‘ನಾನು ಹೇಳುವುದೇ ನಿಜವಾದ ಕ್ರೈಸ್ತ ಧರ್ಮ, ನನ್ನ ಮಾತಷ್ಟೇ ಯೇಸುವಿನ ನಿಜವಾದ ಸಂದೇಶ’ ಎಂಬ ಕಟ್ಟಾ ಸಂಪ್ರದಾಯಸ್ಥರ ಹಿಡಿತದ ಆಚೆಗೂ ಯೇಸು ಬೆಳೆದು ವಿಶ್ವವನ್ನೇ ವ್ಯಾಪಿಸಿಕೊಂಡ. ಸ್ನೇಹ-ಪ್ರೇಮಗಳು ಜಗತ್ತಿನಲ್ಲಿ ಇರುವವರೆಗೂ ಬಹುಶಃ ಯೇಸುವೂ ಇರುತ್ತಾನೆ.

ಇದನ್ನೂ ಓದಿ: ದೇಶದ ಮೊತ್ತಮೊದಲ ಕ್ರಿಸ್​ಮಸ್ ಕೇಕ್ ತಯಾರಾದ ಕಥೆಯಿದು..

ಯೇಸು ಕ್ರಿಸ್ತ

ನಿಜವಾದ ಮನುಷ್ಯನಂತೆ ಬಾಳುವುದೆಂದರೆ..

ಅಷ್ಟಕ್ಕೂ ಯೇಸು ಹೇಳಿದ್ದು ಏನು? ‘ಸ್ವರ್ಗವೋ, ನರಕವೋ ಬೇರೆಲ್ಲೋ ಇಲ್ಲ. ಜಗತ್ತನ್ನು ನೀನು ನೋಡುವ ಕ್ರಮದಲ್ಲಿ ಸ್ವರ್ಗ, ನರಕ ಮಾತ್ರವಲ್ಲ ದೇವರೂ ಇದ್ದಾನೆ. ನಾನು ಇದ್ದೇನೆ’ ಎಂದು ಯೇಸು ಅತ್ಯಂತ ಸ್ಪಷ್ಟವಾಗಿ ನಿಲುವು ಹೇಳಿಕೊಂಡ. ‘ಮನುಷ್ಯನೊಬ್ಬ ನಿಜವಾದ ಮನುಷ್ಯನಂತೆ ಬದುಕಿದರೆ ಸಾಕು. ದೇವರೇ ನಿನ್ನನ್ನು ಹುಡುಕಿಕೊಂಡು ಬರುತ್ತಾನೆ. ದೇವರಿಗಾಗಿ ನೀನು ಹೆಚ್ಚಿನದ್ದೇನು ಮಾಡಬೇಕಿಲ್ಲ, ನಿನ್ನ ಸುತ್ತಮುತ್ತ ಇರುವವರನ್ನು ಪ್ರೀತಿಯಿಂದ ಕಂಡರೆ ಸಾಕು’ ಎಂದವನು ಯೇಸು.

ಮನುಷ್ಯನೊಬ್ಬ ನಿಜವಾದ ಮನುಷ್ಯನಂತೆ ಬಾಳುವುದು ಹೇಗೆ ಎಂಬುದಕ್ಕೆ ತಾನೇ ಉದಾಹರಣೆ ಎಂಬಂತೆ ಬದುಕಿ ತೋರಿಸಿದ. ‘ನಾನು, ನಾನು ಬದುಕುವ ಈ ಸಮಾಜ ಮತ್ತು ಎಲ್ಲರಿಗೂ ತಂದೆಯಾದ ದೇವರು ಪರಸ್ಪರ ಬೆಸೆದುಕೊಂಡಿದ್ದಾರೆ. ಅ ಬೆಸುಗೆಯೇ ಪ್ರೇಮ’ ಎಂದು ಮರುಪ್ರಶ್ನೆಗೆ ಅವಕಾಶವೇ ಇಲ್ಲದಂತೆ ‘ನಿಜವಾದ’ ಮನುಷ್ಯರಂತೆ ಬಾಳುವ ಕ್ರಮವನ್ನೂ ತೋರಿಸಿಕೊಟ್ಟ. ಸ್ವತಃ ತಾನು ಹಾಗೆ ಬದುಕಿದ ಎನ್ನುವ ಕಾರಣಕ್ಕೇ ಯೇಸುವಿನ ಉಪದೇಶಗಳು ಒಣಮಾತುಗಳಾಗದೆ, ಆಚರಿಸಲು ಯೋಗ್ಯವಾದ ಸಂಗತಿಗಳು ಎನಿಸಿದ್ದು.

ನುಡಿದಂತೆ ನಡೆದವನೊಬ್ಬ ಹೇಳಿದ, ‘ಪರರನ್ನು ನಿನ್ನಂತೆ ಪ್ರೀತಿಸು’ ಎಂಬ ಉಪದೇಶವನ್ನು ಜಗತ್ತು ಅಷ್ಟು ಗಂಭೀರವಾಗಿ ಪರಿಗಣಿಸಿದ್ದು. ದೇಶ, ಕಾಲ, ಮತಗಳ ಗಡಿಯನ್ನು ಮೀರಿ ಎಲ್ಲರೂ ಒಪ್ಪಿಕೊಂಡು ಅಪ್ಪಿಕೊಂಡಿದ್ದು. ‘ಮನಸ್ಸು ಮಾಗಬೇಕು, ಮಾಗಿದ ಮನಸ್ಸಿ ಮಗುವಿನಂತೆ ಆಗಬೇಕು’ ಎನ್ನುವುದು ಯೇಸು ಉಪದೇಶಗಳ ಮತ್ತೊಂದು ಮುಖ.

ಯೇಸುವಿನ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡವರನ್ನು ಸೂಕ್ಷ್ಮವಾಗಿ ಗಮನಿಸಿಕೊಡಿ. ಅವರ ಮನಸ್ಸಷ್ಟೇ ಮಗುವಿನಂತೆ ಆಗಿರುವುದಲ್ಲ, ಅವರ ಕಣ್ಣಿಗೆ ಜಗತ್ತಿನ ಎಲ್ಲ ಮನುಷ್ಯರೂ ಮಕ್ಕಳಂತೆಯೇ ಕಾಣಿಸುತ್ತಾರೆ. ಕ್ರೈಸ್ತ ಪಾದ್ರಿ ಅಥವಾ ಮದರ್​ಗಳು ‘ಡಿಯರ್ ಸನ್’ ಅಂತ್ಲೋ ‘ಡಿಯರ್ ಡಾಟರ್’ ಅಂತ್ಲೋ ಸಂಬೋಧಿಸುವಾಗ ನಮಗೆ ಅಷ್ಟು ಖುಷಿ ಎನಿಸಲೂ ಅವರಲ್ಲಿರುವ ಇಂಥ ಭಾವನೆಗಳೇ ಕಾರಣ.

ತನ್ನ ಮಾತು ಮತ್ತು ನಡತೆಯಿಂದ ಯೇಸುಕ್ರಿಸ್ತ ಜಗತ್ತಿಗೆ ಸಾರಿ ಹೇಳಿದ್ದು ಇಷ್ಟೇ.. ದಯೆ, ಸಾಂತ್ವನ, ನ್ಯಾಯಪರತೆ, ಮಾನವೀಯ ಬದುಕು, ತಾಳ್ಮೆಯನ್ನು ರೂಢಿಸಿಕೊಂಡರೆ ಮಾತ್ರ ನೀವು ನಿಜವಾದ ಮನುಷ್ಯರು. ಬಹುಶಃ ಜಗತ್ತಿನಲ್ಲಿ ಈ ಆಶಯಗಳು ಇರುವವರೆಗೂ ಯೇಸುಕ್ರಿಸ್ತನೂ ಪ್ರಸ್ತುತನೇ ಆಗಿರುತ್ತಾನೆ.

(ಯೇಸುಕ್ರಿಸ್ತನನ್ನು ಸಂಬೋಧಿಸುವಾಗ ಸಹಜ ರೂಢಿಯಾಗಿ ಏಕವಚನ ಬಳಸಲಾಗಿದೆ)

ಒಂದೇ ದಿನ ಎರಡೆರಡು ಹಬ್ಬ: ನಾಡಿನಾದ್ಯಂತ ವೈಕುಂಠ ಏಕಾದಶಿ ಸಂಭ್ರಮ, ಕ್ರೈಸ್ತ ಬಾಂಧವರಿಂದ ಸಿಂಪಲ್ ಕ್ರಿಸ್ ಮಸ್ ಆಚರಣೆ..

Published On - 11:48 am, Fri, 25 December 20