ದೂರದ ಭಯ ನಿಜವಾಗಿತ್ತು. ಅಮ್ಮ ಕೋವಿಡ್ ಪಾಸಿಟಿವ್ ಆಗಿದ್ದಳು. ಇಲ್ಲಿ ಕುಳಿತೇ ಮಣಿಪಾಲ ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದಾಯ್ತು. ಇಬ್ಬರು ಇರುವ ವಾರ್ಡು. ಅಣ್ಣ ನೆಗೆಟಿವ್, ಮನೆಯಲ್ಲೇ ಕ್ವಾರಂಟೈನ್ ಆದರು. ಈಗವರಿಗೆ ಕೆನಡಾ, ಯುಎಸ್‌ಗಳು ಎಷ್ಟು ದೂರವೋ ನಾನೂ ಅಷ್ಟೇ ದೂರ. ಸಿಸ್ಟರ್ ವೀಡಿಯೋಕಾಲ್ ಮಾಡಿ ಅಮ್ಮನನ್ನು ಮಾತನಾಡಿಸಿದರು. ‘ಹದಿಮೂರನೇ ಫ್ಲೋರ್, ರಸ್ತೆ ಶಬ್ದ ಏನೂ ಕೇಳಲ್ಲ. ಮರಗಿಡ ಒಂದೂ ಕಾಣಲ್ಲ. ಸಿಸ್ಟರುಗಳಿಗೆ ಯಾರಿಗೂ ಕನ್ನಡ ಬರಲ್ಲ. ಯಾವ ಡಾಕ್ಟ್ರು ಬರ್ತಾರೆ ಅಂತನೇ ಗೊತ್ತಾಗಲ್ಲ, ಎಲ್ಲ ಪಿಪಿಇನಲ್ಲೇ ಬರ್ತಾರೆ. ಮನುಷ್ಯರನ್ನು ನೋಡಿದಂಗೇ ಆಗಲ್ಲ. ಪಕ್ಕ ಇರೋರು ಕೆಮ್ತಿದಾರೆ, ಅವರಿಂದ ಮತ್ತೆ ಇನ್ಫೆಕ್ಷನ್ ಆಗುತ್ತಾ? ಮಾಸ್ಕ್ ಹಾಕ್ಕಂಡೇ ಇದ್ರೆ ಸಾಕಾ’ ಏನೇನೋ ಭಯ, ಆತಂಕ. ಹತ್ತು ದಿನ ಹೇಗಾದ್ರೂ ಮಾಡು ಅಮ್ಮ ಎಂದೆ.
*
ಲಾಕ್‌ಡೌನ್ ಸಡಿಲಗೊಂಡು ಇನ್ನೇನು ತೆರವಾಗುತ್ತಿದೆ ಎನ್ನುವಾಗಿನ ಒಂದು ದಿನ. ಹೇಳಿದರೆ ತುಂಬಾ ಇದೆ, ಇವಿಷ್ಟು ನಿಮಗೆ…
1.
ಬೆಳಿಗ್ಗೆಯೇ ಅಮ್ಮನಿಂದ ಫೋನು: ‘ಯಾಕೋ ಸುಸ್ತು, ಏಳಲಿಕ್ಕೆ ಆಗ್ತಿಲ್ಲ, ಬಾಯಿ ರುಚಿ ಏನೂ ಇಲ್ಲ. ‘ಹೃದಯ ಶಸ್ತ್ರಚಿಕಿತ್ಸೆಯಾಗಿರುವ ಅಮ್ಮ ಮನಸ್ಸಿನಿಂದ ಗಟ್ಟಿಗಳು. ಆದರೆ ದೇಹ ಮಾತು ಕೇಳುವುದಿಲ್ಲ. ಬೇಗ ದಣಿದುಬಿಡುತ್ತಾಳೆ. ಆತಂಕಗೊಳ್ಳುತ್ತಾಳೆ. ಅದಕ್ಕೆ ಸರಿಯಾಗಿ ಮಕ್ಕಳಾರೂ ಬಳಿಯಿಲ್ಲ. ಒಬ್ಬಳು ಕೆನಡಾ, ಒಬ್ಬ ಯುಎಸ್, ಮತ್ತೊಬ್ಬಳು ನಾಲ್ಕುನೂರು ಕಿಮೀ ದೂರದಲ್ಲಿ, ಅವಳದೇ ಲೋಕದಲ್ಲಿ. ನಿನ್ನೆ ರಾತ್ರಿ ಅಣ್ಣ ಜ್ವರ 100 ಡಿಗ್ರಿ ಇದೆಯೆಂದು ಹೇಳಿದಾಗ ಸ್ವಲ್ಪ ಭಯವಾಗಿತ್ತು. ಕೋವಿಡ್ ಇರಬಹುದೆ? ಕಳೆದ ವಾರ ಬಂಧುವೊಬ್ಬರ ಮನೆಯ ಕಾರ್ಯಕ್ರಮಕ್ಕೆ ಹೋಗಿಬಂದಿದ್ದರು. ಯಾವುದಕ್ಕೂ ಟೆಸ್ಟ್ ಮಾಡಿಸಿ ಎಂದೆ.
ದೂರದಿಂದಲೇ ಏರ್ಪಾಟಾಯಿತು. ಮಣಿಪಾಲ ಆಸ್ಪತ್ರೆಯಲ್ಲಿ ವೈದ್ಯರ ವೀಡಿಯೋ ಕನ್ಸಲ್ಟೇಷನ್ ತೆಗೆದುಕೊಂಡೆವು. ಮನೆಗೆ ಬಂದು ಸ್ಯಾಂಪಲ್ ತಗೊಂಡು ಹೋದರು. ಸಂಜೆಯವೇಳೆಗೆ ಹೇಳುವೆ ಎಂದಿದ್ದಾರೆ. ಆತಂಕ. ಇಲ್ಲಿ, ಅಲ್ಲಿ, ಎಲ್ಲೆಲ್ಲೂ.
‘ಏನಾಗಲ್ಲಮಾ, ಹೆದರಬೇಡ. ಆರಾಂ ಮಲ್ಕೋ, ಅಣ್ಣ ಅಡಿಗೆ ಮಾಡ್ತಾರೆ’
ಬಾಯಿ ಸಮಾಧಾನ ಹೇಳುತ್ತಿದ್ದರೂ ಸ್ವತಃ ನಮಗೇ ಸಮಾಧಾನ ಇಲ್ಲವೆಂದು ಅರಿವಾಗುತ್ತಲಿದೆ. ಬೆಂಗಳೂರಿಗೆ ತಕ್ಷಣ ಹೋಗಲಾದರೂ ಸಾಧ್ಯವೇ? ಈ ಹಳ್ಳಿಗೆ ಸೂಕ್ಷ್ಮ ಆರೋಗ್ಯದ ಅವರನ್ನು ತಂದಿಟ್ಟುಕೊಳ್ಳಲು ಸಾಧ್ಯವೇ? ನಾವಿಲ್ಲಿ ದಿನನಿತ್ಯ ಕೋವಿಡ್‌ಗೆ ತೆರೆದುಕೊಂಡಿರುವಾಗ ಜೊತೆಯಿಟ್ಟುಕೊಳ್ಳುವುದಾದರೂ ಸರಿಯೇ? ಅನಿವಾರ್ಯವೆಂದು ಬೆಂಗಳೂರಿಗೆ ಹೋದವರನ್ನು ಆ ನಗರ, ಅಲ್ಲಿದ್ದ ಬಂಧುಬಳಗ, ಸವಲತ್ತು, ಜವಾಬ್ದಾರಿಗಳು ಎಷ್ಟು ಸೆಳೆದವೆಂದರೆ ಹೊರಟು ಬರಲಾರರು ಎನ್ನುವಂತಾಗಿದೆ. ಏನು ಮಾಡುವುದು?
ಹೇಳುತ್ತ ಹೋದರೆ ತುಂಬ ಇದೆ…
2.
ಅವರು ಒಳಬರುತ್ತ ದೊಡ್ಡ ಚೀಲದೊಂದಿಗೆ ಬಂದರು. ‘ನಾಕು ಕಲ್ಲಂಗಡಿ ಹಣ್ಣದಾವೆ ಅಮಾ’ ಎಂದು ಹೊತ್ತು ತಂದರು. ಹಣ್ಣು ಕೊಟ್ಟು ಹೋಗಲೆಂದೇ ಬಂದಿದ್ದರು. ಬಂದಿರುವೆನಲ್ಲ ಎಂದು ಬಿಪಿ ನೋಡಿಸಿಕೊಂಡರು. ಸ್ವಲ್ಪ ಹೆಚ್ಚಿದೆ.
‘ಇನ್ನೆಲ್ಲ ರೈತ್ರಿಗೆ ಬಿಪಿ ಬರುದೆಯ’
‘ಅಷ್ಟು ನಷ್ಟವಾ ಹಾಗಾದ್ರೆ?’
‘ನಷ್ಟನ? ಹೇಳಿ ಸುಖ ಇಲ್ಲ. ಕಳದ ವರಷ ಬೆಳೆಸಾಲ ತಗದು ಎಲೆಬಳ್ಳಿ, ಬಾಳೆಗಿಡ ಹಾಕದ್ವಿ. ಬಾರೀ ಚೊಲೊ ಪೀಕು. ಕೈಗೆ ಹತ್ತಿದ್ದು ಬಾಯ್ಗೆ ಬರ್ಲಿಲ್ಲ. ತಗಳ್ರ, ಕೊರೊನ ಅಂತ ಬಂದು, ಎಲ್ಲ ಬಂದ್. ಕಾರ್ಯಕಟ್ಲೆ ಇಲ್ಲ, ಮದಿ ಇಲ್ಲ, ದೇಸ್ಥಾನ ಬಾಕ್ಲು ತಗಿಯಲ್ಲ ಅಂದ್ಮೇಲೆ ಇನ್ನೇನು? ಎಲೆ ಕುಯ್ಲೇ ಇಲ್ಲ. ಬಳ್ಳೀಲೇ ಉದರ‍್ತು. ಬಾಳೆಹಣ್ಣು ಅಲ್ಲಿಲ್ಲಿ ಅಷ್ಟಿಷ್ಟು ಮಾರಿದ್ರೂ ದರನೇ ಇಲ್ಲ. ಅದ್ಕೆ ಈ ವರ್ಷ ಅದ್ರ ಸುದ್ದಿ ಬ್ಯಾಡಂದು ಕಲ್ಲಂಗ್ಡಿ ಹಾಕಿದ್ವಿ. ಇಡೀ ಕುಮ್ರಿಲಿ ಎಲ್ಲಿ ನೋಡಿರೂ ಕಾಯಿ. ಏನ್ಮಾಡದು? ಬಿಸ್ಲು ಏರರ‍್ತು ಅನ್ನದ್ರಲ್ಲಿ ಲಾಕ್‌ಡೌನು ಅಂದ್ರು. ಸಾಯ್ಲಿ. ಕುತ್ಗೆಗೆ ಹಗ್ಗ ಹಾಕ್ಕಳದೊಂದೆ ಇನ್ನು.’
‘ಇದಕ್ಕೇ ಡೆಲ್ಲಿಯಲ್ಲಿ ರೈತರು ತಿಂಗ್ಳಾನುಗಟ್ಲೆಯಿಂದ ರಸ್ತೆಮೇಲೆ ಸ್ಟ್ರೈಕ್ ಮಾಡ್ತಿದಾರೆ..’
‘ಗೊತ್ ಗೊತ್‌ರಾ. ಅವ್ರಾಗತ್ಗೆ ಲಕ್ಷಗಟ್ಲೆ ಜನಾ ಸೇರಿದಾರೆ. ಆದ್ರೆ ಇಲ್ಲಿ? ಹತ್ ಜನುನ್ನ ಒಟ್ಟ್ ಮಾಡಕ್ಕೆ ಹೋದ್ಕೂಡ್ಲೆ, ಒಹ್ಹೋ, ಇಂವುಂಗೇ ಏನೋ ಲಾಭ ಅಂದ್ಕತಾರೆ. ನಡುದಾರಿಗೇ ವಾಪಸ್ ಹೋಗ್ತರೆ.’
‘ಸಂಘಟನೆ ಅಂದ್ರೆ ಸುಲಭ ಅಲ್ಲ. ಒಟ್ಟಾಗಕ್ಕೂ ಬಿಡಲ್ಲ..’
‘ಈ ಮಾತ್ ಬೇಕಾರೆ ಇನ್ನೊಂದ್ಸಲ ಹೇಳಿ. ನಾನೂ ರೈತಸಂಘ ಸೇರಿದ್ದೆ. ಅಡ್ಕೆಗೆ ಬೆಂಬಲ ಬೆಲೆ ಕೊಡಬೇಕು ಅಂತ ಕಾರವಾರ ತನ ನಡ್ಕಹೋಗಿದ್ದೆ. ಆಗ ಅಂತಂಥ ಲೀಡರ್ಸ್ ಇದ್ರು. ಈಗ ಬರೀ ಸಾಲ ಕೊಡ್ಸದು, ಪರಿಹಾರ ಕೊಡ್ಸದು ಅಷ್ಟೆಯ. ನಮಿಗ್ ಸಾಲ ಬ್ಯಾಡರಾ, ನಾವ್ ಬೆಳದಿದ್ಕೆ ಬೆಲೆ ಬಂದ್ರೆ ಸಾಕು. ರಕ್ತ ನೀರು ಮಾಡಿ, ಬೀಜ ಮದ್ದು ಗೊಬ್ರ ಅಂತ ಕರ್ಚು ಮಾಡಿ ಬೆಳೆದರ‍್ತಿವಿ. ತಗಳರೇ ಇಲ್ಲ, ಬೆಲೆನೇ ಇಲ್ಲ ಅಂದ್ರೆ ಎದೆ ಒಡದಂಗಾಗ್ತದೆ. ಯರ‍್ಗೆ ಹೇಳದು?’
ನಿಜ. ರೈತರ ಸಮಸ್ಯೆಗಳು ಎಷ್ಟು ಆಳ!
‘ಅದ್ಕೆ ಈ ಸಲ ಬರಿ ತರಕಾರಿ ಹಾಕದು ಅಂದ್ಕಂಡಿದಿನಿ. ಎರಡ್ನೆ ಬೆಳೆಗೆ ಉದ್ದು, ಅವಡಿ, ಹೆಸ್ರು, ಶೆಂಗಾ ಎಲ್ಲದ್ನು ಹಾಕದು. ಕೊನೇಪಕ್ಷ ತಿಂದ್ಕಂಡಾರು ಸಾಯಣ ಅಂತ. ಹೇಳ್ರೆ ಬಾಳ ಅದೆರಾ. ಸಾಯ್ಲಿ. ಜಾಗ್ರತೆ ನೀವು’ ಎಂದು ಹೊರನಡೆದರು. ಒಂದು ಮಾಸ್ಕ್ ಕೊಟ್ಟು ಬೀಳ್ಕೊಂಡೆವು.
3.
ಮಧ್ಯಾಹ್ನ. ಊಟಕ್ಕೆ ಹೊರಡಬೇಕು. ಪೇಶೆಂಟ್ ಮುಗಿಯುತ್ತಿಲ್ಲ. ಮೆಡಿಕಲ್ ರೆಪ್ ಒಳಬಂದರು. ತಾರುಣ್ಯದ ಹುಮ್ಮಸ್ಸಿನ ‘ಗುಡಾಫ್ಟರನೂನ್ ಮ್ಯಾಮ್’.
‘ನೀವ್ಯಾಕೆ ಬಂದ್ರಿ? ವಾಟ್ಸಪ್‌ನಲ್ಲಿ ಪ್ರೊಡಕ್ಟ್ ಲಿಸ್ಟ್ ಕಳಿಸಿದ್ರೆ ಸಾಕಿತ್ತಲ.’
‘ಅದು ಒನ್ ಆನ್ ಒನ್ ಆದಂಗೆ ಆಗಲ್ಲ ಮ್ಯಾಮ್, ಇವತ್ತಿಂದ ಟೂರ್ ಹಾಕಿದಾರೆ. ಹೋಗ್ಲೇಬೇಕು, ವಿತ್ ಆಲ್ ಸೇಫ್ಟಿ ಪ್ರಿಕಾಷನ್ಸ್’
‘ಉಳಿದಕಡೆ ಬೇಕಾದ್ರೆ ಹೋಗಿ. ಇಲ್ಲಿಗ್ ಬರೋದು ಬೇಡ. ಸುಮ್ನೆ ಯಾಕೆ ರಿಸ್ಕ್?’
‘ಹಂಗಾಗಲ್ಲ ಮೇಡಂ. ಜಿಪಿಎಸ್ ಮೊಬೈಲ್ ಕೊಟ್ಟಿದಾರೆ. ಫೆನ್ಸಿಂಗ್, ಫಾಲೋಅಪ್ ಎಲ್ಲ ಇರುತ್ತೆ. ಹೋಗ್ದಿದ್ರೆ ಗೊತ್ತಾಗುತ್ತೆ’
ರೋಗಲಕ್ಷಣವಿಲ್ಲದ ಪಾಸಿಟಿವ್‌ಗಳು, ಮೈಲ್ಡ್ ಪ್ರಕರಣಗಳಿಗೆ ಎ, ಬಿ, ಸಿ ಕಿಟ್ ಮಾಡಿದ್ದರು. ತನ್ನ ಕಂಪನಿಯ ಕಿಟ್‌ಗಳು ಭಾರತದಲ್ಲೇ ಪ್ರಥಮ, ಶೇ. 99 ಪರಿಣಾಮಕಾರಿ ಎಂದು ಉತ್ಸಾಹದಿಂದ ವಿವರಿಸುತ್ತಿದ್ದ. ಅವರಿಗೀಗ ಐಪ್ಯಾಡ್ ಬಂದಿದೆ. ಸ್ಕ್ರೀನ್ ಮುಟ್ಟಿದರೆ ಸಾಕು, ಮುಂದಿನ ಪ್ರಾಡಕ್ಟ್ ಕಾಣುತ್ತದೆ.
‘ಮೇಡಂ, ದಿಸ್ ಈಸ್ ಟ್ರೆಂಡೆಂಟ್ ಗೋಲ್ಡ್. ಕಿಟ್ಸ್ ಫಾರ್ ಹೋಂ ಐಸೊಲೇಷನ್..’
‘ಈ ಇವನ್ನೆಲ್ಲ ನಾನು ಪೇಶೆಂಟ್ಗೆ ಬರೆಯಲ್ಲ.’
‘ಪ್ರತಿ ಪ್ರಾಡಕ್ಟನ್ನೂ ತೋರಿಸಲೇಬೇಕು ಮ್ಯಾಮ್. ಇದ್ರಲ್ಲಿ ಕೌಂಟ್ ಆಗುತ್ತೆ.’
ಇದೊಳ್ಳೇ ಚೆನಾಯ್ತಲ್ಲ! ಆಗಲಿ ಎಂದೆ. ಭಾರತದ ಕೋವಿಡ್-19 ವಿರುದ್ಧ ಸಮರದಲ್ಲಿ ಅವನ ಕಂಪನಿ ಕೈ ಜೋಡಿಸಿ ಕಿಟ್ ಮಾಡಿದೆ ಎಂದು ಒಂದಾದಮೇಲೊಂದು ತೋರಿಸಿದ.
‘ನನ್ನ ಗಿಡಮೂಲಿಕೆಗಳಿಂದಲೇ ಶೇ. 95 ಭಾರತೀಯರಿಗೆ ಕೊರೊನಾ ಗುಣ ಆಗಿದ್ದು ಅಂತ ಬಾಬಾ ಸೋಮದೇವ ಬೂಸಿ ಬಿಡೋ ಹಂಗೇ ನೀವೂ ಹೇಳ್ತಿದೀರಲ? ರೋಗಲಕ್ಷಣ ಇಲ್ದೇ ಇರೋರಿಗೆ ಏನಂದ್ರೆ ಏನೂ ಬೇಡ. ಕಷಾಯನೂ ಬೇಡ. ಈ ಪತಿ, ಆ ಪತಿನೂ ಬೇಡ. ಸುಮ್ನೆ ಮನೇಲಿದ್ರೆ ಸಾಕು. ಮೈಲ್ಡ್ ಕೇಸಿಗೆ ಅವರಿಗೇನು ತೊಂದರೆ ಇದೆಯೋ ಅಷ್ಟು ಕೊಟ್ರೆ ಸಾಕು. ಗೊತ್ತಲ ನಿಮ್ಗೆ, ಅವಶ್ಯವಿರುವಲ್ಲಿ ಬಳಸಿದರೆ ನಿಜವಾಗಿ ಮೂರೇ ಮೂರು ಕೋವಿಡ್‌ಗೆ ಪರಿಣಾಮಕಾರಿ – ಆಕ್ಸಿಜನ್, ಹೆಪಾರಿನ್ ಮತ್ತು ಸ್ಟಿರಾಯ್ಡ್.’
‘ನೀವು ಹೇಳೋದು ನಿಜ ಮೇಡಂ. ರೆಪ್‌ಗಳ ಅಸೋಸಿಯೇಷನ್ನಿಂದ ಒಳ್ಳೊಳ್ಳೇ ಆಕರ್ಷಕ ಮಾಸ್ಕ್ ಅನ್ನು ಕಮ್ಮಿ ಬೆಲೆಗೆ ತಯಾರು ಮಾಡಿ; ವ್ಯಾಕ್ಸೀನ್ ಪ್ರೊಡಕ್ಷನ್ನಿಗೆ ಇನ್ವೆಸ್ಟ್ ಮಾಡಿ; ಆರ್ ಅಂಡ್ ಡಿ ಬೆಳೆಸಿ ಅಂತ ಏನೇನೋ ಸಜೆಷನ್ಸ್ ಕೊಟ್ವಿ ಮೇಡಂ. ಕೇಳಲ್ಲ. ಒಂದ್ಕಡೆ ಸೇಲ್ಸೇ ಇಲ್ಲದೆ ಪ್ರೊಮೊಷನ್ ವಿತೆಲ್ಡ್ ಆಗಿದೆ. ಈಕಡೆ ಮನೆಯೋರೆಲ್ಲ ಸಿಟ್ಟಾಗಿದಾರೆ. ಹೇಳಿದ್ರೆ ತುಂಬ ಇದೆ. ಪ್ಲೀಸ್ ಪ್ರಿಸ್ಕೈಬ್ ಮೇಡಂ…’
‘ನೀವು, ನಾನು ಇರೋದು ರೋಗಿಗಳಿಗೆ ಸಹಾಯ ಮಾಡಕ್ಕೇ ಹೊರತು ಕಂಪನಿ ಉಳಿಸಲಿಕ್ಕಲ್ಲ; ಯಾವುದು ಅವಶ್ಯನೋ ಅದಷ್ಟೇ ಬರೆಯೋಳು ನಾನು, ಹೇಳಿದ್ರೆ ತುಂಬ ಇದೆ…’
ನಕ್ಕೆವು. ಬೀಳ್ಕೊಂಡೆವು.
4.
‘ಏನಾದ್ರೂ ಪ್ರಾಬ್ಲಂ ಇದೆಯಾ?’
ಪೊಲೀಸ್ ಪ್ಯಾಟ್ರೋಲ್‌ನವರು ಕೇಳಿದರು.
‘ಜನಕ್ಕೆ ಸರ್ವೀಸ್ ಕೊಡ್ತಿದಿರಿ, ದಿನಾ ಓಡಾಡ್ತ ನೋಡ್ತೀವಿ. ಆದ್ರೆ ಸ್ವಲ್ಪ ಸೋಷಲ್ ಡಿಸ್ಟನ್ಸ್ ಮೇಂಟೇನ್ ಮಾಡ್ಬೇಕು. ಮಾಸ್ಕು..’ ಎಂದು ತಮ್ಮ ಪ್ಲೇಟನ್ನು ಹಾಕಿದರು.
‘ಥ್ಯಾಂಕ್ಯೂ. ಅವರ ಲೀಡರ್ಸೇ ಮಾಸ್ಕಿಲ್ಲದೆ ಸಭೆ ಮಾಡ್ತಾರೆ, ಗುಂಪು ಕಟ್ಕೊಂಡು ತಿರುಗ್ತಾರೆ. ಇವ್ರೂ ಅದ್ನೇ ಮಾಡ್ತಿದಾರೆ. ಎಷ್ಟು ಹೇಳಿದರೂ…’ ಎಂದು ನನ್ನ ಪ್ಲೇಟನ್ನೇ ನಾನು ತಿರುವಿ ಹಾಕಿದೆ.
‘ಅಯ್ಯೋ, ಈ ಜಿಲ್ಲೆ ಒಂದ್ ವಿಚಿತ್ರ. ಏನ್ ಮಾಡದೋ ನಮ್ಗೂ ಗೊತ್ತಾಯ್ತಾ ಇಲ್ಲ. ಎಲ್ಲೆಂಲ್ಲಿಂದ್ಲೋ ತಂದು ನಮ್ಮನ್ನ ಹಾಕೌರೆ. ಮಕ್ಳುಮರಿ ಮನೆ ಮಕ ನೋಡ್ದೆ ತಿಂಗ್ಳುಗಟ್ಲೆ ಆಯ್ತು. ಹೇಳಕ್ ಹೋದ್ರೆ ಬಾಳಿದೆ, ಮುಗ್ಯಲ್ಲ’ ಎಂದು ಮುನ್ನಡೆದರು.
5.
‘ಜ್ವರ ಇದೆಯಲ? ಎಲ್ಲಾದ್ರೂ ಪ್ರಯಾಣ ಮಾಡಿದ್ರಾ?’
‘ಎಲ್ಲಿ ಮೇಡಂ? ತಿರುಗಾಟನೇ ಇಲ್ದೆ ಒಂದೂವರೆ ವರ್ಷಾಯ್ತು. ಇನ್ನು ಸಾವಕಾಶಿಲೆ ಆಟ ಶುರು ಮಾಡ್ಬೇಕು, ಹೋಗುದೋ ಬಿಡುದೋ ಅಂಬೋ ಯೋಚ್ನೇಲಿದ್ದೆ. ಮನೆಯೋರು ಬ್ಯಾಡ ಅಂತಿದ್ರು. ನಂ ಮೇಳದ್ದು ಒಂದರ‍್ಡು ಆಟ ಆಗಿತ್ತು ಅಷ್ಟೇ. ಅಷ್ಟçಲ್ಲಿ ತಗಾ, ಮತ್ ಬಂತು. ಎಲ್ಲ ತರ‍್ಸಿ ಹಾಕ್ತು ಇದು.’
ಈ ಸುತ್ತಿಗೆ ಖ್ಯಾತರಾದ ಯಕ್ಷಗಾನ ಕಲಾವಿದರು ಅವರು. ಕಾಲಿಗೆ ಗಾಯವಾಗಿ ಬಂದಿದ್ದರು. ಆಟವಿಲ್ಲದೆ ಒಂದೂವರೆ ವರ್ಷದಿಂದ ಕೃಷಿ ಕೆಲಸ ಮಾಡಿಕೊಂಡಿದ್ದಾರೆ. ಹೆಜ್ಜೆ, ಮಾತು ಮರೆತೇ ಹೋಗುವುದೇನೋ ಎಂದು ಭಯಗೊಂಡಿದ್ದಾರೆ.
‘ನಮ್ಗಾದ್ರೂ ಅಂಗೈಯಗಲ ತ್ವಾಟದೆ. ಉಣ್ಣುಕ್ ಅಡ್ಡಿಲ್ಲ. ನಾ ಜಾನಪದ ಅಕಾಡೆಮಿಲಿದಿನಲ, ಎಷ್ಟ್ ಜನ ಇದಾರೆ ಮೇಡಂ ಕಲಾವಿದರು? ಅವ್ರು ಜನಾ ಕೊಡೋ ಪ್ರೋತ್ಸಾಹನೇ ನಂಬ್ಕಂಡಿರೋರು. ಜನರ ಹತ್ರ ಹೋಗಕ್ಕಾಗಲ್ಲ ಅಂದ್ರೆ ಉಪಾಸ ಬೀಳದೇ. ನಾಡುನುಡಿ ಸಂಸ್ಕೃತಿ ಅಂತಿವಿ, ಆದ್ರೆ ಅವ್ರೆಲ್ಲ ಭಿಕ್ಷುಕರಾಗಿಬಿಟ್ಟಿದಾರೆ. ಬಾರೀ ಬೇಜಾರಾಗುತ್ತೆ.’
‘ಹೌದು. ಕಲಾವಿದರಿಗೆ ಇದು ತುಂಬ ಕಷ್ಟಕಾಲ. ಸರ್ಕಾರ, ಪರಿಚಯದೋರು ಏನಾದ್ರೂ ಮಾಡಬೇಕು.’
‘ಈಗಿನ ಹುಡುಗ್ರು ಒಂದುಪಾಯ ಮಾಡಿದಾರೆ ಮೇಡಂ. ಎಂಟತ್ತು ಜನರಿಂದ ಸ್ಪಾನ್ಸರ್ ತಗಂಡು ಲೈವ್ ಶೋ ನಡೆಸುದು. ಲೈವಾಗಿ ಬಿಡುದು. ಒಳ್ಳೇ ಆಗ್ತದೆ. ಆದರೆ ನಮ್ಗೆಂತಾಗದಂದ್ರೆ ಎದರ‍್ಗಡೆ ಜನ ಇಲ್ದಿದ್ರೆ ಮಾತೇ ಬರಲ್ಲ.’
‘ಕಾಲಕ್ಕೆ ತಕ್ಕಂತೆ ಸ್ವಲ್ಪ ಬದಲು ಮಾಡ್ಕೊಳೋದೇ, ಅಲ್ವ?’
‘ಅದ್ ಹೌದು. ನೋಡಿ, ನಾನು ಪಟ್ಟಿ ಪೆನ್ನು ಮುಟ್ದಾಂವ ಅಲ್ಲ. ಈಗ ಹೆಂಗಿದ್ರೂ ಖಾಲಿ ಇದೀನಲ್ಲ, ಎಲ್ಲ ಬರೆದಿಡ್ತಾ ಇದಿನಿ. ಓದಿದ್ದು, ಕಲಿತಿದ್ದು, ಮಾತು ಎಲ್ಲ ರ‍್ತು ಹೋಗ್ಬಾರ್ದು ಅಂತ ಬರೆದಿಡ್ತ ಇದಿನಿ. ಮೂರು ಪಟ್ಟಿ ತುಂಬಿದೆ, ತಂದು ತೋರಿಸ್ತೆ’
‘ಒಳ್ಳೇದು. ಕೋವಿಡ್ ಹೊಸ ಬರಹಗಾರರನ್ನು ಹುಟ್ಟಿಸಿದರೆ ಒಳ್ಳೆಯದೇ ಆಯಿತು. ಕೋವಿಡ್ ಪರಿಸ್ಥಿತಿ ಬಗ್ಗೆ ಹೊಸಾ ಪ್ರಸಂಗ ಬರೀರಿ. ನಿಮ್ಮ ಅನುಭವಗಳನ್ನ, ಜೀವನ ಚರಿತ್ರೆನ ಬರ‍್ದಿಡಿ.’
‘ಇದ್ ಮಾತ್ರ ಕಷ್ಟ. ಮೇಳದ ಮೇನೇಜರಿಗೆ ದುಡ್ಡು ಆಗಬೇಕು. ಮನೆಯರ‍್ಗೆ ದುಡ್ಡು ಬೇಕು. ಜನುಕ್ಕೆ ನಕ್ಕು ನಲೀಬೇಕು. ನಾವ್ ಮಾತ್ರ ಊಟಾ, ನಿದ್ದೆ, ಸಂಸಾರ ಬಿಟ್ಕಂಡು ಊರು ತಿರುಗಬೇಕು. ಹಿಂಗೇ ಎಲ್ಲಾ ಒಂದೊಂದ್ ‘ಬೇಕು’ವಿನ ಹಿಂದೆ ಹೋಗ್ತ ಇದ್ದೋರು ಗಕ್ ಅಂತ ಒಂದೇಸಲ ನಿಂತ್ಬಿಟ್ವಿ. ಹೇಳ್ರೆ ತುಂಬ ಅದೆ..’
ರಸಗವಳದಿಂದ ತುಂಬಿದ ಬಾಯನ್ನು ಮೇಲೆತ್ತಿ ಮಾತನಾಡುತ್ತ, ತಲೆಯಾಡಿಸಿ ಹೊರಹೋದರು.
6.
ಒಂದು ಕೈಯಲ್ಲಿ ಮೊಬೈಲು. ಒಂದು ಕೈಯಲ್ಲಿ ಸ್ಯಾನಿಟೈಸರ್. ಒಳ ಬಂದವಳೇ ಸ್ಟೂಲಿನ ಮೇಲೆ ಕೂರುವ ಮೊದಲು ಪುಸ್‌ಪುಸ್ ಎಂದು ಸ್ಯಾನಿಟೈಸರ್‌ನಿಂದ ಚೊಕ್ಕ ಮಾಡಿಕೊಂಡಳು.
‘ಆಕ್ಚುವಲಿ ಮೇಮ್, ನಂಗೇನೂ ಪ್ರಾಬ್ಲಂ ಇಲ್ಲ. ಸ್ಲೈಟ್ ಸ್ಟಮಕ್ ಪೇನ್ ಅಷ್ಟೆ. ಅದು ನಿನ್ನೆ ನೈಟ್ ಬ್ಲ್ಯಾಂಕ್ ಫಂಗಸ್ ಬಗ್ಗೆ ಯೂಟ್ಯೂಬಲ್ಲಿ ನೋಡ್ದೆ ಸ್ವಲ್ಪ ಪ್ಯಾನಿಕ್ ಆಯ್ತು. ನಿಮ್ಮನ್ನ ಕೇಳಣ ಅಂತ ಬಂದೆ ಅಷ್ಟೆ.’
‘ಆಯ್ತು, ಕೇಳಮ್ಮ’
‘ಪೀರಿಯಡ್ಸ್ ಟೈಮಲ್ಲಿ ವ್ಯಾಕ್ಸೀನ್ ತಗೋಬರ‍್ದಂತಲ್ಲ?’
‘ಹಾಗೇನಿಲ್ಲ. ಅದಕ್ಕೂ ಇದಕ್ಕೂ ಸಂಬಂಧನೇ ಇಲ್ಲ.’
‘ಮತ್ತೆ ವ್ಯಾಕ್ಸೀನ್ ತಗಂಡ್ಮೇಲೆ ಪ್ರೆಗ್ನೆಂಟ್ ಆಗಬಾರದಂತಲ?’
‘ನೀನು ತಿರುಗಾಮುರುಗಾ ಅರ್ಥ ಮಾಡ್ಕೊಂಡಿದಿ. ಗರ್ಭಿಣಿ ಇರುವವರಿಗೆ ಲಸಿಕೆ ಕೊಡ್ತಿಲ್ಲ ಅಷ್ಟೆ.’
‘ಕೊರೋನಾ ಮೀನ್ಸ್ ಬ್ಲೀಡಿಂಗ್ ಡಿಸಾರ್ಡರ್ ಅಂತೆ? ಪೀರಿಯಡ್ಸ್ ಟೈಮಲ್ಲಿ ಬ್ಲೀಡಿಂಗ್ ಹೆಚ್ಚಾಗುತ್ತೆ ಅಂತಾರಲ?’
‘ನಿನ್ನ ಪ್ರಶ್ನೆಗಳ ಯಾದಿ ಒಂದೇಸಲ ಕೊಡಮ್ಮ, ಎಲ್ಲ ಸೇರಿ ಉತ್ತರ ಹೇಳ್ತಿನಿ.’
‘ಸಾರಿ ಮ್ಯಾಮ್. ಗೂಗಲ್ ನೋಡ್ತಿನಲ್ಲ, ಏನೇನೋ ಡೌಟ್ಸು, ಹೇಳಿದ್ರೆ ತುಂಬಾನೇ ಇದೆ.’
ಯಾದಿ ತೆಗೆದಳು. ಹತ್ತು ನಿಮಿಷದಲ್ಲಿ ಮುಗಿಯಿತು. ಅಷ್ಟರಲ್ಲಿ ಹತ್ತು ಕಡೆ ಪುಸ್‌ಪುಸ್ಸೆನಿಸಿದ್ದಳು.
‘ಅಂದಹಾಗೆ ನೀನು ಹೋದಲ್ಲೆಲ್ಲ ಸ್ಯಾನಿಟೈಸ್ ಮಾಡ್ಕೋತಾ ಕೂರಕ್ಕೆ, ಏಳಕ್ಕೆ ಆಗಲ್ಲ ಅಲ್ವಾ? ಮನೆಗೆ ಹೋಗಿ ಇದ್ನೆಲ್ಲ ತೆಗೆದು ಸ್ನಾನ ಮಾಡೋದು, ಹೊರಗೆ ಬರದೇ ಇರೋದು ಒಳ್ಳೇದಲ್ವಾ?’
‘ಅದ್ನಿಜ. ಆದ್ರೆ ಮನೇಲಿ ನೆಟ್ ಇರಲ್ಲ. ಇಲ್ಬಂದೇ ಕೆಲ್ಸ ಮಾಡಬೇಕು. ಹೊರಗಿಂದ ನೀನೇ ಕೋವಿಡ್ ರ‍್ತೀ ಅಂತ ಅಮ್ಮ ಹೆದರಿಸ್ತಾರೆ. ರಿಟರ್ನ್ ಹೋಗ್ಬಿಡುವಾ ಅಂದ್ರೆ ಅಲ್ಲಿ ಆಫೀಸಿಂದು ಇನ್ನೊಂದ್ ಕತೆ. ಹೇಳಿದ್ರೆ ತುಂಬಾನೇ ಇದೆ ಮೇಡಂ..’
7.
ಸಂಜೆ.
ದೂರದ ಭಯ ನಿಜವಾಗಿತ್ತು. ಅಮ್ಮ ಕೋವಿಡ್ ಪಾಸಿಟಿವ್ ಆಗಿದ್ದಳು. ಇಲ್ಲಿ ಕುಳಿತೇ ಮಣಿಪಾಲ ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದಾಯ್ತು. ಇಬ್ಬರು ಇರುವ ವಾರ್ಡು. ಅಣ್ಣ ನೆಗೆಟಿವ್, ಮನೆಯಲ್ಲೇ ಕ್ವಾರಂಟೈನ್ ಆದರು. ಈಗವರಿಗೆ ಕೆನಡಾ, ಯುಎಸ್‌ಗಳು ಎಷ್ಟು ದೂರವೋ ನಾನೂ ಅಷ್ಟೇ ದೂರ. ಸಿಸ್ಟರ್ ವೀಡಿಯೋಕಾಲ್ ಮಾಡಿ ಅಮ್ಮನನ್ನು ಮಾತನಾಡಿಸಿದರು. ‘ಹದಿಮೂರನೇ ಫ್ಲೋರ್, ರಸ್ತೆ ಶಬ್ದ ಏನೂ ಕೇಳಲ್ಲ. ಮರಗಿಡ ಒಂದೂ ಕಾಣಲ್ಲ. ಸಿಸ್ಟರುಗಳಿಗೆ ಯಾರಿಗೂ ಕನ್ನಡ ಬರಲ್ಲ. ಯಾವ ಡಾಕ್ಟ್ರು ಬರ್ತಾರೆ ಅಂತನೇ ಗೊತ್ತಾಗಲ್ಲ, ಎಲ್ಲ ಪಿಪಿಇನಲ್ಲೇ ಬರ್ತಾರೆ. ಮನುಷ್ಯರನ್ನು ನೋಡಿದಂಗೇ ಆಗಲ್ಲ. ಪಕ್ಕ ಇರೋರು ಕೆಮ್ತಿದಾರೆ, ಅವರಿಂದ ಮತ್ತೆ ಇನ್ಫೆಕ್ಷನ್ ಆಗುತ್ತಾ? ಮಾಸ್ಕ್ ಹಾಕ್ಕಂಡೇ ಇದ್ರೆ ಸಾಕಾ’ ಏನೇನೋ ಭಯ, ಆತಂಕ. ಹತ್ತು ದಿನ ಹೇಗಾದ್ರೂ ಮಾಡು ಅಮ್ಮ ಎಂದೆ.
ಈಗವಳಿಗೆ ಇದು ಯಾರಿಂದ ಬಂತೋ ಎನ್ನುವ ಜಿಜ್ಞಾಸೆ. ‘ವಾರದ ಕೆಳಗೆ ಕಾರ್ಯಕ್ರಮಕ್ಕೆ ಹೋಗಿದ್ವಿ. ಟಿವಿ ಹಾಳಾಯ್ತು ಅಂತ ರಿಪೇರಿಗೆ ಬಂದಿದ್ರು. ಮೂರನೇ ಫ್ಲೋರಿನಿಂದ ಹಗ್ಗ ಕೆಳಗಿಳಿಸೇ ತರಕಾರಿ ತಗಂಡಿದ್ದು. ಲಿಕ್ವಿಡ್‌ನಲ್ಲಿ ತೊಳೆದೇ ತಿಂದ್ವಿ. ಎಷ್ಟು ಬೇಡ ಅಂದ್ರೂ ಹೋಗ್ತಾರೆ ನಿಮ್ಮಣ್ಣ ಹಾಲು, ಹಣ್ಣು, ಪೇಪರು ನಾನೇ ತರ‍್ತಿನಂತ. ಅವ್ರೇನಾದ್ರು ಹಿಡಿಸ್ಕಂಡು ಬಂದ್ರಾ? ಪಕ್ಕದ ಮನೆಗೆ ಹಬ್ಬದಡುಗೆ ಕೊಡಕ್ಕೆ ಹೋಗಿದ್ದೆ. ಈಗ ಅವರೆಲ್ಲ ಎಲ್ಲೋ ಹೋಗಿದಾರೆ. ಅವರಿಂದ ಬಂತಾ?’
‘ಅಮಾ, ಮಣ್ಣಿನ ಯಾವ ಗುಣದಿಂದ ಗುಲಾಬಿ ಹೂವಿನ ಜೊತೆ ಮುಳ್ಳು ಬೆಳೀತು ಅಂತ ಹುಡುಕಕ್ಕಾಗುತ್ತ? ಇದೂ ಹಂಗೇ. ಸಹಾಯ ಮಾಡಿದವರಿಂದಲೂ ಬಂದಿರಬೋದು. ಹೊರಗೆ ಹೋದಾಗ್ಲೂ ಬೆನ್ನತ್ತಿರಬಹುದು. ಯಾರಿಂದ ಬಂತು ಅನ್ನೋದು ಮುಖ್ಯವಲ್ಲ. ಯಾರಿಗೂ ನಮ್ಮಿಂದ ಹೋಗಬಾರ್ದು ಅಂತ ನೋಡಿಕೊಬೇಕು’ ಎಂದು ಮೂವರೂ ಮಕ್ಕಳು ಮತ್ತೆಮತ್ತೆ ಹೇಳಿದೆವು.
ಇಡಿಯ ಊರಿಗೇ ಪ್ಲೇಗ್ ಬಂದು ಊರು ಬಿಟ್ಟಾಗ ಮನೆಯಲ್ಲೇ ಉಳಿದ ತನ್ನಪ್ಪನನ್ನು ಕಾಪಾಡಿದ ಮಾರಮ್ಮ ತನ್ನನ್ನೂ ಕಾಪಾಡುತ್ತಾಳೆ ಎಂದು ವಿಶ್ವಾಸದಿಂದ ಹೇಳಿದಳು. ಇನ್ನವಳಿಗೆ ದಿನಕ್ಕೊಂದು ಕೋವಿಡ್ ಗೆದ್ದವರ ಕತೆ ಹೇಳಲು ಶುರು ಮಾಡಬೇಕು. ಹೇಳಿದರೆ ತುಂಬಾ ಇದೆ, ಎಲ್ಲಿಂದ ಶುರುಮಾಡಲಿ ಎಂದು ಯೋಚಿಸುತ್ತ ನನ್ನ ನಿದ್ದೆ ಹಾರಿತು.
*
ಫೋಟೋ : ಎಸ್. ವಿಷ್ಣುಕುಮಾರ್
*
ನಾಳೆ ನಿರೀಕ್ಷಿಸಿ : ಈಚೀಚ್ಗೆ ನಮ್ಮುಡುಗ ಒನ್ನಮನಿ ಆಡ್ತಾನೆ, ಕೊರಡಿನಂಗೆ ಮನಗಿ ಬೆಳಿಗ್ಗಿ ಎಂಟಾದ್ರೂ ಏಳತಿಲ್ಲ.
ಇದನ್ನೂ ಓದಿ : Covid Diary : ಕವಲಕ್ಕಿ ಮೇಲ್ ; ‘ಜಾತಿ ಗೀತಿ ಸಾಯ್ಲಿ ನಂಗೆ ಮೀನ ಇಟ್ಟಿರು’
Published On - 12:04 pm, Sat, 26 June 21