My Covid Experience : ‘ಬಂದ್ರೆ ಬರ್ಲಿ ಬಿಡು ನನಗೂ ಆಗ ನಿಂಜೊತೆ ಇರಬಹುದು’

My Coronavirus Experience : ʻಸತ್ರೆ ವಾಪಾಸ್‌ ಸಿಗ್ತಾರಾ ಹೇಳು? ಅಜ್ಜ ಈಗ ಮತ್ತೆ ಬಂದ್ರಾ? ಇಲ್ಲ ತಾನೇ? ಅದ್ಕೇ ಭಯವಾಯ್ತುʼ ಎಂದ. ʻಅಯ್ಯೋ ಪುಟ್ಟಾ, ಹಂಗೆಲ್ಲ ಏನೂ ಆಗಲ್ವೋ, ಯಾಕೋ ಚಿಂತೆ ನಿಂಗೆ?ʼ ಎಂದರೆ, ʻಮಕ್ಕಳಿಗೇನಾದರೂ ಕೊರೋನಾ ಆಗಿ ಮಕ್ಕಳು ಹೋಗ್ಬಿಟ್ರೆ, ದೊಡ್ಡೋರಿಗೆ ಪ್ರಾಬ್ಲಂ ಇಲ್ಲ. ಆದರೆ, ದೊಡ್ಡೋರಿಗೆ ಏನಾದ್ರೂ ಆದ್ರೆ ಮಕ್ಕಳಿಗೆ ಎಷ್ಟು ಪ್ರಾಬ್ಲಂ... ಅಲ್ವಾ ಅಮ್ಮಾʼ ಎಂದುಬಿಟ್ಟ.’ ರಾಧಿಕಾ ವಿಟ್ಲ

My Covid Experience : ‘ಬಂದ್ರೆ ಬರ್ಲಿ ಬಿಡು ನನಗೂ ಆಗ ನಿಂಜೊತೆ ಇರಬಹುದು’
ಲೇಖಕಿ ರಾಧಿಕಾ ವಿಟ್ಲ ಮತ್ತು ಮಗ ವಿವಸ್ವಾನ್
Follow us
ಶ್ರೀದೇವಿ ಕಳಸದ
|

Updated on:May 31, 2021 | 1:46 PM

ಕೋವಿಡ್; ಯಾರಿಗೆ ಯಾರೂ ಇಲ್ಲ ಎಂಬ ಮುಖವೂ ಇದಕ್ಕಿದೆ. ಯಾರಿಗೋ ಯಾರೋ ಇದ್ದಾರೆ ಎಂಬ ಬೆನ್ನೂ ಇದಕ್ಕಿದೆ. ಇದರ ಅದೃಶ್ಯನಾಲಗೆಯಿಂದ ತಪ್ಪಿಸಿಕೊಳ್ಳುವುದೇ ಕ್ಷಣಕ್ಷಣದ ತಪನೆ. ಆದರೂ ಬಿಟ್ಟೀತೇ ತಟ್ಟದೆ? ‘ನನಗೆ ಹೀಗಾಯ್ತು, ಹೀಗಾಗಿದೆ, ಹೀಗಾಗಿತ್ತು, ಹೀಗೆ ಮಾಡಿದೆ’ ಸ್ವತಃ ಅನುಭವಿಸಿದ್ದನ್ನು ಹೇಳಿಕೊಳ್ಳಲು ಸ್ವಲ್ಪ ಧೈರ್ಯ, ಬಿಚ್ಚುಮನಸ್ಸು ಬೇಕು ಮತ್ತು ಹೆಚ್ಚು ಸರಳತೆ ಬೇಕು. ‘ನಿಮಗೂ ಬಂದಿದೆಯಾ’ ಪ್ರಶ್ನಾರ್ಥಕಕ್ಕೋ, ಉದ್ಘಾರವಾಚಕಕ್ಕೋ ಇದು ವಾಲದೆ ‘ನನ್ನಿಂದೇನಾದರೂ ಸಹಾಯ’ ಎಂಬಲ್ಲಿಗೆ ಮುಂದುವರಿಸಲು ತುಸುವಾದರೂ ಅಂತಃಕರಣ ಬೇಕು. ಇದೆಲ್ಲದರ ತೇಲುಮುಳುಗುವಿನೊಂದಿಗೆ ನಾವೆಲ್ಲ ಧೇನಿಸುತ್ತಿರುವುದು ನಿರಾಯಾಸ ಬದುಕಿಗೆ ಮರಳುವುದನ್ನು. ಇನ್ನೇನು ಕೆಲ ತಿಂಗಳುಗಳಲ್ಲಿ ಅದೂ ಸಾಧ್ಯವಾಗುತ್ತದೆ. ಅದಕ್ಕಿಂತ ಮೊದಲು ಕೋವಿಡ್​ನಿಂದಾಗಿ ಐಸೋಲೇಶನ್​ಗೆ ಒಳಗಾಗಿ ನಡುಗಡ್ಡೆಯಂತಾಗಿದ್ದ ಬದುಕಿನ ಅನುಭವದೆಳೆಗಳನ್ನು ಇಲ್ಲಿ ಬಿಚ್ಚಿಕೊಂಡು ಹಗುರಾಗಬಹುದಲ್ಲ? ಇಂದಿನಿಂದ ಶುರುವಾಗುವ ಹೊಸ ಸರಣಿ ‘ಟಿವಿ9 ಕನ್ನಡ ಡಿಜಿಟಲ್ : ನನ್ನ ಕೋವಿಡ್ ಅನುಭವ’.

ಕೋವಿಡ್​ನಿಂದ ಸುಧಾರಿಸಿಕೊಂಡವರು ತಮ್ಮ ಅನುಭವಗಳನ್ನು ಇಲ್ಲಿ ಮೆಲುಕು ಹಾಕಲಿದ್ದಾರೆ. ನೀವೂ ಕೂಡ ಬರೆಯುವ ಮೂಲಕ ಈ ಸರಣಿಯಲ್ಲಿ ಭಾಗಿಯಾಗಬಹುದು. tv9kannadadigital@gmail.com 

*

ಸದ್ಯ ದೆಹಲಿಯಲ್ಲಿರುವ ಲೇಖಕಿ ರಾಧಿಕಾ ವಿಟ್ಲ ಕೆಲವರ್ಷ ಕನ್ನಡ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಚಾರಣ ಮತ್ತು ಫೋಟೋಗ್ರಫಿ ಅವರ ನೆಚ್ಚಿನ ಹವ್ಯಾಸ.

*

ʻಅಮ್ಮಾ ಪಾಸಿಟಿವ್‌ ಬಂತಾ?ʼ ಮಗನ ದುಗುಡದ ಪ್ರಶ್ನೆ. ʻಗೊತ್ತಿಲ್ಲ ಮಗನೇ, ಅದು ಪಾಸಿಟಿವ್‌ ಇರೋ ಚಾನ್ಸೇ ಹೆಚ್ಚು, ನೀನು ದೂರನೇ ಇರುʼ ಎಂದು ಗಂಟಲು ತುರಿಸಲು ಶುರುವಾದಾಗಲೇ ಮಗನನ್ನು ದೂರ ಇರಿಸಿ ನಾನು ಬೇರೆ ರೂಮು ಹಿಡಿದೆ. ಹೊರಗಡೆ ಹೋಗಿದ್ದರಿಂದ ಪಾಸಿಟಿವ್‌ ಆಗಿರುವ ಸಂಭವ ಇರುತ್ತದೆ ಎಂಬ ಲೆಕ್ಕಾಚಾರದಲ್ಲಿ ಹಾಗೂ ಹೆಚ್ಚುತ್ತಿರುವ ಕೇಸುಗಳಿಂದಾಗಿ, ಸುಮ್ಮನೆ ರಿಸ್ಕು ಬೇಡ ಎಂದು ಬೇರೆ ಕೂತಿದ್ದಾಯಿತು.

ಮಗನಿಗೆ ಅಪ್ಪ ಹಾಗೂ ಅವನ ಅಜ್ಜಿ ಇದ್ದರು. ನಾನಿಲ್ಲ ಎಂಬುದು ಕೇವಲ ರಾತ್ರಿ ಮಾತ್ರ ಸ್ವಲ್ಪ ಕಷ್ಟವಾದರೂ ಅಡ್ಜಸ್ಟ್‌ ಮಾಡಿಕೊಂಡಾನು ಎಂಬ ಊಹೆಯೊಂದಿಗೆ ಶುರುವಾಯ್ತು.

ಕೊರೋನಾ ಅನ್ನೋ ವಿಷಯದ ಬಗ್ಗೆ ಪುಟ್ಟಪುಟ್ಟ ಮಕ್ಕಳಿಗೆಲ್ಲ ಎಷ್ಟು ಸಹಜವಾದ ಅರಿವು ಬಂದಿದೆಯೆಂದರೆ, ಕಳೆದೊಂದು ವರ್ಷದಿಂದ ಅದು ನಮ್ಮ ನಿತ್ಯಜೀವನದ ಒಂದು ಭಾಗವಾಗಿರುವುದರಿಂದ ಮಕ್ಕಳಿಗೆ ಗೊತ್ತಿಲ್ಲ ಎಂದು ತಿಳಿಯುವ ಅಗತ್ಯವೇ ಇಲ್ಲ. ಬಹುತೇಕ ವಿಚಾರಗಳು ನಮಗೆ ದಿನನಿತ್ಯ ತಿಳಿಯುತ್ತಿರುವಂತೆ ಅವರಿಗೂ ಗೊತ್ತಾಗುತ್ತಿರುತ್ತವೆ. ಶಾಲೆಯ ಮೂಲಕವೂ ಸಾಕಷ್ಟು ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆದಿವೆ. ಚೀನಾದಲ್ಲಿ ಶುರುವಾಯ್ತು ಎಂಬುದರಿಂದ ಹಿಡಿದು ಪಕ್ಕದ ಮನೆಯಲ್ಲಿ ಎರಡು ಪಾಸಿಟಿವ್‌ವರೆಗೆ! ನಮ್ಮ ದೇಶವಿಡೀ ಲಾಕ್ಡೌನ್‌ ಆಗಿ ಹೊರಗೆ ಕಾಲಿಡಲಾಗುತ್ತಿಲ್ಲ ಎಂಬುದರಿಂದ ಹಿಡಿದು ಎಷ್ಟೋ ಜನರು ಇದರಿಂದ ಪ್ರಾಣ ಬಿಡುತ್ತಿದ್ದಾರೆನ್ನುವವರೆಗೆ! ಆದರೂ ಎಷ್ಟಾದರೂ ಮಕ್ಕಳು ಮಕ್ಕಳೇ. ಅವರ ಚಿಂತೆ ಎಲ್ಲ, ನಮ್ಮ ಮನೆಗೆ ಕೊರೋನಾ ಬಂದರೆ ನಾನು ಅಪ್ಪ ಅಮ್ಮನಿಂದ ದೂರ ಇರಬೇಕಾದೀತೋ ಎಂಬುದು ಮಾತ್ರ. ಇದೊಂದು ಕಳವಳ ಮಾತ್ರ ಅವರನ್ನು ಹೆಚ್ಚು ಇನ್ನಿಲ್ಲದಂತೆ ಬಾಧಿಸಿದ್ದು. ಕಳೆದ ವರ್ಷವೇ ಮಗ ಹೀಗೆ ತನ್ನ ಈ ಚಿಂತೆಯನ್ನು ನನ್ನ ಬಳಿ ಕೂತು ಹಂಚಿಕೊಂಡಾಗ, ಆಗ ಅವನಿಗೆ ಸಮಾಧಾನ ಹೇಳಿ ಇಂಥ ಚಿಂತೆ ಮಾಡಬೇಡ ನಿಂಗೇನೂ ಆಗದು, ಆದರೂ ನಿನ್ನ ಜೊತೆಗೇ ಇರುವೆʼ ಎಂದು ಸಮಾಧಾನ ಹೇಳಿದ್ದೆ. ಆಗ ನೆಮ್ಮದಿಯಿಂದಿದ್ದ ಪುಟಾಣಿಗೆ, ಈಗ ನನಗೆ ಜ್ವರ ಬಂದಿದ್ದು ಚಿಂತೆಗೀಡು ಮಾಡಿತ್ತು.

ಆಗಿನ್ನೂ ದೆಹಲಿ ಸುತ್ತಮುತ್ತ ಪಾಸಿಟಿವ್‌ ಸಂಖ್ಯೆ ನಿಧಾನವಾಗಿ ಏರುತ್ತಿತ್ತು. ಆದರೆ ದಿಢೀರ್‌ ಏರಿಕೆಯ ಬಿಸಿ ಯಾರಿಗೂ ಮುಟ್ಟಿರಲಿಲ್ಲ. ನಗರಗಳ ಅಪಾರ್ಟ್‌ಮೆಂಟ್‌ ಒಳಗಿನ ಪಾರ್ಕುಗಳಲ್ಲಿ ಮಾಸ್ಕು ಹಾಕಿಕೊಂಡು ಮಕ್ಕಳು ಕೊರೋನಾ ಭೀತಿ ಸ್ವಲ್ಪ ಕಳಚಿಕೊಂಡು ನಿಧಾನವಾಗಿ ಆಡಲು ಶುರು ಮಾಡಿ ಒಂದೆರಡು ತಿಂಗಳಾಗಿತ್ತಷ್ಟೇ. ಹಲವು ತಿಂಗಳುಗಳು ಬೇರೆ ಮಕ್ಕಳೊಡನೆ ಬೆರೆಯದೆ ಮಕ್ಕಳಾದರೂ ಎಷ್ಟು ದಿನ ಸುಮ್ಮನಿದ್ದಾರು? ನಾನೂ ಕೂಡಾ ಸಂಜೆಯ ಹೊತ್ತು ಸೈಕಲ್ಲು, ಆಟ ಎಂದು ದಿನಕ್ಕೊಂದು ಗಂಟೆ ಸುತ್ತಾಡಿಸಲು ಶುರು ಮಾಡಿದ್ದೆ. ನಿಧಾನವಾಗಿ ಪಾಸಿಟಿವ್‌ ಸಂಖ್ಯೆ ಮೇಲೇರಲು ಶುರುವಾಗಿದ್ದು ತಿಳಿದು ಪಾರ್ಕುಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗತೊಡಗಿದವು. ನಾವು ಮತ್ತೆ ನಮ್ಮ ಬಾಗಿಲುಗಳನ್ನು ಹಾಕಿಕೊಂಡೆವು. ಆದರೂ ಅಗತ್ಯ ವಸ್ತುಗಳಿಗೆ ಹೊರಗೆ ಓಡಾಟ, ಕೆಲಸಗಳು ಜಾರಿಯಲ್ಲಿತ್ತು.

ಇಂಥದ್ದೊಂದು ಪ್ರಸಂಗ, ಭಯ, ಭೀತಿ ಮನುಕುಲ ಅನುಭವಿಸಿದ್ದು ಕಡಿಮೆ. ಮನುಷ್ಯ ಮನುಷ್ಯನಿಂದ ದೂರ ಇರಬೇಕಾದ ಪರಿಸ್ಥಿತಿ, ಎಲ್ಲರೂ ಇದ್ದಾರೆ, ಯಾರೂ ಇಲ್ಲ ಎಂಬ ಭಾವ. ಇಂಥ ಭೀತಿಯೇ ಮನುಷ್ಯನನ್ನು ಅರ್ಧ ಅಧೀರರನ್ನಾಗಿಸಿಬಿಡುತ್ತದೆ. ಮಕ್ಕಳ ಮನಸ್ಸು ಅದೆಲ್ಲವಕ್ಕೆ ಕನ್ನಡಿ. ಈಗಿನ ನಮ್ಮ ಮಕ್ಕಳು ಈ ವಿಚಾರದಲ್ಲಿ ಎಂಥ ದುರದೃಷ್ಟವಂತರು ಎಂದು ಅನಿಸುತ್ತದೆ. ನಾವೆಲ್ಲ ನಮ್ಮ ಬಾಲ್ಯವನ್ನೊಮ್ಮೆ ಹೀಗೆ ಊಹಿಸಿ ನೋಡಿದರೆ, ಛೇ ಈ ಮಕ್ಕಳದ್ದು ಎಂಥಾ ದುರವಸ್ಥೆ ಎನಿಸುತ್ತದೆ. ನಮಗೆಲ್ಲ ಆಗ ರಾತ್ರಿಯ ʻಗುಮ್ಮʼ ಬಿಟ್ಟರೆ ಬೇರೆ ಯಾವ ಹೆದರಿಕೆಗಳೂ ಇಲ್ಲದ ಸ್ವಚ್ಛಂದ ಮನಸ್ಸು. ಆದರೆ ಈಗಿನವು ನಾಲ್ಕು ಗೋಡೆಯೊಳಗೆ ಬಂಧಿಯಾಗಿರುವ ಪರಿಸ್ಥಿತಿ ನಗರದ ಮಕ್ಕಳದ್ದು. ಎಷ್ಟೋ ಮಕ್ಕಳು ಸೀದ ಒಂದನೇ ಕ್ಲಾಸಿಗೇ ಆನ್‌ಲೈನಾಗಿದ್ದಾರೆ. ಇದೆಲ್ಲ ಮುಗಿದು ಈ ಮಕ್ಕಳಿಗೆಲ್ಲ ಅದ್ಯಾವಾಗ ಪ್ರಪಂಚ ಕಣ್ತೆರೆದು ನೋಡಲು ಸಿಗುತ್ತದೋ ಅನಿಸುತ್ತದೆ.

ಕಳೆದ ವರ್ಷ ಪುಣ್ಯಕ್ಕೇನೂ ಆಗಲಿಲ್ಲ. ಜನವರಿಯಲ್ಲಿ ಸಣ್ಣ ಶೀತ ಜ್ವರ ನನಗೂ ಅವನಿಗೂ ಜೊತೆಗೇ ಬಂದುದರಿಂದ ಅವ ಖುಷಿಯಾಗಿಯೇ ಅಂಟಿಕೊಂಡಿದ್ದ. ಮೂರ್ನಾಲ್ಕು ದಿನದೊಳಗೆ ಎಲ್ಲ ಸರಿಹೋಯಿತು. ಆದರೆ, ಈ ಬಾರಿ ಹಾಗಿರಲಿಲ್ಲ. ಆಗಷ್ಟೇ ದೆಹಲಿ ಸುತ್ತಮುತ್ತ ಸೇರಿದಂತೆ ದೇಶದೆಲ್ಲೆಡೆ ಎರಡನೇ ಅಲೆ ಸದ್ದು ಮಾಡಲು ಶುರು ಮಾಡಿತ್ತು. ಹಾಗಾಗಿ, ಇದು ಪಾಸಿಟಿವ್‌ ಆಗಿರುವ ಸಂಭವ ಹೆಚ್ಚು ಎಂದು ಅನಿಸಿಬಿಟ್ಟಿತ್ತು. ಮನೆಯಲ್ಲಿ ಉಳಿದವರೆಲ್ಲರೂ ಆರಾಮವಾಗಿದ್ದರು. ಹಾಗಾಗಿ, ಎಲ್ಲರ ಆರೋಗ್ಯ ಮುಖ್ಯ ಎಂದು ದೂರವೇ ಉಳಿದೆ.

ಆ ದಿನ ಬಾಗಿಲ ಬಳಿಯಲ್ಲಿ ನಿಂತು ಇಣುಕಿ ಆತ ಕೇಳಿದ ಮೊದಲ ಪ್ರಶ್ನೆ, ಅಮ್ಮಾ, ಇವತ್ತು ನಾನೆಲ್ಲಿ ಮಲಗಲಿ?

ಅವನ ಚಿಂತೆಯಿಡೀ, ತನಗೆ ನಿದ್ದೆ ಹೇಗೆ ಬಂದೀತು ಎಂಬುದು.

ʻಅಪ್ಪ ಇದಾರಲ್ಲಾ, ಅಜ್ಜಿನೂ ಇರ್ತಾರೆ ಬಿಡು, ಕಥೆ ಕೇಳಿದ್ರೆ ನಿದ್ದೆ ಬರತ್ತೆ. ಅವ್ರ ಜೊತೆ ಮಲಗು ಪುಟ್ಟಾʼ ಎಂದೆ.

ʻಅಪ್ಪನ ಜೊತೆ ನೀನೂ ಬೇಕುʼ ಎಂದ.

ʻಸ್ವಲ್ಪ ದಿನ ಪುಟ್ಟ, ಸರಿ ಹೋಗತ್ತೆ, ಅಡ್ಜಸ್ಟ್‌ ಮಾಡುʼ ಎಂದೆ.

My Covid Experience

ಗುಮ್ಮನಿಲ್ಲವೇ ಅಮ್ಮನಿಲ್ಲಿ…

ಬಾಗಿಲ ಬಳಿ ನಿಂತಿದ್ದ ಹುಡುಗ, ಇನ್ನೂ ಹತ್ತಿರ ಬಂದ. ಮಾಸ್ಕ್‌ ಇತ್ತು. ಆದರೂ, ʻಪುಟ್ಟಾ, ಬೇಡ. ಅಲ್ಲೇ ಇರು. ಸುಮ್ನೆ ನಿಂಗೂ ಬಂದ್ರೆ ಚಿಂತೆ ಆಮೇಲೆʼ ಎಂದರೆ, ʻಪರ್ವಾಗಿಲ್ಲ. ನಂಗೆ ಬಂದ್ರೆ ಬರ್ಲಿ ಅಂತನೇ ನಾನು ಹತ್ತಿರ ಬರ್ತಿರೋದು, ಕೊನೇ ಪಕ್ಷ ನಿಂಜೊತೆ ಇರ್ಬೋದಲ್ವಾ?ʼ ಎಂದ. ಇವನನ್ನು ಹೇಗಪ್ಪಾ ಇನ್ನೊಂದೆರಡು ವಾರ ಸಮಾಧಾನಿಸೋದು ಎಂದು ಕಳವಳವಾಗಹತ್ತಿತು. ಇನ್ನು ಜಾಸ್ತಿ ಭಾವುಕಳಾದರೆ, ಪರಿಸ್ಥಿತಿ ನಿಗ್ರಹ ಕಷ್ಟ ಎಂದರಿತು, ಹೆಂಗೋ ಸಮಾಧಾನಪಡಿಸಿ, ನಿರ್ಭಾವುಕತೆಯಿಂದ ವರ್ತಿಸತೊಡಗಿದೆ. ಆತನೂ ದೂರದಿಂದಲೇ ಗುಡ್‌ ಮಾರ್ನಿಂಗ್‌, ಗುಡ್‌ ನೈಟ್‌, ಫ್ಲೈಯಿಂಗ್‌ ಕಿಸ್ಸುಗಳಲ್ಲೇ ಪರಿಸ್ಥಿತಿ ನಿಭಾಯಿಸತೊಡಗಿದ. ʻಅಮ್ಮಾ, ನೀ ಬೇಗ ಹುಷಾರಾಗುವೆʼ ಎಂದೆಲ್ಲ ದಿನವೂ ಹೇಳುತ್ತಾ, ನನಗೆ ರೂಮಿನಲ್ಲಿ ಆಟವಾಡೆಂದು ತನ್ನ ಕಾರು, ಬಸ್ಸುಗಳನ್ನು ನನ್ನೆಡೆಗೆ ಎಸೆದು ಖುಷಿಯಾಗಿರಿಸಲು ಪ್ರಯತ್ನಿಸಿದ. ಒಂದಿಷ್ಟು ರಟ್ಟಿನ ಕಾರ್ಡುಗಳೂ, ಮುದ್ದು ಮುದ್ದು ಚಿತ್ರಗಳನ್ನೂ ಬರೆದು ನನ್ನ ರೂಮಿಗೆ ಎಸೆದುಬಿಟ್ಟು, ಇಷ್ಟವಾಯ್ತಾ ಎಂದು ಕೇಳುತ್ತಿದ್ದ. ಇವೆಲ್ಲವುಗಳ ನಡುವೆ ನನಗೆ ಪಾಸಿಟಿವ್‌ ಬಂದು ಐದಾರು ದಿನದಲ್ಲಿ ಗಂಡ ಮಹೇಶನೂ ಪಾಸಿಟಿವ್.‌ ಇನ್ನು ನಿಜಕ್ಕೂ ಪರಿಸ್ಥಿತಿ ಕಷ್ಟವಾಗಲಿದೆ ಅನಿಸತೊಡಗಿತ್ತು.

ಐದಾರು ದಿನದಲ್ಲಿ ಪರಿಸ್ಥಿತಿಗೆ ಹೊಂದಿಕೊಂಡಿದ್ದರಿಂದ ಮಗನ ವಿಚಾರದಲ್ಲಿ ಹೆಚ್ಚು ಕಷ್ಟವಾಗಲಿಲ್ಲ. ಒಂದೆಡೆ ಶಾಲೆಯವರು ಆನ್‌ಲೈನ್‌ ಬೇಸಿಗೆ ಶಿಬಿರವೆಂದು ಮಕ್ಕಳನ್ನು ಬೆಳಗಿನ ಹೊತ್ತು ಹಾಡು, ತಮಾಷೆ, ಸಂಗೀತ, ಚಿತ್ರಕಲೆ, ಕರಕುಶಲ ಎಂದೆಲ್ಲ ಚಂದಕ್ಕೆ ನಿಭಾಯಿಸಿದರು. ಇದು ಆಗ ಸಿಕ್ಕ ವರ. ಮಿಕ್ಕಂತೆ ಮಗನ ತಂಟೆ ತಕರಾರುಗಳನ್ನೂ ಹಾಸಿ ಹೊದ್ದುಕೊಂಡು, ಇಡೀ ಮನೆಯ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತಿದ್ದು ನನ್ನ ಅತ್ತೆ. ಆದರೆ, ವಯಸ್ಸಾದ ಅವರಿಗೆ ಏನೂ ಆಗದಿದ್ದರೆ ಸಾಕಪ್ಪಾ ಎಂಬುದಷ್ಟೇ ನಮಗೆ ಆ ಕ್ಷಣದ ಯೋಚನೆಯಾಗಿದ್ದುದು. ಪುಣ್ಯಕ್ಕೆ ಏನೂ ಆಗಲಿಲ್ಲ. ಆರಂಭದಲ್ಲೇ ಲಸಿಕೆ ಹಾಕಿದ್ದು ಕೆಲಸ ಮಾಡಿರಬೇಕು.

My Covid Experience

ವಿವಸ್ವಾನ್ ಬರೆದ ಗುಮ್ಮನ ಚಿತ್ರ

ಹಾಗೆ ನೋಡಿದರೆ, ಇದೆಲ್ಲ ಏನೇನೂ ಅಲ್ಲ. ಲೋಕದಲ್ಲಿ ಒಂದೊಂದು ಮನೆಯಲ್ಲಾದ ಸಮಸ್ಯೆಗಳ ಊಹೆ ನಮಗಿದೆ. ಎಷ್ಟೋ ಪುಟ್ಟಮಕ್ಕಳು ತಮ್ಮ ಹೆತ್ತವರಿಬ್ಬರನ್ನೂ ಕಳೆದುಕೊಂಡಿದ್ದಾರೆ. ಹಾಲು ಕುಡಿವ ಹಸುಳೆಗಳು ಅಮ್ಮನನ್ನು ಕಳೆದುಕೊಂಡಿದ್ದಾರೆ. ಹಳ್ಳಿಗಳಲ್ಲಿ ಕೊರೋನಾದಿಂದ ಅನ್ನ ಬೇಯಿಸಿಕೊಳ್ಳಲೂ ಶಕ್ತಿಯಿಲ್ಲದ ವೃದ್ಧ ತಂದೆ ತಾಯಿಯರಿಂದ ಮಕ್ಕಳು ದೂರವಿದ್ದಾರೆ. ಮನೆಯವರೆಲ್ಲರೂ ಪಾಸಿಟಿವ್‌ ಆಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ. ಗರ್ಭಿಣಿ ಮಹಿಳೆಯರು, ಬೇರೆ ಖಾಯಿಲೆಗಳಿಂದ ನರಳುವವರು. ಒಟ್ಟಾರೆ ರೋದನದ ಕಾಲಘಟ್ಟವಿದು.

ಈ ಪುಟ್ಟಮಕ್ಕಳ ಪುಟಾಣಿ ಮೆದುಳು ಎಷ್ಟೆಲ್ಲ ಯೋಚಿಸುತ್ತದೆ ಎಂಬುದಕ್ಕೆ ಸುಮಾರು ಇಪ್ಪತ್ತು ದಿನಗಳ ನಂತರ ಈ ಗೃಹಬಂಧನದಿಂದ ಬಿಡುಗಡೆಯಾಗಿ ಹೊರಗೆ ಬಂದಾಗಲೇ ಗೊತ್ತಾಗಿದ್ದು. ಮೂರು ವಾರ ಸುಮ್ಮನಿದ್ದ ಹುಡುಗ, ಕೊನೇ ದಿನ ಹೊರಗೆ ಬಂದ ಬಂದ ಕೂಡಲೇ, ಮೆಲ್ಲಗೆ ʻಅಮ್ಮಾ ನಂಗೀಗ ಎಷ್ಟು ಖುಷಿ ಆಗ್ತಿದೆ ಅಂದರೆ, ಹೇಳಕ್ಕೇ ಆಗ್ತಿಲ್ಲ. ಆಗ ನಂಗೆ ನಿಜವಾಗಿಯೂ ಭಯ ಆಗಿತ್ತುʼ ಎಂದು ಮೆಲ್ಲನೆ ಬಾಯ್ಬಿಟ್ಟ. ʻಹೌದಾ ಪುಟ್ಟ? ಯಾಕೋ ಭಯ ಆಯ್ತು ನಿಂಗೆ?ʼ ಎಂದೆ.

ʻಕೊರೋನಾ ಬಂದ್ರೆ ಸಾಯ್ತಾರೆ ಅಂತಿದ್ರಲ್ಲ ಅದ್ಕೆ ಭಯ ಆಯ್ತುʼ ಎಂದ. ʻಎಲ್ಲರೂ ಎಲ್ಲಿ ಸಾಯ್ತಾರೆ? ಅಷ್ಟಕ್ಕೂ ಇಂಥ ಯೋಚನೆ ನಿಂಗೆ ಯಾಕೆ ಬಂತು? ನಂಗೇ ಧೈರ್ಯ ಹೇಳ್ತಿದ್ದೆ ನೀನುʼ ಎಂದು ಸಮಾಧಾನ ಮಾಡಲು ನೋಡಿದೆ. ʻಸತ್ರೆ ವಾಪಾಸ್‌ ಸಿಗ್ತಾರಾ ಹೇಳು? ಅಜ್ಜ ಈಗ ಮತ್ತೆ ಬಂದ್ರಾ? ಇಲ್ಲ ತಾನೇ? ಅದ್ಕೇ ಭಯವಾಯ್ತುʼ ಎಂದ. ʻಅಯ್ಯೋ ಪುಟ್ಟಾ, ಹಂಗೆಲ್ಲ ಏನೂ ಆಗಲ್ವೋ, ಯಾಕೋ ಚಿಂತೆ ನಿಂಗೆ?ʼ ಎಂದರೆ, ʻಮಕ್ಕಳಿಗೇನಾದರೂ ಕೊರೋನಾ ಆಗಿ ಮಕ್ಕಳು ಹೋಗ್ಬಿಟ್ರೆ, ದೊಡ್ಡೋರಿಗೆ ಪ್ರಾಬ್ಲಂ ಇಲ್ಲ. ಆದರೆ, ದೊಡ್ಡೋರಿಗೆ ಏನಾದ್ರೂ ಆದ್ರೆ ಮಕ್ಕಳಿಗೆ ಎಷ್ಟು ಪ್ರಾಬ್ಲಂ… ಅಲ್ವಾ ಅಮ್ಮಾʼ ಎಂದುಬಿಟ್ಟ.

ಒಂದು ಕ್ಷಣ ಏನು ಉತ್ತರಿಸಲಿ ಎಂದೇ ಅರ್ಥವಾಗಲಿಲ್ಲ. ಇಷ್ಟೆಲ್ಲ ಒಳಗೆ ಇಟ್ಟುಕೊಂಡು ಅಷ್ಟೂ ದಿನ ಹೊರಗಿನಿಂದ ನನಗೆ, ʻನೆಗೆಟಿವ್‌ ಥಿಂಕ್‌ ಮಾಡ್ಬಾರ್ದು, ಖುಷಿಯಾಗಿರು, ಬೇಗ ಸರಿ ಹೋಗುತ್ತೆ ನಿಂಗೆʼ ಎಂದು ಆಗಾಗ ಹೇಳುತ್ತಲೇ ಇದ್ದನಲ್ಲ ಎಂದು ಪುಟಾಣಿ ಎಂದು ಅವನ ಬಗ್ಗೆ ಆಶ್ಚರ್ಯವೂ ಆಯ್ತು.

ನನ್ನ ಮೌನ ಅರ್ಥವಾದವನಂತೆ, ಮತ್ತೆ ಬಿಗಿದಪ್ಪಿಕೊಂಡು, ʻಈಗ ಎಷ್ಟು ನೆಮ್ಮದಿ ಆಗ್ತಿದೆ ಗೊತ್ತಾʼ ಎಂದ.

ನನ್ನ ಬಳಿ ನಿಜಕ್ಕೂ ಮಾತೇ ಇರಲಿಲ್ಲ!

ಆ ರಾತ್ರಿ ಅದೆಷ್ಟೋ ಹೊತ್ತಿನವರೆಗೆ ನಡುರಾತ್ರಿಯಲ್ಲೂ ಮಾತನಾಡುತ್ತಲೇ ಇದ್ದ. ನನಗೆ ಹೂಂಗುಟ್ಟಿ, ಅವನ ಪ್ರಶ್ನೆಗಳಿಗೆ ಉತ್ತರಿಸಿ ಸುಸ್ತಾಗಿ, ನಾನು ನಿದ್ದೆ ಮಾಡಿದೆನೋ, ಅವನೇ ಮೊದಲು ನಿದ್ದೆ ಮಾಡಿದನೋ ತಿಳಿಯಲಿಲ್ಲ. ಈ ಕೊರೋನಾ ಏನೆಲ್ಲ ತೋರಿಸುತ್ತಿದೆ!

ಇದನ್ನೂ ಓದಿ : My Coronavirus Experience : ಮಧ್ಯರಾತ್ರಿ ‘ಕೀಕೀ’ ಚೆಂಡನ್ನು ಅದುಮಿದರೂ ಯಾರೂ ಬರಲಿಲ್ಲ

Published On - 1:46 pm, Mon, 31 May 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ