My Coronavirus Experience : ಮಧ್ಯರಾತ್ರಿ ‘ಕೀಕೀ’ ಚೆಂಡನ್ನು ಅದುಮಿದರೂ ಯಾರೂ ಬರಲಿಲ್ಲ

My Covid Story : ‘ಮೆಲ್ಲಗೆ ಬ್ಯಾಲೆನ್ಸ್ ಮಾಡಿಕೊಂಡು ಅಲ್ಲೇ ಇದ್ದ ಪಂಚೆಯನ್ನು ಎತ್ತಿಕೊಂಡು ಬಾತ್ರೂಂ ಒಳಗೆ ಹೋಗಿ ಸ್ಟೂಲ್ ಮೇಲೆ ಕುಕ್ಕರಿಸಿದೆ. ಹಾಕಿದ್ದ ನೈಟಿ ಕಿತ್ತೆಸೆದು ಬಕೆಟ್ ನಲ್ಲಿದ್ದ ತಣ್ಣೀರನ್ನು ಮೈಗೆ ಸುರಿಯತೊಡಗಿದೆ. ಏನಾದರಾಗಲಿ, ಜ್ವರ ತಲೆಗೆ ಏರಲು ಬಿಡದೆ ಈಗಲೇ ನಿಲ್ಲಿಸಬೇಕು ಎಂಬುದಷ್ಟೇ ನನ್ನ ಯೋಚನೆಯಾಗಿತ್ತು. ಹತ್ತು ಹದಿನೈದು ಟಬ್ ತಣ್ಣೀರು ಕಿರುಚುತ್ತಲೇ ಮೈಮೇಲೆ ಸುರಿದುಕೊಂಡುಬಿಟ್ಟೆ.‘ ಜಲಜಾ ರಾವ್

My Coronavirus Experience : ಮಧ್ಯರಾತ್ರಿ ‘ಕೀಕೀ’ ಚೆಂಡನ್ನು ಅದುಮಿದರೂ ಯಾರೂ ಬರಲಿಲ್ಲ
ಲೇಖಕಿ ಜಲಜಾ ರಾವ್
Follow us
ಶ್ರೀದೇವಿ ಕಳಸದ
|

Updated on:May 30, 2021 | 8:29 PM

ಕೋವಿಡ್; ಯಾರಿಗೆ ಯಾರೂ ಇಲ್ಲ ಎಂಬ ಮುಖವೂ ಇದಕ್ಕಿದೆ. ಯಾರಿಗೋ ಯಾರೋ ಇದ್ದಾರೆ ಎಂಬ ಬೆನ್ನೂ ಇದಕ್ಕಿದೆ. ಇದರ ಅದೃಶ್ಯನಾಲಗೆಯಿಂದ ತಪ್ಪಿಸಿಕೊಳ್ಳುವುದೇ ಕ್ಷಣಕ್ಷಣದ ತಪನೆ. ಆದರೂ ಬಿಟ್ಟೀತೇ ತಟ್ಟದೆ? ‘ನನಗೆ ಹೀಗಾಯ್ತು, ಹೀಗಾಗಿದೆ, ಹೀಗಾಗಿತ್ತು, ಹೀಗೆ ಮಾಡಿದೆ’ ಸ್ವತಃ ಅನುಭವಿಸಿದ್ದನ್ನು ಹೇಳಿಕೊಳ್ಳಲು ಸ್ವಲ್ಪ ಧೈರ್ಯ, ಬಿಚ್ಚುಮನಸ್ಸು ಬೇಕು ಮತ್ತು ಹೆಚ್ಚು ಸರಳತೆ ಬೇಕು. ‘ನಿಮಗೂ ಬಂದಿದೆಯಾ’ ಪ್ರಶ್ನಾರ್ಥಕಕ್ಕೋ, ಉದ್ಘಾರವಾಚಕಕ್ಕೋ ಇದು ವಾಲದೆ ‘ನನ್ನಿಂದೇನಾದರೂ ಸಹಾಯ’ ಎಂಬಲ್ಲಿಗೆ ಮುಂದುವರಿಸಲು ತುಸುವಾದರೂ ಅಂತಃಕರಣ ಬೇಕು. ಇದೆಲ್ಲದರ ತೇಲುಮುಳುಗುವಿನೊಂದಿಗೆ ನಾವೆಲ್ಲ ಧೇನಿಸುತ್ತಿರುವುದು ನಿರಾಯಾಸ ಬದುಕಿಗೆ ಮರಳುವುದನ್ನು. ಇನ್ನೇನು ಕೆಲ ತಿಂಗಳುಗಳಲ್ಲಿ ಅದೂ ಸಾಧ್ಯವಾಗುತ್ತದೆ. ಅದಕ್ಕಿಂತ ಮೊದಲು ಕೋವಿಡ್​ನಿಂದಾಗಿ ಐಸೋಲೇಶನ್​ಗೆ ಒಳಗಾಗಿ ನಡುಗಡ್ಡೆಯಂತಾಗಿದ್ದ ಬದುಕಿನ ಅನುಭವದೆಳೆಗಳನ್ನು ಇಲ್ಲಿ ಬಿಚ್ಚಿಕೊಂಡು ಹಗುರಾಗಬಹುದಲ್ಲ? ಇಂದಿನಿಂದ ಶುರುವಾಗುವ ಹೊಸ ಸರಣಿ ‘ಟಿವಿ9 ಕನ್ನಡ ಡಿಜಿಟಲ್ : ನನ್ನ ಕೋವಿಡ್ ಅನುಭವ’.

ಕೋವಿಡ್​ನಿಂದ ಸುಧಾರಿಸಿಕೊಂಡವರು ತಮ್ಮ ಅನುಭವಗಳನ್ನು ಇಲ್ಲಿ ಮೆಲುಕು ಹಾಕಲಿದ್ದಾರೆ. ನೀವೂ ಕೂಡ ಬರೆಯುವ ಮೂಲಕ ಈ ಸರಣಿಯಲ್ಲಿ ಭಾಗಿಯಾಗಬಹುದು. tv9kannadadigital@gmail.com 

*

ಬೆಂಗಳೂರಿನಲ್ಲಿ ವಾಸಿಸುತ್ತಿರುವ ಜಲಜಾ ರಾವ್, ಅವರಿಗೆ ಆ ರಾತ್ರಿ ಯಾಕೆ ಇನ್ನೂ ಅವರ ಸ್ಮೃತಿಪಟಲದಲ್ಲಿ ಉಳಿದಿದೆ? ಓದಿ… *

ಅದು ಜೀವನದಲ್ಲಿ ಎಂದೂ ಮರೆಯಲಾಗದ ರಾತ್ರಿ. ನನಗೆ ಕೊರೋನಾ ಪಾಸಿಟಿವ್ ಆಗಿ ಮೂರನೇ ದಿನ. ವಿಪರೀತ ಜ್ವರವಿತ್ತು. ಏನೇ ಆಹಾರ ಕಂಡರೂ ವಾಕರಿಕೆ, ಬಲವಂತವಾಗಿ ಒಂದು ತುತ್ತು ತಿಂದರೂ ವಾಂತಿ ಆಗಿಬಿಡುತ್ತಿತ್ತು. ಎಡಪಕ್ಕೆಯಲ್ಲಿ ಹಿಂಡುವಂತಹ ನೋವು. ಮೂಳೆ ಸಂದುಗಳಲ್ಲಿ ಅಸಾಧ್ಯ ವೇದನೆ. ಆ ದಿನ ಸಂಜೆ ಮಗ ಆಕ್ಸಿಮೀಟರ್​ನಲ್ಲಿ ಆಕ್ಸಿಜನ್ ಲೆವೆಲ್ ಚೆಕ್ ಮಾಡಿದವ ‘Spo2 ರೀಡಿಂಗ್ 81 ಕ್ಕೆ ಬಂದಿದೆಯಮ್ಮಾ ನಾಳೆ ಯಾವ ಆಸ್ಪತ್ರೆಯಲ್ಲಿ ಬೆಡ್ ಸಿಕ್ಕರೂ ಮೊದಲು ಅಡ್ಮಿಟ್ ಆಗಿಬಿಡು, ಹಠ ಮಾಡಬೇಡ’ ಅಂದಿದ್ದ. ಮಗಳು ಬಲವಂತವಾಗಿ ಒಂದು ಸ್ಲೈಸ್ ಬ್ರೆಡ್ ತಿನ್ನಿಸಿ ಒಂದು ಸಣ್ಣ ಲೋಟ ಗ್ಲುಕೋಸ್ ಕುಡಿಸಿ ಡಾಕ್ಟರ್ ಹೇಳಿದ ಮಾತ್ರೆಗಳನ್ನು ನುಂಗಿಸಿ ಹೋಗಿದ್ದಳು. ಅವರುಗಳೂ ಪಾಸಿಟಿವ್ ಆಗಿದ್ದರೂ ಕೋವಿಡ್ ರೋಗಲಕ್ಷಣಗಳಲ್ಲಿ ಸಾಮಾನ್ಯ ಜ್ವರ ಮಾತ್ರವಿದ್ದು ನನ್ನಂತೆ ತೀರಾ ಬಿದ್ದು ಹೋಗಿರಲಿಲ್ಲ.

ಪುಣ್ಯ! ಅಟ್ಯಾಚ್ಡ್ ಬಾತ್ರೂಂ ಇದ್ದ ರೂಮಿನೊಳಗೆ ಐಸೋಲೇಟ್ ಆಗಿದ್ದವಳಿಗೆ ಕೀ ಕೀ ಶಬ್ಧ ಮಾಡುವ ಬಾಲ್ ಒಂದನ್ನು ತಂದು ನನ್ನ ಕೈಲಿಟ್ಟು ‘ಏನಾದರೂ ಬೇಕಾದರೆ ಈ ಬಾಲನ್ನು ಅಮುಕು. ತಕ್ಷಣ ನಾವ್ಯಾರಾದ್ರೂ ಬರುತ್ತೇವೆ ಅಂತ ಹೇಳಿ ನನ್ನ ಗಂಡ ಬಾಗಿಲು ಹಾಕಿಕೊಂಡು ಹೋಗಿದ್ದರು. ಮನೆಯಲ್ಲಿ ಮೂರು ನಾಯಿಗಳಿರುವುದರಿಂದ ಅವುಗಳಿಗೆ ಇನ್ಫೆಕ್ಷನ್ ಆದರೆ? ಎಂಬ ಭಯ. ಅವುಗಳು ಪ್ರೀತಿಗೆ ಹಾತೊರೆದು ಬೆಡ್ ಮೇಲೆ ಹಾರಿ ನನ್ನ ಪರಿಸ್ಥಿತಿ ಅವುಗಳಿಗೂ ಆದರೆ? ಎಂಬ ಆತಂಕ. ಪಾಪ ಸಪ್ಪಗೇ ಇದ್ದವು.

ಮಧ್ಯರಾತ್ರಿ ಸುಮಾರು ಎರಡು ಗಂಟೆ ಇರಬಹುದು. ವಿಪರೀತ ಜ್ವರ, ಛಳಿಯಿಂದ ಒದ್ದಾಡತೊಡಗಿದೆ. ಹೊದ್ದುಕೊಂಡಿದ್ದ ಬ್ಲಾಂಕೆಟ್ ಸಾಲದೆನಿಸಿ ‘ಕೀಕೀ’ ಬಾಲನ್ನು ಅದುಮಿದೆ. ಯಾರೂ ಬರಲಿಲ್ಲ. ಹೃದಯದ ಬಡಿತ ವಿನಾಕಾರಣ ಹೆಚ್ಚಾಗುತ್ತಲೇ ಹೋಯಿತು. ನನ್ನ ಮಂಚದ ಪಕ್ಕ ಕುರ್ಚಿಯ ಮೇಲೆ ಮರದ ಬ್ಯಾಸ್ಕೆಟ್​ನಲ್ಲಿ ಮಾತ್ರೆಗಳು, ಸ್ಟೀಮರ್, ಕೆಮ್ಮಿನ ಸಿರಪ್, ಥರ್ಮಾಮೀಟರ್, ಪಲ್ಸ್ ಆಕ್ಸಿಮೀಟರ್, ಕಾಟನ್ ಬಾಲ್ಸ್, ಟಿಶ್ಯೂ ಪೇಪರ್, ಫ್ಲಾಸ್ಕ್​ನಲ್ಲಿ ಬಿಸಿನೀರು ಎಲ್ಲವೂ ಜೋಡಿಸಿದ್ದುದು ಗಮನಿಸಿ ಜ್ವರ ಎಷ್ಟಿದೆ ನೋಡೋಣ ಎನಿಸಿ ಥರ್ಮಾಮೀಟರ್ ಬಾಯಲ್ಲಿಟ್ಟುಕೊಂಡೆ. 103.7° ಸೆ. ತೋರಿಸುತ್ತಿದೆ! ತಲೆನೋವು, ತಲೆಭಾರ, ಪೂರ್ತಿ ಉಸಿರು ಸಿಗುತ್ತಿಲ್ಲ. ತೀರಾ ಕಷ್ಟವೆನಿಸುತ್ತಿತ್ತು. ದೇಹ ನಿತ್ರಾಣ. ಬೋರಲು ಮಲಗಿ ಒಂದು ಚೂರು ಸುಧಾರಿಸಿಕೊಂಡು ಆಕ್ಸಿಮೀಟರ್ ತೆಗೆದು ಬೆರಳಿಗೆ ಹಾಕಿಕೊಂಡೆ. Spo2 ಸ್ಯಾಚುರೇಷನ್ ಲೆವೆಲ್ 70 ಕಾಣಿಸಿತು! ಹೋ .. ಇನ್ನು ಸತ್ತೆ ನಾನು ಎಂದುಕೊಂಡೆ.

My Covid Experience

ಜಲಜಾ ಅವರ ನಾಯಿಮರಿಗಳು

ದೇಹ ಬಳಲಿ ಬೆಂಡಾಗಿದ್ದರೂ ಬುದ್ಧಿ ಚುರುಕಾಗಿ ಕೆಲಸ ಮಾಡುತ್ತಿತ್ತು. ನಿನ್ನೆಯಷ್ಟೇ ಮಗನ ಕಾಲೇಜು ಸಹಪಾಠಿ ಆಕ್ಸಿಜನ್ ಲೆವೆಲ್ ಕಡಿಮೆ ಆಗಿ ತೀರಿಕೊಂಡಿದ್ದು, ಮಗಳ ಇಬ್ಬರು ಗೆಳತಿಯರು ಮೂರು ದಿನಗಳ ಹಿಂದೆ ಕೋವಿಡ್ ನಿಂದಲೇ ಸತ್ತ ವಿಷಯ ಹಠಾತ್ತನೆ ನೆನಪಾಗಿ ಅಯ್ಯೋ ಇನ್ನೇನು ನಾನೂ ಸ್ವಲ್ಪ ಹೊತ್ತಿನಲ್ಲೇ ಈ ಲೋಕದ ಋಣ ಮುಗಿಸಿಬಿಡುತ್ತೇನೆ ಎನಿಸಿ ದುಃಖದಿಂದ ಕಣ್ಣೀರು ಬಂತು. ನನ್ನ ಮಕ್ಕಳು ಓದು ಮುಗಿಸಿ ಸೆಟ್ಲ್ ಆಗಿಲ್ಲ, ನನ್ನವರು ನಾನಿಲ್ಲದೆ ಆಫೀಸು, ಮನೆ, ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತಾರೋ ಎಂಬ ಯೋಚನೆಗಳು. ಜೊತೆಗೆ ಒಂದಾವರ್ತಿ ಪೂರ್ಣವಾಗದೆ ಅರ್ಧಕ್ಕೆ ನಿಲ್ಲುವ ಉಸಿರು (ದೀರ್ಘವಾಗಿ ಎಳೆದುಕೊಳ್ಳಲು ಸಾಧ್ಯವಾಗದ ಪೂರ್ತಿ ಉಸಿರು) ಇನ್ನಷ್ಟು ಕುಗ್ಗಿಸಿಬಿಟ್ಟವು. ಇದೇ ಸಾವಿರಬಹುದೇನೋ ಎನಿಸತೊಡಗಿತು. ಬರೀ ಕೆಟ್ಟ ಯೋಚನೆಗಳೇ.

ಜ್ವರದ ತಾಪ ಇನ್ನೂ ಏರಿತ್ತು. ಒಂದೇ ಸಮನೆ ವೇಗವಾಗಿ ಹೊಡೆದುಕೊಳ್ಳುತ್ತಿರುವ ಹೃದಯ, ನಡುಗುತ್ತಿರುವ ದೇಹ ಕೊನೆಯ ಬಾರಿ ಮಕ್ಕಳನ್ನು ನೋಡುವ ಬಯಕೆ! ಅಬ್ಬಾ…ಆ ಕ್ಷಣಗಳು ಯುಗಗಳಂತೆ ದೀರ್ಘವಾಗಿದ್ದವು. ರಾಯರನ್ನು ನೆನೆದೆ. ಕ್ಷಣ ಕೈಮುಗಿದು ಪ್ರಾರ್ಥಿಸಿದೆ. ಅಮ್ಮ ಹೇಳುತ್ತಿದ್ದ ‘ಏನೇ ಬರಲಿ, ಕೊನೆಯವರೆಗೂ ಹೋರಾಡು’ ಎಂಬ ಮಾತು ನೆನಪಿಸಿಕೊಂಡೆ. ಕಷ್ಟಪಡುತ್ತಾ ಮೆಲ್ಲಗೆ ಬ್ಯಾಲೆನ್ಸ್ ಮಾಡಿಕೊಂಡು ಅಲ್ಲೇ ಇದ್ದ ಪಂಚೆಯನ್ನು ಎತ್ತಿಕೊಂಡು ಬಾತ್ರೂಂ ಒಳಗೆ ಹೋಗಿ ಸ್ಟೂಲ್ ಮೇಲೆ ಕುಕ್ಕರಿಸಿದೆ. ಹಾಕಿದ್ದ ನೈಟಿ ಕಿತ್ತೆಸೆದು ಬಕೆಟ್ ನಲ್ಲಿದ್ದ ತಣ್ಣೀರನ್ನು ಮೈಗೆ ಸುರಿಯತೊಡಗಿದೆ. ಏನಾದರಾಗಲಿ, ಜ್ವರ ತಲೆಗೆ ಏರಲು ಬಿಡದೆ ಈಗಲೇ ನಿಲ್ಲಿಸಬೇಕು ಎಂಬುದಷ್ಟೇ ನನ್ನ ಯೋಚನೆಯಾಗಿತ್ತು. ಹತ್ತು ಹದಿನೈದು ಟಬ್ ತಣ್ಣೀರು ಕಿರುಚುತ್ತಲೇ ಮೈಮೇಲೆ ಸುರಿದುಕೊಂಡುಬಿಟ್ಟೆ. ಪಂಚೆ ಸುತ್ತಿಕೊಂಡು ತೂರಾಡುತ್ತಾ ಹೊರಬಂದು ಹೇಗೋ ಒರೆಸಿಕೊಂಡು ಬೇರೆ ನೈಟಿ ಧರಿಸುವ ವೇಳೆಗೆ ಮೈಯ್ಯೆಲ್ಲಾ ಸೋತುಹೋಗಿತ್ತು. ಪ್ರೋನಿಂಗ್ ಪೊಸಿಷನ್ನಲ್ಲಿ ಮಲಗಿ ಮತ್ತೆ ಟೆಂಪರೇಚರ್ ನೋಡಿದಾಗ 100° ಸೆ. ತೋರಿಸುತ್ತಿತ್ತು. ಸಂತೋಷಕ್ಕೆ ಸುಮಾರು ದಿನಗಳಿಂದ ಬಾರದ ನಿದ್ದೆ ಬಂದುಬಿಟ್ಟಿತು.

ಒಂದು ಗಂಟೆ ನಿದ್ರಿಸಿ ಮತ್ತೆ ಎಚ್ಚರಿಕೆ ಆದಾಗ ನನ್ನ ಮೊಬೈಲ್ ಕೈಗೆತ್ತಿಕೊಂಡು ಯೂಟ್ಯೂಬ್​ನಲ್ಲಿ ಒಂದಷ್ಟು ಡಾಕ್ಟರುಗಳು ಮಾಡಿದ ವಿಡಿಯೋಗಳನ್ನು ನೋಡತೊಡಗಿದೆ. ಅವುಗಳಲ್ಲಿ ಕೋವಿಡ್ ರೋಗಿಗಳು ಮನೆಯಲ್ಲಿ ಇರುವಾಗ ರಕ್ತದ ಆಕ್ಸಿಜನ್ ಸ್ಯಾಚುರೇಷನ್ ಲೆವೆಲ್ ಕಡಿಮೆಯಾದರೆ ಏನು ಮಾಡಬೇಕು ಎಂಬುದನ್ನು ವಿವರಿಸುತ್ತಾ ಉಸಿರಾಟದ ವ್ಯಾಯಾಮಗಳ ಬಗ್ಗೆ ಬಹಳ ಚೆನ್ನಾಗಿ ವಿಡಿಯೋ ಮಾಡಿದ್ದರು. ಅದನ್ನು ನೋಡಿಕೊಂಡು ನಾನೂ ಮಾಡಲು ಪ್ರಯತ್ನಿಸಿದೆ. ಸ್ವಲ್ಪ ಹೊತ್ತು ಮೊಬೈಲ್ ನೋಡಿಯೇ ವಿಪರೀತ ಕಣ್ಣುನೋವು ಬಂದು ಕಣ್ಣು ಮುಚ್ಚಿದರೆ ಕಣ್ಣ ಮುಂದೆ ಬಣ್ಣದ ಚಕ್ರಗಳು ಸುತ್ತುತ್ತಿದ್ದವು. ಆಗದು ಎನಿಸಿ ಬೋರಲು ಮಲಗಿಬಿಟ್ಟೆ. ಮಾರನೇ ದಿನ ಬೆಳಿಗ್ಗೆ ಎಲ್ಲರಿಗೂ ಹೀಗ್ ಹೀಗೆ ಆಯಿತು ಅಂದಾಗ ಮೂಗಿನ ಮೇಲೆ ಬೆರಳಿಟ್ಟುಕೊಂಡರು. ಎಲ್ಲದಕ್ಕೂ ತಮ್ಮ ಮೇಲೇ ಅವಲಂಬಿತಳಾದವಳು ಇದನ್ನು ಒಬ್ಬಳೇ ಹೇಗೆ ನಿಭಾಯಿಸಿದಳು ಎಂದು ಅಚ್ಚರಿಪಟ್ಟರು.

My Covid Experience

ಜೀವಕಾಯುವ ಸಲಕರಣೋಪಾದಿಗಳು

ಅಲ್ಲಿಂದ ಸುಮಾರು 22 ದಿನಗಳು ಕಾಡಿ ಸಂಪೂರ್ಣ ಆರೋಗ್ಯ ಮರುಕಳಿಸಿದೆ. ಸರಿಯಾದ ಆಹಾರ ಕ್ರಮ, ಪ್ರೋನಿಂಗ್, ಆರು ನಿಮಿಷಗಳ ನಡಿಗೆ, ದೇವರಲ್ಲಿ ನಂಬಿಕೆ, ಆತ್ಮವಿಶ್ವಾಸ, ಡಾಕ್ಟರ ಸಲಹೆಗಳು, ನೆಂಟರಿಷ್ಟರ ಹಾರೈಕೆಗಳು ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಪಾಸಿಟಿವಿಟಿ ನಮ್ಮನ್ನು ಕೋವಿಡ್ ಪಾಸಿಟಿವ್ ಆಗಿದ್ದರೂ ಸಾವಿನಿಂದ ಬಚಾವ್ ಮಾಡಿದೆ. ಈ ಸಮಯದಲ್ಲಿ ಹೆಗಲಾದ ಎಲ್ಲರಿಗೂ ಋಣಿ.

ಕೊನೆಯ ಮಾತು: ಅಹಂಕಾರಕ್ಕೆ ಈ ಜಗತ್ತಿನಲ್ಲಿ ಸ್ಥಳವಿಲ್ಲ. ಎಂಥದ್ದೇ ಸಮಸ್ಯೆ ಇರಲಿ, ಅದು ಶಾಶ್ವತವಲ್ಲ. ಕತ್ತಲಾದ ಮೇಲೆ ಬೆಳಕು ಬರುವಂತೆ ಏನೇ ಕಷ್ಟ ಇದ್ದರೂ ಕರಗಿ ಸುಖದ ಗಾಳಿ ಬೀಸುತ್ತದೆ. ಅದಕ್ಕೆ ಇಂಧನ ನಮ್ಮ ಆತ್ಮವಿಶ್ವಾಸ, ಧೈರ್ಯ, ನಂಬಿಕೆ. ನಮಗೆ ನಾವೇ ಬೂಸ್ಟ್ ಮಾಡಿಕೊಳ್ಳಲೇಬೇಕು.

*

(ವಿ.ಸೂ : ವೈದ್ಯಕೀಯ ಸಲಹೆಗಳ ಹೊರತಾಗಿ ಅವರವರು ಆ ಕ್ಷಣಕ್ಕೆ ಕಂಡುಕೊಂಡ ಮಾರ್ಗೋಪಾಯಗಳನ್ನು  ‘ಟಿವಿ9 ಕನ್ನಡ ಡಿಜಿಟಲ್’ ಉತ್ತೇಜಿಸುವುದಿಲ್ಲ.)

ಇದನ್ನೂ ಓದಿ : Covid Warriors : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ ; ವಿಜ್ಞಾನವೂ ಕಾಣದ ಮುಖ ಮನಸ್ಸಿಗಿದೆ!

Published On - 5:43 pm, Sun, 30 May 21