Covid Warriors : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ ; ವಿಜ್ಞಾನವೂ ಕಾಣದ ಮುಖ ಮನಸ್ಸಿಗಿದೆ!

Corona Warriors : ‘ಆ ನಾಲ್ಕು ಜನರಲ್ಲಿ ಒಬ್ಬ, “ಮಾವ, ನೀನಿಲ್ಲಿ ಪಸಂದ್‌ ಆಗಿ ಖರ್ಚ್‌ ಮಾಡಿದೀಯ ಅಂತ ವರದಕ್ಷಿಣೇಲಿ ಡಿಸ್ಕೌಂಟ್‌ ಸಿಗುತ್ತೆ ಅಂತ ತಿಳ್ಕೋಬೇಡ, ನಿನ್ನಂಗೇ ಇರೋ ನಿನ್ನ ಜೋರ್ದಾರ್ ಮಗಳೊಂದಿಗೆ ಜೀವನ ಮಾಡೋಕೆ ನಾನು ನನ್ನ ಜೀವವನ್ನೇ ಒತ್ತೆ ಇಡೋ ಸಾಹಸ ಮಾಡ್ತಿದೀನಿ. ಅದ್ರಲ್ಲೇನು ರಾಜಿ ಇಲ್ಲ ನೋಡು ಮತ್ತೆ!” ಎಂದು ಕಣ್ಣಲ್ಲಿ ನೀರು ತುಂಬಿಕೊಂಡೇ ಮನದುಂಬಿ ನಕ್ಕ. ರೋಗಿಯ ಅಕ್ಕ ಅವರ ಬೆನ್ನನ್ನು ಸವರುತ್ತಲೇ ಇದ್ದರು.‘ ಡಾ. ಸಾಮಂತ್ರಿ ಜ್ಯೋತಿ

Covid Warriors : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ ; ವಿಜ್ಞಾನವೂ ಕಾಣದ ಮುಖ ಮನಸ್ಸಿಗಿದೆ!
ಡಾ. ಸಾಮಂತ್ರಿ ಜ್ಯೋತಿ
Follow us
ಶ್ರೀದೇವಿ ಕಳಸದ
|

Updated on:May 29, 2021 | 12:59 PM

ನಮ್ಮ ಒಂದು ಧ್ವನಿ ಲಕ್ಷಾಂತರ ಧ್ವನಿಗಳನ್ನು ಪ್ರತಿನಿಧಿಸುತ್ತಿರುತ್ತದೆ. ಮರ್ಯಾದೆ, ವ್ಯವಸ್ಥೆ ಎನ್ನುವ ಮಹಾಸಂಕೋಲೆಯನ್ನು ಕಳಚಿ ಮುಕ್ತವಾಗಿ ಸಂಕಟಗಳನ್ನು ಹೊರಹಾಕುವುದನ್ನು ಕಲಿಯದಿದ್ದರೆ, ನಾವಷ್ಟೇ ಅಲ್ಲ ನಮ್ಮ ಮುಂದಿನ ಪೀಳಿಗೆಯವರು ಉಸಿರಾಡುವುದೂ ಕಷ್ಟವಾಗುತ್ತದೆ; ಸಹನೆಯೇ ನಮ್ಮ ಮೂಲಗುಣ, ಕೆಲಸವೇ ದೇವರು, ಕುಟುಂಬವೇ ಪ್ರಧಾನ ಅಸ್ತಿತ್ವ ಎಂದು ಸಾರಿಕೊಂಡು ಬಂದ ಮಹಾನ್ ದೇಶ ನಮ್ಮದು. ಆದರೆ ಇದನ್ನು ಜೀವನದೊಂದಿಗೆ ಜೀವವನ್ನೂ ಒತ್ತೆ ಇಡುವಂಥ ಪರಿಸ್ಥಿತಿಯಲ್ಲಿರುವ ಆರೋಗ್ಯ ಮತ್ತು ಸಾರ್ವಜನಿಕ ಸೇವಾ ಕ್ಷೇತ್ರಗಳ ದೃಷ್ಟಿಯಲ್ಲಿ ಯೋಚಿಸಿ. ಗಂಟಲಿನ ಪಡಕಗಳತನಕ ಬಂದುಕುಳಿತ ನೋವುಗಳಿಗೆ ಸಮಸ್ಯೆಗಳಿಗೆ ಮುಕ್ತಿ ಕೊಟ್ಟರೆ ಮಾತ್ರ ಮುಂದಿನ ಹೆಜ್ಜೆಗಳನ್ನಿಡಲು ತ್ರಾಣ ದಕ್ಕುವುದು, ವಾಸ್ತವ ಸಂಗತಿಗಳಿಗೆ ಪರಿಹಾರ ಸಿಗುವುದು. ಈ ಹಿನ್ನೆಲೆಯಲ್ಲಿ ರೂಪಿಸಿರುವ ‘ಟಿವಿ9 ಕನ್ನಡ ಡಿಜಿಟಲ್ : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ’ ಸರಣಿಯಲ್ಲಿ ವೈದ್ಯರುಗಳ, ಶುಶ್ರೂಷಕರ, ಪ್ರಯೋಗಾಲಯ ಸಿಬ್ಬಂದಿ, ಸಹಾಯಕರ ಮತ್ತು ಕೋವಿಡ್ ನಿರ್ವಹಣೆಯಲ್ಲಿ ತೊಡಗಿಕೊಂಡವರ ಬದುಕು ಬವಣೆ ಮತ್ತು ಅಂತರಂಗದ ತುಣುಕುಗಳು ಇಲ್ಲಿರುತ್ತವೆ.

ತುಣುಕುಗಳು ಎಂದು ಹೇಳಲು ಕಾರಣವಿದೆ; ನಮಗಾದ ಅನ್ಯಾಯ, ನೋವು ನಿರೀಕ್ಷೆಗಳನ್ನು ವ್ಯಕ್ತಪಡಿಸಿ ರಾತ್ರೋರಾತ್ರಿಯೇ ಪರಿಹಾರೋಪಾಯಗಳನ್ನು ಪಡೆದುಕೊಳ್ಳುವಂಥ ಅಭಿವೃದ್ಧಿ ಹೊಂದಿದ ದೇಶದಲ್ಲಿ ನಾವಿನ್ನೂ ಇಲ್ಲ. ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿಯ ದುಡಿಮೆಯಲ್ಲಿ ಹತ್ತಾರು ಕೈಗಳು ಹೇಗೆ ಉಣ್ಣುತ್ತಿವೆಯೋ ಹಾಗೆ ವ್ಯವಸ್ಥೆಯ ಪರಿಧಿಯಲ್ಲಿ ದೊಡ್ಡ ದೊಡ್ಡ ತಿಮಿಂಗಲಗಳು ಸ್ವಾರ್ಥದ ಬಾಯಿಗಳನ್ನು ತೆರೆದಿಟ್ಟುಕೊಂಡೇ ಈಜಾಡುತ್ತಿವೆ, ಇಂಥ ಸಂಕಷ್ಟಮಯ ಸಂದರ್ಭದಲ್ಲಿಯೂ. ಹೀಗಿರುವಾಗ ಸಾಕಷ್ಟು ವಿಷಯಗಳನ್ನು ಅದುಮಿಟ್ಟುಕೊಂಡೇ ಬದುಕುವ ಅನಿವಾರ್ಯ ಹಲವರಿಗಿದೆ ಬಂದೊದಗಿದೆ. ಆದರೂ ಸಂವೇದನಾಶೀಲ, ಪ್ರಾಮಾಣಿಕ ಮನಸ್ಸುಗಳು ತಮ್ಮ ಮನಸಿನ ಮಾತುಗಳನ್ನು, ವೃತ್ತಿ ಅನುಭವಗಳನ್ನು ಹಂಚಿಕೊಳ್ಳಲು ಇಲ್ಲಿ ಪ್ರಯತ್ನಿಸಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ಇನ್ನೂ ಕೆಲವರು ಇತರರ ಒಳತೋಟಿಗಳನ್ನು ಅಕ್ಷರಕ್ಕೆ ಹಿಡಿದಿಡಲು ಸಹಾಯ ಮಾಡಿದ್ದಾರೆ. ಓದುಗರಾದ ನಿಮಗೂ ನಿಮ್ಮ ನಿಮ್ಮ ಊರುಗಳಲ್ಲಿ ಕೋವಿಡ್ ನಿರ್ವಹಣೆಯಲ್ಲಿ ತೊಡಗಿಕೊಂಡಿರುವ ಯಾರ ಆಂತರ್ಯಕ್ಕೂ ಅಕ್ಷರಗಳ ಮೂಲಕ ಧ್ವನಿಯಾಗುವ ಅವಕಾಶ ಕೂಡ ಇಲ್ಲಿದೆ. ಇ ಮೇಲ್ : tv9kannadadigital@gmail.com

*

ರೋಗಿಗಳಲ್ಲಿ ಜೀವಚೈತನ್ಯ ಸ್ಫುರಣವಾಗಲು ಅವರೊಂದಿಗೆ ಆಪ್ತವಾಗಿ ಒಡನಾಡುವುದು, ಸಮಯೋಚಿತವಾಗಿ ವರ್ತಿಸುವುದು ಹೇಳಿಕೇಳಿ ಬರುವಂಥದಲ್ಲ. ಅದೊಂದು ತುಡಿತ, ಅದೊಂದು ಸ್ವಭಾವ, ಅದೊಂದು ಸಂಸ್ಕಾರ. ಬಳ್ಳಾರಿಯ ವೈದ್ಯೆ ಡಾ. ಸಾಮಂತ್ರಿ ಜ್ಯೋತಿ ಅವರು ಈ ಸರಣಿಗಾಗಿ ಬರೆದ ಎರಡನೇ ಅನುಭವ ನಿಮ್ಮ ಓದಿಗೆ.

*

ಅವತ್ತು ಆ ವಾರ್ಡಿನ ಎಲ್ಲರ ಆಕ್ಸಿಜನ್‌ ನಾರ್ಮಲ್‌ ಆಗಿತ್ತು. ರಾತ್ರಿ ಸುಮಾರು ಒಂದೂವರೆ. ನಾನು ಹಾಗೂ ನರ್ಸ್, ರೌಂಡ್ಸ್‌ ಮುಗಿಸಿ ಕೇಸ್‌ ಶೀಟ್ ಗಳನ್ನ ಗಮನಿಸುತ್ತಾ ಕುಳಿತಿದ್ದೆವು. ಒಬ್ಬರು ರೋಗಿ, ಆಕ್ಸಿಜನ್‌ ಮಾಸ್ಕ್‌ ತೆಗೆದು ಶೂನ್ಯ ಆವರಿಸಿದಂತೆ ಕುಳಿತಿದ್ದರು. ಸಾಮಾನ್ಯವಾಗಿ ನಾವು ರೋಗಿಗಳನ್ನ ನಗಿಸೋಕೆ, ಲವಲವಿಕೆಯಿಂದ ಇರೋ ಹಾಗೆ ಮಾಡೋದಕ್ಕೆ ಅವರನ್ನು ಯಜಮಾನ್ರೇ ಅಂತನೋ ಗೌಡ್ರೆ ಅಂತನೋ ಕರೀತಿದ್ವಿ. ಅವರನ್ನ ನೋಡಿ ನರ್ಸ್​ಗೆ ಯಾಕೋ ತುಸು ಕೋಪ ಬಂದಿತ್ತು. ಪಲ್ಸಾಕ್ಸಿಮೀಟರ್‌ ಹಿಡಿದು “ಯಾಕ್ರೀ ಯಜಮಾನ್ರೇ, ವೈರಾಗ್ಯ ಬಂತಾ” ಎನ್ನುತ್ತಾ ಎದ್ದು ಹೊರಟರು. ಆ ವ್ಯಕ್ತಿಯ ಬಗ್ಗೆ ನನಗೆ ಚೂರು ಮಾಹಿತಿ ಇದ್ದದ್ದರಿಂದ ಸುಮ್ಮನಿದ್ದೆ.

52 ವರ್ಷದ ಕೃಷಿಕ. ಹೆಂಡತಿಯನ್ನು ಕಳೆದುಕೊಂಡು ಸುಮಾರು ವರ್ಷಗಳಾಗಿದ್ದವು, ಇಬ್ಬರು ಹೆಣ್ಣುಮಕ್ಕಳೊಡನೆ ಬದುಕು ಕೊರತೆಯಿಲ್ಲದಂತೆ ಸಾಮಾನ್ಯವಾಗಿ ನಡೆದಿತ್ತು. ಜೊತೆಗೆ ಹೆಚ್ಚು ತಿಳಿವಳಿಕೆಯುಳ್ಳವರಾಗಿದ್ದರು. ಕೆಲವು ಬಡ/ಅನಾಥ ಮಕ್ಕಳ ವಿದ್ಯಾಭ್ಯಾಸ ನೌಕರಿ ಗಳಿಸುವಲ್ಲಿ ತಮಗಾದ ಸಹಾಯವನ್ನು ಮಾಡುತ್ತ ಬಂದ ಒಳ್ಳೆಯ ಮನಸ್ಸು ಅವರದಾಗಿತ್ತು. ಆದರೆ ಈಗ ಕೊರೋನಾ ವೈರಸ್‌ ಅವರ ನಂಜಾದ ಆ ಶ್ವಾಸಕೋಶಗಳೊಳಗೆ ಅವಿತು ಹಿಂಡಿಹಾಕುತ್ತಿತ್ತು. ಸಾಮಾನ್ಯವಾಗಿ ರೋಗಿಯ ಹಿನ್ನೆಲೆಯನ್ನು ಅವರ ಬಳಿಯೋ ಸಂಬಂಧಿಕರ ಬಳಿಯೋ ಕೇಳಿ ಪಡೆದುಕೊಳ್ಳುವ ರೂಢಿ ಇಟ್ಟುಕೊಂಡಿದ್ದೇನೆ. ಕಾರಣ ಇಷ್ಟೇ, ಅವರು ನಡೆದು ಬಂದ ಗಟ್ಟಿಹಾದಿಯನ್ನು ಅವರಿಗೇ ನೆನಪಿಸುವ ಮನವರಿಕೆ ಮಾಡಿಸುವ ಒಂದು ಸಣ್ಣ ಪ್ರಯತ್ನ. ಕಾಯಿಲೆಯಿಂದ ಆಸ್ಪತ್ರೆ ಸೇರಿರುವ ಅವರ ದೇಹ-ಮನಸು ಕುಗ್ಗಿರುತ್ತದೆ. ಅದು ತಾತ್ಕಾಲಿಕ ಎಂಬುದನ್ನು ಮತ್ತು ಈತನಕ ಕಳೆದ ಅವರ ಬದುಕಿನ ಹಾದಿ ಹೇಗೆ ಸತ್ವಯುತವಾಗಿತ್ತು ಅಥವಾ ಆದರ್ಶಮಯವಾಗಿತ್ತು ಎನ್ನುವುದನ್ನು ಅವರಿಗೆ ನೆನಪಿಸುತ್ತ ಬಂದಾಗ ಸ್ವಲ್ಪವಾದರೂ ಚೈತನ್ಯ ಅವರಲ್ಲಿ ಉಕ್ಕುತ್ತದೆ. ಅದು ಅವರ ಆರೋಗ್ಯ ಸುಧಾರಣೆಗೆ ಸಹಕಾರಿಯಾಗುತ್ತದೆ. ಬೇರೆ ಯಾವುದೇ ಸ್ಪೂರ್ತಿಗಳು ಧೈರ್ಯ ತುಂಬಲು ಸಾಲದಾದಾಗ ಅವರವರು ನಡೆದು ಬಂದ ದಾರಿಯನ್ನು ಅವರ ನೆನಪಿನ ಚುಂಗಿಗೆ ಸಿಕ್ಕಿಸಿಬಿಟ್ಟರೆ ಸ್ವಲ್ಪವಾದರೂ ಅವರು ಸ್ವಯಂಪ್ರೇರಣೆಗೆ ಒಳಗೊಳ್ಳುತ್ತಾರೆ ಎನ್ನುವುದು ನನ್ನ ನಂಬಿಕೆ. ಎಷ್ಟೇ ಅಧೀರರಾಗಿದ್ದರೂ ನಮ್ಮ ನಿನ್ನೆಯ ಹೋರಾಟಗಳನ್ನು ಒಮ್ಮೆ ನೆನೆದರೆ ಸಾಕು, ಎಂತಹ ಕಷ್ಟದ ಪರಿಸ್ಥಿತಿಗಳೂ ಶರಣಾಗಿಬಿಡುತ್ತವೆ.

ನರ್ಸ್ ಗಾಬರಿಯಿಂದ ಕೂಗಿದಳು, “ಮೇಡಂ ಸ್ಯಾಚುರೇಷನ್ 65 ಬರ್ತಿದೆ” ಒಮ್ಮೆಗೆ ನನಗೂ ಶಾಕ್‌ ಆಯ್ತು. ಹೋಗಿ ನೋಡಿದರೆ, ಏದುಸಿರು ಬಿಡುತ್ತಿದ್ದರು. ಕಣ್ಣಲ್ಲಿ ನೀರು. ಆಗಲೇ ಮಾಸ್ಕ್‌ ತೆಗೆದು ಹತ್ತು ಹದಿನೈದು ನಿಮಿಷಗಳಾಗಿದ್ದವು. ನಾವು ಬೈದು ಒತ್ತಾಯ ಮಾಡಿ ಮತ್ತೆ ಮಾಸ್ಕ್‌ ಹಾಕಿ ಪ್ರೋನ್‌ ಪೊಸಿಷನ್‌ನಲ್ಲಿ ಮಲಗಿಸಿದೆವು. ಹತ್ತು ನಿಮಿಷ ಬಿಟ್ಟು ಮತ್ತೆ ಪರೀಕ್ಷಿಸಿದಾಗ 58 ತೋರುತ್ತಿತ್ತು.‌ ಆ ಸಮಯದಲ್ಲಿ ಆಸ್ಪತ್ರೆಯ ಐಸಿಯುನಲ್ಲಿ ಕೂಡ ಬೆಡ್‌ ಖಾಲಿ ಇರಲಿಲ್ಲ. ಅವರ ಅಕ್ಕ ಅವರನ್ನು ನೋಡಿಕೊಳ್ಳುತ್ತಿದ್ದರು. ಅವರನ್ನು ಹುಡುಕಿದೆ. ಹೊರಗಡೆ ದೂರದ ಒಂದು ಕಂಬಕ್ಕೆ ಬೆನ್ನು ಹಚ್ಚಿ ತೂಕಡಿಸುತ್ತಿದ್ದರು. ಹತ್ತಿರ ಹೋಗಿ, ಅವರ ಜೊತೆಯಿರಬಾರದೆ ಎಂದು ಕೇಳಿದೆ. “ಚನಾಗಿದ್ದನಲ್ಲಮ್ಮ, ಅದಕ್ಕೆ ಇಲ್ಲಿ ಬಂದು ಕೂತೆ” ಎಂದರು. ನಾನು ಅವರ ಬಳಿ ಹೋದದ್ದು, ಪರಿಸ್ಥಿತಿಯನ್ನು ವಿವರಿಸಿ, ಬೇರೆ ಎಲ್ಲಾದರೂ ವೆಂಟಿಲೇಟರ್‌ ವ್ಯವಸ್ಥೆ ಮಾಡಿರೆಂದು ಹೇಳಿ, ‘ಗ್ರೇವ್‌ ರಿಸ್ಕ್‌ʼ ಒಪ್ಪಿಗೆ ಪತ್ರಕ್ಕೆ ಸಹಿ ಪಡೆಯಲು. ರೋಗಿಯನ್ನು ಉಪಚರಿಸುವ ಸಂದರ್ಭದಲ್ಲಿ ಎಲ್ಲ ಪ್ರಯತ್ನಗಳ ನಂತರವೂ ಆತನ ಆರೋಗ್ಯದಲ್ಲಿ ಚೇತರಿಕೆ ಕಂಡುಬರದಿದ್ದಲ್ಲಿ ಹಾಗೂ ಆರೋಗ್ಯ ತುಂಬಾ ಗಂಭೀರವಾದಾಗ ಅನುಸರಿಸಬೇಕಾದ ಎಲ್ಲ ಮಾರ್ಗಗಳನ್ನೂ ಸಂಬಂಧಪಟ್ಟವರಿಗೆ ತಿಳಿಸಿ, ಏನಾದರೂ ಹೆಚ್ಚುಕಡಿಮೆಯಾದರೆ ಆಸ್ಪತ್ರೆಯ ಸಿಬ್ಬಂದಿ ಜವಾಬ್ದಾರಿಯಲ್ಲ ಎಂಬುದಾಗಿ ಪಡೆಯುವ ಒಪ್ಪಿಗೆ ಪತ್ರ.

nimma dhwanige namma dhwaniyu

ಸೌಜನ್ಯ : ಮುಂಬೈ ಲೈವ್

ವಿಷಯ ತಿಳಿಯುತ್ತಲೇ, ಅವರು ಅಳುತ್ತ ಕಾಲು ಹಿಡಿಯಲು ಬಂದರು. ಇವು ವೈದ್ಯರ ಬದುಕಿನ ಅತ್ಯಂತ ಘೋರ ಕ್ಷಣಗಳು! ನಾನು ದೂರ ಸರಿಯುತ್ತಲೇ, ಯಾರಾದರೂ ಗಂಡಸರು ಅಥವಾ ಕಾಲೇಜು ಓದುತ್ತಿರುವವರು ಇದ್ದರೆ ದಯವಿಟ್ಟು ಕರೆಸಿ ಎಂದು ಹೇಳಿದೆ. ಅವರು, ಅವರ ಪತಿ ಹಾಗೂ ರೋಗಿಯ ಸಹಾಯ ಪಡೆದ ಕೆಲವು ಹುಡುಗರು ಅದಾಗಲೇ ಹೊರಟಿರುವುದಾಗಿಯೂ ಇನ್ನೇನು ಇಲ್ಲಿಗೆ ತಲುಪುವುದಾಗಿಯೂ ಹೇಳಿದರು. ನಾನು ಅವರ ಸಹಿ ಪಡೆದು ಒಳಬಂದು ಕುಳಿತೆ. ನರ್ಸ್ ರೋಗಿಯ ಬಳಿಯೇ ನಿಂತಿದ್ದರು. ಸತತವಾಗಿ ರಾತ್ರಿ ಪಾಳೆಯದ ಕರ್ತವ್ಯ ನಿರ್ವಹಿಸಿದ್ದರಿಂದ ಹಾಗೂ ಅವತ್ತೇ ಕೋವಿಡ್‌ ಲಸಿಕೆಯ ಎರಡನೇ ಡೋಸ್‌ ಪಡೆದಿದ್ದರಿಂದ ಜ್ವರ, ತುಂಬಾ ಸುಸ್ತು ಹಾಗೂ ಬೆನ್ನು-ಸೊಂಟ ನೋವುಗಳಿದ್ದುದಾಗಿ ಅವರು ನನ್ನ ಬಳಿ ಸ್ವಲ್ಪ ಹೊತ್ತಿಗೆ ಮುಂಚೆ ಹೇಳುತ್ತಿದ್ದರು. ಸ್ಟಾಫ್‌ ಕಡಿಮೆ ಇರುವ ಕಾರಣದಿಂದ ರಜೆ ದೊರೆಯದೆ ನಿರಾಶರೂ ಆಗಿದ್ದರು. ಕರ್ತವ್ಯವೆಂದು ಬಂದರೆ, ತಮ್ಮ ಎಲ್ಲ ತೊಂದರೆಗಳನ್ನೂ ಬದಿಗಿಟ್ಟು ಸೇವೆಯಲ್ಲಿ ನಿಲ್ಲುವ ಅವರ ಚೈತನ್ಯ ನಿಜಕ್ಕೂ ವಿಸ್ಮಯಕರ.

ನಾವು ವೈದ್ಯರು, ನರ್ಸಗಳೇ ಹೀಗೆ. ಎಷ್ಟೋ ಜನ ಕಳೆದ ಒಂದು ವರ್ಷದಿಂದ ಪಿಪಿಇಗಳ ಕುದಿಯಲ್ಲಿ ಬೇಯುತ್ತಿದ್ದಾರೆ. ಸತತವಾಗಿ ಕರ್ತವ್ಯ ನಿರ್ವಹಿಸಿ ತಮ್ಮ ಆರೋಗ್ಯಕ್ಕೂ ಹಾನಿಯುಂಟುಮಾಡಿಕೊಂಡಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ದೇಶದಲ್ಲಿ ೨ನೇ ಅಲೆಯಲ್ಲಿಯೇ ಸುಮಾರು 513 ವೈದ್ಯರುಗಳು ಸಾವನ್ನಪ್ಪಿದ್ದಾರೆ. ಉಳಿದ ನರ್ಸಿಂಗ್‌ ಸ್ಟಾಫ್‌ ಹಾಗೂ ಡಿ ಗ್ರೂಪ್‌ ಕೆಲಸದವರೂ ಕೊರೋನಾ ರೋಗಿಗಳ ಸೇವೆ ಮಾಡುತ್ತಿದ್ಧಾರೆ. ಅವರ ಆರೋಗ್ಯ ಸ್ಥಿತಿ ಮತ್ತು ಇಲ್ಲಿಯವರೆಗಿನ ಸಾವಿನ ಸಂಖ್ಯೆ ಎಷ್ಟು ಜನಕ್ಕೆ ತಿಳಿದಿದೆ? NDTV (2021ರ ಫೆಬ್ರುವರಿ) ವರದಿಯ ಪ್ರಕಾರ, 174 ವೈದ್ಯರು, 116 ನರ್ಸ್‌ಗಳು ಹಾಗೂ 199 ಆರೋಗ್ಯ ಕಾರ್ಯಕರ್ತರು ಕೋವಿಡ್‌ನಿಂದಾಗಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇಷ್ಟಾಗಿಯೂ ಇವರು ಇನ್ನೂ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರೆ ಕೇವಲ ಹಣದ ಮೋಹಕ್ಕೆ ಎಂದು ಸಮಾಜ ಹೇಗೆ ನಿರ್ಧರಿಸುತ್ತದೆ? ಕನಿಷ್ಟ ಪಕ್ಷ ಸರ್ಕಾರಿ ಆಸ್ಪತ್ರೆಗಳಲ್ಲಿ ಡಾಕ್ಟರ್‌ಗಳ ಮೇಲಿನ ದೌರ್ಜನ್ಯ ಕೊನೆಗೊಳ್ಳಬೇಕಾಗಿದೆ. ಅವರೂ ಎಲ್ಲರಂತೆ ಕೆಲಸ ಬಿಟ್ಟು ಮನೆಯೊಳಗೆ ಕುಳಿತುಕೊಂಡರೆ ನಾಳೆಗಳಲ್ಲ, ಹಾಗೆ ಮಾಡಿದ ಮುಂದಿನ ಕ್ಷಣಗಳನ್ನೂ ಯಾರಿಂದಲೂ ಊಹಿಸಲಸಾಧ್ಯ!

ತುಸು ಹೊತ್ತಾದ ಮೇಲೆ, ರೋಗಿಯ ಅಕ್ಕನ ಪತಿ ಹಾಗೂ 3-4 ಯುವಕರು ಬಂದರು. ಒಬ್ಬ ನೇರವಾಗಿ ನಾವು ಕೂತಲ್ಲಿಯಡೆಗೇ ನಡೆದುಬಂದ. ನಾನು ಅಕ್ಷರಶಃ ಭಯಪಟ್ಟೆ. ಆದರೆ, ಅವರು ಬಳಿಗೆ ಬಂದು ನಮಸ್ತೆ ಹೇಳುತ್ತ, ‘ಚನಾಗೇ ಇದ್ದವರು ಸಡನ್‌ ಆಗಿ ಹೀಗಾಗೋಕೆ ಕಾರಣವೇನು?’ ಅತ್ಯಂತ ವಿನಯ, ಸಮಾಧಾನದಿಂದ ಕೇಳಿದರು. ನಾನು ಅವರಿಗೆ ಉತ್ತರಿಸುತ್ತಿರುವಾಗಲೇ ರೋಗಿ ಜೋರಾಗಿ ನಗುವುದು ಕೇಳಿಸಿತು. ಬೇರೆ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳ ಬಗ್ಗೆ ವಿಚಾರಿಸುತ್ತಿರುವುದನ್ನು ಆ ಯುವಕ ತಿಳಿಸಿದರು. ಬೆಳಿಗ್ಗೆಯವರೆಗೆ ಯಾವ ತೊಂದರೆಯೂ ಆಗುವ ಸಾಧ್ಯತೆಗಳಿಲ್ಲವಲ್ಲ ಎಂದು ಕೇಳುತ್ತ ಸುಮಾರು ದುಗುಡಗಳನ್ನು ಹೊರಹಾಕಿದರು. ಇರುವ ವಿಚಾರಗಳನ್ನು ತಿಳಿಹೇಳಿದ ಬಳಿಕ, ಅವರಿಗೆ ಧೈರ್ಯ ಹೇಳುವಂತೆಯೂ, ಸಂತೋಷದಿಂದಿರುವಂತೆ ಮಾಡಲು ಕೆಟ್ಟ ಯೋಚನೆಗಳನ್ನು ತೊರೆದು ಮನಸ್ಸನ್ನು ಹಗೂರಾಗಿ ಇಟ್ಟುಕೊಳ್ಳಲು ಮಾತನಾಡಿಸುವ ಪ್ರಯತ್ನ ಮಾಡಿ ಎಂದು ಕೇಳಿಕೊಂಡೆ. ವೈದ್ಯಕೀಯ ಮೂಲವಾಗಿ ಮಾಡಬಹುದಾದ ಎಲ್ಲ ಕೆಲಸಗಳನ್ನೂ ಮಾಡಿಯಾಗಿತ್ತು; ಅಂದರೆ, ಬೇಕಾದ ಎಲ್ಲ ಔಷಧಿಗಳೂ ಅದಾಗಲೇ ರಾತ್ರಿಯೇ ಅವರ ದೇಹ ಸೇರಿಯಾಗಿತ್ತು. ಅದರ ಹೊರತಾಗಿ ಮಾಡಬಹುದಾದ ಪ್ರಯತ್ನಗಳು ಮಾತ್ರ ನಮಗೆ ಗೋಚರಿಸುತ್ತಿದ್ದವು. ಇಬ್ಬರೂ ರೋಗಿಯ ಬಳಿಗೆ ಹೋದೆವು. ಅವರ ಮುಖದಲ್ಲಿ ಸಮಾಧಾನದ ಹಾಗೂ ಸುರಕ್ಷಿತ ಭಾವನೆ ಕಾಣುತಿತ್ತು. ನರ್ಸ್ ಕೂಡ ಆಶ್ಚರ್ಯದಿಂದ ಸ್ಯಾಚುರೇಷನ್‌ 90 ತೋರುತ್ತಿರುವುದನ್ನು ಹೇಳಿದರು. ಅವರೆಲ್ಲರಿಗಿಂತ ನಾವಿಬ್ಬರೂ ಸಂತಸಗೊಂಡಿದ್ದೆವು.

ಮನುಷ್ಯನ ಸ್ವಭಾವವೇ ಹೀಗೆ. ಹಿಗ್ಗುವುದು ಕುಗ್ಗುವುದು ಅದೆಷ್ಟು ಸುಲಭವೆಂದರೆ, ಅದರ ಕೀಲಿಕೈಗಳನ್ನ ಪರರ ಕೈಗೋ ಪರಿಸ್ಥಿತಿಗಳ ಕೈಗೋ ಧಾರಾಳವಾಗಿ ನೀಡಿ ಸಂಪೂರ್ಣವಾಗಿ ಅವುಗಳಿಗೆ ಶರಣಾಗಿಬಿಡುತ್ತಾನೆ. ಈ ಕೋವಿಡ್‌ ಬಂದಾಗಿನಿಂದ ಮಾನಸಿಕ ಸ್ಥೈರ್ಯದ, ನಗು-ಸಂತೋಷಗಳ ಪ್ರಾಮುಖ್ಯದ ಬಗ್ಗೆ ಬಹಳ ಚರ್ಚೆಯಾಗುತ್ತಿದೆ. ಕೇವಲ ಸೈದ್ಧಾಂತಿಕವಾಗಿಯಷ್ಟೇ ಅಲ್ಲದೆ, ಸದಾ ಸಾಕ್ಷ್ಯಗಳನ್ನೇ ಮುಂದಿಟ್ಟುಕೊಂಡು ಕಾಣದ ಎಲ್ಲವೂ ಸುಳ್ಳೆಂಬುದನ್ನು ಅನಾಯಾಸವಾಗಿ ಸಾಧಿಸಿದ್ದ ಸಾಧಕರು ಕೂಡ ಚಿಂತನೆ ನಡೆಸುತ್ತಿರಬಹುದು. ಹಾರ್ಮೋನುಗಳ ಸಹಾಯದಿಂದ ಮನಸಿನ ಸೂಕ್ಷ್ಮ ಚಲನವಲನಗಳನ್ನು ನಿಯಂತ್ರಿಸುವ ವಿಷಯಗಳ ಬಗ್ಗೆ ಸಮೂಹ ಮಾಧ್ಯಮಗಳಲ್ಲಿ ಈಗಾಗಲೇ ಸಂದೇಶಗಳು ರವಾನೆಯಾಗುತ್ತಿವೆ. ಇಂಥದೇ ವಿಷಯದ ಸಾಕ್ಷಾತ್ಕಾರ ನಮಗಾಗಿದ್ದು ಆ ವಾರ್ಡಿನಲ್ಲಿ.

nimma dhwanige namma dhwaniyu

ಪ್ರಾತಿನಿಧಿಕ ಚಿತ್ರ

ಆ ನಾಲ್ಕು ಜನರಲ್ಲಿ ಒಬ್ಬ, “ಮಾವ, ನೀನಿಲ್ಲಿ ಪಸಂದ್‌ ಆಗಿ ಖರ್ಚ್‌ ಮಾಡಿದೀಯ ಅಂತ ವರದಕ್ಷಿಣೇಲಿ ಡಿಸ್ಕೌಂಟ್‌ ಸಿಗುತ್ತೆ ಅಂತ ತಿಳ್ಕೋಬೇಡ, ನಿನ್ನಂಗೇ ಇರೋ ನಿನ್ನ ಜೋರ್ದಾರ್ ಮಗಳೊಂದಿಗೆ ಜೀವನ ಮಾಡೋಕೆ ನಾನು ನನ್ನ ಜೀವವನ್ನೇ ಒತ್ತೆ ಇಡೋ ಸಾಹಸ ಮಾಡ್ತಿದೀನಿ. ಅದ್ರಲ್ಲೇನು ರಾಜಿ ಇಲ್ಲ ನೋಡು ಮತ್ತೆ!” ಎಂದು ಕಣ್ಣಲ್ಲಿ ನೀರು ತುಂಬಿಕೊಂಡೇ ಮನದುಂಬಿ ನಕ್ಕ. ರೋಗಿಯ ಅಕ್ಕ ಅವರ ಬೆನ್ನನ್ನು ಸವರುತ್ತಲೇ ಇದ್ದರು.

ಇನ್ನೊಬ್ಬ, “ಎರಡು ಕಿವಿ ಥರನೇ ಎರಡು ಮೂಗಿದ್ದಿದ್ರೆ ಎರಡೆರಡ್‌ ಮಾಸ್ಕ್‌ ಹಾಕಿ ಬಿಂದಾಸ್‌ ಆಗಿ ಇರಬಹುದಿತ್ತು ಅಲ್ವ ಅಣ್ಣಯ್ಯ, ಉಲ್ಟಾ ಮಲಗಿದಾಗ (ಪ್ರೋನ್)‌ ಮೂಗು ನೆಲಕ್ಕೂ ಬಡೀತಿರಲಿಲ್ಲ, ಅರಾಮಾಗಿ ಮಲಗಬಹುದಿತ್ತು’ ಅಂದ.

ಇದೇ ರೀತಿ ಪ್ರತಿಯೊಬ್ಬರೂ ಒಂದು ರೀತಿಯಲ್ಲಿ ಅವರಲ್ಲಿ ಚೈತನ್ಯ ಹೆಚ್ಚಿಸಲು ಪ್ರಯತ್ನಿಸತೊಡಗಿದರು. ಅವರೆಲ್ಲರ ಗದ್ದಲ ಬೇರೆ ರೋಗಿಗಳಿಗೆ ಖಂಡಿತ ತೊಂದರೆ ನೀಡುತ್ತಿರಲಿಲ್ಲ; ಬದಲಾಗಿ ಎಚ್ಚರಗೊಂಡ ಎಲ್ಲರೂ ಅವರೊಡನೆ ಸೇರಿ ಮನದುಂಬಿ ನಗುತ್ತಿದ್ದರು. ನಿಜಕ್ಕೂ ನಾನು ಮೂಕಪ್ರೇಕ್ಷಕಳಾಗಿದ್ದೆ. ಆ ರೋಗಿ ಅತ್ಯಂತ ಪ್ರಸನ್ನವದನರಾಗಿ ಕಾಣುತ್ತಿದ್ದರು. ಅವರ ಡಿಸ್ಚಾರ್ಜ್‌ನ ನಂತರ, ಅವರ ಗ್ರೇವ್‌ ರಿಸ್ಕ್‌ ಕನ್ಸೆಂಟ್‌ ಅದೇ ವಾರ್ಡಿನಿಂದ ಬೇರೆಲ್ಲೂ ಹೋಗದೆ ಆಸ್ಪತ್ರೆಯ ದಾಖಲೆಗಳ ಕಡತವನ್ನು ಸೇರಿತು.

ನಾವು, ಸೋಷಿಯಲ್‌ ಮೀಡಿಯಾಗಳಲ್ಲಿ ನೋಡುತ್ತಿದ್ದೇವೆ. ಕೋವಿಡ್‌ ವಾರಿಯರ್‌ಗಳ, ರೋಗಿಗಳ ನೃತ್ಯ, ಹಾಸ್ಯ ಹೀಗೆಲ್ಲಾ. ಏನಿದರ ಅವಶ್ಯಕತೆ? ಲಕ್ಷಗಟ್ಟಲೆ ಬಿಲ್‌ ಕಟ್ಟಿ ಪಡೆಯುವ ಔಷಧಿಗಳು ಸಾಲುವುದಿಲ್ಲವೇ? ಖಂಡಿತ ಇಲ್ಲ. ಎಷ್ಟೇ ಆವಿಷ್ಕಾರಗಳನ್ನು ಮನುಷ್ಯ ಮಾಡಿದರೂ, ಅವನಿಗೆ ತಿಳಿದಿರುವುದು ಕನಿಷ್ಟ! ನಾವು ಚಂದ್ರ ಮಂಗಳ ಗ್ರಹಗಳ ಅಧ್ಯಯನವನ್ನ ಮಾಡಬಲ್ಲೆವು ಆದರೆ, ‘ಮನಸಿನʼ ಆಳ ಅಗಲಗಳನ್ನು ಇನ್ನೂ ತಿಳಿಯಲಾಗಿಲ್ಲ. ಹಾರ್ಮೋನು ರಾಸಾಯನಿಕಗಳೆಂಬ ಪ್ರತ್ಯಕ್ಷದರ್ಶಿಗಳ ಮೂಲಕ ವಿವರಿಸಹೊರಟರೂ ಮನಸಿನ ಬಗೆಗಿನ ವಿಚಾರ ಒಂದು ‘ಚಿದಂಬರ ರಹಸ್ಯʼ. ಅದರ ವಿಚಿತ್ರ ಚಟುವಟಿಕೆಗಳನ್ನು ಗಮನಿಸಿದಾಗ ವಿಜ್ಞಾನ ಕಾಣದ ಇನ್ನೊಂದು ಮುಖ ಅನಾವರಣಗೊಳ್ಳುತ್ತದೆ.

ಹಾಗಾಗಿ, ಔಷಧಿಗಳ ಜೊತೆಜೊತೆಗೇ ಮಾನಸಿಕ ಸ್ಥೈರ್ಯ ಬಹಳಷ್ಟು ಮುಖ್ಯ. ಪ್ರತ್ಯಕ್ಷವಾಗಿ ನಾವು ಕೊರೋನಾ ಅಥವಾ ಯಾವುದೇ ಕಾಯಿಲೆ ಪೀಡಿತರಿಗೆ ಸಹಾಯ ಮಾಡದಿದ್ದರೂ ಪರವಾಗಿಲ್ಲ, ಕನಿಷ್ಟ ಪಕ್ಷ ಒಂದು ಕರೆ ಮಾಡಿ ಹೇಗಿದ್ದೀರೆಂದು ಕೇಳಿ. ಏನೂ ಆಗುವುದಿಲ್ಲ ನಾವಿದ್ದೇವೆಂಬ ಭರವಸೆ ನೀಡಿ. ಸಾಧ್ಯವಾದಲ್ಲಿ ಅಕ್ಕಪಕ್ಕದ ಮನೆಯವರಿಗೆ ಆಹಾರ ಔಷಧಿಗಳ ಸಹಾಯ ಮಾಡಿ. ನಿಮಗೆ ಬೇಡವಾಗಿದ್ದರೂ ಸಂಬಂಧಿಕರು ಅಥವಾ ಗೆಳೆಯರ ಬಳಗದಲ್ಲಿನ ಅಸ್ವಸ್ಥರಿಗೆ ನಿಮ್ಮ ಸಾಂತ್ವನದ ಮಾತುಗಳ ಅವಶ್ಯಕತೆಯಿರುತ್ತದೆ. ಯಾಕೆಂದರೆ, ನಾಳೆಗಳು ಬದುಕುವುದೇ ಇಂದಿನ ಖುಷಿಯಲ್ಲಿ. ಭರವಸೆಯ, ಆತ್ಮವಿಶ್ವಾಸದ ನಗೆಯಲ್ಲಿ.

ನೋವಿನ ಗೆರೆಗಳನ್ನು ಅಳಿಸುತ್ತ ಸಾಗುವ ಸರ್ವೋತ್ತಮ ಮನಸ್ಥಿತಿಗಳ ನೆರಳಲ್ಲಿ ನಮ್ಮವರೆಂಬ ಎಲ್ಲರ ನೆಮ್ಮದಿಯ ನಿಟ್ಟುಸಿರಿಗೆ ಮನಸಾರೆ ಒದಗಿಸುವ ನಿಷ್ಕಲ್ಮಶ ಪ್ರೀತಿಯ ಗಾಳಿಯಲ್ಲಿ ಪ್ರೀತಿ ವಾತ್ಸಲ್ಯ ಮಮಕಾರಗಳೆಂಬ ಒಂದರದೇ ನಾನಾ ಮುಖಗಳ ಅನಾಯಾಸವಾಗಿ ಹೆತ್ತು ಜಗದೆಲ್ಲೆಡೆ ಪಸರಿಸಿ ಸಾಂತ್ವನಿಸಬೇಕಿದೆ.

ಇದನ್ನೂ ಓದಿ : Corona Warriors : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ ; ವೈದ್ಯರುಗಳೂ ರೂಪಾಂತರಗೊಳ್ಳಬೇಕಿರುವುದು ಅನಿವಾರ್ಯ!

Published On - 12:58 pm, Sat, 29 May 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ