ಅಂದು ಕುಳಿತಿದ್ದ ಡಿಸಿಗೆ ಬೈಗುಳದ ಭಾಗ್ಯ, ಇಂದು ಮೊಮ್ಮಗನಿಗೆ ವಿಶೇಷ ಕುರ್ಚಿ ಭಾಗ್ಯ: ಬಿಜೆಪಿ ವ್ಯಂಗ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎರಡು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಒಂದರಲ್ಲಿ ಅವರು ಅಧಿಕಾರಿಯನ್ನು ವೇದಿಕೆಯಿಂದ ಕಳುಹಿಸಿದ್ದಾರೆ, ಇನ್ನೊಂದರಲ್ಲಿ ತಮ್ಮ ಮೊಮ್ಮಗನಿಗೆ ವಿಶೇಷ ಕುರ್ಚಿ ವ್ಯವಸ್ಥೆ ಮಾಡಿಸಿದ್ದಾರೆ. ಬಿಜೆಪಿ ಈ ವಿಡಿಯೋಗಳನ್ನು ಬಳಸಿಕೊಂಡು ಸಿಎಂ ವಿರುದ್ಧ ವ್ಯಂಗ್ಯವಾಡಿದೆ. ಈ ಘಟನೆಗಳು ಸರ್ಕಾರಿ ಅಧಿಕಾರಿಗಳಿಗೆ ಮತ್ತು ಸಾರ್ವಜನಿಕರಿಗೆ ನೀಡುವ ಗೌರವದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿವೆ ಎಂದು ಬಿಜೆಪಿ ಪ್ರಶ್ನಿಸಿದೆ.

ಬೆಂಗಳೂರು, ಜೂನ್ 09: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎರಡು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಬಿಜೆಪಿ ಪೋಸ್ಟ್ ಮಾಡಿ ವ್ಯಂಗ್ಯವಾಡಿದೆ. ಒಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ವೇದಿಕೆ ಮೇಲಿದ್ದ ಸರ್ಕಾರಿ ಅಧಿಕಾರಿಯನ್ನು ಎದ್ದು ಕಳುಹಿಸಿದ್ದು ಮತ್ತು ಆರ್ಸಿಬಿ (RCB) ಕಾರ್ಯಕ್ರಮದಲ್ಲಿ ತಮ್ಮ ಮೊಮ್ಮಗನಿಗೆ ವಿಶೇಷ ಕುರ್ಚಿ ವ್ಯವಸ್ಥೆ ಮಾಡಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿವೆ. ಈ ಎರಡು ವಿಡಿಯೋಗಳನ್ನು ರಾಜ್ಯ ಬಿಜೆಪಿ ಪೋಸ್ಟ್ ಮಾಡಿ, ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ವ್ಯಂಗ್ಯವಾಡಿದೆ.
ಈ ಹಿಂದೆ ಹಲವು ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳ ಮೇಲೆ ಆಕ್ರೋಶಗೊಂಡಿದ್ದು ಇದೆ. ಇತ್ತೀಚಿಗೆ ವಿಜಯನಗರ ಜಿಲ್ಲೆಯಲ್ಲಿ ನಡೆದಿದ್ದ ಸರ್ಕಾರಿ ಕಾರ್ಯಕ್ರಮದ ವೇದಿಕೆ ಮೇಲೆ ಕೂತಿದ್ದ ಜಿಲ್ಲಾಧಿಕಾರಿಗೆ ಸಿಎಂ ಸಿದ್ದರಾಮಯ್ಯ ಏಕವಚನದಲ್ಲಿ ಮಾತನಾಡಿಸಿದ್ದಲ್ಲದೇ, ಬೇರೆ ಸೀಟ್ನಲ್ಲಿ ಕೂರುವಂತೆ ಹೇಳಿದ್ದ ವಿಡಿಯೋ ಭಾರಿ ವೈರಲ್ ಆಗಿತ್ತು. ಇದೀಗ, ಬುಧವಾರ (ಜೂ.03) ರಂದು ನಡೆದ ಆರ್ಸಿಬಿ ಆಟಗಾರರಿಗೆ ಸರ್ಕಾರಿ ಸನ್ಮಾನ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಮೊಮ್ಮಗನಿಗೆ ವಿಶೇಷ ಕುರ್ಚಿ ವ್ಯವಸ್ಥೆ ಮಾಡಿಸಿದ್ದ ವಿಡಿಯೋ ಭಾರಿ ವೈರಲ್ ಆಗುತ್ತಿದೆ.
ಟ್ವಿಟರ್ ಪೋಸ್ಟ್
ಮೊಮ್ಮಗನಿಗೊಂದು ನ್ಯಾಯ, ಅಧಿಕಾರಿಗಳಿಗೊಂದು ನ್ಯಾಯ!#CongressFailsKarnataka pic.twitter.com/QzWTCqjgEf
— BJP Karnataka (@BJP4Karnataka) June 9, 2025
ಈ ಎರಡೂ ವಿಡಿಯೋಗಳನ್ನು ರಾಜ್ಯ ಬಿಜೆಪಿ ಟ್ವೀಟ್ ಮಾಡಿದ್ದು, “ಮೊಮ್ಮಗನಿಗೊಂದು ನ್ಯಾಯ, ಅಧಿಕಾರಿಗಳಿಗೆ ಒಂದು ನ್ಯಾಯ ಎಂದು ಪ್ರಶ್ನಸಿದೆ. ಇದು ಸಿದ್ದು ನ್ಯಾಯನಾ? ಅಂದು ಕುಳಿತಿದ್ದ ಡಿಸಿಗೆ ಬೈಗುಳದ ಭಾಗ್ಯ, ಇಂದು ಮೊಮ್ಮಗನಿಗೆ ವಿಶೇಷ ಕುರ್ಚಿ ಭಾಗ್ಯ” ಎಂದು ವ್ಯಂಗ್ಯವಾಡಿದೆ.
ಜಿಲ್ಲಾಧಿಕಾರಿಗೆ ಅಲ್ಲಿ ಹೋಗು ಎಂದ ಸಿಎಂ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾರಂಭವೊಂದರಲ್ಲಿ ಮಾತನಾಡುತ್ತಿರುವಾಗ ಜಿಲ್ಲಾಧಿಕಾರಿ ಕಾರ್ಯಕ್ರಮದ ಮುಖ್ಯ ವೇದಿಕೆಯಲ್ಲಿ ಕುಳಿತಿದ್ದರು. ಇದನ್ನು ನೋಡಿದ ಸಿಎಂ ಸಿದ್ದರಾಮಯ್ಯ ಅವರು ನೀನ್ಯಾಕೆ ಇಲ್ಲಿ ಕೂತಿದ್ದೀಯ ಅಂತ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಮುಂದೆ ಬಂದ ಜಿಲ್ಲಾಧಿಕಾರಿ ಅವರು ಸರ್ ನಾನು ಡಿಸಿ ಅಂತ ಹೇಳಿದ್ದಾರೆ. ಅದಕ್ಕೆ ಸ್ವಾಮೀಜಿ ಪಕ್ಕ ಕುಳಿತುಕೊಳ್ಳುತ್ತೀಯಾ.. ಅಲ್ಲಿ ಹೋಗು ಅಂತ ಬೇರೆ ಜಾಗ ತೋರಿಸಿರುವ ವಿಡಿಯೋ ವೈರಲ್ ಆಗಿತ್ತು.
ಇದನ್ನೂ ಓದಿ: ವಿಧಾನಸೌಧವನ್ನ ಸಿಎಂ, ಸ್ಟೇಡಿಯಂನ್ನು ಡಿಕೆಶಿ ಹಂಚಿಕೊಂಡಂತೆ ಕಾಣ್ತಿದೆ: ಆರ್. ಅಶೋಕ್ ತಿರುಗೇಟು
ಆರ್ಸಿಬಿ ಕಾರ್ಯಕ್ರಮದಲ್ಲಿ ಮೊಮ್ಮಗನಿಗೆ ವಿಶೇಷ ಕುರ್ಚಿ
ಬುಧವಾರ (ಜೂ.03) ರಂದು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸರ್ಕಾರದ ವತಿಯಿಂದ ಆರ್ಸಿಬಿ ಆಟಗಾರರಿಗೆ ಸನ್ಮಾನಿಸಲಾತು. ಈ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೊಮ್ಮಗ ಕೂಡ ಭಾಗಿಯಾಗಿದ್ದರು. ಸರ್ಕಾರಿ ಕಾರ್ಯಕ್ರಮದ ವೇದಿಕೆ ಮೇಲೆ ಸಿಎಂ ಸಿದ್ದರಾಮಯ್ಯ ಅವರ ಮೊಮ್ಮಗ ಕಾಣಿಸಿಕೊಂಡಿದ್ದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಮೊಮ್ಮಗನಿಗೆ ವಿಶೇಷ ಕುರ್ಚಿ ವ್ಯವಸ್ಥೆ ಮಾಡಿಸಿರುವ ವಿಡಿಯೋ ವೈರಲ್ ಆಗಿದೆ.
ಈ ಎರಡೂ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ರಾಜ್ಯ ಬಿಜೆಪಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








