ಬೆಂಗಳೂರು: ಬ್ರಿಟನ್ನಿಂದ ಬಂದಿರುವ ಕೊರೊನಾದ ರೂಪಾಂತರಿ ವೈರಸ್ ಜನರಲ್ಲಿ ಮತ್ತೆ ಗಾಬರಿ ಹುಟ್ಟಿಸುತ್ತಿದೆ. ಚೀನಾದಿಂದ ಬಂದ ಮೊದಲ ವೈರಸ್ಗಿಂತ ಕುಲಾಂತರಿ ವೈರಸ್ ಬಲಿಷ್ಠವೋ ಅಥವಾ ದುರ್ಬಲವೋ? ಮಾಸ್ಕ್ ಹಾಕಿಕೊಳ್ಳುವುದು ಮತ್ತು ಕೈ ತೊಳೆದುಕೊಳ್ಳುವುದು ಸಾಕಾ? ಮತ್ತೆ ಯಾವ ರೀತಿಯ ಮುಂಜಾಗ್ರತಾ ಕ್ರಮಗಳನ್ನು ನಾವು ಕೈಗೊಳ್ಳಬೇಕು. ಈ ಕುರಿತು ಟಿವಿ9 ಫೇಸ್ಬುಕ್ ಲೈವ್ನಲ್ಲಿ ತಜ್ಞ ವೈದ್ಯರ ಜೊತೆ, ಆ್ಯಂಕರ್ ಮಾಲ್ತೇಶ್ ಚರ್ಚಿಸಿದರು. ವೈದ್ಯರಾದ ಡಾ.ಅಂಜನಪ್ಪ, ಶ್ವಾಸಕೋಶ ತಜ್ಞ ಡಾ.ಪವನ್, ಸಾಂಕ್ರಾಮಿಕ ರೋಗ ತಜ್ಞ ವೈದ್ಯ ಡಾ.ಸುನಿಲ್ ಹಾಗೂ ಗೃಹಿಣಿ ಸ್ಮಿತಾ ರಾಘವ್ ಸಂವಾದದಲ್ಲಿ ಪಾಲ್ಗೊಂಡಿದ್ದರು.
ಗಾಳಿಸುದ್ದಿ, ಸುಳ್ಳು ಸುದ್ದಿಗಳೇ ಹೆಚ್ಚು
ಕೊರೊನಾ ರೂಪಾಂತರ ಹೊಂದಿರುವ ಪರಿಸ್ಥಿತಿಯಲ್ಲಿ ಜನಸಾಮಾನ್ಯರು ಹೇಗಿದ್ದಾರೆ, ಅವರ ಮನೆಯ ಮಾತುಗಳು, ಅಭಿಪ್ರಾಯಗಳ ನೆಲೆಯಲ್ಲಿ ಗೃಹಿಣಿ ಸ್ಮಿತಾ ರಾಘವ್ ಮಾತನಾಡಿದರು. ಶಾಲೆಯನ್ನು, ಗೆಳೆಯರನ್ನು ಮಕ್ಕಳು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಹಾಕಿಕೊಳ್ಳುವುದು ಮಕ್ಕಳಿಗೂ ಈಗ ರೂಢಿಯಾಗಿಬಿಟ್ಟಿದೆ. ಆದರೆ, ಗಾಳಿಸುದ್ದಿಯೇ ಹೆಚ್ಚಾಗಿರುವುದರಿಂದ ಯಾವುದನ್ನು ನಂಬುವುದು, ಯಾವುದನ್ನು ಬಿಡುವುದು ಎಂದು ತಿಳಿಯುತ್ತಿಲ್ಲ.
ರೂಪಾಂತರಿ ಕೊರೊನಾ ಲಕ್ಷಣಗಳೇನು
ಕೊರೊನಾ ಲಕ್ಷಣಗಳ ಬಗ್ಗೆ ಡಾ. ಪವನ್ ಮಾತನಾಡಿದರು. ಈಗ ಬಂದಿರುವ ವೈರಸ್ ಕೂಡ ಕೊವಿಡ್-19 ವೈರಾಣುವೇ ಆಗಿದೆ. ಹಾಗಾಗಿ ಕೊರೊನಾ ಲಕ್ಷಣಗಳಲ್ಲಿ ವಿಶೇಷ ಬದಲಾವಣೆಗಳೇನು ಕಂಡುಬಂದಿಲ್ಲ. ಆದರೆ ತಲೆನೋವು, ಸುಸ್ತು, ಗಂಟು ನೋವು ತುಸು ಹೆಚ್ಚಾಗಿ ಕಂಡುಬರಬಹುದು ಎಂದು ಮಾಹಿತಿ ನೀಡಿದರು. ಏದುಸಿರು ಬರುವುದು, ಉಸಿರಾಟ ಕಷ್ಟವಾಗುವುದು ಸೇರಿದಂತೆ ಉಸಿರಾಟಕ್ಕೆ ಸಂಬಂಧಿಸಿದ ತೊಂದರೆ ಉಂಟಾದರೆ ವೈದ್ಯರನ್ನು ಭೇಟಿಯಾಗುವುದು ಒಳಿತು ಎಂದು ಹೇಳಿದರು.
ರೂಪಾಂತರಿ ಕೊರೊನಾ ಶೇ 70ರಷ್ಟು ವೇಗವಾಗಿ ಹರಡುತ್ತದೆ ಹಾಗಾಗಿ ನಾವು 70 ಪಟ್ಟು ಹೆಚ್ಚು ಜಾಗೃತರಾಗಿರಬೇಕು. ಕೊವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕು. ಕೊವಿಡ್-19ಕ್ಕೆ ಲಾಕ್ಡೌನ್ ಪರಿಹಾರವಲ್ಲ. ಲಾಕ್ಡೌನ್ ಮಾಡುವುದರಿಂದ ಕೊರೊನಾ ಬಗೆಹರಿಯುವುದಿಲ್ಲ. ಕೊರೊನಾದೊಂದಿಗೆ ಬದುಕುವುದನ್ನು ಕಲಿಯಬೇಕು. ಇದು ಬ್ರಿಟನ್ ಹೆಮ್ಮಾರಿ, ಬ್ರಿಟನ್ ರೋಗ ಅಲ್ಲ. ಇದೂ ಕೂಡ ಕೊರೊನಾ ವೈರಾಣುವೇ ಆಗಿದೆ. ಈ ವೈರಸ್ ಎಲ್ಲಾ ಕಡೆ ಇದೆ ಎಂದೂ ಅವರು ತಿಳಿಸಿದರು.
ಇದನ್ನೂ ಓದಿ: ಕೊರೊನಾ ವೈರಸ್ 19 ಬಗೆಯ ರೂಪಾಂತರ ಪತ್ತೆ
ಭಾರತದಲ್ಲಿ 19 ವಿಧದ ಕೊರೊನಾ ವೈರಾಣುಗಳು
ವೈರಸ್ ರೂಪಾಂತರದ ಬಗ್ಗೆ ಡಾ. ಪವನ್ ಮಾಹಿತಿ ನೀಡಿದರು. ವೈರಾಣುವಿನ ಜೀವನ ಚಕ್ರದಲ್ಲಿ ಬದಲಾವಣೆಯಾಗುತ್ತದೆ. ಅದರ ಪ್ರೋಟೀನ್ನಲ್ಲಿ ವ್ಯತ್ಯಾಸವಾದಾಗ ಹೊಸತಾಗಿ ರೂಪಾಂತರ ಹೊಂದುತ್ತದೆ. ಹಾಗೆ ರೂಪಾಂತರ ಹೊಂದಿದ ಹತ್ತರಲ್ಲಿ ಒಂಬತ್ತು ವೈರಾಣುಗಳು ಶಕ್ತಿಹೀನವಾಗಿರುತ್ತವೆ. ಹತ್ತರಲ್ಲಿ ಒಂದು ಮಾತ್ರ ಬಲಶಾಲಿಯಾಗಿರುತ್ತದೆ. ಅಂತಹ ಒಂದು ವೈರಾಣು ಬ್ರಿಟನ್ನಲ್ಲಿ ಪತ್ತೆಯಾಗಿದೆ. ಆ ಬಗ್ಗೆ ಹೆಚ್ಚು ಆತಂಕ ಬೇಡ ಎಂದು ಹೇಳಿದರು. ಕೊರೊನಾ ವಿರುದ್ಧ ಲಸಿಕೆ ಬರುವವರೆಗೂ ಕಾಯಬೇಕು. ಲಸಿಕೆ ಪಡೆಯುವುದೇ ಸರಿಯಾದ ಪರಿಹಾರ. ಅಲ್ಲಿಯವರೆಗೆ ಕೆಲಸ ಮಾಡುವಾಗ ಮುಂಜಾಗ್ರತೆ ವಹಿಸಬೇಕು ಎಂದು ಜನರನ್ನು ಕೇಳಿಕೊಂಡರು.
ಈವರೆಗೆ ಭಾರತದಲ್ಲಿ 19 ವಿಧದ ಕೊರೊನಾ ವೈರಾಣುವನ್ನು ಪತ್ತೆ ಹಚ್ಚಲಾಗಿದೆ. ನಮ್ಮ ಹವಾಮಾನ, ಆಹಾರಪದ್ಧತಿ, ರೋಗನಿರೋಧಕ ಶಕ್ತಿ ಮೇಲೆ ಅವಲಂಬಿಸಿ ಇಲ್ಲಿನ ವೈರಾಣು ಪರಿಣಾಮ ಕಡಿಮೆ ಎಂದೇ ಹೇಳಬಹುದು. ಭಾರತದಲ್ಲಿ ಜನಸಂಖ್ಯೆ ಜಾಸ್ತಿ. ಹಾಗಾಗಿ, ಇಲ್ಲಿ ಇನ್ಫೆಕ್ಷನ್ ಸಂಬಂಧಿತ ಖಾಯಿಲೆಗಳು ಜಾಸ್ತಿ. ಆದ್ದರಿಂದ ಅವುಗಳಿಗೆ ವಿರುದ್ಧವಾಗಿ ನಮ್ಮಲ್ಲಿ ರೋಗನಿರೋಧಕ ಶಕ್ತಿ ಮೊದಲೇ ಅಭಿವೃದ್ಧಿಯಾಗಿರುತ್ತದೆ ಎಂದು ಡಾ. ಪವನ್ ಅಭಿಪ್ರಾಯ ತಿಳಿಸಿದರು.
ನಿಯಮಗಳನ್ನು ಮರೆಯದಿರಿ
ಡಾ. ಅಂಜನಪ್ಪ ಮಾತನಾಡಿ, ಇದು ರೂಪಾಂತರ ಹೊಂದಿದ, ಪರಿವರ್ತನೆಗೊಂಡ ವೈರಾಣು. ಜೆನಟಿಕಲಿ ಮ್ಯುಟೇಟೆಡ್ ಎಂದು ಕರೆಯುತ್ತೇವೆ. ಉಸಿರಾಟಕ್ಕೆ ಅಂದರೆ ಶ್ವಾಸಕೋಶಕ್ಕೆ ಸಂಬಂದಿಸಿದ ವೈರಾಣು ಇದಾಗಿದೆ. ಜನರು ಇತ್ತೀಚೆಗೆ ಕೊವಿಡ್-19 ನಿಯಮಗಳನ್ನು ಮರೆತಿದ್ದಾರೆ. ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸುವಿಕೆ, ಸ್ಯಾನಿಟೈಸರ್ ಬಳಕೆ ಅಥವಾ ಕೈಗಳ ಸ್ವಚ್ಛತೆ ಈ ಮೂರು ನಿಯಮ ಸದಾ ಪಾಲಿಸಬೇಕು ಎಂದು ಸಾರ್ವಜನಿಕರಿಗೆ ಎಚ್ಚರ ತಿಳಿಸಿದರು.
ಈ ಮೊದಲು, ಸ್ಪಾನಿಷ್ ಇನ್ಫ್ಲುಯೆನ್ಸಾದ ರೂಪಾಂತರ ಬಂದಾಗ ಒಂದು ದಶಲಕ್ಷದಷ್ಟು ಯುವಜನರು ತೀರಿಕೊಂಡಿದ್ದರು. ಹಾಗಾಗಿ ಈಗ ನಾವು ಖಂಡಿತವಾಗಿ ಎಚ್ಚರಿಕೆ ವಹಿಸಬೇಕು. ಮಾಹಿತಿ, ವೈಜ್ಞಾನಿಕ ವಿಚಾರಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಬೇಕು. ಹಾಗಾದಾಗ ರೂಪಾಂತರಿ ಕೊರೊನಾ ವಿರುದ್ಧವೂ ಖಂಡಿತವಾಗಿ ಹೋರಾಡಬಹುದು. ಈ ಬಾರಿಯೂ ನಾವು ಕೊವಿಡ್ ವಿರುದ್ಧ ಗೆಲ್ಲಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೊದಲು ಕೊರೊನಾದಿಂದ ವೃದ್ಧರಿಗೆ ಹೆಚ್ಚು ಹಾನಿ ಎಂದು ಹೇಳಲಾಗುತ್ತಿತ್ತು. ಆದರೆ, ಈಗ ಯುವಕರಿಗೆ ಹೆಚ್ಚು ಅಪಾಯ ಎನ್ನಲಾಗುತ್ತಿದೆ ಎಂಬ ಮಾತಿಗೆ ಡಾ. ಸುನಿಲ್ ಪ್ರತಿಕ್ರಿಯಿಸಿದರು. ಅದಕ್ಕೆ ವಾತಾವರಣ, ದೇಶವಾರು ಹವಾಮಾನ, ಪರಿಸ್ಥಿತಿಯ ಅವಲಂಬನೆ ಇರುತ್ತದೆ. ಒಂದೊಂದು ದೇಶದಲ್ಲಿ ಒಂದೊಂದು ಬಗೆಯಲ್ಲಿ ಕೊರನಾ ಪರಿಣಾಮ ಬೀರಿರಬಹುದು. ಆಯಾ ದೇಶಕ್ಕೆ ಹೊಂದಿಸಿ ಕೊವಿಡ್ ಪ್ರಭಾವ ಬದಲಾಗಬಹುದು. ಭಾರತದಲ್ಲಿ ಈ ಸ್ವರೂಪ ಬದಲಿಸಿರುವ ವೈರಸ್ ಬಗ್ಗೆ ಅಧ್ಯಯನ, ಮಾಹಿತಿ ಸಿಗಬೇಕಷ್ಟೆ ಎಂದು ತಿಳಿಸಿದರು.
ಲಸಿಕೆ ಪಡೆಯಲು ಗೊಂದಲ ಇರಬಾರದು. ಲಸಿಕೆ ತಯಾರಿಸುವ ವೈದ್ಯರಿಗೆ ಅಥವಾ ವಿಜ್ಞಾನಿಗಳಿಗೆ ಕೊರೊನಾ ರೂಪಾಂತರದ ಬಗ್ಗೆ ತಿಳುವಳಿಕೆ ಇರುತ್ತದೆ. ಹಾಗಾಗಿ ಅದನ್ನೂ ಗಮನದಲ್ಲಿಟ್ಟುಕೊಂಡು ಲಸಿಕೆ ಅಭಿವೃದ್ಧಿಯಾಗಿರುತ್ತದೆ. ಹಾಗಾಗಿ ಲಸಿಕೆಯ ಬಗ್ಗೆ ಗೊಂದಲಗೊಳ್ಳದೆ ಎಲ್ಲರೂ ಲಸಿಕೆ ಪಡೆಯಲು ಮುಂದೆ ಬರಬೇಕು ಎಂದು ಸುನಿಲ್ ಕೇಳಿಕೊಂಡರು.
ಕೊರೊನಾ ಮರುಕಳಿಸುವ ಸಾಧ್ಯತೆ ಖಂಡಿತಾ ಇದೆ. ಒಮ್ಮೆ ಕೊರೊನಾ ಬಂತೆಂದು ನಾವು ಉಡಾಫೆ ವರ್ತನೆ ತೋರಬಾರದು. ಈಗಾಗಲೇ ಆಂಧ್ರದಲ್ಲಿ ಒಂದು ಪ್ರಕರಣ ದಾಖಲಾಗಿದೆ. ಅದರಂತೆ, ಕೊವಿಡ್-19ಗೆ ತುತ್ತಾಗಿದ್ದ ಒಬ್ಬ ವ್ಯಕ್ತಿಗೆ ರೂಪಾಂತರಿ ಕೊರೊನಾ ಮರುಕಳಿಸಿದೆ. ಹಾಗಾಗಿ ಎಲ್ಲರೂ ಜಾಗೃತರಾಗಿರುವುದು ಅನಿವಾರ್ಯ ಎಂದೂ ಸುನಿಲ್ ಎಚ್ಚರಿಸಿದರು.
EXPLAINER | ಕೊರೊನಾದೊಂದಿಗೆ ಒಂದು ವರ್ಷದ ಸಾಂಗತ್ಯ.. ಇನ್ನೇನಿದ್ದರೂ ಜೊತೆಯಾಗಿ ಬದುಕುವುದು ಅನಿವಾರ್ಯ
Published On - 6:08 pm, Wed, 30 December 20