ವಿಷ್ಣುವರ್ಧನ್ ಎಂದರೆ ಹಾಗೇ. ಅವರು ಸಾಂಸ್ಕೃತಿಕ, ಸಾಹಿತ್ಯಿಕ ಸೌಂದರ್ಯ ಕಾಣಿಸಿದ, ಸೌಜನ್ಯದ ಧ್ವನಿ. ‘ತುತ್ತು ಅನ್ನ ತಿನ್ನೋಕೆ’ ಹಾಡನ್ನು ಇತರ ಗಾಯಕರು ಹಾಡಿದ್ದರೆ ಆ ಶಕ್ತಿ ಬರ್ತಿತ್ವೋ ಇಲ್ವೋ ಗೊತ್ತಿಲ್ಲ. ಆ ಹಾಡಿಗೆ ಅಂಥಾ ಸೌಜನ್ಯ ಬೇಕಿತ್ತು. ಅದನ್ನು ವಿಷ್ಣುವರ್ಧನ್ ತುಂಬಿದ್ದರು. ಆಂತರ್ಯದಲ್ಲಿ ಬದುಕಿನ ತತ್ವ ಹೇಳಿದ್ದರು. ವಿಷ್ಣುವರ್ಧನ್ ಪ್ರತಿನಿಧಿಸಿದ ಸಿನಿಮಾಗಳೇ ಅಂಥವು. ಕೌಟುಂಬಿಕ, ಸಾಮಾಜಿಕ ಕಳಕಳಿಯ, ಶ್ರಮಸಂಸ್ಕೃತಿ ಬಿಂಬಿಸುವ ಚಿತ್ರಗಳವು.
ಬಂಧನ, ಮುತ್ತಿನಹಾರ, ಲಾಲಿ, ಮಲಯ ಮಾರುತದಂಥ ಸಿನಿಮಾಗಳು ಶ್ರೀಸಾಮಾನ್ಯನ ಸೌಜನ್ಯವನ್ನು ಎಚ್ಚರಿಸುವಂತಿದ್ದವು. ‘ಮುತ್ತಿನಹಾರ’ ಮೇಲ್ನೋಟಕ್ಕೆ ಯುದ್ಧಕ್ಕೆ ಸಂಬಂಧಿಸಿದ ಚಿತ್ರವಾದರೂ ಅದರೊಳಗೆ ಭಾವನೆಗಳ ವಿಸ್ತರಣೆಗೂ ಅಪಾರ ಅವಕಾಶವಿತ್ತು. ‘ಲಾಲಿ’ ತಂದೆ-ಮಗಳ ಆಪ್ತತೆಯನ್ನು ಸೂಕ್ಷ್ಮವಾಗಿ ತೆರೆದಿಟ್ಟಿತ್ತು. ‘ಮಲಯ ಮಾರುತ’ ಎಲ್ಲರೂ ನೋಡಲೇಬೇಕಾದ ಸಿನಿಮಾ. ‘ಆಪ್ತಮಿತ್ರ’ದ ನಟನೆಯಲ್ಲೂ ಅವರ ಮೃದುತ್ವವನ್ನು ಹೇರಳವಾಗಿ ಕಾಣಬಹುದು. ಎಲ್ಲರೊಳಗೊಂದು ಸೌಜನ್ಯದ ವ್ಯಕ್ತಿತ್ವ ಇರಬೇಕು ಎಂದು ತೆರೆಯೊಳಗೆ ಮತ್ತು ತೆರೆಯಾಚೆಯೂ ಕಾಣಿಸಿದ ನಟ ಡಾ. ವಿಷ್ಣುವರ್ಧನ್.
ವಿಷ್ಣುವರ್ಧನ್, ಹೊಸಕಾಲದಲ್ಲಿ ಅಂದರೆ 70ರ ದಶಕದ ಬಳಿಕ ಚಿತ್ರರಂಗದಲ್ಲಿ ಮೆರೆದ ನಟ. ಆಗಿನ ಆಂಗ್ರಿ ಯಂಗ್ ಮ್ಯಾನ್ ಸಂಸ್ಕೃತಿಯ ಚಿತ್ರಗಳಲ್ಲಿ ನಟಿಸುತ್ತಾ ವ್ಯವಸ್ಥೆಗೆ ವಿರುದ್ಧವಾಗಿ ನಿಲ್ಲುವಂಥ ಪಾತ್ರಗಳಲ್ಲಿ ಯುವಜನರಿಗೆ ಫೇವರಿಟ್ ಆದವರು ವಿಷ್ಣುವರ್ಧನ್. ಹಿಂದಿಯಲ್ಲಿ ಅಮಿತಾಭ್ ಕಂಡಂತೆ ಕನ್ನಡ ಚಿತ್ರರಂಗದಲ್ಲಿ ವಿಷ್ಣುವರ್ಧನ್ ಯುವಕರ ಅಭಿಮಾನಗಳಿಸಿದವರು. ಪುಟ್ಟಣ್ಣ ಕಣಗಾಲ್ ಗರಡಿಯ ‘ನಾಗರಹಾವು’ ಮೂಲಕ ಕೀರ್ತಿಗಳಿಸಿದವರು.
ರಂಗಭೂಮಿ ಹಿನ್ನೆಲೆಯಿಂದ, ಹೊಸ ಅಲೆಯ ಸಿನಿಮಾಗಳ ಮೂಲಕ ಸಿನಿಮಾ ರಂಗಕ್ಕೆ ಬಂದು, ಆಮೇಲೆ ಜನಪ್ರಿಯ ಸಿನಿಮಾದಿಂದ (ಪಾಪ್ಯುಲರ್ ಕಲ್ಚರ್) ಜನಜನಿತರಾದವರು ವಿಷ್ಣುವರ್ಧನ್. ಅದರಲ್ಲೂ ಫಿಟ್ ಅನಿಸಿಕೊಂಡರು. ಬಹಳಷ್ಟು ರಂಗಭೂಮಿ ಹಿನ್ನೆಲೆಯ ಕಲಾವಿದರು, ಬಳಿಕ ಜನಪ್ರಿಯ ಸಂಸ್ಕೃತಿಯ ಚಿತ್ರಗಳಲ್ಲಿ ಮಿಂಚಿಮೆರೆದದ್ದು ಭಾರತೀಯ ಚಿತ್ರ ಇತಿಹಾಸದಲ್ಲಿ ಕಾಣಬಹುದಾದ ಒಂದು ಸಾಮಾನ್ಯ ಅಂಶ. ಎಷ್ಟೇ ಅಗ್ರೆಸಿವ್ ಪಾತ್ರಗಳಲ್ಲಿ ಕಂಡರೂ ವಿಷ್ಣುವರ್ಧನ್ರನ್ನು ಒಬ್ಬ ಸಾಫ್ಟ್ ಫೇಸ್ನ, ಬಹಳ ಪ್ರೀತಿ ತುಂಬಿದ ಮೃದು ಕಲಾವಿದರಾಗಿಯೇ ನಾನು ಕಾಣಲು ಬಯಸುತ್ತೇನೆ.
ಡಾ. ರಾಜ್ಕುಮಾರ್ ಕನ್ನಡ ಚಿತ್ರರಂಗದಲ್ಲಿ, ಸಂಸ್ಕೃತಿ ನಿಷ್ಠ ಕಥನಗಳ ಒಂದು ಅಲೆ ಮೂಡಿಸಿದರೆ, ಆ ಬಗೆಯ ಸಾಂಸ್ಕೃತಿಕ ಪರಂಪರೆಯನ್ನು ಮತ್ತೊಂದು ಮಗ್ಗುಲಿಗೆ ತಿರುಗಿಸಿದವರು ಡಾ. ವಿಷ್ಣುವರ್ಧನ್. ಒಂದು ಕಾಲದಿಂದ ಮತ್ತೊಂದು ಕಾಲಕ್ಕೆ ನಾವು ದಾಟಿಕೊಂಡಾಗ, ಸಿನಿಮಾ ಕೂಡ ಅನಿವಾರ್ಯವಾಗಿ ಬದಲಾಗುತ್ತದೆ. ಆ ನೆಲೆಯಲ್ಲಿ ಇಬ್ಬರು ನಟರೂ ಬಹಳ ಮುಖ್ಯರು ಎಂದು ಡಾ. ಪದ್ಮನಾಭ್ ಮಾತನಾಡುತ್ತಾರೆ.
ಡಾ. ಎನ್.ಕೆ. ಪದ್ಮನಾಭ ಪರಿಚಯ: ಉಜಿರೆ ಎಸ್ಡಿಎಂ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕರು. ಸಿನಿಮಾ ಪ್ರೇಕ್ಷಕರು ಹಾಗೂ ವಿಮರ್ಶಕರು. ಟಿ.ಎಸ್. ನಾಗಾಭರಣ ಅವರ ಚಿತ್ರಗಳ ಕುರಿತು ಪಿಎಚ್ಡಿ ಪಡೆದಿದ್ದಾರೆ.
ಸಿನಿಮಾ ಸಂಭಾಷಣೆಕಾರ ಮಾಸ್ತಿ ಬರಹ | ಡಾ.ವಿಷ್ಣುವರ್ಧನ್ ಎಂಬ ಆದರ್ಶಪ್ರಾಯ ನಟ