ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಅನೇಕ ವಿಶೇಷತೆಗಲನ್ನು ಹೊಂದಿದೆ. ಇದು ಒಂದು ತಿಂಗಳ ಉಪವಾಸದ ಆಚರಣೆಯಾಗಿದೆ. ಈದ್-ಉಲ್-ಫಿತರ್ ಅನ್ನು ರಂಜಾನ್ ತಿಂಗಳ ಉಪವಾಸದ ಕೊನೆಯ ದಿನದಂದು ಆಚರಿಸಲಾಗುತ್ತೆ. ಇಸ್ಲಾಂ ಧರ್ಮವನ್ನು ಆಚರಿಸುವ ಜನರು ಅಲ್ಲಾಹನಿಂದ ಶಾಂತಿ ಪಡೆಯಲು ಮತ್ತು ಆಶೀರ್ವಾದಕ್ಕಾಗಿ ಅವರಿಗೆ ಧನ್ಯವಾದ ಸಲ್ಲಿಸಲು ಇಡೀ ತಿಂಗಳು ಅರ್ಪಿಸುತ್ತಾರೆ. ರೋಜಾ ಎಂದು ಕರೆಯಲ್ಪಡುವ ಉಪವಾಸಗಳು ಸಾಮಾನ್ಯವಾಗಿ ರಂಜಾನ್ ತಿಂಗಳ 30 ನೇ ದಿನದಂದು ಸಂಭವಿಸುವ ಅರ್ಧಚಂದ್ರಾಕಾರದ ಚಂದ್ರನ ವೀಕ್ಷಣೆ ಬಳಿಕ ಈದ್-ಉಲ್-ಫಿತರ್ ಆಚರಿಸಲಾಗುತ್ತೆ. ಈ ಹಬ್ಬದ ಮೂಲಕ ಒಂದು ತಿಂಗಳ ಉಪವಾದ ಮುಕ್ತಾಯವಾಗುತ್ತೆ.
ಆದ್ರೆ ಪ್ರತಿ ವರ್ಷದಂತೆ ಈ ವರ್ಷ ಹಬ್ಬಕ್ಕೆ ಜಮಾತ್ ಇರುವುದಿಲ್ಲ. ಅಂದರೆ ಸಾಮೂಹಿಕ ಪ್ರಾರ್ಥನೆ ಇರುವುದಿಲ್ಲ. ಕೊರೊನಾ ಹಿನ್ನೆಲೆ ಸರ್ಕಾರ ಕೆಲವು ಕಠಿಣ ನಿರ್ಬಂಧನೆಗಳನ್ನು ಹೇರಿದೆ. ಹಬ್ಬ ಆಚರಿಸಲು ದೊಡ್ಡ ದೊಡ್ಡ ಕೂಟಗಳು, ಸಂಭ್ರಮಾಚರಣೆ ಬಿಟ್ಟು ಸಾಮಾಜಿಕ ಅಂತರ ಕಾಪಾಡಿಕೊಂಡು ಹೆಚ್ಚು ಮಂದಿ ಸೇರದೆ ಹಬ್ಬದ ಮೆರಗನ್ನು ಹೆಚ್ಚಿಸಬೇಕಿದೆ. ದಾನ, ಬಡವರ ಹಸಿವು, ದೇವರ ಶಕ್ತಿಯನ್ನು ಸಾರುವ ಈ ಹಬ್ಬಕ್ಕೆ ಈ ವರ್ಷ ನಿಜವಾದ ಸ್ವರೂಪ ಸಿಕ್ಕಿದ್ದು ಮುಸ್ಲಿಮರು ಸರಳ ಹಬ್ಬ ಆಚರಿಸಿ ಮತ್ತಷ್ಟು ದಾನ ಧರ್ಮಗಳನ್ನು ಮಾಡಿ ಅಲ್ಲಹ್ನಿಗೆ ಬೇಡಿಕೊಳ್ಳುವ ಮೂಲಕ ಕೊರೊನಾ ವಿರುದ್ಧ ಹೋರಾಡಬೇಕಿದೆ.
ಈದ್ ಆಚರಣೆಯ ಸಮಯ ಮತ್ತು ದಿನಾಂಕಗಳು ದೇಶದಿಂದ ದೇಶಕ್ಕೆ ಅವಲಂಬಿತವಾಗಿರುತ್ತದೆ. ಮೊದಲು ಹಬ್ಬವನ್ನು ಆಚರಿಸುವುದು ಸೌದಿ ಅರೇಬಿಯ. ಮೊದಲು ಅರ್ಧಚಂದ್ರನನ್ನು ವೀಕ್ಷಿಸಿ ಸೌದಿ ಅರೇಬಿಯಾ ರಂಜಾನ್ ಹಬ್ಬವನ್ನು ಆಚರಿಸುತ್ತೆ ಬಳಿಕ ಎರಡನೇ ದಿನ ಭಾರತದಲ್ಲಿ ಆಚರಿಸಲಾಗುತ್ತೆ.
ಈದ್-ಉಲ್-ಫಿತರ್ ಯಾವಾಗ?
ಅರ್ಧಚಂದ್ರನನ್ನು ನೋಡಿದ ನಂತರ ಈದ್ ಉಲ್-ಫಿತರ್ ನಿಖರವಾದ ದಿನಾಂಕ ಮತ್ತು ಸಮಯವನ್ನು ಖಚಿತಪಡಿಸಲಾಗುತ್ತದೆ. ಎಲ್ಲಾ ದೇಶಗಳಲ್ಲಿ ಸಮಯ ಮತ್ತು ದಿನಾಂಕಗಳು ಭಿನ್ನವಾಗಿರುತ್ತವೆ, ಸೌದಿ ಅರೇಬಿಯಾ ಆಚರಣೆಯನ್ನು ಪ್ರಾರಂಭಿಸುತ್ತದೆ. ಈ ವರ್ಷ, ಕ್ಯಾಲೆಂಡರ್ ಪ್ರಕಾರ ಈದ್ ಆಚರಣೆಗಳು ಮೇ 12 ರ ರಾತ್ರಿ ಪ್ರಾರಂಭವಾಗಿ ಮರುದಿನವೂ ಮುಂದುವರಿಯುವ ಸಾಧ್ಯತೆಯಿದೆ ಎಂದು ಹೇಳುತ್ತದೆ, ಅಂದರೆ ಮೇ 13ರಂದು ಸೌದಿಯಲ್ಲಿ ಹಬ್ಬ ಆಚರಿಸಲಾಗುತ್ತೆ. ಬಳಿಕ ಮೇ 14ರಂದು ಶುಕ್ರವಾರ ಬೆಂಗಳೂರು ಸೇರಿದಂತೆ ಅನೇಕ ಕಡೆ ಹಬ್ಬ ಆಚರಿಸಲಾಗುತ್ತೆ.
ಈದ್-ಉಲ್-ಫಿತರ್ 2021 ಮಹತ್ವ
ಈದ್-ಉಲ್-ಫಿತರ್ ಶವ್ವಾಲ್ ತಿಂಗಳ ಮೊದಲ ದಿನ. ಅಂದರೆ ಇಸ್ಲಾಮಿಕ್ ಕ್ಯಾಲೆಂಡರ್ನ 9ನೇ ತಿಂಗಳಾದ ರಂಜಾನ್ ತಿಂಗಳು ಮುಗಿದು ಶವ್ವಾಲ್ ತಿಂಗಳ ಆರಂಭವಾದ ಮೊದಲ ದಿನವೇ ಈದ್-ಉಲ್-ಫಿತರ್ ಅಂದರೆ ರಂಜಾನ್ ಹಬ್ಬವನ್ನು ಆಚರಿಸಲಾಗುತ್ತೆ. ರಂಜಾನ್ ತಿಂಗಳ 30 ದಿನ ಮುಸ್ಲಿಮರು ಮುಂಜಾನೆಯಿಂದ ಮುಸ್ಸಂಜೆಯವರೆಗೆ ಉಪವಾಸ ಮಾಡಿ ತಮ್ಮ ಹಿಂದಿನ ಪಾಪಗಳಿಗಾಗಿ ಸರ್ವಶಕ್ತನಾದ ಅಲ್ಲಹ್ನಿಗೆ ಕ್ಷಮೆ ಕೋರುತ್ತಾರೆ. ಮತ್ತು ರಂಜಾನ್‌ನ ಕೊನೆಯ ದಿನವಾದ ಚಾಂದ್ ರಾತ್‌ನಂದು ಅರ್ಧಚಂದ್ರನನ್ನು ನೋಡುವ ಮೂಲಕ ತಿಂಗಳ ಉಪವಾಸ ಮುಕ್ತಾಯವಾಗುತ್ತದೆ. ಬಳಿಕ ಚಾಂದ್ ರಾತ್ನ ಮರುದಿನ ಈದ್-ಉಲ್-ಫಿತರ್(‘ಉಪವಾಸವನ್ನು ಮುರಿಯುವ ಹಬ್ಬ’) ದಿನವನ್ನು ಆಚರಿಸಿ ರಂಜಾನ್ ಹಬ್ಬವನ್ನು ಸಂತೋಷ ಸಡಗರದಿಂದ ಆಚರಿಸಲಾಗುತ್ತದೆ.
ಈದ್ ನಮಾಜ್
ಹಬ್ಬದ ದಿನವು ಮಸೀದಿಯಲ್ಲಿ ಈದ್ ಪ್ರಾರ್ಥನೆ ಸಲ್ಲಿಸುವ ಮೂಲಕ ಪ್ರಾರಂಭವಾಗುತ್ತದೆ, ಆದರೆ ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಮನೆಯಲ್ಲಿ ಸಲಾತ್ ಎಂದು ಕರೆಯಲ್ಪಡುವ ಇಸ್ಲಾಮಿಕ್ ಪ್ರಾರ್ಥನೆಯ ಮೂಲಕ ಆರಂಭವಾಗಲಿದೆ. 6 ತಕ್ಬೀರ್ ಜೊತೆಗೆ 2 ರಕಾತ್ ವಜೀಬ್ ನಮಾಜ್ ಮಾಡುವ ಮೂಲಕ ಪ್ರಾರ್ಥನೆಯನ್ನು ಮಾಡಲಾಗುತ್ತೆ. ಈದ್ ಪ್ರಾರ್ಥನೆಯ ನಂತರ ಧರ್ಮೋಪದೇಶದ ನಡೆಯುತ್ತೆ. ಬಳಿಕ ಮುಸ್ಲಿಮರು ಅಲ್ಲಾಹನನ್ನು ಕ್ಷಮೆ, ಕರುಣೆ, ಶಾಂತಿ ಮತ್ತು ಪ್ರಪಂಚದಾದ್ಯಂತದ ಎಲ್ಲಾ ಜೀವಿಗಳಿಗೆ ಆಶೀರ್ವಾದವನ್ನು ಕೇಳುತ್ತಾರೆ.
ಸಾಮಾನ್ಯವಾಗಿ, ಪ್ರಾರ್ಥನೆಯನ್ನು ಸಮೂಹವಾಗಿ ನಡೆಸಲಾಗುತ್ತದೆ. ಆದರೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರು ತಮ್ಮ ತಮ್ಮ ಮನೆಯಲ್ಲೇ ಆಚರಿಸಬೇಕಾಗಿದೆ. ಇನ್ನು ರಂಜಾನ್ ತಿಂಗಳಿನಲ್ಲಿ ಉಪವಾಸದ ಜೊತೆಗೆ ಮುಸ್ಲಿಮರು ಫಿತ್ರಾ(ಜೀವನದ ಮೇಲಿನ ತೆರಿಗೆ) (Zakat-al-Fitr)ವನ್ನು ನೀಡಬೇಕು. ಅಂದರೆ ಈದ್ ಪ್ರಾರ್ಥನೆ ಮುನ್ನ ಫಿತ್ರಾ ರೂಪದಲ್ಲಿ ನಮೂದಿಲಾಗುವ ಹಣವನ್ನು ಬಡವರಿಗೆ ದಾನ ಮಾಡಬೇಕು ಎಂದು ಅಲ್ಲಾಹನಿಂದ ಆಜ್ಞಾಪಿಸಲಾಗಿದೆ ಎಂದು ಮುಸ್ಲಿಮರು ನಂಬುತ್ತಾರೆ.
ಇದನ್ನೂ ಓದಿ: Ramadan Eid 2021 Date: ಕರಾವಳಿ ಕರ್ನಾಟಕದಲ್ಲಿ ಮೇ 13ರಂದು ಗುರುವಾರವೇ ರಂಜಾನ್ ಆಚರಣೆ
Published On - 10:45 am, Wed, 12 May 21