Budget 2021 | ರಾಜಾ ಶೈಲೇಶ್​ಚಂದ್ರ ಗುಪ್ತ ಬರಹ: ದುಡಿಯುವ ಭರವಸೆ ಬಿತ್ತುವುದೇ ನಿರ್ಮಲಾ ಸೀತಾರಾಮನ್ ಎದುರಿಗಿರುವ ಅತಿದೊಡ್ಡ ಸವಾಲು

|

Updated on: Jan 31, 2021 | 3:27 PM

ದೇಶ ಅಂದ್ರೆ ಎಲ್ಲರಿಗೂ ಇಷ್ಟಾನೇ. ಆದ್ರೆ ದೇಶಕ್ಕಾಗಿ ಅಲ್ಪಸ್ವಲ್ಪ ತ್ಯಾಗ ಮಾಡಬೇಕಾಗುತ್ತೆ ಅಂದ್ರೆ ಎಷ್ಟು ಜನರು ಸಿದ್ಧರಾಗ್ತಾರೆ? ಈಗಿನ ಪರಿಸ್ಥಿತಿಯಲ್ಲಿ ತೆರಿಗೆ ವಿನಾಯ್ತಿ ಸಿಗುತ್ತಾ ಅಂತ ಕೆಲವರು ಮಾತಾಡುವಾಗ ನನ್ನ ಮನಸ್ಸಿನಲ್ಲಿ ಈ ಪ್ರಶ್ನೆ ಮೂಡುತ್ತೆ...

Budget 2021 | ರಾಜಾ ಶೈಲೇಶ್​ಚಂದ್ರ ಗುಪ್ತ ಬರಹ: ದುಡಿಯುವ ಭರವಸೆ ಬಿತ್ತುವುದೇ ನಿರ್ಮಲಾ ಸೀತಾರಾಮನ್ ಎದುರಿಗಿರುವ ಅತಿದೊಡ್ಡ ಸವಾಲು
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
Follow us on

ಕನ್ನಡದಲ್ಲಿ ವಾಣಿಜ್ಯ ಪತ್ರಿಕೋದ್ಯಮಕ್ಕೆ ಭದ್ರ ಬುನಾದಿ ಹಾಕಿದವರು ಹಿರಿಯ ಪತ್ರಕರ್ತ ರಾಜಾ ಶೈಲೇಶ್​ಚಂದ್ರ ಗುಪ್ತ. ಸುಮಾರು 50 ಕೇಂದ್ರ ಬಜೆಟ್​ಗಳನ್ನು ವಿಶ್ಲೇಷಿಸಿರುವ ಅವರ ಅನುಭವ ದೊಡ್ಡದು. ದೇಶದ ಇತಿಹಾಸದಲ್ಲಿಯೇ ಇಂಥ ಪರಿಸ್ಥಿತಿ ಎಂದೂ ಬಂದಿರಲಿಲ್ಲ. ಈ ಬಾರಿಯ ಬಜೆಟ್​ ಅತ್ಯಪರೂಪದ್ದು ಎನ್ನುತ್ತಾರೆ ಅವರು. ಅವರ ಮಾತಿನ ಅಕ್ಷರರೂಪ ಇಲ್ಲಿದೆ…

ದೇಶ ಅಂದ್ರೆ ಎಲ್ಲರಿಗೂ ಇಷ್ಟಾನೇ. ಆದ್ರೆ ಆ ದೇಶಕ್ಕಾಗಿ ಅಲ್ಪಸ್ವಲ್ಪ ತ್ಯಾಗ ಮಾಡಬೇಕಾಗುತ್ತೆ ಅಂದ್ರೆ ಎಷ್ಟು ಜನರು ಸಿದ್ಧರಾಗ್ತಾರೆ? ಈಗಿನ ಪರಿಸ್ಥಿತಿಯಲ್ಲಿ ತೆರಿಗೆ ವಿನಾಯ್ತಿ ಸಿಗುತ್ತಾ ಆಂತ ಕೆಲವರು, ಹೊಸಹೊಸ ಯೋಜನೆಗಳು ಘೋಷಿಸಿಬಹುದಾ ಅಂತ ಕೆಲವರು ಮಾತಾಡುವಾಗ ನನ್ನ ಮನಸ್ಸಿನಲ್ಲಿ ಈ ಪ್ರಶ್ನೆ ಮೂಡುತ್ತೆ.

ಅರ್ಥ ವ್ಯವಸ್ಥೆ ಕುಸಿದಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದನ್ನು ಹೊಸದಾಗಿ ಮತ್ತೆ ಹೇಳೋದು, ಅಂಕಿಅಂಶಗಳ ಸಮೇತ ನಿರೂಪಿಸುವುದು ಅನಗತ್ಯ. ‘ದೇಶ ಈ ಹಿಂದೆಯೂ ಇಂಥ ಎಷ್ಟೋ ಸಂಕಷ್ಟಗಳನ್ನು ದಾಟಿ ಬಂದಿದೆ. ಇದನ್ನೂ ಹಾಗೆಯೇ ದಾಟಿಬಿಡುತ್ತೆ’ ಅಂತ ಕೆಲವರು ಹೇಳುತ್ತಿರುತ್ತಾರೆ. ಇಂಥ ಪ್ರಶ್ನೆಗಳು ಕಿವಿಗೆ ಬಿದ್ದಾಗಲೆಲ್ಲಾ, ‘ಇಲ್ಲ, ಇಂಥ ಪರಿಸ್ಥಿತಿ ನಮ್ಮ ಆರ್ಥಿಕತೆಗೆ ಹಿಂದೆಂದೂ ಬಂದಿರಲಿಲ್ಲ’ ಎಂದೇ ನನ್ನ ಮನಸ್ಸು ಹೇಳುತ್ತೆ.

ಹಿಂದೆ ನಾವು ಯುದ್ಧಗಳನ್ನು ಎದುರಿಸಿದ್ದೆವು. ಬರಗಾಲ, ಅತಿವೃಷ್ಟಿ, ಭೂಕಂಪ, ಚಂಡಮಾರುತ ಅಷ್ಟೇಕೆ.. ಸುನಾಮಿಯಂಥ ಪ್ರಾಕೃತಿಕ ವಿಕೋಪಗಳನ್ನೂ ಒಂದು ದೇಶವಾಗಿ ಜೀರ್ಣಿಸಿಕೊಂಡೆವು. ಆ ಯಾವ ಸಂದರ್ಭದಲ್ಲಿಯೂ ಈಗಿರುವಂಥ ಪರಿಸ್ಥಿತಿ ಬಂದಿರಲಿಲ್ಲ. ನನ್ನ ಅಧ್ಯಯನದ ಮಿತಿಯಲ್ಲಿ ಹೇಳುವುದಾದರೆ ಸ್ವಾತಂತ್ರ್ಯಕ್ಕೆ ಮೊದಲು ನಮ್ಮ ದೇಶದ ಬಂಗಾಳ ಅನುಭವಿಸಿದ ಭೀಕರ ಕ್ಷಾಮದ ಪರಿಸ್ಥಿತಿಗೆ ತುಸು ಹೋಲಿಕೆ ಬರುತ್ತದೆ. ಯಾಕೆಂದರೆ ಬಹುತೇಕ ಪ್ರಾಕೃತಿಕ ವಿಕೋಪಗಳು ದೇಶದ ಯಾವುದಾದರೂ ಒಂದು ನಿರ್ದಿಷ್ಟ ಭೂಪ್ರದೇಶಕ್ಕೆ ಅಥವಾ ಒಂದೆರೆಡು ರಾಜ್ಯಗಳಿಗೆ ಮಾತ್ರವೇ ಸೀಮಿತವಾಗಿತ್ತು.

ಆದರೆ ಈ ಬಾರಿ ದೇಶ ಎದುರಿಸಿದ ಸಂಕಷ್ಟ ಇವೆಲ್ಲಕ್ಕಿಂತ ಭಿನ್ನ ಮತ್ತು ಭೀಕರ. ಈ ಎರಡೂ ಪದಗಳನ್ನು ನಾನು ಅತ್ಯಂತ ಎಚ್ಚರದಿಂದ ಬಳಸುತ್ತಿದ್ದೇನೆ. ಯುದ್ಧವಾಗುವಾಗ ದೇಶಭಕ್ತಿ ಜನರ ಮೈದುಂಬಿರುತ್ತೆ. ಚೆನ್ನಾಗಿ ದುಡಿಯಬೇಕೆಂಬ ಉತ್ಸಾಹದೊಂದಿಗೆ ದುಡಿದರೆ ಬಾಳಬಹುದು, ಹಣ ಸಂಪಾದಿಸಬಹುದು ಎಂಬ ನಿರೀಕ್ಷೆಗಳೂ ಇರುತ್ತವೆ. ಪ್ರಾಕೃತಿಕ ಸಂಕಷ್ಟದಲ್ಲಿ ಒಂದು ರಾಜ್ಯ ಸಂಕಷ್ಟ ಅನುಭವಿಸುವಾಗ ದೇಶದ ಉಳಿದ ರಾಜ್ಯಗಳು ಮತ್ತು ಕೇಂದ್ರ ಸರ್ಕಾರ ನೆರವಿನ ಹಸ್ತ ಚಾಚುತ್ತವೆ.

ಆದರೆ ಈಗ ಆಗಿರುವುದೇನು? ಇಡೀ ದೇಶಕ್ಕೇ, ಒಮ್ಮೆಲೆ ಇಂಥ ಸಂಕಷ್ಟ ಆವರಿಸಿಕೊಂಡಿದ್ದು ಇದೇ ಮೊದಲು. ಇಂಥ ಪರಿಸ್ಥಿತಿಯನ್ನು ನಮ್ಮ ದೇಶ ಹಿಂದೆಂದೂ ಕಂಡಿಲ್ಲ. ಇತರ ದೇಶಗಳಿಂದಲಾದರೂ ನೆರವು ಸಿಗಲು ಸಾಧ್ಯವೇ ಎಂದು ಯೋಚಿಸಿದರೆ, ಅವರ ಪರಿಸ್ಥಿತಿಯೂ ನಮ್ಮಷ್ಟೇ ಅಥವಾ ನಮಗಿಂತಲೂ ಭೀಕರ.

ಇದನ್ನೂ ಓದಿ: ಕ್ರೆಡಿಟ್ ರೇಟಿಂಗ್ ಎಂದರೇನು? ಆರ್ಥಿಕ ಸಮೀಕ್ಷೆಯಲ್ಲಿ ಭಾರತ ಅಷ್ಟೇಕೆ ತಕರಾರು ಮಾಡಿತು?

ಇವರೆಲ್ಲಾ ಎಲ್ಲಿದ್ದಾರೆ ಈಗ?

ಉತ್ತರ ಹುಡುಕಬೇಕಾದ ಪ್ರಶ್ನೆಗಳು
ಕಳೆದ ಮಾರ್ಚ್​ ತಿಂಗಳ 22ನೇ ತಾರೀಖನ್ನು ಒಮ್ಮೆ ನೆನಪಿಸಿಕೊಳ್ಳಿ. ಒಂದು ದಿನದ ಪ್ರಾಯೋಗಿಕ ಜನತಾಕರ್ಫ್ಯೂ ಅಂತ ಶುರುವಾಗಿದ್ದು ಸತತ 21 ದಿನ ಅತ್ಯಂತ ಕಠಿಣ ರೀತಿಯ ಲಾಕ್​ಡೌನ್ ಆಗಿ ಮಾರ್ಪಾಡಾಯಿತು. ಜನತೆ ಅಕ್ಷರಶಃ ಇದ್ದಲ್ಲೇ ಬಂಧಿಗಳಾಗಿಹೋದರು. ಜನಸಂಚಾರ ಸ್ಥಗಿತಗೊಂಡಿತು. ದೊಡ್ಡದೊಡ್ಡ ಊರುಗಳಲ್ಲಿ ಸಿಲುಕಿದ ವಲಸೆ ಕಾರ್ಮಿಕರು ಊಟಕ್ಕಿಲ್ಲದೆ ಪರದಾಡುತ್ತಾ, ಸ್ವಂತ ಊರುಗಳಿಗೆ ಹೊರಟರು. ಸಾರಿಗೆ ವ್ಯವಸ್ಥೆಯೂ ಇಲ್ಲದ ಕಾರಣ ನೂರಾರು ಕಿಲೋಮೀಟರ್​ ನಡೆದೇ ಸಾಗಿದರು. ಹೀಗೆ ನಡೆದು ಹೋದವರು ಈಗ ಎಲ್ಲಿದ್ದಾರೆ? ಅವರು ಮತ್ತೆ ನಗರಗಳನ್ನು ನಂಬಿ ದುಡಿಯಲೆಂದು ನಗರಗಳಿಗೆ ವಾಪಸ್ ಬರಲು ಸಿದ್ಧರಿದ್ದಾರಾ ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಳ್ಳುವುದರಲ್ಲಿಯೂ ಈ ವರ್ಷದ ಬಜೆಟ್​ ಮತ್ತು ಈ ದೇಶದ ನಿರೀಕ್ಷೆಗಳೂ ಅಡಗಿವೆ.

ನಾನು ವಾಸವಿರುವ ಬೆಂಗಳೂರು ನಗರದ ವಿಚಾರವನ್ನೇ ಮಾತಾಡೋಣ. ಸುತ್ತಮುತ್ತಲ ಎಷ್ಟು ಮನೆಗಳು ಇನ್ನೂ ಖಾಲಿಯಿವೆ? ಎರಡು ವರ್ಷದ ಹಿಂದೆ ಒಂದು ಮನೆಗೆ ಎಷ್ಟು ಬಾಡಿಗೆ ಸಿಗುತ್ತಿತ್ತು? ಈಗ ಎಷ್ಟು ಸಿಗುತ್ತಿದೆ? ಮನೆಕೆಲಸಕ್ಕೆ ಜನರು ಮೊದಲಿನಂತೆಯೇ ಸಿಗುತ್ತಿದ್ದಾರಾ? ಸುಮ್ಮನೆ ಯೋಚಿಸಿ ನೋಡಿ, ಈ ಎಲ್ಲ ಪ್ರಶ್ನೆಗಳಿಗೂ ನಕಾರಾತ್ಮಕ ಉತ್ತರಗಳೇ ಸಿಗುತ್ತವೆ. ದೇಶದ ಇತರ ಮಹಾನಗರಗಳ ಪರಿಸ್ಥಿತಿ ಬೆಂಗಳೂರಿಗಿಂತ ಭಿನ್ನವಾಗಿಲ್ಲ.

ಈಗ ಮತ್ತೆ ಬಜೆಟ್ ವಿಚಾರಕ್ಕೆ ಬರೋಣ. ಜಿಡಿಪಿ ಕುಸಿದಿದೆ, ಅಭಿವೃದ್ಧಿ ಕೆಲಸಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ, ತೆರಿಗೆ ಸಂಗ್ರಹ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರಗಳು. ಕೇಂದ್ರ ಮತ್ತು ರಾಜ್ಯ ರಾಜ್ಯಸರ್ಕಾರಗಳ ಬೊಕ್ಕಸ ಬರಿದಾಗಿದೆ. ಆರ್ಥಿಕ ಸಮೀಕ್ಷೆ ಅಥವಾ ಇನ್ನೊಂದು ಮತ್ತೊಂದು ಶೀರ್ಷಿಕೆಗಳಲ್ಲಿ ಈಗಿನ ಸರ್ಕಾರಗಳು ಎಲ್ಲವೂ ಚೆನ್ನಾಗಿವೆ ಆಂತ ಅಂಕಿಅಂಶಗಳ ಆಟವಾಡಿ ಜನರನ್ನು ನಂಬಿಸಲು ಪ್ರಯತ್ನಪಡಬಹುದು. ನಿಜ ಏನು ಎಂಬುದು ಅವರಿಗೂ ಗೊತ್ತಿದೆ, ನಮಗೂ ಗೊತ್ತಿದೆ.

ಕಳೆದ ಆರ್ಥಿಕ ವರ್ಷದಲ್ಲಿ ದೇವರ ದಯೆಯಿಂದ ಮುಂಗಾರು, ಹಿಂಗಾರು ಮಳೆಗಳು ಚೆನ್ನಾಗಿ ಆಗಿವೆ. ಜಲಾಶಯಗಳು ಭರ್ತಿಯಾಗಿವೆ, ಒಳ್ಳೆಯ ಬೆಳೆ ಬಂದಿದೆ. ದೇಶದಲ್ಲಿ ಮೂರು ವರ್ಷಗಳಿಗೆ ಸಾಕಾಗುವಷ್ಟು ಆಹಾರ ಧಾನ್ಯಗಳ ಕಾಪು ದಾಸ್ತಾನು ಇದೆ. ಹೀಗಾಗಿ ನಮ್ಮ ದೇಶದ ಯಾರೊಬ್ಬರೂ ಹಸಿವಿನಿಂದ ಸಾಯುವ ಪರಿಸ್ಥಿತಿ ಬರುವುದಿಲ್ಲ.

ಈಗ ಮತ್ತೊಂದು ವಿಷಯಕ್ಕೆ ಬರೋಣ. ನಗರಗಳಲ್ಲಿ ನೆಲೆನಿಂತು ದುಡಿಯುತ್ತಿದ್ದವರು, ಕಾರ್ಖಾನೆಗಳಿಗೆ ಆಧಾರಸ್ತಂಭವಾಗಿದ್ದವರು ಹಳ್ಳಿಗಳಿಗೆ ಹೋಗಿದ್ದಾರೆ. ಒಂದು ಕುಟುಂಬದ ಅಣ್ಣತಮ್ಮಂದಿರ ಪೈಕಿ ಕೆಲವರು ನಗರಗಳಲ್ಲಿ ದುಡಿದರೆ ಕೆಲವರು ಹಳ್ಳಿಗಳಲ್ಲಿ ಇರುತ್ತಿದ್ದರು. ನಗರದಲ್ಲಿ ದುಡಿಯುವವರು ಕಳಿಸುತ್ತಿದ್ದ ಹಣದ ಆಸರೆ ಹಳ್ಳಿಗಳಲ್ಲಿದ್ದವರಿಗೆ ಸಿಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಹಳ್ಳಿಗಳ ಮೇಲೆ ಹೆಚ್ಚಿನ ಭಾರ ಬಿದ್ದಿದೆ. ದುಡಿಯುವ ಕೈಗಳು ಕೆಲಸಕ್ಕಾಗಿ ಕಾಯುತ್ತಿವೆ.

ಇದನ್ನೂ ಓದಿ: Explainer | ಬಜೆಟ್ ಅರ್ಥವಾಗಲು ಇವಿಷ್ಟೂ ಪದಗಳ ವಿವರ ನಿಮಗೆ ಗೊತ್ತಿರಬೇಕು

ದೇಶದ ಕೃಷಿ ಕ್ಷೇತ್ರದಲ್ಲಿ ಮಾತ್ರ ಆಶಾದಾಯಕ ಚೇತರಿಕೆ ಕಾಣಿಸುವ ಸಾಧ್ಯತೆಯಿದೆ ಎಂದು ಆರ್ಥಿಕ ಸಮೀಕ್ಷೆ 2021 ತಿಳಿಸಿದೆ.

ಹೊಸ ಯೋಜನೆ ಬೇಕಿಲ್ಲ
ಷೇರುಪೇಟೆ ಹೊರತುಪಡಿಸಿದರೆ ಉಳಿದ ಯಾವುದೇ ಕ್ಷೇತ್ರದಲ್ಲಿ ಉತ್ಸಾಹ-ಹುಮ್ಮಸ್ಸು ಕಾಣಿಸುತ್ತಿಲ್ಲ. ಷೇರುಪೇಟೆ ಖಂಡಿತ ನಮ್ಮ ಆರ್ಥಿಕ ಸ್ಥಿತಿಯ ನೈಜ ಪ್ರತಿಬಿಂಬವಾಗಿ ಉಳಿದಿಲ್ಲ. ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಹಣದಿಂದ ಸೂಚ್ಯಂಕಗಳು ವಿಜೃಂಭಿಸುತ್ತಿವೆ. ದೇಶದ ಪರಿಸ್ಥಿತಿ ತುಸುವೇ ಅಲುಗಾಡಿದರೂ ಇವರೆಲ್ಲರೂ ಇಲ್ಲಿಂದ ಹೂಡಿಕೆ ಹಣ ಹಿಂಪಡೆದು ತಮ್ಮ ದೇಶಗಳಿಗೆ ಓಡುತ್ತಾರೆ. ಇಂಥ ಸ್ಥಿತಿಯಲ್ಲಿ ಷೇರುಪೇಟೆ ಒಮ್ಮೆಲೆ ಕುಸಿದುಬೀಳುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

ಈ ವರ್ಷದ ಬಜೆಟ್ ಹೇಗಿರಬಹುದು? ಹೇಗಿರಬೇಕು ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳುವಾಗ ಮೇಲಿನ ಎಲ್ಲ ಅಂಶಗಳನ್ನೂ ಗಮನದಲ್ಲಿರಿಸಿಕೊಳ್ಳಬೇಕು. ಯಾವುದೇ ಪಕ್ಷಕ್ಕೆ ಸೇರಿದ ಸರ್ಕಾರವಿದ್ದರೂ ಇಂಥ ಸಂಕಷ್ಟ ಸ್ಥಿತಿಯಲ್ಲಿ ಮಂಡನೆಯಾಗುವ ಬಜೆಟ್​ನಲ್ಲಿ ಹೊಸ ತೆರಿಗೆಗಳು ನಿರೀಕ್ಷಿತ. ಆದಾಯ ತೆರಿಗೆಯಲ್ಲಿ ವಿನಾಯ್ತಿ ಬೇಕು ಎಂದು ನಿರೀಕ್ಷೆಯೇ ಅಪ್ರಸ್ತುತ. ಜನರ ಕೈಗೆ ಕೆಲಸ ಕೊಡುವ ಯೋಜನೆಗಳನ್ನು ಹೊರತುಪಡಿಸಿದ ಉಳಿದೆಲ್ಲಾ ಯೋಜನೆಗಳನ್ನು ಸರ್ಕಾರ ಈ ವರ್ಷ ಸ್ಥಗಿತಗೊಳಿಸಬೇಕು. ಅಭಿವೃದ್ಧಿ ಕಾಮಗಾರಿಗಳನ್ನು ಒಂದು ವರ್ಷ ತಡೆಹಿಡಿದರೆ ಏನೂ ಆಗುವುದಿಲ್ಲ, ಜನರ ಜೀವ-ಜೀವನ ಕಾಪಾಡುವುದೇ ಕೇಂದ್ರ ಸರ್ಕಾರದ ಆದ್ಯತೆಯಾಗಬೇಕು.

ಈ ವರ್ಷದ ಬಜೆಟ್ ಹೇಗಿರುತ್ತೆ ಎಂಬುದರ ಮೇಲೆ ನಮ್ಮ ಮುಂದಿನ ಮೂರ್ನಾಲ್ಕು ವರ್ಷಗಳ ಬದುಕು ನಿಂತಿದೆ. ಈ ಬಾರಿಯ ಬಜೆಟ್​ಗೆ ಕೇವಲ ಆರ್ಥಿಕ ಮತ್ತು ಸಾಮಾಜಿಕ ಆಯಾಮ ಮಾತ್ರವಲ್ಲ, ಸಮಾಜದ ಮಾನಸಿಕತೆಯಲ್ಲಿ ಉತ್ಸಾಹ ತುಂಬಬೇಕಾದ ಜರೂರತ್ತು ಇರುವ ಆಯಾಮವೂ ಇದೆ ಎಂಬುದನ್ನು ಮರೆಯಬಾರದು.

 

ಹಿರಿಯ ಪತ್ರಕರ್ತ ರಾಜಾ ಶೈಲೇಶ್​ಚಂದ್ರ ಗುಪ್ತ

 

Budget 2021 Explainer | ಆರ್ಥಿಕತೆ V-ಆಕಾರದಲ್ಲಿ ಚೇತರಿಸಿಕೊಳ್ಳುತ್ತಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ, ಅದರರ್ಥವೇನು?

Budget 2021 | ಕೃಷಿಯೊಂದೇ ಭರವಸೆ ಎನ್ನುತ್ತೆ Economic Survey

Budget 2021: ಬಜೆಟ್ ಮೊಬೈಲ್ ಆ್ಯಪ್​ನಲ್ಲಿ ಏನಿದೆ?

Published On - 12:51 pm, Sun, 31 January 21