ಬರೋಬ್ಬರಿ 16 ವರ್ಷಗಳ ಬಳಿಕ ಫಿನ್ಲ್ಯಾಂಡ್ ಪ್ರಧಾನಿ ಸನ್ನಾ ಮರಿನ್ ತನ್ನ ಪ್ರಿಯಕರನನ್ನ ವರಿಸಿದ್ದಾರೆ. ಕಳೆದ ಶನಿವಾರ ನಡೆದ ಸರಳ ವಿವಾಹ ಸಮಾರಂಭದಲ್ಲಿ 34 ವರ್ಷದ ಪ್ರಧಾನಿ ಮರಿನ್ ತನ್ನ ಬಹುದಿನಗಳ ಸಂಗಾತಿ ಹಾಗೂ ಮಾಜಿ ಫುಟ್ಬಾಲ್ ಆಟಗಾರ ಮಾರ್ಕಸ್ ರಾಯಿಕೋನೆನ್ರನ್ನ ವರಿಸಿದ್ದಾರೆ.
ವಿವಾಹದ ಬಳಿಕ ಮಾತನಾಡಿದ ಸನ್ನಾ ಮರಿನ್ ನಾನು ಪ್ರೀತಿಸಿದ ಪುರುಷನೊಟ್ಟಿಗೆ ಬದುಕು ಹಂಚಿಕೊಳ್ಳುವ ಅವಕಾಶ ದೊರೆತಿರುವುದು ಸಂತಸ ತಂದುಕೊಟ್ಟಿದೆ ಎಂದು ತಮ್ಮ ಸಂತೋಷವನ್ನ ವ್ಯಕ್ತಪಡಿಸಿದರು. ನಾನು ಹಾಗೂ ನನ್ನ ಬಾಳ ಸಂಗಾತಿ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನ ಕಂಡಿದ್ದೇವೆ. ಆದರೆ, ಈ ಪಯಣದಲ್ಲಿ ನನ್ನೊಟ್ಟಿಗೆ ಸದಾ ಇದ್ದ ಮಾರ್ಕಸ್ಗೆ ತುಂಬು ಹೃದಯದಿಂದ ಧನ್ಯವಾದ ಹೇಳುತ್ತೇನೆ ಎಂದರು.
ತಮ್ಮ 18 ನೇ ವಯಸ್ಸಿಗೇ ಪ್ರೀತಿಯಲ್ಲಿ ಬಿದ್ದ ಮರಿನ್ ಹಾಗೂ ಮಾರ್ಕಸ್ ಕಳೆದ 16 ವರ್ಷಗಳಿಂದ ಒಟ್ಟಾಗಿದ್ದಾರೆ. ಪ್ರೇಮ ಪಕ್ಷಿಗಳಿಗೆ ಮುದ್ದಾದ ಎರಡು ವರ್ಷದ ಹೆಣ್ಣುಮಗಳು ಸಹ ಇದ್ದಾಳೆ. ಕಳೆದ ಡಿಸೆಂಬರ್ನಲ್ಲಿ ದೇಶದ ಪ್ರಧಾನ ಮಂತ್ರಿಯಾದ ಮರಿನ್ ವಿಶ್ವದ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕೇವಲ 40 ಅತಿಥಿಗಳನ್ನ ಒಳಗೊಂಡ ಮದುವೆ ಸಮಾರಂಭದಲ್ಲಿ ಸನ್ನಾ ಮರೀನ್ ಆಕರ್ಷಕ ವೈಟ್ ಗೌನ್ ಧರಿಸಿದ್ದು ಮಾರ್ಕಸ್ ಟಕ್ಸೀಡೋದಲ್ಲಿ ಮಿಂಚುತ್ತಿದ್ದರು. ತಮ್ಮ ಅಧಿಕೃತ ನಿವಾಸದಲ್ಲಿ ನಡೆದ ವಿವಾಹದ ಫೋಟೋಗಳನ್ನ ದಂಪತಿ ಹಂಚಿಕೊಂಡಿದ್ದು ಹಸನ್ಮುಖಿ ದಂಪತಿಯ ಕ್ಯೂಟ್ ಫೋಟೋಗಳು ಇದೀಗ ಸಖತ್ ಟ್ರೆಂಡ್ ಆಗ್ತಿದೆ.