ದಾಂತೇವಾಡ: ಸೋದರ ಸೋದರಿಯರ ನಡುವಿನ ಬಾಂಧವ್ಯವನ್ನ ವೃದ್ಧಿಸುವ ಹಬ್ಬವೇ ರಕ್ಷಾ ಬಂಧನ. ಅಣ್ಣ ತಂಗಿಯರ ಈ ಬಂಧ ಜನುಮ ಜನುಮಗಳ ಅನುಬಂಧ ಅಂತಾ ತಿಳಿಹೇಳುವ ಈ ಹಬ್ಬದಂದು ತನ್ನ ಅಕ್ಕ ಅಥವಾ ತಂಗಿ ಕೇಳಿಕೊಂಡದ್ದನ್ನ ಈಡೇರಿಸಲು ಪ್ರತಿಯೊಬ್ಬ ಅಣ್ಣ ಅಥವಾ ತಮ್ಮ ಮುಂದಾಗುತ್ತಾನೆ. ಅಂತೆಯೇ, ರಕ್ಷಾ ಬಂಧನದ ಪ್ರಯುಕ್ತವಾಗಿ ತನ್ನ ತಂಗಿಯ ಮನವಿಗೆ ಓಗೊಟ್ಟಿ ಕುಖ್ಯಾತ ನಕ್ಸಲನೊಬ್ಬ ಪೊಲೀಸರಿಗೆ ಶರಣಾಗಿದ್ದಾನೆ.
8 ಲಕ್ಷ ರೂ ಇನಾಮ್ ಹೊಂದಿರುವ ಮಲ್ಲ
ಅಂದ ಹಾಗೆ, ಈ ಸ್ವಾರಸ್ಯಕರ ಪ್ರಸಂಗ ನಡೆದಿರುವುದು ಛತ್ತೀಸ್ಗಢ ರಾಜ್ಯದ ನಕ್ಸಲ ಪೀಡಿತ ಪ್ರದೇಶ ದಾಂತೇವಾಡದಲ್ಲಿ. ತನ್ನ ತಲೆ ಮೇಲೆ ಬರೋಬ್ಬರಿ 8 ಲಕ್ಷ ರೂಪಾಯಿ ಇನಾಮ್ ಹೊಂದಿರುವ ಮಲ್ಲ ಎಂಬ ಕುಖ್ಯಾತ ನಕ್ಸಲನೊಬ್ಬ ಇಂದು ರಕ್ಷಾ ಬಂಧನದ ಪ್ರಯುಕ್ತ ತಂಗಿಯ ಬಳಿ ರಾಖಿ ಕಟ್ಟಿಸಿಕೊಳ್ಳಲು ಬಂದಿದ್ದ. ಅಣ್ಣ ಕೈಗೆ ರಾಖಿ ಕಟ್ಟಿದ ತಂಗಿಗೆ ನಿನಗೆ ಏನು ಬೇಕು ಕೇಳು ಎಂದ ಮಲ್ಲನಿಗೆ ಆತನ ತಂಗಿ ಪೊಲೀಸರಿಗೆ ಶರಣಾಗಲು ಹೇಳಿದ್ದಾಳೆ.
ತಂಗಿ ಆಸೆಯನ್ನ ಈಡೇರಿಸೋಕೆ ಒಪ್ಪಿದ ಮಲ್ಲ ಅಂತೆಯೇ ಇಂದು ರಾಖಿ ಕಟ್ಟಿಸಿಕೊಂಡ ಬಳಿಕ ಖಾಕಿಗೆ ಶರಣಾಗಿದ್ದಾನೆ. ಪ್ರದೇಶದ ನಕ್ಸಲ್ ಉಪಮುಖ್ಯಸ್ಥನಾಗಿದ್ದ ಮಲ್ಲನ ಶರಣಾಗತಿ ಮಹತ್ತರವಾಗಿದ್ದು ಇದೀಗ ಅಲ್ಲಿನ ಹಿಂಸಾಚಾರವನ್ನ ತಗ್ಗಿಸುವಲ್ಲಿ ಸಹಕಾರಿಯಾಗಲಿದೆ ಎಂದು ಪೊಲೀಸ್ ಜಿಲ್ಲಾಧಿಕಾರಿ ತಿಳಿಸಿದ್ದಾರೆ.