ಗೋಕಾಕ ಫಾಲ್ಸ್ | Gokak Falls : ತುಂಬಾ ಚಿಕ್ಕ ವಯಸ್ಸಿನಲ್ಲಿ ನೋಡಿದ ‘ಯುದ್ಧಕಾಂಡ’ ಸಿನಿಮಾ ಇವತ್ತಿಗೂ ಕಾಡುತ್ತೆ. ನನ್ನನ್ನು ಕಟ್ಟಿ ಹಾಕಿದ್ದು ಆ ಸಿನಿಮಾದ ಹಾಡು, ನಟನೆ ಯಾವುದೂ ಅಲ್ಲ. ಒಬ್ಬ ನಿರಪರಾಧಿಗೆ ಗಲ್ಲು ಶಿಕ್ಷೆ ಆಗುವ ಆ ಒಂದು ಸಂಗತಿ ನನ್ನನ್ನು ಘಾಸಿಗೊಳಿಸುತ್ತದೆ. ಸಾವಿರ ಅಪರಾಧಿಗಳಿಗೆ ಶಿಕ್ಷೆ ಆಗದಿದ್ದರೂ ಪರವಾಗಿಲ್ಲ ಆದರೆ ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎಂಬ ಮಾತಿಗೆ ನನ್ನ ಪೂರ್ಣ ಸಮ್ಮತಿ ಇದೆ. ರಮೇಶ ಅರವಿಂದ ನಟನೆಯ ‘ಪುಷ್ಪಕ ವಿಮಾನ’ ಸಿನಿಮಾ ಕೂಡ ಇಂತಹದ್ದೇ ಕಥೆ ಹೊಂದಿದೆ. ಜೀವ ಹೋಗ್ತಾ ಇರೋ ತನ್ನ ಮಗಳ ವಯಸ್ಸಿನ ಚಿಕ್ಕ ಹುಡುಗಿಯ ಪ್ರಾಣ ಉಳಿಸೋಕೆ ಹೋಗಿ ರೇಪಿಸ್ಟ್ ಪಟ್ಟ ಕಟ್ಟಿಕೊಳ್ತಾನೆ ನಾಯಕ. ಆತನ ತಪ್ಪಿಲ್ಲ ಅಂತ ಗೊತ್ತಿದ್ರೂ ಅಧಿಕಾರ, ಹಣ, ಬೆದರಿಕೆಯಿಂದ ಅವನ ತಲೆಗೆ ಅಪರಾಧ ಪಟ್ಟ ಬಿದ್ದು ಗಲ್ಲಿಗೆ ಕತ್ತು ಕೊಡುತ್ತಾನೆ. ಒಬ್ಬ ಅಮಾಯಕ ತನ್ನದಲ್ಲದ ತಪ್ಪಿಗೆ ಜೀವ ಕಳೆದುಕೊಂಡ ಅಂದರೆ ಅದರ ಹೊಣೆ ಹೊರುವವರು ಯಾರು? ನಮ್ಮ ವ್ಯವಸ್ಥೆಯೇ? ಸಮಾಜವೇ?
ಸುಷ್ಮಾ ಸವಸುದ್ದಿ, ಪತ್ರಿಕೋದ್ಯಮ ವಿದ್ಯಾರ್ಥಿನಿ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ
(ಹರಿವು 18)
ಲಾಕ್ಡೌನ್ ಸಮಯದಲ್ಲಿ ಕಲಿಕೆಗೆ, ಮನರಂಜನೆಗೆ, ಹೊತ್ತು ಕಳೆಯಲು, ಪಕ್ಕದ ಮನೆಯವರ ಜೊತೆ ಮಾತಾಡಬೇಕೆಂದರೂ ಅದು ಮೊಬೈಲ್ ಮೂಲಕವೇ. ಈ ಸಮಯದಲ್ಲಿ ಮಕ್ಕಳು, ಯುವಕರು, ವಯಸ್ಕರು ಎಲ್ಲರನ್ನೂ ತನ್ನ ಮಾಯದ ಬಲೆಗೆ ಬೀಳಿಸಿಕೊಂಡಿದೆ ಎಂಬ ಅಪವಾದವನ್ನು ಮೊಬೈಲ್ ಹೊತ್ತಿದ್ದು ಹೆಚ್ಚು. ಮಕ್ಕಳಂತೂ ಆನಲೈನ್ ಕ್ಲಾಸ್ ಹೆಸರಲ್ಲಿ ಮೊಬೈಲ್ ಹಿಡಿದು ಹಾಳಾಗಿ ಹೋಗಿದ್ದಾರೆ ಎಂಬ ದೂರು ಸಾಮಾನ್ಯವಾಗಿತ್ತು. ಹೀಗಿರುವಾಗ 17 ವರ್ಷದ ಯುವಕನೊಬ್ಬ ತಾನಿರುವ ಅಪಾರ್ಟಮೆಂಟ್ ನ 11ನೇ ಪ್ಲೋರ್ ಇಂದ ಹಾರಿ ಜೀವ ಕಳೆದುಕೊಂಡಿದ್ದ. ಆಗ ಅವನ ಸಾವಿನ ಅಪವಾದವನ್ನು ಈ ಮೊಬೈಲ್ ಮತ್ತು ಅವನ ನೈತಿಕತೆ ಹೊತ್ತಿತ್ತು. Instagram ನ ಗ್ರೂಪ್ ಒಂದರಲ್ಲಿ ಕ್ಲಾಸಿನ ಹುಡುಗರು ಸೇರಿ ಹುಡುಗಿಯೊಬ್ಬಳ ಮೇಲೆ ಅತ್ಯಾಚಾರ ಮಾಡುವ ಕುರಿತು, ಹುಡುಗಿಯರ ಖಾಸಗಿತನದ ಬಗ್ಗೆ ಚರ್ಚೆ ನಡೆಸಿದ್ದರು.
ಹುಡುಗಿಯೊಬ್ಬಳನ್ನು ಅತ್ಯಾಚಾರ ಮಾಡಿದ ಅಪವಾದವು ಅವನ ಮೇಲಿತ್ತು. ಇದೆಲ್ಲ ಪೊಲೀಸರಿಗೆ ಗೊತ್ತಾದ ತಕ್ಷಣ ಆ ಹುಡುಗ ಆತ್ಮಹತ್ಯೆಗೆ ಶರಣಾದ ಎಂಬ ಸುದ್ದಿ ಪತ್ರಿಕೆಗಳಿಗೆ Lead News ಆದ್ರೆ ನ್ಯೂಸ್ ಚಾನಲ್ ಗೆ ಒಂದು Segment ಆಗಿತ್ತು. ಆನಲೈನ ಕ್ಲಾಸ್/ಆಫ್ಲೈನ್ ಕ್ಲಾಸ್ ಎಂಬ ಚರ್ಚೆಯಲ್ಲಿ ಆಫ್ಲೈನ್ ಕ್ಲಾಸನ್ನು ಸಮರ್ಥಿಸಲು, ಆನಲೈನ್ ಎಷ್ಟು ಡೇಂಜರ್ ಎಂದು ನಿರೂಪಿಸುವಾಗ ನಾನು ಈ ಸುದ್ದಿಯನ್ನು ನಿದರ್ಶನವಾಗಿ ತೆಗೆದುಕೊಂಡು ಲೇಖನ ಬರೆದು ಆನಲೈನ್ನಲ್ಲೇ ಬಹುಮಾನವನ್ನು ಪಡೆದಿದ್ದೆ. ಆಗಾಗ ಫೋನು, ಆನ್ಲೈನ್, ಮಕ್ಕಳು ಅಂದಾಗೆಲ್ಲ ಆ 11ನೇ ಫ್ಲೋರ್ನಿಂದ ಹಾರಿದವನ ಅಸ್ಪಷ್ಟ ಚಿತ್ರ ಕಣ್ಮುಂದೆ ಬರುತ್ತಿತ್ತು. ನೈತಿಕತೆಯ ಪ್ರಶ್ನೆ ಭುಗಿಲೆಬ್ಬಿಸುತ್ತಿತ್ತು. ಆದರೆ ಮೊನ್ನೆ ಸ್ನೇಹಿತರೊಬ್ಬರು ಫಾರ್ವರ್ಡ್ ಮಾಡಿದ್ದ ಸುದ್ದಿಯಿಂದ ಗೊತ್ತಾಯಿತು. ಅಲ್ಲಿ ಪ್ರಶ್ನೆ ಆನ್ಲೈನ್ನದ್ದಾಗಲಿ, ನೈತಿಕತೆಯದ್ದಾಗಲಿ ಇದ್ದಿರಲಿಲ್ಲ. ಸತ್ಯ ಮತ್ತು ಸುಳ್ಳಿನ ನಡುವೆಯದ್ದಾಗಿತ್ತು.
ಇದನ್ನೂ ಓದಿ : Gokak Falls: ಬಾಲ್ಯದ ಈ ಪಠ್ಯಪುಸ್ತಕಗಳೇ ನನ್ನಲ್ಲಿ ಮಾನವೀಯ ಪ್ರಜ್ಞೆ ಜಾಗೃತಗೊಳಿಸಿದ್ದು
ಅಸಲಿಗೆ ಅವನು ಯಾವ ಅಪರಾಧವನ್ನು ಮಾಡಿರಲಿಲ್ಲ. ಪೂರ್ಣ ತನಿಖೆಯ ಬಳಿಕ ತಿಳಿದುಬಂದಿದ್ದು, ಆ ಗ್ರೂಪನಲ್ಲಿ ಹುಡುಗಿಯೂ ಇದ್ದಳು. ಈ ಹುಡುಗರನ್ನು ಪರೀಕ್ಷಿಸಲು ಆಕೆಯೇ ಚಾಟ್ ಶುರು ಮಾಡುತ್ತಿದ್ದಳು. ಒಂದು ದಿನ ಆ ಹುಡುಗ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾಗಿ, ತನ್ನ ಬಳಿ ಅದಕ್ಕೆ ಯಾವುದೇ ಸಾಕ್ಷಿ ಇಲ್ಲ ಎಂದು ತನ್ನ ಸಾಮಾಜಿಕ ಜಾಲತಾಣದಲ್ಲಿ ಸ್ಟೋರಿ ಹಾಕಿದಳು. ಕ್ಷಣಾರ್ಧದಲ್ಲಿ ಆ ಪೋಸ್ಟ್ ಎಲ್ಲೆಡೆ ಹರಡಿತು. A lie can travel half way around the world while the truth is putting on its shoes ಎಂಬಂತೆ ಆತ ಅದು ನಾನಲ್ಲ, ನಾನೇನು ಮಾಡಿಲ್ಲ ಎಂದು ಗೋಗರೆದದ್ದು ಜಗತ್ತಿಗೆ ಕೇಳಲೇ ಇಲ್ಲ. ಆ ಹುಡುಗಿಯ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅವನಿಗೆ ಜೀವ ಬೆದರಿಕೆ ಬರಲು ಆರಂಭ ಆಯ್ತು. ಒತ್ತಡ ತಡೆಯೋಕೆ ಆಗದೇ ಆತ ಮೇಲಿಂದ ಹಾರಿದ. ಈ ಸುದ್ದಿಯ ಸತ್ಯಾಂಶ ವರ್ಷಗಳ ನಂತರ ಬೆಳಕಿಗೆ ಬಂತು.
ಹೈದರಾಬಾದಿನ ದಿಶಾ ಗ್ಯಾಂಗ್ ರೇಪ್ ಕೇಸ್ನಲ್ಲಿ ಸಿಕ್ಕಿಬಿದ್ದ ಆರೋಪಿಗಳನ್ನು ಪೊಲೀಸರು ಎನ್ ಕೌಂಟರ್ ಮಾಡಿ ಕೊಲ್ಲಲಾಗಿತ್ತು. ಅದು ಪೊಲೀಸರೇ ಉದ್ದೇಶಪೂರ್ವಕವಾಗಿ ಮಾಡಿದ್ದ ಎನ್ಕೌಂಟರ್ ಎಂದು ಸುಪ್ರೀಂ ಕೋರ್ಟ್ ಆಯೋಜಿಸಿದ್ದ ತನಿಖೆಯಿಂದ ತಿಳಿದುಬಂತು. ಕ್ಲಾಸಿನಲ್ಲಿ ಸರ್, ಒಮ್ಮೆ ಈ ಎನ್ಕೌಂಟರ್ ಬಗ್ಗೆ ನಿಮಗೇನು ಅನಿಸಿತ್ತು ಅಂದಾಗ ಎಲ್ಲರೂ ‘ಅದು ಒಳ್ಳೆಯದೇ ಹಾಗೆ ಮಾಡಿದಾಗ ಮಾತ್ರ ಬುದ್ದಿ ಬರುತ್ತೆ, ಕಿಡಿಗೇಡಿಗೆ ಭಯ ಇರುತ್ತೆ. ಕೋರ್ಟು ಕೇಸು ಅಂತ ಹೊರಟರೆ ವರ್ಷಗಟ್ಟಲೆ ಹೋಗುತ್ತೆ’ ಎಂದೇ ಅಭಿಪ್ರಾಯ ಕೊಟ್ಟರು. ‘ಒಂದು ವೇಳೆ ಆ ಆರೋಪಿ ನಿರಪರಾಧಿ ಆಗಿದ್ದರೆ? ಆರೋಪಿಯೆ ಅಪರಾಧಿ ಎಂದು ಹೇಗೆ ಹೇಳ್ತೀರಿ? ಕೋರ್ಟಿನ ವಿಚಾರಣೆಯ ನಂತರ ಮಾತ್ರ ಅಲ್ಲವೇ ಅವನು ಅಪರಾಧಿ, ನಿರಪರಾಧಿ ಎಂದು ತೀರ್ಮಾನಿಸುವುದು. ಪೊಲೀಸರೇ ಗುಂಡು ಹಾಕಿ ಕೊಲ್ಲುವುದಾದರೆ ಕಾನೂನು ವ್ಯವಸ್ಥೆ ಯಾಕಿರಬೇಕು?’ ಎಂಬ ಸರ್ ಮರುಪ್ರಶ್ನಿಸಿದಾಗ ಎಲ್ಲರೂ ಮೌನ ತಾಳಿದರು. ಹೌದಲ್ಲವೇ ಆರೋಪಿತನೆ ಅಪರಾಧಿ ಆಗಿರಬೇಕು ಎಂದೇನಿಲ್ಲ. ಅದು ಸುಳ್ಳು ಆರೋಪವೂ ಆಗಿರಬಹುದಲ್ಲವೆ?
ಯಾವುದೋ ಕೆಟ್ಟ ಘಳಿಗೆಯಲ್ಲಿ ನಡೆದ ಕೆಟ್ಟ ಘಟನೆಯ ಹೊಣೆ ಹೊತ್ತು ಸಾಕ್ಷಾಧಾರಗಳ ಕೊರತೆಯಿಂದ ಅಥವಾ ತಿರುಚುವಿಕೆಯಿಂದ ಕಾನೂನಿನ ಮುಂದೆ ಅಪರಾಧಿ ಎನಿಸಿ ಶಿಕ್ಷೆ ಅನುಭವಿಸುವರ ಕಥೆಗಳು ಇವಾದರೆ ದಿನವೂ ತನ್ನದಲ್ಲದ ತಪ್ಪಿಗೆ ಶಿಕ್ಷೆ ಎನಿಸುವವರ ಕಥೆಗಳು ಲೆಕ್ಕಕ್ಕೆ ಸಿಗದು. ಚರಿತ್ರೆಯಲ್ಲೂ ಇದಕ್ಕೆ ನಿದರ್ಶನಗಳಿವೆ. ಕರ್ಣ ಜೀವನದುದ್ದಕ್ಕೂ ನೋವು, ಅವಮಾನವನ್ನೇ ಉಂಡದ್ದು ಯಾರ ಅಪರಾಧಕ್ಕೆ? ಮಾಧವಿ ತನ್ನ ಯಾವ ತಪ್ಪಿಗೆ ಜೀವನದುದ್ದಕ್ಕೂ ಶಿಕ್ಷೆ ಅನುಭವಿಸಿದ್ದು?
ಇದನ್ನೂ ಓದಿ : Gokak Falls: ಅದೃಷ್ಟ ದುರಾದೃಷ್ಟಗಳ ನಡುವೆ ಹರಿಯುತ್ತಲೇ ಇರುವ ಘಟಪ್ರಭೆ
ತಂದೆ ತಾಯಿ ಒತ್ತಾಯಕ್ಕೆ ಓದುವ ಆಸೆ ಮರೆತು ಮದುವೆಯಾದ ಅವಳು, ಅನರ್ಹನ ಲಂಚದ ವಾಸನೆಗೆ ಕೆಲಸದಿಂದ ಹೊರಗುಳಿದ ಅವನು, ನಮ್ಮವರು ಎಂದು ನಂಬಿ ಕುತ್ತಿಗೆ ಕೊಯ್ಯಿಸಿಕೊಂಡ ಅವರು… ಯಾರದ್ದೋ ರಾಜಕೀಯ ಕಿತ್ತಾಟ, ಧರ್ಮಾಂಧತೆಗೆ ಬಲಿಯಾಗುತ್ತಿರುವ ಅಮಾಯಕರು… ಯಾವ ತಪ್ಪಿಗೆ, ಯಾರ ಅಪರಾಧದ ಶಿಕ್ಷೆಗೆ ಗುರಿಯಾದರು? ಯಾರು ಯಾರಿಗೆ ಹೊಣೆ ಇಲ್ಲಿ. ಯಾರು ಅಪರಾಧಿ? ಯಾರು ನಿರಪರಾಧಿ?
ಉದಯಪುರದ ಆ ಟೇಲರ್ ಬಲಿಯಾಗಿದ್ದು ಯಾವ ಅಪರಾಧಕ್ಕೆ? ಯಾರ ಅಪರಾಧಕ್ಕೆ? ಧರ್ಮದ ಮೇಲೆ ಹೋರಸಬೇಕಾ ಈ ಅಪರಾಧವನ್ನು? ಕೊಂದು ಉಳಿಸಿಕೊಳ್ಳಬೇಕಾದ ಧರ್ಮವಾದರೂ ಯಾವುದು? ಕ್ರೌರ್ಯವನ್ನು ಬೋಧಿಸುವ ಧರ್ಮವಾದರೂ ಯಾವುದು? ವಿಕೃತ ಮನಸ್ಸುಗಳಿಗೆ ಧರ್ಮದ ಹೆಸರಿನಲ್ಲಿ ಅಮಾಯಕರ ರಕ್ತ ಹರಿಸುವ ಖಯಾಲಿ ಇದ್ದಿರಬೇಕು. ನಿಜವಾಗಿಯೂ ತನ್ನ ಧರ್ಮವನ್ನು ಅರಿತವನು ಹೀಗೆ ಕ್ರೂರಿಯಾಗಲಾರ. ಧರ್ಮಾಂಧತೆಗೆ ಬಲಿಯಾದ ಅಮಾಯಕರ ಸಂಖ್ಯೆ ಲೆಕ್ಕಕ್ಕೆ ಸಿಗಬಹುದಾ? ಅವರೆಲ್ಲ ಯಾವ ತಪ್ಪಿಗೆ ಶಿಕ್ಷೆ ಅನುಭವಿಸಿದ್ದು? ದಯವೇ ಧರ್ಮದ ಮೂಲ ಎಂಬುವುದು ಅಲ್ಲವೇ ಎಲ್ಲ ಧರ್ಮದ ಒಳತಿರುಳು. ದಯ, ದಾನ, ಮಾನವೀಯತೆಯನ್ನು ಬೋಧಿಸುವ ಯಾವುದೇ ಧರ್ಮ ಹಿಂಸೆಯನ್ನು ಬೋಧಿಸುವುದಾದರೆ ಅಪರಾಧವನ್ನು ಆ ಧರ್ಮದ ತಲೆಗೆ ಕಟ್ಟಬೇಕಾ? ಅಥವಾ ಧರ್ಮದ ಹೆಸರಿನಲ್ಲಿ ಅಟ್ಟಹಾಸ ಮೆರೆಯುತ್ತಿರುವ ವಿಕಾರಗಳಿಗಾ? ಆದರೆ ಶಿಕ್ಷೆ ಮಾತ್ರ ಯಾವಾಗಲೂ ಸಾಮಾನ್ಯರಿಗೆ ಮತ್ತು ನಿರಪರಾಧಿಗಳ ಪಾಲಿಗೆ…
(ಮುಂದಿನ ಹರಿವು : 9.7.2022)
ಈ ಅಂಕಣದ ಎಲ್ಲ ಭಾಗಗಳನ್ನು ಓದಲು ಕ್ಲಿಕ್ ಮಾಡಿ
ಪ್ರತಿಕ್ರಿಯೆಗಾಗಿ : tv9kannadadigital@gmail.com
Published On - 1:56 pm, Wed, 29 June 22