ಬೆಂಗಳೂರು: ಹೊಸಕೆರೆಹಳ್ಳಿ ದತ್ತಾತ್ರೇಯನಗರದ ನೀಲಾವತಿ (ನೀಲಮ್ಮ) ಚೀಟಿ ಅವ್ಯವಹಾರದ ವಿಷಯ ನಿಮಗೆ ಗೊತ್ತಿರಬಹುದು. ಇದೀಗ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೋಸಹೋಗಿರುವವರ ಪರವಾಗಿ ನ್ಯಾಯಾಲಯದಲ್ಲಿ ಪ್ರಕರಣ ನಡೆಸಲು ವಕೀಲರು ಮುಂದೆ ಬಂದಿದ್ದಾರೆ ಎನ್ನುವುದು ಈವರೆಗಿನ ಮಾಹಿತಿ.
ಆದರೆ ನೀಲಮ್ಮನಿಗೆ ಹಣ ಕೊಟ್ಟು ಕಂಗಾಲಾದವರು ಸ್ಥಿತಿವಂತರಷ್ಟೇ ಅಲ್ಲ. ಹೊತ್ತುಹೊತ್ತಿನ ತುತ್ತು ಊಟಕ್ಕೂ ಪರದಾಡುವ ಸ್ಥಿತಿಯಲ್ಲಿರುವ ಎಷ್ಟೋ ಜನರು ನೀಲಮ್ಮನಿಗೆ ಪ್ರತಿತಿಂಗಳು ತಮ್ಮ ಉಳಿತಾಯದ ಹಣ ಕೊಡುತ್ತಿದ್ದರು. ಇದೀಗ ಆಗಿರುವ ಅನಾಹುತದಲ್ಲಿ ಇಂಥವರ ಹಲವು ತಲೆಮಾರುಗಳ ಭವಿಷ್ಯವೇ ಮಸುಕಾದಂತೆ ಆಗಿದೆ.
ಹೊಸಕೆರೆಹಳ್ಳಿ ದತ್ತಾತ್ರೇಯ ದೇವಸ್ಥಾನದ ಬಳಿಯ ಭಾಗ್ಯಮ್ಮ ಇಂಥವರ ಪೈಕಿ ಒಬ್ಬರು. ನೀಲಮ್ಮನ ಅವಾಂತರದಿಂದ ಒಂದೇ ಸಲಕ್ಕೆ ಕೂಡಿಟ್ಟ ಹಣ, ಮಗನ ಭವಿಷ್ಯ, ಗಂಡನ ನಂಬಿಕೆ ಎಲ್ಲವನ್ನೂ ಕಳೆದುಕೊಂಡಿರುವ ಭಾಗ್ಯಮ್ಮ ಈಗ ಕಂಗಾಲಾಗಿ ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ. ಮಕ್ಕಳನ್ನು ಮುಂದೆ ಓದಿಸುವುದು ಎಂಬ ಅವರ ಪ್ರಶ್ನೆಗೆ ಎಲ್ಲಿಯೂ ಉತ್ತರ ಸಿಗುತ್ತಿಲ್ಲ.
ಇದನ್ನೂ ಓದಿ: ಗಂಡ ಹೆಂಡತಿ ಚೀಟಿ ವ್ಯವಹಾರದಲ್ಲಿ ಖೋತಾ ಆಯ್ತು ಸಾರ್ವಜನಿಕರ ಹಣ!
ಉಳಿತಾಯ ಶುರು ಮಾಡಿದ್ದೇ ಮಕ್ಕಳ ಓದಿಗಾಗಿ
ಕಲಬುರ್ಗಿಯ ಗುಮ್ಚಿಯಿಂದ ಬೆಂಗಳೂರಿಗೆ 18 ವರ್ಷಗಳ ಹಿಂದೆ ಬಂದ ಭಾಗ್ಯಮ್ಮನಿಗೆ ನಗರ ಜೀವನದ ಬಗ್ಗೆ ಸಾಕಷ್ಟು ಕನಸುಗಳಿದ್ದವು. ಬಸವಕಲ್ಯಾಣದಲ್ಲಿ ಹುಟ್ಟಿಬೆಳೆದ ಆಕೆಯನ್ನು ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡುವ ಕಲಬುರ್ಗಿ ಗುಮ್ಚಿ ಮೂಲದ ಹುಡುಗ ಮದುವೆಯಾಗಿದ್ದ. ಎರಡೇ ವರ್ಷಕ್ಕೆ ಕೈಗೊಬ್ಬ ಮಗನೂ ಬಂದ. ಎರಡೆರೆಡುವ ವರ್ಷಗಳ ಅಂತರದಲ್ಲಿ ಮತ್ತೊಂದು ಗಂಡು, ಹೆಣ್ಣುಮಕ್ಕಳಾದವು.
ಗಂಡನ ಸಂಪಾದನೆಯಲ್ಲಿ ಮನೆ ನಡೆಸಿ, ಬಾಡಿಗೆ ಕಟ್ಟುವುದೇ ಕಷ್ಟವಾತ್ತು. ಅನಿವಾರ್ಯವಾಗಿ ಭಾಗ್ಯಮ್ಮನೂ ಕೆಲಸಕ್ಕೆ ಕೈಹಚ್ಚಿದರು.
ಅವರ ಮನೆ ಹತ್ತಿರವೇ ದಿನಕ್ಕೆ ₹ 200ರಂತೆ ಕೂಲಿ ಸಿಗುವ ಕೆಲಸವೊಂದನ್ನು ಹುಡುಕಿಕೊಂಡರು. ಬೆಳಿಗ್ಗೆ 6ರಿಂದ 8, 11ರಿಂದ 1, ಸಂಜೆ 4ರಿಂದ 6 ಎಂಬ ಕೆಲಸದ ಸಮಯ ಭಾಗ್ಯಮ್ಮನಿಗೆ ಅನುಕೂಲವಾಗಿತ್ತು. ಅದೇ ಮನೆಯವರು ಮಗನ ವಿದ್ಯಾಭ್ಯಾಸಕ್ಕೂ ನೆರವಾಗುತ್ತಿದ್ದರು. ಮೊದಲ ಮಗ ಹೈಸ್ಕೂಲ್ಗೆ ಬಂದಾಗ ಭಾಗ್ಯಮ್ಮನಿಗೆ ಯಾರೋ ಒಬ್ಬರು ಮಕ್ಕಳನ್ನು ಕಾಲೇಜು ಓದಿಸಲು ಇರುವ ಕಷ್ಟದ ಬಗ್ಗೆ ತಿಳಿಹೇಳಿ, ಈಗಿನಿಂದ್ಲೇ ಅಷ್ಟೋಇಷ್ಟೋ ದುಡ್ಡು ಉಳಿಸಿಕೊ ಎಂದು ಸಲಹೆ ನೀಡಿದರು. ಅಷ್ಟು ಬುದ್ಧಿ ಹೇಳಿದವರು ಎಂಥ ಕಡೆ ಉಳಿತಾಯದ ದುಡ್ಡು ಎಲ್ಲಿ ಇರಿಸಬೇಕು ಎಂಬುದನ್ನು ಮಾತ್ರ ಹೇಳಿರಲಿಲ್ಲ.
ಹೊಸಕೆರೆಹಳ್ಳಿ ದತ್ತಾತ್ರೇಯ ದೇವಸ್ಥಾನದ ಅಕ್ಕಪಕ್ಕ ಇರುವ ಇತರ ಮಹಿಳೆಯರಂತೆ ಭಾಗ್ಯಮ್ಮನೂ ನೀಲಾವತಿ (ನೀಲಮ್ಮ) ಬಳಿ ‘ಷೇರು’ ಕೊಳ್ಳಲು ಪ್ರತಿತಿಂಗಳೂ ಒಂದು ಸಾವಿರ ರೂಪಾಯಿ ಹಣ ಕಟ್ಟಲು ಶುರು ಮಾಡಿದರು. ಇದರ ಜೊತೆಗೆ ಯಾವುದೋ ಖಾಸಗಿ ಫೈನಾನ್ಸ್ನಲ್ಲಿ ಪಿಗ್ಮಿ ಮಾಡಿಕೊಡ್ತೀನಿ ಅಂತ ಬಂದವನಿಗೆ ಪ್ರತಿದಿನ ಅಷ್ಟೋಇಷ್ಟೋ ಹಣವನ್ನೂ ಕೊಟ್ಟು ಒಂದು ಚೀಟಿಯಲ್ಲಿ ಬರೆಸಿಕೊಳ್ಳುತ್ತಿದ್ದರು.
ಮಗನ ಮೂರು ವರ್ಷ ಹೈಸ್ಕೂಲ್ ಮುಗಿಸುವ ಹೊತ್ತಿಗೆ ಕೈಗಿಷ್ಟು ಹಣ ಸಿಕ್ರೆ ಕಾಲೇಜಿಗೆ ಸೇರಿಸಬೇಕು ಎನ್ನುವುದು ಭಾಗ್ಯಮ್ಮನ ಕನಸಾಗಿತ್ತು. ಅದಕ್ಕೆ ತಕ್ಕಂತೆ ನೀಲಮ್ಮನೂ, ‘ನೀನು ಮೂರು ವರ್ಷ ಪ್ರತಿತಿಂಗಳು 1000 ರೂಪಾಯಿ ಕೊಟ್ರೆ, 36 ಸಾವಿರವಾಗುತ್ತೆ. ನಾನು ಬಡ್ಡಿ ಸೇರಿಸಿ ನಿನ್ನ ಕೈಗೆ ಒಂದೇ ಸಲಕ್ಕೆ 60 ಸಾವಿರ ಕೊಡ್ತೀನಿ’ ಎಂದು ಭರವಸೆ ಕೊಟ್ಟಿದ್ದಳು.
ಭಾಗ್ಯಮ್ಮ ಪಿಗ್ಮಿ-ಚೀಟಿ ಕಟ್ಟಿದ್ದಕ್ಕೆ ಇರುವುದು ಇಷ್ಟೇ ದಾಖಲೆ.
ನೀಲಮ್ಮನ ಬಂಧನ: ಭಾಗ್ಯಮ್ಮ ಕಂಗಾಲು
ಹೊಸಕೆರೆಹಳ್ಳಿ ದತ್ತಾತ್ರೇಯನಗರದಲ್ಲಿ ಸ್ವಂತ ಮನೆಹೊಂದಿದ್ದ ನೀಲಮ್ಮ, ಆಕೆಯ ಪತಿ ಜ್ಞಾನೇಶ್ ಮತ್ತು ಪುತ್ರ ಈಚೆಗೆ ಮನೆ ಮಾರಿ ನಾಪತ್ತೆಯಾಗಿದ್ದರು. ಎರಡು ತಿಂಗಳ ಹಿಂದಷ್ಟೇ ಸುರಿದಿದ್ದ ಭಾರಿ ಮಳೆಯಿಂದ ಮಗನ ಪಠ್ಯಪುಸ್ತಕ, ಬ್ಯಾಗ್ ಸಹಿತ ತನ್ನದೆಲ್ಲವೂ ಎಲ್ಲವನ್ನೂ ಕಳೆದುಕೊಂಡಿದ್ದ ಭಾಗ್ಯಮ್ಮ ಈಗ ಅಕ್ಷರಶಃ ಕಂಗಾಲಾದರು. ಏನು ಮಾಡಲೂ ತೋಚಲಿಲ್ಲ. ಆ ಏರಿಯಾ ಇತರರಂತೆ ತಾನೂ ಗಿರಿನಗರ ಪೊಲೀಸ್ ಠಾಣೆಗೆ ಓಡಿ ದೂರು ದಾಖಲಿಸಿದರು. ಆದರೆ ಅಷ್ಟೊತ್ತಿಗೆ ಭಾಗ್ಯಮ್ಮನಂಥ ನೂರಾರು ಮಂದಿ ಅಲ್ಲಿಗೆ ಬಂದಿದ್ದರು.
ಮಗನನ್ನು ಓದಿಸುವ ಆಸೆಯಿಂದ ಹೊಟ್ಟೆಬಟ್ಟೆ ಕಟ್ಟಿ ಕೂಡಿಟ್ಟ ಹಣ ನಾಪತ್ತೆಯಾದ ದುಃಖ ಒಂದೆಡೆ, ಗಂಡನಿಗೆ ವಿಷಯ ತಿಳಿದರೆ ಬಂದು ಬಡಿಯುತ್ತಾನೆಂಬ ಭಯ ಮತ್ತೊಂದೆಡೆ. ದೂರು ಪಡೆದುಕೊಂಡ ಪೊಲೀಸರು ಧೈರ್ಯದ ಮಾತು ಹೇಳಿ ಮನೆಗೆ ಕಳಿಸಿದರು. ಮನೆಯಲ್ಲಿ ಅಂದುಕೊಂಡಂತೆ ರಂಪರಾದ್ಧಾಂತ ಶುರುವಾಗಿತ್ತು.
‘ಸ್ವಾಮಿಯವರ ಮನೆಗೆ ಕೆಲಸಕ್ಕೆ ಹೋಗ್ತೀನಿ, ದಿನಕ್ಕೆ ₹ 200 ಕೂಲಿ’ ಅಂತಷ್ಟೇ ಭಾಗ್ಯಮ್ಮ ಗಂಡನಿಗೆ ಹೇಳಿದ್ದಿದು. ಸ್ವಾಮಿಯವರ ಮನೆ ಕೆಲಸಕ್ಕೆ ಬರುವ ಮೊದಲು ಮತ್ತು ಅಲ್ಲಿ ಕೆಲಸ ಮುಗಿಸಿ ಮನೆಗೆ ಹೋಗುವ ಮೊದಲು ಇನ್ನೆರೆಡು ಕಡೆ ಕೆಲಸ ಮಾಡುತ್ತಿದ್ದ ವಿಷಯವನ್ನು ಗಂಡನಿಂದ ಮುಚ್ಚಿಟ್ಟಿದ್ದಳು. ಗಂಡನಿಗೆ ಗೊತ್ತಾದರೆ ಆ ದುಡ್ಡೂ ಉಳಿಯದಂತೆ ಆದೀತು ಎಂಬ ಭಯ ಒಂದು ಕಡೆ, ಮಕ್ಕಳು ನಮ್ಮಂತೆ ಕಷ್ಟಪಡಬಾರದು, ಅವರನ್ನು ಚೆನ್ನಾಗಿ ಓದಿಸಿ ಎಲ್ಲಿಯಾದರೂ ಕೆಲಸಕ್ಕೆ ಸೇರಿಸಬೇಕೆಂಬ ಆಸೆ ಮತ್ತೊಂದು ಕಡೆ.
ಆದರೆ ಈಗ ಇಂಥ ಗುಟ್ಟುಗಳು ಈಗ ರಟ್ಟಾಗಿವೆ. ಮಾತ್ರವಲ್ಲ, ಆಕೆಯ ಮಕ್ಕಳ ಭವಿಷ್ಯವೂ ಮಂಕಾಗಿವೆ.
ನೀರು ನುಗ್ಗಿತ್ತು
ಭಾರಿ ಮಳೆಯಿಂದಾಗಿ ಈಚೆಗಷ್ಟೇ ಹೊಸಕೆರೆಹಳ್ಳಿಯ ರಸ್ತೆಗಳ ಮೇಲೆ 8 ಅಡಿ ನೀರು ಹರಿದ ವಿಷಯ ನಿಮಗೆ ನೆನಪಿರಬಹುದು. ಈ ಮಳೆ ನೀರಿನಲ್ಲಿ ಭಾಗ್ಯಮ್ಮನ ಶೀಟ್ ಮನೆಯೂ ಮುಳುಗಿತ್ತು. ಅವರ ಬಟ್ಟೆ-ಬರೆಗಳು ಹಾಗಿರಲಿ, ಮಕ್ಕಳ ಆನ್ಲೈನ್ ಕ್ಲಾಸ್ಗೆಂದು ಕೊಡಿಸಿದ್ದ ಮೊಬೈಲ್, ಪಠ್ಯಪುಸ್ತಕಗಳು, ಬ್ಯಾಗುಗಳೂ ಹಾಳಾಗಿದ್ದವು. ಅದರಿಂದ ಚೇತರಿಸಿಕೊಳ್ಳುವ ಮೊದಲೇ ನೀಲಮ್ಮನ ರೂಪದಲ್ಲಿ ಮತ್ತೊಂದು ಚಂಡಮಾರುತ ಭಾಗ್ಯಮ್ಮನ ಮಕ್ಕಳ ಭವಿಷ್ಯದ ಮೇಲೆ ಕಾರ್ಮೋಡ ಕವಿಯುವಂತೆ ಮಾಡಿದೆ.
ಮೂರು ವರ್ಷಗಳಿಂದ ಪಿಗ್ಮಿ ಕಟ್ಟಿಸಿಕೊಂಡಿದ್ದವನೂ ಇದೀಗ ಹೊಸಕೆರೆಹಳ್ಳಿಯಲ್ಲಿ ಮನೆ ಖಾಲಿ ಮಾಡಿಕೊಂಡು ನಾಪತ್ತೆಯಾಗಿದ್ದಾನೆ. ಆ ಹಣವೂ ಕೈಗೆ ಸಿಗುತ್ತೋ ಇಲ್ವೋ ಗೊತ್ತಿಲ್ಲ ಎಂದು ಅಳುತ್ತಾರೆ ಭಾಗ್ಯಮ್ಮ.
ಮನೆಗೆ ನೀರು ನುಗ್ಗಿದ್ದರಿಂದ ಹಾಳಾದ ಮಕ್ಕಳ ಶೂ-ಯೂನಿಫಾರ್ಮ್ ತೋರಿಸುತ್ತಿರುವ ಭಾಗ್ಯಮ್ಮ
ಒಬ್ಬರ ಕಥೆಯಲ್ಲ
ಹೊಸಕೆರೆಹಳ್ಳಿ ದತ್ತಾತ್ರೇಯ ದೇವಸ್ಥಾನದ ಸುತ್ತಮುತ್ತ ಓಡಾಡಿದರೆ ಇಂಥ ಹತ್ತಾರು ಮಂದಿ ಸಿಗುತ್ತಾರೆ. ಹೆಂಡತಿಯ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಆಗಿ ಒಡವೆ ಕೊಡಿಸಬೇಕೆಂದು ಹಣ ಕೂಡಿಟ್ಟಿದ್ದ ಗಂಡ, ಮಗುವಿನ ಆಪರೇಷನ್ಗೆಂದು ಹಣ ಒಟ್ಟು ಮಾಡುತ್ತಿದ್ದ ದಂಪತಿ, ಒಂದು ದಿನಕ್ಕೆ ಅರ್ಧ ಲೀಟರ್ ಹಾಲು ಕೊಳ್ಳೋದು ಕಡಿಮೆ ಮಾಡಿದ್ರೆ ತಿಂಗಳಿಗೆ 600 ರೂಪಾಯಿ ಉಳಿಸಿ ಮಕ್ಕಳ ಭವಿಷ್ಯಕ್ಕೆ ಎತ್ತಿಡಬಹುದು ಎಂದುಕೊಂಡಿದ್ದ ದಿನಗೂಲಿ ಕೆಲಸದವರು… ಹೀಗೆ ಒಬ್ಬೊಬ್ಬರ ಕಥೆಯೂ ನೋವಿನ ಗೂಡು.
‘ಅದು ನಾನು ಹೊಟ್ಟೆಬಟ್ಟೆ ಕಟ್ಟಿ ಉಳಿಸಿದ್ದ ದುಡ್ಡು ಸ್ವಾಮಿ, ಮಕ್ಕಳಿಗೂ ಕೇಳಿದ್ದು ಮಾಡಿಕೊಟ್ಟಿರಲಿಲ್ಲ, ಮಕ್ಕಳನ್ನು ಚೆನ್ನಾಗಿ ಓದಿಸಬೇಕು ಅಂತ ಆಸೆಕಟ್ಕೊಂಡಿದ್ದೆ. ಈಗ ಏನಾಗುತ್ತೋ ಏನೋ? ಅವರ ಓದಿಗೊಂದು ವ್ಯವಸ್ಥೆ ಮಾಡಿದ್ರೆ ಸಾಕು. ಪೊಲೀಸ್ನವರಿಗೆ, ಕಾರ್ಪೊರೇಟರ್ಗೆ, ಮುಖ್ಯಮಂತ್ರಿಗೆ ಎಲ್ಲರಿಗೂ ನಮಸ್ಕಾರ ಮಾಡಿಬಿಟ್ತೀನಿ’ ಎಂದು ಅಳುವ ಭಾಗ್ಯಮ್ಮ ಇವರೆಲ್ಲರ ಪ್ರತಿನಿಧಿಯಂತೆ ಕಾಣುತ್ತಾರೆ.
ಭಾಗ್ಯಮ್ಮನ ಮಕ್ಕಳ ಓದಿಗೆ ನೆರವಾಗುವ ಇಚ್ಛೆಯಿದ್ದರೆ – 82770 06201 ಮೊಬೈಲ್ ಸಂಖ್ಯೆ ಸಂಪರ್ಕಿಸಬಹುದು.
ಅವರಿವರ ಹತ್ತಿರ ಚೀಟಿ ಹಾಕುವ ಮೊದಲು, ಗುರುತು ಪರಿಚಯ ಇಲ್ಲವರ ಹತ್ತಿರ ಪಿಗ್ಮಿ ಶುರು ಮಾಡುವ ಮೊದಲು ಭಾಗ್ಯಮ್ಮನ ಕಥೆ ನಿಮಗೆ ನೆನಪಾಗಲಿ. ಭಾಗ್ಯಮ್ಮನ ಪರಿಸ್ಥಿತಿ ಯಾರಿಗೂ ಬರದಿರಲಿ.
Published On - 1:23 pm, Fri, 18 December 20