ವಿಯೆಟ್ನಾಂ ಯೋಗ: ಬುದ್ಧನ ನಾಡಲ್ಲಿ ಯೋಗ ಕಲಿಸುವ ಕರ್ನಾಟಕದ ಯೋಗ ಶಿಕ್ಷಕರು ಬರೆಯುತ್ತಾರೆ..

| Updated By: guruganesh bhat

Updated on: Jun 27, 2021 | 8:03 AM

ಇಂತಹದ್ದೊಂದು ಯೋಗಾಸನವನ್ನು ಕಲಿಯಬೇಕು ಎನ್ನುವುದು ಮನಸ್ಸಿನಲ್ಲಿ ಮೂಡಿದರೆ, ಹೇಗಾದರೂ ಸರಿಯೇ ಅದನ್ನು ಕಲಿಯುತ್ತಾರೆ. 60 ವಯಸ್ಸು ಮೀರಿದ ಸ್ತ್ರೀಯರು ಕೂಡ 20ರ ಮಹಿಳೆ ಯೋಗಾಭ್ಯಾಸ ಮಾಡುವಂತೆ ಅಭ್ಯಾಸ ಮಾಡುತ್ತಾರೆ.

ವಿಯೆಟ್ನಾಂ ಯೋಗ:  ಬುದ್ಧನ ನಾಡಲ್ಲಿ ಯೋಗ ಕಲಿಸುವ ಕರ್ನಾಟಕದ ಯೋಗ ಶಿಕ್ಷಕರು ಬರೆಯುತ್ತಾರೆ..
ನಾಗೇಂದ್ರ ಗದ್ದೆಮನೆ
Follow us on

ಯೋಗ ಭಾರತೀಯ ಮೂಲದ್ದು ಎಂಬುದು  ಪ್ರಚುರವಾದ ಸಂಗತಿ. ಇತರ ದೇಶಗಳಲ್ಲಿಯೂ ಯೋಗಕ್ಕೆ ಈಗ ಬಹು ಮಾನ್ಯತೆಯಿದೆ.  ದೂರದ ವಿಯೆಟ್ನಾಂ ದೇಶದಲ್ಲಿ ಯೋಗ ಶಿಕ್ಷಕರಾಗಿರುವ ಉತ್ತರ ಕನ್ನಡದ ಸಿದ್ದಾಪುರದ ನಾಗೇಂದ್ರ ಗದ್ದೆಮನೆ ಅವರು ’ವಿಯೆಟ್ನಾಂನಲ್ಲಿ ಯೋಗ’ದ ಕುರಿತು ಟಿವಿ9 ಕನ್ನಡ ಡಿಜಿಟಲ್ ಜತೆ ಹಂಚಿಕೊಂಡಿದ್ದಾರೆ. ಮುಂದೆ ಓದುವ ‘ಸುಂದರ ಯೋಗ’ ನಿಮ್ಮದು.

‘ಯೋಗ’ ಎಂಬ ಪದವನ್ನು ಕೇಳಿದಾಕ್ಷಣ ಹಲವರ ಮನಸ್ಸಿಗೆ ಮೊದಲು ತೋಚುವುದೇ ಋಷಿ-ಮುನಿಗಳು, ಸಾಧಕರ ಕಲ್ಪನೆ. ಯೋಗ ಎಂದರೆ ಒಂದು ಧರ್ಮಕ್ಕೆ ಸೀಮಿತವಾದದ್ದು ಎನ್ನುವುದರಿಂದ, ಯೋಗ ಎಂದರೆ ಒಂದು ನಿರ್ದಿಷ್ಟ ರಾಷ್ಟ್ರದ ಸ್ವತ್ತು ಎಂಬಲ್ಲಿಂದ, ಇತ್ತೀಚಿಗಷ್ಟೇ ಯೋಗ ಎಂದರೆ ಧರ್ಮಾತೀತ, ಸೀಮಾತೀತ, ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಗೂ ಸಂಬಂಧಿಸಿದ್ದು ಎನ್ನುವ ಅರಿವಾಗಿ ಪ್ರಪಂಚದಾದ್ಯಂತ ಸ್ವೀಕರಿಸಿ, ಅಭ್ಯಸಿಸಲ್ಪಡುತ್ತಿದೆ. ಜಗತ್ತಿನ ಹಲವಾರು ರಾಷ್ಟ್ರಗಳು ಯೋಗವನ್ನು ಸ್ವೀಕರಿಸಿವೆ, ಅವುಗಳಲ್ಲಿ ವಿಯೆಟ್ನಾಂ ಎಂಬ ಪುಟ್ಟ, ಸುಂದರ ರಾಷ್ಟ್ರ ಕೂಡ ಒಂದು.

ವಿಯೆಟ್ನಾಂಗೆ ಯೋಗದ ಪರಿಚಯವಾಗಿ ಹಲವಾರು ವರ್ಷಗಳಾದರೂ ಅತಿಹೆಚ್ಚು ಪ್ರಸಿದ್ಧಿಗೆ ಬಂದದ್ದು ಈಗೊಂದು 20 ವರ್ಷಗಳಿಂದ. ಇಲ್ಲಿಯ ಜನರು ಸ್ವಭಾವತಃ ಬಹಳ ಸಹೃದಯಿಗಳು, ಸಹಾಯ ಮನೋಭಾವವುಳ್ಳವರು, ಪರಿಶ್ರಮಿಗಳು. ದಿನವಿಡೀ ಕಷ್ಟಪಟ್ಟು ದುಡಿಯುವುದು, ನಂತರ ದಿನಾಂತ್ಯಕ್ಕೆ ಸಂಸಾರ ಸಮೇತರಾಗಿ ಹೊರಗಡೆ ಹೋಗಿ ಊಟ, ಮೋಜುಮಾಡಿ ಕಾಲಕಳೆಯುವುದು. ಶ್ರೀಮಂತರೇ ಇರಲಿ, ಬಡವರೇ ಇರಲಿ ಒಂದೇ ಉದ್ಯೋಗವನ್ನು ನಂಬಿ ಜೀವನವನ್ನು ನಡೆಸುವುದಿಲ್ಲ. ಕೆಲಸ ಯಾವುದಾದರೂ ಸರಿ, ಅವರ ಸಾಮಾಜಿಕ ಅಂತಸ್ತು, ಮರ್ಯಾದೆ ಇಂತವುಗಳ ಬಗ್ಗೆ ಚಿಂತಿಸುವುದಿಲ್ಲ. ಎಂತಹ ಶ್ರೀಮಂತರೂ ಕೂಡ ಕಡಿಮೆ ಸಂಬಳ ಬರುವ ಅಥವಾ ಕೆಳದರ್ಜೆಯ ಕೆಲಸಕ್ಕೂ ಸಿದ್ಧರಿರುತ್ತಾರೆ. ಅವರು ಜೀವನದ ಮೌಲ್ಯ ಚೆನ್ನಾಗಿ ಅರ್ಥೈಸಿಕೊಂಡಿದ್ದಾರೆ. ಒಂದು ಅಚ್ಚರಿಯ ಸಂಗತಿ ನಿಮಗೆ ಗೊತ್ತೇ? ವಿಯೆಟ್ನಾಂ ಪ್ರಜೆಗಳು 14- 15 ನೇ ವಯಸ್ಸಿಗೆ ತಮ್ಮ ದಿನನಿತ್ಯದ ಜೀವನಕ್ಕೆ ಅವಶ್ಯಕವಾಗುವಷ್ಟು ಹಣವನ್ನು ಸಂಪಾದಿಸಿಕೊಳ್ಳುತ್ತಾರೆ. ಎಷ್ಟೇ ಕಾರ್ಯನಿರತರಾಗಿದ್ದರೂ ಪ್ರತಿದಿನವೂ ದೇಹ ಹಾಗೂ ಮನಸ್ಸಿಗಾಗಿ ಕನಿಷ್ಟಪಕ್ಷ ಒಂದು ಗಂಟೆಯನ್ನಾದರೂ ಮೀಸಲಿಡುತ್ತಾರೆ.

ಇವರಿಗೆ ಯೋಗದಲ್ಲಿ ಬಹಳ ಆಸಕ್ತಿ. ‘Age is just a number’ ಎನ್ನುವುದನ್ನು ಇವರನ್ನು ನೋಡಿಯೇ ಹೇಳಿದ್ದಿರಬೇಕು. ಹೊಸ ವಿಷಯಗಳನ್ನು ಕಲಿಯಲು ಸದಾ ಉತ್ಸುಕರಾಗಿರುತ್ತಾರೆ. ತಮ್ಮ ವಯಸ್ಸಿನ ಅಥವಾ ದೇಹದ ಸಮಸ್ಯೆಯ ಬಗ್ಗೆ ಚಿಂತಿಸುವುದಿಲ್ಲ. ಇಂತಹದ್ದೊಂದು ಯೋಗಾಸನವನ್ನು ಕಲಿಯಬೇಕು ಎನ್ನುವುದು ಮನಸ್ಸಿನಲ್ಲಿ ಮೂಡಿದರೆ, ಹೇಗಾದರೂ ಸರಿಯೇ ಅದನ್ನು ಕಲಿಯುತ್ತಾರೆ. 60 ವಯಸ್ಸು ಮೀರಿದ ಸ್ತ್ರೀಯರು ಕೂಡ 20ರ ಮಹಿಳೆ ಯೋಗಾಭ್ಯಾಸ ಮಾಡುವಂತೆ ಅಭ್ಯಾಸ ಮಾಡುತ್ತಾರೆ.

ಯೋಗ ದಿನಚರಿಯೇ ಆಗಿಹೋಗಿದೆ..
ದಿನದಲ್ಲಿ ಕನಿಷ್ಟ ಒಂದು ಗಂಟೆ ಯೋಗಾಭ್ಯಾಸ ಮಾಡಿಲ್ಲವೆಂದಾದರೆ ಏನೋ ಕಳೆದುಕೊಂಡ ಹಾಗೆ ಭಾವನೆ ಅವರಿಗೆ. ಅದಾದ ನಂತರ ಯೋಗಾಭ್ಯಾಸಕ್ಕೆ ಬರುವ ಸ್ನೇಹಿತರೊಂದಿಗೆ ಸಂಭಾಷಣೆ, ಇವು ಅವರ ಕೆಲಸದೊತ್ತಡ, ಕುಟುಂಬ ಸಮಸ್ಯೆ ಇಂತವುಗಳಿಂದ ದೂರಮಾಡಿ ಮನ:ಶಾಂತಿ ಒದಗಿಸುತ್ತವೆ. ಭಾರತೀಯ ಯೋಗ ಶಿಕ್ಷಕರೆಂದರೆ ಇವರಿಗೆ ಗೌರವ,ಅಚ್ಚು-ಮೆಚ್ಚು. ತಮ್ಮ ಸ್ವಂತ ಮಕ್ಕಳಂತೆ, ಅಣ್ಣ-ತಮ್ಮಂದಿರಂತೆ ನಡೆಸಿಕೊಳ್ಳುತ್ತಾರೆ. ಯೋಗಾಭ್ಯಾಸವು ಇಲ್ಲಿಯ ಜನಜೀವನದ ಒಂದು ಸಹಜ ಭಾಗವೇ ಆಗಿಹೋಗಿದೆ. ಈಗೀಗ ಕೊವಿಡ್ ವಿಯೆಟ್ನಾಂ ಲಿ ಹೆಚ್ಚಾಗುತ್ತಿದೆ, ಎಲ್ಲ ಯೋಗಕೇಂದ್ರಗಳು ಸದ್ಯಕ್ಕೆ ಮುಚ್ಚಲ್ಪಟ್ಟಿದ್ದರೂ ಇವರು ಮಾತ್ರ ಯೋಗಾಭ್ಯಾಸವನ್ನು ಮನೆಗಳಲ್ಲಿ ಬಿಡದೇ ಮುಂದುವರೆಸಿದ್ದಾರೆ.

ಇಲ್ಲಿ ನಾನಿರುವ ವಿಯೆಟ್ನಾಂನಲ್ಲಿ ಪ್ರತಿವರ್ಷ ‘ವಿಶ್ವ ಯೋಗದಿನ’ ಬಂತೆಂದರೆ ಅದೊಂದು ಹಬ್ಬದಂತೆ, ಅದಕ್ಕಾಗಿ ಹತ್ತಿಪ್ಪತ್ತು ದಿನಗಳಿಂದ ಸಿಧ್ದತೆಗಳು, ಹೆಚ್ಚಿನ ಅಭ್ಯಾಸ, ಕಾರ್ಯನಿರತರಾಗಿದ್ದರೂ ಮನಸ್ಸು ಮಾತ್ರ ಯೋಗದಲ್ಲಿಯೇ ಇರುವುದು ಈ ದಿನಗಳಲ್ಲಿ. ವಿಶ್ವ ಯೋಗದಿನದಂದು ಎಲ್ಲಾ ಯೋಗಕೇಂದ್ರಗಳು ಸಾಮೂಹಿಕ ಯೋಗಾಭ್ಯಾಸ, ಯೋಗಾಸನ ಸ್ಪರ್ಧೆ, ಯೋಗಾಸನ ಪ್ರದರ್ಶನ, ಅನಾಥಾಶ್ರಮ-ಬಡಜನರಿಗೆ ದಾನ, ಹೀಗೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಯೋಗದಿನವೆಂಬ ಒಂದು ಕಾರಣದಿಂದ ಹಲವಾರು ಜನರು, ಮನಸ್ಸುಗಳು ಒಂದೆಡೆ ಸೇರುವವು. ಸ್ವ-ಆರೋಗ್ಯದ ಜೊತೆ-ಜೊತೆಗೆ ಸಮಾಜದ ಸ್ವಾಸ್ಥ್ಯವನ್ನು ಹೆಚ್ಚಿಸುವುದು. ಹಾಗಾಗಿ‌ ಯೋಗದಿನವನ್ನು ಇಲ್ಲಿಯ ಜನರು ಸಂತಸದಿಂದ ಆಚರಿಸುತ್ತಾರೆ‌.

ವಿಯೆಟ್ನಾಂನಲ್ಲಿ ಯೋಗ

‘ಯೋಗ’ವೆಂದರೆ ಸಂಯೋಗ, ಅದು ದೇಹ ಮತ್ತು ಮನಸ್ಸಿನ ಸಂಯೋಗ. ಮತ್ತೊಬ್ಬರ ಸಮಸ್ಯೆಯನ್ನು ಅರಿತು ಸ್ಪಂದಿಸುವುದು. ದಾನ-ಸೇವೆಯೆಂಬ ವಿಷಯದಲ್ಲಿ ವಿಯೆಟ್ನಾ ಪ್ರಜೆಗಳು ಒಬ್ಬರಿಗಿಂತ ಇನ್ನೊಬ್ಬರು ಮುಂದಿರುತ್ತಾರೆ. ಹಾಗಾಗಿ ಯೋಗವು ಇಲ್ಲಿಯ ಜನರ ಮನಸ್ಸಿನಲ್ಲಿ, ದಿನಚರ್ಯೆಯಲ್ಲಿ ಸಂಯೋಗವಾಗಿದೆ. ನಮ್ಮ ಬಳಿ ಇರುವ ಅತ್ಯಮೂಲ್ಯ ವಸ್ತುವಿನ ಬಗ್ಗೆ ನಮಗೆ ತಾತ್ಸಾರ. ಆ ವಸ್ತುವನ್ನು ಕಳೆದುಕೊಂಡಾಗ ಮಾತ್ರ ಆ ವಸ್ತುವಿನ ಬೆಲೆ ತಿಳಿಯುವುದು.  ನಾವು ಭಾರತೀಯರು ಯೋಗವನ್ನು ಜೀವನದ ಒಂದು ಭಾಗವನ್ನಾಗಿ ಸ್ವೀಕರಿಸಿ, ಪಾಲಿಸಿದರೆ, ಮತ್ತಷ್ಟು ಆರೋಗ್ಯವಾಗಿ, ಸ್ವಸ್ಥ ಭಾರತವನ್ನು‌ ಕಾಣಬಹುದು.

ಓರ್ವ ವಾಹನ ಚಾಲಕ ಹೇಗೆ ಯೋಗವನ್ನು ಪಾಲಿಸಬಹುದು?
ಯೋಗ ಎಂದ ತಕ್ಷಣ ಒಂದು ಗಂಟೆ ದೈಹಿಕ ವ್ಯಾಯಾಮ ಅಂತಲ್ಲ. ಯೋಗವು ಜೀವನದ ಒಂದು ಭಾಗವಾಗಬೇಕು. ಆಗ ಮಾತ್ರ ಸಮತೋಲನವಾದ ಜೀವನ ನಡೆಸಲು ಸಾಧ್ಯ. ನಿಮಗೆ ಎಂದಾದರೂ ಈ ಪ್ರಶ್ನೆ ಮೂಡಿರಬಹುದು, ಓರ್ವ ವಾಹನ ಚಾಲಕ ಹೇಗೆ ಯೋಗವನ್ನು ಪಾಲಿಸಬಹುದು? 7-8 ಗಂಟೆ ಕಾಲ ಒಂದೇ ಕಡೆ ಕುಳಿತು ಕೆಲಸ ಮಾಡುವರು ಹೇಗೆ ಪಾಲಿಸಬಹುದು!? ಹೀಗೆ, ಗಂಟೆಗಳ ಕಾಲ ವಾಹನ ಚಾಲನೆಯೆಂದರೆ ಸುಲಭದ ಮಾತಲ್ಲ, ಟ್ರಾಫಿಕ್​ನಲ್ಲಿ ನೋಡುವ, ಅನುಭವಿಸುವ ವಿಚಿತ್ರ ಘಟನೆಗಳು, ಗ್ರಾಹಕರೊಡನೆ ಸಂಭಾಷಣೆ, ದೀರ್ಘವಾದ ಪ್ರಯಾಣ, ಇವೆಲ್ಲವು ದೇಹ ಹಾಗೂ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. 1 ಗಂಟೆಗೂ ಹೆಚ್ಚು ಸಮಯ ನಿರಂತರವಾಗಿ ವಾಹನ ಚಲಾಯಿಸುವುದಿದ್ದರೆ, ಗಂಟೆಗೊಮ್ಮೆ ವಾಹನವನ್ನು ನಿಲ್ಲಿಸಿ, ದೇಹಕ್ಕೆ ಸ್ವಲ್ಪ ವಿಶ್ರಾಂತಿ ನೀಡಬೇಕು. ಗಂಟೆಗಳ ಕಾಲ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರು 40ರಿಂದ 45 ನಿಮಿಷಗಳಿಗೊಮ್ಮೆ ಬೆನ್ನು, ಕುತ್ತಿಗೆ, ಕಣ್ಣುಗಳಿಗೆ ವಿಶ್ರಾಂತಿ ನೀಡಬೇಕು.

ವಿಯೆಟ್ನಾಂನಲ್ಲಿ ಯೋಗ

ಬೆನ್ನು ಮೂಳೆಯು ಕೇಂದ್ರ ನರಮಂಡಲದ ಒಂದು ಪ್ರಮುಖವಾದ ಭಾಗವಾಗಿರುತ್ತದೆ. ಬಹಳ ಸಮಯದವರೆಗೆ ಒಂದೇ ಕಡೆ, ಅದೂ ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳದಿದ್ದರೆ disk compressionಗೆ ಕಾರಣವಾಗುತ್ತದೆ. ಇದರಿಂದಲೇ ಬೆನ್ನುನೋವು ಹಾಗೂ ಇತರೆ ಬೆನ್ನಿಗೆ ಸಂಬಂಧಪಟ್ಟ ಖಾಯಿಲೆಗಳು ಬರುವವು. ಒಂದೇ ಕಡೆ ಕುಳಿತು ದಿನದ 8 ಗಂಟೆಗಳ ಕಾಲ Computer ಬಳಸುವವರಿಗೆ ಮತ್ತೂ ಹೆಚ್ಚಿನ ಸಮಸ್ಯೆಗಳು ಬರುವುದು ಇದರಿಂದಲೇ. ಹಾಗಾಗಿ ಪ್ರತಿ 40 ಅಥವಾ 45ನಿಮಿಷಗಳಿಗೊಮ್ಮೆ ಕುಳಿತಲ್ಲೆ ಕೆಲವೊಂದಿಷ್ಟು ವ್ಯಾಯಾಮಗಳನ್ನು ಮಾಡಬಹುದು. ಅದೂ ಕೇವಲ 2ನಿಮಿಷಗಳ ಕಾಲ. ಕುರ್ಚಿಯಲ್ಲಿ ಕುಳಿತೇ, ಪ್ರದಕ್ಷಿಣವಾಗಿ 5 ಬಾರಿ ತಲೆಯನ್ನು ನಿಧಾನವಾಗಿ ತಿರುಗಿಸುವುದು, ಅಪ್ರದಕ್ಷಿಣವಾಗಿ 5 ಬಾರಿ. ಹೀಗೆಯೇ ಭುಜಗಳಿಗೂ, ಹಾಗೆಯೇ ಬಲಗಡೆ ಹಾಗೂ ಎಡಗಡೆಗೆ ದೇಹವನ್ನು (ಸೊಂಟದಿಂದ ಮೇಲಿನ ಭಾಗ) ತಿರುಗಿಸುವುದು, ಇದರಿಂದ ಬೆನ್ನಿಗೆ ವಿಶ್ರಾಂತಿ ಸಿಗುವುದು. ರಕ್ತ ಸಂಚಲನ ಸರಿಯಾಗಿ ಆಗುವುದು.

ಕಣ್ಣುಗಳನ್ನು ಮುಚ್ಚುವುದು-ತೆರೆಯುವುದು, ವೃತ್ತಾಕಾರವಾಗಿ ಪ್ರದಕ್ಷಿಣ-ಅಪ್ರದಕ್ಷಿಣವಾಗಿ ತಿರುಗಿಸುವುದು, ಎಡ-ಬಲ, ಮೇಲೆ-ಕೆಳಗೆ ನೋಡುವುದು ಇವು ಕಣ್ಣುಗಳಿಗೆ ವ್ಯಾಯಾಮದಂತೆ. ಇದರಿಂದ ಕಣ್ಣಿನ ನರಗಳು ಮತ್ತಷ್ಟು ಸಕ್ರಿಯವಾಗುತ್ತವೆ, ಕಣ್ಣಿನ ಸಮಸ್ಯೆಗಳಿಂದ ದೂರವಿರಬಹುದು. ಹೀಗೆಯೇ ಕೆಲವೊಂದಿಷ್ಟು ಬಹಳ ಸುಲಭವಾದ ವ್ಯಾಯಾಮಗಳನ್ನು ಕುಳಿತಲ್ಲಿಯೇ ಮಾಡಬಹುದು. 2 ನಿಮಿಷಗಳ ಕಾಲ ಹೀಗೆ ಮಾಡುವುದರಿಂದ ಬರುವ ಖಾಯಿಲೆಗಳನ್ನು ತಡೆಯಬಹುದು. ಇನ್ನು ಕೆಲಸದೊತ್ತಡ ಅಥವಾ ಕುಟುಂಬ ಸಮಸ್ಯೆಗಳಿಂದ ಕೋಪ, ಆತಂಕ ಈ ತರಹದ ಸಮಸ್ಯೆಗಳು ಬರುವವು. ಹಾಗಾಗಿ ದೀರ್ಘ ಉಸಿರಾಟದ ಅಭ್ಯಾಸ ಮಾಡಿಕೊಳ್ಳಬೇಕು.

ವಿಯೆಟ್ನಾಂನಲ್ಲಿ ಯೋಗ

ತಲ್ಲಣ ತಣಿಸಲು ಇದೆ ಹಲವು ದಾರಿ
ಆ ಕ್ಷಣಕ್ಕೆ ಮನಸ್ಸನ್ನು ಕೋಪಗೊಳ್ಳುವುದರಿಂದ, ಆತಂಕ ಅಥವಾ ಉದ್ವೇಗಕ್ಕೊಳಗಾಗುವುದರಿಂದ ಬೇರಡೆಗೆ ಗಮನಹರಿಸುವ ಪ್ರಯತ್ನವಾಗಬೇಕು. ಅದಕ್ಕಾಗಿ ದೀರ್ಘ ಉಸಿರಾಟ, ಮನಸ್ಸಿನಲ್ಲಿಯೇ 1 ರಿಂದ 100ರ ವರೆಗೆ ಎಣಿಸುವುದು, ಇಷ್ಟವಾದ ಸಂಗೀತವನ್ನು ಕೇಳುವುದು, ಹಕ್ಕಿಗಳ ಕಲರವ,ನೀರು ಹರಿಯುವ, ಮಳೆಹನಿಗಳ ಶಬ್ದ ಹೀಗಿರುವ ಹಲವಾರು ಮೃದು ಸಂಗೀತಗಳು ಮನಸ್ಸನ್ನು ಶಾಂತವಾಗಿಸಲು ಸಹಾಯಕಾರಿಯಾಗುತ್ತವೆ. ಹೀಗೆಯೇ ಹಲವಾರು ದಾರಿಗಳಿವೆ, ಯಾವುದು ನಿಮಗೆ ಸುಲಭವೋ, ಯಾವುದರಿಂದ ಮನಸ್ಸು ಹಗುರಾಗುವುದೋ ಅದನ್ನು ಪಾಲಿಸಿದರಾಯಿತು.

ದೇಹ ಮತ್ತು ಮನಸ್ಸಿನ ಸಂಯೋಗ, ಯಾವುದೇ ಕೆಲಸವನ್ನು ಸಂಪೂರ್ಣ ಮನಸ್ಸಿನಿಂದ, ಅತ್ಯುತಮವಾದ ರೀತಿಯಲ್ಲಿ ಮಾಡಲು ಶಕ್ಯರಾದರೇ ಅದುವೇ ಯೋಗ. ಆಹಾರವನ್ನು ಸರಿಯಾದ ವಿಧಾನದಲ್ಲಿ, ಸಂಪೂರ್ಣ‌ ಮನಸ್ಸಿನಿಂದ ಸೇವಿಸುವುದು ಯೋಗ. ಸತ್ಯವನ್ನೇ ಮಾತನಾಡುವುದು ಯೋಗ. ಮಾತನಾಡುವಾಗ ಬಳಸುವ ಪದಗಳ ಮೇಲೆ ಹಿಡಿತ ಸಾಧಿಸುವುದು ಯೋಗ. ಹೀಗೆ ನಿಧಾನವಾಗಿ ಯೋಗವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸುಖಕರವಾದ ಜೀವನ ನಮ್ಮದಾಗುತ್ತದೆ.

ಲೇಖಕರ ಪರಿಚಯ
ಮೂಲತಃ ಉತ್ತರ ಕನ್ನಡದ ಸಿದ್ದಾಪುರದವರಾದ ನಾಗೇಂದ್ರ ಗದ್ದೇಮನೆ ಅವರು ವಿಯೆಟ್ನಾಂನಲ್ಲಿ ವೃತ್ತಿಪರ ಯೋಗ ಶಿಕ್ಷಕರು. ಯೋಗದಲ್ಲಿ ಆಳವಾದ ನಿಪುಣತೆ ಪಡೆದ ಅವರು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ, ಯಜುರ್ವೇದ ಸಂಹಿತಾಂತ ಅಧ್ಯಯನವನ್ನೂ ಮಾಡಿದ್ದಾರೆ. ಪುರಾತನ ಯೋಗವನ್ನು ಹೊಸ ತಲೆಮಾರಿಗೆ, ಅದರಲ್ಲೂ ವಿದೇಶದಲ್ಲಿ ಪ್ರಚುರಪಡಿಸುತ್ತಿರುವ ಹೆಮ್ಮೆ ನಾಗೇಂದ್ರ ಅವರದು. ಜತೆಗೆ ಎಲೆಕ್ಟ್ರಾನಿಕ್ ಗಾಡ್ಜೆಟ್​, ಆಟೋಮೊಬೈಲ್ ಕ್ಷೇತ್ರದಲ್ಲೂ ಅಪಾರ ಆಶಕ್ತಿ ಹೊಂದಿದ್ದಾರೆ. ತಮ್ಮ ಪ್ರವಾಸದ ಅನುಭವಗಳನ್ನು ಯೂಟ್ಯೂಬ್​ನಲ್ಲಿ NAGENDRA GADDEMANE ಎಂಬ ಹೆಸರಿನ ವ್ಲೋಗ್​ನ್ನು ಸಹ ನಡೆಸುತ್ತಿದ್ದಾರೆ.

ಇದನ್ನೂ ಓದಿ:  Post Covid: ದೀರ್ಘಕಾಲಿಕ ಕೊವಿಡ್​ ಲಕ್ಷಣಗಳಿಂದ ಹೊರಬರಲು ಸರಳ ವಿಧಾನಗಳು

International Yoga Day 2021: ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ M Yoga App ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ

(How Yoga followed By Vietnam people wrote Indian Karnataka Origin Yoga teacher at Vietnam Nagendra Gaddemane)

Published On - 7:04 am, Sun, 27 June 21