ಚಂಡೀಗಢ: ಸೋಂಕಿತರ ಚಿಕಿತ್ಸೆಗೆಂದು ಹಗಲು ರಾತ್ರಿ ಎನ್ನದೆ ನಮ್ಮ ಕೊರೊನಾ ವಾರಿಯರ್ಸ್ ದುಡಿಯುತ್ತಿದ್ದಾರೆ. ಆದರೆ, ಇವರ ಮೇಲೂ ಹೆಮ್ಮಾರಿಯ ಕೆಂಗಣ್ಣು ಬಿದ್ದಿದೆ. ಪೇಷಂಟ್ಗಳ ನೇರ ಸಂಪರ್ಕದಿಂದ ಹಲವಾರು ಆರೋಗ್ಯ ಸಿಬ್ಬಂದಿಗೂ ವೈರಸ್ ವಕ್ಕರಿಸಿದೆ.
ಇದನ್ನು ಗಮನಿಸಿರುವ ಐಐಟಿ ರೂಪರ್ ಹಾಗೂ PGIMER ಸಂಸ್ಥೆಗಳು ಇದೀಗ ಕೊವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಆರೋಗ್ಯ ಸಿಬ್ಬಂದಿಗೆ ನೆರವಾಗುವಂತ ಎರಡು ಸಾಧನಗಳನ್ನು ತಯಾರಿಸಿದ್ದಾರೆ. ಅದೇ ‘ಮೆಡಿ ಸಾರಥಿ’ ಡ್ರೋಣ್ ಮತ್ತು ಟ್ರಾಲಿ.
ಕೃತಕ ಬುದ್ಧಿಮತ್ತೆ (Artificial Intelligence) ತಂತ್ರಜ್ಞಾನವನ್ನು ಅಳವಡಿಸಿರುವ ಈ ಡ್ರೋಣ್ ಮತ್ತು ಟ್ರಾಲಿ ಕೊವಿಡ್ ವಾರ್ಡ್ನಲ್ಲಿರುವ ಸೋಂಕಿತರಿಗೆ ಹಾಗೂ ಹೋಮ್ ಕ್ವಾರಂಟೈನ್ನಲ್ಲಿ ಇರುವವರಿಗೆ ಅಗತ್ಯವಾದ ಔಷಧಿಯನ್ನ ಪೂರೈಸಲು ಸಹಕಾರಿಯಾಗಲಿದೆ. ಇದರ ಜೊತೆಗೆ, ಮೆಡಿ ಸಾರಥಿ ಟ್ರಾಲಿಯಿಂದ ಪೇಷಂಟ್ಗಳ ತಾಪಮಾನವನ್ನು ಸಹ ಪಡೆಯುವ ಸಾಧನವನ್ನು ಅಳವಡಿಸಲಾಗಿದೆ.
ಹೀಗಾಗಿ, ಇನ್ಮುಂದೆ ಸೋಂಕಿತರು ಮತ್ತು ಆರೋಗ್ಯ ಸಿಬ್ಬಂದಿಯ ನಡುವೆ ನೇರ ಸಂಪರ್ಕವಿಲ್ಲದೆ ಸುಲಭವಾಗಿ ಕಾರ್ಯನಿರ್ವಹಿಸಬಹುದಾಗಿದೆ ಎಂದು PGIMER ಸಂಸ್ಥೆಯ ನಿರ್ದೇಶಕ ಡಾ. ಜಗರ್ ರಾಮ್ ತಿಳಿಸಿದ್ದಾರೆ.
Published On - 6:58 pm, Wed, 8 July 20