International Day of Peace 2022: ವಿಶ್ವ ಶಾಂತಿ ದಿನ 2022: ಥೀಮ್, ಇದನ್ನು ಯಾವಾಗ ಮತ್ತು ಹೇಗೆ ಆಚರಿಸಲಾಗುತ್ತದೆ?

ಈ ವರ್ಷದ ಅಂತರರಾಷ್ಟ್ರೀಯ ಶಾಂತಿ ದಿನಕ್ಕೆ ‘ವರ್ಣಭೇದ ನೀತಿ ಕೊನೆಗೊಳಿಸಿ, ಶಾಂತಿ ನಿರ್ಮಿಸಿಕೊಳ್ಳಿ’ ಎನ್ನುವ ಆಶಯವನ್ನು ಇರಿಸಿಕೊಳ್ಳಲಾಗಿದೆ.

International Day of Peace 2022: ವಿಶ್ವ ಶಾಂತಿ ದಿನ 2022: ಥೀಮ್, ಇದನ್ನು ಯಾವಾಗ ಮತ್ತು ಹೇಗೆ ಆಚರಿಸಲಾಗುತ್ತದೆ?
ವಿಶ್ವ ಶಾಂತಿ ದಿನದ ಸಂಕೇತ
Edited By:

Updated on: Sep 21, 2022 | 8:24 AM

ಪ್ರತಿ ವರ್ಷ ಸೆಪ್ಟೆಂಬರ್ 21ರಂದು ಅಂತರರಾಷ್ಟ್ರೀಯ ಶಾಂತಿ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಪ್ರತಿ ವರ್ಷ ಈ ದಿನದಂದು ವಿಶ್ವಸಂಸ್ಥೆಯ ಮಹಾಧಿವೇಶನ ನಡೆಯುವುದು ವಾಡಿಕೆ. ಈ ದಿನದಂದು ಅಹಿಂಸೆ ಮತ್ತು ಕದನ ವಿರಾಮಕ್ಕೆ ಉತ್ತೇಜನ ನೀಡುವ ಮೂಲಕ ವಿವಿಧ ದೇಶಗಳು ಮತ್ತು ಜನರಲ್ಲಿ ಶಾಂತಿಯ ಆದರ್ಶಗಳನ್ನು ಉತ್ತೇಜಿಸಲು ವಿಶ್ವಸಂಸ್ಥೆಯು ಪ್ರಯತ್ನಿಸುತ್ತದೆ. ಈ ವರ್ಷದ ಅಂತರರಾಷ್ಟ್ರೀಯ ಶಾಂತಿ ದಿನಕ್ಕೆ ‘ವರ್ಣಭೇದ ನೀತಿ ಕೊನೆಗೊಳಿಸಿ, ಶಾಂತಿ ನಿರ್ಮಿಸಿಕೊಳ್ಳಿ’ ಎನ್ನುವ ಆಶಯವನ್ನು ಇರಿಸಿಕೊಳ್ಳಲಾಗಿದೆ.

ಕೇವಲ ಹಿಂಸೆಯ ನಿರ್ಮೂಲನೆ ಮಾತ್ರವೇ ಶಾಂತಿಯನ್ನು ಖಾತ್ರಿಪಡಿಸುವುದಿಲ್ಲ. ಎಲ್ಲರಿಗೂ ಬೆಳೆಯಲು ಸಮಾನ ಅವಕಾಶ ನೀಡುವ ಸಮಾಜಗಳ ನಿರ್ಮಾಣದಿಂದ ಮಾತ್ರವೇ ಶಾಶ್ವತ ಶಾಂತಿ ನೆಲೆಸಲು ಸಾಧ್ಯ ಎಂದು ವಿಶ್ವಸಂಸ್ಥೆ ಹೇಳಿದೆ. ಎಲ್ಲರನ್ನೂ ಸಮಾನವಾಗಿ ಕಾಣುವ ಜಗತ್ತನ್ನು ನಿರ್ಮಿಸಲು ವಿಶ್ವಸಂಸ್ಥೆಯು ಪ್ರಯತ್ನಿಸುತ್ತದೆ. ವಿಶ್ವಸಂಸ್ಥೆಯು 1981ರಲ್ಲಿ ಈ ದಿನವನ್ನು ಘೋಷಿಸಿತು. ಮಾನವಕುಲವು ಭಿನ್ನತೆಗಳಿಗಿಂತ ಹೆಚ್ಚಾಗಿ ಶಾಂತಿಗೆ ಬದ್ಧರಾಗಲು ಮತ್ತು ಶಾಂತಿಯ ಸಂಸ್ಕೃತಿಯನ್ನು ನಿರ್ಮಿಸಲು ಕೊಡುಗೆ ನೀಡಲು ಜಾಗತಿಕವಾಗಿ ವಿಶ್ವ ಶಾಂತಿಯ ದಿನವನ್ನು ಆಚರಿಸುತ್ತಿದೆ. 2001ರಲ್ಲಿ ವಿಶ್ವ ಶಾಂತಿ ದಿನದ ಅಧಿಕೃತ ದಿನಾಂಕವನ್ನು ಸೆಪ್ಟೆಂಬರ್ 21 ಎಂದು ಘೋಷಿಸಲಾಯಿತು. ಅಲ್ಲಿಯವರೆಗೆ ಪ್ರತಿ ವರ್ಷ ವಾರ್ಷಿಕ ಮಹಾಧಿವೇಶನದ ಉದ್ಘಾಟನಾ ಅಧಿವೇಶನದಲ್ಲಿ, ಅಂದರೆ ಸೆಪ್ಟೆಂಬರ್ ತಿಂಗಳ ಮೂರನೆಯ ಮಂಗಳವಾರದಂದು ವಿಶ್ವ ಶಾಂತಿಯ ದಿನವನ್ನು ಆಚರಿಸಲಾಗುತ್ತಿತ್ತು.

ವಿಶ್ವ ಶಾಂತಿ ದಿನದ ನೆನಪಿಗಾಗಿ ನ್ಯೂಯಾರ್ಕ್ ನಗರದಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ವಿಶ್ವಸಂಸ್ಥೆಯ ಶಾಂತಿ ಗಂಟೆಯನ್ನು ಬಾರಿಸಲಾಗುತ್ತದೆ. 1954ರ ಜೂನ್ ತಿಂಗಳಲ್ಲಿ ವಿಶ್ವಸಂಸ್ಥೆಯ ಅಸೋಸಿಯೇಷನ್ ಆಫ್ ಜಪಾನ್ ಪೀಸ್ ಬೆಲ್ ದಾನ ಮಾಡಿತು. ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು, ಪೋಪ್ ಮತ್ತು 60ಕ್ಕೂ ಹೆಚ್ಚು ವಿವಿಧ ದೇಶಗಳ ಮಕ್ಕಳು ಸೇರಿದಂತೆ ಜನರು ನೀಡಿದ ನಾಣ್ಯಗಳು ಮತ್ತು ಪದಕಗಳಿಂದ ಗಂಟೆಯನ್ನು ನಿರ್ಮಿಸಲಾಗಿದೆ. ಬೆಲ್ ಟವರ್ ಅನ್ನು ಹನಮಿಡೋ (ಹೂವುಗಳಿಂದ ಅಲಂಕೃತವಾದ ಸಣ್ಣ ದೇವಾಲಯ) ಮಾದರಿಯಾಗಿ ರೂಪಿಸಲಾಗಿದೆ. ಇದು ಶಾಂತಿಯ ಪ್ರೀತಿಕ ಎನಿಸಿರುವ ಬುದ್ಧನು ಜನಿಸಿದ ಸ್ಥಳವನ್ನು ಸಂಕೇತಿಸುತ್ತದೆ.

ವರ್ಷಕ್ಕೆರಡು ಬಾರಿ ಶಾಂತಿ ಗಂಟೆ ಬಾರಿಸಲಾಗುತ್ತದೆ: ವಸಂತಋತುವಿನ ಮೊದಲ ದಿನವನ್ನು ಸಂಕೇತಿಸುವ ವರ್ನಲ್ ವಿಷುವತ್ ಮತ್ತು ಸೆಪ್ಟೆಂಬರ್ 21 ರಂದು ಅಂತರರಾಷ್ಟ್ರೀಯ ಶಾಂತಿ ದಿನವನ್ನು ಆಚರಿಸಲು ಗಂಟೆ ಬಾರಿಸಲಾಗುತ್ತದೆ. ಅಂತರರಾಷ್ಟ್ರೀಯ ಶಾಂತಿ ದಿನದಂದು, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯು ಶಾಶ್ವತ ಮಿಷನ್​ಗಳ ಪ್ರತಿನಿಧಿಗಳು ಮತ್ತು ವಿಶ್ವಸಂಸ್ಥೆಯ ಸಚಿವಾಲಯದ ಅಧಿಕಾರಿಗಳ ಉಪಸ್ಥಿತಿಯಲ್ಲಿ ವಿಶ್ವ ಶಾಂತಿಗಾಗಿ ಪ್ರಾರ್ಥಿಸಲು ಗಂಟೆ ಬಾರಿಸುತ್ತಾರೆ.

Published On - 8:24 am, Wed, 21 September 22