Meeting Point : ಹಸುವಿನ ಕೆಚ್ಚಲಲ್ಲಿ ತುಂಬಿದ ಹಾಲು ಹೊರಬರಲಿಕ್ಕೂ ಕರುವಿನ ಸಾಂಗತ್ಯ ಬೇಕಾಗುತ್ತದೆ

|

Updated on: Sep 09, 2021 | 10:42 AM

Friendship : ‘ಡಾಲ್ಫಿನ್ನಿನ ತುಂಬ ಯೌವ್ವನ ತುಂಬಿತ್ತು. ಕಾಲೇಜು ಹುಡುಗ ಹುಡುಗಿಯರ ಮೀಟಿಂಗ್ ಪಾಯಿಂಟ್ ಅದು. ನಾವು ಎರಡು ಐಸ್ಕ್ರೀಮು ತಿನ್ನುವಷ್ಟರಲ್ಲಿ ಆರು ಟೇಬಲ್ಲಿನಲ್ಲಿ ಚಿರಚಿರ ಬೆಳಕು ಮೂಡಿ, ಹೋ ಅಂತ ಕಿರುಚಿ, ಕೇಕು ಕತ್ತರಿಸಿ ಮುಖಕ್ಕೆಲ್ಲ ಮೆತ್ತಿಕೊಂಡು ಸಂಭ್ರಮಿಸುತ್ತಿದ್ದರು. ಸಂಸಾರದ ಕಷ್ಟಸುಖಗಳನ್ನು ಮಾತಾಡಿ ಆ ಜಾಗದ ಮರ್ಯಾದೆ ತೆಗೆಯಬಾರದು ಅನ್ನಿಸಿ ನಾವೂ ಹಳೆಯ ಜೋಕಿಗೆ ಮತ್ತೆ ನಕ್ಕೆವು.‘ ಪಿ. ಕುಸುಮಾ ಆಯರಹಳ್ಳಿ

Meeting Point : ಹಸುವಿನ ಕೆಚ್ಚಲಲ್ಲಿ ತುಂಬಿದ ಹಾಲು ಹೊರಬರಲಿಕ್ಕೂ ಕರುವಿನ ಸಾಂಗತ್ಯ ಬೇಕಾಗುತ್ತದೆ
ಲೇಖಕಿ ಪಿ. ಕುಸುಮಾ ಆಯರಹಳ್ಳಿ
Follow us on

Meeting Point : ಮೈಸೂರಿನ ಅತ್ಯಾಚಾರ ದುರ್ಘಟನೆಯ ನಂತರ ಆ ಹುಡುಗರು ಅಲ್ಲಿಗೆ ಹೋಗಬಾರದಿತ್ತು ಅಥವಾ ಆ ಹುಡುಗಿ ಯಾಕೆ ಅಲ್ಲಿಗೆ ಹೋದಳು ಎಂಬ ಪ್ರಶ್ನೆಗಳು ಕೇಳಿಬಂದವು. ಈ ಪ್ರಶ್ನೆಗಳು ಈಗಷ್ಟೇ ಅಲ್ಲ ಇದಕ್ಕೆ ಶತಮಾನಕ್ಕೂ ಮೀರಿದ ಇತಿಹಾಸವಿದೆ. ಪಟ್ಟಭದ್ರ ಹಿತಾಸಕ್ತಿಗಳ ಕೈಚಳಕವಿದೆ. ಆದರೆ ಹರೆಯಕ್ಕೆ ಬಂದ ಹುಡುಗ-ಹುಡುಗಿಯರಲ್ಲಿ ಸ್ನೇಹವಿರಬಹು, ಪ್ರೇಮವಿರಬಹುದು ಅದು ಅವರವರ ವಯೋಸಹಜ ಮನೋಸಹಜ ಬಯಕೆಗಳು. ಹಾಗೆಯೇ ಲಿಂಗಸಮಾನತೆಯಲ್ಲಿ ನೋಡಿದಾಗ ಇದಕ್ಕೆ ಮತ್ತೊಂದು ಆಯಾಮವಿದೆ. ಒಟ್ಟಾರೆಯಾಗಿ ಇಬ್ಬರು ವ್ಯಕ್ತಿಗಳ ಭೇಟಿಯನ್ನು ಕೀಳಾಗಿ ನೋಡುವುದು, ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಒಂದೆಡೆಯಾದರೆ, ಆ ಜೋಡಿಗಳ ಮೇಲೆ ಕೈ ಮಾಡುವುದು ಮತ್ತು ಪೈಶಾಚಿಕ ಕೃತ್ಯಕ್ಕಿಳಿಯುವುದು ಇನ್ನೊಂದೆಡೆ ತಾಂಡವವಾಡುತ್ತಲೇ ಇದೆ. ಇಂಥ ಕಾರಣಗಳಿಂದಾಗಿ ಇಬ್ಬರು ವ್ಯಕ್ತಿಗಳ ಸಹಜ, ಆಪ್ತಭೇಟಿಗೆ ಅವಕಾಶವಿರಲಾರದಷ್ಟು ಸಾಮಾಜಿಕ ಸ್ಥಿತಿ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ರೂಪಿಸಿರುವ ಸರಣಿ ‘ಟಿವಿ9 ಕನ್ನಡ ಡಿಜಿಟಲ್ – ಮೀಟಿಂಗ್ ಪಾಯಿಂಟ್​’

ಅಹಿತವಾಗಿದ್ದೆಲ್ಲ ಕ್ಷಣಮಾತ್ರದಲ್ಲಿ ಜರುಗಿಬಿಡುತ್ತದೆ. ಆದರೆ ಹಿತವಾಗಿದ್ದು? ಜೀವಸಹಜವಾದ ಈ ಹಾದಿಯಲ್ಲಿ ನಿಲ್ದಾಣಗಳನ್ನು ಕಂಡುಕೊಳ್ಳುವುದು ಜಟಿಲವೆ? ಇಂಥ ಸಂದರ್ಭದಲ್ಲಿ ನಿಮ್ಮೂರಿನ ಮೀಟಿಂಗ್ ಪಾಯಿಂಟ್​ಗಳನ್ನೊಮ್ಮೆ ಹಿಂದಿರುಗಿ ನೋಡಬಹುದಾ ಎಂದು ವಿವಿಧ ಹಿನ್ನೆಲೆ, ಆಸಕ್ತಿ, ವೃತ್ತಿ, ಪ್ರವೃತ್ತಿಗಳಲ್ಲಿ ಆಸ್ಥೆಯಿಂದ ತೊಡಗಿಕೊಂಡಿರುವವರಿಗೆ ಕೇಳಲಾಗಿ, ತಮ್ಮ ಅನುಭವ-ವಿಚಾರಗಳನ್ನು ಹಂಚಿಕೊಳ್ಳುತ್ತಲಿದ್ಧಾರೆ. ಒಳಧ್ವನಿಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದಲ್ಲಿ ಪರಸ್ಪರರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಲ್ಲವೆ? ಓದುತ್ತಿರುವ ನೀವೂ ಈ ಸಂವಾದದಲ್ಲಿ ಪ್ರತಿಕ್ರಿಯಾತ್ಮಕ ಬರಹಗಳ ಮೂಲಕ ತೊಡಗಿಕೊಳ್ಳಬಹುದು; tv9kannadadigital@gmail.com

ಪಿ. ಕುಸುಮಾ ಆಯರಹಳ್ಳಿ ಮೈಸೂರು ಹತ್ತಿರದ ಆಯರಹಳ್ಳಿಯವರು. ಸದ್ಯ ನೆಲೆಸಿರುವುದೂ ಅಲ್ಲಿಯೇ. ಎರಡು ವರ್ಷ ಮಾಧ್ಯಮದಲ್ಲಿ ಕೆಲಸ ಮಾಡಿ, ಸುಮಾರು ಹತ್ತು ವರ್ಷಗಳಿಂದ ಧಾರಾವಾಹಿ ಬರೆವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ. “ಯೋಳ್ತೀನ್ ಕೇಳಿ” ಪ್ರಕಟಿತ ಪುಸ್ತಕ.

ಕುಸುಮಾ ಅವರ ಬರಹ ನಿಮ್ಮ ಓದಿಗೆ :

ಎಲ್ಲಿ ಸಿಕ್ತೀಯಾ?
“ರಿಂಗ್ ರೋಡಿನಿಂದ ಚಾಮುಂಡಿ ಬೆಟ್ಟಕ್ಕೆ ಹೋಗೋ ರೋಡು?”
ಯಾವ್ದೇಳು, ಚಾಮುಂಡಿಬೆಟ್ಟಕ್ ಹಿಂದಿಂದ ಹೋಗೋ ರೋಡಿದೆಯಲ್ಲಾ ಅದಾ?
ಹು ಅದೇ ಕಣೋ, ಹೊಸಹುಂಡಿ ಪಕ್ಕ ಇದೆಯಲ್ಲ
ಅಲ್ಲಿ ಜಾಸ್ತಿ ಜನ ಓಡಾಡಲ್ಲ ಅಲ್ವ?
ಹೌದು. ಅದಕ್ಕೇ ತುಂಬ ಸುಂದರವಾಗಿದೆ. ಶಾಂತವಾಗಿದೆ.
ಹೇ..ಬೇಡಪ್ಪ. ಮೊನ್ನೆ ತಾನೇ ಅಲ್ಲೆ ಅಲ್ವಾ ಆ ಇನ್ಸಿಡೆಂಟ್ ಆಗಿದ್ದು?
ಹುಂ, ಅಲ್ಲೆ ಸ್ವಲ್ಪ ಹತ್ರ.
ಮತ್ತೆ? ನೀನೇ ಹೇಳ್ತಿದ್ದೆ. ಒಂದ್ ಸಣ್ ಎಚ್ಚರಿಕೆ ದೊಡ್ಡ ಅನಾಹುತ ತಪ್ಸೋದಾದ್ರೆ ಎಚ್ಚರವಾಗಿರೋದ್ರಲ್ಲಿ ತಪ್ಪೇನು ಅಂತ. ನಾವ್ ಹೋದಾಗಲೂ ಅಂತದೇ ಏನಾದ್ರೂ ಆಗಬಹುದಪ್ಪ. ಆಗ ನಿಂದೇ ಮಾತನ್ನ ಯಾರಾದರೂ ನಿಂಗೇ ವಾಪಸ್ ಹೇಳ್ತಾರೆ. ಏನ್ ಬೇಡ ಮನೆಗೇ ಬರ್ತೀನಿರು.
ಬೇಡ.
ಮತ್ತೆ?
ಮಾಮೂಲಿ ರೋಡಲ್ಲೆ ಚಾಮುಂಡಿ ಬೆಟ್ಟಕ್ ಹೋಗಿ ಮೆಟ್ಲತ್ರ ಕುಕ್ಕರ್ಬಡಿಯಣ ನಡಿ.
ಅತ್ತಿಂದ ಅವನು ನಗುತ್ತಾನೆ.

ಚಾಮುಂಡಿ ಬೆಟ್ಟಕ್ಕೆ ಹೋಗಲು ಎರಡು ರಸ್ತೆಗಳಿವೆ. ಒಂದು ಕಾರಂಜಿಕೆರೆ ಹತ್ತಿರದ ಸಾಮಾನ್ಯವಾಗಿ ಎಲ್ಲರೂ ಬಳಸುವ ರಸ್ತೆ. ಇನ್ನೊಂದು ಬೆಟ್ಟದ ಇನ್ನೊಂದು ಭಾಗದ , ಅಂದರೆ ನಂಜನಗೂಡು ರಸ್ತೆಯ ಹತ್ತಿರ ಎಡಕ್ಕೆ ತಿರುಗಿ ನಮ್ಮ ಹಳ್ಳಿಗೆ ಹೋಗುವಾಗಿನ ಬೆಟ್ಟದ ತಪ್ಪಲಿನ ಇನ್ನೊಂದು ರಸ್ತೆ. ಹಸಿರು ಹಾಸಿನ ನಡುವೆ ಕಪ್ಪು ರಸ್ತೆ. ಅಲ್ಲಲ್ಲಿ ಕೂರಲು ಹಾಕಿರುವ ಬೆಂಚುಗಳು. ಕಣ್ಣು ತಣಿಯದ ನೋಟ ಅದು. ಪ್ರತೀಸಲ ಊರಿಂದ ಹೋಗುವಾಗ ಬರುವಾಗ ಆ ರಸ್ತೆ ಹಾಯುತ್ತೇನೆ. ಒಂದು ಘಳಿಗೆ ಗಾಡಿ ನಿಧಾನಿಸಿ ನೋಡುತ್ತೇನೆ. ಇನ್ನೂ ಒಂದೊಂದು ಸಲ ಆ ರಸ್ತೆಯೊಳಗೆ ಹೋಗಿ ಸುಮಾರು ಅರ್ಧ ಅಥವಾ ಒಂದು ಕಿಲೋಮೀಟರ್ ಸಾಗಿ, “ಚಿರತೆಗಳ ಓಡಾಟವಿದೆ” ಅನ್ನುವ ಬೋರ್ಡು ನೋಡಿ, ವಾಪಸ್ ಗಾಡಿ ತಿರುಗಿಸಿ ಬಂದುಬಿಡುತ್ತೇನೆ. ಹಾಗೆ ನಾನು ಒಬ್ಬಳೇ ಹೋಗಿ ನಿಂತಿದ್ದಾಗ ಯಾವುದಾದರೂ ಕಾರೋ ಬೈಕೋ ಹಾದುಹೋದರೆ ಆ ಕಣ್ಣುಗಳು ನಾನು ಅಲ್ಲಿ ಯಾಕೆ ಬಂದಿರಬಹುದು ಅಂತ ಊಹಿಸುತ್ತಿರುತ್ತವೆ. ಸುತ್ತ ಹಸಿರಿದ್ದರೂ ಅವರ ಊಹೆಯಲ್ಲಿ ನೀಲಿಬಣ್ಣವೇ ಕಾಣುತ್ತದೆ. ಅಲ್ಲಿಂದ ವಾಪಸ್ ಬರಲು ಮನಸಿಲ್ಲದಿದ್ದರೂ ಕಾಲು ಕೀಳಲೇಬೇಕಾಗುತ್ತದೆ ಅನಿವಾರ್ಯವಾಗಿ. ಆ ರಸ್ತೆಯಿಂದ ಮುಖ್ಯರಸ್ತೆಗಿಳಿವಾಗಲೂ ಓಡಾಡುವವರೆಲ್ಲ ಒಮ್ಮೆ ವಿಚಿತ್ರವಾಗಿ ನೋಡಿಯೇ ಹೋಗುತ್ತಾರೆ. ಆ ನೋಟಗಳಲ್ಲೂ ಬರಿಯ ನೀಲಿ.

ಒಬ್ಬಳೇ ಹೋಗಿ ಕೂರುವುದಂತೂ ಅಸಾಧ್ಯದ ಮಾತಾಯಿತು. ಅಪರೂಪಕ್ಕೆ ಸಿಗುವ ಗೆಳೆಯನನ್ನೋ, ಗೆಳತಿಯನ್ನೋ ಕರೆದುಕೊಂಡು ಚಾಮುಂಡಿಬೆಟ್ಟದ ಹಿಂಬಾಗದ ಆ ರಸ್ತೆಯಲ್ಲಿ ಹೋಗಿ ಕಷ್ಟುಸಖ ಮಾತಾಡಿಕೊಂಡು ಬರಬೇಕೆನಿಸುತ್ತದೆ. ಒಬ್ಬರು ಚೆಂದ. ಇಬ್ಬರು ಹೆಚ್ಚು. ಮೂವರು ಮತ್ತು ಹೆಚ್ಚು ಮಂದಿ ಕೂಡದು ಎನ್ನುವಂತಾ ವಾತಾವರಣ ಅದು. ಅಲ್ಲಿ ಗಲಾಟೆ ಸಲ್ಲದು. ಸುಮ್ಮನೇ ಕೂರಬೇಕು, ಮಾತು ಕೇಳಿಯೂ ಕೇಳದಂತಿರಬೇಕು. ಪರಸ್ಪರ ಉಸಿರಾಟದ ಸದ್ದು ಮತ್ತು ಬೆಟ್ಟದ ಗಾಳಿ ಜುಗಲ್ಬಂದಿ ನಡೆಸಬೇಕು. “ಲೇ..ಇದ್ನೆಲ್ಲ ನಿನ್ ಕತೆ ಕಾದಂಬರೀಲ್ ಬರ್ಕೋ. ಕುತ್ಕೊಂಡ್ ಮಾತಾಡಕ್ ಎಲ್ಲಾದ್ರೇನು? ನೀವೆಲ್ಲ ಹೀಗಾಡೋದ್ರಿಂದ್ಲೇ ಇಂತಾ ಘಟನೆಗಳಾಗೋದು, ಸ್ವಲ್ಪ ಪ್ರಾಕ್ಟಿಕಲ್ ಆಗಿ ಯೋಚ್ನೆ ಮಾಡದ್ ಕಲೀರಿ ನೀವ್ಗಳು” ಅನ್ನುವ ಬುದ್ದಿ ಮಾತುಗಳಲ್ಲಿ ಕಾಳಜಿ ಇದ್ದರೂ ಯಾಕೋ ಹಿತವೆನಿಸುವುದಿಲ್ಲ.

ಬೆಟ್ಟವಂತೂ ಗಿಜಿಗಿಜಿ. ಅಲ್ಲಿ ಯಾವ ಆಪ್ತ ಮಾತುಗಳೂ ಅಸಾದ್ಯ. ಉತ್ತನಹಳ್ಳಿ ದೇವಸ್ಥಾನದ ಹತ್ರ ಸಿಗೋಣ್ವ? ಕೇಳಿದೆ. “ಸರಿ ಬರ್ತೀನಿ” ಅಂದ. ತುಸು ಮುಂಚೆಯೇ ಹೋದೆ. ಅಲ್ಲಿ ಹಸಿರೇ ಇಲ್ಲ. ಕೂರುವ ಬೆಂಚೆಲ್ಲ ತಾಯಿಯ ಹಾರಕ್ಕೆ ಹಿಂಡಿದ ನಿಂಬೆಹೋಳುಗಳ, ಅರಿಸಿನ ಕುಂಕುಮಗಳ ಬಳಿದುಕೊಂಡಿತ್ತು. ಇದ್ದುದರಲ್ಲೇ ಜಾಗ ಮಾಡಿ ಕೂತುಕೊಂಡರೆ ಅಲ್ಲಿ ಹಿಂದೆ ಇದ್ದ ಪುಟ್ಟ ಬೆಟ್ಟವೂ ಇಲ್ಲ, ಹಸಿರೂ ಇಲ್ಲ. ಎಲ್ಲಾ ಬೋಳು ಬೋಳು. ರಿಂಗ್ ರೋಡಿನ ಲಾರಿಗಳ ಕುಯ್ಯೋ ಮೊರ್ರೋ ಸದ್ದು. ಅಲ್ಲಿಂದೆದ್ದು ಬಂದು “ಎಲ್ಲಿದ್ದೀಯೋ?” ಅಂದೆ ಇನ್ನು ಕಾಲುಗಂಟೆ ಬಂದೆ ಅಂದ. “ಇಲ್ಲಿ ಬರಬೇಡ. ಮರಿಮಲ್ಲಪ್ಪ ಕಾಲೇಜಿನ ಹಿಂದೆ ಡಾಲ್ಫಿನ್ ಇದೆಯಲ್ಲಾ… ಅಲ್ಲಿಗೆ ಬಾ” ಅಂದೆ. “ಲೂಸೇನೇ ನೀನು?” ಅಂದ. “ಮುಚ್ಕೊಂಡ್ ಬಾರಪ್ಪಾ ನೀನು” ಅಂತ ಉತ್ತನಹಳ್ಳಿಯ ಹಸಿರು ಬೋಳಾದ ಕೋಪವನ್ನು ಅವನ ಕಿವಿಗೆ ಸುರಿದು ಸ್ಕೂಟರ್ ಸ್ಟಾರ್ಟ್ ಮಾಡಿದೆ.

ಸೌಜನ್ಯ : ಅಂತರ್ಜಾಲ

ಡಾಲ್ಫಿನ್ನಿನ ತುಂಬ ಯೌವ್ವನ ತುಂಬಿತ್ತು. ಕಾಲೇಜು ಹುಡುಗ ಹುಡುಗಿಯರ ಮೀಟಿಂಗ್ ಪಾಯಿಂಟ್ ಅದು. ನಾವು ಎರಡು ಐಸ್ಕ್ರೀಮು ತಿನ್ನುವಷ್ಟರಲ್ಲಿ ಆರು ಟೇಬಲ್ಲಿನಲ್ಲಿ ಚಿರಚಿರ ಬೆಳಕು ಮೂಡಿ, ಹೋ ಅಂತ ಕಿರುಚಿ, ಕೇಕು ಕತ್ತರಿಸಿ ಮುಖಕ್ಕೆಲ್ಲ ಮೆತ್ತಿಕೊಂಡು ಸಂಭ್ರಮಿಸುತ್ತಿದ್ದರು. ಸಂಸಾರದ ಕಷ್ಟಸುಖಗಳನ್ನು ಮಾತಾಡಿ ಆ ಜಾಗದ ಮರ್ಯಾದೆ ತೆಗೆಯಬಾರದು ಅನ್ನಿಸಿ ನಾವೂ ಹಳೆಯ ಜೋಕಿಗೆ ಮತ್ತೆ ನಕ್ಕೆವು.

‘ಯಾಕಪ್ಪಾ ಇವೆಲ್ಲ ನಾಟಕ? ಮನೆಲ್ ಜಾಗ ಇಲ್ವ ಮಾತಾಡಕೆ? ಅಷ್ಟೊಂದ್ ಪ್ರೈವೇಸಿ ಬೇಕಾದ್ರೆ ಬಾಗ್ಲಾಕೊಂಡ್ ಮಾತಾಡ್ಕೊಂಡ್ರಾಯ್ತಪ್ಪ’ ಮನೆಯವರ ಆಂಬೋಣ. ಹಸುವಿನ ಕೆಚ್ಚಲಲ್ಲಿ ತುಂಬಿದ ಹಾಲು ಹೊರಬರಲಿಕ್ಕೂ ಕರುವಿನ ಸಾಂಗತ್ಯ ಬೇಕಾಗುತ್ತದೆ. ಆಪ್ತಮಾತುಕತೆಯೊಂದು ಎದೆಯಬಾಗಿಲು ತೆರೆದು ನಾಲಗೆಯ ಮಾತಾಗಲಿಕ್ಕೆ ಜೊತೆಗಿರುವ ವ್ಯಕ್ತಿವಷ್ಟೇ ಜಾಗವೂ ಮುಖ್ಯ. ಅಲ್ಲಿ ಮದುವೆ ಮನೆಯ ಗದ್ದಲವಿರಬಾರದು, ಜಾತ್ರೆಯ ಜಂಗುಳಿ ಸದ್ದಾಗಬಾರದು. ಮೂರನೇ ಕಣ್ಣು ಕಿವಿ ಇರದ ಜಾಗವೇ ಯಾವುದೇ ವಯಸಿನ, ಲಿಂಗದ ಎರಡು ಜೀವಗಳ ನಿಜವಾದ ಮೀಟಿಂಗ್ ಪಾಯಿಂಟ್. ಮತ್ತು ಎಲ್ಲ ಮೀಟಿಂಗುಗಳೂ ನೀಲಿಯೇ ಅಲ್ಲ. ಅಲ್ಲಿ ಎರಡು ಹೃದಯಗಳ ನಡುವಿನ ಆಪ್ತಸಂವಾದವೊಂದು ಜಾರಿಯಲ್ಲಿರಬಹುದು.

ಈ ರಸ್ತೆಯಲ್ಲಿ ಒಬ್ಬಳೇ ಎಂದಾದರೂ ಬೆಟ್ಟದವರೆಗೂ ಹೋದೇನು ಅಂದುಕೊಂಡಿದ್ದೆ. ಈಗ ನಡೆದ ಘಟನೆ ಆಗೀಗ ಹೋಗಿ ಬರುತ್ತಿದ್ದ ಅರ್ಧ ಕಿಲೋಮೀಟರಿನ ಆಸೆಯನ್ನೂ ತಪ್ಪಿಸಿದೆ. ಈಗ ಒಂದಷ್ಟು ದೂರ ಹೋದರೆ ಚಿರತೆಯ ನೆನಪಿಗೂ ಮುಂಚೆ ಎಲ್ಲಿಂದಲೋ ಬಂದು ಬೀಳಬಹುದಾದ ಮನುಷ್ಯಪ್ರಾಣಿಯ ವಾಸನೆ ಬೆಚ್ಚಿಬೀಳಿಸುತ್ತದೆ.

ಈಗಲೂ ಮುಂದೆಯೂ ಯಾವಾಗಲೂ ಬೆಟ್ಟಕ್ಕೆ ಹೋಗುವ ಆ ರಸ್ತೆಯನ್ನು ದಾಟವಾಗ ಸ್ಕೂಟರ್ ತಂತಾನೇ ನಿಧಾನವಾಗುತ್ತದೆ. ಹಸಿರು ದಾರಿಯ ಕಪ್ಪು ರಸ್ತೆಯಲ್ಲಿ ಅರ್ಧಕಿಲೋಮೀಟರ್ ದಾಟಿದರೆ ಸಿಗುವ ಕಲ್ಲು ಬೆಂಚೊಂದು ಅಲ್ಲಿಂದಲೇ ಕಂಡು ಕರೆಯುತ್ತದೆ. “ಬೆಟರ್ ಲಕ್ ನೆಕ್ಸ್ಟ್ ಟೈಂ” ಅಂತ ಅದು ನನಗೂ ನಾನು ಅದಕ್ಕೂ ಹೇಳಿದಂತೆ ಮಾಡಿ, ಗಾಡಿ ಚಾಲೂ ಮಾಡುತ್ತೇನೆ. ಆಷಾಡದ ಗಾಳಿಗೆ ಮುಖವೊಡ್ಡಿ ಅಲ್ಲಿ ಕೂತು ಆಡಬೇಕಾದ ಆಪ್ತಮಾತುಗಳೆಲ್ಲ ಒಳಗೇ ಕರಗುತ್ತವೆ. ಥೇಟು ಡಾಲ್ಫಿನ್ನಿನ ಐಸ್ಕ್ರೀಮಿನಂತೆ.

ಇದನ್ನೂ ಓದಿ : Meeting Point : ‘ನಿನಗೆ ಮಗಳು ಹುಟ್ಟಿದಾಗ ನನ್ನ ಆತಂಕ ಅರ್ಥ ಆಗುತ್ತೆ’

Published On - 10:00 am, Thu, 9 September 21