ಕೋವಿಡ್; ಯಾರಿಗೆ ಯಾರೂ ಇಲ್ಲ ಎಂಬ ಮುಖವೂ ಇದಕ್ಕಿದೆ. ಯಾರಿಗೋ ಯಾರೋ ಇದ್ದಾರೆ ಎಂಬ ಬೆನ್ನೂ ಇದಕ್ಕಿದೆ. ಇದರ ಅದೃಶ್ಯನಾಲಗೆಯಿಂದ ತಪ್ಪಿಸಿಕೊಳ್ಳುವುದೇ ಕ್ಷಣಕ್ಷಣದ ತಪನೆ. ಆದರೂ ಬಿಟ್ಟೀತೇ ತಟ್ಟದೆ? ‘ನನಗೆ ಹೀಗಾಯ್ತು, ಹೀಗಾಗಿದೆ, ಹೀಗಾಗಿತ್ತು, ಹೀಗೆ ಮಾಡಿದೆ’ ಸ್ವತಃ ಅನುಭವಿಸಿದ್ದನ್ನು ಹೇಳಿಕೊಳ್ಳಲು ಸ್ವಲ್ಪ ಧೈರ್ಯ, ಬಿಚ್ಚುಮನಸ್ಸು ಬೇಕು ಮತ್ತು ಹೆಚ್ಚು ಸರಳತೆ ಬೇಕು. ‘ನಿಮಗೂ ಬಂದಿದೆಯಾ’ ಪ್ರಶ್ನಾರ್ಥಕಕ್ಕೋ, ಉದ್ಘಾರವಾಚಕಕ್ಕೋ ಇದು ವಾಲದೆ ‘ನನ್ನಿಂದೇನಾದರೂ ಸಹಾಯ’ ಎಂಬಲ್ಲಿಗೆ ಮುಂದುವರಿಸಲು ತುಸುವಾದರೂ ಅಂತಃಕರಣ ಬೇಕು. ಇದೆಲ್ಲದರ ತೇಲುಮುಳುಗುವಿನೊಂದಿಗೆ ನಾವೆಲ್ಲ ಧೇನಿಸುತ್ತಿರುವುದು ನಿರಾಯಾಸ ಬದುಕಿಗೆ ಮರಳುವುದನ್ನು. ಇನ್ನೇನು ಕೆಲ ತಿಂಗಳುಗಳಲ್ಲಿ ಅದೂ ಸಾಧ್ಯವಾಗುತ್ತದೆ. ಅದಕ್ಕಿಂತ ಮೊದಲು ಕೋವಿಡ್ನಿಂದಾಗಿ ಐಸೋಲೇಶನ್ಗೆ ಒಳಗಾಗಿ ನಡುಗಡ್ಡೆಯಂತಾಗಿದ್ದ ಬದುಕಿನ ಅನುಭವದೆಳೆಗಳನ್ನು ಇಲ್ಲಿ ಬಿಚ್ಚಿಕೊಂಡು ಹಗುರಾಗಬಹುದಲ್ಲ? ಇಂದಿನಿಂದ ಶುರುವಾಗುವ ಹೊಸ ಸರಣಿ ‘ಟಿವಿ9 ಕನ್ನಡ ಡಿಜಿಟಲ್ : ನನ್ನ ಕೋವಿಡ್ ಅನುಭವ’.
ಕೋವಿಡ್ನಿಂದ ಸುಧಾರಿಸಿಕೊಂಡವರು ತಮ್ಮ ಅನುಭವಗಳನ್ನು ಇಲ್ಲಿ ಮೆಲುಕು ಹಾಕಲಿದ್ದಾರೆ. ನೀವೂ ಕೂಡ ಬರೆಯುವ ಮೂಲಕ ಈ ಸರಣಿಯಲ್ಲಿ ಭಾಗಿಯಾಗಬಹುದು. tv9kannadadigital@gmail.com
*
ಮೈಸೂರಿನ ಗುರುರಾಜ್ ಎಂ. ಎಸ್. ನರಕಯಾತನೆ ಅನುಭವಿಸಿ ಮನೆಗೆ ಮರಳಿದರೂ ಈಗಲೂ ಆಸ್ಪತ್ರೆಯಲ್ಲಿ ಕ್ವಾರಿಯ ಮುದುಕ ತೋರಿಸಿದ ‘ಸಿದ್ದು ಶೋ’ ನಿದ್ದೆಯಲ್ಲಿ ಬೆಚ್ಚಿ ಬೀಳಿಸುವುದು ಯಾಕೆ? ಓದಿ.
*
ಸಣ್ಣಗೆ ಗಂಟಲು ಕೆರೆತ ಶುರುವಾಗಿದ್ದು 21-4-2021ರಂದು. ಅದು ನನಗೆ ಸಾಮಾನ್ಯವಾದ್ದರಿಂದ ಸುಮ್ಮನಾದೆ. ಆದರೆ ರಾತ್ರಿ ಮೈ ಜುಂ ಎನ್ನುವಂತೆ ಜ್ವರ ಕಾಡಿತು. ಮಾತ್ರೆಯಿಂದ ಕಡಿಮೆಯಾಯಿತು. ಆದರೆ ಮತ್ತೆ ಮರುಕಳಿಸಿತು. ಇನ್ನೊಂದು ಮತ್ತೊಂದು ಮಾತ್ರೆಯೊಂದಿಗೆ ಎರಡುದಿನ ಕಳೆಯಿತು. ಚಳಿ ಜ್ವರ ಮತ್ತು ಮೈಕೈ ನೋವು ಶುರು. ಸುನೀತಾಳ ತಂಗಿ ಡಾಕ್ಟರ್ ಆದ್ದರಿಂದ ಆ್ಯಂಟಿಬಯೋಟಿಕ್ಸ್ ಕೊಡಲು ಶುರು ಮಾಡಿದರು. ಜ್ವರ ಸ್ವಲ್ಪ ಇಳಿಯಿತು. ಆಫೀಸಿಗೆ ರಜೆ ಹಾಕಿದ್ದರಿಂದ ಡಾಕ್ಯುಮೆಂಟೇಶನ್ಗೆ ಯಾವುದಕ್ಕೂ ಇರಲಿ ಎಂದು ಒಮ್ಮೆ ಕೋವಿಡ್ ಟೆಸ್ಟ್ ಮಾಡಿಸಿದರಾಯಿತೆಂದು ಭಾನುವಾರದಂದು ಜಾಕಿ ಕ್ವಾರ್ಟರ್ಸ್ ಆಸ್ಪತ್ರೆಗೆ ಹೊರಟೆ. ಸುಸ್ತಾಗತೊಡಗಿತು. ದಿಢೀರ್ ತಲೆಸುತ್ತು , ಒಂದು ದೀರ್ಘ ಶ್ವಾಸ ತೆಗೆದುಕೊಂಡೆ ಶ್ವಾಸಕೋಶದೊಳಗೆ ಎಂದೂ ಅನುಭವಿಸದ ವಿಚಿತ್ರ ಸಂಕಟ. ಕಣ್ಣು ಮಂಜಾಗಿ ಅಲ್ಲೇ ಮರಕ್ಕೆ ಒರಗಿ ನಿಂತುಕೊಂಡೆ. ನನಗೆ ಇದು ಕೊರೊನಾನೇ ಇರಬೇಕು ಅನ್ನಿಸಿತು. ಸಹಾಯಕ್ಕಾಗಿ ಯಾರಿಗಾದರೂ ಫೋನ್ ಮಾಡಿ ಡ್ರಾಪ್ ಕೇಳೋಣ ಎನ್ನಿಸಿತು. ಆದರೆ ನನಗಿದ್ದ ರೋಗ ಅವರಿಗೂ ಹರಡಿದರೆ? ಹೇಗೋ ಸಾವರಿಸಿಕೊಂಡು ಟೆಸ್ಟ್ ಮಾಡಿಸಲು ಸಾಧ್ಯವಾಗದೆ ವಾಪಸ್ ಮನೆಗೆ ಬಂದು ವಿಷಯ ತಿಳಿಸಿದೆ.
ಕೊರೊನಾಗೆ ಹೆದರಿರಬೇಕು ಎಂದು ಸುನೀತಾ ತನ್ನ ತಂಗಿಗೆ ವಿಷಯ ತಿಳಿಸಿದಾಗ ಯಾತಕ್ಕೂ ಇರಲಿ ಎಂದು ಕೊರೊನಾಗೆ ನೀಡುವ ಔಷಧಿ ಕಳಸಿದರು. ಮಾರನೇ ದಿನ ನಾನು ಸುನೀತಾ ಟೆಸ್ಟ್ ಗೆ ಹೋದೆವು. ಜ್ವರ ಹೋಗಿತ್ತು. ಆದರೆ ವಾಸನೆ, ರುಚಿ ಕಳೆದಿತ್ತು. ಬಹುಶಃ ಮಾತ್ರೆಗಳಿಂದ ಹೀಗೆ ಆಗುತ್ತಿರುವುದು ಎಂದುಕೊಂಡರೂ, ಅನುಮಾನವಿತ್ತು. ನಾಲ್ಕು ದಿನಗಳಾದರೂ ರಿಪೋರ್ಟ್ ಬರಲಿಲ್ಲ. ಬಹುಶಃ ನೆಗೆಟಿವ್ ಇರಬಹುದು ಎಂದು ಎಲ್ಲರೂ ಹೇಳಿದರು. ಆದರೆ ನಾಲ್ಕನೇ ದಿನ ಶ್ವಾಸಕೋಶದಲ್ಲಿ ಉಸಿರು ಎಳೆದುಕೊಂಡರೆ ನೋವು ಶುರು. ಮತ್ತೆ ಚಳಿ. ಕೊನೆಗೆ ನಂಬರ್ ಚೆಕ್ ಮಾಡಿಸಿದಾಗ ಪಾಸಿಟಿವ್! ಅಷ್ಟರಲ್ಲಿ ಸಣ್ಣ ಸುಸ್ತು ಬಿಟ್ಟರೆ ಬೇರೇನೂ ಇರಲಿಲ್ಲ. ಆದರೆ ಸಂಜೆ ಆಗುತ್ತಿದ್ದಂತೆ ತಡೆಯಲು ಸಾಧ್ಯವಿಲ್ಲದ ಸುಸ್ತು. ರಾತ್ರಿ 8 ಗಂಟೆಗೆ ಸುನೀತಾ ಡಾಕ್ಟರ್ ಬಳಿ ವಿವರಿಸಿ ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಿದಳು. ಕೋವಿಡ್ ಆಸ್ಪತ್ರೆಗೆ ಬೇಡ ಎಂದು ಹಟ ಮಾಡಿದೆ. ಆದರೇ ಸ್ವಲ್ಪ ಸಮಯದಲ್ಲೇ ಸತ್ತೇ ಹೋಗುತ್ತೇನೆನ್ನುವಷ್ಟು ಸುಸ್ತು. ಅಷ್ಟರಲ್ಲಿ ಆ್ಯಂಬುಲೆನ್ಸ್ ಸೈರನ್. ತುರ್ತುಚಿಕಿತ್ಸೆ ದೊರೆಯುತ್ತಿದ್ದಂತೆ ಸಮಾಧಾನವೆನ್ನಿಸಿತು. ಆಕ್ಸಿಜನ್ ಲೆವೆಲ್ 81 ತೋರಿಸುತ್ತಿತ್ತು. ಆತನಕ ನನ್ನ ದೇಹದಲ್ಲಿ ಆಕ್ಸಿಜನ್ ಪ್ರಮಾಣಕಡಿಮೆ ಇತ್ತು ಎನ್ನುವುದು ಅರಿವಿಗೆ ಬಂದಿತು.
ಅಲ್ಲಿಂದ ಸೀದಾ ನನ್ನನ್ನು ಕೋವಿಡ್ ವಾರ್ಡ್ಗೆ ಶಿಫ್ಟ್ ಮಾಡಲಾಯಿತು. ನರ್ಸ್ಗಳು ನರಕ್ಕಾಗಿ ಕೈಗಳಿಗೆ ಒಂದೇ ಸಮ ಸೂಚಿ ಚುಚ್ಚಲು ಶುರುಮಾಡಿದರು. 10 ಗಂಟೆಗೆ ದೊಡ್ಡ ಮಾಸ್ಕ್ ಮುಖಕ್ಕೆ ಬಿಗಿದು, High Pressure Oxygen ನೀಡಲು ಆರಂಭಿಸಿದರು. ನಾನು ಒಂದು ಸಣ್ಣ ಉಸಿರು ಎಳೆದುಕೊಂಡರೂ ಹತ್ತುಪಟ್ಟರಷ್ಟು ಒತ್ತಡದೊಂದಿಗೆ ಆಕ್ಸಿಜನ್ ಮೂಗಿನೊಳಗೆ ಹೋಗುತ್ತಿತ್ತು. ಹಾಗಾಗಿ ಗಂಟಲು ಬೇಗ ಒಣಗಿ ಹೋಗುತ್ತಿತ್ತು. ದೇಹಕ್ಕೆ ಸುಸ್ತು ಮನಸಿಗೆ ಮಂಕು ಕವಿಯಲು ಆರಂಭವಾಗಿತ್ತು. ಪ್ರವೇಶಕ್ಕೆ ಅವಕಾಶ ಇಲ್ಲದ್ದರಿಂದ ದೂರದಲ್ಲಿ ನಿಂತು ಸುನೀತಾ ಕೈ ಸನ್ನೆ ಮಾಡಿ ಏನಾದರೂ ಸಹಾಯ ಬೇಕಾ ಎಂದು ಕೇಳುತ್ತಿದ್ದಳು. ಅವಳಿಲ್ಲದೇ ಇದ್ದಿದ್ದರೆ ಬಹುಶಃ ಏನೋ ಆಗಬೇಕಿತ್ತು.
ಜೀವವಾಯು ಕಡಿಮೆ ಆದರೆ ಈ ರೋಗದ ವಿರುದ್ಧ ಹೋರಾಡಬೇಕು, ಪಾಸಿಟಿವ್ ಆಗಿ ಆಲೋಚಿಸಬೇಕು, ಬದುಕಬೇಕು ಎಂಬ ಛಲವಿರಬೇಕು ಇತ್ಯಾದಿ ಘೋಷಣೆಗಳು, ಕಲ್ಪನೆಗಳು ನನ್ನ ಬಳಿ ಹೇಗೆ ಸುಳಿದಾವು? ನಾನು, ನನ್ನದು, ನನ್ನ ದಿನಚರಿ ಇವ್ಯಾವನ್ನೂ ಯೋಚಿಸುವ ಶಕ್ತಿ ಇದ್ದರಲ್ಲವೆ? ನಿಜ ಹೇಳಬೇಕೆಂದರೆ ಇದು ಅಪ್ಪಟ ವಿಜ್ಞಾನ. ಔಷಧಿಗಳಿಂದಾಗಿ ವಿಚಿತ್ರ ಭ್ರಮಾಲೋಕಕ್ಕೆ ಒಳಗಾದಂತೆ ಭಾಸವಾಗಿ ನಮ್ಮ ದೇಹ ನಮ್ಮ ಅನುಮತಿಗೂ ಕಾಯದೆ ಹೋರಾಡಲು ಪ್ರಾರಂಭಿಸುತ್ತದೆ. ನನ್ನ ಪಕ್ಕದಲ್ಲಿ ಯಾರೋ ಧಡೂತಿ ದೇಹದ ವ್ಯಕ್ತಿ ಬಹಳ ಹೊತ್ತಿನಿಂದ ನಿಂತಿದ್ದ ಹಾಗನ್ನಿಸಿತು. ಕಣ್ಣು ಮಂಜಾಗಿದ್ದರಿಂದ ಪಕ್ಕಕ್ಕೆ ತಿರುಗಿ ದಿಟ್ಟಿಸಿ ನೋಡಿದಾಗ ಬಹಳ ಹತ್ತಿರವೇ ಇಟ್ಟಿದ್ದ ನೀರಿನ ಬಾಟಲಿಯಾಗಿತ್ತು.
ಮತ್ತೆ ಬಂದು ನರ್ಸ್ High Pressure Oxygen ನೀಡಿದರು. ಗಂಟಲು ಒಣಗಿಹೋದರೂ ನೀರು ಕುಡಿಯುವಂತಿರಲಿಲ್ಲ. ಆ ಹಿಂಸೆಯಲ್ಲೂ ದೇಹ ಸೋತು ನಿದ್ರೆಗೆ ಜಾರಿತ್ತು. ಯಾರೋ ಕತ್ತು ಹಿಸುಕುತ್ತಿರುವ ಅನುಭವ. ಛಕ್ಕನೆ ಎಚ್ಚರಗೊಂಡೆ. ಯಂತ್ರ ಆಕ್ಸಿಜನ್ ಅನ್ನು ನನ್ನ ಶ್ವಾಸಕೋಶಕ್ಕೆ ದೂಡುವುದನ್ನು ಮುಂದುವರೆಸಿತ್ತು. ಆಗ ಮುಂಜಾನೆ ನಾಲ್ಕು ಗಂಟೆ. ಸದ್ಯ ನರ್ಸ್ ಬಂದು, ‘ಹಿಂದೆ ಅನ್ನಿಸುತ್ತಿದೆಯಾ, ತೆಗೆಯಲಾ?’ ಎಂದಾಗ ಹೌದೆಂದು ತಲೆ ಆಡಿಸಿದೆ. ಯಂತ್ರ ಕಳಚಿದಾಗ ನಿದ್ರೆಗೆ ಜಾರಿದೆ. ಕಣ್ಣು ತೆರೆದಾಗ ಬೆಳಗ್ಗೆ 5.30. ಈ ಪ್ರಶಸ್ತ ಸಮಯದಲ್ಲೇ ಆ ವಾರ್ಡಿನಲ್ಲಿರುವ ಇರುವ ಎಲ್ಲಾ ರೋಗಿಗಳಿಗೂ ಇಂಜೆಕ್ಷನ್ ನೀಡುವುದು. ನನಗೆ ದಿನಕ್ಕೆ ಎರಡು ಬಾರಿ ಈ ಭಾಗ್ಯವಿತ್ತು. ಪ್ರತೀ ಬಾರಿ ಆರರಿಂದ ಎಂಟು ಇಂಜೆಕ್ಷನ್ಗಳು, ರ್ಆಟಿಬಯೋಟಿಕ್ಸ್, ಸ್ಟಿರಾಯ್ಡ್. ಇನ್ನು ಈಗ ನಲ್ಲಿಯ ಪೈಪಿನಂತೆ ಇದ್ದ ಆಕ್ಸಿಜನ್ ಪೈಪ್ ಅನ್ನು ಮೂಗಿನಲ್ಲಿ ಇಟ್ಟುಕ್ಕೊಳ್ಳಲೇಬೇಕಿತ್ತು. ಅಷ್ಟರಲ್ಲೇ ನರ್ಸ್ ಬಂದು ‘ಸರ್, ಗುರುರಾಜ್ ನೀವೇನಾ?’ ಎಂದರು. ಹೌದೆಂದೆ. ‘ಸುನೀತಾ ಮೇಡಮ್ ಒಂದು ಹತ್ತು ಸಲ ಫೋನ್ ಮಾಡಿ ವಿಚಾರಿಸುತ್ತಿದ್ದರು’ ಎಂದಾಗ ನಕ್ಕು ಸುಮ್ಮನಾದೆ. ಬೆಳಿಗ್ಗೆ 7.30ಕ್ಕೆ ಕಾಫಿ. ನಂತರ 8 ಗಂಟೆಗೆ ತಿಂಡಿ. ಉಳಿದಂತೆ ವಿಚಿತ್ರ ಮಂಕು. ಅರೆಬರೆ ನೆನಪು. ಎದ್ದು ನಾಲ್ಕು ಹೆಜ್ಜೆ ಹಾಕಿ ಮುಖ ತೊಳೆಯುವ ಯೋಚನೆಯೂ ಮೂಡಿರಲಿಲ್ಲ. ಆದರೆ 6ನೇ ದಿನ ನನ್ನ ಗ್ರಹಚಾರ ಕೆಟ್ಟಿತ್ತು, ಬರೇ ಮುಖ ತೊಳೆಯುವ ಯೋಚನೆ ಸಾವಿನೊಂದಿಗೆ ಸೆಣಸುವಂತೆ ಮಾಡಿಬಿಡುತ್ತದೆ ಎಂಬ ಸಣ್ಣ ಸೂಚನೆಯೂ ನನಗಿರಲಿಲ್ಲ.
ಬೇಡದ ಲೋಕದಲ್ಲಿ ತೇಲಾಡುತ್ತಿದ್ದ ನನಗೆ ಸ್ವಲ್ಪ ಎಚ್ಚರವಾದಂತೆ ಆಗಿದ್ದು 5 ದಿನಗಳ ನಂತರ. ಉಸಿರು ಎಳೆದು ಕೊಂಡರೆ ಸಾಕು ಅದೇ ನೋವು. ಅದಕ್ಕೆ ದೀರ್ಘವಾದ ಉಸಿರಾಡುವುದನ್ನೇ ಬಿಟ್ಟುಬಿಟ್ಟಿದ್ದೆ. ಆಕ್ಸಿಜನ್ ಇದ್ದುದರಿಂದ ಕಷ್ಟವಾಗುತ್ತಿರಲಿಲ್ಲ. ಅಂದು ಬೆಳಗ್ಗೆ ಬಾತ್ರೂಂಗೆ ಹೋಗಲೇಬೇಕಾದ ಪರಿಸ್ಥಿತಿ. ಅಸಹ್ಯ ಮತ್ತು ಭಯ ಪಟ್ಟುಕೊಂಡೇ ಆಕಡೆ ನಡೆದೆ. ಆಕ್ಸಿಜನ್ ಮಾಸ್ಕ್ ತೆಗೆದಿದ್ದರಿಂದ ಬೇಗ ನಿತ್ರಾಣಗೊಂಡೆ. ಇನ್ನೇನು ಬಂದಾಯಿತು ಮುಖ ಮೈ ತೊಳೆದುಬಿಡೋಣವೆಂದು ಶರ್ಟ್ ತೆಗೆದು ನೀರು ಚಿಮುಕಿಸಿಕೊಂಡು ಮುಖಕ್ಕೆ ಸೋಪ್ ಸವರಿಕೊಂಡಿದ್ದಷ್ಟೇ. ಛಕ್ಕನೆ ಶ್ವಾಸಕೋಶ ಸಿಕ್ಕಿಕೊಂಡಂಥ ಅನುಭವ. ಸಣ್ಣ ಬಿಕ್ಕಳಿಕೆಯೊಂದಿಗೆ ಉಸಿರಾಡುವುದು ನಿಲ್ಲತೊಡಗಿತು. ಬಿಕ್ಕಳಿಕೆ ಹೆಚ್ಚಾಯಿತು. ಉಸಿರು ಸಿಕ್ಕಿಹಾಕಿಕೊಂಡುಬಿಟ್ಟಿತು. ಏನಾಗುತ್ತಿದೆ ಎಂದು ಅರ್ಥ ಮಾಡಿಕೊಳ್ಳಲು ಆಗಲಿಲ್ಲ. ತಕ್ಷಣ ತಲೆ ತಿರುಗಿತು, ಕಣ್ಣು ಮಂಜಾಗಿ ಹೋಯಿತು. ಕಿವಿ ಮುಚ್ಚಿದಹಾಗೆ ಆಗಿ ಎದೆಬಡಿತ ನಗಾರಿಯ ಶಬ್ದದಂತೆ ಕಿವಿಪೂರ್ತಿ ತುಂಬಿತು. ಬರೇ ಚಡ್ಡಿಯಲ್ಲಿದ್ದ ನಾನು ಕುಸಿದು ಕುಳಿತೆ, ಸಾವು ಹತ್ತಿರ ಬಂದು ನಿಂತಿತ್ತು. ನನ್ನನ್ನು ನಾನು ಸಂಪೂರ್ಣವಾಗಿ ಮರೆತಿದ್ದೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಮಕ್ಕಳಾಗಲೀ, ಮಡದಿಯಾಗಲೀ ಸ್ವತಃ ನಾನೇ ಮಾಯವಾಗಿದ್ದೆ.
ಆದರೆ ಮೊದಲೇ ವಿವರಿಸಿದಂತೆ ದೇಹ ತನ್ನ ಅಂತಿಮ ಘಳಿಗೆಯಲ್ಲಿಯೂ ತಾನೇ ಹೋರಾಟ ನಡೆಸುತ್ತದೆ. ಹೇಗೋ ಮೇಲೆದ್ದೆ. ಬೆರಳುಗಳು ಚಿಲಕವನ್ನು ಹುಡುಕುತ್ತಿದ್ದವು. ಮಂಜಾದ ಕಣ್ಣಿಗೆ ಕಾಣಲಿಲ್ಲ. ಹೇಗೋ ಸಿಕ್ಕ ಚಿಲಕ ತೆಗೆದು ಬಾಗಿಲೊದ್ದು ದೆವ್ವದಂತೆ ಹೊರಬಂದ ನನಗೆ ಯಾರೂ ಸಹಾಯಕ್ಕೆ ಬರಲಿಲ್ಲ. ಮಂಜಾದ ಕಣ್ಣು ನನ್ನ ಹಾಸಿಗೆಯ ಮೇಲಿದ್ದ ಆಕ್ಸಿಜನ್ ಮೇಲೆ ಮಾತ್ರ ಇತ್ತು. ಭಾರವಾದ ಹೆಜ್ಜೆ ಹಾಕುತ್ತಾ ನಾನು ಹಾಸಿಗೆ ತಲುಪಿ ಆಕ್ಸಿಜನ್ ಪೈಪ್ ಅನ್ನು ಮೂಗಿಗೆ ಅರ್ಧಂಬರ್ಧ ತುರುಕಿ ಬಿದ್ದಿದ್ದಷ್ಟೇ. ಪ್ರಜ್ಞೆ ಎಷ್ಟು ಸಮಯ ಹೋಗಿತ್ತು ತಿಳಿಯಲಿಲ್ಲ. ಕಣ್ಣು ತೆರೆದಾಗ ಇಡೀ ಮನಸ್ಸು ತಿಳಿಯಾಗಿತ್ತು. ಉಸಿರು ಸಹಜ ಸ್ಥಿತಿಗೆ ಬಂದಿತ್ತು. ಆದರೆ ನನಗೆ ನಾನೇ ಅಪರಿಚಿತ ಎನ್ನಿಸುತ್ತಿದ್ದೆ. ನಿಧಾನ ನೆನಪಿಗೆ ಬರಲಾರಂಭಿಸಿತು. ಎಂಥ ಘಟನೆಯನ್ನು ದಾಟಿ ಬಂದೆ ಎಂದು ಅರ್ಥ ಮಾಡಿಕೊಳ್ಳಲು ಸಮಯ ತೆಗೆದುಕೊಂಡೆ. ನಿಜಕ್ಕೂ ನನ್ನ ಒಂದು ಸಣ್ಣ ಮುಂದಾಲೋಚನೆ ಜೀವ ಉಳಿಸಿತ್ತು.
ಬಾತ್ರೂಂಗೆ ಹೋಗಿ ಸುಸ್ತಾದರೆ ಹೆಚ್ಚು ಆಕ್ಸಿಜನ್ ಪೂರೈಕೆಯಾಗಲೆಂದು 6 ಲೀಟರಿಗೆ ನಾನೇ ಸೆಟ್ ಮಾಡಿ ಆನ್ ನಲ್ಲೇ ಇಟ್ಟುಹೋಗಿದ್ದೆ.
ಉಸಿರು ನಿಂತು ನಾನು ಯಾರು ಎಂಬುದೇ ಮರೆತು ಹೋದಂತಾಗುತ್ತಿದ್ದರೂ ದೇಹವು ತನ್ನಿಂದ ತಾನೇ ಹೋರಾಟಕ್ಕಿಳಿದಿದ್ದು ಆಶ್ಚರ್ಯ. ಒಂದು ಸಣ್ಣ ಇರುವೆಯನ್ನು ಹೊಸಕಿ ಹಾಕಿದಾಗಲೂ ಉಳಿದ ಜೀವದಲ್ಲಿ ಮುಂದೆ ಸಾಗಲು ಪ್ರಯತ್ನಿಸುತ್ತದೆ. ಈ ಚೈತನ್ಯ ಮನುಷ್ಯನಲ್ಲಿಯೂ ಇದೆ. ಈ ಘಟನೆಯನ್ನು ಸುನೀತಾಗೆ ತಿಳಿಸಿದೆ. ಗಾಬರಿಗೊಂಡ ಆಕೆ ಡಾಕ್ಟರ್ಗೆ ತಿಳಿಸಿರಬೇಕು. ಸ್ವಲ್ಪ ಹೊತ್ತಿನಲ್ಲಿ ವ್ಹೀಲ್ ಚೇರ್ ಸಮೇತ ಆಕ್ಸಿಜನ್ ಸಿಲಿಂಡರ್ ಬಂದಿತು. ನರ್ಸ್, ‘High contrast CT scan ಇದೆ ಹೊರಡಿ’ ಎಂದರು. ವ್ಹೀಲ್ ಚೇರ್ ಮೇಲೆ ಕುಳಿತೆ. ಭಾರೀ ಗಾತ್ರದ ಸಿಲಿಂಡರನ್ನು ಇಬ್ಬರು ತಳ್ಳಿಕೊಂಡು ಹೊರಟರು. ಎಡ್ಮಿಟ್ ಆದಾ ಒಮ್ಮೆ CT scan ಮಾಡಿದ್ದರು. ಆದರೆ ಇದು High contrast. ನರ್ಸ್ ಹೇಗೆ ಮಲಗಬೇಕು ಎಂದು ವಿವರಿಸುವುದರೊಳಗೆ ಯಂತ್ರ ನನ್ನದೇ ಎಂಬಂತೆ ನಾನೇ ಮಲಗಿ ಸರಿ ತಾನೆ ಎಂದೆ. ಆದರೇ ಈ ಬಾರಿ ನನ್ನ ನರಕ್ಕೆ ಸಣ್ಣ ಪೈಪ್ ಅಳವಡಿಸಿ ‘ಇಂಜೆಕ್ಷನ್. ಕೈ ಅಲುಗಾಡಿಸಲು ವಂತಿಲ್ಲ’ ಎಂದರು. ತಲೆ ಆಡಿಸಿದೆ. ಅವರೆಲ್ಲ ವಿಕಿರಣದಿಂದ ಕಾಪಾಡಿಕೊಳ್ಳಲು ರೂಮಿನಿಂದ ಹೊರಹೋಗಬೇಕಿತ್ತು. ದೊಡ್ಡ ಗಾಜಿನ ಕಿಟಕಿಯಿಂದ ಹಲವರು ನನ್ನನ್ನು ಗಮನಿಸುತ್ತಿದ್ದರು. ಮೈಕಿನಿಂದ ಧ್ವನಿಯೊಂದು ಬಂತು. ‘ಶುರು ಮಾಡುತ್ತೇವೆ. ನೋವಾಗುತ್ತದೆ ತಡೆದುಕೊಳ್ಳಿ. ಏನೇ ಆದರೂ ಕೈ ಅಲುಗಾಡಿಸುವಂತಿಲ್ಲ.’ ಭಾರೀ ಶಬ್ದದೊಂದಿಗೆ ನನ್ನನ್ನು Positionಗೆ ತಂದಾಗಿತ್ತು. ತಕ್ಷಣವೇ ಕೈಮೇಲೆ ಬೆಂಕಿಯ ರಸವನ್ನು ಭಾರೀ ಒತ್ತಡದೊಂದಿಗೆ ಸುರಿದಹಾಗೆ! ಮತ್ತದೇ ಧ್ವನಿ, ‘ತಡೆದುಕೊಳ್ಳಲೇಬೇಕು ಸರ್’ ಅಸಾಧ್ಯವಾದ ನೋವು. ಹಲ್ಲು ಕಚ್ಚಿ ಚೀರತೊಡಗಿದೆ. ಶ್ವಾಸಕೋಶದಲ್ಲಿ ಮಿಂಚಿನಂತೆ ಆ ದ್ರವ ಹರಿಯುತ್ತಿರುವುದು ಸ್ಪಷ್ಟವಾಗಿ ಗೊತ್ತಾಯಿತು!
ಸ್ಕ್ಯಾನಿಂಗ್ ಮುಗಿದ ಬಳಿಕ ನನ್ನ ಸ್ವಸ್ಥಾನವಾದ ಬೆಡ್ ತಲುಪಿ ವಿಶ್ರಾಂತನಾದೆ. ರಾತ್ರಿ 7.45 ಊಟ ಮುಗಿದಿತ್ತು. ಫೋನ್ ಮಾಡಿದ ಸುನೀತಾ CT scan ರಿಪೋರ್ಟ್ ವಿವರಿಸಿ, ಶ್ವಾಸಕೋಶದಲ್ಲಿ ಶೇ 18 ಮಾತ್ರವೇ ಸೋಂಕು ತಗುಲಿದ್ದು. ರಕ್ತ ಹೆಪ್ಪುಗಟ್ಟಿದ ಸೂಚನೆಗಳೇನೂ ಇಲ್ಲ. ಹಾಗಾಗಿ ಹೆದರಬೇಡಿ. ಶ್ವಾಸಕೋಶ ತೊಡಕು ಹಾಕಿಕೊಂಡಿದ್ದಕ್ಕೆ ಬೇರೆ ಮಾತ್ರೆ ಕೊಡುತ್ತಾರೆ. ಹೆದರಬೇಡಿ’ ಎಂದಳು. ರಾತ್ರಿ ಮಲಗುವ ಮುಂಚೆ ಆ ಹೊಸ ಮಾತ್ರೆ ಕೊಟ್ಟರು. ತಕ್ಷಣವೇ ಕತ್ತಿನ ಭಾಗ ಸಂಪೂರ್ಣ ರಿಲ್ಯಾಕ್ಸ್ ಆಯಿತು. ಆ ರಾತ್ರಿ ಅದ್ಭುತವಾದ ನಿದ್ರೆ ಬಂದಿತ್ತು. ಮರುದಿನದಿಂದ ಶ್ವಾಸಕೋಶದ ವ್ಯಾಯಾಮ ಶುರುವಾಯಿತು. ಓಡಾಡಲು ಭಯಪಟ್ಟರೂ ಹೊಸ ಮಾತ್ರೆ ಇದೆ ಎಂಬ ಧೈರ್ಯದಿಂದ ಹೆಜ್ಜೆ ಹಾಕಲು ಆರಂಭಿಸಿದೆ.
ಆದರೆ, ಸ್ಯಾಚುರೇಷನ್ ಲೆವೆಲ್ 88-91ಗೇ ಬಂದು ನಿಲ್ಲುತ್ತಿತ್ತು. ಡಿಸ್ಚಾರ್ಜ್ ಮಾಡುವಂತೆ ಕೇಳಿದೆ. ಆಕ್ಸಿಜನ್ ಇಲ್ಲದೆ ಕುಸಿದು ಬಿದ್ದರೆ ಏನು ಗತಿ? ಬೇಡವೆನ್ನುತ್ತಿದ್ದರು. ಆದರೆ ನನ್ನ ದೊಡ್ಡ ಸಮಸ್ಯೆಯೇ ಊಟ. ಆಸ್ಪತ್ರೆ ವಾತಾವರಣದ ಮಧ್ಯೆ ಊಟ ಸೇರುತ್ತಿರಲಿಲ್ಲ. ಅರ್ಧ ಚಪಾತಿ, ನಾಲ್ಕು ತುತ್ತು ಅನ್ನ ತಿಂದು ಬಿಸಾಡಿ ಬಿಡುತ್ತಿದ್ದೆ. ಇಂದು ನನ್ನ ಆರೋಗ್ಯ ಮೇಲೆ ಪರಿಣಾಮ ಬೀರಿತ್ತು. ತುಂಬಾ ತೂಕ ಕಡಿಮೆ ಆಗಿತ್ತು. ಸ್ಯಾನಿಟೈಸ್ ಮಾಡಿಕೊಂಡು ಸುನೀತಾಳೊಂದಿಗೆ ಮನೆ ಸೇರಿದೆ.
ಅಲ್ಲಿ ಆಸ್ಪತ್ರೆಯಲ್ಲಿ ನನ್ನ ಪಕ್ಕದ ಬೆಡ್ನಲ್ಲಿ ಕ್ವಾರೆ ಮಾಲೀಕ ಇದ್ದ. ನೋಡಲು ಆರಡಿ ಎತ್ತರ. ಆರೋಗ್ಯವಾಗಿಯೇ ಇದ್ದ. ಆದರೆ ಬೆಡ್ ಸಿಗದ ಭಯದಲ್ಲೇ ಎಡ್ಮಿಟ್ ಆಗಿದ್ದ. ದಿನದ 24 ಗಂಟೆಯೂ ಫೋನ್. ವಾಟ್ಸಪ್, ಯೂಟ್ಯೂಬ್ ಗೊತ್ತಿಲ್ಲದವ. ಬರೇ ಫೋನ್ ಮಾತು. ಸ್ವಲ್ಪ ದಿನಗಳ ನಂತರ ಆತನ ಆರೋಗ್ಯ ಕೆಟ್ಟಿತು. ಆಗ ಫೋನ್ ಕರೆಗಳು ಕಡಿಮೆ ಆಯಿತು. ಈಗ ನನಗೆ ಒಂದು ಹೊಸ ತಲೆ ನೋವು ಶುರು. ಆತನ ಮೊಬೈಲ್ನಲ್ಲಿ ಇದ್ದುದು ಒಂದೇ ವೀಡಿಯೋ. ಅದೂ ಸಿದ್ದರಾಮಯ್ಯ ಅಸೆಂಬ್ಲಿಯಲ್ಲಿ ಕಿರುಚಾಡುವ ಕ್ಲಿಪ್. ಪುಣ್ಯಾತ್ಮ ಇಡೀ ದಿನ ಅದೊಂದೇ ವೀಡಿಯೋ ಲೌಡ್ಸ್ಪೀಕರ್ ಹಾಕಿ ನೋಡುತ್ತಿದ್ದ. ರಾತ್ರಿ 11.30. ಅದೇ ಶಬ್ದ. ಸಂಯಮ ಕಳೆದುಕೊಂಡ ನಾನು ರೇಗಲೇಬೇಕಾಯಿತು. ಅಂದಿನಿಂದ ಆತ ನೈಟ್ ಶೋ ಕ್ಯಾನ್ಸಲ್ ಮಾಡಿ ಮಾರ್ನಿಂಗ್, ಮ್ಯಾಟನೀ, ಈವನಿಮಗ್ ಶೋ ಮಾತ್ರ ತಪ್ಪದೆ ಓಡಿಸುತ್ತಿದ್ದ. ಅದೂ ಒಂದೇ ವಿಡಿಯೋ. ಅಲ್ಲಿಂದ ಡಿಸ್ಚಾರ್ಜ್ ಆಗುವಾಗಲೂ ಕೇಳಿದ ಒಂದೇ ಒಂದು ವಾಕ್ಯ ಈಗಲೂ ನಿದ್ದೆಯಲ್ಲಿ ಬೆಚ್ಚಿ ಬೀಳಿಸುತ್ತವೆ; ಮಿಸ್ಟರ್ ಯಡಿಯೂರಪ್ಪ, ಯೂ ಆರ್ ಅನ್ಫಿಟ್ ಟು ಬಿ ಸಿಎಂ’
ಇದನ್ನೂ ಓದಿ : My Covid Experience : ಇದು ಪುನರ್ಜನ್ಮವೇ, ಎಷ್ಟೆಲ್ಲ ಜನರ ಋಣ ತೀರಿಸುವುದು ಬಾಕಿ ಇದೆ
Published On - 5:54 pm, Thu, 17 June 21