My Covid Experience : ಹೇ ಪೂರ್ಣಿಮೆ! ಸೈರಿಸಿಕೋ ನನ್ನ ಉಪಟಳ ನಿನ್ನ ಸಹಾಯಕ್ಕೆ ಯಾರೂ ಬಾರರು…

My Covid Diary : ‘ನಮ್ಮೂರಿನ ಹೊಳೆ ಸುವರ್ಣೆಯು ಧಾರಾಕಾರವಾಗಿ ಸುರಿದ ಮಳೆಗೆ ಉಕ್ಕಿ ರೌದ್ರಾವತಾರ ತಾಳಿದಳು. ನಡುರಾತ್ರಿ ಸಾಲುಸಾಲಾಗಿ ಬಂದ ಕರೆಗಳಿಗೆ ಓಗೊಟ್ಟು  ಗಂಡಹೆಂಡತಿ ಇಬ್ಬರೂ ನೆರೆ ಬಂದ ಸ್ಥಳಗಳಿಗೆ ಓಡಿದೆವು. ಯಾವುದು ರಸ್ತೆ, ಯಾವುದು ಹೊಳೆ, ಎಲ್ಲಿದೆ ಮನೆಗಳು ಒಂದೂ ತಿಳಿಯದು‌. ಕೇವಲ ಕೆಂಬಣ್ಣದ ನೀರು, ನೀರು ನೀರು. ಎಲ್ಲೆಡೆ ಜಲಾವೃತ. ರಭಸದಲ್ಲಿ ಉಕ್ಕುಕ್ಕಿ ಓಡುವ ಸುವರ್ಣೆ. ಅವಳ ದೊಡ್ಡ ಸ್ವರದ ಆರ್ಭಟ.‘ ಪೂರ್ಣಿಮಾ ಸುರೇಶ್

My Covid Experience : ಹೇ ಪೂರ್ಣಿಮೆ! ಸೈರಿಸಿಕೋ ನನ್ನ ಉಪಟಳ ನಿನ್ನ ಸಹಾಯಕ್ಕೆ ಯಾರೂ ಬಾರರು...
ಕವಿ, ರಂಗಕಲಾವಿದೆ, ನಟಿ, ಸಂಘಟಕಿ ಪೂರ್ಣಿಮಾ ಸುರೇಶ್
Follow us
ಶ್ರೀದೇವಿ ಕಳಸದ
|

Updated on:Jun 01, 2021 | 11:34 AM

ಕೋವಿಡ್; ಯಾರಿಗೆ ಯಾರೂ ಇಲ್ಲ ಎಂಬ ಮುಖವೂ ಇದಕ್ಕಿದೆ. ಯಾರಿಗೋ ಯಾರೋ ಇದ್ದಾರೆ ಎಂಬ ಬೆನ್ನೂ ಇದಕ್ಕಿದೆ. ಇದರ ಅದೃಶ್ಯನಾಲಗೆಯಿಂದ ತಪ್ಪಿಸಿಕೊಳ್ಳುವುದೇ ಕ್ಷಣಕ್ಷಣದ ತಪನೆ. ಆದರೂ ಬಿಟ್ಟೀತೇ ತಟ್ಟದೆ? ‘ನನಗೆ ಹೀಗಾಯ್ತು, ಹೀಗಾಗಿದೆ, ಹೀಗಾಗಿತ್ತು, ಹೀಗೆ ಮಾಡಿದೆ’ ಸ್ವತಃ ಅನುಭವಿಸಿದ್ದನ್ನು ಹೇಳಿಕೊಳ್ಳಲು ಸ್ವಲ್ಪ ಧೈರ್ಯ, ಬಿಚ್ಚುಮನಸ್ಸು ಬೇಕು ಮತ್ತು ಹೆಚ್ಚು ಸರಳತೆ ಬೇಕು. ‘ನಿಮಗೂ ಬಂದಿದೆಯಾ’ ಪ್ರಶ್ನಾರ್ಥಕಕ್ಕೋ, ಉದ್ಘಾರವಾಚಕಕ್ಕೋ ಇದು ವಾಲದೆ ‘ನನ್ನಿಂದೇನಾದರೂ ಸಹಾಯ’ ಎಂಬಲ್ಲಿಗೆ ಮುಂದುವರಿಸಲು ತುಸುವಾದರೂ ಅಂತಃಕರಣ ಬೇಕು. ಇದೆಲ್ಲದರ ತೇಲುಮುಳುಗುವಿನೊಂದಿಗೆ ನಾವೆಲ್ಲ ಧೇನಿಸುತ್ತಿರುವುದು ನಿರಾಯಾಸ ಬದುಕಿಗೆ ಮರಳುವುದನ್ನು. ಇನ್ನೇನು ಕೆಲ ತಿಂಗಳುಗಳಲ್ಲಿ ಅದೂ ಸಾಧ್ಯವಾಗುತ್ತದೆ. ಅದಕ್ಕಿಂತ ಮೊದಲು ಕೋವಿಡ್​ನಿಂದಾಗಿ ಐಸೋಲೇಶನ್​ಗೆ ಒಳಗಾಗಿ ನಡುಗಡ್ಡೆಯಂತಾಗಿದ್ದ ಬದುಕಿನ ಅನುಭವದೆಳೆಗಳನ್ನು ಇಲ್ಲಿ ಬಿಚ್ಚಿಕೊಂಡು ಹಗುರಾಗಬಹುದಲ್ಲ? ಇಂದಿನಿಂದ ಶುರುವಾಗುವ ಹೊಸ ಸರಣಿ ‘ಟಿವಿ9 ಕನ್ನಡ ಡಿಜಿಟಲ್ : ನನ್ನ ಕೋವಿಡ್ ಅನುಭವ’.

ಕೋವಿಡ್​ನಿಂದ ಸುಧಾರಿಸಿಕೊಂಡವರು ತಮ್ಮ ಅನುಭವಗಳನ್ನು ಇಲ್ಲಿ ಮೆಲುಕು ಹಾಕಲಿದ್ದಾರೆ. ನೀವೂ ಕೂಡ ಬರೆಯುವ ಮೂಲಕ ಈ ಸರಣಿಯಲ್ಲಿ ಭಾಗಿಯಾಗಬಹುದು. tv9kannadadigital@gmail.com 

*
ಉಡುಪಿಯಲ್ಲಿರುವ ಕವಿ, ರಂಗಭೂಮಿ-ಸಿನೆಮಾ ಕಲಾವಿದೆ, ಸಂಘಟಕಿ ಪೂರ್ಣಿಮಾ ಸುರೇಶ್ ಸಮಾಜಸೇವೆಯಲ್ಲಿ ಮೈಮರೆತು ಮುಳುಗಿದ್ದೇ ಮುಳುವಾಯಿತೆ?
*

ದು 202ರ ಮಾರ್ಚ 27. ಬೆಂಗಳೂರಿನ ಶಂಕರ ಪೌಂಡೇಷನ್ ನಲ್ಲಿ ‘ಸಿರಿ’ ಏಕವ್ಯಕ್ತಿ ಪ್ರಸ್ತುತಿ ನಿಗದಿಯಾಗಿತ್ತು. ಅದಕ್ಕೆ ಹೊಂದಿಕೊಂಡು 28ಕ್ಕೆ ಮತ್ತೆ ಬೆಂಗಳೂರಿನಲ್ಲಿ ಎರಡು ಪ್ರದರ್ಶನ. ನಮ್ಮ ‘ಅಮೋಘ’ ತಂಡದಲ್ಲಿ ಹೊಸ ಹುಮ್ಮಸ್ಸು. ಇನ್ನೂ 15-20 ದಿನವಿದೆ ಅನ್ನುವಾಗ ಸಂಸ್ಥೆಯವರು ನನ್ನನ್ನು ಮಾತಿಗೆ ಕರೆದಿದ್ದರು. ಆಗಿನ್ನೂ ಕೊರೋನಾ ಬಹು ಪರಿಚಿತವಾಗಿರಲಿಲ್ಲ. ದೂರದಲ್ಲಿ ಅಲ್ಲಿ ಇಲ್ಲಿ ಹೊಸ ಬಗೆ ವೈರಸ್, ಕಾಯಿಲೆಯ ಸುದ್ದಿಗಳು. ಬೆಂಗಳೂರಿಗೆ ಹೋದರೆ ಅಲ್ಲಲ್ಲಿ ಮುಖಕ್ಕೆ ಮಾಸ್ಕ್ ಧರಿಸಿದ, ಕೈಗಳಿಗೆ ಸ್ಯಾನಿಟೈಸರ್ ಹಚ್ಚಿಕೊಳ್ಳುವವರನ್ನು ಕಂಡು ಹ್ಹೋ… ಇದು ಜೋರಿನ ವೈರಸ್ ಇರಬೇಕು ಅಂದುಕೊಂಡೆ. ನನ್ನ ಸಿರಿ ನಾಟಕವು ಮುಂದೂಡಲ್ಪಟ್ಟಿತು. ಎಲ್ಲ ಕಡೆ ಬಂದ್ ಮಾಡುತ್ತಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ತಡೆಯಾಗಬಹುದು. ಮುಂದಕ್ಕೆ ಹಾಕುವ ಎಂದರು. ಏನೋ ಗಲಿಬಿಲಿ ಎದುರುಗೊಂಡು ಊರಿಗೆ ವಾಪಾಸಾದೆ.

ನನ್ನ ಬೆನ್ನ ಹಿಂದೆ ಬಂದಂತೆ ಕೊರೋನಾ ಎಲ್ಲ ಕಡೆ ವೇಗ ಪಡೆದುಕೊಂಡಿತು. ಬೆಂಗಳೂರು, ಮುಂಬೈ, ಮಂಗಳೂರು, ಉಡುಪಿ ಎನ್ನುತ್ತಾ ಚಾನಲ್ಗಳಲ್ಲಿ ಮುಖ್ಯ ಸುದ್ದಿಯಾಗುತ್ತ ನಮ್ಮ ಗ್ರಾಮೀಣ ಪ್ರದೇಶಗಳಲ್ಲೂ ಬಹು ಪರಿಚಿತವಾಗಿಬಿಟ್ಟಿತ್ತು. ಲಾಕ್ಡೌನ್ ಘೋಷಣೆಯಾಯಿತು. ನಮ್ಮ ವಾಟ್ಸ್ಯಾಪ್ ಸಾಹಿತ್ಯದ ಗ್ರೂಪ್​ಗಳಲ್ಲೂ ಕೊರೋನಾದ ಬಗ್ಗೆ, ಕೊರೋನಾ ವಾರಿಯರ್ಸ್ ಸೇವೆ, ಅವರ ಕಾರ್ಯಗಳ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಆಗಲೇ ಸಹಜವಾಗಿದ್ದ ಜನಜೀವನವು ಹಳಿ ತಪ್ಪಿತ್ತು. ದಿನಗೂಲಿ ಕೆಲಸಗಾರರ ಪಾಡು, ಮಧ್ಯಮ ವರ್ಗದ ಜನರ ಸಂಕಟಗಳು ಕಾಡುತ್ತಿದ್ದವು.

ಸಾಮಾಜಿಕ ಜೀವನದಲ್ಲಿ ತೊಡಗಿಸಿಕೊಂಡ ನನ್ನ ಗಂಡನಿಗೆ ನಾನೂ ಜೊತೆಯಾದೆ. ಕಷ್ಟದಲ್ಲಿದ್ದವರಿಗೆ  ಊಟ, ದಿನನಿತ್ಯದ ಜಿನಸು ವಸ್ತುಗಳ ಹಂಚಿಕೆ ಇತ್ಯಾದಿಗಳಲ್ಲೇ ಬ್ಯುಸಿಯಾಗಿದ್ದೆ. ಇದಕ್ಕಾಗಿ ಬಹುದೊಡ್ಡ ಕಾರ್ಯಕರ್ತರ ತಂಡವೇ ಸೇರಿಕೊಂಡಿತು. 150 ಜನರಿಗೆ ಮಧ್ಯಾಹ್ನದ ಊಟ ನೀಡುವ ಕೆಲಸವು 900 ಊಟ ತಯಾರಿಯವರೆಗೆ ತಲುಪಿತ್ತು. ಅದೆಷ್ಟೋ ಜನ ಈ ಕೈಂಕರ್ಯದಲ್ಲಿ ಜೊತೆಯಾದವರು. ಮಧ್ಯಾಹ್ನ ಆಗುತ್ತಲೇ ಬಂದು ನಿಲ್ಲುವ ವಾಹನಗಳು. ಏನೋ ಸಂತೃಪ್ತಿ.

My Covid Experience

ಕೋವಿಡ್​ ರೋಗಿಗಳಿಗೆ ಊಟದ ವ್ಯವಸ್ಥೆಯಲ್ಲಿ ತೊಡಗಿರುವ ಪೂರ್ಣಿಮಾ ಮತ್ತು ತಂಡ

ಅಷ್ಟರಲ್ಲೇ ಕೊರೋನಾದ ಸಂಕಟದ ನಡುವೆಯೇ ಹಠಾತ್ತನೆ ಪ್ರಕೃತಿಯು ಇನ್ನೊಂದು ಬಗೆಯಲ್ಲಿ ದಾಳಿ ನಡೆಸಿತು. ನಮ್ಮೂರಿನ ಹೊಳೆ ಸುವರ್ಣೆಯು ಧಾರಾಕಾರವಾಗಿ ಸುರಿದ ಮಳೆಗೆ ಉಕ್ಕಿ ರೌದ್ರಾವತಾರ ತಾಳಿದಳು. ನಡುರಾತ್ರಿ ಸಾಲುಸಾಲಾಗಿ ಬಂದ ಕರೆಗಳಿಗೆ ಓಗೊಟ್ಟು  ಗಂಡಹೆಂಡತಿ ಇಬ್ಬರೂ ನೆರೆ ಬಂದ ಸ್ಥಳಗಳಿಗೆ ಓಡಿದೆವು. ಯಾವುದು ರಸ್ತೆ, ಯಾವುದು ಹೊಳೆ, ಎಲ್ಲಿದೆ ಮನೆಗಳು ಒಂದೂ ತಿಳಿಯದು‌. ಕೇವಲ ಕೆಂಬಣ್ಣದ ನೀರು, ನೀರು ನೀರು. ಎಲ್ಲೆಡೆ ಜಲಾವೃತ. ರಭಸದಲ್ಲಿ ಉಕ್ಕುಕ್ಕಿ ಓಡುವ ಸುವರ್ಣೆ. ಅವಳ ದೊಡ್ಡ ಸ್ವರದ ಆರ್ಭಟ. ಯಾವತ್ತೂ ಸೌಮ್ಯಳಾಗಿ ಅಮ್ಮನಂತೆ ಸಲಹಿದ, ಸುತ್ತಲಿನ ಹಸಿರಿಗೆ, ಪಶು, ಪಕ್ಷಿ, ಪ್ರಾಣಿ, ಮನುಷ್ಯರಿಗೆ ಜೀವಜಲ ಉಣಿಸುತ್ತಿರುವವಳು ಇವಳೇ ಏನು? ನೋಡುವಾಗಲೇ ಉದರದಲ್ಲಿ ನಡುಕ ಹುಟ್ಟಿಸುತ್ತಿದ್ದಾಳೆ. ನಮ್ಮ ಕಣ್ಣೆದುರಿಗೇ ಕಟ್ಟಿದ ದನಕರುಗಳು ನಾಯಿ, ಬೆಕ್ಕು ಏನು ಯಾವುದೆಂದು ಗಮನಿಸದೆ ಸೆಳೆದುಕೊಂಡು ಹೋಗುವ ವಿದ್ರಾವಕ ದೃಶ್ಯ. ದಡದಲ್ಲಿ, ತಗ್ಗು ಪ್ರದೇಶದಲ್ಲಿದ್ದ ಅಷ್ಟೂ ಮನೆಗಳು ಕುಸಿದು ಪಾತ್ರೆ ಪಗಡಿಗಳೂ, ಅಗತ್ಯದ ದಾಖಲೆ ಪತ್ರಗಳೂ ಎಲ್ಲವೂ ಕಾಣೆಯಾಗಿ ನಿರಾಶ್ರಿತರಾಗಿ ಒದ್ದೆ ಬಟ್ಟೆಯಲ್ಲಿ ನಿಂತವರ ಕಣ್ಣುಗಳಲ್ಲಿ ಪಸರಿಸಿಕೊಂಡ  ಅನಾಥಭಾವ.

ಈ ಜನರಿಗೆ ತಕ್ಷಣಕ್ಕೆ ತಂಗಲು ಆಶ್ರಯ ಬೇಕಿತ್ತು. ಎಲ್ಲರಿಗೂ ಶಾಲೆಯಲ್ಲಿ ತಾತ್ಕಾಲಿಕ ನೆಲೆ ಕಲ್ಪಿಸಲಾಯಿತು. ಬಟ್ಟೆಬರೆ, ಊಟ ಎಲ್ಲ ವ್ಯವಸ್ಥೆ ಮಾಡಿ ಮುಗಿಸುವಾಗ ದಿನ ಕಂತುತ್ತಾ ಬಂದಿತ್ತು. ಶಾಲೆಯ ಆವರಣ ದಾಟಿ ಹೊರಬಂದಾಗ ನನ್ನವರು ಅಂದರು, ‘ತಲೆಭಾರ’ ಸುಸ್ತು. ಮಳೆಗೆ ಶೀತ ಆಗಿರಬೇಕು ಎಂದೆ. ಮಲಗಿದವರಿಗೆ ರಾತ್ರಿ ಜ್ವರ. ಉಸಿರು ಹಿಡಿದಂತಾಯಿತು ಎಂದರು. ಬೆಳಗ್ಗೆ ಪರೀಕ್ಷೆಗೆ ಹೋದಾಗ ಕೊರೋನಾ ಪಾಸಿಟಿವ್! ಅಪಾಯದ ಸುಳಿಯಲ್ಲಿದ್ದವರ ಜೊತೆ ದಿನ ಪೂರ್ತಿ ಇದ್ದ ಸಂದರ್ಭದಲ್ಲಿ ಮಾಸ್ಕ್, ಅಂತರ ಯಾವುದೂ ಹೊಳೆದಿರಲಿಲ್ಲ. ಮಾಡಬೇಕಾದ ಕೆಲಸದ ಬಗ್ಗೆ ಮಾತ್ರ ನಿಗಾವಿತ್ತು.

My Covid Experience

ಅಷ್ಟು ಜನಕ್ಕೆ ಇಷ್ಟು ಅಕ್ಕಿ ಸಾಕಾಗಬಹುದೆ?

ತಕ್ಷಣ ಆಸ್ಪತ್ರೆಗೆ ದಾಖಲಾದರು. ನಾವು ಮನೆಯವರೆಲ್ಲ ಪರೀಕ್ಷೆಗೆ ಒಳಗಾದಾಗ ನನಗೂ ಮಗನಿಗೂ ಪಾಸಿಟಿವ್ ಎಂದಾಯಿತು. ನಿರೀಕ್ಷಿಸಿದ್ದೆ. ನಾನೂ ನನ್ನವರ ಜೊತೆಯಾಗಿಯೇ ಇದ್ದೆನಾದುದರಿಂದ ಬರಬಹುದು ಅಂದುಕೊಂಡದ್ದು ನಿಜವಾಯಿತು. ಮನೆಯ ಒಂದು ಕೋಣೆಯೊಳಗೆ ಬಂಧಿಗಳಾದೆವು. ನಾನೂ‌ ಜೊತೆಗೆ ನನ್ನ ಮಗನಿದ್ದ. ಅದುವರೆಗೂ ಓದಲು ಮನೆಯಿಂದ ಹೊರಗಡೆ ಇದ್ದವನಿಗೆ ಅಮ್ಮ ದಿನದ 24 ತಾಸೂ  ಜೊತೆಯಾದದ್ದು ಬಲು ಸಂತಸದ ವಿಷಯವಾಯಿತು. ‘ಈಗ ಸೈರಿಸಿಕೋ ನನ್ನ ಉಪಟಳ. ನಿನ್ನ ಸಹಾಯಕ್ಕೂ ಯಾರೂ ಬರಲಾರರು’ ಎಂಬ ಸಣ್ಣನೆಯ ಬೆದರಿಕೆಯೊಂದಿಗೆ ಮೂಲೆಯಲ್ಲಿದ್ದ ಕೋಣೆಯ ವಾಸವಾಯಿತು. ಹೊರಗೆ ಬರುವಂತಿಲ್ಲ. ಮನೆಯಲ್ಲಿ ವಯಸ್ಸಾದ ಅಮ್ಮ ಇದ್ದಾರೆ. ನಮ್ಮ ಜೊತೆ ಒಂದಷ್ಟು ಜ್ವರದ, ಶೀತಕ್ಕೆ ವಿಟಮಿನ್​ ಮಾತ್ರೆಗಳು. ಮನೆಯಲ್ಲಿದ್ದ ಸಂಪಕ್ಕ ಎಂಬ ಅಮ್ಮ‌ನ ಮನಸ್ಸಿನ ಹಿರಿಯರು ಊಟ, ತಿಂಡಿ ಅಗತ್ಯ ದ ವಸ್ತು, ಆಹಾರಗಳನ್ನು ಹೊರಗಿಟ್ಟು ಹೋಗುತ್ತಿದ್ದರು.

ಸ್ನೇಹಿತರು ಕಾಳಜಿಯ, ಸಾಂತ್ವಾನದ ಮಾತುಗಳನ್ನು ಕಳುಹಿಸುತ್ತಿದ್ದರು. ನನಗೆ ಕೊರೋನಾವನ್ನು ಪರೀಕ್ಷಿಸುವ ಹುಚ್ಚುತನ. ನೋಡುವಾ ಏನೆಲ್ಲ ಆಗುವುದು. ಈ ವೈರಸ್ ಪರಿಚಯ ಆದಂತಾಯಿತು. ಇಬ್ಬರಲ್ಲಿ ಯಾರು ಹೆಚ್ಚು ಬಲಶಾಲಿ. ಎಂದೆಲ್ಲ ಮನಸ್ಸಿನಲ್ಲಿಯೇ ಗುಣುಗುಣಿಸಿ ಪರೀಕ್ಷಾತ್ಮಕವಾಗಿ ನನ್ನನ್ನು ಹಾಗೂ ಮಗನನ್ನು ಗಮನಿಸುತ್ತಿದ್ದೆ. ಮೊದಲ ಎರಡು ದಿನ ಶೀತ, ಸಣ್ಣನೆಯ ಜ್ವರ. ಹ್ಹೋ ಇಷ್ಟೇ ಎಂದುಕೊಂಡೆ. ಆದರೆ ನನ್ನ ಇಷ್ಟೇ ಎಂಬ ಉದ್ಗಾರ ಸಮಸ್ಯೆಯಾಗಿ ಪರಿವರ್ತನೆ ಆಗುತ್ತಿದೆ ಅನಿಸಿದ್ದು ರಾತ್ರಿ ಮಗನಿಗೆ ಜ್ವರ ಹೆಚ್ಚಾಗತೊಡಗಿದಾಗ. ಮಾತ್ರೆ ಕೊಟ್ಟರೂ ನಡುನಡುವೆ ಮೈ ಬಿಸಿಯಾಗಿ ಸಣ್ಣಗೆ ನರಳುತ್ತಿದ್ದ. ನಡುಗುತ್ತಿದ್ದ. ಅವನ ಹಣೆಗೆ ಪಟ್ಟಿ ಇಡುವುದು. ಇಲ್ಲಿ ನಾನೂ ಕೊರೋನಾ ಪರೀಕ್ಷಿಸಲು ಹೊರಟ ಕೊರೋನಾ ರೋಗಿ. ರಾತ್ರಿ ಮಗನ ನೋಡಿಕೊಳ್ಳಬೇಕಾದುದರಿಂದ ನಿದ್ದೆ ಮಾಡಲಾಗುತ್ತಿರಲಿಲ್ಲ. ಎರಡೂ ಕಾಲುಗಳಲ್ಲಿ  ವಿಪರೀತ ಸೆಳೆತ. ನನ್ನ ಮನಸ್ಸಿಗೆ ನಾನೇ ಸಂದೇಶ ರವಾನಿಸುತ್ತಿದ್ದೆ. ‘ಇದೆಲ್ಲ ಏನೂ ಅಲ್ಲ. ನಾನು ಎಂತಹ ಗಟ್ಟಿಗಿತ್ತಿ’ ಹಗಲು ಅರೆಮಂಪರು, ಜ್ವರ. ನಿಧಾನವಾಗಿ ತಲೆನೋವು, ತಲೆಭಾರ. ನನ್ನದಲ್ಲದ ವಸ್ತು ಹೊತ್ತುಕೊಂಡಂತೆ.

ಹಗಲಲ್ಲಿ ಮಗ ಸ್ವಲ್ಪ ಜ್ವರವಿದ್ದರೂ ಉಲ್ಲಾಸದಲ್ಲೇ ಇರುತ್ತಿದ್ದ. ‘ನೀನೇ ಹೇಳಿದ್ದಲ್ವಾಮ್ಮ, ಯಾವುದಕ್ಕೂ ಹೆದರಬಾರದು. ನಮಗೆ ಅವು ಹೆದರಬೇಕೂಂತ.  ಬಾ ಮಾತಡೋಣ. ನಾನು ಸಣ್ಣದಿರುವಾಗ ಏನೆಲ್ಲ ಮಾಡುತ್ತಿದ್ದೆ ಹೇಳು. ಒಂದು ಕಥೆ ಹೇಳು. ಅಪ್ಪನ ವಿಷಯ ಹೇಳು’ ನನಗೆ ನಿಧಾನವಾಗಿ ನಿಶ್ಯಕ್ತಿ ಹೆಚ್ಚಿದಂತಾಗುತ್ತಿತ್ತು. ಒಂದು ಸಲ ಈ ಕೊರೋನಾ ಮುಗಿದರೆ ಸಾಕು ಅನಿಸುತ್ತಿತ್ತು. ಜೊತೆಗೆ ಆಪ್ತರು ಹೇಳಿದ ಮಾತು, ನಾಲಗೆಗೆ ರುಚಿ ಗೊತ್ತಾಗದು. ವಾಸನೆ ತಿಳಿಯದು. ಸೂಕ್ಷ್ಮ ಗ್ರಾಹಿಯಾಗಿ ಪರೀಕ್ಷಿಸುತ್ತಿದ್ದೆ. ಕೆಲವೊಮ್ಮೆ ವಿಪರೀತ ಹಸಿವು ಕೆಲವೊಮ್ಮೆ ಏನೂ ಬೇಡವಾದಂತೆ. ಇದರ ನಡುವೆ ಎರಡು ದಿನಕ್ಕೊಮ್ಮೆ ಮನೆಗೆ ಭೇಟಿ ನೀಡಿ ವಿಚಾರಿಸಿ ಕೊಳ್ಳುತ್ತಿದ್ದ ಆಶಾ ಕಾರ್ಯಕರ್ತೆಯರು. ಅವರಿಗೆ ಕೃತಜ್ಞರಾಗಿರಲೇಬೇಕು.

My Covid Experience

ಆಹಾರ ಸಾಮಗ್ರಿ ವಿತರಣೆಯಲ್ಲಿ

ಕೊರೋನಾ ಪೀಡಿತರ ಮನೆಮನೆಗೆ ಹೋಗುವ ಸಾಹಸ, ರೋಗಿಗಳೊಂದಿಗೆ ಮಾತು. ಪಾಪ, ಕೊರೋನಾ ವಾರಿಯರ್ಸ್ ಬವಣೆ, ಆ ಸೇವೆಗೆ ಪ್ರತಿಯಾಗಿ ನಾವು ನೀಡಬೇಕಾದದ್ದು ಒಂದೇ. ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಅನಾವಶ್ಯಕ ತಿರುಗಾಟ ನಿಲ್ಲಿಸುವುದು. ನಮ್ಮ‌ಮನೆಗೆ ಎಷ್ಟೊಂದು ಜನ ಬರುತ್ತಿದ್ದರು. ಈಗ ಎಲ್ಲೆಡೆ ಅಪರಿಚಿತ ಮೌನ ಆವರಿಸಿಕೊಂಡಂತೆ ಅನಿಸುತ್ತಿತ್ತು. ರೂಮಿನಿಂದ ಹೊರಗೆ ಬರಬೇಕಾದರೂ ಯಾರಾದರೂ ಇದ್ದಾರೆಯೇ ಎಂಬ ಅಳುಕು. ದೇಹದ ಎಲುಬುಗಳೆಲ್ಲ ಹಿಂಡಿದಂತ ನೋವು. ಹದಿನಾಲ್ಕು ದಿನದ ರೂಮ್ ವಾಸ ಮುಗಿಸಿ ನೆಗೆಟಿವ್ ಅನ್ನಿಸಿಕೊಂಡು ಹೊಸಬೆಳಕನ್ನು ಹೀರಿಕೊಂಡೆವು.

* ಪರಿಚಯ: ಪೂರ್ಣಿಮಾ ಸುರೇಶ ರಂಗಭೂಮಿ ಕಲಾವಿದೆ, ಸಂಘಟಕಿ, ಕವಯಿತ್ರಿ. ‘ನನ್ನೊಳಗಿನ ಭಾವ, ಶಬ್ದಸೀಮೆಯ ಆಚೆ, ಅಕ್ಕನಂತೊಬ್ಬಳು ಅನುರಕ್ತೆ, ಶಿವರಾತ್ರಿ (ಅನುವಾದ) ಸುಭಅಶಿತ ಮಧುಸಂಚಯ (ಕನ್ನಡ-ಕೊಂಕಣಿ ಶಬ್ದಕೋಶ ಸಂಗ್ರಹ). ಶಿವಮೊಗ್ಗದ ಕರ್ನಾಟಕ ಸಂಘದ ಜಿಎಸ್​ಎಸ್​ ಕಾವ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ. ಕೊಂಕಣಿ ಸಿನೆಮಾ ‘ಅಂತು’ವಿನ ಪೋಷಕ ಪಾತ್ರಕ್ಕಾಗಿ ರಾಷ್ಟ್ರಮಟ್ಟದ Hyssa Global Cini Award ದೊರೆತಿದೆ. ‘ಸತ್ಯನಾಪುರದ’ ಸಿರಿ – ಏಕವ್ಯಕ್ತಿ ಪ್ರಸ್ತುತಿ ಈ ತನಕ 29 ಪ್ರದರ್ಶನಗಳನ್ನು ಕಂಡಿದೆ. ಸದ್ಯ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಪೀಠದ ಸದಸ್ಯೆಯಾಗಿದ್ದಾರೆ.

Published On - 11:17 am, Tue, 1 June 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ