ನಾನೆಂಬ ಪರಿಮಳದ ಹಾದಿಯಲಿ: ಬ್ರಹ್ಮಾಂಡಕ್ಕೇ ಕಾವು ಕೊಟ್ಟೆ!

‘ಕಂದನನ್ನು ಸೊಂಟಕ್ಕೇರಿಸಿಕೊಂಡೇ ನಾಟಕ ನೋಡಲು, ತರಬೇತಿಗಳಲ್ಲಿ ಭಾಗವಹಿಸಲು ಹೋಗುತ್ತಿದ್ದೆ. ಮಗು ಒಂದು ವರ್ಷ ದಾಟುವ ಹೊತ್ತಿಗೆ ಶಾಲೆಗಳಿಗೆ ತರಬೇತುದಾರಳಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಾರಂಭಿಸಿದೆ. ಮಧ್ಯಾಹ್ನ ಮಗನಿಗೆ ಹಾಲುಣಿಸಿ, ಮಲಗಿಸಿ ಪಕ್ಕದ ಮನೆಯ ಗೆಳತಿಗೆ ನೋಡುತ್ತಿರಿ ಎಂಬ ವಿನಂತಿಯನ್ನಿಡುತ್ತಲೇ ರಂಗಮಂಚವನ್ನೇರಿದೆ. ಇನ್ನೂ ಏನೋ ಮಾಡಲಿಕ್ಕಿದೆ ಅನಿಸಿದಾಗ ‘ಅಮೋಘ‘ ರಂಗತಂಡ ಕಟ್ಟಿದೆ.‘ ಪೂರ್ಣಿಮಾ ಸುರೇಶ್

ನಾನೆಂಬ ಪರಿಮಳದ ಹಾದಿಯಲಿ: ಬ್ರಹ್ಮಾಂಡಕ್ಕೇ ಕಾವು ಕೊಟ್ಟೆ!
Follow us
ಶ್ರೀದೇವಿ ಕಳಸದ
|

Updated on:Jan 26, 2021 | 1:25 PM

ಅಮ್ಮನಾಗುತ್ತಿದ್ದಂತೆ ತೆರೆದುಕೊಳ್ಳುವ ಪುಳಕ ಆವರಿಸಿಕೊಳ್ಳುವ ಜವಾಬ್ದಾರಿಗಳಲ್ಲಿ ನಿನ್ನೆಗಳ ವಜ್ಜೆಯೂ ಇರುತ್ತದೆ ನಾಳೆಗಳ ಆತಂಕವೂ ಸೇರಿರುತ್ತದೆ. ಆದರೂ ಒಂದೊಂದನ್ನೇ ಕೂಡಿಕಳೆದು ಅಷ್ಟಷ್ಟೇ ಒಳಗೊಳಗೆ ಚಿಗಿತುಕೊಂಡು ಮಾಗುವ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವ ಪ್ರಯತ್ನ ನಿರಂತರ ಸಾಗಿರುತ್ತದೆ. ಬಯಸಿದ್ದು ಉಡಿಗೆ ಬಂದು ಬೀಳಲು ಇಲ್ಲಿ ಯಾವ ದೇವರೂ ಪ್ರತ್ಯಕ್ಷನಾಗಿ ವರ ನೀಡಲಾರ, ಹಾಗೆಯೇ ಕೈಹಿಡಿದು ಮುನ್ನಡೆಸಲಾರ. ನಮ್ಮ ಆಸಕ್ತಿಗಳಿಗೆ, ಆಕಾಂಕ್ಷೆಗಳಿಗೆ, ಹಂಬಲಗಳಿಗೆ ಅನುಗುಣವಾಗಿ ಒಳಗೊಳ್ಳುವ ನಿರಂತರ ಪ್ರಯತ್ನದಲ್ಲೇ ನಾವು ದೇವರನ್ನು ಕಾಣುವುದು. ಹೀಗಿರುವಾಗ ಎಲ್ಲರ ಮಧ್ಯೆಯೂ ನಾವು ನಾವಾಗಿ ಇರುವುದು, ನಮಗೂ ಒಂದು ವ್ಯಕ್ತಿತ್ವವಿದೆ, ಅಸ್ತಿತ್ವವಿದೆ ಎಂಬ ಎಚ್ಚರದೊಂದಿಗೆ ಚಲಿಸುವ ಹಾದಿ ಕೇವಲ ಹೂಹಾದಿಯೇ ಆಗಿರಲು ಸಾಧ್ಯವಾದೀತಾದರೂ ಹೇಗೆ? ಬೆರಳೆಣಿಕೆಯಷ್ಟು ಹೆಣ್ಣುಮಕ್ಕಳು ಈ ವಿಷಯದಲ್ಲಿ ಅದೃಷ್ಟವಂತರು. ಉಳಿದವರು? ಇರುವುದೊಂದೇ ಬದುಕು. ಎಡರುತೊಡರುಗಳನ್ನು ಬಿಡಿಸಿಕೊಂಡೇ ಸಾಗಬೇಕೆಂದರೆ ಚೂರಾದರೂ ಆಸರೆ ಬೇಕು ಹೆಚ್ಚು ಮನೋಬಲ ಬೇಕು. ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಗುರುತಿಸಿಕೊಂಡ ಹೆಣ್ಣುಮಕ್ಕಳನ್ನು ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿಯಲ್ಲಿ ಪಾಲ್ಗೊಳ್ಳುವಂತೆ ಟಿವಿ9 ಕನ್ನಡ ಡಿಜಿಟಲ್ ಕೇಳಿಕೊಂಡಾಗ ಖುಷಿಯಿಂದ ತಮ್ಮ ಅನುಭವದ ಬುತ್ತಿಗಳನ್ನು ಬಿಚ್ಚಿಟ್ಟರು. ಓದುತ್ತಾ ಓದುತ್ತಾ ನಿಮಗೂ ಏನಾದರೂ ಹಂಚಿಕೊಳ್ಳಬೇಕೆನ್ನಿಸಿದಲ್ಲಿ ಖಂಡಿತ ಬರೆಯಿರಿ. tv9kannadadigital@gmail.com

ಪರಿಕಲ್ಪನೆ: ಶ್ರೀದೇವಿ ಕಳಸದ

ರಂಗಭೂಮಿ ಕಲಾವಿದೆ, ಕವಿ ಪೂರ್ಣಿಮಾ ಸುರೇಶ್ ಅವರ ಅಂತರಂಗದ ತುಣುಕು ನಿಮ್ಮ ಮುಂದೆ

ಆ ಆಸ್ಪತ್ರೆಯ ವಿಶೇಷ ಕೊಠಡಿಯಲ್ಲಿ ಮಲಗಿದ್ದೆ. ಅದು ಎಂದಿನಂತೆ ಆರಾಮದ ನಿದ್ದೆಯಲ್ಲ. ಅಥವಾ ಸೋತ ದೇಹದ ವಿಶ್ರಾಂತಿಯೂ ಅಲ್ಲ. ನಮ್ಮ ರಂಗಭೂಮಿಯ ಯಾವುದೋ ನಾಟಕದಲ್ಲಿ ಅನ್ವೇಷಣೆಗೊಂಡ ಪರಿಕರದಂತೆ ಇದ್ದ ಮಂಚ. ಹೌದೆಂದರೆ ಹೌದು, ಅಲ್ಲವೆಂದರೆ ಅದೂ ಅಲ್ಲ. ಹಿಂದೆ ಮುಂದೆ ಜೋಡಣೆಗೊಂಡ ಪುಟ್ಟಪುಟ್ಟ ಚಕ್ರಗಳು. ಕಬ್ಬಿಣದ ಮಂಚ. ಯುದ್ದಕ್ಕೆ ಹೋಗಲು ಸಿದ್ದನಾದ ಸೈನಿಕ ಧರಿಸಿದ ಹಾಗೆ ಉದ್ದುದ್ದ ಆಚೆ ಈಚೆ ಕೋಲಿನಂತೆ ಏನೇನೋ ಜೋಡಣೆ. ನಾನು ಹೊಸ ಅಚ್ಚರಿಯಲ್ಲಿ ನೋಡುತ್ತಿದ್ಧೆ. ಗಾಣದಲ್ಲಿ ತಿರುಗಿಸುವಂತೆ ತಿರುಗಿಸಿದರೆ ಆ ಮಂಚದ ಇಚ್ಛಿಸಿದ ಭಾಗ ಮೇಲೆ ಕೆಳಗೆ ಹೋಗಿ ಸ್ಥಿರಗೊಳ್ಳಬಲ್ಲದು. ಅಂತಹ ಮಂಚದ ಮೇಲೆ ಸೊಂಟದವರೆಗಿನ ದೇಹ 20 ಡಿಗ್ರಿಯಷ್ಟು ಎತ್ತರಕ್ಕೆ ಹೊಂದಿಸಿದ್ದರು.

ಇದು ನನ್ನ ತಾಯ್ತನಕ್ಕೆ ಮುನ್ನುಡಿ. ಅಥವಾ ತಾಯಿಯಾಗುವ ತಯಾರಿಯ ಮೊದಲ ಹಂತವಾಗಿತ್ತು. ಆಗಲೇ ಮದುವೆಯಾಗಿ ಒಂಬತ್ತು ಮಳೆಗಾಲ ಸರಿದು ಹೋಗಿದ್ದವು. ನಮ್ಮೂರ ಸುವರ್ಣ ನದಿ ಹಲವು ಬಾರಿ ಉಕ್ಕಿ ಹರಿದು ನೆರೆತುಂಬಿ, ಮತ್ತೆ ಬೇಸಿಗೆಗೆ ಬಡಕಲಾಗಿ ಒಡಲ ಕರುಳು  ಮೇಲೆದ್ದು ಕಲ್ಲುಕಲ್ಲಾಗಿ ಬಂದಂತೆ, ಒಣಗಿದ ಮರಳ ದಿನ್ನೆಗಳ ನಡುವೆ ನನಗೆ ಕಾಣಿಸಿದ್ದೂ ಆಗಿದೆ. ನಾನು ಹತ್ತು ಹಲವು ಪಲ್ಲಟಗಳಿಗೆ ಸಾಕ್ಷಿಯಾಗಿ ನಡೆಯುತ್ತಿದ್ದೆ. ಮದುವೆಯ ಮುನ್ನದ ದಿನಗಳು ಅಜ್ಜಿಯ ಮುಚ್ಚಟೆಯಲ್ಲಿ ಬೆಳೆದದ್ದು. ಮನೆಯಲ್ಲಿ ಮೂವರು‌ ಸೋದರ ಮಾವನವರು, ಅತ್ತೆಯಂದಿರು, ಅಮ್ಮ, ಅಜ್ಜ ಮತ್ತು ಅಜ್ಜಿ ಎಲ್ಲರೂ ಇದ್ದರು. ಆದರೂ ಏಕಾಂಗಿತನ, ಕಾಡುವ ಪರಕೀಯತೆಯ ಭಾವ. ಆಗ ಜೊತೆಯಾದ ಪುಸ್ತಕಗಳ ಓದು.

ಹೆಚ್ಚಿನ ಕನಸುಗಳಿರಲಿಲ್ಲ. ಪದವಿ ಮುಗಿಸಬೇಕು. ನನ್ನದೇ ಆದ ಉದ್ಯೋಗವೊಂದು ಬೇಕು. ಸ್ವತಂತ್ರಳಾಗಬೇಕು ಎನ್ನುವ ಆಳದ ಬಯಕೆ. ಪದವಿಯ ಫಲಿತಾಂಶದ  ಮುನ್ನವೇ ಪ್ರವಾಸಿ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಸೇರಿಕೊಂಡಿದ್ದೆ‌. ಆಗಿನ ಅಗತ್ಯವೂ ಆಗಿತ್ತು. ಬದುಕೊಂದು ನಿರಂತರ ಪಯಣ ಎಂಬಂತೆ ಉದ್ಯೋಗದ ನಿಮಿತ್ತ ಪರಿಭ್ರಮಣ. ಅದುವರೆಗೂ ಮನೆ, ಕಾಲೇಜು ಹೊರತಪಡಿಸಿ ಏನೂ ನೋಡದ ಹಾಗಿದ್ದ ಬದುಕು. ಬಾವಿಯಿಂದ ತೆಗೆದು ಕಡಲಿಗೆ ಎಸೆದಂತಾಗಿತ್ತು. ಹೊಸ ಜವಾಬ್ದಾರಿ, ತಿರುಗಾಟ. ಆ ವಯಸ್ಸಿಗೆ ಸಹಜವಾಗಿ ಇರಬೇಕಾದ ಭಾವಗಳ ತುಸು ಆಚೆ ಕಾಯ ಹೋಗಿ ಗೇಯ್ಮೆ ನಡೆಸಿದಂತೆ ಬದುಕು ಸಾಗುತ್ತಿತ್ತು.

ಮದುವೆಯೂ ನಡೆದು ತುಂಬಿದ ಕುಟುಂಬಕ್ಕೆ ಬಂದಿದ್ದೆ. ಹಳ್ಳಿಮನೆ. ವರ್ಷಕ್ಕೆ ಮೂರು ಬೆಳೆ ಹೆರುವ ಸಮೃದ್ಧ ಗದ್ದೆ, ತುಂಬಿ ತೊನೆಯುವ ಅಡಿಕೆ ತೋಟ, ಪ್ರತೀ ಮಡಲ ಹೆಗಲಲ್ಲೂ ತುಂಬುಗೊನೆ ಹೊತ್ತ ತೆಂಗಿನ ತೋಟ, ದನ ಕರುಗಳು, ನಾಯಿ ಬೆಕ್ಕುಗಳು. ಹೊಸಿಲ ಹೊರಗೆ ಕಣ್ಣಾಡಿಸಿದರೆ ಹಸಿರು ಹಸಿರು. ಯಾವುದೇ ವಾಹನಗಳ ಓಡಾಟವಿಲ್ಲ. ಮೊಬೈಲ್ ಬಂದಿರಲಿಲ್ಲ. ಫೋನ್ ಕೂಡ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಸಂಜೆ ಏಳು ಏಳುವರೆ ಗಂಟೆಗೆ ಕಪ್ಪು ಹೊದಿಕೆಯಾಗುತ್ತಿತ್ತು. ಸೂರ್ಯ ಮೂಡುವ ಮೊದಲೇ ನಮಗೆಲ್ಲ ಬೆಳಗ್ಗೆ. ಬೆಳಗ್ಗೆ ಎಂಟು ಗಂಟೆಗೆ ಗಂಡ ಹೊರಟರೆ ಹಿಂತಿರುಗುವುದು ರಾತ್ರಿಯ ಒಂಬತ್ತು- ಹತ್ತು ಗಂಟೆಗೆ.

ಹಳ್ಳಿ ಮನೆಯ ಕೆಲಸ ಕಾರ್ಯಗಳಲ್ಲಿ ನನ್ನನ್ನು ಜೋಡಿಸಿಕೊಂಡಿದ್ದೆ. ಬೇಸರವಾದರೆ ದನ ಕರುಗಳ ಜೊತೆ ಮಾತು, ನಾಯಿ, ಬೆಕ್ಕಿನ ಜೊತೆ ಆಟ. ಅತ್ತೆ , ಮಾವ (ನನ್ನ ಮಾವನ ತಮ್ಮ) ಚಿಕ್ಕತ್ತೆ ಬೇಗ ಮಲಗುತ್ತಿದ್ದರು. ಹೊರಗೆ ಕಣ್ಣು ಹಾಯಿಸಿದರೆ ಬರೀ ಕಪ್ಪುಕಪ್ಪು.  ನನಗೆ ಕಾಯುವ ಕೆಲಸ. ಆಗ ಮನೆಯಲ್ಲಿ ನನ್ನ ಜೊತೆಗೆ ಯಾರಾದರೂ ಬೇಕು ಅನ್ನಿಸುತ್ತಿತ್ತು. ಒಂದು ದೀರ್ಘ ಮೌನದಂತಹ ಬದುಕಿನ ಕಾಲವದು. ನಂತರ ದಿನಗಳಲ್ಲಿ ಅತ್ತೆಯ ಮರಣ, ನಾವು ಉಡುಪಿಗೆ ವ್ಯವಹಾರದ ನಿಮಿತ್ತ ನೆಲೆಯಾದದ್ದು. ನಾನು ಅದಾಗಲೇ ಇದ್ದ ವ್ಯವಹಾರದ ಜೊತೆಗೆ ಹೊಸ ವ್ಯವಹಾರ ಆರಂಭಿಸಿ ಅದರಲ್ಲಿ ತೊಡಗಿಸಿಕೊಂಡದ್ದು ಆಗಿತ್ತು. ಮತ್ತೆ ತಿರುಗಾಟದ ಬದುಕು ವೃತ್ತಿ- ಪ್ರವೃತ್ತಿಯಾಗಿ ನನಗೆ ಅಂಟಿಕೊಂಡಿತ್ತು. ಬದುಕು ಪುಟ ತಿರುಗಿಸಿದಂತೆ ಸಾಗುತ್ತಿತ್ತು. ಆದರೆ ಆಗೆಲ್ಲ ಭಾಗವಹಿಸುವ ಕುಟುಂಬದೊಳಗಿನ ಸಮಾರಂಭಗಳು, ಮನೆಯಲ್ಲಿನ ಹಬ್ಬಗಳಲ್ಲಿ ಕುಟುಂಬದ ಸದಸ್ಯರೆಲ್ಲ ಜೊತೆ ಸೇರಿದಾಗೆಲ್ಲ ಪುಟಿದೇಳುವ ಪ್ರಶ್ನೆ ಹೆಚ್ಚಾಗಿ ಒಂದೇ ಆಗಿರುತ್ತಿತ್ತು. ಗುಸುಗುಸು ಶುರುವಾಗಿ ನಿಧಾನವಾಗಿ ಸ್ವರವೇರಿಸಿ ಪ್ರಶ್ನೆಯಾಗಿ  ನನ್ನೆದುರು ಬರುತ್ತಿತ್ತು. ‘ಮಗು ಯಾಕೆ ತಡ, ಎಷ್ಟು ವರ್ಷಗಳಾದವು, ಅಯ್ಯೊ ಪಾಪ, ಡಾಕ್ಟರ್ ಹತ್ತಿರ ಹೋದ್ರಾ, ಏನಂತೆ, ಇನ್ನು ಕಷ್ಟ…’ ಇಂತಹ ಮಾತು ಕೇಳಿ ಕೇಳಿ ಕಿವಿ ಮನಸ್ಸು ಜಡ್ಡು ಹಿಡಿದಂತೆ ಆಗಿತ್ತು.

ನಾಟಕವೊಂದರ ದೃಶ್ಯವೊಂದರಲ್ಲಿ ಪೂರ್ಣಿಮಾ

ವ್ಯವಹಾರ  ವಿಸ್ತರಿಸಿದಂತೆ  ಮತ್ತೆ ತಿರುಗಾಟ ಹೆಚ್ಚಿತ್ತು, ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮ ಭಾರತ ಎಂದು ಅಮಲೇರಿಸಿಕೊಂಡಂತೆ ತಿರುಗಾಟ. ಬರುವ ಯಾತ್ರಿಕರನ್ನು, ಪ್ರವಾಸಿಗರನ್ನು ಕರೆದುಕೊಂಡು ಹೋಗಿ ಜಾಗಗಳನ್ನು ತೋರಿಸುವುದು, ವಿವರಿಸುವುದು. ವಯಸ್ಸಾದವರ ಕೈ ಹಿಡಿದು ಕರೆದೊಯ್ದು ದೇವಾಲಯಗಳ ದರ್ಶನ ಮಾಡಿಸಿ ಅವರ ಕಣ್ಣಿನಲ್ಲಿ ಮೂಡಿ ಮಿಂಚುವ ಬೆಳಕನ್ನು ಹೆಕ್ಕಿಕೊಂಡು ಸಂಭ್ರಮಿಸುತ್ತಿದ್ದೆ.

ಈ ಎಲ್ಲದರ ಜೊತೆಜೊತೆಗೆ ಆ ಡಾಕ್ಟರ್ ಈ ಡಾಕ್ಟರ್ ಎಂದು ಅಲೆದಾಟ. ಸಣ್ಣಗೆ ಒಳಗೆ ತಾಯ್ತನದ ಹಂಬಲ ಕುಡಿಯೊಡೆದಿತ್ತು. ಹಲವು ಪರೀಕ್ಷೆಗಳು. ಡಾಕ್ಟರ್ ಸಲಹೆಯಂತೆ ಮುಟ್ಟಿನ 28 ದಿನಗಳಲ್ಲಿ ಪರೀಕ್ಷೆಯಾಗಿ ಅವರ ಸಲಹೆಯಂತೆ  ಆಸ್ಪತ್ರೆಗೆ ದಾಖಲಾಗಿದ್ದೆ. ಬದುಕಿನ ಹೊಸ ಅಧ್ಯಾಯಕ್ಕೆ ಪೂರ್ವ ತಯಾರಿಯಿದು. ‌ಕಾಲುಗಳೆರಡು ಎತ್ತರಕ್ಕೆ ಇರುವಂತೆ ತಯಾರಾದ ಮಂಚ. ಅಲುಗಾಡುವಂತೆಯೂ ಇರಲಿಲ್ಲ.  ‘ಹೇ ಏಳಬೇಡ, ಎಲ್ಲಿಗೆ, ನರ್ಸ್ ಕರಿ, ಮಲಗಿರು’ ಇಂತಹ ಮಾತುಗಳಲ್ಲೇ ಹದಿನೈದು ದೀರ್ಘ ದಿನಗಳು ಕಳೆದು ನಾನು  ಗರ್ಭಿಣಿ ಎಂಬುವುದೂ ಪಕ್ಕಾ ಆಗಿತ್ತು. ಇನ್ನೂ ಒಂದು ತಿಂಗಳು ಹೀಗೆ ಎಂಬ ಆದೇಶವೂ ಸಿಕ್ಕಿ ಹೊರಲೋಕದ ಸಂಪರ್ಕವನ್ನೇ ಕಡಿದುಕೊಂಡಂತೆ ಬಾಣಂತಿ ಮಲಗಿದಂತೆ ಮಲಗಿ ಬಿಟ್ಟೆ. ಏನೂ ಹೊಳೆಯುತ್ತಿರಲಿಲ್ಲ. ಕೊನೆಗೂ ಎರಡೂವರೆ ತಿಂಗಳ ಗರ್ಭಿಣಿ ಆಸ್ಪತ್ರೆವಾಸದಿಂದ ಮನೆಗೆ ಮರಳಿದ್ದೆ. ಆಫೀಸ್, ಕೆಲಸ, ನಡೆದಾಟ ಎಲ್ಲದಕ್ಕೂ ನಿರ್ಬಂಧ ಹೇರಲಾಗಿತ್ತು. ಪೂರ್ತಿ ವಿಶ್ರಾಂತಿ ಬೇಕು. ಜಾಗ್ರತೆ ಎಂದಿದ್ದರು.  ಕಾಯುವಿಕೆ, ಕಾಣದ ಒಂದು ಜೀವ ಹೊರಬರುವ ಆ ಘಳಿಗೆಗಳಿಗೆ ಈ ಬಗೆಯಲ್ಲಿ ಕಾಯುವ ತಪಸ್ಸದು. ಮನೆಗೆ ಬಂದರೆ ಬದುಕಿನಲ್ಲಿ ಅದುವರೆಗೂ ಕಾಣಲೇ ಇಲ್ಲ ಎನ್ನುವಂತಹ ಸ್ವಾತಂತ್ರ್ಯ ಅನುಭವಿಸಬೇಕು ಎಂಬ ತಹತಹಿಕೆ ಶುರುವಾಯಿತು. ಆದೇಶವನ್ನೂ ಮೀರಿ ಮೆಲ್ಲನೆ  ನಡೆದಾಡಿದೆ. ‘ಅಪಾಯ ಇಲ್ಲ’ ಅಂಗಳಕ್ಕೆ, ರಸ್ತೆಗೆ, ಅಂಗಡಿಗೆ ಹೋಗತೊಡಗಿದೆ. ಏನೂ ಆಗಿಲ್ಲ. ಹಾಗಾದರೆ ಇನ್ನು ತೊಂದರೆಯಿಲ್ಲ. ನಾನು ಮಾನಸಿಕವಾಗಿ ಹಗುರವಾದೆ. ನನ್ನ ಕೆಲಸಗಳನ್ನು ಮಾಡತೊಡಗಿದೆ.

ಗರ್ಭಿಣಿಗೆ ಇರುವ ಯಾವುದೇ ಸುಸ್ತು, ವಾಂತಿ, ಬೇಕು, ಬೇಡ ಯಾವುದೂ ಇರಲಿಲ್ಲ. ಮನಸ್ಸು ಬೇರೊಂದು ಆಯಾಮಕ್ಕೆ ತಿರುಗಿಕೊಂಡಂತೆ ಸಾಗುತ್ತಿತ್ತು. ಆ ಸಮಯದಲ್ಲಿ ನಮ್ಮ ಮನೆಯಲ್ಲಿ ಹಿರಿಯರೆಂದು ಯಾರೂ ಇರಲಿಲ್ಲ. ಹೀಗಾಗಿ ಯಾರ ಸಲಹೆ, ಸೂಚನೆ, ಉಪಚಾರ ಯಾವುದೂ ಇರಲಿಲ್ಲ. ತಿಂಗಳು ತುಂಬಿದಾಗ ನಾನೇ ಹಳ್ಳಿಯಲ್ಲಿ ಕಷ್ಟವಾದೀತು ಎಂದು ಆಸ್ಪತ್ರೆಗೆ ಹೋಗಿ ದಾಖಲಾದೆ. ಡಾಕ್ಟರ್ ಮುಂದಿನ ವಾರ ‘ಸಿಸೇರಿಯನ್’ ಮಾಡುವ ಅಂದರು. ಆ ಸಮಯ ಆಸ್ಪತ್ರೆಯಲ್ಲಿ ನನ್ನವರೆಂದು ನನ್ನ ಗಂಡ ಇದ್ದರು. ಸಣ್ಣನೆಯ ಭಯ. ತಾಯಿಯಾಗುವ ಪುಳಕದೊಳಗಿನ ಆತಂಕವದು.

ಆಪರೇಷನ್ ಥಿಯೇಟರ್ ನೊಳಗೆ ಹೋಗಿ ಡಾಕ್ಟರ್ ನವರ ಜಾದೂವೆಲ್ಲ ನಡೆದು ‘ಇದೋ ನಿನ್ನ ಮಾಣಿ’ ಎಂದು  ಜಗತ್ತಿನ ಅದ್ಬುತ ಒಂದನ್ನು ಡಾಕ್ಟರ್ ನನ್ನೆದುರು ಹಿಡಿದು ತೋರಿಸಿದ್ದರು. ನೋಡಿದೆ. ವಿಸ್ಮಯವೊಂದು ಪುಟ್ಟ ಜೀವದ ರೂಪದಲ್ಲಿ ನನ್ನೆದುರು ಕಾಣುತ್ತಿದೆ. ಮನಸ್ಸು ಅರೆನಂಬಿಕೆಯಲ್ಲಿದ್ದಂತೆ. ‘ಹೌದೇ ಇದು ನನ್ನ ಮಗುವೇ’ ಒಂದು ಜೀವದೊಳಗಿಂದ ಅರಳಿದ ಮತ್ತೊಂದು ಜೀವ. ಗುಲಾಬಿ ಪಾದಗಳು, ಮಣಿ ಪೋಣಿಸಿದಂತ ಕಾಲ ಬೆರಳುಗಳು, ಎಂತಹ ಎಳಸು ಕೈಗಳದು. ಗೆರೆ ಎಳೆದಂತೆ ಸಣ್ಣ ಬಾಯಿ. ಓಹ್​ ಎಲ್ಲವೂ ಅಚ್ಚರಿಗಿಂತಲೂ ಮಿಗಿಲು ಎನಿಸಿದ ಭಾವಗಳು. ಒಂದು ವಾರ ಕಳೆದು ಹಳ್ಳಿಯ ಮನೆಗೆ ಬಂದಿದ್ದೆ. ಹೆಣ್ಣು ಜೀವವೆಂದು ಯಾರೂ ಇರಲಿಲ್ಲ. ನಾನೇ ಮನೆಗೆ ಹೋಗುವ ಹಾದಿಯಲ್ಲಿ  ಮಗುವಿಗೆ ಅಗತ್ಯವಾದ ಪೌಡರ್,ಸೋಪು,ಬಟ್ಟೆ ಎಲ್ಲವನ್ನೂ ಖರೀದಿಸಿ ಮನೆ ಸೇರಿದ್ದೆ. ಬಾಣಂತನಕ್ಕೆ ಒಬ್ಬ ಹಿರಿಯ ಹೆಂಗಸು ನಿಗದಿ ಮಾಡಿದ್ದೆ. ಮಗು ಪ್ರತೀ ದಿನವೂ ಒಂದೊಂದು ಬಗೆಯ ವಿಸ್ಮಯ ಉಣಿಸುತ್ತಿತ್ತು. ಬದುಕಿನ ಸತ್ಯ ಇದೊಂದೇ ಎನ್ನುವಂತೆ ತಾಯ್ತನದ ಅಮೃತ ಸವಿ ಸವಿಯುತ್ತಿದ್ದೆ

ಸಿನೆಮಾ ಚಿತ್ರೀಕರಣವೊಂದರಲ್ಲಿ ಸಹನಟರೊಂದಿಗೆ ಪೂರ್ಣಿಮಾ

ಕಾಲ ಸರಿದಂತೆ ಒಳಗು ಸಣ್ಣನೆ ಹಠ ಮಾಡಿದಂತೆ. ಇನ್ನೂ ಏನೋ ಬೇಕು. ಇದರ ಜೊತೆಗೆ ನನ್ನ ಆಸ್ಮಿತೆಗೆ ಮತ್ತೇನೋ ಬೇಕಾಗಿದೆ. ಪುಸ್ತಕಗಳ ರಾಶಿ ಹಾಕಿದೆ‌. ಪತ್ರಿಕೋದ್ಯಮದ ಸ್ನಾತಕೋತ್ತರ ಪರೀಕ್ಷೆ ಬರೆದೆ. ಅದುವರೆಗೆ ತೆವಳಿದಂತೆ ಸಾಗಿದ್ದ ಬರವಣಿಗೆ ಒಂದಷ್ಟು ವೇಗ ಪಡೆದುಕೊಂಡಿತು.  ಕಥೆಗಳನ್ನು ಬರೆಯಲು ಆರಂಭಿಸಿದೆ. ಕಥೆಗಳ ತೆಕ್ಕೆಗೆ ಸಿಗದೆ ತಪ್ಪಿಸಿಕೊಳ್ಳುವ, ಹೇಳಲೇಬೇಕು ಎಂಬ ವಿಷಯ, ವಸ್ತುಗಳು ಕವಿತೆ, ಕವನಗಳಾದವು.

ಪುಟ್ಟ ಕಂದನನ್ನು ಸೊಂಟಕ್ಕೇರಿಸಿ ನಾಟಕ ನೋಡಲು, ತರಬೇತಿಗಳಲ್ಲಿ ಭಾಗವಹಿಸಲು ಹೋಗತೊಡಗಿದೆ. ಅವನು ಒಂದು ವರ್ಷ ದಾಟುವ ಸಮಯದಲ್ಲಿ ಅಲ್ಲಲ್ಲಿ ಶಾಲೆಗಳಿಗೆ ತರಬೇತುದಾರಳಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಿದ್ದೆ. ಮಧ್ಯಾಹ್ನ ಮಗನಿಗೆ ಹಾಲುಣಿಸಿ, ಮಲಗಿಸಿ ಪಕ್ಕದ ಮನೆಯ ಗೆಳತಿಗೆ ನೋಡುತ್ತಿರಿ ಎಂಬ ವಿನಂತಿಯನ್ನಿಟ್ಟು ಹೋಗುತ್ತಿದ್ದೆ. ನಾನು ಶಾಲೆಗಳಲ್ಲಿ ತರಬೇತಿ ನೀಡಿ ಬರುವಾಗಲೂ ಹಾಗೆ ನಿದ್ದೆ ಮಾಡಿರುತ್ತಿದ್ದ. ರಂಗಭೂಮಿ ಉಡುಪಿಯ ನಾಟಕದಲ್ಲಿ ಅಭಿನಯಿಸಿದೆ. ಇನ್ನೂ ಏನೋ ಮಾಡಬಹುದು, ಮಾಡಲಿಕ್ಕಿದೆ ಅನಿಸಿದಾಗ ಅಮೋಘ ಎಂಬ ತಂಡ ಕಟ್ಟಿ ಕಲೆಯ ಆಸೆಯಿರುವ ಮನಸ್ಸುಗಳನ್ನು ಒಂದು ಕಡೆ ಎಳೆದು ತಂದು ನಾಟಕ ಮಾಡಿದೆ. ಸಂಘಟನೆ ಮಾಡುತ್ತ ಹಲವಾರು ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮಾಡುತ್ತಲೇ ಹೋದೆ. ಈ ಸಮಯ ನನ್ನ ಕಂದನ ಅತಿ ಚಟುವಟಿಕೆ ಕಾಣಿಸತೊಡಗಿದಾಗ ಒಂದಷ್ಟು ಘಾಸಿಗೊಳಗಾದೆ. ಜನರ ಚುಚ್ಚುವ ಮಾತುಗಳಿಗೂ ಕೊರತೆಯಿರಲ್ಲ. ಆದರೆ ನನ್ನೊಳಗೊಂದು ಸ್ಪಷ್ಟತೆಯಿತ್ತು.

ಪ್ರತಿಯೊಂದು ಮಗುವೂ ದೇವರ ಅದ್ಬುತ ಸೃಷ್ಟಿ. ನಿಜ, ಈ ಬದುಕು ಅದೆಷ್ಟು ಅದ್ಬುತವಾಗಿದೆ. ಇದರ ಪರಿಚಯ ಮಾಡಿಸಿದವನು ನನ್ನ ಕಂದ ಎನ್ನುವ ಅನುಭೂತಿ ತರುವಷ್ಟು ತಾಯ್ತನ ಬದುಕು ಅರಳಿಸಿ ಬಿಟ್ಟಿತು. ನನ್ನ ವಿಕಸನದ ಹಾದಿ ಆರಂಭಗೊಂಡಿತ್ತು. ಅದರ ಶ್ರೇಯಸ್ಸು ನನ್ನ ಅಮ್ಮತನವೆಂದರೆ ಸುಳ್ಳಾಗದು. ಜಗವನ್ನು ಕಾಣುವ ದೃಷ್ಟಿಯನ್ನೇ ಮಗ ವಿಶಾಲಗೊಳಿಸಿದ. ಸಮಸ್ಯೆ, ತೊಂದರೆ, ನೋವು ಇರಲಿಲ್ಲವೆಂದಲ್ಲ. ಅದರ ಜೊತೆಗೆ ಬದುಕು ಬದುಕಬೇಕು ಎನ್ನುವ ಸುಂದರ ಮೋಹಕ್ಕೆ ನನ್ನನ್ನು ತಾಯ್ತನ ಕಟ್ಟಿಹಾಕಿತ್ತು. ಕಟ್ಟಿಹಾಕಿದೆ.

***

ಪರಿಚಯ: ಪೂರ್ಣಿಮಾ ಸುರೇಶ ರಂಗಭೂಮಿ ಕಲಾವಿದೆ, ಸಂಘಟಕಿ, ಕವಯಿತ್ರಿ. ‘ನನ್ನೊಳಗಿನ ಭಾವ, ಶಬ್ದಸೀಮೆಯ ಆಚೆ, ಅಕ್ಕನಂತೊಬ್ಬಳು ಅನುರಕ್ತೆ, ಶಿವರಾತ್ರಿ (ಅನುವಾದ) ಸುಭಅಶಿತ ಮಧುಸಂಚಯ (ಕನ್ನಡ-ಕೊಂಕಣಿ ಶಬ್ದಕೋಶ ಸಂಗ್ರಹ). ಶಿವಮೊಗ್ಗದ ಕರ್ನಾಟಕ ಸಂಘದ ಜಿಎಸ್​ಎಸ್​ ಕಾವ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ. ಕೊಂಕಣಿ ಸಿನೆಮಾ ‘ಅಂತು’ವಿನ ಪೋಷಕ ಪಾತ್ರಕ್ಕಾಗಿ ರಾಷ್ಟ್ರಮಟ್ಟದ Hyssa Global Cini Award ದೊರೆತಿದೆ. ‘ಸತ್ಯನಾಪುರದ’ ಸಿರಿ – ಏಕವ್ಯಕ್ತಿ ಪ್ರಸ್ತುತಿ ಈ ತನಕ 29 ಪ್ರದರ್ಶನಗಳನ್ನು ಕಂಡಿದೆ. ಸದ್ಯ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಪೀಠದ ಸದಸ್ಯೆಯಾಗಿದ್ದಾರೆ.

ನಾನೆಂಬ ಪರಿಮಳದ ಹಾದಿಯಲಿ: ಧಾರಾವಾಹಿ ಮುಂದುವರಿಯುವುದು..

Published On - 1:23 pm, Tue, 26 January 21

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!