National Chai Day 2022: ವ್ಹಾಹ್ ಚಾಯ್; ರಾಷ್ಟ್ರೀಯ ಚಹಾ ದಿನದ ಇತಿಹಾಸ, ಮಹತ್ವ ಮತ್ತು ಆಚರಣೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 21, 2022 | 7:46 AM

ಮಸಾಲಾ ಚಾಯ್ ಏಳು ಅಂಶಗಳನ್ನು ಒಳಗೊಂಡಿರುತ್ತದೆ. ಅವೆಂದರೆ ನೀರು, ಚಹಾ ಎಲೆಗಳು, ಹಾಲು, ಸಕ್ಕರೆ, ಏಲಕ್ಕಿ, ಕರಿಮೆಣಸು ಮತ್ತು ಶುಂಠಿ.

National Chai Day 2022: ವ್ಹಾಹ್ ಚಾಯ್; ರಾಷ್ಟ್ರೀಯ ಚಹಾ ದಿನದ ಇತಿಹಾಸ, ಮಹತ್ವ ಮತ್ತು ಆಚರಣೆ
ಟೀ ತೋಟ ಮತ್ತು ಚಹಾ ಸೇವಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ
Follow us on

ಮೂಡ್ ಕೆಟ್ಟಾಗ, ಖುಷಿಯಾದಾಗ, ತೂಕಡಿಕೆ ಬಂದಾಗ, ನಿದ್ದೆ ಬಾರದಿದ್ದಾಗ… ಹೀಗೆ ಬದುಕಿನ ಅನುದಿನದ ಸಂಗಾತಿ ಎನಿಸಿದೆ ಚಹಾ, ಅದೇ ಕಣ್ರೀ ನಮ್ಮ-ನಿಮ್ಮ ಜನಮಾನಿನ ‘ಟೀ’. ಜನಜೀವನ ಮತ್ತು ನಮ್ಮ ಆಹಾರ ಸಂಸ್ಕೃತಿಯ ಭಾಗವೇ ಆಗಿರುವ ಈ ರುಚಿಕರವಾದ ಪಾನೀಯವನ್ನು ಪ್ರಶಂಸಿಸಲೆಂದೇ ಒಂದು ದಿನವೂ ಇದೆ. ಅಮೆರಿಕದಲ್ಲಿ ಪ್ರತಿವರ್ಷ ಸೆ 21ರಂದು ರಾಷ್ಟ್ರೀಯ ಚಹಾ ದಿನ (National Chai Day 2022) ಆಚರಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿಯೂ ಚಹಾ ದಿನವನ್ನು ಜನರು ಖುಷಿಯಿಂದ ಸಂಭ್ರಮಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ‘ಚಾಯ್ ಪೇ ಚರ್ಚಾ’ ಹೆಸರಿನಲ್ಲಿ ಚಹಾಕ್ಕೆ ರಾಜಕೀಯ ಆಯಾಮವನ್ನೂ ತಂದರು. ಬಿಜೆಪಿಯು ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಇದನ್ನು ಯಶಸ್ವಿ ತಂತ್ರವಾಗಿ ಬಳಕೆ ಮಾಡಿಕೊಂಡಿತು.

‘ಮಸಾಲಾ ಚಾಯ್’ ಭಾರತದಾದ್ಯಂತ ಜನಪ್ರಿಯ. ತುಸು ಮಸಾಲೆ ಘಮದೊಂದಿಗೆ ಮನಸೆಳೆಯುವ ಈ ಪಾನೀಯವನ್ನು ಚಹಾ ಗಿಡದ ಒಣಗಿದ ಚಿಗುರೆಲೆಗೆ ಏಲಕ್ಕಿ, ಜಾಯಿಕಾಯಿ, ದಾಲ್ಚಿನ್ನಿ ಮತ್ತು ಮೆಣಸಿಯಂತಹ ಸುವಾಸನೆಯುಕ್ತ ಮಸಾಲೆಗಳನ್ನು ಹದವಾಗಿ ಬೆರೆಸಿ ಸಿದ್ಧಪಡಿಸಲಾಗುತ್ತದೆ. ಇದೇ ರೀತಿ ‘ಶುಂಠಿ ಟೀ’ ಎನ್ನುವ ಮತ್ತೊಂದು ಪಾನೀಯವೂ ಭಾರತದಲ್ಲಿ ಜನಪ್ರಿಯವಾಗಿದೆ. ಇದಕ್ಕೆ ಚಹಾ ಗಿಡದ ಚಿಗುರೆಲೆಗಳನ್ನು ನೀರಿನಲ್ಲಿ ಕುದಿಸುವಾಗ ತುಸುವೇ ಶುಂಠಿಯನ್ನು ಹಾಕಲಾಗುತ್ತದೆ. ಭಾರತದಲ್ಲಿ ಹುಟ್ಟಿಕೊಂಡ ಈ ಪಾನೀಯವು ವಿಶ್ವದಾದ್ಯಂತ ಜನಪ್ರಿಯತೆಯನ್ನು ಗಳಿಸಿದೆ. ವರ್ಷದಿಂದ ವರ್ಷಕ್ಕೆ ಟೀ ಸೇವನೆಯ ಜನಪ್ರಿಯತೆಯು ಹೆಚ್ಚುತ್ತಲೇ ಇದೆ. ಜನಮಾನಸವನ್ನು ಆಕರ್ಷಿಸಿರುವ ಈ ಪಾನೀಯದ ಬಳಕೆ ಉತ್ತೇಜಿಸುವ ಉದ್ದೇಶದಿಂದ ‘ಚಹಾ ದಿನ’ವನ್ನು ಆಚರಿಸಲಾಗುತ್ತಿದೆ.

ರಾಷ್ಟ್ರೀಯ ಚಹಾ ದಿನದ ಇತಿಹಾಸ

ಕ್ರಿಪೂ 3000ರಿಂದ ಚಹಾ ಗಿಡಮೂಲಿಕೆ ಪಾನೀಯವಾಗಿ ರಾಜಮನೆತನಗಳಲ್ಲಿ ಬಳಕೆ ಬಂತು. ಚಹಾ ಎನ್ನುವುದು ಆ ದಿನಗಳಲ್ಲಿ ವಿವಿಧ ಮಸಾಲೆಗಳಿಂದ ಮಾಡಿದ ಗಿಡಮೂಲಿಕೆಯ ಪಾನೀಯವಾಗಿತ್ತು. ಅದರ ಆರಂಭಿಕ ಆವೃತ್ತಿಯು ಮಸಾಲೆಗಳ ಮಿಶ್ರಣವಾಗಿತ್ತು ಆದರೆ ಚಹಾ ಎಲೆಗಳನ್ನು ಹೊಂದಿರಲಿಲ್ಲ. ಚೀನಾದಲ್ಲಿ ಚಹಾವನ್ನು ಆವಿಷ್ಕರಿಸಿದಾಗ ಇದು ಬದಲಾಯಿತು. ಇಂದು ನಮಗೆ ತಿಳಿದಿರುವ ಚಹಾದ ಆಧುನಿಕ ಆವೃತ್ತಿಯು ಭಾರತದಲ್ಲಿ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ಸಮಯದಲ್ಲಿ ಅಭಿವೃದ್ಧಿ ಹೊಂದಿತು. ಈ ಸಮಯದಲ್ಲಿ ಬ್ರಿಟಿಷರು ಚೀನೀಯರಿಂದ ಚಹಾ ಕೃಷಿಯನ್ನು ಕಲಿತ ನಂತರ ಭಾರತದಲ್ಲಿ ಚಹಾ ಕೃಷಿ ಪರಿಚಯಿಸಿದರು. ಭಾರತವು ಇಂದು ವಿಶ್ವದ ಅತಿದೊಡ್ಡ ಚಹಾ ರಫ್ತುದಾರ ದೇಶದಲ್ಲಿ ಒಂದಾಗಿದೆ. 19ನೇ ಶತಮಾನದ ಹೊತ್ತಿಗೆ ಬ್ರಿಟೀಷರು ಚಹಾದ ಡಿಕಾಕ್ಷನ್​ಗೆ ಹಾಲು ಮತ್ತು ಸಕ್ಕರೆ ಸೇರಿಸಲು ಆರಂಭಿಸಿದರು. ಅದು ಪಾಶ್ಚಿಮಾತ್ಯ ಜಗತ್ತಿನಲ್ಲಿಯೂ ಜನಪ್ರಿಯವಾಗಲು ಪ್ರಾರಂಭಿಸಿತು. ಭಾರತವು ಸ್ವಾತಂತ್ರ್ಯ ಪಡೆದ ನಂತರ ಭಾರತ ಮತ್ತು ಇತರ ದಕ್ಷಿಣ ಏಷ್ಯಾದ ವಲಸಿಗರಿಂದಾಗಿ ಚಹಾ ಪಾಶ್ಚಿಮಾತ್ಯ ದೇಶಗಳಲ್ಲಿ ಜನಪ್ರಿಯತೆ ಪಡೆಯಿತು. ರಾಷ್ಟ್ರೀಯ ಚಹಾ ದಿನವನ್ನು ಅಧಿಕೃತವಾಗಿ 2018ರಲ್ಲಿ ಆರಂಭಿಸಲಾಯಿತು.

ರಾಷ್ಟ್ರೀಯ ಚಾಯ್ ದಿನದ ಮಹತ್ವ

ಚಾಯ್ ಎಂಬ ಪದವು ‘ಚಾಯ್’ ಎಂಬ ಹಿಂದಿ ಪದದಿಂದ ಹುಟ್ಟಿಕೊಂಡಿತು. ಇದು ಚ ಎಂಬ ಚೀನೀ ಪದದಿಂದ ವ್ಯುತ್ಪತ್ತಿಯಾಗಿದೆ. ಇಂಗ್ಲಿಷ್​ನಲ್ಲಿ ಮಸಾಲೆಯುಕ್ತ ಚಹಾವನ್ನು ಸಾಮಾನ್ಯವಾಗಿ ಮಸಾಲಾ ಚಾಯ್ ಅಥವಾ ಸರಳವಾಗಿ ಚಾಯ್ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಎಲ್ಲ ಬಗೆಯ ಇಂಥ ಪಾನೀಯಗಳಿಗೆ ಚಾಯ್ ಎನ್ನುತ್ತಾರೆ. ಪಾಶ್ಚಿಮಾತ್ಯ ದೇಶಗಳಲ್ಲಿ ಹಾಗಿಲ್ಲ.

ಮಸಾಲಾ ಚಾಯ್​ಗಾಗಿ ನಿರ್ದಿಷ್ಟ ಪಾಕವಿಧಾನ ಅಥವಾ ತಯಾರಿಯ ವಿಧಾನವನ್ನು ನಿಗದಿಪಡಿಸಲಾಗಿಲ್ಲ, ಮತ್ತು ಅನೇಕ ಕುಟುಂಬಗಳು ಚಹಾದ ತಮ್ಮದೇ ಆದ ಶೈಲಿಯನ್ನು ಹೊಂದಿವೆ. ಹೆಚ್ಚಿನ ಮಸಾಲಾ ಚಾಯ್ ಕೆಫೀನ್ ಅನ್ನು ಹೊಂದಿರುತ್ತದೆ, ಇದು ಸಾಮಾನ್ಯವಾಗಿ ಕಾಫಿಯ ಮೂರನೇ ಒಂದು ಭಾಗದಷ್ಟು ಇರುತ್ತದೆ. ಆದಾಗ್ಯೂ, ಮಸಾಲಾ ಚಾಯ್ ಏಳು ಮೂಲಭೂತ ಘಟಕಗಳನ್ನು ಹೊಂದಿವೆ. ಅವೆಂದರೆ ನೀರು, ಚಹಾ ಎಲೆಗಳು, ಹಾಲು, ಸಕ್ಕರೆ, ಏಲಕ್ಕಿ, ಕರಿಮೆಣಸು ಮತ್ತು ಶುಂಠಿ.

ಮಸಾಲೆ ಚಹಾದಿಂದ ದೇಹಕ್ಕೆ ಹಲವು ಪ್ರಯೋಜನಗಳಿವೆ. ಆರೋಗ್ಯ ಪ್ರಯೋಜನಗಳಲ್ಲಿ ಜೀರ್ಣಕ್ರಿಯೆಗೆ ಸಹಾಯ ಮಾಡುವ ಕರಿಮೆಣಸು ಮತ್ತು ಶುಂಠಿ, ಕಿಬ್ಬೊಟ್ಟೆಯ ನೋವನ್ನು ನಿವಾರಿಸಲು ಸಹಾಯ ಮಾಡುವ ಲವಂಗ, ಮನಸ್ಸಿಗೆ ಉಲ್ಲಾಸ ಕೊಡುವ ಏಲಕ್ಕಿ ಮತ್ತು ಹೃದಯದ ಆರೋಗ್ಯವನ್ನು ಉತ್ತೇಜಿಸುವ ದಾಲ್ಚಿನ್ನಿ ಮಸಾಲೆ ಚಾಯ್​ನ ಭಾಗವಾಗಿರುತ್ತವೆ.

Published On - 7:45 am, Wed, 21 September 22