ಉತ್ತರ ಕನ್ನಡ ಜಿಲ್ಲೆಯಲ್ಲಿ ರಸ್ತೆಗಳ ದುಸ್ಥಿತಿ ಬಿಟ್ಟುಬಿಡಿ, ಒಂದಾದರೂ ಸುಸಜ್ಜಿತ ಆಸ್ಪತ್ರೆ ಬೇಡವೇ?

| Updated By: ganapathi bhat

Updated on: Apr 06, 2022 | 9:06 PM

ಉತ್ತರ ಕನ್ನಡವನ್ನು ಘಟ್ಟದ ಮೇಲೆ ಹಾಗೂ ಘಟ್ಟದ ಕೆಳಗೆ ಎಂದು ಎರಡು ಭಾಗವಾಗಿ ವಿಂಗಡಿಸಿಲಾಗಿದೆ. ಜಿಲ್ಲಾಕೇಂದ್ರ ಕಾರವಾರದಲ್ಲಿ ಜಿಲ್ಲಾಸ್ಪತ್ರೆಯಿದೆ. ಘಟ್ಟದ ಮೇಲೆ ಶಿರಸಿ ಪ್ರಮುಖ ನಗರ. ಅಲ್ಲಿಯೂ ತಾಲೂಕಾಸ್ಪತ್ರೆಗಿಂತ ಸ್ವಲ್ಪ ದೊಡ್ಡ ಆಸ್ಪತ್ರೆಯೇ ಇದ್ದರೂ, ಅಪಘಾತಗಳಂತಹ ಸಂದರ್ಭಗಳಲ್ಲಿ ಚಿಕಿತ್ಸೆಗಾಗಿ ತೆರಳುವಂತಿಲ್ಲ.

ಉತ್ತರ ಕನ್ನಡ ಜಿಲ್ಲೆಯಲ್ಲಿ ರಸ್ತೆಗಳ ದುಸ್ಥಿತಿ ಬಿಟ್ಟುಬಿಡಿ, ಒಂದಾದರೂ ಸುಸಜ್ಜಿತ ಆಸ್ಪತ್ರೆ ಬೇಡವೇ?
ಶಿರಸಿ-ಯಾಣ ರಸ್ತೆ (ಸಂಗ್ರಹ ಚಿತ್ರ)
Follow us on

ಅಂಕೋಲ ತಾಲೂಕು ಹೊಸಕಂಬಿ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕೇಂದ್ರ ಆಯುಷ್ ಸಚಿವ ಶ್ರೀಪಾದ್​ ನಾಯಕ್​ರ ಪತ್ನಿ ಮೃತಪಟ್ಟು, ಸಚಿವರು ಗಂಭೀರವಾಗಿ ಗಾಯಗೊಂಡರು. ಸಚಿವರನ್ನು ತುರ್ತಾಗಿ ಗೋವಾದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದಾದರೂ ಸುಸಜ್ಜಿತ ಆಸ್ಪತ್ರೆ ಬೇಕು ಎಂಬ ಒತ್ತಾಯ ಈಗ ಮತ್ತೆ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಪರಿಸ್ಥಿತಿ ವಿಶ್ಲೇಷಿಸುವ ಲೇಖನ ಇಲ್ಲಿದೆ.

ಒಟ್ಟು 11 ತಾಲೂಕುಗಳ ಉತ್ತರ ಕನ್ನಡ, ರಾಜ್ಯದಲ್ಲಿನ ಅತಿ ದೊಡ್ಡ ಜಿಲ್ಲೆಗಳಲ್ಲೊಂದು. ಗುಡ್ಡಗಾಡು, ಕಾಡು ಜತೆಗೆ ಮಲೆನಾಡಿನಿಂದಾವೃತ ಜಿಲ್ಲೆಯಲ್ಲಿ ಸ್ವಲ್ಪ ಜನಸಂಖ್ಯೆ ಕಡಿಮೆಯೇ. ಆದರೆ ಅಪಘಾತಗಳಲ್ಲ. ಉತ್ತರ ಕನ್ನಡವನ್ನು ಘಟ್ಟದ ಮೇಲೆ ಹಾಗೂ ಘಟ್ಟದ ಕೆಳಗೆ ಎಂದು ಎರಡು ಭಾಗವಾಗಿ ವಿಂಗಡಿಸಿಲಾಗಿದೆ. ಜಿಲ್ಲಾಕೇಂದ್ರ ಕಾರವಾರದಲ್ಲಿ ಜಿಲ್ಲಾಸ್ಪತ್ರೆಯಿದೆ. ಘಟ್ಟದ ಮೇಲೆ ಶಿರಸಿ ಪ್ರಮುಖ ನಗರ. ಅಲ್ಲಿಯೂ ತಾಲೂಕಾಸ್ಪತ್ರೆಗಿಂತ ಸ್ವಲ್ಪ ದೊಡ್ಡ ಆಸ್ಪತ್ರೆಯೇ ಇದ್ದರೂ, ಅಪಘಾತಗಳಂತಹ ಸಂದರ್ಭಗಳಲ್ಲಿ ಚಿಕಿತ್ಸೆಗಾಗಿ ತೆರಳುವಂತಿಲ್ಲ.

We want super speciality hospital in Uttara Kannada ಎಂಬ ಒತ್ತಾಯ ಕೆಲ ವರ್ಷಗಳ ಹಿಂದೆಯೇ ಮುನ್ನೆಲೆಗೆ ಬಂದಿತ್ತು. ಫೇಸ್​ಬುಕ್​ನಲ್ಲಿ ನೂರಾರು ಉತ್ತರ ಕನ್ನಡಿಗರು ಅಸಮಧಾನ ವ್ಯಕ್ತಪಡಿಸಿದ್ದರು. ದಿ.ರಾಮಕೃಷ್ಣ ಹೆಗಡೆಯಂತಹ ಮುತ್ಸದ್ದಿ ನಾಯಕನನ್ನು ನೀಡಿದ, ದೆಹಲಿಯವರೆಗೂ ‘ಕೈ’ ಇರುವ ವಿ.ಎಸ್.ದೇಶಪಾಂಡೆ, ಸತತ ಸಂಸದರಾಗಿ ಆಯ್ಕೆಯಾಗುತ್ತಲೇ ಇರುವ ಅನಂತ ಕುಮಾರ್ ಹೆಗಡೆ, ಮಾಜಿ ಮಂತ್ರಿ, ಹಾಲಿ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಜತೆಗೆ ಇನ್ನಿತರ ಮುಖಂಡರಿದ್ದಾಗ್ಯೂ ಉತ್ತರ ಕನ್ನಡಕ್ಕೆ ತುರ್ತು ಚಿಕಿತ್ಸೆ ಒದಗಿಸುವ ಯಾವ ಆಸ್ಪತ್ರೆಯಿಲ್ಲ. ಇದು ಸಹಜವಾಗಿ ಎಂಥವರಿಗೂ ಬೇಸರ, ಸಿಟ್ಟು ತರುವ ಸಂಗತಿಯೇ. ದೇವಾಲಯವಿದ್ದೂ, ದೇವರೇ ಇಲ್ಲದ ಪರಿಸ್ಥಿತಿಯಲ್ಲಿ ಉಳಿದ ತಾಲೂಕು ಆಸ್ಪತ್ರೆಗಳದ್ದು.

ಉತ್ತರ ಕನ್ನಡಿಗರು ಆಶ್ರಯಿಸಿರುವ ಆಸ್ಪತ್ರೆಗಳಾವುವು?
ಘಟ್ಟದ ಮೇಲಿನ ತಾಲೂಕುಗಳಾದ ಶಿರಸಿ, ಯಲ್ಲಾಪುರ, ಸಿದ್ದಾಪುರಗಳಲ್ಲಿ ತುರ್ತು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್, ಮಣಿಪಾಲ, ಮಂಗಳೂರಿನ ದೇರಳಕಟ್ಟೆ ಆಸ್ಪತ್ರೆಗಳೇ ಗತಿ. ತಾಲೂಕು ಕೇಂದ್ರದಿಂದ ಆ್ಯಂಬುಲೆನ್ಸ್ ಸಹ ತಲುಪಲಾರದ ಊರುಗಳು ಅದೆಷ್ಟೋ. ಹಳ್ಳ ದಾಟಲು ಕಾಲು ಸಂಕವನ್ನೇ ನಂಬಿಕೊಂಡ ಊರುಗಳಿಂದ ಹುಷಾರು ತಪ್ಪಿದಾಗ ಕಂಬಳಿಯಲ್ಲಿ ಹೊತ್ತು ಆಸ್ಪತ್ರೆಗೆ ಸಾಗಿಸಿದ ಘಟನೆಗಳು ಈಗಲೂ ವರದಿಯಾಗುತ್ತವೆ. ಇನ್ನು ಮಳೆಗಾಲವೋ, ಆ ಕಾಲದಲ್ಲೊಂದು ಆರೋಗ್ಯ ಕೆಡದಿದ್ದರೆ ಸಾಕೆಂದು ಇಳಿ ವಯಸ್ಕರು ಪ್ರಾರ್ಥಿಸುತ್ತಾರೆ‌. ಇಲ್ಲವೇ ಮಳೆಗಾಲದ ಶುರುವಿಗೂ ಮೊದಲೇ ಪೇಟೆಗೆ ವಲಸೆ ಹೋಗುತ್ತಾರೆ‌.

ಶ್ರೀಪಾದ ನಾಯಕ್​ರನ್ನು ಅಪಘಾತ ನಡೆದ ಹೊಸಕಂಬಿಯಿಂದ ಗೋವಾ ರಾಜ್ಯದ ಬಾಂಬೋಲಿಯ ಗೋವಾ ಮೆಡಿಕಲ್ ಕಾಲೇಜ್​ಗೆ ಸೇರಿಸಲಾಯಿತು. ಪತ್ನಿ ಅಂಕೋಲಾದ ಸ್ಥಳೀಯ ಆಸ್ಪತ್ರೆಯಲ್ಲೇ ಅಸು ನೀಗಿದರು. ಹೊಸಕಂಬಿಯಿಂದ ಗೋವಾದ ಆಸ್ಪತ್ರೆಯ ದೂರ ಸುಮಾರು 120 ಕಿಲೋ ಮೀಟರ್. ಇದೇ ಅಂಕೋಲಾದಿಂದ ಮಂಗಳೂರಿನ ದೇರಳಕಟ್ಟೆಗೆ 240 ಕಿಲೋ ಮೀಟರ್. ಮಣಿಪಾಲಕ್ಕೆ 175 ಕಿಲೋ ಮೀಟರ್. ಹುಬ್ಬಳ್ಳಿಗೆ 140 ಕಿಲೋ ಮೀಟರ್. ಈ ಯಾವ ಆಸ್ಪತ್ರೆಗಳೂ ಉತ್ತರ ಕನ್ನಡದಲ್ಲಿಲ್ಲ. ಹೊರ ಜಿಲ್ಲೆ, ರಾಜ್ಯಗಳಿಗೇ ಓಡಬೇಕಾದ ಗತಿ.

ಹಿಂದೊಮ್ಮೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಬೇಕು ಎಂಬುದು ಸಾಮಾಜಿಕ‌ ಜಾಲತಾಣಗಳಲ್ಲಿ ಟ್ರೆಂಡ್ ಆದಾಗ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಸ್ಪತ್ರೆ ನಿರ್ಮಿಸುವುದಾಗಿ ಭರವಸೆ ನೀಡಿ ಟ್ವೀಟ್ ಮಾಡಿದ್ದರು. ಉತ್ತರ ಕನ್ನಡಕ್ಕೇ ಸಕಲ ಸುಸಜ್ಜಿತ ಆಸ್ಪತ್ರೆ ಬೇಕೆಂದು ಅಂಕೋಲಾ ಕಾರವಾರ ಶಾಸಕಿ ರೂಪಾಲಿ‌ ನಾಯ್ಕ್ ಮನವಿಗೆ ವಾರದ ಹಿಂದಷ್ಟೇ ಮುಖ್ಯಮಂತ್ರಿಗ ಬಿ.ಎಸ್.ಯಡಿಯೂರಪ್ಪ ಸಹಿ ಮಾಡಿದ್ದರು. ಆದರೆ, ಇನ್ನೂ ಅಧಿಕೃತ ಆದೇಶ ಹೊರಬಿದ್ದಿಲ್ಲ. ಇತ್ತ, ಶಿರಸಿಯ ತಾಲೂಕಾಸ್ಪತ್ರೆಯನ್ನು 200 ಹಾಸಿಗೆಗಳ ಮೇಲ್ದರ್ಜೆಯ ಆಸ್ಪತ್ರೆಯಾಗಿಸಲು 20 ಕೋಟಿ ಮಂಜೂರಾಗಿದೆ. ಕೆಲಸವೂ ಆಗುತ್ತಲಿದೆ. ಆದರೆ ಅವೆಲ್ಲ ‘ಆದ ಕಾಲಕ್ಕೇ, ನಮ್ಮವರು ನಮ್ಮದೇ ಆಸ್ಪತ್ರೆಗೆ ಹೋದ ಕಾಲಕ್ಕೇ’ ಎನ್ನುತ್ತಾರೆ ಸ್ಥಳೀಯರು. ಒಟ್ಟಿನಲ್ಲಿ ಉತ್ತರ ಕನ್ನಡಿಗರಿಗೆ ಹುಬ್ಬಳ್ಳಿಯೋ, ಮಣಿಪಾಲೋ, ದೇರಳಕಟ್ಟೆಯೋ ಎಂದು ‘ಅಜೋ’ ಎಂದು ಓಡುವುದಂತೂ ತಪ್ಪಿದ್ದಲ್ಲ.

ಹದಗೆಟ್ಟ ರಸ್ತೆಗಳು
ಯಲ್ಲಾಪುರದಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಕೇಂದ್ರ ಆಯುಶ್ ಸಚಿವ ಶ್ರೀಪಾದ ನಾಯಕ್​ರ ಕಾರು ಅಪಘಾತವಾಯಿತು. ಅವರ ಪತ್ನಿ, ಆಪ್ತ ಕಾರ್ಯದರ್ಶಿ ಸ್ಥಳದಲ್ಲೇ ಮೃತರಾದರು. ಈ ಅಪಘಾತಕ್ಕೆ ಹದಗೆಟ್ಟ ರಸ್ತೆಯೂ ಕಾರಣ. ಕೆಟ್ಟ ರಸ್ತೆಗಳಿಂದಲೇ ದೇವಿಮನೆ, ಅರಬೈಲ್ ಘಾಟಿಗಳಲ್ಲಿ ಅಪಘಾತ ವರದಿಯಾಗುತ್ತದೆ. ಇನ್ನು ಜಿಲ್ಲೆಯಲ್ಲಿ ಹಾದುಹೋದ ಹೆದ್ದಾರಿಗಳ ಆಗುವ ಅಪಘಾತಗಳು ಬೇರೆಯೇ. ಯಲ್ಲಾಪುರದಿಂದ ಗೋಕರ್ಣಕ್ಕೆ ತೆರಳಲು ಎರಡು ಮಾರ್ಗಗಳಿವೆ. ನೇರ ಹೆದ್ದಾರಿಯ  ಮಾರ್ಗ ಒಂದಾದರೆ, ಯಲ್ಲಾಪುರ- ಹೊಸಕಂಬಿ- ಮಾದನಗೇರಿ ಒಳರಸ್ತೆ ಇನ್ನೊಂದು. ಕೇಂದ್ರ ಸಚಿವ ಶ್ರೀಪಾದ್ ನಾಯಕ್​ರು ಹೊರಟಿದ್ದು ಇದೇ ಒಳಮಾರ್ಗದಲ್ಲಿ.

ಶ್ರೀಪಾದ ನಾಯಕ್​ರು ಯಲ್ಲಾಪುರದ ಗಂಟೆ ಗಣಪತಿ ದೇಗುಲದ ದರ್ಶನ ಪಡೆದಿದ್ದರು. ಇದೇ ದಾರಿಯಲ್ಲೇ ಪ್ರಸಿದ್ಧ ಮಾಗೋಡು ಜಲಪಾತ, ಜೇನುಕಲ್ಲುಗುಡ್ಡವಿದೆ. ಈ ದಾರಿಯ ಗುಣಮಟ್ಟದ ಬಗ್ಗೆ ನೀವು ಕೇಳಬೇಡಿ, ನಾನು ಹೇಳುವುದಿಲ್ಲ. ಒಮ್ಮೆ ಈ ದಾರಿಗುಂಟ ಸಾಗಿದವರ ಬಳಿ, ನೀವೇನಾದರೂ ಇನ್ನೊಮ್ಮೆ ಹೋಗೋಣವೇ ಎಂದು ಕೇಳಿದರೆ ಅವರು ನಿಮಗೆ ಕೈ ಮುಗಿದಾರು ವಿನಃ ಬರಲೊಪ್ಪರು. ಇನ್ನೊಂದು ಪ್ರಸಿದ್ಧ ಜಲಪಾತ ಸಾತೊಡ್ಡಿಗೆ ಸಾಗುವ ರಸ್ತೆಯ ಕಥೆಯೂ ಇದೇ. ಕಳಪೆ ರಸ್ತೆಗಳೇ ಅಪಘಾತಗಳಿಗೆ ಕಾರಣ ಎಂಬುದು ಸಾಬೀತಾಗುತ್ತಲೇ ಇದೆ.

ಅಂಕೋಲ ಸಮೀಪ ರಸ್ತೆ ಅಪಘಾತ: ಕೇಂದ್ರ ಸಚಿವ ಶ್ರೀಪಾದ್​ ನಾಯಕ್​ಗೆ ಗಂಭೀರ ಗಾಯ, ಪತ್ನಿ ಸಾವು

Published On - 7:02 am, Wed, 13 January 21