Parvathi G. Aithal‘s Birthday : ಇದು ಕುಂದಾಪುರದ ಪಾರ್ವತಿ ಮೇಡಮ್ ಕ್ಲಾಸ್…

Kannada Literature : ’ಸಾಮಾನ್ಯ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಓದು ಮತ್ತು ಪುಸ್ತಕಗಳ ಬಗ್ಗೆ ಹೇಳುವುದಾದರೆ ಅದು ಸಾಹಿತ್ಯದ ಓದು ಎಂದೇ ಅರ್ಥ. ಅಲ್ಲದೆ ಸಾಹಿತ್ಯವೆಂಬುದು ನಮ್ಮ ಬದುಕಿನ ಸಮಗ್ರವಾದ ಒಂದು ಮರುಸೃಷ್ಟಿ ಎಂಬ ನಂಬಿಕೆ ಬೆಳೆದು ಬಂದಿರುವುದರಿಂದ ಅದು ನಮ್ಮ ಅನುಭವದ ವಲಯದೊಳಗಿನ ಎಲ್ಲ ಜ್ಞಾನ ಶಿಸ್ತುಗಳನ್ನೂ ಪೂರ್ತಿಯಾಗಿ ಒಳಗೊಂಡಿರುವ ಒಂದು ಕ್ಷೇತ್ರವೂ ಹೌದು.’ ಡಾ. ಪಾರ್ವತಿ ಜಿ. ಐತಾಳ.

Parvathi G. Aithal‘s Birthday : ಇದು ಕುಂದಾಪುರದ ಪಾರ್ವತಿ ಮೇಡಮ್ ಕ್ಲಾಸ್...
ಡಾ. ಪಾರ್ವತಿ ಜಿ. ಐತಾಳ
Follow us
ಶ್ರೀದೇವಿ ಕಳಸದ
|

Updated on:Jul 23, 2021 | 9:51 AM

ಈಗಂತೂ ಮಕ್ಕಳ ಇಸ್ಕೂಲ್​ ಮನೇಲಲ್ವೇ? ಹಾಗಿದ್ದರೆ ಪಠ್ಯಪುಸ್ತಕ ಬಿಟ್ಟು ಬೇರೇನು ಓದುತ್ತಿವೆ ನಮ್ಮ ಮಕ್ಕಳು ಎನ್ನುವ ಕುತೂಹಲ ಟಿವಿ9 ಕನ್ನಡ ಡಿಜಿಟಲ್​ಗೆ ಉಂಟಾಯಿತು. ತಡಮಾಡದೆ ಒಂದಿಷ್ಟು ಮಕ್ಕಳಿಗೆ, ಈ ತನಕ ನಿಮಗೆ ಇಷ್ಟವಾದ ಐದು ಪುಸ್ತಕಗಳು ಮತ್ತವುಗಳ ಬಗ್ಗೆ ದೊಡ್ಡವರ ಸಹಾಯ ಪಡೆದುಕೊಂಡೇ ಬರೆದು ಕಳಿಸಿ ಎಂದು ಕೇಳಲಾಯಿತು. ಮೆಲ್ಲಮೆಲ್ಲಗೆ ‘ಕನ್ನಡ’ದಲ್ಲಿ ಬಂದು ನಮ್ಮನ್ನು ತಲುಪಿದ ಮೇಲ್​ಗಳಲ್ಲಿ ಕೆಲವೊಂದಿಷ್ಟನ್ನು ಆಯ್ಕೆ ಮಾಡಲಾಯಿತು. ಈ ಓದು ಮಗು ಓದು ಸರಣಿಯಲ್ಲಿ ಪ್ರಜ್ಞಾವಂತ ಪೋಷಕರ, ಲೇಖಕರ, ಶಿಕ್ಷಕರ ಮತ್ತು ಓದುಬರಹವನ್ನೇ ಬದುಕಿನ ಭಾಗವಾಗಿಸಿಕೊಂಡ ದೊಡ್ಡಮಕ್ಕಳ ಅನುಭವಾಧಾರಿತ ಕಥನಗಳು, ವಿಶ್ಲೇಷಣಾತ್ಮಕ ಮತ್ತು ಮುನ್ನೋಟದಿಂದ ಕೂಡಿದ ಲೇಖನಗಳೂ ಇರುತ್ತವೆ. ಇಷ್ಟೇ ಅಲ್ಲ, ಇಲ್ಲಿ ನೀವೂ ನಿಮ್ಮ ಮಕ್ಕಳೊಂದಿಗೆ ಪಾಲ್ಗೊಳ್ಳಬಹುದು ಹಾಗೆಯೇ ಪ್ರತಿಕ್ರಿಯೆಗಳನ್ನೂ ಹಂಚಿಕೊಳ್ಳಬಹುದು. ಇ-ಮೇಲ್  tv9kannadadigital@gmail.com

 ಇಂಗ್ಲಿಷ್ ಪ್ರಾಧ್ಯಾಪಕಿ, ಲೇಖಕಿ ಮತ್ತು ಅನುವಾದಕಿ ಡಾ. ಪಾರ್ವತಿ ಜಿ. ಐತಾಳ ಅವರ ವಿಚಾರಪೂರ್ಣ ಬರಹ ನಿಮ್ಮ  ಓದಿಗೆ.

‘ಆಂಟೀ, ನಮ್ಮ ಕನ್ನಡ ಮೇಷ್ಟ್ರು ತೇಜಸ್ವಿಯವರ  ‘ಕರ್ವಾಲೋ’ ಕಾದಂಬರಿಯ ಕಥಾ ಸಾರಾಂಶವನ್ನು ಬರೆದು ತರಲು ಹೇಳಿದ್ದಾರೆ. ನನಗೆ ಒಂದು ಉಪಕಾರ ಮಾಡ್ತೀರಾ? ನಿಮಗೆ ಆ ಕಥೆ ಗೊತ್ತಿರಬೇಕಲ್ಲ, ಸ್ವಲ್ಪ ಬರೆದು ಕೊಡ್ತೀರಾ?’ ಪಕ್ಕದ ಮನೆಯ ಚಿಂತನಾ, ಎಂಟನೇ ತರಗತಿಯಲ್ಲಿ ಓದುತ್ತಿದ್ದವಳು, ಬಂದು ಕೇಳಿದಾಗ ನಾನು ತಬ್ಬಿಬ್ಬಾದೆ. ವಿದ್ಯಾರ್ಥಿಗಳು ಸ್ವತಃ ಓದಿ ಸಾರಾಂಶ ಬರೆದು ತರಲಿ ಎಂದಲ್ಲವೇ ಮೇಷ್ಟ್ರು ಹೇಳಿದ್ದರ ಉದ್ದೇಶ?  ಅದಕ್ಕೆ ನಾನಂದೆ, ‘ಚಿಂತನಾ, ನನ್ನ ಹತ್ತಿರ ಆ ಪುಸ್ತಕವಿದೆ. ಒಮ್ಮೆ ಓದಲು ಕುಳಿತರೆ ಎರಡು-ಮೂರು ಗಂಟೆಗಳಲ್ಲಿ ಓದಿ ಮುಗಿಸುತ್ತೀಯಾ. ನೀನೇ ಕುಳಿತು ಪೂರ್ತಿಯಾಗಿ ಓದಿದರೆ ನಿನಗೆ ಸಿಗುವ ಅನುಭವವೇ ಬೇರೆ. ಹೋಗಿ ತಂದುಕೊಡುತ್ತೇನೆ. ನೀನೇ ಓದು.’ ಚಿಂತನಾ ರಾಗ ಎಳೆದು, ‘ಊಂಹೂ ಅದೆಲ್ಲ ಬೇಡ. ನನಗೆ ತುಂಬಾ ಹೋಮ್ ವರ್ಕ್ ಮಾಡಲಿಕ್ಕಿದೆ. ಅಲ್ಲದೆ ಇನ್ನು ಒಂದು ವಾರದಲ್ಲಿ ಕ್ಲಾಸ್ ಟೆಸ್ಟ್ ಇದೆ. ಅದಕ್ಕೆ ಓದಬೇಕು. ಒಳ್ಳೆ ಮಾರ್ಕ್ಸ್​ ಬಾರದಿದ್ದರೆ ಅಮ್ಮ-ಅಪ್ಪ ಬೈತಾರೆ. ಮಿಸ್ ಕೂಡಾ ಸಿಟ್ಟಾಗ್ತಾರೆ. ನಿಮ್ಮ ಪುಸ್ತಕ  ಓದುವ ಕೆಲಸ ಯಾರಿಗೆ ಬೇಕು?’

ಇದು ಇವತ್ತು ಚಿಂತನಾ ಒಬ್ಬಳ ಕಥೆಯಲ್ಲ. ಸಾಹಿತ್ಯವನ್ನೇ ಮುಖ್ಯ ವಿಷಯವನ್ನಾಗಿ ತೆಗೆದುಕೊಂಡು ಓದುವ ವಿದ್ಯಾರ್ಥಿಗಳೂ ಸಹ ಅಂಕ ಮತ್ತು ಪದವಿಗಳಿಗೋಸ್ಕರ ಕಾಟಾಚಾರಕ್ಕೋ ಎಂಬಂತೆ ಕಡ್ಡಾಯವಾಗಿ ವಿಧಿಸಿದ ಪಠ್ಯ ಪುಸ್ತಕಗಳನ್ನು ಮಾತ್ರ, ಕೆಲವೊಮ್ಮೆ ಅವುಗಳನ್ನೂ ಓದದೆ ಮಾರುಕಟ್ಟೆಯಲ್ಲಿ ಸಿಗುವ ಅಗ್ಗದ ನೋಟ್ಸ್ ಓದುತ್ತಾರೆ. ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿ ಉದ್ಯೋಗದ ಮಾರುಕಟ್ಟೆಯತ್ತ ಧಾವಿಸುವ ಓಟದ ಪೈಪೋಟಿಯಲ್ಲಿ ನಿಜವಾದ ಜ್ಞಾನಕ್ಕಾಗಿಯಾಗಲಿ, ಮನಸ್ಸಂತೋಷಕ್ಕಾಗಲಿ, ತಮ್ಮ ಸುತ್ತುಮುತ್ತಲ ಬದುಕಿನ ಬಗ್ಗೆ ತಿಳಿಯುವ ಕುತೂಹಲಕ್ಕಾಗಲಿ ಓದುವ ಅಭ್ಯಾಸವಿಲ್ಲದ ಇವರಿಗೆ ಪುಸ್ತಕಗಳ ಮೇಲಿನ ವಿಶ್ವಾಸ ತೀರಾ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿ. ಹದಿನಾರನೇ ಶತಮಾನದ ಇಂಗ್ಲಿಷ್ ಪ್ರಬಂಧಗಳ ಪಿತಾಮಹನೆಂದು ಕರೆಯಲ್ಪಡುವ ಫ್ರಾನ್ಸಿಸ್ ಬೇಕನ್ ಹೇಳಿದ ‘Reading makes a full man‘ (ಓದು ಮನುಷ್ಯನನ್ನು ಸಂಪೂರ್ಣನನ್ನಾಗಿಸುತ್ತದೆ) ಎಂಬ ಮಾತು ಒಂದು ಸಾರ್ವಕಾಲಿಕ ಸತ್ಯವೆಂಬುದನ್ನು ನಾವಿವತ್ತು ಮತ್ತೆ ನೆನಪಿಸಿಕೊಳ್ಳಬೇಕಾಗಿದೆ.

ಕೆಲವು ದಶಕಗಳ ಹಿಂದೆ ನನ್ನ ಬಾಲ್ಯ ಮತ್ತು ಯೌವನ ಕಾಲದಲ್ಲಿ ನನಗೆ ಮತ್ತು ನನ್ನ ಓರಗೆಯವರಿಗೆ ಇದ್ದ ಓದಿನ ಹುಚ್ಚು ನನಗಿಲ್ಲಿ ನೆನಪಾಗುತ್ತಿದೆ. ಆಗ ಈಗಿನಂತೆ ಎಲ್ಲೆಂದರಲ್ಲಿ ಧುಮ್ಮಿಕ್ಕಿ ನಮ್ಮನ್ನು ಆವರಿಸಿಕೊಳ್ಳುವ ಮನೋರಂಜನಾ ಸಾಧನಗಳಿರಲಿಲ್ಲ. ಓದಲು ಬೇಕಾದಷ್ಟು ಪುಸ್ತಕಗಳು ಸಿಗುವುದೇ ದುರ್ಲಭವಾಗಿದ್ದ ದಿನಗಳವು. ನಮ್ಮ ಶಾಲೆಯಲ್ಲಿದ್ದ ಲೈಬ್ರರಿಯೆಂದರೆ ಒಂದು ಮರದ ಪೆಟ್ಟಿಗೆ. ಮನೆಗೆ ತೆಗೆದುಕೊಂಡು ಹೋಗಲು ಒಂದು ಪುಸ್ತಕ ಕೊಟ್ಟರೆ ಒಂದು ವಾರದ ತನಕ ಅದನ್ನೇ ಓದಬೇಕು. ಆದರೆ ನನಗೆ ಒಂದೇ ದಿನದಲ್ಲಿ ಅದನ್ನು ಓದಿ ಮುಗಿಸಿ ಆಗುತ್ತಿತ್ತು. ಸುಮ್ಮನೆ ಒಂದು ವಾರದ ತನಕ ಓದಿದ್ದನ್ನೇ ಮತ್ತೆ ಮತ್ತೆ ಓದಿ ಆನಂದಿಸುತ್ತಿದ್ದೆ. ನಮ್ಮ ಪಕ್ಕದ ಮನೆಯಲ್ಲಿದ್ದ ನಮ್ಮ ಒಬ್ಬರು ಮೇಷ್ಟ್ರು ಚಂದಮಾಮ, ಬೊಂಬೆಮನೆ, ಬಾಲಮಿತ್ರ ಮುಂತಾದ ನಿಯತಕಾಲಿಕಗಳನ್ನು ತರಿಸುತ್ತಿದ್ದರು. ನಾವು ಅಕ್ಕಪಕ್ಕದ ಮನೆಯ ಮಕ್ಕಳು ಆ ಮೇಷ್ಟ್ರ ಮನೆಗೆ ಹೋಗಿ ಪುಸ್ತಕ ಕೊಡಿ ಎಂದು ಅವರನ್ನು ಬೇಡುತ್ತಿದ್ದೆವು. ಪುಸ್ತಕ ಹೊಸತಿರುವಾಗ ಕೊಟ್ಟರೆ ನಾವೆಲ್ಲಿ ಹರಿದು ಹಾಕುತ್ತೇವೋ ಎಂಬ ಭಯದಿಂದ ಅವರು ಎಲ್ಲ ಪುಸ್ತಕಗಳೂ ಹಳತಾದ ನಂತರ ನಮಗೆ ಅವನ್ನು ಓದಲು ಕೊಡುತ್ತಿದ್ದರು. ಚಂದಮಾಮದ ಫ್ಯಾಂಟಸಿ ಕಥೆಗಳು ನಮ್ಮಲ್ಲಿ ಸಂತೋಷದ ಜತೆಗೆ ಭಯ-ಕುತೂಹಲಗಳನ್ನು ಕೆರಳಿಸುತ್ತಿದ್ದವು. ಹಳ್ಳಿಯಲ್ಲಿ ಬೇರಾವ ಪುಸ್ತಕಗಳ ಲಭ್ಯತೆಗೂ ಅವಕಾಶವಿರಲಿಲ್ಲ. ಮಧ್ಯಾಹ್ನ ಊಟವಾದ ನಂತರ ನನ್ನ ತಂದೆಯವರು ರಾಮಾಯಣ-ಮಹಾಭಾರತ ಭಾಗವತದ ಪದ್ಯಗಳನ್ನು ರಾಗವಾಗಿ ಓದಿ ಹೇಳಿ ಕಥೆಗಳನ್ನು ರಸವತ್ತಾಗಿ ವಿವರಿಸಿದರೆ ನಾವೆಲ್ಲರೂ ಅದನ್ನು ಖುಷಿಯಿಂದ ಆಸ್ವಾದಿಸುತ್ತಿದ್ದೆವು.

ನಾನು ಹೈಸ್ಕೂಲು ಮುಟ್ಟುವ ಹೊತ್ತಿಗೆ ಬೇರೊಂದು ಶಾಲೆಯಲ್ಲಿ ಮೇಷ್ಟ್ರಾಗಿದ್ದ ನನ್ನ ಅಣ್ಣ-ಅವರಿಗೂ ಓದಿನ ಹುಚ್ಚಿತ್ತು-ಪೇಟೆಗೆ ಹೋದಾಗಲೆಲ್ಲ ಮಲ್ಲಿಗೆ-ಕಸ್ತೂರಿ-ಮಯೂರಗಳನ್ನು ತರುತ್ತಿದ್ದರೆ ನಾವು ಅಕ್ಕ-ತಂಗಿಯರು ನಾ ಮೊದಲು- ತಾ ಮೊದಲೆಂದು ಕಿತ್ತಾಡಿ ಅವುಗಳಲ್ಲಿರುವ ಒಂದಕ್ಷರವನ್ನೂ ಬಿಡದೆ ಓದಿ, ಮತ್ತೆ ಮತ್ತೆ ಓದಿ ಉರು ಹಾಕಿದ ನೆನಪು ಈಗಲೂ ಕಚಗುಳಿ ಇಡುತ್ತಿದೆ. ಆಗ ಓದಲು ಕಥೆ-ಕಾದಂಬರಿಗಳೇ ಬೇಕೆಂಬ ಹಠವಿರಲಿಲ್ಲ. ಎಲ್ಲ ವಿಷಯಗಳನ್ನೂ ತಿಳಿದುಕೊಂಡಿರಬೇಕು, ಪ್ರಪಂಚಜ್ಞಾನ ಬೆಳೆಸಿಕೊಳ್ಳಬೇಕೆಂದು ನನ್ನ ಅಣ್ಣ ಹೇಳುತ್ತಿದ್ದರು. ಆದ್ದರಿಂದ ಸಿಕ್ಕಿದ್ದನ್ನೆಲ್ಲ ಓದುವುದು-ಅದು ವಿಜ್ಞಾನ ವಿಷಯದ ಒಂದು ಪ್ರಬಂಧವಾಗಿರಬಹುದು, ವೈಚಾರಿಕ ಲೇಖನವಾಗಿರಬಹುದು, ರಾಜಕೀಯದ ಕುರಿತೂ ಆಗಿರಬಹುದು-ಎಲ್ಲದಕ್ಕೂ ನಮ್ಮ ದೃಷ್ಟಿಯಲ್ಲಿ ಸಮಾನವಾದ ಮಹತ್ವವಿತ್ತು. ನಮ್ಮ ಶೈಕ್ಷಣಿಕ ಜೀವನದಲ್ಲಿ ಸಿಗುತ್ತಿದ್ದ ದೀರ್ಘಾವಧಿಯ ರಜೆಗಳಲ್ಲಿ ಪುಸ್ತಕಗಳ ಓದನ್ನು ಬಿಟ್ಟರೆ ಬೇರಾವ ಮನರಂಜನೆಗಳೂ ಆಗ ನಮ್ಮ ಪಾಲಿಗಿರಲಿಲ್ಲ. ಆದರೆ ಇಂದು ಹಿರಿಯರು-ಕಿರಿಯರು ಎಲ್ಲರೂ ಪುಸ್ತಕಗಳ ಸಖ್ಯವನ್ನು ಕಳೆದುಕೊಂಡು ಮಾಧ್ಯಮಗಳು ನೀಡುವ ವೈವಿಧ್ಯಮಯ-ಎಷ್ಟೋ ಬಾರಿ ತೀರಾ ಕಳಪೆ ದರ್ಜೆಯದ್ದೂ ಆಗಿರುವ ಮನೋರಂಜನೆಗಳ ರಭಸದ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತ, ಓದಿನ ಮಹತ್ವದ ಬಗ್ಗೆ ಅವರನ್ನುದ್ದೇಶಿಸಿ ಮಾತನಾಡುವ ಒಂದು ಪರಿಸ್ಥಿತಿಯನ್ನು ತಮ್ಮ ಸುತ್ತ ಸೃಷ್ಟಿಸಿಕೊಂಡಿರುವುದು ಶೋಚನೀಯ ಮಾತ್ರವಲ್ಲದೆ ವಿಪರ್ಯಾಸವೂ ಹೌದು.

ಸಾಮಾನ್ಯವಾಗಿ ಮತ್ತು ಸಾಮಾನ್ಯ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಓದು ಮತ್ತು ಪುಸ್ತಕಗಳ ಬಗ್ಗೆ ಹೇಳುವುದಾದರೆ ಅದು ಸಾಹಿತ್ಯದ ಓದು ಎಂದೇ ಅರ್ಥ. ಅಲ್ಲದೆ ಸಾಹಿತ್ಯವೆಂಬುದು ನಮ್ಮ ಬದುಕಿನ ಸಮಗ್ರವಾದ ಒಂದು ಮರುಸೃಷ್ಟಿ ಎಂಬ ನಂಬಿಕೆ ಬೆಳೆದು ಬಂದಿರುವುದರಿಂದ ಅದು ನಮ್ಮ ಅನುಭವದ ವಲಯದೊಳಗಿನ ಎಲ್ಲ ಜ್ಞಾನ ಶಿಸ್ತುಗಳನ್ನೂ ಪೂರ್ತಿಯಾಗಿ ಒಳಗೊಂಡಿರುವ ಒಂದು ಕ್ಷೇತ್ರವೂ ಹೌದು. ಹಾಗೆ ವಿಶಾಲದೃಷ್ಟಿಯಿಂದ ನೋಡಿದರೆ ವಿಜ್ಞಾನ, ತತ್ವಶಾಸ್ತ್ರ, ಆಧ್ಯಾತ್ಮಿಕ ವಿಚಾರಗಳು, ವಾಣಿಜ್ಯ-ವ್ಯವಹಾರ, ಸಾಮಾಜಿಕ, ರಾಜಕೀಯ, ಆರ್ಥಿಕ ವಿಚಾರಗಳಿಗೆ ಸಂಬಂಧಪಟ್ಟ ಯಾವುದೇ ಬರಹವಿರಲಿ, ಅದನ್ನು ಸಾಹಿತ್ಯವೆಂದೇ ಕರೆಯಬೇಕು. ಆದರೆ ಕಾವ್ಯ-ಕಥೆ ಮತ್ತು ಕಾದಂಬರಿಗಳು ಪ್ರತಿಯೊಬ್ಬ ಮನುಷ್ಯನ ಬದುಕಿಗೂ ನೇರವಾಗಿ ಸಂಬಂಧಪಟ್ಟದ್ದಾಗಿರುವುದರಿಂದ ಅವು ಯಾವುದೇ ಪರಿಣತಿ ಇಲ್ಲದವರಿಗೂ ಸುಲಭವಾಗಿ ಅರ್ಥವಾಗುವಂಥವು. ಆದ್ದರಿಂದಲೇ ಇಂಥ ಸಾಹಿತ್ಯದ ಓದು ನಮ್ಮ ಮೊದಲ ಆಯ್ಕೆಯಾಗಬೇಕಾಗುತ್ತದೆ. ಎಂಥ ಸಾಹಿತ್ಯವನ್ನು ಓದಬೇಕು ಮತ್ತು ಅಂಥ ಓದು ಇತರ ಮನೋರಂಜನಾ ಸಾಧನಗಳಿಗಿಂತ ಭಿನ್ನ ಮತ್ತು ಉತ್ತಮವೇಕೆ ಅನ್ನುವುದು ನಾವಿಲ್ಲಿ ಚಿಂತಿಸಬೇಕಾದ ಪ್ರಶ್ನೆ.

ಬದುಕಿನ ಸಮಗ್ರ ಚಿತ್ರಣವನ್ನು ಸಾಹಿತ್ಯವು ನೀಡುತ್ತದೆ ಎಂದು ಆಗಲೇ ಹೇಳಿದೆ. ನಾವು ನಮ್ಮ ಜೀವನದಲ್ಲಿ ಜಗತ್ತಿನ ಬಗ್ಗೆ ಮತ್ತು ಇತರರ ಬಗ್ಗೆ ತಿಳಿದುಕೊಂಡು ಬದುಕನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ನಮ್ಮ ಬದುಕು ಕಷ್ಟ-ಸುಖ, ನೋವು-ನಲಿವುಗಳ ಸಮ್ಮಿಶ್ರಣವೆಂಬುದು ಅನೇಕರಿಗೆ ಗೊತ್ತಿರುವುದೇ ಇಲ್ಲ.  ಒಂದು ಅಥವಾ ಎರಡು ಮಕ್ಕಳಿರುವ ಸಣ್ಣ ಕುಟುಂಬಗಳಲ್ಲಿ ಮಕ್ಕಳು ಹೆತ್ತವರ ಅತೀ ಮುದ್ದಿನಿಂದ  ಯಾವುದೇ ಕೊರತೆಗಳ ಅರಿವಿಲ್ಲದೆ ಬೆಳೆಯುತ್ತಾರೆ. ಸಮಾಜದಲ್ಲಿ ಇತರರ ಕಷ್ಟ ಸುಖಗಳ ಅರಿವು ಅವರಲ್ಲಿ ಉಂಟಾಗುವ ಅವಕಾಶಗಳೇ ಅವರಿಗೆ ಇರುವುದಿಲ್ಲ.ಆದ್ದರಿಂದಲೇ ಇಂದು ಎಷ್ಟೋ ಮಂದಿ ಯುವಕ-ಯುವತಿಯರು  ತಮ್ಮ ವಿದ್ಯಾರ್ಥಿ ಜೀವನ ಮುಗಿದು ವಾಸ್ತವ ಬದುಕನ್ನು ಪ್ರವೇಶಿಸಿ ಜವಾಬ್ದಾರಿ ಹೊತ್ತುಕೊಳ್ಳುವ ಸಮಯ ಬಂದಾಗ  ತೀರಾ ಅಸಹಾಯಕರಾಗುತ್ತಾರೆ, ಬದುಕಿನಲ್ಲಿ ಇದ್ದಕ್ಕಿಕ್ಕಿದ್ದಂತೆ ಕಷ್ಟಗಳು ಬಂದೆರಗಿದಾಗ ಅವರು ತೀರಾ ಕುಗ್ಗಿ ಹೋಗಿ ಬಿಟ್ಟು ಆತ್ಮಹತ್ಯೆಯ ಹಂತಕ್ಕೆ ಹೋಗಿ ಬಿಡುತ್ತಾರೆ. ಎಲ್ಲರ ಬದುಕಿನಲ್ಲೂ ಅಂತಹ ಸಂದರ್ಭಗಳು ಬರುತ್ತವೆ ಮತ್ತು ಅವುಗಳನ್ನು ಧೈರ್ಯದಿಂದ ಎದುರಿಸಿ ನಕ್ಕಾಗ ಸುಖದ ದಿನಗಳೂ ಬಂದೇ ಬರುತ್ತವೆ ಎಂಬ ಆತ್ಮವಿಶ್ವಾಸವನ್ನು ಮನಸ್ಸಿನಲ್ಲಿ ತುಂಬಿಕೊಳ್ಳುವುದು ಇತರರ ಬಗ್ಗೆ ತಿಳಿದುಕೊಂಡಾಗ ಮಾತ್ರ. ಇದು ಸಾಧ್ಯವಾಗುವುದು ಸಾಹಿತ್ಯದ ಓದಿನಿಂದ. ಸಾಹಿತ್ಯದ ಓದು ನಮ್ಮನ್ನು ಸದಾ ಜೀವಂತವಾಗಿಡುವ ಸಾಧನ.

ಸಾಂದರ್ಭಿಕ ಚಿತ್ರ

ಆದರೆ ಸಾಹಿತ್ಯಕ್ಷೇತ್ರದೊಳಗೆ ಸೃಷ್ಟಿಯಾಗುವ ಎಲ್ಲ ಕೃತಿಗಳೂ ಏಕಪ್ರಕಾರವಾಗಿ ಈ ಕೆಲಸ ಮಾಡುವುದಿಲ್ಲ. ಅನೇಕ ಕೃತಿಗಳು ಬದುಕಿನ ಮೇಲ್ಪದರದ ನೋಟವನ್ನು ಮಾತ್ರ ಚಿತ್ರಿಸುತ್ತವೆ. ಹೊರನೋಟಕ್ಕೆ ವಾಸ್ತವವೆಂಂದು ಕಾಣಿಸುವ ಇವು ಓದುಗನ ಮನಸ್ಸಿನ ಆಳಕ್ಕಿಳಿಯುವುದಿಲ್ಲ. ಆದರೆ ಕ್ಷಣಿಕ ಸುಖವನ್ನು ನೀಡುವ ಇಂಥ ಕೃತಿಗಳು ಓದುಗನನ್ನು ಯಾವುದೇ ರೀತಿಯ ಚಿಂತನೆಗೆ ಹಚ್ಚುವುದಿಲ್ಲವಾದ್ದರಿಂದ ಮತ್ತು ಅವುಗಳನ್ನು ಓದುವುದು ಮತ್ತು ಅರ್ಥಮಾಡಿಕೊಳ್ಳುವುದು ಸುಲಭವೆನ್ನಿಸುವುದರಿಂದ ಅವು ಜನಪ್ರಿಯವಾಗುತ್ತವೆ. ಸಾಹಿತ್ಯದ ಭ್ರಮೆಯನ್ನು ಹುಟ್ಟಿಸುವ ಇಂಥ ಓದು ಆರಂಭದ ಹಂತದಲ್ಲಿ ನಮ್ಮ ಸಾಹಿತ್ಯದ ನಿಜವಾದ ಓದಿಗೆ ಒಂದು ದಾರಿಯಾಗಬೇಕಷ್ಟೆ ಹೊರತು ಅಂತಿಮ ಗುರಿಯಾಗಬಾರದು. ಇಂಥ ಹಗುರ ಓದಿನಿಂದ ಬದುಕಿನ ಕಷ್ಟಸುಖಗಳ ಬಗ್ಗೆ, ನೋವು ನಲಿವುಗಳ ಬಗ್ಗೆ, ಸಿಹಿಕಹಿಗಳ ಬಗ್ಗೆ, ಮನುಷ್ಯ ಸ್ವಭಾವಗಳ ಬಗ್ಗೆ, ಮನುಷ್ಯ ಸಂಬಂಧಗಳ ಬಗ್ಗೆ, ಪ್ರಕೃತಿಯ ಸತ್ಯಗಳ ಬಗ್ಗೆ ವಾಸ್ತವ ಚಿತ್ರಣವನ್ನು ನೀಡುವ ಗಂಭೀರ ಧ್ವನಿಗಳುಳ್ಳ ಕೃತಿಗಳನ್ನು ಓದುವತ್ತ ನಾವು ಹೆಚ್ಚು ಗಮನ ಹರಿಸಬೇಕು. ಅಂಥ ಕೃತಿಗಳ ಓದು ನಮ್ಮನ್ನು ಗಂಭೀರವಾದ ಚಿಂತನೆಗೆ ಹಚ್ಚುತ್ತದೆ. ನಮ್ಮಲ್ಲಿ ಪುಂಖಾನುಪುಂಖವಾಗಿ ಪ್ರಶ್ನೆಗಳೇಳುವಂತೆ ಮಾಡುತ್ತದೆ. ಮತ್ತು ಹಲವು ದಿನಗಳ ಕಾಲ ನಮ್ಮನ್ನು ಕೂತಲ್ಲಿ-ನಿಂತಲ್ಲಿ ಕಾಡುತ್ತದೆ.

ಕಾರಂತರ ‘ಚೋಮನದುಡಿ’ ಯನ್ನು ಓದಿ ಮುಗಿಸಿದ ನಂತರ ಚೋಮನ ಸಂಸಾರದ ಬಡತನದ ಬವಣೆ, ಎಂದೂ ನನಸಾಗಲಾರದ ಒಂದು ತುಂಡು ಭೂಮಿಯನ್ನು ತನ್ನದಾಗಿಸುವ ಅವನ ಕನಸಿನ ಆರ್ತಭಾವ, ಬೆಳ್ಳಿಯ ಅಸಹಾಯಕತೆ, ದುಃಖ ತೀವ್ರವಾದಾಗ ಜೋರಾಗಿ ದುಡಿ ಬಾರಿಸುತ್ತ ಕುಣಿಯುವ ಚೋಮನ ಚಿತ್ರಗಳು ಎಷ್ಟು ಕಾಲವಾದರೂ ನಮ್ಮ ಮನಸ್ಸಿನಿಂದ ಮರೆಯಾಗುವುದಿಲ್ಲ. ಶೇಕ್ಸ್‍ಪಿಯರನ ದುರಂತ ನಾಟಕ ‘ಕಿಂಗ್‍ಲಿಯರ್’ನಲ್ಲಿ ಲಿಯರ್ ದೊರೆ ತನ್ನ ಸ್ವಂತ ಮಗಳಂದಿರಿಂದ ವಂಚಿಸಲ್ಪಟ್ಟು ಹುಚ್ಚನಾಗಿ ಅಲೆಯುವ ದೃಶ್ಯವು ನಮ್ಮ ಕಣ್ಣುಗಳಿಂದ ಅಶ್ರುಧಾರೆ ಸುರಿಯುವಂತೆ ಮಾಡಿ ನಮ್ಮ ಒಳಗಿನ ಎಲ್ಲ ಕೊಳೆಯನ್ನು ತೆಗೆದು ಶುದ್ಧೀಕರಿಸುತ್ತದೆ. ಟಿ. ಎಸ್. ಎಲಿಯಟ್‍ನ ‘ವೇಸ್ಟ್‍ಲ್ಯಾಂಡ್’ ಎಂಬ ಕವನವು ಆಧುನಿಕ ಬದುಕಿನ ದುರಂತವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿ ಭವಿಷ್ಯದ ಬಗ್ಗೆ ನಾವು ಗಂಭೀರವಾಗಿ ಚಿಂತಿಸುವಂತೆ ಮಾಡುತ್ತದೆ. ಒಂದು ಕೃತಿಯ ಗುಣಮಟ್ಟವನ್ನು ಒರೆಗಲ್ಲಿಗೆ ಹಚ್ಚುವುದು ಅದರ ಕಾಲಾತೀತತೆ. ಐವತ್ತು ವರ್ಷಗಳಾದರೂ ಒಂದು ಕೃತಿ ಜನಮಾನಸದಲ್ಲಿ ಉಳಿದು ಇನ್ನಷ್ಟು ಮಂದಿಯನ್ನು ಓದಲು ಪ್ರೇರೇಪಿಸುವಂತೆ ಮಾಡಿದರೆ ಅದುವೇ ಒಳ್ಳೆಯ ಕೃತಿ ಎಂದು ಇಂಗ್ಲಿಷಿನ ಪ್ರಸಿದ್ಧ ವಿಮರ್ಶಕ ಡಾ. ಜಾನ್ಸನ್ ಹೇಳುತ್ತಾನೆ. ಇಂತಹ ಕೃತಿಗಳ ಓದು ನಮ್ಮ ವಿಚಾರಗಳನ್ನು ಹೊಡೆದೆಬ್ಬಿಸುವುದು ಮಾತ್ರವಲ್ಲದೆ ಭಾವನೆಗಳನ್ನೂ ತೃಪ್ತಿಪಡಿಸಿ ನಮಗೆ ನಿತ್ಯ ಸಂತೋಷವನ್ನು ನೀಡಬಲ್ಲವು. ಆದ್ದರಿಂದಲೇ ಕವಿ ಡಿ. ವಿ. ಜಿ ಯವರು ಹೇಳುತ್ತಾರೆ-

ಚಿತ್ತದನುಭವ ಭಾವ ಸಂಭಾವನೆಗಳೆಲ್ಲ ಬತ್ತವದನು ವಿಚಾರಯುಕ್ತಿಗಳು ಕುಟ್ಟೆ ತತ್ವತಂಡುಲ ದೊರೆಗುಮದು ವಿವೇಚಿತ ತತ್ವ ನಿತ್ಯ ಭೋಜನ ನಮಗೆ-ಮಂಕುತಿಮ್ಮ

ಹೀಗೆ ನಮ್ಮೊಳಗಿನ ಪ್ರಚ್ಛನ್ನ ಶಕ್ತಿಯನ್ನು ಪುಸ್ತಕದ ಓದು ಅರಳಿಸುವುದರ ಜತೆಗೆ ಜ್ಞಾನವನ್ನೂ ಆನಂದವನ್ನೂ ನಮಗೆ ನೀಡುತ್ತದೆ. ಇದು ಬಹಳ ವಿಸ್ತಾರವೂ, ನೈಜವೂ, ಶಾಶ್ವತವೂ ಆದ ಅನುಭವ. ಇಂಥ ಶಕ್ತಿಯನ್ನು ಬೆಳೆಸಿಕೊಂಡ ವ್ಯಕ್ತಿ ಒಂದು ಉತ್ತಮ ಸಮಾಜದ ನಿರ್ಮಾಣದಲ್ಲಿ ತನ್ನ ಪಾತ್ರವೇನು ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾನೆ ಮತ್ತು ಆ ದಾರಿಯಲ್ಲಿ ಹೆಜ್ಜೆ ಹಾಕುತ್ತಾನೆ ಕೂಡಾ. ವಿಜ್ಞಾನವು ನೀಡುವ ಯಂತ್ರ ಸಾಧನಗಳಿಂದಾಗಲಿ,  ದೃಶ್ಯ ಮಾಧ್ಯಮಗಳು ನೀಡುವ ಮನರಂಜನೆಯಿಂದಾಗಲೀ ಈ ಪರಿಣಾಮ ಅಸಾಧ್ಯ.

ನಾವಿಂದು ವೇಗದ ಮತ್ತು ಅಭಿವೃದ್ಧಿಯ ಯುಗದಲ್ಲಿ ಮಾನವೀಯ ಮೌಲ್ಯಗಳನ್ನೇ ಮರೆಯುತ್ತ ದಾಪುಗಾಲಿಕ್ಕಿ ಧಾವಿಸುತ್ತಿದ್ದೇವೆ. ಹಿಂದಿನ ಕಾಲದಲ್ಲಿ ಪುಸ್ತಕಗಳ ಲಭ್ಯತೆ ಅಪರೂಪವಾಗಿತ್ತು. ಆದರೆ ಇಂದು ಪುಸ್ತಕ ಯೋಜನೆಗೆ ಪ್ರೋತ್ಸಾಹ ನೀಡಲೆಂದು ಸರಕಾರವು ಹಳ್ಳಿ ಹಳ್ಳಿಗಳಲ್ಲೂ ಗ್ರಂಥಾಲಯಗಳನ್ನು ತೆರೆದಿದೆ. ಪತ್ರಿಕೆ-ನಿಯತಕಾಲಿಗಳೂ ಬೇಕಾದಷ್ಟು ಇವೆ. ಪುಸ್ತಕಗಳನ್ನು ಬರೆದು ಮುದ್ರಿಸಿ ಪ್ರಕಟಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಹೆಸರು-ಕೀರ್ತಿಗಳ ಆಸೆಗೆ ಬಲಿಯಾಗಿ ಕಳಪೆ ಗುಣಮಟ್ಟದ ಕಥೆ-ಕಾದಂಬರಿ-ನಾಟಕಗಳನ್ನು ಬರೆದು ಪ್ರಕಟಿಸುವವರು ನಾಯಿಕೊಡೆಗಳಂತೆ ತಲೆಎತ್ತುತ್ತಿದ್ದಾರೆ. ಒಮ್ಮೆ ಒಂದು ಪ್ರಸಿದ್ಧ ಪುಸ್ತಕದಂಗಡಿಗೆ ಹೋದಾಗ ಅಂಗಡಿಯ ಮಾಲೀಕರು ಹೇಳಿದ ಮಾತೂ ಅದುವೇ. ‘ಈಗ ಪುಸ್ತಕ ಓದುವವರ ಸಂಖ್ಯೆಗಿಂತ ಬರೆಯುವವರ ಸಂಖ್ಯೆಯೇ ಹೆಚ್ಚಾಗಿದೆ’ ಅಂತ. ಇದು ಖುಷಿ ಪಡಬೇಕಾದ ವಿಚಾರ ಖಂಡಿತ ಅಲ್ಲ. ಯಾಕೆಂದರೆ ಆ ರೀತಿ ಬರೆದು ಪ್ರಕಟಿಸಿ ಪ್ರಚಾರ ಮಾಡಿಕೊಳ್ಳುವವರಿಗೆ ಬೇರೆಯವರು ಬರೆದದ್ದನ್ನು ಓದಿ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳುವ ವ್ಯವಧಾನವೇ ಇರುವುದಿಲ್ಲ. ಅಂಥವರು ಬಾವಿಯೊಳಗಿನ ಕಪ್ಪೆಯಂತೆ ತಮ್ಮ ಅರಿವಿನ ಪರಿಧಿಯೊಳಗೆ ಇರುವುದಷ್ಟೇ ಜಗತ್ತು ಎಂದು ಭಾವಿಸಿಕೊಂಡು ಕುಜ್ಜರಾಗಿಯೇ ಉಳಿಯುತ್ತಾರೆ.

ಟಾಲ್​ಸ್ಟಾಯ್ ಮತ್ತು ಟ್ಯಾಗೋರ್

ಸಾಮಾನ್ಯರ ದೃಷ್ಟಿಯಲ್ಲಿ ಓದು ಎಂದರೆ ಬರೇ ಸಾಹಿತ್ಯದ ಅಥವಾ ಕಥೆ-ಕಾದಂಬರಿಗಳ ಓದು ಎಂದು ಹೇಳಿದೆ. ಆದರೆ ಓದು ಸಾಹಿತ್ಯಕ್ಕೆ ಸೀಮಿತವಾಗಬೇಕಾಗಿಲ್ಲ. ಇಂದು ವಿಜ್ಞಾನ, ವಾಣಿಜ್ಯ, ವೈದ್ಯಕೀಯ, ಖಗೋಳಶಾಸ್ತ್ರ, ತತ್ವ ಶಾಸ್ತ್ರ- ಹೀಗೆ ನೂರಾರು, ಸಾವಿರಾರು ವಿಷಯಗಳಿಗೆ ಸಂಬಂಧಪಟ್ಟ ಪುಸ್ತಕಗಳು ಪ್ರಕಟವಾಗುತ್ತಲೇ ಇರುತ್ತವೆ. ನಾವು ಎಲ್ಲ ರೀತಿಯ ಪುಸ್ತಕಗಳನ್ನೂ ಓದುವ ಮೂಲಕ ನಮ್ಮ ಲೋಕಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ಇಂದು ನಾನು ಗಮನಿಸಿದಂತೆ ನಮ್ಮ ವಿದ್ಯಾರ್ಥಿಗಳಲ್ಲಿ ಒಂದು ಸಂಕುಚಿತ ವಲಯ ನಿರ್ಮಾಣವಾಗುತ್ತಿದೆ. ಕಲಾವಿಷಯವನ್ನು ತೆಗೆದುಕೊಂಡು ಕಲಿಯುವ ವಿದ್ಯಾರ್ಥಿಗಳು ವಿಜ್ಞಾನದ ಯಾವುದೇ ವಿಷಯವನ್ನು ತರಗತಿಯಲ್ಲಿ ಪ್ರಸ್ತಾಪಿಸಿದಾಗ ತಮಗೆ ಅದು ಸಂಬಂಧಪಟ್ಟದ್ದೇ ಅಲ್ಲವೆನ್ನುವಂತೆ ವರ್ತಿಸುತ್ತಾರೆ. ವಿಜ್ಞಾನ ಅಥವಾ ವಾಣಿಜ್ಯ ಶಾಸ್ತ್ರದ ವಿದ್ಯಾರ್ಥಿಗಳು ಟಾಲ್‍ಸ್ಟಾಯ್, ಟಾಗೋರ್, ಕಾರಂತ, ಕುವೆಂಪು ಮೊದಲಾದವರ ಕೃತಿಗಳನ್ನು ಓದಿ ಎಂದು ಸೂಚಿಸಿದರೆ ತಮಗೆ ಅದರಿಂದ ಏನು ಲಾಭವೆಂದು ಕೇಳುತ್ತಾರೆ. ಎಲ್ಲ ವಿದ್ಯಾರ್ಥಿಗಳಿಗೆ ನಾನು ಹೇಳುವ ಮಾತು ಒಂದೇ : ಯಾವುದೇ ವಿಷಯದ ಬಗ್ಗೆ ಒಂದು ಒಳ್ಳೆಯ ಪುಸ್ತಕ ಸಿಕ್ಕಾಗ ತಕ್ಷಣವೇ ಓದುವ ಹವ್ಯಾಸ ಬೆಳೆಸಿಕೊಂಡರೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ವಿರಾಮ ಕಾಲ ಸಿಕ್ಕಾಗಲೆಲ್ಲ ಹಾಳು ಹರಟೆಯಲ್ಲೋ, ಬೇಡದ ಯೋಚನೆಗಳಲ್ಲೋ ಸಮಯ ವ್ಯರ್ಥ ಮಾಡುವುದಕ್ಕೆ ಬದಲಾಗಿ ಕೈಯಲ್ಲೊಂದು ಪುಸ್ತಕ ಹಿಡಿದುಕೊಂಡರೆ ಅದರಿಂದ ಸಿಗುವ ಲಾಭ ಬೇರೊಂದಿಲ್ಲ. ಗಾಂಧಿ-ನೆಹರೂರವರಂಥ ಮಹಾನ್ ವ್ಯಕ್ತಿಗಳಿಗೆ ಸೆರೆಮನೆಯ ಸಂಕಷ್ಟದ ದಿನಗಳಲ್ಲಿ ಪುಸ್ತಕಗಳೇ ಸಂಗಾತಿಗಳಾಗಿದ್ದುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ನಮ್ಮ ಪ್ರಪಂಚದ ಬಗೆಗಿನ ಅನುಭವವನ್ನು ವಿಸ್ತೃತಗೊಳಿಸಬೇಕಾದರೆ ಇರುವ ದಾರಿಗಳೆಂದರೆ ಎರಡು-ಸ್ವತಃ ಪ್ರವಾಸ ಕೈಗೊಂಡು ಬೇರೆ ಬೇರೆ ರಾಜ್ಯಗಳನ್ನು, ದೇಶಗಳನ್ನು, ವಿಶೇಷ ಸ್ಥಳಗಳನ್ನು ಸಂದರ್ಶಿಸುವುದು. ಇಲ್ಲದೇ ಪುಸ್ತಕಗಳನ್ನು ಓದುವುದು. ಆದ್ದರಿಂದಲೇ ತಾನೇ ‘ದೇಶ ಸುತ್ತು, ಕೋಶ ಓದು’ ಎಂಬ ನಾಣ್ನುಡಿ ಬಳಕೆಗೆ ಬಂದಿದ್ದು?

ಆದರೆ ಪುಸ್ತಕಗಳನ್ನು ಬರೇ ಓದಿ ಕೆಳಗಿಡುವುದರಿಂದ ಏನೂ ಪ್ರಯೋಜನವಿಲ್ಲ. ಓದಿದ್ದನ್ನು ಚೆನ್ನಾಗಿ ಮನನ ಮಾಡಬೇಕು ಮತ್ತು ಆ ಕುರಿತು ವಿಚಾರ ಮಾಡಬೇಕು. ಅದಕ್ಕೆಂದೇ ಅಲ್ಲವೇ ಡಿ.ವಿ.ಜಿಯವರು ಹೇಳಿದ್ದು:

ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ ಶಾಸ್ತ್ರಿತನದಿಂದಲ್ಲ- ಮಂಕುತಿಮ್ಮ

ಹೀಗೆ ಪುಸ್ತಕದಲ್ಲಿರುವ ಮಾನವೀಯ ಮೌಲ್ಯಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವಂಥ ಪ್ರಜ್ಞಾವಂತ ಪ್ರಜೆಗಳು ನಾವಾಗಬೇಕು. ಆಗಲೇ ನಮ್ಮಲ್ಲಿ ಬೌದ್ಧಿಕವಾದ ವಿಕಾಸವಾಗಿ, ಹೃದಯದ ಶ್ರೀಮಂತಿಕೆ ಬೆಳೆದು, ನಾವು ಸಮಾಜದ ಉನ್ನತಿಗೆ ನಮ್ಮ ಕಿಂಚಿತ್ ಕೊಡುಗೆಯನ್ನು ನೀಡುವುದು ಸಾಧ್ಯ.

ಇಂದಿನ ಶಿಕ್ಷಣ ವ್ಯವಸ್ಥೆ ಇಂಥ ಪಠ್ಯೇತರ ಓದಿಗೆ ಪೂರಕವಾಗಿಲ್ಲ. ಎಲ್ಲ ಶಾಲೆಗಳೂ ಅಂಕಕೇಂದ್ರಿತ ಮತ್ತು ಫಲಿತಾಂಶ ಕೇಂದ್ರಿತವಾದ್ದರಿಂದ  ಮಕ್ಕಳು ಪಠ್ಯ ಪುಸ್ತಕಗಳನ್ನೇ ಉರು ಹೊಡೆಯಬೇಕು, ಹೆಚ್ಚು ಹೆಚ್ಚು ಹೋಂ ವರ್ಕ್​ ಮಾಡಬೇಕು ಎಂಬ ಉದ್ದೇಶದಿಂದ ಮಕ್ಕಳ ಮೇಲೆ ಒತ್ತಾಯದ ಓದನ್ನು ಹೇರುತ್ತಾರೆ. ಹೆತ್ತವರು ಸಹ ಅದನ್ನು ಬೆಂಬಲಿಸುತ್ತಾರೆ. ಇವರೆಲ್ಲರೂ  ಪಠ್ಯೇತರ ಓದಿನ ಮೂಲಕ ಆಗಬಹುದಾದ ಮಕ್ಕಳ ನಿಜವಾದ ವ್ಯಕ್ತಿತ್ವ ಬೆಳವಣಿಗೆಯ ಬಗ್ಗೆ ಆಲೋಚಿಸಬೇಕಾಗಿದೆ.

ಇನ್ನೊಂದು ವಿಚಾರ ಮಕ್ಕಳ ಭಾಷೆಗಳ ಕಲಿಯುವಿಕೆ. ಇಂದು ನಮ್ಮಂಥ ವಸಾಹತೀಕರಣಕ್ಕೆ ಒಳಗಾದ ದೇಶಗಳಲ್ಲಿ ಇಂಗ್ಲಿಷ್ ಭಾಷೆಯ ಬಗ್ಗೆ ವಿಪರೀತ ವ್ಯಾಮೋಹವಿದೆ. ತಮ್ಮ ಮಕ್ಕಳಿಗೆ ಇಂಗ್ಲಿಷ್ ಮಾತನಾಡಲು, ಓದಲು ಮತ್ತು ಬರೆಯಲು ಬಂದರೆ ಅವರು ಪ್ರಪಂಚವನ್ನೇ ಜಯಿಸಬಲ್ಲರು ಎಂಬ ಅತಿಯಾದ ಆತ್ಮವಿಶ್ವಾಸವಿದೆ. ಅಂಥವರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೆ ಕಳಿಸಿ ಅವರು ತಮ್ಮ ಮಾತೃಭಾಷೆಯ ಬಗ್ಗೆ ತಾತ್ಸಾರ ಬೆಳೆಸಿಕೊಂಡರೆ ಅವರ ಮನೋಭಾವವನ್ನು ಬದಲಾಯಿಸುವುದು ಬಿಟ್ಟು ಅವರ ತಪ್ಪನ್ನು ಬೆಂಬಲಿಸುತ್ತಾರೆ. ಶಾಲೆಯಲ್ಲಿ ಭಾಷಾ ವಿಷಯವು ಪಠ್ಯ ಕ್ರಮದ ಒಂದು ಭಾಗವಾಗಿದ್ದರೂ ಮಕ್ಕಳು-ಹೆತ್ತವರು ಮತ್ತು ಅಧ್ಯಾಪಕರು ಅದರ ಅಧ್ಯಯನಕ್ಕೆ ಮಹತ್ವ ಕೊಡುವುದಿಲ್ಲ. ಪದವಿ ಪಡೆದು ಒಳ್ಳೆಯ ಉದ್ಯೋಗ ಸಿಕ್ಕಿ ಕೈತುಂಬಾ ಹಣ ಸಂಪಾದಿಸಲು ಸಾಧ್ಯವಾಗುವುದು ವಿಜ್ಞಾನ ಅಥವಾ ವಾಣಿಜ್ಯ ವಿಷಯಗಳನ್ನು ಹೆಚ್ಚು ಗಮನ ಕೊಟ್ಟು ಕಲಿತರೆ ಮಾತ್ರ ಎಂಬ ತಪ್ಪು ಅಭಿಪ್ರಾಯವು ಅನೇಕರಲ್ಲಿ ಮನೆ ಮಾಡಿರುವುದೇ ಇದಕ್ಕೆ ಕಾರಣ. ಜಗತ್ತಿನ ಉದ್ದಗಲಗಳಲ್ಲಿ ವ್ಯವಹರಿಸಲು ಇಂಗ್ಲಿಷ್ ಸಾಕು ಎಂಬುದು ಅಂಥವರ ಅಭಿಪ್ರಾಯ. ಮಕ್ಕಳ ಮಾನಸಿಕ ಬೆಳವಣಿಗೆಯಲ್ಲಿ ವ್ಯಾವಹಾರಿಕ ಅರಿವಿನೊಂದಿಗೆ ಭಾವನಾತ್ಮಕತೆಯೂ ಮುಖ್ಯ ಅನ್ನುವುದನ್ನು ಅವರು ಅರ್ಥ ಮಾಡಿಕೊಳ್ಳುವುದಿಲ್ಲ.

ಸಾಹಿತ್ಯದ ಓದು ಮಕ್ಕಳನ್ನು ಬೌದ್ಧಿಕವಾಗಿ ಮತ್ತು ಭಾವನಾತ್ಮಕವಾಗಿ ಬೆಳೆಸುವುದರ ಮೂಲಕ ಅವರು ಮನುಷ್ಯ ಸಂಬಂಧಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಯಾಕೆಂದರೆ ಬದುಕು ನಿಂತಿರುವುದೇ ಮನುಷ್ಯರ ನಡುವಣ ಪರಸ್ಪರ ಪ್ರೀತಿಯ ಸಂಬಂಧಗಳ ಮೇಲೆ. ಸಾಹಿತ್ಯ ಕೃತಿಗಳು ನೀಡುವ ಇಂಥ ಸಂದೇಶಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದು ಅವರವರ ಮಾತೃಭಾಷೆಯಲ್ಲಿ ಮಾತ್ರ. ನಮ್ಮ ಅರಿವಿನ ಬೇರುಗಳಿರುವುದು ನಾವು ಮೊದಲು ಕಲಿತ ಭಾಷೆಯಾದ ಮಾತೃಭಾಷೆಯಲ್ಲಿ. ಅನಂತರ ಕಲಿತ ಭಾಷೆಯನ್ನು ಎಷ್ಟೇ ಕಷ್ಟಪಟ್ಟು ಬೆಳೆಸಿಕೊಂಡರೂ ಅದು ಮೂಲದಷ್ಟು ಗಟ್ಟಿಯಾಗಲಾರದು. ಮೊದಲ ಆದ್ಯತೆ ಮಾತೃಭಾಷೆಗೆ ಕೊಡುವುದು ಅತ್ಯುತ್ತಮ ನಿಲುವು ಎಂಬುದಾಗಿ ಭಾಷಾ ಶಾಸ್ತ್ರಜ್ಞ ನೋಮ್ ಚೋಮ್ ಸ್ಕಿಯೂ ಹೇಳುತ್ತಾರೆ. ಇದರ ಅರ್ಥ ಇಂಗ್ಲಿಷ್ ಬೇಡವೆಂದಲ್ಲ. ಹೆಚ್ಚಿನ ಪ್ರಾಪಂಚಿಕ ಜ್ಞಾನ ಸಿಗಬೇಕಾದರೆ ಇಂಗ್ಲಿಷ್ ಬೇಕು. ಆಳವಾದ ಜ್ಞಾನಕ್ಕೆ ಮಾತೃಭಾಷೆಯೂ ವಿಸ್ತಾರವಾದ ಅನುಭವಕ್ಕೆ ಇಂಗ್ಲಿಷೂ ಸಹಾಯಕವಾಗಬಲ್ಲುದು. ಒಟ್ಟಿನಲ್ಲಿ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಈ ನಿಟ್ಟಿನಲ್ಲಿ  ಭಾಷೆ ಮತ್ತು ಸಾಹಿತ್ಯಗಳ ಅಧ್ಯಯನಕ್ಕೆ ಹೆಚ್ಚು ಒತ್ತು ನೀಡುವುದರ  ಮೂಲಕ ಮಕ್ಕಳನ್ನು ಸಮಾಜದ ಸಂಸ್ಕಾರಯುತ ಪ್ರಜೆಗಳನ್ನಾಗಿಸಲು ಸಾಧ್ಯವಿದೆ.

*

ಪರಿಚಯ : ಕುಂದಾಪುರದಲ್ಲಿ ವಾಸವಾಗಿರುವ ಪಾರ್ವತಿ ಜಿ. ಐತಾಳ ಅವರು, ‘ದುರ್ಬೀಜ’, ‘ಮಂಜು’, ‘ಯುಗಾಂತ ಮತ್ತು ಇತರ ಕತೆಗಳು’, ‘ಬದುಕಲು ಮರೆತ ಸ್ತ್ರೀ’, ‘ಮಲಯಾಳದ ೧೦ ಕಥೆಗಾರ್ತಿಯರು’ ಮಲಯಾಳದಿಂದ ಕನ್ನಡಕ್ಕೆ ಹತ್ತು ಹಲವು ಕೃತಿಗಳನ್ನು ತಂದಿದ್ದಾರೆ. ಸ್ವತಂತ್ರ ಕೃತಿಗಳು, ‘ಹೊನ್ನ ಬೆಳಕೆ ಬಾ (ಕವನ ಸಂಕಲನ)’,  ‘ನಾನು ಗೃಹಲಕ್ಷ್ಮೀ’, ‘ನಾನೇನು ಮಾಡಲಿ’, ‘ಹೆಣ್ಣು ಮಗಳು‘, ‘ವನಮಾಲ ಕೀಲುಗೊಂಬೆ’, ‘ಮೂಕ ಹಕ್ಕಿ’.  

ಇದನ್ನೂ ಓದಿ : Shantinath Desai‘s Birthday : ಸಾಹಿತ್ಯಪ್ರಿಯರಿಗೆ ಇಂದೇ ‘ದೇಸಾಯಿ ಕಥನ’ ಉಡುಗೊರೆ

Published On - 5:25 pm, Tue, 12 January 21

ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!