ಓದು ಮಗು ಓದು: ಪುಸ್ತಕವನ್ನು ಹರಿದು ಹಾಳು ಮಾಡಲಿ ಬಿಡಿ ಅದಕ್ಕೇನು?

ಈಗಂತೂ ಮಕ್ಕಳ ಇಸ್ಕೂಲ್​ ಮನೇಲಲ್ವೇ? ಹಾಗಿದ್ದರೆ ಪಠ್ಯಪುಸ್ತಕ ಬಿಟ್ಟು ಬೇರೇನು ಓದುತ್ತಿವೆ ನಮ್ಮ ಮಕ್ಕಳು ಎನ್ನುವ ಕುತೂಹಲ ಟಿವಿ9 ಕನ್ನಡ ಡಿಜಿಟಲ್​ಗೆ ಉಂಟಾಯಿತು. ತಡಮಾಡದೆ ಒಂದಿಷ್ಟು ಮಕ್ಕಳಿಗೆ, ಈ ತನಕ ನಿಮಗೆ ಇಷ್ಟವಾದ ಐದು ಪುಸ್ತಕಗಳು ಮತ್ತವುಗಳ ಬಗ್ಗೆ ದೊಡ್ಡವರ ಸಹಾಯ ಪಡೆದುಕೊಂಡೇ ಬರೆದು ಕಳಿಸಿ ಎಂದು ಕೇಳಲಾಯಿತು. ಮೆಲ್ಲಮೆಲ್ಲಗೆ ‘ಕನ್ನಡ’ದಲ್ಲಿ ಬಂದು ನಮ್ಮನ್ನು ತಲುಪಿದ ಮೇಲ್​ಗಳಲ್ಲಿ ಕೆಲವೊಂದಿಷ್ಟನ್ನು ಆಯ್ಕೆ ಮಾಡಲಾಯಿತು. ನಿಮಗೂ ಕುತೂಹಲ ಶುರುವಾಗುತ್ತಿದೆಯೇ? ಹಾಗಿದ್ದರೆ ಇಂದಿನಿಂದ ಶುರುವಾಗುವ ಓದು ಮಗು ಓದು ಸರಣಿಯ ಜೊತೆ ಹೆಜ್ಜೆ ಹಾಕಿ.

ಓದು ಮಗು ಓದು: ಪುಸ್ತಕವನ್ನು ಹರಿದು ಹಾಳು ಮಾಡಲಿ ಬಿಡಿ ಅದಕ್ಕೇನು?
ಸಾಂದರ್ಭಿಕ ಚಿತ್ರ
Follow us
ಶ್ರೀದೇವಿ ಕಳಸದ
|

Updated on:Jan 11, 2021 | 6:34 PM

ಬೆಂಗಳೂರಿನ ಚೈಲ್ಡ್ ರೈಟ್ಸ್ ಟ್ರಸ್ಟಿನ ಕಾರ್ಯನಿರ್ವಾಹಕ ನಿರ್ದೇಶಕ ಎನ್.ವಿ. ವಾಸುದೇವ ಶರ್ಮಾ ಅವರ ಲೇಖನದೊಂದಿಗೆ ಈ ಸರಣಿ ಆರಂಭ.  ಇಷ್ಟೇ ಅಲ್ಲ, ಕೆಲ ಪ್ರಜ್ಞಾವಂತ ಪೋಷಕರ, ಲೇಖಕರ, ಶಿಕ್ಷಕರ ಮತ್ತು ಓದುಬರಹವನ್ನೇ ಬದುಕಿನ ಭಾಗವಾಗಿಸಿಕೊಂಡ ದೊಡ್ಡ ಮಕ್ಕಳ ಅನುಭವಾಧಾರಿತ ಕಥನಗಳು, ಲೇಖನಗಳೂ ಇಲ್ಲಿರಲಿವೆ. ಈ ಸರಣಿಯಲ್ಲಿ ನೀವೂ ನಿಮ್ಮ ಮಕ್ಕಳೊಂದಿಗೆ ಪಾಲ್ಗೊಳ್ಳಬಹುದು ಹಾಗೆಯೇ ಪ್ರತಿಕ್ರಿಯೆಗಳನ್ನೂ ಹಂಚಿಕೊಳ್ಳಬಹುದು. ಮೇಲ್  tv9kannadadigital@gmail.com

ನಮ್ಮ ಮನೆಯ ಅಕ್ಕಪಕ್ಕದ ಮನೆಗಳಲ್ಲಿ ಒಂದಷ್ಟು ಮಕ್ಕಳಿದ್ದಾರೆ. ಕೊರೋನಾ ಕಾಲದ ರಜೆಯಲ್ಲಿ ಅವರದು ಅದೆಷ್ಟೊಂದು ಆಟಗಳು, ಮಾತು, ನಗು, ಆಗಾಗ್ಗೆ ಹುಸಿಮುನಿಸಿನ ಜಗಳಗಳು, ಸಂಧಾನಗಳು… ಹೊಟ್ಟೆ ಕಿಚ್ಚಾಗುವಷ್ಟು.

ನಾವು ‘ಮನೆಯಿಂದ ಕೆಲಸ’ ಎನ್ನುವ ಹೊಸ ಪದ್ಧತಿಗೆ ಹೊಂದಿಕೊಂಡು ಸಾಕಷ್ಟು ಕಾಲ ಓದು, ಬರಹ, ವೆಬಿನಾರ್‌ಗಳಲ್ಲೇ ಇದ್ದೇವೆ. ಈ ಮಕ್ಕಳಲ್ಲಿ ಕೆಲವರಿಗೆ ಆನ್‌ಲೈನ್ ತರಗತಿಗಳು. ಮನೆಯಲ್ಲಿ ಮೊಬೈಲ್, ಟ್ಯಾಬ್, ಕಂಪ್ಯೂಟರ್ ಇರುವ ಮಕ್ಕಳಿಗೆ ಕೆಲವು ಗಂಟೆಗಳ ಸ್ಕ್ರೀನ್ ಟೈಮ್ ಉಳಿದವರಿಗೆ ಇಲ್ಲ. ಮತ್ತೆ ಎಲ್ಲರೂ ಆಟ, ಮಾತು, ಮಾತು ಆಟ.

ಒಂದಷ್ಟು ಕಾಲ ನನ್ನ ಲ್ಯಾಪ್‌ಟಾಪ್, ಮೊಬೈಲ್ ದೂರ ಇಟ್ಟು ಮಕ್ಕಳ ಆಟದ ಮಾತು ಕೇಳುವುದು ಮಜಾ ಕೊಟ್ಟಿದೆ. ಅವರು ಕಂಡದ್ದು, ಕೇಳಿದ್ದು, ಅನುಭವಿಸಿದ್ದು ಎಲ್ಲ ಬೆರೆಸಿ ಶಾಲೆಯ ವಯಸ್ಸಿನ ಮಕ್ಕಳ ಸಂಭಾಷಣೆಯಲ್ಲಿ ಸಾಕಷ್ಟು ಪದ ಸಂಪತ್ತು ಕೇಳಿದ್ದೇನೆ. ಕೆಲವು ಮಕ್ಕಳು ಆಗಾಗ್ಗೆ ತಾವು ನೋಡಿದ ಸಿನೆಮಾ ಕಥೆಗಳ ಪ್ರಸಂಗಗಳನ್ನು ಅಭಿನಯ, ಧ್ವನಿಯ ಏರಿಳಿತದೊಡನೆ ಹೇಳುವುದನ್ನು ಮನೆಯಲ್ಲೇ ಕುಳಿತು ಕೇಳಿ ನಾನು ದೃಶ್ಯಗಳನ್ನು ಕಲ್ಪಿಸಿಕೊಂಡಿದ್ದಿದೆ.

ಇಂತಹ ಮಕ್ಕಳ ಆಟಕ್ಕೆ ನನ್ನಿಂದಲೇ ಕಲ್ಲು ಬಿತ್ತು!

ಒಂದು ದಿನ ಮಕ್ಕಳೊಂದಿಗೆ ಮಾತಿಗಿಳಿದೆ. ಬರೀ ಸಿನೆಮಾ ಕಥೆಯನ್ನೇ ಹೇಳ್ತಿದ್ದೀರಲ್ಲ, ಬೇರೆ ಕಥೆಗಳು ಗೊತ್ತಿಲ್ವಾ? ಕೆಲವರು ಗೊತ್ತು ಎಂದರೆ ಬಹುತೇಕರು ಸುಮ್ಮನೆ ನೋಡುತ್ತಿದ್ದರು. ಕಥೆ ಪುಸ್ತಕ ಓದ್ತೀರಾ ಎಂಬ ಪ್ರಶ್ನೆಗೆ ಉತ್ತರ ಮೌನ. ಸ್ವಲ್ಪ ಹೊತ್ತಾದ ಮೇಲೆ ಒಬ್ಬೊಬ್ಬರೇ ಮೆಲ್ಲಗೆ, ನಮ್ಮ ಬಳಿ ಕಥೆ ಪುಸ್ತಕ ಇಲ್ಲ, ಎಲ್ಲಿ ಸಿಗ್ತಾವೆ? ಈ ತನಕ ನಾವು ನೋಡೇ ಇಲ್ಲ… ಮನೆಯಲ್ಲಿ ಪಠ್ಯಪುಸ್ತಕಗಳು ಮತ್ತು ಯಾವುದೋ ಕಾಲದ ಏನೋ ಒಂದೆರೆಡು ಪುಸ್ತಕ ಬಿಟ್ಟರೆ ಬೇರೆ ಪುಸ್ತಕಗಳಿಲ್ಲ. ಮನೆಗೆ ದಿನಪತ್ರಿಕೆ ತರಿಸುವುದಿಲ್ಲ. ಯಾವುದೇ ನಿಯತಕಾಲಿಕೆಗಳು ಬರುವುದಿಲ್ಲ. ಟೀವಿಯಲ್ಲಿ ಬರೋ ಕಾರ್ಯಕ್ರಮಗಳನ್ನ ನೋಡ್ತೀವಿ, ಮೊಬೈಲ್‌ನಲ್ಲಿ ಜೋಕ್ಸ್ ಬರುತ್ತೆ ನೋಡ್ತೀವಿ. ಹಾಡು ಕೇಳ್ತೀವಿ.

ಸ್ಕೂಲ್‌ನಲ್ಲಿ ನಿಮಗೆ ಗ್ರಂಥಾಲಯದಲ್ಲಿ ಕತೆ ಪುಸ್ತಕಗಳನ್ನ ಕೊಡ್ತಾರಲ್ಲ. ಓದಿಲ್ವಾ?

ಎಲ್ಲ ಮಕ್ಕಳು ನನ್ನನ್ನು ನಾನು ಏನೋ ಕೇಳಬಾರದನ್ನ ಕೇಳಿದೆನೇನೋ ಎಂಬಂತೆ ನೋಡಿದರು. ಅವರಲ್ಲಿ ಒಂದಿಬ್ಬರು ಸರ್ಕಾರಿ ಕನ್ನಡ ಶಾಲೆ ಮಕ್ಕಳು. ಉಳಿದವರು ಸರ್ಕಾರೇತರ ಇಂಗ್ಲಿಷ್ ಮಾಧ್ಯಮದ ಮಕ್ಕಳು. ‘ಇಲ್ಲ ಪುಸ್ತಕ ಕೊಡಲ್ಲ… ಏನದು… ಕೊಡ್ತಾರೆ, ಒಂದು ಪೀರಿಯಡ್ ಮಾತ್ರ’.

‘ನಾನು ಕತೆ ಪುಸ್ತಕ ಕೊಡ್ತೀನಿ. ಓದ್ತೀರಾ?’ ಉತ್ಸಾಹ ಕಾಣಿಸಿತು. ಪುಸ್ತಕ ಕೊಟ್ಟೆ. ಆದರೆ ಆಮೇಲೆ ಒಂದು ತಪ್ಪು ಮಾಡಿದೆ. ಓದಿದಿರಾ, ಅರ್ಥವಾಯಿತಾ ಎಂದು ಕೇಳಿಬಿಟ್ಟೆ!

***

ಭಾರತದ (ನಗರ, ಗ್ರಾಮೀಣ ಹಾಗೂ ಸರ್ಕಾರಿ ಮತ್ತು ಸರ್ಕಾರೇತರ ಶಾಲೆಗಳ) ಮಕ್ಕಳ ಓದುವಿಕೆ, ಓದಿದ್ದನ್ನು ಅರ್ಥಮಾಡಿಕೊಳ್ಳುವ ಸಾಧ್ಯತೆ, ಮೂಲ ಗಣಿತದ ಕಲಿಕೆಯ ಸಾಮರ್ಥ್ಯದ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಅಧ್ಯಯನವನ್ನು ಪ್ರಥಮ್ ಸಂಸ್ಥೆ ನಡೆಸಿ ಅಸರ್ (ASER – Annual Status of Education Report) ಎಂಬ ವರದಿಯನ್ನು ಹೊರಡಿಸುತ್ತದೆ. ಈ ಹಿಂದೆ ಬಿಡುಗಡೆಯಾದ ಅಧ್ಯಯನ ವರದಿಗಳ ಕೆಲವು ವಿಚಾರಗಳು ಶಾಲೆ, ಕಲಿಕೆ ಮತ್ತು ಕಲಿತದ್ದನ್ನು ಅಳವಡಿಸುವ ಮಕ್ಕಳ ಸಾಮರ್ಥ್ಯಗಳನ್ನು ಕುರಿತು ನಮ್ಮ ಅನೇಕ ಅನಿಸಿಕೆಗಳ ಬುಡವನ್ನೇ ಅಲುಗಾಡಿಸುತ್ತವೆ. ಈ ಅಧ್ಯಯನದಲ್ಲಿ ತೊಡಗಿಸಿದ ಐದನೇ ತರಗತಿಯ ಅರ್ಧದಷ್ಟು ಮಕ್ಕಳಿಗೆ ಎರಡನೇ ತರಗತಿಯ ಪಠ್ಯವನ್ನು ಓದಲು ಬಾರದು. ಅಂದರೆ, ಅವರು ಪಠ್ಯವನ್ನು ಓದಿದರೂ ಅದು ಏನು ಹೇಳುತ್ತದೆ ಎಂದು ವಿವರಿಸಲಾರರು.

ಇದರೊಂದಿಗೆ ಇನ್ನೂ ಅನೇಕ ಸಂಗತಿಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಇದು ಮಕ್ಕಳ ವಿಚಾರ ಮಾತ್ರವಲ್ಲ, ಅವರ ಶಿಕ್ಷಕ ವರ್ಗ, ಶಾಲಾ ವ್ಯವಸ್ಥೆ, ಸ್ಥಳೀಯ ಆಡಳಿತ, ಪೋಷಕರು ಮತ್ತು ಸುತ್ತಮುತ್ತಲ ಸಮುದಾಯಗಳ ಬಗ್ಗೆಯೂ ಏನೋ ಹೇಳುತ್ತಿದೆ ಎಂಬುದನ್ನು ಗಮನಿಸಬೇಕಾಗಿದೆ. ಮೊದಲನೆಯದಾಗಿ, ಓದುವ ಸಂಸ್ಕೃತಿಯನ್ನು ಪೋಷಿಸುತ್ತಾ ಬಂದಿರುವ ದಿನಪತ್ರಿಕೆಗಳು, ನಿಯತಕಾಲಿಕೆಗಳು (ವಾರ, ಪಕ್ಷ ಮತ್ತು ಮಾಸ ಪತ್ರಿಕೆಗಳು) ಎಲ್ಲ ಮಕ್ಕಳಿಗೆ ತಲುಪುತ್ತಿವೆಯೇ, ಸಿಕ್ಕರೂ ಆ ಮಕ್ಕಳು ಅವುಗಳನ್ನು ಓದುತ್ತಿದ್ದಾರೆಯೆ. ತಾವು ಓದಿದ್ದು ಅವರಿಗೆ ಅರ್ಥವಾಗುತ್ತಿದೆಯೇ ಎನ್ನುವ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಬೇಕಿದೆ. ನನ್ನ ಒಂದು ಅನುಭವ ಹೇಳಲೇಬೇಕು. ನಾವು ವಾಸ ಮಾಡುವ ಬಡಾವಣೆಯ ಮುಖ್ಯ ರಸ್ತೆಯಲ್ಲಿನ ಬೇಕರಿಯಲ್ಲಿ ಒಮ್ಮೊಮ್ಮೆ ನಾವು ಬ್ರೆಡ್ ತರಲು ಹೋಗುವುದಿದೆ. ಅಲ್ಲಿ ಕೆಲ ಸಂಜೆಗಳಲ್ಲಿನ ಒಂದು ಸಾಮಾನ್ಯ ದೃಶ್ಯ (ಇದನ್ನು ನಾನು ಯಾರನ್ನೂ ನೋಯಿಸಲು ಅಥವಾ ಹೀಗೆಳೆಯಲು ಹೇಳುತ್ತಿಲ್ಲ). ಕುಡಿದು ನಶೆ ಏರಿದ ಗಂಡಸರ ಜೊತೆಯಲ್ಲಿ ಅವರ ಮಕ್ಕಳು. ಮಕ್ಕಳು ಸಾಕು ಸಾಕು ಎಂದರೂ ಆ ತಂದೆಯರು ತಮ್ಮ ಮಕ್ಕಳಿಗೆ ಬ್ರೆಡ್, ಬನ್, ಕರಿದ ಕುರುಕುಗಳು, ಬಿಸ್ಕತ್, ಚಾಕೊಲೇಟ್, ಕೇಕ್ ಎಲ್ಲವನ್ನೂ ಬಹಳ ಕಕ್ಕುಲತೆಯಿಂದ ಅತೀವವಾದ ಪ್ರೀತಿ, ಒತ್ತಾಯದಿಂದ ಕೊಡಿಸುತ್ತಾರೆ. ಕೊಡಿಸುವ ಅವರ ಸುಖ, ಸಂತೋಷ ಮೆಚ್ಚಬಹುದು. ಅದರ ಒಟ್ಟು ಹಣ ಒಮ್ಮೊಮ್ಮೆ ಇನ್ನೂರು ಮುನ್ನೂರು ದಾಟುತ್ತದೆ. ಇದು ವಾರ ವಾರ ಅಥವಾ ವಾರದಲ್ಲಿ ಕೆಲವು ದಿನ ನಡೆದಿರುತ್ತದೆ ಎಂದು ಪರಿಚಯದ ಬೇಕರಿಯವರು ಹೇಳಿದ್ದರು. ಒಮ್ಮೆ ಇಂತಹ ಸಂದರ್ಭದಲ್ಲಿ ಬೇರಾವುದೋ ಮಾತಿನ ನಡುವೆ ನಾನು ತಡೆಯಲಾರದೆ ಕೇಳಿದ್ದೆ. ‘ಸಾರ್ ನಿಮ್ಮ ಮನೆಗೆ ನ್ಯೂಸ್‌ಪೇಪರ್ ತರಸ್ತೀರ?’ ಅವರುತ್ತರ ಉತ್ತರ, ‘ಇಲ್ಲ ಅದೆಲ್ಲಾ ನಮಗಾಗಲ್ಲ. ತುಂಬಾ ಖರ್ಚಾಗುತ್ತ ಅದಕ್ಕೆ! ಅಂತಹವೆಲ್ಲಾ ನೀವು ಮಾಡಬಹುದು.’

ಇದನ್ನು ಹೆಚ್ಚು ಬೆಳೆಸುವುದಿಲ್ಲ. ಬದಲಿಗೆ ನನ್ನ ತಿಳಿವಳಿಕೆಗೆ ಬಂದದ್ದು, ದಿನಪತ್ರಿಕೆ ಅಥವಾ ಆ ತರಹದ ಪತ್ರಿಕೆಗಳಿಗೆ ತುಂಬಾ ಬೆಲೆ ಎನ್ನುವ ತಪ್ಪು ಕಲ್ಪನೆಗಳು ಮಕ್ಕಳ ಓದುವಿಕೆಗೆ ಮತ್ತು ಓದಿದ್ದನ್ನು ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆಗಳಿಗೆ ಅಡ್ಡಿಯಾಗಿದೆ. ಎರಡನೆಯದಾಗಿ ಇದೇ ಕುಟುಂಬಗಳ ತಾಯಿ ತಂದೆಯರು ತಮ್ಮ ಮಕ್ಕಳು ಚೆನ್ನಾಗಿ ಕಲಿಯಬೇಕು ಎನ್ನುವ ಉದ್ದೇಶದಿಂದ ಶಾಲೆಗೆ ಸೇರಿಸುತ್ತಾರೆ. ಮಕ್ಕಳಿಗೆ ಬೇಕಾದ ಲೇಖನ ಸಾಮಗ್ರಿಗಳು, ಪಠ್ಯಪುಸ್ತಕ, ಇತ್ಯಾದಿ ಕೊಡಿಸುತ್ತಾರೆ. ಆದರೆ ಮಕ್ಕಳು ಓದಿದ್ದನ್ನು, ಬರೆದುದನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಬೆಳೆಸಿಕೊಂಡಿದ್ದಾರೋ ಇಲ್ಲವೋ ಎಂದು ತಿಳಿದುಕೊಳ್ಳುವುದು ಹೇಗೆ ಎಂಬುದು ತಿಳಿಯದವರಾಗಿದ್ದಾರೆ.

ನನಗಿಲ್ಲಿ ನೆನಪಾಗುವುದು ನನ್ನಪ್ಪನೊಡನೆ ನಾವು ಚಿಕ್ಕ ಮಕ್ಕಳು ರಸ್ತೆಯಲ್ಲಿ ನಡೆಯುವಾಗ ಅಂಗಡಿಗಳು, ವಾಹನಗಳು, ರಸ್ತೆಗಳಲ್ಲಿರುವ ವಿವಿಧ ರೀತಿಯ ಬೋರ್ಡ್​ಗಳು ಸಿನೆಮಾ ಜಾಹೀರಾತುಗಳನ್ನು ಅಪ್ಪ ಓದಿಸುತ್ತಿದ್ದುದು. ಒಮ್ಮೊಮ್ಮೆ ಸುಮ್ಮಸುಮ್ಮನೆ ತಪ್ಪು ತಪ್ಪಾಗಿ ತಾನೇ ಓದಿ ಏನದು ಎಂದು ಕೇಳುತ್ತಿದ್ದುದು. ಅದನ್ನು ನಾವು ಸರಿಯಾಗಿ ಓದಿ ಹೇಳಿದಾಗ ಎಲ್ಲರೂ ಜೊತೆಯಾಗಿ ನಗುವುದು. ಇದೊಂದು ಬಹಳ ಸರಳವಾದ ನಾವು ಕಲಿತದ್ದನ್ನು ಜಾರಿ ಮಾಡಲು, ಬಳಸಲು ಅದನ್ನು ಅರ್ಥ ಮಾಡಿಕೊಳ್ಳಲು ಇರುವ ವಿಧಾನ. ಇದನ್ನೇ ಮನೆಗೆ ತರುವ ಬೇರೆ ಬೇರೆ ವಸ್ತುಗಳು, ಪೊಟ್ಟಣಗಳ ಮೇಲಿನ ಹೆಸರುಗಳನ್ನು (ಕನ್ನಡವಿರಬಹುದು ಇಂಗ್ಲಿಷ್ ಇರಬಹುದು) ಓದಲೂ ಬಳಸಬಹುದು.

ಭಾರತದ ಯಾವುದಾದರೂ ಬೇರೆ ರಾಜ್ಯಗಳಲ್ಲಿ ಪ್ರವಾಸ/ಸಂಚಾರ ಹೋದಾಗ ಎಲ್ಲರಿಗೂ ಸಾಮಾನ್ಯವಾದ ಅನುಭವ – ಆಯಾ ರಾಜ್ಯ ಭಾಷೆಗಳಲ್ಲೇ ಎಲ್ಲೆಡೆ ಬೋರ್ಡ್‌ಗಳು! ಇದ್ದಕ್ಕಿದ್ದ ಹಾಗೆ ನಿಮಗೆ ಪರಿಚಯವಿರುವ ಭಾಷೆಯಲ್ಲಿ ಎಲ್ಲಾದರೂ ಬೋರ್ಡ್‌ ಕಾಣಿಸಿದೊಡನೆಯೇ ಓಹೋ ಅದೆಂತಹ ಆನಂದ. ನಮಗೆ ಪರಿಚಯವಿರುವ ಅಕ್ಷರಗಳು ಕಂಡ ಕೂಡಲೇ ಓದುವುದು ಅದನ್ನ ಅರ್ಥ ಮಾಡಿಕೊಳ್ಳುವುದು ಸ್ವಾಭಾವಿಕವೇ ಆಗಬೇಕು. ಇಂದಿನ ಅನೇಕ ಮಕ್ಕಳಲ್ಲಿ ಬಾಲ್ಯದಲ್ಲೇ ಅಂತಹ ಕೌಶಲ ಅಥವಾ ಅಂತಹ ಆಸಕ್ತಿ ಬೆಳೆಸಿಕೊಳ್ಳಲು ಪ್ರೋತ್ಸಾಹ ಕಡಿಮೆ ಎಂದೆನಿಸುತ್ತಿದೆ.

ಮಕ್ಕಳು ಬಹಳ ಸುಲಭವಾಗಿ ತಮ್ಮ ತರಗತಿಗಳಿಗೆ ನಿಗದಿಪಡಿಸಿರುವ (ಕನ್ನಡ ಅಥವಾ ಇಂಗ್ಲಿಷ್ ಮಾಧ್ಯಮದ)  ಪುಸ್ತಕಗಳನ್ನು ಓದುತ್ತಾರೆ ಎಂದು ಕೇಳಿರಬಹುದು. ಬಹುತೇಕರು ಸರಣಿಯಲ್ಲಿ ಬರುವ ಪ್ರಶ್ನೆಗಳಿಗೆ ಉತ್ತರ ಬರೆಯುತ್ತಾರೆ. ಪಠ್ಯದಲ್ಲಿರುವ ಪದ್ಯಗಳನ್ನು ಹೇಳುತ್ತಾರೆ. ಹಾಗೆಯೇ ನಿರ್ದಿಷ್ಟ ಲೆಕ್ಕಗಳನ್ನೂ ಮಾಡುತ್ತಾರೆ. ಇದು ಭಾಷೆ ಮತ್ತು ವಿಷಯಗಳಿಗೆ ಸಂಬಂಧಿಸಿದಂತೆ ವಾಸ್ತವ. ಪರೀಕ್ಷೆಗಳಲ್ಲಿ ಉತ್ತೀರ್ಣರಾಗುತ್ತಾರೆ ಕೂಡಾ. ಸಾಕಷ್ಟು ಪೋಷಕರು ಹೇಳುವುದು ‘ಇನ್ನೇನು ಬೇಕು. ಪಾಸಾದರಲ್ಲ. ಮುಂದಿನ ತರಗತಿಗೆ ಹೋದರಲ್ಲ? ಇನ್ನೇನು ತಕರಾರು? ಅವರಿಗೆ ಓದುವುದು ಅರ್ಥವಾಗುತ್ತದೋ ಇಲ್ಲವೋ ಎಂದು ನಿಮ್ಮದೇನು ಪ್ರಶ್ನೆ. ಬೆಳೆಯುತ್ತಾ ಹೋದಂತೆ ಅದು ಬರುತ್ತದೆ.’

ಆದರೆ ಅಸರ್ ವರದಿ ಹೇಳುವುದೇ ಬೇರೆ. ಸಾಕಷ್ಟು ಶಿಕ್ಷಕರಿಗೆ ಈ ವಾಸ್ತವ ಚೆನ್ನಾಗಿ ತಿಳಿದಿದೆ. ನನ್ನ ಪರಿಚಯದ ಹೈಸ್ಕೂಲ್/ಪ್ರೌಢಶಾಲೆಯ ಶಿಕ್ಷಕ ವರ್ಗದ ಗೆಳೆಯರು ಪ್ರತಿ ವರ್ಷ ಹೇಳುವ ಮಾತೊಂದಿದೆ. ಸಾಕಷ್ಟು ಮಕ್ಕಳಿಗೆ ನಾವು ಸುಮಾರು ಮೂರ‍್ನಾಲ್ಕು ತಿಂಗಳು ಬರೆಯುವುದು, ಓದುವುದು ಮತ್ತು ಸರಳ ಲೆಕ್ಕಾಚಾರ ಹೇಳಿಕೊಟ್ಟು ತಯಾರು ಮಾಡಿದ ಮೇಲೆಯೇ ಮುಂದಿನ ಪಾಠಗಳನ್ನು ಮಾಡಲು ಸಾಧ್ಯ. ಬರೀ ಪ್ರೌಢಶಾಲೆಯಷ್ಟೇ ಏಕೆ ಇದನ್ನು ಪದವಿ ಮತ್ತು ಸ್ನಾತಕೋತ್ತರ ಪದವಿ ಶಿಕ್ಷಕರಿಂದಲೂ ಕೇಳಿದ್ದೇನೆ!

ಇಷ್ಟೆಲ್ಲಾ ಮಾತೇಕೆ ಬಂದಿದೆ? ಮಕ್ಕಳಿಗೆ ತಾವು ಓದುವುದು ಅರ್ಥವಾಗದಿದ್ದರೆ, ಅವರು ಅದನ್ನು ತಮ್ಮ ಮಾತುಗಳಲ್ಲಿ ಮರು ನಿರ್ಮಾಣ ಮಾಡಲು ಸಾಧ್ಯವಾಗದಿದ್ದರೆ ಆ ಕಲಿಕೆ ಅವರದಾಗುವುದಿಲ್ಲ. ನನ್ನ ಬಾಲ್ಯದಲ್ಲಿ ಓದುವಿಕೆಗೆ ಮತ್ತು ಅದನ್ನು ಕುರಿತು ಮಾತನಾಡಲು ಅವುಗಳನ್ನು ಅಳವಡಿಸಲು ನೂರಾರು ಅವಕಾಶಗಳು ಇತ್ತು. ಆ ದಿನಗಳಲ್ಲಿ ಈಗಿನಂತೆ ಮೊಬೈಲು ಮತ್ತು ಅತಿಯಾದ ಟೀವಿ ಚಾನೆಲ್‌ಗಳು, ಅದರಲ್ಲಿನ ಕೂಗಾಟಗಳು ಇರಲಿಲ್ಲ. ಮನೆಗೆ ದಿನಪತ್ರಿಕೆಯಲ್ಲದೆ ವಾರ ಮತ್ತು ಮಾಸ ಪತ್ರಿಕೆಗಳು ಬರುತ್ತಿದ್ದವು. ಅವುಗಳನ್ನು ಓದಿ ಎನ್ನುವ ಪ್ರೋತ್ಸಾಹವೂ ಇತ್ತು. ಪ್ರಾಥಮಿಕ ಶಾಲಾ ವಯಸ್ಸಿನಲ್ಲಿ ನಮಗಿದ್ದ ದೊಡ್ಡ ಆಕರ್ಷಣೆ ಸುಧಾ ಮತ್ತು ಚಂದಮಾಮ ಪತ್ರಿಕೆಗಳು. ಗುರುವಾರದಂದು ಶಾಲೆಯಿಂದ ಹಿಂದುರುಗುತ್ತಲೇ ಸುಧಾ ಪತ್ರಿಕೆಯಲ್ಲಿ ಡಾಬೂ, ಶೂಜಾ, ಮಾಂಡ್ರೇಕ್, ಫ್ಯಾಂಟಂ ಹಿಡಿಯುತ್ತಿದ್ದೆವು. ಮಕ್ಕಳ ಕತೆಗಳು, ಕವನಗಳು, ತಿಂಗಳು ತಿಂಗಳು ಚಂದಮಾಮದಲ್ಲಿನ ಕುತೂಹಲಕರವಾದ ಕಥೆಗಳು ಜೊತೆಗೆ ಆಕರ್ಷಕವಾದ ಚಿತ್ರಗಳು. ವಾಸ್ತವವಾಗಿ ಈ ಓದುವಿಕೆಗೆ ಸಿಗುತ್ತಿದ್ದ ದೊಡ್ಡ ಒತ್ತಾಸೆ, ಪ್ರೋತ್ಸಾಹ ಅಪ್ಪ ಅಮ್ಮ ಅಲ್ಲದೆ ಮನೆಯಲ್ಲಿದ್ದ ದೊಡ್ಡವರೆಲ್ಲಾ ಸಮಯವಾದಾಗಲೆಲ್ಲಾ ಪತ್ರಿಕೆಗಳು ಮತ್ತು ಪುಸ್ತಕಗಳನ್ನು (ಕತೆ, ಕಾದಂಬರಿ) ಓದುತ್ತಿದ್ದರು.

ಅವರು ಓದುವುದನ್ನು ನೋಡುತ್ತಿದ್ದ ಮಕ್ಕಳೂ ಓದುತ್ತಿದ್ದರು. ಮೇಲಾಗಿ ಸಾರ್ವಜನಿಕ ಗ್ರಂಥಾಲಯವಲ್ಲದೆ, ಮನೆಗೆ ಹತ್ತಿರವಿದ್ದ ಸರ್ಕ್ಯುಲೇಟಿಂಗ್‌ ಲೈಬ್ರರಿಯಿಂದ ಪತ್ರಿಕೆಗಳು ಕೆಲವು ಪುಸ್ತಗಳನ್ನೂ ದಿನದ ಬಾಡಿಗೆ ಕೊಟ್ಟು ತರುತ್ತಿದ್ದರು. ಖಂಡಿತವಾಗಿಯೂ ಇದೊಂದು ಬೆಲೆಕಟ್ಟಲಾಗದ ದೊಡ್ಡ ಸಂಪತ್ತು ಮತ್ತು ಅವಕಾಶ. ಇಂತಹ ಅವಕಾಶಗಳಿದ್ದ ನನ್ನಂಥಹವರು ಮಾಧ್ಯಮಿಕ ಶಾಲೆಗೆ ಬರುವಷ್ಟರಲ್ಲೇ ತಕ್ಕಮಟ್ಟಿಗೆ ಕಾದಂಬರಿಗಳು, ಪತ್ತೇದಾರಿಗಳನ್ನು ಓದಿದ್ದೆವು. ದೊಡ್ಡ ದೊಡ್ಡ ಲೇಖಕರ ಅದೆಷ್ಟೋ ಕೃತಿಗಳನ್ನು ಓದಿಯಾಗಿತ್ತು (ಆಗ ಎಲ್ಲವೂ ಅರ್ಥವಾಗಿತ್ತೆ? ಗೊತ್ತಿಲ್ಲ. ಆದರೆ ಒಂದಷ್ಟು ತಿಳಿಯುತ್ತಿತ್ತು).

ಸಾಂದರ್ಭಿಕ ಚಿತ್ರ

ನಾಲ್ಕೈದು ದಶಕಗಳ ಹಿಂದಲ್ಲದೆ ಈಗಲೂ ಬಹುತೇಕ ಕುಟುಂಬಗಳಲ್ಲಿ ಈ ಒತ್ತಾಸೆಯಿಲ್ಲ. ಕಾರಣ ಬಹಳ ಸ್ಪಷ್ಟ. ಈ ಮಕ್ಕಳು ಓದಲು ಪುಸ್ತಕ ಹಿಡಿದ ಬರೆಯಲು ಪಾಟಿ ಹಿಡಿದ ಮೊದಲ ತಲೆಮಾರಿರಬಹುದು. ಅವರ ಪೋಷಕರಿಗೆ ಓದಲು ಬಾರದು ಅಥವಾ ಓದಲು ಬಂದರೂ ಅವರಿಗೆ ಸಮಯವಿಲ್ಲ ಅಥವಾ ಅವರಿಗೆ ಬೇಕಿಲ್ಲ. ಅವರ ಅವಶ್ಯಕತೆಗಳು ಬೇರೆಯೇ ಇರಬಹುದು. ಅವರಿಗೆ ಬಾಲ್ಯದಲ್ಲಿ ಮತ್ತು ನಂತರದಲ್ಲಿ ಓದಲು ಬರೆಯಲು ಕಲಿಯಲು ಅವಕಾಶಗಳು ಸಿಕ್ಕಿಲ್ಲದಿರಬಹುದು. ಸಮರ್ಪಕವಾಗಿ ಕಲಿಸಿಲ್ಲದಿರಬಹುದು. ಅವರನ್ನು ಹಿಡಿದು ಕೂರಿಸಿ ಓದಿ ಓದಿ ಎನ್ನುವುದು ಹೇಗೆ? ಪುಸ್ತಕಗಳಲ್ಲದಿದ್ದರೂ, ವಾರ್ತಾಪತ್ರಿಕೆ ತರಿಸಿಕೊಳ್ಳಲು, ಓದಲು ಸಾಧ್ಯವೆ ನಿಮ್ಮ ಮಕ್ಕಳ ಸಾಮರ್ಥ್ಯ ಹೆಚ್ಚಿಸಲು ಇಂತಹದರ ಪ್ರಾಮುಖ್ಯತೆಯಿದೆ ಎಂದು ಎಲ್ಲರಲ್ಲೂ ಅರಿವು ಮೂಡಿಸುವ ಆವಶ್ಯಕತೆಯಿದೆ.

ಮಕ್ಕಳಿಗೆ ಪಠ್ಯ ಪುಸ್ತಕಗಳಲ್ಲದೆ ಕಲ್ಪನೆಗಳನ್ನು ಸೃಜಿಸಲು ನೆರವಾಗಲು ಕತೆ, ಕವನ, ಕಾದಂಬರಿ, ಚಿತ್ರ ಶೀರ್ಷಿಕೆಗಳಿರುವ ಪುಸ್ತಕಗಳು ರಾಶಿರಾಶಿ ಬೇಕು. ನನ್ನ ಬಾಲ್ಯದಲ್ಲಿ ಇಂತಹದು ನಮಗೆ ವಿಪುಲವಾಗಿ ಸಿಕ್ಕಿತು. ಅಷ್ಟೇ ಅಲ್ಲ, ಓದಿದ್ದನ್ನು ಕುರಿತು ಮಾತನಾಡಲು ಅವಕಾಶಗಳೂ ಕೂಡ. ತಿಂಗಳಿಗೊಮ್ಮೆ ಬೆಂಗಳೂರಿನ ಮಲ್ಲೇಶ್ವರಂ ೮ನೇ ಕ್ರಾಸ್‌ನಲ್ಲಿರುವ ಗಾಂಧೀಭವನದಲ್ಲಿ ಹಿರಿಯ ಮಕ್ಕಳ ಸಾಹಿತಿ ಜಿ.ಪಿ.ರಾಜರತ್ನಂ ಅವರು ಮಕ್ಕಳನ್ನು ಸುತ್ತ ಕೂರಿಸಿಕೊಂಡು ಮಾತನಾಡುತ್ತಿದ್ದರು. ನಮ್ಮ ಪಠ್ಯ ಪುಸ್ತಕದಲ್ಲಿದ್ದ ಕವನಗಳ ಕರ್ತೃವನ್ನು ಎದುರುಬದರು ನೋಡುವುದು, ಅವರ ಮಾತು ಕೇಳುವುದು, ನಮಗೇ ಕತೆ ಹೇಳಿ ಎಂದಾಗ ಸಡಗರದಿಂದ ಎದ್ದುನಿಂತು ನಮ್ಮ ಚೂರುಪಾರು ಮಾತುಗಳಲ್ಲಿ ಕಥೆ ಸೃಷ್ಟಿಸಲು ಯತ್ನಿಸುತ್ತಿದ್ದುದನ್ನು ನೆನಪಿಸಿಕೊಂಡರೆ ನನಗೆ ಈಗಲೂ ರೋಮಾಂಚನವಾಗುತ್ತದೆ. ಆ ಸಭೆಗಳು ಅಲ್ಲಿಗೇ ನಿಲ್ಲುತ್ತಿರಲಿಲ್ಲ. ಜೊತೆಗೆ ಅದೆಷ್ಟೊಂದು ಚಿಕ್ಕಚಿಕ್ಕ ಕಥೆ ಕವನ ನಾಟಕಗಳ ಪುಸ್ತಕಗಳು ಓದಲು ಸಿಗುತ್ತಿದ್ದವು. ಈಗಲೂ ನಮ್ಮ ಮಕ್ಕಳಿಗೆ ಬೇಕಿರುವುದು ಓದಲು ಕಲ್ಪಿಸಿಕೊಳ್ಳಲು ಅವಕಾಶಗಳು. ಮಕ್ಕಳಿಗೆಂದೇ ಬರೆಯುವವರ ಸಂಖ್ಯೆ ಈಗ ಹೆಚ್ಚಿದೆ.  ಪ್ರಕಟವಾಗುವ ಪುಸ್ತಕಗಳ ಸಂಖ್ಯೆಯೂ ದೊಡ್ಡದಿದೆ. ಕನ್ನಡದ ವಿವಿಧ ಪ್ರಾಂತಗಳ ಭಾಷೆಗಳ ಸೊಗಡಿನೊಂದಿಗೆ ಮಕ್ಕಳಿಗೆಂದೇ ಸಾಹಿತ್ಯ ಕೃಷಿಯೂ ನಡೆದಿದೆ.

ಉದಾಹರಣೆಗೆ, ಸುಮಾರು ಮೂರು ದಶಕಗಳ ಹಿಂದೆ ಬೀದರ್ ಜಿಲ್ಲೆಗೆ ಬಂದು ಮಕ್ಕಳಿಗಾಗಿ ಗ್ರಂಥಾಲಯ ನಡೆಸುವ ಉಮೇದಿನಲ್ಲಿ ತೊಡಗಿದ ಗೆಳತಿ ಉಷಾ, ಅಲ್ಲಿನ ಭಾಷೆಯ ಸೊಗಸಿಗೆ ಮಾರು ಹೋಗಿದ್ದರು. ಕನ್ನಡ, ಉರ್ದು, ಪರ್ಷಿಯನ್, ತೆಲುಗು, ಮರಾಠಿ, ಹಿಂದಿ ಈ ಎಲ್ಲದರ ಹದಮುದ ಸಂಸರ್ಗದ ಭಾಷೆಯಲ್ಲಿ ಜನ ಮಾತನಾಡುತ್ತಾರೆ, ಆದರೆ ಶಾಲೆಯಲ್ಲಿ ಓದುವುದು ಮಾತ್ರ ಕನ್ನಡ. ಅದರಲ್ಲೂ ದಕ್ಷಿಣದ ಮೈಸೂರು/ಬೆಂಗಳೂರು ಕನ್ನಡ! ಎಷ್ಟೋ ಮಕ್ಕಳಿಗೆ ಮನೆಯಲ್ಲಿ ಮತ್ತು ಹೊರಗಡೆ ಆಡುವ ಭಾಷೆಗೂ ಶಾಲೆಯ ಪುಸ್ತಕಗಳ ಭಾಷೆಗೂ ತಾಳಮೇಳವಿಲ್ಲ ಎಂದು ಒದ್ದಾಟವಾಗುವುದನ್ನು ಕಂಡರು. ಬೀದರಿ ಭಾಷೆಯಲ್ಲೇ ಏಕೆ ಸಾಹಿತ್ಯವಿಲ್ಲ, ಅದರಲ್ಲೂ ಮಕ್ಕಳಿಗೇಕೆ ಪುಸ್ತಕಗಳಿಲ್ಲ ಎಂದು ಅಲ್ಲಿನ ಆಡು ಭಾಷೆಯಲ್ಲಿ ಕೈಬರಹದ ಪುಟ್ಟಪುಟ್ಟ ಪುಸ್ತಕಗಳನ್ನು ತಾವೇ ಬರೆದರು ಮತ್ತು ಮಕ್ಕಳಿಂದ ಬರೆಸಿದರು. ತಮಗರ್ಥವಾಗುವ ಭಾಷೆಯ ಪುಸ್ತಕಗಳು ಮಕ್ಕಳನ್ನು ಸಾಕಷ್ಟು ಆಕರ್ಷಿಸಿದವು.

ನಗರಗಳಲ್ಲಿರುವ ಕೆಲವು ಶಾಲೆಗಳಲ್ಲಿ ಮತ್ತು ಕೊಂಚಮಟ್ಟಿಗೆ ಸುಶಿಕ್ಷಿತ ಕುಟುಂಬಗಳಲ್ಲಿ ಪುಸ್ತಕ ಸಂಸ್ಕೃತಿ ಮತ್ತು ಓದುವ ಸಾಧ್ಯತೆಗಳಿರಬಹುದು. ಗ್ರಾಮೀಣ ಪ್ರದೇಶಗಳಲ್ಲಿ ಶಾಲಾ ಗ್ರಂಥಾಲಯಗಳು ಇವೆ. ಆದರೆ ಗ್ರಂಥಾಲಯಗಳ ಪುಸ್ತಕಗಳು ಮಕ್ಕಳ ಕೈಗೆ ಸಿಗುತ್ತಿವೆಯೆ, ಮಕ್ಕಳು ಅವುಗಳನ್ನು ಓದುತ್ತಿದ್ದಾರೆಯೆ, ವರ್ಷದಲ್ಲಿ ಮಕ್ಕಳು ಎಷ್ಟು ಪುಸ್ತಕಗಳನ್ನು ಓದಿದರು, ಅವರ ಓದುವಿಕೆ ಹಂತಹಂತವಾಗಿ ಮೇಲೇರುತ್ತಿದೆ ಎಂಬುದನ್ನು ಪರಿಶೀಲಿಸುತ್ತಿದ್ದಾರೆಯೆ ಎಂಬುದು ಸ್ಪಷ್ಟವಿಲ್ಲ.

ಹಿಪ್ಪೋಕ್ಯಾಂಪಸ್‌ನವರು ಗ್ರೋ ಬೈ ರೀಡಿಂಗ್ (GROW BY Reading) ಎನ್ನುವ ವಿಧಾನದಲ್ಲಿ ಹಾಗೂ ‘ಪ್ರಥಮ್ ಬುಕ್ಸ್‌’ನವರು ಸೂಚಿಸುವ ಹಂತಗಳ/ವರ್ಗಗಳ ಮೂಲಕ ಮಕ್ಕಳು ಓದಲು ಮತ್ತು ಓದಿನಲ್ಲಿ ಮೇಲೆ ಮೇಲೆ ಏರಲು ನೆರವಾಗುವಂತಹ ಪದ್ಧತಿಗಳನ್ನು ಆವಿಷ್ಕರಿಸಿದ್ದಾರೆ. ತುಲಿಕಾ ಮತ್ತು ನ್ಯಾಷನಲ್ ಬುಕ್ ಟ್ರಸ್ಟ್ (ಎನ್.ಬಿ.ಟಿ) ಮತ್ತಿತರರು ಮಕ್ಕಳಿಗಾಗಿ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಉತ್ತಮವಾದ ಚಿತ್ರಗಳು, ಕತೆಗಳು, ಕಾಗದ ಬಳಸಿ ಮಕ್ಕಳನ್ನು ಸೆಳೆಯಲೆಂದೇ ಓದಲು ಪ್ರೋತ್ಸಾಹಿಸಲೆಂದೇ ವಿಧವಿಧವಾದ ವಿಚಾರಗಳನ್ನು ಕುರಿತು ಪುಸ್ತಕಗಳು ಹೊರಬಂದಿವೆ. ವಾಸ್ತವವಾಗಿ ಈ ಕ್ಷೇತ್ರ ಇನ್ನೂ ಅಭಿವೃದ್ಧಿಯಾಗಬೇಕಿದೆ. ಈಗಲೂ ಅನೇಕ ಕತೆಗಳು, ಕಥಾವಸ್ತುಗಳು ಇಂಗ್ಲಿಷ್‌ನಿಂದ ಅನುವಾದವಾದುವೇ ಆಗಿದ್ದು, ಈ ನಾಡಿನ ಸೊಗಡಿನ ಕತೆ ಮತ್ತು ಭಾಷೆಯಲ್ಲಿ ರಚನೆಗಳಾಗಬೇಕಿದೆ.

ಆದರೆ ಮಕ್ಕಳ ಪುಸ್ತಕಗಳೆಂದರೆ, ಯಾವುದೇ ಸಂಶೋಧನೆ, ಪ್ರಯೋಗ ಮಾಡದೆ, ಯಾವ ವಯಸ್ಸಿನವರಿಗೆ, ಹಿನ್ನೆಲೆಯವರಿಗೆ ಎಂದು ಸೂಚಿಸದೆ ಕೇವಲ ದಪ್ಪ ದಪ್ಪ ಅಕ್ಷರಗಳಲ್ಲಿ ಏನೋ ಒಂದು ಬರೆದು ಮುದ್ರಿಸಿ ಸರ್ಕಾರದ ಗ್ರಂಥಾಲಯಗಳಿಗೆ ದಾಟಿಸಿ ಬಿಡುವುದೇ ಹೆಚ್ಚು. ಇದರತ್ತ ಕರ್ನಾಟಕ ರಾಜ್ಯ ಮಕ್ಕಳ ಅಕ್ಯಾಡೆಮಿ, ಮಕ್ಕಳ ಸಾಹಿತ್ಯ ಚಿಂತಕರು ಮತ್ತು ಒಕ್ಕೂಟಗಳು ಗಮನ ಕೊಡಬೇಕಿದೆ. ಮಕ್ಕಳಲ್ಲಿ ಓದುವ ಸಂಸ್ಕೃತಿ ಬೆಳೆಸುವ, ಬಳಸುವ ಸಾಧ್ಯತೆ ಹೆಚ್ಚಿಸುವ ಪ್ರೋತ್ಸಾಹಿಸುವ ವಿಧಾನಗಳನ್ನು ಕುರಿತು ತರಬೇತಿ, ಪ್ರಚಾರ ಮಾಡಬೇಕಿದೆ. ಗುಣಮಟ್ಟದ ಮಕ್ಕಳ ಪುಸ್ತಕಗಳನ್ನು ಪ್ರಕಟಿಸಲು ಸರ್ಕಾರ ಅನುದಾನ/ನೆರವು ನೀಡಬೇಕು. ಬಹಳ ಮುಖ್ಯವಾಗಿ ಪುಸ್ತಕಗಳು ಗ್ರಂಥಾಲಯಗಳ ಗೂಡಿನಲ್ಲಿ, ಪೆಟ್ಟಿಗೆಯಲ್ಲಿ ಅಡಗಿಸಿಡುವ ಬದಲು ಮಕ್ಕಳ ಕೈಗೆ ಕಣ್ಣಿಗೆ ಮನಸ್ಸಿಗೆ ಸಿಗಬೇಕು.

ಮಕ್ಕಳಿಗೆ ಓದಿ ಓದಿ ಎಂದು ಒತ್ತಡ ಹಾಕುವುದಕ್ಕಿಂತ ಓದಲು ಮತ್ತು ಓದಿದ್ದನ್ನು ಆನಂದಿಸಲು, ಬಳಸಲು ಪ್ರೋತ್ಸಾಹಿಸುವ ವಾತಾವರಣವನ್ನು ಮಕ್ಕಳ ಸುತ್ತಮುತ್ತ ಬೆಳೆಸಬೇಕಿದೆ. ಮಕ್ಕಳಿಗಾಗಿ ಗ್ರಂಥಾಲಯ ಎಂದು ಎಲ್ಲಿಯೋ ಮೂಲೆಯಲ್ಲಿ ಇಡುವುದರ ಬದಲು ಪ್ರತಿ ಬಡಾವಣೆಯಲ್ಲಿ ಮಕ್ಕಳ ಸಮಯಕ್ಕೆ ಸೂಕ್ತವಾಗಿ (ಎಲ್ಲ ತರಹದ ಸಾರ್ವಜನಿಕ ರಜೆಗಳಲ್ಲೂ) ತೆರೆದಿರುವಂತೆ ಅಲ್ಲಿ ಓದು, ಬರಹದ ಸುತ್ತ ಚಟುವಟಿಕೆಗಳನ್ನು ನಡೆಸುವ ಚಿಂತನೆಗಳಾಗಬೇಕು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ೨೦೨೦ರ ನವೆಂಬರ್‌ನಲ್ಲಿ ಈ ದಿಶೆಯಲ್ಲಿ ಒಂದು ಪ್ರಯತ್ನ ಆರಂಭಿಸಿದೆ. ಮಕ್ಕಳ ಹಕ್ಕುಗಳ ಗ್ರಾಮಸಭೆಗಳನ್ನು ನಡೆಸುವುದರ ಜೊತೆಜೊತೆಗೆ ‘ಓದುವ ಬೆಳಕು’ ಎನ್ನುವ ಮಕ್ಕಳ ಪುಸ್ತಕಗಳನ್ನು ಗ್ರಂಥಾಲಯಗಳಿಗೆ ಕೊಡಿಸುವ ಮತ್ತು ಅವುಗಳನ್ನು ಮಕ್ಕಳಿಗೆ ತಲುಪಿಸುವ ಯೋಜನೆಯನ್ನು ಆರಂಭಿಸಿದೆ.

ಎನ್​ ವಿ ವಾಸುದೇವ ಶರ್ಮಾ, ಚೈಲ್ಡ್​ ರೈಟ್ಸ್​ ಟ್ರಸ್ಟ್​, ಬೆಂಗಳೂರು

ಪುಸ್ತಕಗಳನ್ನು ಮಕ್ಕಳಿಗೆ ಕೊಟ್ಟರೆ ಹರಿಯುತ್ತಾರೆ, ಹಾಳು ಮಾಡುತ್ತಾರೆ, ಕಳೆದುಬಿಡುತ್ತಾರೆ ಎನ್ನುವ ಭಯ ಬಿಟ್ಟು ಕುಟುಂಬಗಳಲ್ಲಿ, ಶಾಲೆ, ಹಾಸ್ಟೆಲ್‌ಗಳಲ್ಲಿ, ಗ್ರಂಥಾಲಯಗಳಲ್ಲಿ ಮಕ್ಕಳಲ್ಲಿ ಓದುವ ಆಸಕ್ತಿ ಮೂಡಿಸಬೇಕು. ಅದಕ್ಕಾಗಿ ಮಕ್ಕಳಿದ್ದಾಗ ದೊಡ್ಡವರು ತಮ್ಮ ಬಿಡುವಿನಲ್ಲಿ ಟಿವಿ ಆರಿಸಿ, ಮೊಬೈಲ್ ಪಕ್ಕಕ್ಕಿರಿಸಿ ಪತ್ರಿಕೆ, ಪುಸ್ತಕಗಳನ್ನು ಕೈಗೆತ್ತಿಕೊಂಡು ‘ಓದಬೇಕು–ಓದಿಸಬೇಕು’. ಮಕ್ಕಳು ಕತೆ ಕವನ ನಾಟಕದ ಪುಸ್ತಕಗಳನ್ನು ಓದುವಾಗ ಸಮಯ ದಂಡವೆಂದೋ, ಮಕ್ಕಳು ಕೆಟ್ಟುಹೋಗುತ್ತಿದ್ದಾರೆ ಎನ್ನುವ ಆತಂಕವನ್ನು ತೋರದೆ ಪ್ರೋತ್ಸಾಹಿಸಬೇಕು. ಮಕ್ಕಳಲ್ಲಿ ಪದಸಂಪತ್ತಿದೆ. ಅದು ಇನ್ನೂ ಹೆಚ್ಚಬೇಕು. ಅಂತಹ ಪದಗಳನ್ನು ಗುಣಾತ್ಮಕವಾಗಿ ಸಮರ್ಥವಾಗಿ ಬಳಸುವ ಸಾಮರ್ಥ್ಯ ಹೆಚ್ಚಿಸಲು ಮತ್ತು ಹೊಸ ಹೊಸ ಸನ್ನಿವೇಶಗಳು ಕಲ್ಪನೆಗಳನ್ನು ಸೃಷ್ಟಿಸಲು, ಅವನ್ನು ಅರ್ಥಬದ್ಧವಾಗಿ ಸಂವಹನದಲ್ಲಿ ಬಳಸಲು ಮಕ್ಕಳು ಓದಬೇಕು.

ವರ್ಷಾಂತ್ಯ ವಿಶೇಷ 2020: ‘ಓದಿನಂಗಳ‘ದಲ್ಲಿ ಡಾ. ಕೆ.ಎಸ್. ಪವಿತ್ರಾ

Published On - 5:36 pm, Mon, 11 January 21

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ