AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೆಸಿಪಿ | ಸಂಕ್ರಾಂತಿ ಸಂಭ್ರಮಕ್ಕೆ ಪೊಂಗಲ್ ಮೆರುಗು

ಒಂದೊಂದು ಹಬ್ಬಕ್ಕೆ ಒಂದೊಂದು ತಿಂಡಿ ಫೇಮಸ್. ಅದರಂತೆ ಮಕರ ಸಂಕ್ರಾಂತಿ ಬಂದಾಗ ನೆನಪಾಗುವುದು ಪೊಂಗಲ್. ಸಿಹಿ-ಖಾರ ಪೊಂಗಲ್​ ತಯಾರಿಸುವ ಹಲವು ವಿಧಗಳ ಮಾಹಿತಿ ಇಲ್ಲಿದೆ. ಹಬ್ಬದ ದಿನ ಪೊಂಗಲ್ ಸವಿಯಲು ಮರೆಯದಿರಿ.

ರೆಸಿಪಿ | ಸಂಕ್ರಾಂತಿ ಸಂಭ್ರಮಕ್ಕೆ ಪೊಂಗಲ್ ಮೆರುಗು
ಖಾರ ಪೊಂಗಲ್
sandhya thejappa
| Updated By: ರಶ್ಮಿ ಕಲ್ಲಕಟ್ಟ|

Updated on:Jan 13, 2021 | 11:20 AM

Share

ಒಂದೊಂದು ಹಬ್ಬಕ್ಕೆ ಒಂದೊಂದು ತಿಂಡಿ ಫೇಮಸ್. ಅದರಂತೆ ಮಕರ ಸಂಕ್ರಾಂತಿ ಬಂದಾಗ ನೆನಪಾಗುವುದು ಪೊಂಗಲ್. ಹಬ್ಬದ ಮೆರುಗು ಹೆಚ್ಚಿಸುವ ಈ ಪೊಂಗಲ್​ ಅನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಪೊಂಗಲ್​ನಲ್ಲೂ ಎರಡು ಮುಖ್ಯ ವಿಧಗಳಿವೆ. ಒಂದು ಸಿಹಿ ಪೊಂಗಲ್. ಇನ್ನೊಂದು ಖಾರ ಪೊಂಗಲ್. ಕೆಲವರಿಗೆ ಖಾರ ಪೊಂಗಲ್ ಎಂದರೆ ಪಂಚಪ್ರಾಣ. ಇನ್ನು ಕೆಲವರಿಗೆ ಸಿಹಿ ಪೊಂಗಲ್ ಎಂದರೆ ಹೆಚ್ಚು ಪ್ರಿಯ.

ಆಗಾಗ ಪೊಂಗಲ್ ತಿನ್ನಬೇಕು ಅಂತಾ ಆಸೆ ಆಗುತ್ತೆ. ಆದರೆ ಮಾಡುವ ವಿಧಾನ ಗೊತ್ತಿರಲ್ಲ. ಸ್ವಲ್ಪ ಹದ ತಪ್ಪಿದರೆ ಪೊಂಗಲ್ ರುಚಿ ಕೆಟ್ಟು ಹೋಗುತ್ತೆ ಅಂತ ಯೋಚಿಸುವವರೇ ಜಾಸ್ತಿ. ಆದರೆ ಈಗ ಈ ಚಿಂತೆಯನ್ನು ದೂರ ಮಾಡಿಕೊಳ್ಳಿ. ಸುಲಭವಾಗಿ, ಕಡಿಮೆ ಸಮಯದಲ್ಲಿ ಕೆಲವು ವಿಧದ ಪೊಂಗಲ್ ಮಾಡಬಹುದು. ಅದರ ವಿವರ ಇಲ್ಲಿದೆ.

ಗೋಧಿ ನುಚ್ಚಿನ ಖಾರ ಪೊಂಗಲ್ ಗೋಧಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸಕ್ಕರೆ ಕಾಯಿಲೆ ಇರುವವರಿಗೆ ಮತ್ತು ಡಯಟ್ ಮಾಡುವವರಿಗೆ ವೈದ್ಯರು ಮೊದಲು ನೀಡುವ ಸಲಹೆ ಗೋಧಿಯಿಂದ ಮಾಡುವ ತಿಂಡಿಗಳನ್ನು. ಕಾರಣ ಗೋಧಿಯಲ್ಲಿ ನಾರಿನ ಅಂಶ ಹೆಚ್ಚಾಗಿದ್ದು, ಬೇಗ ಜೀರ್ಣವಾಗುತ್ತದೆ. ಗೋಧಿಯಿಂದ ಮಾಡುವ ಪೊಂಗಲ್ ಕೂಡಾ ಒಳ್ಳೆಯ ಆಹಾರ.

ಅರ್ಧ ಕಪ್ ಗೋಧಿ ನುಚ್ಚು ಹಾಗೂ ಅರ್ಧ ಕಪ್ ಹೆಸರು ಬೇಳೆಯನ್ನು ಚೆನ್ನಾಗಿ ತೊಳೆದು ಅದಕ್ಕೆ 2 ಕಪ್ ನೀರು ಹಾಕಿ ಒಂದು ಪಾತ್ರೆಯಲ್ಲಿ ಚೆನ್ನಾಗಿ ಬೇಯಿಸಿ. ಇನ್ನೊಂದು ಪಾತ್ರೆಯಲ್ಲಿ ಒಂದೊಂದು ಹಿಡಿ ಕೋಸು, ಕ್ಯಾರೆಟ್, ಟೊಮೆಟೊ, ಆಲೂಗಡ್ಡೆಗೆ ಸ್ವಲ್ಪ ಉಪ್ಪು ಹಾಕಿ ಬೇಯಿಸಿಕೊಳ್ಳಿ. ಮತ್ತೊಂದು ಪಾತ್ರೆಯಲ್ಲಿ 5 ಚಮಚದಷ್ಟು ಎಣ್ಣೆ ಹಾಕಿ, ಎಣ್ಣೆ ಬಿಸಿಯಾದ ನಂತರ ಸಾಸಿವೆ, ಜೀರಿಗೆ, ಕರಿಬೇವು, ಶುಂಠಿ ಹಾಕಿ. ಆ ಬಳಿಕ ಬೆಂದ ತರಕಾರಿ, ಬೇಳೆ ಹಾಗೂ ಗೋಧಿ ನುಚ್ಚಿನ ಮಿಶ್ರಣ ಹಾಕಬೇಕು. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಒಂದು ಚಿಟಿಕೆ ಕಾಳು ಮೆಣಸು ಮತ್ತು ಜೀರಿಗೆ ಪುಡಿ ಹಾಕಿ ಚಿನ್ನಾಗಿ ಬೆರೆಸಿ. ಒಂದು ಕುದಿ ಬಂದ ನಂತರ ಉರಿಯನ್ನು ಆರಿಸಿ. ತುಸು ಆರಿದ ನಂತರ ಸವಿಯಿರಿ.

ಗೋಧಿನುಚ್ಚಿನ ಪೊಂಗಲ್

ರಾಗಿ ಸಿಹಿ ಪೊಂಗಲ್ ಒಂದು ಬಾಣಲೆಗೆ ಹೆಸರುಬೇಳೆಯನ್ನು ಹಾಕಿ ಎರಡರಿಂದ ಮೂರು ನಿಮಿಷಗಳ ಕಾಲ ಹುರಿಯಿರಿ. ನಂತರ ಇನ್ನೊಂದು ಪಾತ್ರೆಗೆ ಅಕ್ಕಿ, ರಾಗಿ ಹಿಟ್ಟು ಮತ್ತು ಹುರಿದ ಹೆಸರುಬೇಳೆ ಜೊತೆಗೆ ನೀರನ್ನು ಹಾಕಿ ಸಣ್ಣ ಉರಿಯಲ್ಲಿ ಬೇಯಿಸಬೇಕು (ಕುಕ್ಕರ್​ನಲ್ಲಾದರೆ 3 ರಿಂದ 4 ವಿಝಿಲ್​ಗಳು ಬೇಕಾಗುತ್ತದೆ).

ಇನ್ನೊಂದು ಪಾತ್ರೆಗೆ ಬೆಲ್ಲ ಹಾಗೂ ನೀರನ್ನು ಹಾಕಬೇಕು. ಬೆಲ್ಲ ಸಂಪೂರ್ಣವಾಗಿ ಕರಗಿ ಎಳೆಪಾಕ ಬರುವ ಹಾಗೆ 3ರಿಂದ 4 ನಿಮಿಷಗಳ ಕಾಲ ಕುದಿಸಬೇಕು. ನಂತರ ಅಕ್ಕಿ, ರಾಗಿ ಮತ್ತು ಹುರಿದ ಹೆಸರು ಬೇಳೆ ಬೆಂದ ಮಿಶ್ರಣವನ್ನು ಕರಗಿದ ಬೆಲ್ಲಕ್ಕೆ ಹಾಕಬೇಕು. ಅದಕ್ಕೆ ಸ್ವಲ್ಪ ತುಪ್ಪವನ್ನು ಹಾಕಿ ಮಿಶ್ರಣ ಮಾಡಿ 3ರಿಂದ 4 ನಿಮಿಷಗಳ ಕಾಲ ಬೇಯಿಸಬೇಕು. ಇನ್ನೊಂದು ಚಿಕ್ಕ ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಬೇಕು. ತುಪ್ಪ ಕರಗಿದ ಬಳಿಕ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ಹಾಕಿ ಸ್ವಲ್ಪ ಕೆಂಪಾಗುವರೆಗೆ ಹುರಿದು ಪೊಂಗಲ್​ಗೆ ಹಾಕಬೇಕು. ಕೊನೆಯಲ್ಲಿ ಒಂದು ಚಿಟಿಕೆ ಏಲಕ್ಕಿ ಪುಡಿಯನ್ನು ಹಾಕಿ ಮಿಶ್ರಣಗೊಳಿಸಿದರೆ ರಾಗಿ ಸಿಹಿ ಪೊಂಗಲ್ ಸವಿಯಲು ಸಿದ್ಧ.

ನವಣೆ ಖಾರ ಪೊಂಗಲ್ ಒಂದು ಪಾತ್ರೆಗೆ ಒಂದು ಕಪ್ ನವಣೆ ಮತ್ತು ಒಂದು ಕಪ್ ಹೆಸರುಬೇಳೆಗೆ ಸ್ವಲ್ಪ ನೀರನ್ನು ಹಾಕಿ ಒಂದು ಗಂಟೆಯ ಕಾಲ ನೆನೆಸಿಡಬೇಕು. ಇನ್ನೊಂದು ಪಾತ್ರೆಗೆ 2 ಚಮಚ ತುಪ್ಪ ಹಾಕಿ ಬಿಸಿಮಾಡಿ. ಕರಗಿದ ಬಳಿಕ ಒಂದು ಚಮಚ ಜೀರಿಗೆ, ಒಂದು ಚಮಚ ಕಾಳು ಮೆಣಸು ಹಾಕಿ ಹುರಿದುಕೊಳ್ಳಿ. ಇದಕ್ಕೆ ಮೂರು ನಾಲ್ಕು ಹಸಿ ಮೆಣಸಿನಕಾಯಿ, 7 ರಿಂದ 8 ಗೋಡಂಬಿ ಹಾಗೂ ಕರಿಬೇವನ್ನು ಹಾಕಿ ಒಂದು ನಿಮಿಷ ಹುರಿಯಿತಿ. ಒಂದು ಚಮಚ ಶುಂಠಿ ಪೇಸ್ಟ್ ಮತ್ತು ಸ್ವಲ್ಪ ಇಂಗು ಹಾಕಿ ಫ್ರೈ ಮಾಡಿಕೊಳ್ಳಿ. ಆ ಬಳಿಕ ಒಂದು ಗಂಟೆ ನೆನೆಸಿದ ನವಣೆ, ಹೆಸರುಬೇಳೆ ಮತ್ತು 3 ಕಪ್ ನೀರು ಹಾಕಬೇಕು. ಅಲ್ಲದೇ ಇದರ ಜೊತೆಗೆ ಅರ್ಧ ಚಮಚ ಕಾಳು ಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. 8 ನಿಮಿಷ ಬೇಯಲು ಬಿಟ್ಟ ನಂತರ ಮತ್ತೆ 2 ಕಪ್ ನೀರು ಹಾಕಿ ಎರಡರಿಂದ ಮೂರು ನಿಮಿಷಗಳ ಕಾಲ ಬೇಯಿಸಿ, ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ನವಣೆ ಖಾರ ಪೊಂಗಲ್ ರೆಡಿ ಟು ಟೇಸ್ಟ್.

ಅವಲಕ್ಕಿ ಪೊಂಗಲ್

ಅವಲಕ್ಕಿ ಪೊಂಗಲ್ ಮೊದಲು ದಪ್ಪ ಅವಲಕ್ಕಿಯನ್ನು ಚೆನ್ನಾಗಿ ತೊಳೆದು ಸುಮಾರು 30ರಿಂದ 40 ನಿಮಿಷಗಳ ಕಾಲ ನೆನೆಸಿಡಬೇಕು. ನೆನೆದ ನಂತರ ಮೃದುವಾಗಿ ಬೇಯಿಸಿದ ಹೆಸರುಬೇಳೆಯನ್ನು ಬೆರೆಸಬೇಕು. ಒಂದು ಬಾಣಲೆಗೆ ಸ್ವಲ್ಪ ತುಪ್ಪವನ್ನು ಹಾಕಿ, ಇದಕ್ಕೆ ಸಾಸಿವೆ, ಜೀರಿಗೆ, ಕಡಲೆಬೇಳೆ ಮತ್ತು ಉದ್ದಿನ ಬೇಳೆ ಹಾಕಿ ಒಗ್ಗರಣೆ ಸಿದ್ದಪಡಿಸಬೇಕು. ನಂತರ ಈ ಒಗ್ಗರಣೆಗೆ ಹಸಿಮೆಣಸಿನಕಾಯಿ, ಕರಿಬೇವು, ಕಾಳು ಮೆಣಸಿನಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಹುರಿಯಬೇಕು. ಆ ಬಳಿಕ ಇದಕ್ಕೆ ಬೇಯಿಸಿದ ಹೆಸರುಬೇಳೆ ಮತ್ತು ದಪ್ಪಅವಲಕ್ಕಿಯ ಮಿಶ್ರಣವನ್ನು ಹಾಕಿ, 10 ಗೋಡಂಬಿ ಜೊತೆಗೆ ನಿಂಬೆರಸ ಚೆನ್ನಾಗಿ ಬೆರೆಸಿ ಕೊನೆಯಲ್ಲಿ ತೆಂಗಿನತುರಿ ಹಾಕಿ ಇನ್ನೊಂದು ಬಾರಿ ಕಲಸಿದರೆ ರುಚಿರುಚಿಯಾದ ಅವಲಕ್ಕಿ ಪೊಂಗಲ್ ಸಿದ್ಧ.

ಅಯ್ಯಂಗಾರ್ ಸ್ಟೈಲ್ ಪೊಂಗಲ್ ಒಂದು ಕಪ್ ಅಕ್ಕಿ ಮತ್ತು ಅರ್ಧ ಕಪ್ಪಿನಷ್ಟು ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು ಇದಕ್ಕೆ 2 ಕಪ್ ನೀರನ್ನು ಹಾಕಿ. ಒಂದು ಚಮಚ ತುಪ್ಪ, ಒಂದು ಚಮಚ ಜೀರಿಗೆ, ಒಂದು ಚಮಚ ಕಾಳುಮೆಣಸು ಹಾಕಿ ಒಂದು ಪಾತ್ರೆಯಲ್ಲಿ ಮೃದುವಾಗುವರೆಗೂ ಬೇಯಿಸಿ. ಕುಕ್ಕರ್​ನಲ್ಲೂ ಬೇಯಿಸಬಹುದು. ಆದರೆ ತೆರೆದ ಪಾತ್ರೆಯಲ್ಲಿ ಬೇಯಿಸಿದಾಗ ರುಚಿ ಹೆಚ್ಚು. ನಂತರ ಮಿಕ್ಸಿ ಜಾರ್​ಗೆ ಸ್ವಲ್ಪ ಶುಂಠಿ ಹಾಗೂ 4 ರಿಂದ 5 ಹಸಿ ಮೆಣಸಿನಕಾಯಿ ಹಾಕಿ ರುಬ್ಬಬೇಕು (ಖಾರ ಜಾಸ್ತಿ ಬೇಕಾದವರು ಹೆಚ್ಚು ಮೆಣಸನ್ನು ಬಳಸಬಹುದು).

ಮೃದುವಾಗಿ ಬೆಂದ ಅಕ್ಕಿ ಮತ್ತು ಹೆಸರುಬೇಳೆ ಮಿಶ್ರಣಕ್ಕೆ ರುಬ್ಬಿದ ಹಸಿಮೆಣಸಿನಕಾಯಿ, ಶುಂಠಿ ಜೊತೆಗೆ ಉಪ್ಪನ್ನು ಹಾಕಿ ಚೆನ್ನಾಗಿ ತಿರುಗಿಸಿ ಸ್ವಲ್ಪ ಹೊತ್ತು ಕುದಿಸಿ. ನಂತರ ಇನ್ನೊಂದು ಬಾಣಲೆಯಲ್ಲಿ 2 ಚಮಚ ತುಪ್ಪವನ್ನು ಹಾಕಿ ಕರಗಿದ ಬಳಿಕ, ಅರ್ಧ ಚಮಚ ಜೀರಿಗೆ, 10 ಗೋಡಂಬಿ ಹಾಕಿ ಕಂದು ಬಣ್ಣ ಬರುವವರೆಗೂ ಹುರಿದುಕೊಂಡು ಆ ಬಳಿಕ ಅಕ್ಕಿ ಮತ್ತು ಹೆಸರು ಬೇಳೆ ಮಿಶ್ರಣಕ್ಕೆ ವರ್ಗಾಯಿಸಿದರೆ ಅಯ್ಯಂಗಾರ್ ಸ್ಟೈಲ್​ನಲ್ಲಿ ಖಾರ ಪೊಂಗಲ್ ತಿನ್ನಲು ಸಿದ್ಧ.

ಪಾಲಕ್ ಪೊಂಗಲ್ ಪಾಲಕ್ ಸೊಪ್ಪಿನಿಂದಲೂ ರುಚಿರುಚಿಯಾದ ಪೊಂಗಲ್ ಮಾಡಬಹುದು. ಒಂದು ಪಾತ್ರೆಗೆ 3 ರಿಂದ 4 ದೊಡ್ಡ ಲೋಟದಲ್ಲಿ ನೀರನ್ನು ಹಾಕಿ ಕುದಿಸಿಕೊಳ್ಳಿ. ಸಣ್ಣದಾದ ಎರಡು ಕಟ್ಟು ಪಾಲಕ್ ಸೊಪ್ಪನ್ನು ಹೆಚ್ಚಿಕೊಳ್ಳಿ. ಇದನ್ನು 10 ನಿಮಿಷ ಕಾಲ ನೆನೆಸಿಟ್ಟ ಬಳಿಕ ಮಿಕ್ಸಿ ಜಾರ್​ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಇನ್ನೊಂದು ಪಾತ್ರೆಗೆ 3 ರಿಂದ ನಾಲ್ಕು ಚಮಚ ಅಡುಗೆ ಎಣ್ಣೆಯನ್ನು ಹಾಕಿ. ಇದಕ್ಕೆ ಬೇಕಾಗುವ ಒಂದು ಹಿಡಿ ತರಕಾರಿಯನ್ನು ಹಾಕಿ ಸ್ವಲ್ಪ ಉಪ್ಪಿನ ಜೊತೆ ಫ್ರೈ ಮಾಡಿಕೊಳ್ಳಿ (ಬೀನ್ಸ್, ಕ್ಯಾರೇಟ್, ಆಲೂಗಡ್ಡೆ- ಯಾವುದಾದರೊಂದು ಬಗೆಯ ತರಕಾರಿ).

ಇನ್ನೊಂದು ಪಾತ್ರೆಯಲ್ಲಿ ಎರಡು ಕಪ್ ಅಕ್ಕಿ ಮತ್ತು ಒಂದು ಕಪ್ಪಿನಷ್ಟು ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು ನಾಲ್ಕು ಕಪ್ ನೀರಿನೊಂದಿಗೆ ಎರಡು ಚಮಚ ಕಾಳುಮೆಣಸು, ಎರಡು ಚಮಚ ಜೀರಿಗೆ ಮತ್ತು ಎರಡು ಚಮಚ ತುಪ್ಪ ಹಾಕಿ ಬೇಯಲು ಬಿಡಿ. ನಂತರ ಮಿಕ್ಸಿ ಜಾರಿಗೆ ಸ್ವಲ್ಪ ಶುಂಠಿ ಹಾಗೂ 4 ರಿಂದ 5 ಹಸಿ ಮೆಣಸಿನಕಾಯಿ ಹಾಕಿ ರುಬ್ಬಬೇಕು (ಖಾರ ಜಾಸ್ತಿ ಬೇಕಾದವರು ಹೆಚ್ಚು ಮೆಣಸನ್ನು ಬಳಸಬಹುದು). ನಂತರ ಬೆಂದ ಅಕ್ಕಿ ಮತ್ತು ಹೆಸರು ಬೇಳೆ ಮಿಶ್ರಣಕ್ಕೆ ರುಬ್ಬಿದ ಹಸಿ ಮೆಣಸಿನ ಕಾಯಿ, ಶುಂಠಿ ಜೊತೆಗೆ ಉಪ್ಪನ್ನು ಹಾಕಿ ಚೆನ್ನಾಗಿ ತಿರುಗಿಸಿ ಸ್ವಲ್ಪ ಹೊತ್ತು ಕುದಿಸಬೇಕು. ಇದಕ್ಕೆ ಚೆನ್ನಾಗಿ ರುಬ್ಬಿಕೊಂಡ ಪಾಲಕ್ ಸೊಪ್ಪನ್ನು ಹಾಕಿ ಮಿಶ್ರಣಗೊಳಿಸಿ, ಒಗ್ಗರಣೆ ಹಾಕಿಕೊಂಡರೆ ಪಾಲಕ್ ಪೊಂಗಲ್ ತಿನ್ನಲು ಶುರು ಮಾಡಬಹುದು.

ಪಾಲಕ್ ಪೊಂಗಲ್

ತಮಿಳುನಾಡು ಸ್ಟೈಲ್ ಶರ್ಕರೈ ಪೊಂಗಲ್ ಒಂದು ಪಾತ್ರೆಗೆ ಮೂರು ಚಮಚ ತುಪ್ಪವನ್ನು ಹಾಕಿ. ತುಸು ಬಿಸಿಮಾಡಿ, ತುಪ್ಪ ಕರಗಿದ ಬಳಿಕ 200 ಗ್ರಾಂ ನಷ್ಟು ಹೆಸರುಬೇಳೆ ಹಾಕಿ ಒಂದು ನಿಮಿಷ ಫ್ರೈ ಮಾಡಿಕೊಳ್ಳಿ. ಇದಕ್ಕೆ ಚೆನ್ನಾಗಿ ತೊಳೆದು 15 ನಿಮಿಷಗಳ ಕಾಲ ನೆನೆಸಿದ 300 ಗ್ರಾಂ ನಷ್ಟು ಅಕ್ಕಿಯನ್ನು ಹಾಕಿ ಮೂರರಿಂದ ನಾಲ್ಕು ನಿಮಿಷಗಳ ಕಾಲ ಹುರಿಯಿರಿ. ಎರಡು ಕಪ್ಪು ಹಾಲು ಮತ್ತು ಮೂರು ಕಪ್ಪು ನೀರು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ಬೆಂದ ಬಳಿಕ ಸಿಹಿಗೆ ತಕ್ಕಷ್ಟು ಬೆಲ್ಲ, 4 ರಿಂದ 5 ಲವಂಗ, ಒಂದು ಚಮಚ ಏಲಕ್ಕಿ ಪುಡಿ ಹಾಕಿ ಸಣ್ಣ ಉರಿಯಲ್ಲಿ ಮತ್ತೆ ಬೇಯಿಸಬೇಕು. ಇದಕ್ಕೆ ತುಪ್ಪದಲ್ಲಿ ಹುರಿದ 20 ಗೋಡಂಬಿ, 20 ಒಣ ದ್ರಾಕ್ಷಿ ಮತ್ತು ಕೊಬ್ಬರಿಯನ್ನು, ಅಕ್ಕಿ ಮತ್ತು ಹೆಸರುಬೇಳೆ, ಬೆಲ್ಲ ಮಿಶ್ರಣಕ್ಕೆ ಸೇರಿಸಿದರೆ ಶರ್ಕರೈ ಪೊಂಗಲ್ ಸಿದ್ಧವಾದಂತೆ.

ಸಕ್ಕರೈ ಪೊಂಗಲ್

ಹಾಲಿನ ಪೊಂಗಲ್‌ ಅಕ್ಕಿಯನ್ನು ಚೆನ್ನಾಗಿ ತೊಳೆದು ಇಪ್ಪತ್ತು ನಿಮಿಷಗಳ ಕಾಲ ನೆನೆಸಿಡಿ. ತೊಗರಿಬೇಳೆಯನ್ನು ಕಮ್ಮನೆ ಸುವಾಸನೆ ಬರುವವರೆಗೂ ಹುರಿದುಕೊಳ್ಳಿ. ಕುಕರ್‌ನಲ್ಲಿ ಅಕ್ಕಿ, ತೊಗರಿಬೇಳೆ ಹಾಗೂ ನೀರು ಸೇರಿಸಿ 3 ಬಾರಿ ಕೂಗಿಸಿ. ಪ್ರೆಶರ್ ಇಳಿದ ಮೇಲೆ ಮುಚ್ಚಳ ತೆಗೆದು ಎಲ್ಲವನ್ನು ಚೆನ್ನಾಗಿ ಹಿಸುಕಿ. ಪುನಃ ಕುಕರ್‌ ಅನ್ನು ಒಲೆಯ ಮೇಲಿಟ್ಟು ಹಾಲು ಸೇರಿಸಿ ನಿಧಾನಕ್ಕೆ ಕುದಿಸಿ. ಗಂಟಾಗದಂತೆ ನೋಡಿಕೊಳ್ಳಿ. ಮತ್ತೆ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಗ್ಯಾಸ್‌ ಬಂದ್ ಮಾಡಿ. ನಂತರ ಸಣ್ಣ ಪಾತ್ರೆಯಲ್ಲಿ ತುಪ್ಪ ಬಿಸಿಮಾಡಿ, ಅದರಲ್ಲಿ ಗೋಡಂಬಿ ಹುರಿದುಕೊಳ್ಳಿ. ಅದನ್ನು ಪೊಂಗಲ್‌ಗೆ ಸೇರಿಸಿ ಮಿಶ್ರಣ ಮಾಡಿ.

ಹಾಲಿನ ಪೊಂಗಲ್

Christmas Special | ಕ್ರಿಸ್ಮಸ್ ಹಬ್ಬಕ್ಕೆ ತಯಾರಿಸಲೇಬೇಕಾದ ಸಿಹಿ ಕಲ್ಕಲ್ಸ್ ಮಾಡುವ ವಿಧಾನ ಇಲ್ಲಿದೆ

Published On - 10:26 am, Wed, 13 January 21