ಮಕ್ಕಳು ಖಂಡಿತ ನಿಮ್ಮ ಖಾಸಗೀ ಆಸ್ತಿಯಲ್ಲ. ಅವರಿಗೆ ಅವರದೇ ಆದ ಹಕ್ಕುಗಳಿವೆ. ಉತ್ತಮ ಬಾಲ್ಯ ಅವುಗಳ ಪೈಕಿ ಒಂದು. ಅವರೊಳಗೆ ಹುದುಗಿರುವ ಬುದ್ಧಿವಂತಿಕೆ/ಕೌಶಲಗಳನ್ನು ಹೊರತೆಗೆಯಲು ಬೇಕಾದ ಪೂರಕ ವಾತಾವರಣವನ್ನು ನಿರ್ಮಿಸುವುದು ಪೋಷಕರ, ಶಿಕ್ಷಕರ ಕರ್ತವ್ಯ. ಮೌಲ್ಯಗಳು, ಬದುಕುವ ಕೌಶಲ, ಸಮಾಜದಲ್ಲಿ ಹೊಂದಿಕೊಂಡು ಹೋಗುವುದು, ಸ್ವಂತ ಸಾಮರ್ಥ್ಯದಿಂದ ಸಂಪಾದಿಸುವುದು ಮತ್ತು ಸಭ್ಯ ನಡೆವಳಿಕೆಗಳನ್ನು ಮಕ್ಕಳಿಗೆ ಸಕಾಲದಲ್ಲಿ ಕಲಿಸಿದರೆ, ಅಂತಹ ಮಕ್ಕಳನ್ನು ಕುರಿತು ಯೋಚನೆ/ಆತಂಕಗಳಿಲ್ಲದೆ ನೆಮ್ಮದಿಯ ಮುಪ್ಪಿನ ದಿನಗಳನ್ನು ಪೋಷಕರು ಆನಂದಿಸಬಹುದು.
ಮಕ್ಕಳಿಸ್ಕೂಲ್ ಮನೇಲಲ್ವೇ ಎಂದು ಪ್ರತಿಪಾದಿಸಿದವರು ಕೈಲಾಸಂ. ಏನೂ ಬೀಳದ ಭಾವಿಯಲ್ಲಿ ಪಾತಾಳಗರಡಿ ಹಾಕಿ ಎಷ್ಟೇ ಎಳೆದರೂ ಹೇಗೆ ಏನೂ ಬರೋದಿಲ್ವೋ ಹಾಗೇ, ಏನೂ ಕಲಿಸದೆ ಶಾಲೆಗೆ ಕಳುಹಿಸಿದರೆ, ಅಲ್ಲಿ ಶಿಕ್ಷಕ ಆ ಮಕ್ಕಳಿಂದ ಏನು ತಾನೇ ಆಚೆಗೆ ಎಳೆದಾನು ಎಂದೂ ಅವರು ಪ್ರಶ್ನಿಸಿದ್ದರು. ಒಂದೋ ಎರಡೋ ಮಕ್ಕಳಿರುವ ಇಂದಿನ ಕಾಲದಲ್ಲಿ ಮಕ್ಕಳನ್ನು ತುಂಬ ಅಕ್ಕರೆಯಿಂದ, ಎಚ್ಚರಿಕೆಯಿಂದ, ಪ್ರೀತಿಯಿಂದ ಸಾಕುವುದು ಸಹಜ. ಆದರೆ ಈ ಪ್ರಯತ್ನದಲ್ಲಿ ಮಕ್ಕಳ ಭವಿಷ್ಯದ ವ್ಯಕ್ತಿತ್ವಕ್ಕೆ ಎಂತಹ ಬುನಾದಿ ಹಾಕುತ್ತಿದ್ದಾರೆ ಎನ್ನುವುದನ್ನೂ ಪೋಷಕರೂ ಕೇಳಿಕೊಳ್ಳಬೇಕು.
ಸಮಾಜದ ಆಗುಹೋಗುಗಳನ್ನು ಒಟ್ಟಾರೆಯಾಗಿ ಅವಲೋಕಿಸಿದಾಗ, ಮಕ್ಕಳಿಗೆ ಸಮಸ್ಯೆ ಎದುರಾದರೆ ಎದುರಿಸುವ ರೀತಿ ತಿಳಿಯದು, ಸಂಬಂಧಗಳ ನಿರ್ವಹಣೆ ಬಾರದು, ಅಪಯಶ ಕಂಡರೆ ಅದನ್ನು ಸಹಿಸಿಕೊಳ್ಳಲಾಗದು, ಇತರರೊಡನೆ ಹಂಚಿಕೊಂಡು ಗೊತ್ತಿಲ್ಲ, ತಮಗೆ ಏನಾದರೂ ಬೇಕು ಎನಿಸಿದರೆ, ಸಕಾಲಕ್ಕೆ ಕಾಯುವಷ್ಟು ತಾಳ್ಮೆಯೂ ಇಲ್ಲ. ಅನ್ಯರ ಅಗತ್ಯಗಳನ್ನು ಗೌರವಿಸುವುದಿಲ್ಲ, ಬಡತನವನ್ನು ಗೌರವಿಸುವುದಿಲ್ಲ. ದೇಹದ ರಚನೆಯನ್ನು ಕುರಿತು ಟೀಕೆಗಳನ್ನು ಮಾಡುವರು. ತಮಗೆ ಸೂಕ್ತವಾದ ಮಾನದಂಡವನ್ನು ಆರಿಸಿಕೊಂಡು ಅದರ ಪ್ರಕಾರ ‘ದಡ್ಡರು’ ಎಂದು ಹಣೆಪಟ್ಟಿ ಹಚ್ಚಿಬಿಡುವರು. ತಮ್ಮ ಹಕ್ಕುಗಳನ್ನು ಪ್ರತಿಪಾದಿಸುತ್ತಾರೆ, ಆದರೆ ತಮ್ಮ ಕರ್ತವ್ಯವನ್ನು ನಿರ್ಲಕ್ಷಿಸುತ್ತಾರೆ. ಇದು ಮೇಲಿಂದ ಮೇಲೆ ಕೇಳಿ ಬರುವ ದೂರುಗಳು.
ಯಾಕೆ ಹೀಗಾಗುತ್ತದೆ?
ಪೋಷಕರಿಬ್ಬರೂ ದುಡಿಯುವುದರಿಂದ ಮಕ್ಕಳಿಗೆ ಗಮನ ಕೊಡಲು ಸಮಯವಿಲ್ಲ, ವ್ಯವಧಾನವೂ ಇಲ್ಲ. ಅಜ್ಜಿ ತಾತಂದಿರ ಜೊತೆ ಉತ್ತಮ ಬಾಂಧವ್ಯವನ್ನು ಬೆಳೆಸಲು ಆಗುತ್ತಿಲ್ಲ. ಓರಗೆಯವರನ್ನು ಭೇಟಿ ಮಾಡಲು, ಅವರೊಡನೆ ಒಡನಾಟ ಇಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇವು ಎದುರಾಗುವ ಹಲವು ಸಮಸ್ಯೆಗಳು.
ನಿನ್ನ ಮಗನಿಗೆ ನರ್ಸರಿ ಹಾಡುಗಳನ್ನು ಕಳುಹಿಸಿದ್ದೀಯ ಎಂದು ನನ್ನ ಪರಿಚಿತ ಅಮ್ಮನನ್ನು ಕೇಳಿದಾಗ ‘ಹೂಂ. ತುಂಬ ಸಿ.ಡಿಗಳನ್ನು ಇಟ್ಟುಕೊಂಡಿದ್ದೇವೆ, ಹಾಕಿ ತೋರಿಸುತ್ತೇವೆ’ ಎಂದು ಆಕೆ ಉತ್ತರಿಸಿದಳು. ಆ ಸಿ.ಡಿಗಳಲ್ಲಿ ಕಥೆಗಳನ್ನೂ ತೋರಿಸಬಹುದು. ಮಗುವಿಗೆ ಟಿವಿ ನೋಡುವುದು ಅಲ್ಲಿಂದ ಪ್ರಾರಂಭ. ಕೊರೋನಾ ಕಾಲದಲ್ಲಿಯಂತೂ ಮೊಬೈಲಿನ ಬಳಕೆ ಅನಿವಾರ್ಯವಾಯಿತು. ಮಕ್ಕಳಿಗೆ ಗಮನ ಕೊಡುವ ವಿಚಾರವನ್ನು ಒಂದೆಡೆ ಮಾತನಾಡಿದಾಗ, ‘ನನ್ನ ಮಗಳು ಮೊಬೈಲ್ ಆಟದಲ್ಲಿಯೇ ನಿರತಳಾಗಿರುತ್ತಾಳೆ. ಮಾತನಾಡಲು ಹೋದರೆ, ಅವಳು ಆಸಕ್ತಿಯನ್ನೇ ತೋರಿಸುವುದಿಲ್ಲ’ ಎಂದು ದೂರಿದರು! ಅವರ ದೂರು ನಾನು ಓದಿದ್ದ ಒಂದು ಪ್ರಸಂಗವನ್ನು ನೆನಪಿಸಿತು.
ಕಚೇರಿಯಲ್ಲಿ ಕೆಲಸ ಮಾಡುವವನೊಬ್ಬ ತನ್ನ ಸಹೋದ್ಯೋಗಿಗೆ ಹೇಳುತ್ತಾನೆ, ‘ನಾನು ಅರ್ಧ ಗಂಟೆಯಿಂದ ಇವರನ್ನು ಗಮನಿಸುತ್ತಿದ್ದೇನೆ. ರಸ್ತೆ ರಿಪೇರಿಗೆಂದು ಬಂದವರು ಇನ್ನೂ ಏನೂ ಕೆಲಸ ಮಾಡಿಲ್ಲ. ಸುಮ್ಮನೆ ಹರಟೆ ಹೊಡೆಯುತ್ತ ಕುಳಿತಿದ್ದಾರೆ.’ ಅವರನ್ನು ಅರ್ಧ ಗಂಟೆಯಿಂದ ವೀಕ್ಷಿಸುತ್ತಿರುವ ಈತ ಏನು ಕೆಲಸ ಮಾಡಿದ್ದಾನೆ?
ಮಕ್ಕಳನ್ನು ಸ್ವಾವಲಂಬಿಗಳನ್ನಾಗಿ ಬೆಳೆಸುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರವನ್ನು ಹುಡುಕಿಕೊಳ್ಳುವ ಮೊದಲು ನಾವು ಅವರ ಬೆಳವಣಿಗೆಗೆ ಸೃಷ್ಟಿಸಿರುವ ವಾತಾವರಣವನ್ನು ಒಮ್ಮೆ ಅವಲೋಕನ ಮಾಡಬೇಕು.
• ಮಗುವನ್ನು ಶಾಲೆಗೆ ಸೇರಿಸುವ ಸಮಯಕ್ಕೆ ಅದಕ್ಕೆ ತನ್ನ ವಸ್ತುಗಳನ್ನು ಗುರುತಿಸುವ, ತನ್ನ ಷೂ ಕಟ್ಟಿಕೊಳ್ಳುವ ಕೌಶಲಗಳು ಬಂದಿರಬೇಕು. ಟಾಯಿಲೆಟ್ ತರಬೇತಿಯಾಗಿರಬೇಕು ಎನ್ನುವುದು ಒಂದು ಸೂತ್ರ. ಇದನ್ನು ಕಲಿಸಬೇಕಾದುದು ಮನೆಮಂದಿಯೇ ಹೊರತು ಶಾಲೆಯಲ್ಲಿನ ಶಿಕ್ಷಕರಾಗಲೀ, ಆಯಾಗಳಾಗಲೀ, ಅಲ್ಲ.
ನಾನು ಕಂಡ ಹಾಗೆ ಅನೇಕ ಪೋಷಕರಲ್ಲಿ ಇರುವ ಒಂದು ತಪ್ಪು ಕಲ್ಪನೆ ಎಂದರೆ ಮಕ್ಕಳ ಹೊಣೆಗಾರಿಕೆಯನ್ನು ವರ್ಗಾಯಿಸಬಹುದು ಎನ್ನುವುದು. ಕೆಲಸದವಳು, ಆಯಾ, ಬೇಬಿ ಸಿಟ್ಟರ್, ಶಿಕ್ಷಕರು ಇಂತಹವರಿಗೆ ಒಪ್ಪಿಸಿಬಿಟ್ಟರೆ, ಮಗುವನ್ನು ನೋಡಿಕೊಳ್ಳುವುದು ಅವರ ಜವಾಬ್ದಾರಿ ಎಂದು ನಂಬಿದ್ದಾರೆ. ರಜೆಯಲ್ಲಿಯೂ ಮಕ್ಕಳನ್ನು ಎಲ್ಲಿಯಾದರೂ ಸೇರಿಸಿಬಿಡುವ, ಮತ್ತಷ್ಟು ಹೋಮ್‍ವರ್ಕ್ ಕೊಡಿ ಎಂದು ಒತ್ತಾಯಿಸುವ ಅನೇಕ ಪೋಷಕರನ್ನು ಕಂಡಿದ್ದೇನೆ.
• ಮಕ್ಕಳನು ನೋಡಿ ಕಲಿಯುತ್ತಾರೆ ಎನ್ನುವುದಕ್ಕೆ ಒಂದು ಸಣ್ಣ ಉದಾಹರಣೆ. ನನ್ನ ಮೊಮ್ಮಗನಿಗೆ ಸುಮಾರು ಹತ್ತು ತಿಂಗಳಾಗಿದ್ದಾಗ, ಕುಳಿತು ತನ್ನ ಬೆರಳುಗಳಿಂದ ಏನೋ ಮಾಡುತ್ತಿದ್ದ. ಕೆಲವು ನಿಮಿಷಗಳ ಕಾಲ ಅವನ ಕೆಲಸವನ್ನೇ ಗಮನಿಸಿದಾಗ, ಅವನು ಹೂ ಬತ್ತಿ ಮಾಡುತ್ತಿದ್ದ ಎಂದು ಅರ್ಥವಾಯಿತು. ಅವನ ಅಜ್ಜಿ ಮಾಡುವುದನ್ನು ನೋಡಿಕೊಂಡಿದ್ದ ಅವನು ಅದನ್ನೇ ಅನುಕರಿಸುತ್ತಿದ್ದ.
ಹೀಗೆ ಅನುಕರಿಸುವಾಗ ಮಕ್ಕಳ ಎದುರಿಗೆ ನಮ್ಮ ನಡವಳಿಕೆಯೇ ತಳಹದಿಯಾಗಿರುತ್ತದೆ. ಕೆಲವೊಮ್ಮೆ ನಮ್ಮ ದುರಭ್ಯಾಸಗಳನ್ನು ಅನುಕರಿಸಿದರೆ, ಅದರ ಮೋಜನ್ನು ನಾವು ಅನುಭವಿಸುತ್ತೇವೆ. ಬಂದವರ ಎದುರಿಗೂ ಅದನ್ನು ಹೇಳಿಕೊಂಡು ಸಂಭ್ರಮಿಸುತ್ತೇವೆ.
ನಾವು ಮಕ್ಕಳ ಯಾವ ಆಟವನ್ನು/ಹೇಳಿಕೆಯನ್ನು ಸಂಭ್ರಮಿಸುತ್ತೇವೆಯೋ, ಅದು ಸರಿ ಎನ್ನುವ ಪುನರುಚ್ಚಾರ ಮಕ್ಕಳಿಗೆ ಸಿಗುತ್ತದೆ. ಅವರು ಅದನ್ನು ಮುಂದುವರೆಸಿಕೊಂಡು ಹೋಗುವರು. ಸರಿ-ತಪ್ಪುಗಳ ಆಯ್ಕೆಯನ್ನು ಈ ಹಂತದಲ್ಲಿ ಕಲಿಸುವುದು ಸಾಧ್ಯವಿದೆ. ಮಕ್ಕಳ ಎದುರಿನಲ್ಲಿ ನಮ್ಮ ನಡೆವಳಿಕೆಯ ಕಡೆ ಗಮನ ಇಡುವುದು, ಅವರ ನಡೆವಳಿಕೆಯಲ್ಲಿ ಸರಿಯಲ್ಲದ್ದು ಕಾಣಿಸಿದಾಗ, ಅದನ್ನು ಮಗುವಿಗೆ ತಿಳಿಸಿಕೊಡುವುದು. ಮನೆಯವರೆಲ್ಲರೂ ಒಮ್ಮತದಿಂದ ಇದನ್ನು ಮಾಡಬೇಕು. ಮಗು, ಮುಂದೆ ಕಲಿಯತ್ತೆ, ಬಿಡು ಎಂದು ಸಮರ್ಥಿಸಬಾರದು. ಗಿಡವಾಗಿದ್ದಾಗಲೇ ಬಗ್ಗಿಸುವುದು ಸುಲಭ!
ಮಕ್ಕಳಿಗೆ ಕಥೆ ಎಂದರೆ ತುಂಬ ಇಷ್ಟ. ಅದರಲ್ಲಿಯೂ ಪ್ರಾಣಿಗಳ, ಹಕ್ಕಿಗಳ ಕಥೆಗಳು ಎಂದರೆ ತುಂಬಾ ಇಷ್ಟ. ಅದನ್ನು ಕುತೂಹಲಕಾರಿಯಾಗಿ ನಿರೂಪಿಸಿದರೆ, ಅದರ ಮೂಲಕ ಮೌಲ್ಯಗಳನ್ನೂ ತುಂಬಬಹುದು.
ಮಕ್ಕಳಲ್ಲಿ ಸಂವೇದನೆ ಹೇಗಿರುತ್ತದೆ?
ಅಮ್ಮ ಮಗ ಬರುತ್ತಿದ್ದಾಗ ಒಂದು ನಾಯಿಯ ಮೇಲೆ ಗಾಡಿಯೊಂದು ಹೋಗಿ, ನಾಯಿ ನರಳುತ್ತಿತ್ತು. ವೈದ್ಯರಿಗೆ ಫೋನ್ ಮಾಡಿದರು. ವೈದ್ಯರು ಬರುವ ವೇಳೆಗೆ ಸಮಯಕ್ಕೆ ನಾಯಿ ಅಸುನೀಗಿತ್ತು. ಆ ನಂತರ, ಆ ಏಳು ವರ್ಷದ ಹುಡುಗ ಹೇಳಿದ್ದು, ‘ಗಾಡಿ ಓಡಿಸುವವರು ಆಕಡೆ ಈ ಕಡೆ ನೋಡಿ ಹುಷಾರಾಗಿ ಓಡಿಸಬೇಕಿತ್ತು. ಆ ನಾಯಿಯೂ ರಸ್ತೆ ದಾಟುವಾಗ ಗಾಡಿ ಬರುತ್ತಿದ್ದುದನ್ನು ಗಮನಿಸಬಹುದಿತ್ತು, ಅಲ್ವಾ?’
ಹಿರಿಯರು ಸಂವೇದನಾಶೀಲ ನಡೆವಳಿಕೆ ತೋರಿಸಿದರೆ, ಮಕ್ಕಳಲ್ಲಿ ಅದು ಸಹಜವಾಗಿ ಬರುವುದು. ಆಗ ಅವರು ಅನ್ಯರ ಬಡತನ ಕುರಿತು, ವೈಕಲ್ಯ ಕುರಿತು, ಅನ್ಯ ವಿಚಾರಗಳನ್ನು ಕುರಿತು ನಗೆಯಾಡುವುದಿಲ್ಲ. ಅನ್ಯರನ್ನು, ಅನ್ಯರ ಅಗತ್ಯಗಳನ್ನು ಗೌರವಿಸುವ ಶಕ್ತಿಯನ್ನು ಬೆಳೆಸಿಕೊಳ್ಳುವರು.
• ನನ್ನ ಎರಡನೆಯ ಮಗಳು ಮೈತ್ರಿ ಎಲ್‍ಕೆಜಿಯಲ್ಲಿದ್ದಾಗ ಒಂದು ದಿನ ಅವಳನ್ನು ಕರೆತರಲು ನಾನು ಹೋಗಿದ್ದೆ. ಪರಸ್ಥಳದಲ್ಲಿದ್ದ ನನಗೆ ಅಂತಹ ಅವಕಾಶ ಸಿಗುತ್ತಿದ್ದುದು ಕಡಿಮೆ. ಅಲ್ಲಿ ಅವಳ ಸಹಪಾಠಿಯೊಬ್ಬಳು ಬಟಾಣಿ ತಿನ್ನುತ್ತಿದ್ದಳು ಇವಳಿಗೂ ಕೊಡಲು ಮುಂದಾದಳು. ನನ್ನ ಉಪಸ್ಥಿತಿ ಮೈತ್ರಿಯಲ್ಲಿ ಜಂಬ ಮೂಡಿಸಿತ್ತು. ‘ಬೇಡ, ನಾನು ನಮ್ಮಪ್ಪನಿಂದ ತೆಗೆಸಿಕೊಳ್ಳುತ್ತೇನೆ’ ಎಂದಳು. ಅಂದು ಅವಳಿಗೆ ನಾನು ತೆಗೆದುಕೊಡಲಿಲ್ಲ. ‘ಆ ಮಗು ಕೊಡಲು ಬಂದಾಗ ನೀನು ಜಂಬ ತೋರಿಸಿದೆ, ಅದು ನನಗೆ ಇಷ್ಟವಾಗಲಿಲ್ಲ. ಅದಕ್ಕೆ ಕೊಡಿಸುವುದಿಲ್ಲ’ ಎಂದು ಹೇಳಿದೆ. ಅವಳ ಅಳು ನನ್ನ ನಿರ್ಧಾರವನ್ನು ಬದಲಿಸಲಿಲ್ಲ.
ಯಾವುದೇ ಕಾರಣಕ್ಕೆ ಮಕ್ಕಳಲ್ಲಿ ಜಂಬ ಬೆಳೆಯಲು ಬಿಡಬಾರದು.
• ಪೈಪೋಟಿಯ ಯುಗ ಇದು. ಹಿರಿಯರು ಮತ್ತೊಬ್ಬರ ಜೊತೆ, ನಡುವಯಸ್ಸಿನವರು ತಮ್ಮ ಓರಗೆಯವರ ಜೊತೆ ಪೈಪೋಟಿ ನಡೆಸುವ ಸಮಯ. ಇದು ಮಕ್ಕಳ ವಿಚಾರದಲ್ಲಿಯೂ ಬರುತ್ತದೆ. ನೀನು ಅವನಿಗಿಂತ ಚೆನ್ನಾಗಿ ಮಾಡಬೇಕು ಎನ್ನುವ ಪೈಪೋಟಿಯನ್ನು ನಾವು ಮಕ್ಕಳಲ್ಲಿ ಸೃಷ್ಟಿಸಿದರೆ, ಅದು ಅನಾರೋಗ್ಯಕರ ಒತ್ತಡವನ್ನು ಹೇರುವುದರ ಜೊತೆಗೆ ತನ್ನ ಓರಗೆಯವರನ್ನು ಪ್ರತಿಸ್ಫರ್ದಿ ಎಂದು ಭಾವಿಸಬಹುದು.
• ಬದಲಿಗೆ ನಿಮ್ಮ ಮಗುವಿನಲ್ಲಿರುವ ವಿಶಿಷ್ಟ ಕೌಶಲವನ್ನು ಗುರುತಿಸಿ, ಅದನ್ನು ಹೊರತರಲು ಉತ್ತೇಜಿಸುವುದು ಮಗುವಿನಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದು. ಅನಾರೋಗ್ಯಕರ ಪೈಪೋಟಿಯಿಲ್ಲದೆ ಸ್ವತಂತ್ರವಾಗಿ ತನ್ನದೇ ಸಾಧನೆಯತ್ತ ಗಮನ ಕೊಡುವುದು ಮಗುವಿಗೆ ಸಾಧ್ಯವಾಗುತ್ತದೆ.
• ಇವು ಮಕ್ಕಳಲ್ಲಿ ಬೆಳೆಸಬಹುದಾದ ಗುಣಗಳ ಕೆಲವು ಸ್ಯಾಂಪಲ್‍ಗಳು. ನಿಮ್ಮ ಮಗು ಯಾವ ಗುಣಗಳನ್ನು ರೂಢಿಸಿಕೊಂಡರೆ, ಅದರ ವ್ಯಕ್ತಿತ್ವ ಮೆರುಗನ್ನು ಪಡೆಯುತ್ತದೆ ಎಂದು ಗುರುತಿಸಿಕೊಂಡು ಅವನ್ನು ಕಲಿಸಿದರೆ, ಭವಿಷ್ಯದಲ್ಲಿ ಅವರನ್ನು ಕುರಿತು ನಿಮಗೆ ಆತಂಕ ಉಂಟಾಗುವುದಿಲ್ಲ. ವೈಭವೀಕರಣ, ದ್ರವ್ಯ ಶ್ರೀಮಂತಿಕೆ ಹಾಗೂ ಅವರ ಎಲ್ಲ ಬೇಡಿಕೆಗಳನ್ನೂ ಈಡೇರಿಸಲೇಬೇಕು- ಇವುಗಳಿಗೆ ಒತ್ತು ಕೊಡಬಾರದು.
ಹೊಣೆಗಾರಿಕೆ
ಸರಕಾರೀ ಸ್ವಾಮ್ಯದ ನೌಕರರಿಗೆ ಕಾರ್ಯಾಗಾರವನ್ನು ನಡೆಸಿದಾಗ ಒಬ್ಬರು ತಮ್ಮ ಮಗನನ್ನು ಕುರಿತು ಒಂದು ದೂರು ಹೇಳಿದರು. ಅವನು ತನ್ನ ಓದಿಗೆ ಸ್ವಯಂ ಗಮನ ಕೊಡುವುದಿಲ್ಲ, ಶ್ರದ್ಧೆಯನ್ನೂ ತೋರಿಸುವುದಿಲ್ಲ ಎಂದು. ನೀವು ನಿಮ್ಮ ಉದ್ಯೋಗ ಕುರಿತು ಎಷ್ಟರ ಮಟ್ಟಿಗೆ ಶ್ರದ್ಧೆ ತೋರಿಸುತ್ತೀರಿ, ಗಮನವನ್ನು ಕೊಡುವಿರಿ ಎಂದು ಮರುಪ್ರಶ್ನೆಯನ್ನು ಕೇಳಿದಾಗ ಅವರಿಗೆ ಸಹಜವಾಗಿಯೇ ಸಿಟ್ಟು ಬಂದಿತು. ‘ನಾನು ಕಲಸಕ್ಕೆ ಗಮನ ಕೊಡದೇ ಹೋದರೆ ನನ್ನನ್ನು ಯಾರೂ ಏನೂ ಮಾಡಲಾರರು’ ಎಂದು ಅವರು ಉತ್ತರಿಸಿದರು.
‘ಇದೇ ಮಾತನ್ನೇ ನಿಮ್ಮ ಮಗ ನಿಮಗೆ ಹೇಳುತ್ತಿದ್ದಾನೆ. ನಿನ್ನ ಮಾತಿಗೆ ನಾನು ಬೆಲೆ ಕೊಡುವುದಿಲ್ಲ, ಏನು ಮಾಡುವ ಹಾಗಿದ್ದೀಯ’ ಎಂದು ಪರೋಕ್ಷವಾಗಿ ಕೇಳುತ್ತಿದ್ದಾನೆ ಎಂದು ವಿವರಿಸಿ, ನಮ್ಮ ಜೀವನ ಶೈಲಿ ಮಕ್ಕಳ ಮೇಲೆ ಎಂತಹ ಪರಿಣಾಮವನ್ನು ಬೀರುವುದು ಎಂದು ಉದಾಹರಣೆಗಳ ಸಮೇತ ಉತ್ತರಿಸಿದೆ.
ಶಾಲೆಗೆ ಹೋಗುವ ಮೊದಲು ಮಗುವಿಗೆ ಏನೆಲ್ಲ ಕಲಿಸಬೇಕೋ, ಅದನ್ನು ಕಲಿಸುವುದು ಮೊದಲ ಹಂತ. ನಿಮ್ಮ ನಡೆವಳಿಕೆಯ ಮೂಲಕ, ಕಥೆಗಳ ಮೂಲಕ, ವಯೋಮಾನಕ್ಕೆ ಅನುಗುಣವಾಗಿ ತಿಳಿಸುವ ಮೂಲಕ.
ತರಕಾರಿ, ಹಣ್ಣುಗಳ ವೈವಿಧ್ಯತೆಯನ್ನು ಪುಸ್ತಕದಲ್ಲಿ ತೋರಿಸಿರುತ್ತೀರಿ. ಮನೆಗೆ ತಂದ ವಸ್ತುಗಳನ್ನು ಗುರುತಿಸುವುದನ್ನು ಹೇಳಿಕೊಡಬಹುದು. ಪ್ರಾಣಿಗಳ ಪರಿಚಯವನ್ನೂ ಮೊದಲು ಪುಸ್ತಕದ ಮೂಲಕ, ಆನಂತರ ಮೃಗಾಲಯಕ್ಕೆ ಕರೆದುಕೊಂಡು ಹೊಗುವ ಮೂಲಕ. ಗಿಡಮರಗಳನ್ನು, ಚಿಟ್ಟೆ, ಇರುವೆ, ಜಿರಳೆ ಮುಂತಾದವನ್ನೂ ಹೀಗೆಯೇ ಪರಿಚಯ ಮಾಡಿಕೊಡಿ. ಅಡುಗೆ ಮಾಡುವಾಗ ಮಕ್ಕಳನ್ನು ಜೊತೆಯಲ್ಲಿ ಕೂರಿಸಿಕೊಳ್ಳಬಹುದು. ಕೆಲವು ಕೆಲಸಗಳಿಗೆ ಅವರ ಸಹಾಯವನ್ನು ಕೋರಬಹುದು. ಉತ್ಸಾಹದಿಂದ ಮಾಡುತ್ತವೆ ಮಕ್ಕಳು! ಇದಕ್ಕೆ ಹೆಚ್ಚು ಸಮಯ ಬೇಕಾಗುವುದಿಲ್ಲ, ಆದರೆ ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ತಾಳ್ಮೆಯಿರಬೇಕು. ನಿಮ್ಮ ಕೆಲಸವನ್ನು ಮಾಡಿಕೊಳ್ಳುತ್ತ ಅವರ ಪ್ರಶ್ನೆಗಳಿಗೆ ಉತ್ತರಿಸುವ ಕೌಶಲವನ್ನೂ ಬೆಳೆಸಿಕೊಳ್ಳಬೇಕು.
ಇವೆಲ್ಲವೂ ನಾವು ಹಲವರು ಮಕ್ಕಳನ್ನು ಬೆಳೆಸುವ ಹಂತದಲ್ಲಿ ಮಾಡಿರುವ ಕೆಲಸಗಳೇ. ಆದುದರಿಂದ ಇದು ಖಂಡಿತ ಸಾಧ್ಯವಿದೆ ಎಂದು ಭರವಸೆ ಕೊಡಬಲ್ಲೆ.
ನಾನು ಪರಸ್ಥಳದಲ್ಲಿದ್ದಾಗ ಏಳನೆಯ ತರಗತಿಯಲ್ಲಿ ಓದುತ್ತಿದ್ದ ನನ್ನ ಮಗಳು ತನಗೆ ಕೆಲವು ಸಲ ಏನಾದರೂ ಬೇಕಾಗುವುದು, ತೆಗೆದುಕೊಳ್ಳಲು ಅಮ್ಮ ಹಣವನ್ನೇ ಕೊಡುವುದಿಲ್ಲ ಎಂದು ದೂರಿದಳು. ಆಗ ಮನೆ ಕಟ್ಟಿಸುತ್ತಿದ್ದುದರಿಂದ ನಮಗೂ ಆರ್ಥಿಕ ಸಮಸ್ಯೆ ಇತ್ತು. ಹದಿವಯಸ್ಸಿನ ಮಗಳಿಗೆ ಅದನ್ನು ವಿವರಿಸುವುದು ಹೇಗೆ ಎಂದು ಯೋಚಿಸಿದೆ. ಕೊನೆಗೆ ಇನ್ನು ಮೇಲೆ ನಮಗೆ ಬರುವ ಸಂಬಳವನ್ನು ನಿನಗೇ ಕೊಡುತ್ತೇವೆ, ಮನೆ ಖರ್ಚನ್ನು ನೀನೇ ನಿಭಾಯಿಸು, ನಿನಗೆ ಬೇಕಾದುದನ್ನು ನೀನೇ ತೆಗೆದುಕೋ ಎಂದು ಸೂಚಿಸಿದೆ. ಎಂಟು ತಿಂಗಳು ಮನೆ ನಿರ್ವಹಣೆಯನ್ನು ಮಾಡಿದ ಅನುಭವ ಅವಳಿಗೆ ದೊರಕಿತು. ‘ನಿಮಗೆ ಹಣ ಕೂಡಿಡಲು ಬರುವುದಿಲ್ಲ’ ಎಂದು ಹೇಳಿ ಮಕ್ಕಳ ದುಡಿತದ ಮೇಲೆ ತಮ್ಮ ನಿಯಂತ್ರಣ ಇಟ್ಟುಕೊಂಡ ತಂದೆಯರಿಂದ ಆಗುತ್ತಿರುವ ಸಮಸ್ಯೆ ಕುರಿತು ಹಲವು ದಂಪತಿಗಳು ದೂರಿದ್ದಾರೆ ಎನ್ನುವ ಹಿನ್ನಲೆಯಲ್ಲಿ ನೀವು ಈ ಉದಾಹರಣೆಯನ್ನು ಅರ್ಥ ಮಾಡಿಕೊಳ್ಳಬೇಕು.
ಒಂದು ವಯಸ್ಸಿಗೆ ಬಂದ ಮಕ್ಕಳು ತಮ್ಮ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿಲ್ಲ ಎಂದಾದರೆ ಅದನ್ನು ಸಕಾಲದಲ್ಲಿ ನೀವು ಕಲಿಸಿಲ್ಲ ಎಂದೇ ಅರ್ಥ! ಅದಕ್ಕೆ ಕಾರಣ ನೀವೇ ಇರಬಹುದು, ಅವರ ಬೆಂಬಲಕ್ಕೆ ನಿಲ್ಲುವ ಬೇರೆಯವರೂ ಇರಬಹುದು. ನಮ್ಮ ಮಾತು ಕೇಳುವುದಿಲ್ಲ ಎನ್ನುವ ಪರಿಸ್ಥಿತಿಯಲ್ಲಿ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಮಕ್ಕಳ ಜೊತೆಗಿನ ನಮ್ಮ ಭಾವನಾತ್ಮಕ ನಂಟು ಅದಕ್ಕೆ ಅವಕಾಶ ಕೊಡುವುದಿಲ್ಲ.
• ಒಬ್ಬ ಅಪ್ಪನಿಗೆ ದೊಡ್ಡ ಸಮಸ್ಯೆ ಎಂದರೆ ಇಬ್ಬರೂ ಮಕ್ಕಳಿಗೆ ಸೇಬನ್ನು ಹಂಚಿದಾಗ ಅವನಿಗೆ ದೊಡ್ಡ ತುಂಡು ಸಿಕ್ಕಿತು ಎಂಬ ದೂರು. ಕೊನೆಗೆ ಆತ ಪರಿಹಾರ ಕಂಡುಕೊಂಡ. ಅವರಿಬ್ಬರ ಪೈಕಿ ಒಬ್ಬ ಸೇಬನ್ನು ಎರಡು ಭಾಗ ಮಾಡಬೇಕು. ಮತ್ತೊಬ್ಬ ತನಗೆ ಬೇಕಾದ ಭಾಗವನ್ನು ಆರಿಸಿಕೊಳ್ಳಬೇಕು.
ಸೋದರರ ಸೋದರಿಯರ ನಡುವೆ ಕಲಹ ಹಲವು ಕುಟುಂಬಗಳಲ್ಲಿ ಒಂದು ಮುಖ್ಯ ಸಮಸ್ಯೆ. ಕೆಲವೊಮ್ಮೆ ದೊಡ್ಡವರು ಅದರಲ್ಲಿ ಮೂಗು ತೂರಿಸುವುದರಿಂದ ಸಮಸ್ಯೆ ಉಲ್ಬಣವಾಗಬಹುದು. ಅದರಲ್ಲಿ ಕೆಲವು ಪೋಷಕರಿಗೆ ಕೆಲವು ಮಕ್ಕಳು ಇಷ್ಟವಾಗಿ ಅವರು ಆ ಮಗುವಿನ ಪರ ವಹಿಸಿ ಮಾತನಾಡುವ ಮೂಲಕ ತಪ್ಪು ಸಂದೇಶವನ್ನೂ ರವಾನಿಸುವರು.
ಸ್ಟೀಫನ್ ಕೋವಿ ಒಂದು ಕಡೆ ತನ್ನ ಅನುಭವವನ್ನು ಹಂಚಿಕೊಳ್ಳುತ್ತಾನೆ. ತರಗತಿಯಲ್ಲಿ ಅವನ ಮಗನಿಗೆ ಏನಾದರೂ ಸಮಸ್ಯೆ ಆದಾಗ ಅದನ್ನು ಬಗೆಹರಿಸಲು ಇವನೇ ಹೋಗುವನು. ಹಾಗೆ ಹೋಗುವುದರ ಮೂಲಕ, ಸಮಸ್ಯೆಯನ್ನು ಬಗೆಹರಿಸಲು ನಿನ್ನಿಂದ ಸಾಧ್ಯವಿಲ್ಲ, ಅದಕ್ಕೆ ನಾನೇ ಬರಬೇಕು ಎನ್ನುವ ಸಂದೇಶ ಕೊಡುತ್ತಿದ್ದೇನೆ, ಇದು ತಪ್ಪು ಎಂದು ಅವನಿಗೆ ಒಮ್ಮೆ ಅನಿಸುವುದು. ಸಮಸ್ಯೆ ಬಗೆಹರಿಸಲು ನೀನೇ ಪ್ರಯತ್ನಿಸು, ನಿನಗೆ ಅಗತ್ಯ ಉಂಟಾದರೆ ನಾನು ಬರುವೆ ಎಂದು ಅವನು ಮಗನಿಗೆ ಹೇಳುವನು.
ನಿನ್ನ ಕೈಲಿ ಆಗಲ್ಲ, ನಿನಗೆ ಬರಲ್ಲ ಎಂಬ ಪದಗಳು, ಅವರ ಕೆಲಸಗಳನ್ನು ಮಾಡಲು ನಾವೇ ಮುಂದಾಗುವುದು ಅವರ ಕಲಿಕೆಯನ್ನು ತಡೆಗಟ್ಟಿದ ಹಾಗೆ. ಅವರಿಗೆ ಉತ್ತಮ ಅಂಕ ಬರಲಿ ಎಂದು ಅವರ ಹೋಮ್‍ವರ್ಕನ್ನು ನಾವು ಮಾಡಿಕೊಡುವುದು ಅವರ ಕೌಶಲವನ್ನು ಕದ್ದ ಹಾಗೆ. ಅವರಲ್ಲಿ ಸರಿ-ತಪ್ಪುಗಳನ್ನು ಗುರುತಿಸುವ ಕೌಶಲವನ್ನು ಪ್ರಾರಂಭದಲ್ಲಿ ಹೇಳಿದ ಹಾಗೆ ಕಲಿಸಿಕೊಟ್ಟಿದ್ದರೆ, ಸಮಸ್ಯೆಗೆ ಪರಿಹಾರಗಳನ್ನೂ ಅವರೇ ಹುಡುಕಬಲ್ಲರು.
ಸುಳ್ಳು ಹೇಳುವುದನ್ನು ತಪ್ಪಿಸಲು
ಮೂರು ವರ್ಷದ ಮಗುವೊಂದು ಸುಳ್ಳು ಹೇಳುತ್ತಿತ್ತು. ಅದಕ್ಕೆ ನಿಜ ಮತ್ತು ಸುಳ್ಳುಗಳ ನಡುವೆ ವ್ಯತ್ಯಾಸವೇನೂ ಗೊತ್ತಿರಲಿಲ್ಲ. ಕೆಲವೊಮ್ಮೆ ತಾನು ಮಾಡದ ಕೆಲಸವನ್ನು ಮಾಡಿದ್ದೇನೆ ಎಂದು ಹೇಳಿದರೆ, ಅದಕ್ಕೆ ಷಹಬಾಸ್‍ಗಿರಿ ಸಿಗುತ್ತಿತ್ತು. ಹಾಗಾಗಿ ಕೆಲವೊಮ್ಮೆ ಹೊಗಳಿಕೆ ಸಿಗಬಹುದಾದಂತಹ ಸುಳ್ಳು ಹೇಳುತ್ತಿತ್ತು. ಅದರ ಅಮ್ಮ ಅದಕ್ಕೆ ಪಿನೋಕಿಯೋ ಕಥೆ ಹೇಳಿದಳು. ಆ ವಯಸ್ಸಿಗೆ ಅನುಗುಣವಾಗಿ ‘ಮೂಗು ಸ್ವಲ್ಪ ಉದ್ದ ಆಯಿತು. ಮತ್ತೂ ಸುಳ್ಳು ಹೇಳಿದ. ಇನ್ನಷ್ಟು ಉದ್ದ ಆಯಿತು. ಕೊನೆಗೆ ಅದು ಬಾಯಿಂದ ಕೆಳಗೆ ಇಳಿಯಿತು. ಆಗ ನೇರವಾಗಿ ಊಟವನ್ನು ಬಾಯಲ್ಲಿಟ್ಟುಕೊಳ್ಳಲಾಗದೆ, ಸೊಂಡಿಯಿಂದ ತಿನ್ನಬೇಕಾಯಿತು ಎಂದು ಹೇಳಿ, ಆ ನಂತರ ಅದು ತುಂಬ ಉದ್ದವಾಗಿ ನೆಲಕ್ಕೆ ತಗುಲಿತು. ನಡೆಯುವಾಗಲೆಲ್ಲ ಅವನಿಗೆ ನೋವಾಗಲು ಶುರುವಾಯಿತು. ಕೊನೆಗೆ, ಅಮ್ಮ, ಇನ್ನು ಮೇಲೆ ಸುಳ್ಳು ಹೇಳಲ್ಲ ಅಂದ. ಆ ನಂತರ ಕ್ರಮೇಣ ಮೂಗಿನ ಉದ್ದ ಕಡಿಮೆಯಾಗುತ್ತಾ ಹೋಗಿ ಸಹಜ ಸ್ಥಿತಿಗೆ ಬಂದಿತು ಎಂದು ವರ್ಣಿಸಿದಳು.
ಹೀಗೆ ಕಥೆಗಳನ್ನು ಅವರ ವಯಸ್ಸಿಗೆ ಪರಿವರ್ತಿಸಿ ಹೇಳಬಹುದು. ಅದರಲ್ಲಿರುವ ನೀತಿ ಪಾಠವನ್ನು ಪುನರುಚ್ಚರಿಸಬಹುದು- ಅವರಿಂದಲೇ ಹೇಳಿಸುವ ಮೂಲಕ.
ಮತ್ತೊಂದು ಉದಾಹರಣೆ- ಪಂಚತಂತ್ರದಲ್ಲಿ ಬರುವ ಪಾರಿವಾಳಗಳ ಬೇಟೆಯ ಪ್ರಸಂಗ. ‘ಕೆಳಗೆ ಅಕ್ಕಿ ಚೆಲ್ಲಿರುವುದನ್ನು ನೋಡಿ, ಮಕ್ಕಳು ಪಾರಿವಾಳಗಳು ತಿನ್ನಬೇಕು ಎಂದು ಹಠ ಹಿಡಿದವು. ಆಗ ಅಜ್ಜ ಪಾರಿವಾಳ, ಅವ್ವ ಪಾರಿವಾಳ, ಅಪ್ಪ ಪಾರಿವಾಳ, ಅಮ್ಮ ಪಾರಿವಾಳ ಎಲ್ಲ ಬೇಡ, ಅಲ್ಲಿ ಬೇಟೆಗಾರ ಕಾಯುತ್ತಿರುತ್ತಾನೆ, ಬಲೆ ಹಾಕಿ ಬಿಡುವನು ಎಂದು ಎಷ್ಟು ಹೇಳಿದರೂ ಈ ಪಾಪ ಪಾರಿವಾಳಗಳು ಕೇಳಲೇ ಇಲ್ಲ. ತಿನ್ನಲು ಹೋಗಲೇಬೇಕು ಎಂದು ಹಟ ಹಿಡಿದವು. ಕೊನೆಗೆ ಅವಕ್ಕೆ ಖುಷಿ ಪಡಿಸಲು ಹೋಗಿ ತಿನ್ನಲು ಕುಳಿತಾಗ ಬೇಟೆಗಾರ ಬಲೆ ಹಾಕಿದ. ಎಲ್ಲರೂ ಸಿಕ್ಕಿಹಾಕಿಕೊಂಡರು’ ಎಂದು ವರ್ಣಿಸಿ, ಅದಕ್ಕೇ ಹೇಳುವುದು, ದೊಡ್ಡವರು ಬೇಡ ಅಂದಾಗ ಹಠ ಹಿಡಿಯಬಾರದು ಮಕ್ಕಳು. ದೊಡ್ಡವರಿಗೆ ಅನುಭವಿರತ್ತೆ, ಏನಾಗತ್ತೆ ಅಂತ ಗೊತ್ತಿರತ್ತೆ ಎಂದು ಹೇಳುವುದು ನನ್ನ ಅಭ್ಯಾಸ.
ಮೊಮ್ಮಗ ಶಾಲೆಗೆ ಹೋಗಲು ಪ್ರಾರಂಭಿಸಿದಾಗ ನರ್ಸರಿ ಪಾರಿವಾಳ, ಎಲ್‍ಕೆಜಿ ಪಾರಿವಾಳ, ಯುಕೆಜಿ ಪಾರಿವಾಳ ಹಟ ಹಿಡಿದವು ಎಂದು ಹೇಳುತ್ತಿದ್ದೆ. ಅವನು ಯುಕೆಜಿಗೆ ಬಂದಾಗ, ‘ಇಲ್ಲ ಅಜ್ಜ, ಯುಕೆಜಿ ಪಾರಿವಾಳಕ್ಕೆ ಗೊತ್ತಿತ್ತು. ಅದಕ್ಕೆ ಅವು ಹಠ ಮಾಡುತ್ತಿರಲಿಲ್ಲ’ ಎಂದು ಹೇಳಲು ಪ್ರಾರಂಭಿಸಿದ!
ಬೇರೆ ಬೇರೆ ಪೌರಾಣಿಕ ಕಥೆಗಳು, ಪಂಚತಂತ್ರದ ಕಥೆಗಳು ಮಕ್ಕಳಿಗೆ ಜೀವನದ ಪಾಠವನ್ನು ಕಲಿಸಲು ನೆರವಾಗುತ್ತವೆ. ಅವರ ವಯಸ್ಸಿಗೆ ತಕ್ಕ ಭಾಷೆಯಲ್ಲಿ, ಅಭಿನಯಿಸಿಕೊಂಡು, ಹಾಸ್ಯ ತುಂಬಿಸಿ ಹೇಳಿದಾಗ ಮಕ್ಕಳು ತುಂಬ ಆನಂದಿಸುವರು. ಹಾಗೆ ಕೇಳಿದ ನೀತಿ ಪಾಠ ದೀರ್ಘಕಾಲ ಅವರ ಬದುಕಿನಲ್ಲಿ ಅವರಿಗೆ ಮಾರ್ಗದರ್ಶನ ಕೊಡುತ್ತದೆ.
ಮಕ್ಕಳು, ಪಾಪ, ಅವರಿಗೇನೂ ಗೊತ್ತಾಗಬಾರದು ಎಂದು ಅನೇಕರು ಕೆಲವು ಸಮಸ್ಯೆಗಳನ್ನು ಹಂಚಿಕೊಳ್ಳುವುದಿಲ್ಲ. ಆರ್ಥಿಕ ಸಮಸ್ಯೆ ಕುರಿತು ತಿಳಿಸಿ ಹೇಳುವುದು, ಅದರಿಂದ ಆಚೆ ಬರಲು ತಾವು ಮಾಡುತ್ತಿರುವ ಪ್ರಯತ್ನಗಳನ್ನೂ ಮಕ್ಕಳ ಗಮನಕ್ಕೆ ತರುವುದು ಬಹಳ ಮುಖ್ಯ. ಒಬ್ಬ ಹುಡುಗ 9ನೆಯ ತರಗತಿಯಲ್ಲಿ ಓದುತ್ತಿದ್ದ. ಕೆಲವು ಹುಡುಗಿಯರಿಗೆ ಹಿಂಸೆ ಮಾಡುತ್ತಿದ್ದ. ಆ ಹುಡುಗಿಯರ ದೂರಿನ ಮೇಲೆ ಅವನಿಗೆ ಬುದ್ಧಿ ಮಾತು ಹೇಳಿದರು, ಅವನೂ ತಪ್ಪು ಒಪ್ಪಿಕೊಂಡು ಇನ್ನು ಮೇಲೆ ಹಾಗೆ ಮಾಡುವುದಿಲ್ಲ ಎಂದು ಶಿಕ್ಷಕರಿಗೆ ಮಾತು ಕೊಟ್ಟ. ವಿಷಯ ಮನೆಯಲ್ಲಿ ತಿಳಿದಾಗ ಅವನ ಅಪ್ಪ ‘ನನ್ನ ಮಗನಿಗೆ ಬುದ್ದಿ ಮಾತು ಹೇಳಲು ನೀವು ಯಾರು’ ಎಂದು ಶಿಕ್ಷಕರ ಮೇಲೆ ಹಾರಾಡಿದ. ಅದನ್ನು ಕಂಡ ಹುಡುಗ ತನ್ನ ಹಳೆಯ ಚಾಳಿಯನ್ನು ಮುಂದುವರೆಸಿದ.
ತಪ್ಪನ್ನು ತಿದ್ದದಿದ್ದರೆ…
ಇಂತಹ ತಪ್ಪನ್ನು ಪೋಷಕರು ಮಾಡಬಾರದು. ತಪ್ಪು ತಪ್ಪೇ, ತಿದ್ದಿಕೊಳ್ಳದಿದ್ದರೆ, ಶಿಕ್ಷೆ ಎದುರಿಸಬೇಕಾಗುವುದು ಎಂಬುದನ್ನು ಮಕ್ಕಳಿಗೆ ಹೇಳಿಕೊಡುವುದು ಪೋಷಕರ ಹೊಣೆಗಾರಿಕೆ. ಅದನ್ನು ಅವರು ಸಮರ್ಥವಾಗಿ ನಿಭಾಯಿಸದಿದ್ದರೆ, ಮುಂದೆ ತಮ್ಮ ಸಂಪಾದನೆ, ಸಮಯವನ್ನೆಲ್ಲ ಮಕ್ಕಳನ್ನು ರಕ್ಷಿಸಿಕೊಳ್ಳಲು ವಿನಿಯೋಗ ಮಾಡಬೇಕಾಗುವುದು.
‘ನಮ್ಮ ಮಕ್ಕಳು, ನಾವು ಹೇಗೆ ಬೇಕೋ ಹಾಗೆ ಸಾಕುತ್ತೇವೆ’ ಎಂದು ಕೆಲವು ಪೋಷಕರು ನನ್ನೊಡನೆ ವಾದಿಸಿರುವುದುಂಟು.
‘ನಿಮ್ಮ ಮನೆಯೊಳಗೆ ನಿಮ್ಮ ಮಕ್ಕಳು. ಹೊಸಿಲು ದಾಟಿ ಹೊರಗೆ ಕಾಲಿಟ್ಟಾಗ ಅವರು ಸಮಾಜದ ಅವಿಭಾಜ್ಯ ಅಂಗ. ಸಮಾಜದ ಕಟ್ಟುಪಾಡುಗಳಿಗೆ, ನೀತಿ ನಿಯಮಗಳಿಗೆ ಬದ್ಧರಾಗಿ ನಡೆಯದೇ ಹೋದರೆ ಕೊನೆಗೆ ಸಮಾಜವೇ ಅವರನ್ನು ಶಿಕ್ಷಿಸುವುದು. ಆಗ ನಮ್ಮ ಮಕ್ಕಳು ಎಂದು ವಾದಿಸಿದರೆ ಯಾರೂ ಕೇಳುವುದಿಲ್ಲ’ ಎಂದು ಅವರಿಗೆ ಹೇಳಿದೆ.
ಇದನ್ನು ಎಲ್ಲ ಪೋಷಕರೂ ನೆನಪಿಡಬೇಕು. ಮಕ್ಕಳು ಖಂಡಿತ ನಿಮ್ಮ ಖಾಸಗೀ ಆಸ್ತಿಯಲ್ಲ. ಅವರಿಗೆ ಅವರದೇ ಆದ ಹಕ್ಕುಗಳಿವೆ. ಉತ್ತಮ ಬಾಲ್ಯ ಅವುಗಳ ಪೈಕಿ ಒಂದು. ಅವರೊಳಗೆ ಹುದುಗಿರುವ ಬುದ್ಧಿವಂತಿಕೆ/ಕೌಶಲಗಳನ್ನು ಹೊರತೆಗೆಯಲು ಬೇಕಾದ ಪೂರಕ ವಾತಾವರಣವನ್ನು ನಿರ್ಮಿಸುವುದು ಪೋಷಕರ, ಶಿಕ್ಷಕರ ಕರ್ತವ್ಯ. ಮೌಲ್ಯಗಳು, ಬದುಕುವ ಕೌಶಲ, ಸಮಾಜದಲ್ಲಿ ಹೊಂದಿಕೊಂಡು ಹೋಗುವುದು, ಸ್ವಂತ ಸಾಮರ್ಥ್ಯದಿಂದ ಸಂಪಾದಿಸುವುದು ಮತ್ತು ಸಭ್ಯ ನಡೆವಳಿಕೆಗಳನ್ನು ಮಕ್ಕಳಿಗೆ ಸಕಾಲದಲ್ಲಿ ಕಲಿಸಿದರೆ, ಅಂತಹ ಮಕ್ಕಳನ್ನು ಕುರಿತು ಯೋಚನೆ/ಆತಂಕಗಳಿಲ್ಲದೆ ನೆಮ್ಮದಿಯ ಮುಪ್ಪಿನ ದಿನಗಳನ್ನು ಪೋಷಕರು ಆನಂದಿಸಬಹುದು.
ಇದನ್ನೂ ಓದಿ : Anger Management : ಯಾಕೆ ಅವನಿಗೆ ಸಿಟ್ಟು ಬರಸ್ತೀಯಾ?
parenting guidelines by writer r srinagesh
Published On - 12:01 pm, Fri, 16 April 21