Poornachandra Tejaswi Death Anniversary : ಗೌರಿ ಬಸ್ಸಿನ ಗಡಿಬಿಡಿಯಲ್ಲಿ ಸುರೇಶನ ಕಡೆ ನೋಡಿದಳು. ಸುರೇಶನಿಗೂ ಅವಳಿಗೂ ನಡುವೆ ಯಾರೋ ಇಬ್ಬರು ಅಡ್ಡ ಕುಳಿತಿದ್ದರಿಂದ ಸುರೇಶ ಅವಳಿಗೆ ಕಾಣುತ್ತಿರಲಿಲ್ಲ. ಅಡ್ಡ ಕುಳಿತಿದ್ದ ಅವರಿಬ್ಬರ ಮುಖಗಳನೇ ನೋಡಿದಳು. ಅವರನ್ನು ನೋಡಿದ ಕೂಡಲೆ ಅವಳಿಗನ್ನಿಸಿದ್ದು ಮೊದಲನೆಯದು ಇವರಿಬ್ಬರೂ ಇಲ್ಲಿಗೆ ಅಪರಿಚಿತರು! ಎರಡನೆಯದು ಇವರಿಬ್ಬರೂ ಒಳ್ಳೆಯವರಲ್ಲ ಎಂದು. ಹುಡುಗಿಯರನ್ನು ಹಿಡಿದು ಬೊಂಬಾಯಿಗೆ ಸಾಗಿಸುವುದರಿಂದ ಹಿಡಿದು ಗಾಂಜಾ ಅಫೀಮಿನವರೆಗೆ ಇಲ್ಲಿ ನಡೆಯುವ ನೂರಾರು ವ್ಯವಹಾರಗಳಲ್ಲಿ ಯಾವುದೋ ಒಂದಕ್ಕೆ ಸಂಬಂಧಿಸಿದವರು ಎಂದು ಅವಳಿಗೆ ಸ್ಪಷ್ಟವಾಗಿ ಅನ್ನಿಸಿತು. ಆದರೆ ಅವಳಿಗೆ ಹೆದರಿಕೆಯೇನೂ ಆಗಲಿಲ್ಲ. ಸ್ತ್ರೀ ಸಹಜವಾದ ಅದೊಂದು ಗುಣ ಮಾತ್ರ ಅವಳಲ್ಲಿರಲೇ ಇಲ್ಲ. ಮಂಗಳೂರಿನಲ್ಲಿ ಮೈಕ್ರೋ ಬಯಾಲಜಿ ಓದುತ್ತಾ ಇದ್ದವಳು ರಜಕ್ಕೆ ಊರಿಗೆ ಬಂದಾಗ ಅವಳಿಗೆ ಏನೆನ್ನಿಸಿತೋ ಏನೋ, ಮತ್ತೆ ಓದಲು ಹೋಗಲೇ ಇಲ್ಲ.
ತೇಜಸ್ವಿಯವರ ‘ಜುಗಾರಿ ಕ್ರಾಸ್’ ನಿಂದ ತಮಗಿಷ್ಟವಾದ ಆಯ್ದ ಭಾಗ ಕಳಿಸಿದವರು ಬೆಂಗಳೂರಿನಲ್ಲಿರುವ ನಟ ಜಯದೇವ ಮೋಹನ್.
ರೈಗಳು ಒಂದೆರಡು ಸಾರಿ ಹೇಳುವುದೇನೋ ಹೇಳಿದರು, ಇಷ್ಟು ಓದಿ ಈಗ ಕೈ ಬಿಡಬಾರದು ಎಂದು. ಆದರೆ ಅವರಿಗೆ ಚೆನ್ನಾಗಿ ಗೊತ್ತಿತ್ತು ಇವಳು ಒಂದುಸಾರಿ ನಿರ್ಧರಿಸಿದರೆ ಮೇಲೆ ಯಾರ ಮಾತನ್ನೂ ಕೇಳುವ ಜಾತಿಯೇ ಅಲ್ಲ ಎಂದು. ಸುರೇಶನಿಂದ ವಿಮುಖಗೊಳಿಸಲು ಪ್ರಯತ್ನಿಸಿದಾಗಲೂ ಅವರು ಇದೇ ತೊಂದರೆ ಅನುಭವಿಸಬೇಕಾಯ್ತು. ಎಂತೆಂಥವರನೋ ಮದುವೆಯಾಗುವುದಿಲ್ಲೊಂದು ತಿರಸ್ಕರಿಸಿದವಳು ಸುರೇಶನನ್ನು ಬಿಟ್ಟರೆ ಯಾರನ್ನೂ ಆಗುವುದಿಲ್ಲೆಂದು ಹಠ ಹಿಡಿದು ಕುಳಿತಳು. ಮದುವೆ ಅನಿವಾರ್ಯವಾದಾಗ ಹೆಂಡತಿ ಕಟ್ಟಿಕೊಂಡು ಬೀದಿಗೆ ಬಿದ್ದಾನೆಂದು ಸುರೇಶನ ತಂದೆಯೇ ಮುಂದಾಗಿ ಅವನಿಗೆ ಅವನ ಪಾಲೆಂದು ಹತ್ತು ಲಕ್ಷ ಕೊಟ್ಟು ರಬ್ಬರ್ ತೋಟ ಮಾಡಿರೆಂದು ಗಂಡ ಹೆಂಡರಿಗೆ ದಿನವೆಲ್ಲಾ ಬುದ್ಧಿವಾದ ಹೇಳಿದ್ದರು.
ಸುರೇಶ ರಬ್ಬರ್ ತೋಟ ಮಾಡಲು ಕಾಡನ್ನೇನೋ ಕೊಂಡ, ಸುಮ್ಮನೆ ಹತ್ತು ಲಕ್ಷ ಬ್ಯಾಂಕಿನಲ್ಲಿ ಬಿಸಾಕಿದ್ದರೆ ಸುರೇಶನಿಗೆ ಹೊಟ್ಟೆಪಾಡಿಗೆ ತಕ್ಕಷ್ಟು ಬಡ್ಡಿ ಬರುತ್ತಿತ್ತು! ಅದು ಬಿಟ್ಟು ತೋಟ ಮಾಡಲು ಕಾಡು ಕೊಂಡಿದ್ದೆ ದೊಡ್ಡ ಅಚಾತುರ್ಯಕ್ಕೆ ಕಾರಣವಾಗಿದ್ದು. ಗಂಡ ಹೆಂಡತಿ ಇಬ್ಬರಲ್ಲಿ ಒಬ್ಬರಿಗಾದರೂ ಲೋಕಜ್ಞಾನ ಇದ್ದಿದ್ದರೆ ಹೇಗೋ ಇವರ ಸಂಸಾರ ನೌಕೆ ಸುಗಮವಾಗಿ ಸಾಗುವ ಸಂಭವ ಇತ್ತು. ಆದರೆ ಇಬ್ಬರೂ ಒಂದೇ ತರದವರು. ಸುರೇಶನ ಕನಸುಗಾರಿಕೆಗೆ, ಹುಚ್ಚಾಟಗಳಿಗೆ ಮೆಚ್ಚಿಯೇ ಇವಳು ಅವನನ್ನು ಕಟ್ಟಿಕೊಂಡಿರಬೇಕಾದರೆ ಯಾರೇನು ಮಾಡಲು ಸಾಧ್ಯ? ಕಾಡು ಕೊಂಡಿದ್ದು ಹಾರುವ ಮಂಗಕ್ಕೆ ಏಣಿ ಹಾಕಿಕೊಟ್ಟಂತಾಗಿ ಇಬ್ಬರೂ ದಿನಕ್ಕೊಂದೊಂದು ಯೋಜನೆ ಹಾಕಿ ಕಾಡುಕೊಂಡು ಉಳಿದಿದ್ದ ದುಡ್ಡಷ್ಟನ್ನೂ ಮಾಯ ಮಾಡಿದರು. ರಬ್ಬರ್ ಗಿಡ ಒಂದನ್ನು ಬಿಟ್ಟು ಮಿಕ್ಕಿದ್ದೆಲ್ಲಾ ಹಾಕಿದರು. ಸೀ ಐಲೆಂಡ್ ಕಾಟನ್ನು, ಕಾಶ್ಮೀರದ ಕಂಟೆಂಡರ್ ಬೀನ್ನು, ಹಾಲೆಂಡಿನ ಆಲೂಗಡ್ಡೆ, ಆಫ್ರಿಕಾದ ಅಸ್ಸಿರಿಯಾ ಮ್ಯುಟುಂಡ ನೆಲಗಡಲೆ, ಇವುಗಳಲ್ಲದೆ ಕಾಶ್ಮೀರದಿಂದ ಕೇಸರಿ, ಸಿಲೋನಿನಿಂದ ದಾಲ್ಟಿನ್ನಿ, ಇನ್ನೂ ಎಂತೆಂಥವೋ ಪ್ರಯೋಗಗಳು ನಡೆದುವು. ಅವರ ಲೆಕ್ಕಾಚಾರದ ಪ್ರಕಾರವೇ ಎಲ್ಲ ನಡೆದಿದ್ದರೆ ಇಷ್ಟು ಹೊತ್ತಿಗೆ ಅವರಿಬ್ಬರೂ ಕೋಟ್ಯಾಧಿಪತಿಗಳೇ ಸರಿ. ಲೆಕ್ಕಾಚಾರಗಳನ್ನೆಲ್ಲ ಅವರು ಇನ್ನೊಬ್ಬರ ಬಾಯಿ ಮುಚ್ಚಿಸಲಿಕ್ಕಾಗಿ ಕೊಡುತ್ತಿದ್ದುದೇ ಹೊರತು ಅವರಾದರೂ ಅದನ್ನು ನಂಬಿದ್ದರೆ ಹೇಳಬರುವುದಿಲ್ಲ. ಜೊತೆಗೆ ಮಾಡಿದ್ದೆಲ್ಲ ಮಣ್ಣುಗೂಡಿತಲ್ಲ ಎಂದು ಒಂದು ಚೂರಾದರೂ ಬೇಸರವಿಲ್ಲದೆ ಒಂದನ್ನು ಕೈಬಿಟ್ಟು ಇನ್ನೊಂದು ಹುಚ್ಚಾಟ ಅವರು ಪ್ರಾರಂಭಿಸುತ್ತಿದ್ದುದನ್ನು ನೋಡಿ ಆಸುಪಾಸಿನವರಿಗೆಲ್ಲಾ ಓದಿದವರು ಮನೆ ಹಾಳುಮಾಡುತ್ತಾರೆಂಬ ನಾಣ್ಣುಡಿಯಲ್ಲಿ ಸಂಪೂರ್ಣ ನಂಬಿಕೆ ಬಂತು.
ಇದನ್ನೂ ಓದಿ : Poornachandra Tejaswi Death Anniversary: ಆ ಮುದುಕಿ ಮೈ ಮುಟ್ಟಿದರೆ ನನ್ನ ತಾಳಿ ಆಣೆ, ಮುಸುಡಿಗೆ ಒರಲೆ ಹಿಡಿಯಾ
ಆ ಕಾಡಿನಲ್ಲಿ ಬಿಸಾಡಿದಲ್ಲೆಲ್ಲಾ ಹುಟ್ಟಿಕೊಂಡು ಬೆಳೆಯುತ್ತಿದ್ದ ಏಲಕ್ಕಿ ಇಲ್ಲದಿದ್ದರೆ ಸುರೇಶನಿಗೆ ಹೊಟ್ಟೆಪಾಡಿಗೂ ತೊಂದರೆ ಇತ್ತೆಂಬುದರಲ್ಲಿ ಅನುಮಾನವೇ ಇಲ್ಲ. ಕೋತಿ, ಅಳಿಲು, ಹಕ್ಕಿ, ತಿಂದು ಹಿಕ್ಕೆ ಹಾಕಿದಲ್ಲೆಲ್ಲ ಏಲಕ್ಕಿ ಹುಟ್ಟಿ, ಧರ್ಮಕ್ಕೆ ದುಡ್ಡು ಸಿಕ್ಕ ಹಾಗೆ ಸುರೇಶನಿಗೆ ಸಿಗುತ್ತಿತ್ತು. ಆದರೆ ಎಷ್ಟು ದುಡ್ಡು ಬಂದರೂ ಏನುತಾನೆ ಪ್ರಯೋಜನ ಅದು ಬರುವುದಕ್ಕೂ ಮೊದಲೆ ಅದಕ್ಕೆ ಬೇಕಾದಷ್ಟು ದಾರಿಗಳು ಇವರ ತಲೆಯೊಳಗೆ ರೆಡಿ ಇರುತ್ತಿದ್ದುವು. ಇವರಿಬ್ಬರಿಗೂ ಮನೆ ಕಡೆ ದುಡ್ಡು ಕಾಸು ಚೆನ್ನಾಗಿರುವುದರಿಂದಲೇ ಈ ರೀತಿ ಐಲುವೈಲು ವ್ಯವಹಾರ ಮಾಡಿಕೊಂಡು ಕಾಲಕಳೆಯುತ್ತಿದ್ದಾರೆಂದು ರೈಗಳೂ ಸುರೇಶನ ತಂದೆಯೂ ತಿಳಿದಿದ್ದರೂ ಅವರ ಊಹೆಗೆ ವ್ಯತಿರಿಕ್ತವಾಗಿ ಇವರು ದುಡ್ಡಿಗಾಗಿ ಯಾವತ್ತೂ ಯಾರ ಮನೆಯ ಮೆಟ್ಟಿಲನ್ನೂ ಹತ್ತಲಿಲ್ಲ. ಬೀಗರು, ಶಿಕ್ಷಕರು, ಬ್ಯಾಂಕಿನಲ್ಲಿ ಕ್ಯೂರಿಟಿ ಕೊಟ್ಟವರು, ಎಲ್ಲ ಇವರ ಆಟ ಇವತ್ತು ಮುಗಿಯಬಹುದು, ನಾಳೆ ಮುಗಿಯಬಹುದು ಎಂದು ನಿರೀಕ್ಷಿಸುತ್ತಲೇ ಇದ್ದರೂ ಇವರ ಸಂಸಾರ ನೌಕೆ ಕ್ಯಾಪ್ಟನ್ ಖುದ್ದೂಸನ ಘಾಟಿ ಎಕ್ಸ್‌ಪ್ರೆಸ್ ತರ ನಿಲ್ಲದೆ ಸಾಗುತ್ತಲೇ ಇತ್ತು.
ಗೌರಿ ಅವರಿಬ್ಬರು ಆಗಂತುಕರ ಮುಖ ನೋಡಿ ಏನನೋ ಯೋಚನೆ ಮಾಡುತ್ತಿರಬೇಕಾದರೆ ಒಂದು ಪೋಲೀಸ್ ಜೀಪು ಹಿಂದುಗಡೆಯಿಂದ ಒಂದೇಸಮ ಹಾರನ್ ಮಾಡಿದ ಸದ್ದು ಕೇಳಿಸಿತು. ಎತ್ತಿನ ಗಾಡಿ ತರ ಸಾಗುತ್ತಿದ್ದ ಖುದ್ದೂಸ್ ಎಕ್ಸ್‌ಪ್ರೆಸ್ ಹಿಂದೆ ಧೂಳು ಕುಡಿಯುತ್ತ ಯಾರಾದರೂ ಎಷ್ಟು ದೂರ ತಾನೆ ಬರಲು ಸಾಧ್ಯ. ಜೀಪಿನಲ್ಲಿದ್ದವರೆಲ್ಲ ಸಿಕ್ಕಾಪಟ್ಟೆ ಅಸಹನೆಯಿಂದ ಹಾರನ್ ಮಾಡಿ ಕೈ ಬೀಸಾಡಿದ್ದನ್ನು ನೋಡಿದ ಕಂಡಕ್ಟರ್ ಬಸ್ಸಿನೊಳಗಿಂದಲೇ ಸೆಡ್ ಸೈಡ್” ಎಂದು ಅಬ್ಬರಿಸಿ ಕೂಗಿದ. ಜೀಪು ಮುಂದೆ ಹೋಯ್ತು.
ಇದನ್ನೂ ಓದಿ : Poornachandra Tejaswi Death Anniversary: ‘ಹಲ್ಲು ಕಿರಿಯೋ ಮೂತಿಯಷ್ಟೇ ತೆಗೀತೀಯ! ಶಾಸ್ತ್ರಾಚಾರನೂ ತೆಕ್ಕೊ’