Poornachandra Tejaswi Death Anniversary: “ಪರ್ವಾಗಿಲ್ಲ ಮಾರಾಯ, ಸುಮಾರಾಗಿ ರಿಪೇರಿ ಕಲ್ತಿದೀಯ?”
Annana Nenapu : ಅಣ್ಣನಿಗೆ ನನ್ನ ರಿಪೇರಿ ನೋಡಿ ಕಳವಳ ಪಡುವುದಕ್ಕೆ ಸಾಕಷ್ಟು ಹಿನ್ನೆಲೆ ಇತ್ತು. ನನ್ನ ರಿಪೇರಿ ಚಾಳಿಯಿಂದ ಬೇಕಾದಷ್ಟು ಸಾಮಾನುಗಳನ್ನು ಹಾಳುಮಾಡಿದ್ದು ಅವರು ಕಣ್ಣಾರೆ ನೋಡಿದ್ದರು' ಡಾ. ಲೀಲಾ ಅಪ್ಪಾಜಿ ಅವರಿಗೆ ಇಷ್ಟವಾದ ಈ ಕೃತಿಯ ಭಾಗ ಇದು.
Poornachandra Tejaswi Death Anniversary : ಅಷ್ಟು ದೊಡ್ಡ ಸ್ಕೂಟರನ್ನು ನೀನು ಒಂದು ಗೋಣಿಚೀಲದ ಗಾತ್ರಕ್ಕೆ ಕುಗ್ಗಿಸಿದ್ದು ಹ್ಯಾಗೋ ಮಹರಾಯ! ಏನು ಅದರ ತಗಡಿನ ಭಾಗಗಳನ್ನೆಲ್ಲಾ ಮಡಚಿ ಇದರೊಳಗೆ ತುಂಬಿದಿಯೋ ಹೇಗೆ?” ಎಂದೆನ್ನುತ್ತಾ ಚೀಲದ ಬಾಯಿ ಸರಿಸಿ ಒಳಗಿಣುಕಿದರು. ನಮ್ಮ ಮನೆ ಗುಜರಿ ಪೆಟ್ಟಿಗೆಯಂತೆಯೇ ಕಾಣುತ್ತಿದ್ದ ಅದನ್ನು ನೋಡಿ “ಇಷ್ಟರಮಟ್ಟಿಗೆ ಅದನ್ನು ಬಿಚ್ಚಬಹುದು ಅಂತ ನನಗೆ ಗೊತ್ತಿರಲಿಲ್ಲ. ಬಿಡು, ಅದಿರಲಿ, ನೀನು ಇದನ್ನೆಲ್ಲಾ ಮತ್ತೆ ಜೋಡಿಸಿ ಅದನ್ನು ಮೊದಲಿನ ಸ್ಥಿತಿಗೆ ತರುವುದು ಹೌದಾ?” ಎಂದು ಸಂಪೂರ್ಣ ಅಪನಂಬಿಕೆಯಿಂದ ಕೇಳಿದರು. “ಓಯಸ್! ಅದೇನು ಮಹಾ! ಈಗ ಹ್ಯಾಗೆ ಅದನ್ನೆಲ್ಲಾ ಬಿಚ್ಚಿದೆನೋ ಹಂಗೇ ಒಂದೊಂದಾಗಿ ಅದನ್ನೆಲ್ಲಾ ಫಿಟ್ ಮಾಡುತ್ತಾ ಬಂದರೆ ಸರಿ” ಎಂದೆ ನನ್ನ ಎಂದಿನ ಉಡಾಫೆ ದನಿಯಲ್ಲಿ. “ಹಾಗಾದರೆ ಚೀಲದೊಳಗೆ ಯಾಕೆ ತುಂಬಿಟ್ಟಿದ್ದೀಯ?” “ಎಂತಿದ್ದರೂ ಬಿಚ್ಚಿದ್ದೀನಲ್ಲಾ, ಅದರ ಬಾಡಿಗೆ ಒಂದು ಕೋಟ್ ಪೇಂಟ್ ಮಾಡಿಸಿ ಆಮೇಲೆ ಫಿಟ್ ಮಾಡುತ್ತೇನಣ್ಣ. ಆಮೇಲೆ ಅದು ಹೊಸ ಸ್ಕೂಟರ್ ಹಾಗೆ ಕಾಣದಿದ್ದರೆ ಕೇಳಿ!” ಎಂದೆ.
ತೇಜಸ್ವಿಯವರ ‘ಅಣ್ಣನ ನೆನಪು’ ಕೃತಿಯಿಂದ ಮಂಡ್ಯದ ಡಾ. ಲೀಲಾ ಅಪ್ಪಾಜಿ ಅವರಿಗೆ ಇಷ್ಟವಾದ ಈ ಭಾಗ.
ಅಣ್ಣನಿಗೆ ನನ್ನ ರಿಪೇರಿ ನೋಡಿ ಕಳವಳ ಪಡುವುದಕ್ಕೆ ಸಾಕಷ್ಟು ಹಿನ್ನೆಲೆ ಇತ್ತು. ನನ್ನ ರಿಪೇರಿ ಚಾಳಿಯಿಂದ ಬೇಕಾದಷ್ಟು ಸಾಮಾನುಗಳನ್ನು ಹಾಳುಮಾಡಿದ್ದು ಅವರು ಕಣ್ಣಾರೆ ನೋಡಿದ್ದರು. ಆದರೆ ಅವುಗಳೆಲ್ಲದರ ಫಲವಾಗಿ ನಾನು ಪಡಕೊಂಡ ಪರಿಣತಿ ಮತ್ತು ಆತ್ಮವಿಶ್ವಾಸ ಅವರ ಕಣ್ಣಿಗೆ ಕಾಣುತ್ತಿರಲಿಲ್ಲ. ಸ್ಕೂಟರ್ ಬಿಚ್ಚಿದಷ್ಟು ಮತ್ತೆ ಜೋಡಿಸುವುದು ಸುಲಭವಲ್ಲ ಎಂದು ಅವರು ಹೇಳಿದ್ದು ಸುಳ್ಳಲ್ಲ. ಆದರೆ ಅದಕ್ಕೆಲ್ಲ ಹೆದರಿ ಸುಮ್ಮನಿರಲಾಗುತ್ತದೆಯೇ? ನಾನು ಈ ಸಾರಿ ಅದನ್ನು ನಿರ್ದಾಕ್ಷಿಣ್ಯವಾಗಿ ಬಿಚ್ಚಿಹಾಕುತ್ತಿದ್ದ ಪರಿ, ನನ್ನ ಅಲಕ್ಷ್ಯ, ಆತ್ಮವಿಶ್ವಾಸಗಳನ್ನು ನೋಡಿ ಅವರಿಗೆ ಇವನು ರಿಪೇರಿ ಕಲಿತುಕೊಂಡಿದ್ದರೂ ಇರಬಹುದು ಎಂದು ಅನುಮಾನ ಬಂದಿರಬಹುದು. ನಾನು ಅದರ ಬಾಡಿ, ಮಡ್ಗಾರ್ಡ್ ಇವಕ್ಕೆಲ್ಲಾ ಬಣ್ಣ ಹೊಡೆಸಿ ತಂದು ಒಂದೊಂದಾಗಿ ಫಿಟ್ ಮಾಡಿದೆ. ಎಂಜಿನ್ ಕೇಸಿಂಗಿಗೂ ಅಲ್ಯೂಮಿನಿಯಂ ಬಫಿಂಗ್ ಮಾಡಿಸಿ ಫಳಫಳ ಹೊಳೆಯುವಂತೆ ಮಾಡಿದ್ದೆ. ಅದನ್ನೆಲ್ಲಾ ಫಿಟ್ ಮಾಡಿದ ಮೇಲೆ ನನ್ನ ಸ್ಕೂಟರು ಹೊಸ ಗಾಡಿಗಿಂತ ಚೆನ್ನಾಗಿ ಹೊಳೆಯಲು ಶುರುವಾಯ್ತು. ನನಗೆ ನಿಜಕ್ಕೂ ತೊಂದರೆ ಇದ್ದಿದ್ದು ಎಲ್ಲಾ ಫಿಟ್ ಮಾಡಿದ ಮೇಲೆ ಮಾಡಬೇಕಾದ ಅದರ ಸೂಕ್ಷ್ಮ ಅಡ್ಜಸ್ಟ್ಮೆಂಟುಗಳಲ್ಲಿ. ಪಾಯಿಂಟ್ ಸೆಟ್ಟು, ಇಗ್ನಿಷನ್ ಟೈಮಿಂಗ್ ಮುಂತಾದ ಇಂಜಿನಿನ ಕಾರ್ಯದಕ್ಷತೆಗೆ ಬೇಕಾದ ಸೂಕ್ಷ್ಮಗಳನ್ನು ಅಡ್ಜೆಸ್ಟ್ ಮಾಡುವಲ್ಲಿ. ಅದಕ್ಕಾಗೇ ಗಲ್ಲಿಗಲ್ಲಿ ತಿರುಗಿ ಅದಕ್ಕೆ ಸಂಬಂಧಿಸಿದ ವಿವರಗಳಿರುವ ಒಂದು ಪುಸ್ತಕ ಕೊಂಡು ತಂದಿದ್ದೆ.
ಇದನ್ನೂ ಓದಿ : Poornachandra Tejaswi Death Anniversary: ಕಾಶ್ಮೀರದ ಕಂಟೆಂಡರ್ ಬೀನ್ನು, ಹಾಲೆಂಡಿನ ಆಲೂಗಡ್ಡೆ
ಚೀಲದಲ್ಲಿ ಮೂಟೆಕಟ್ಟಿ ಬಿದ್ದಿದ್ದ ನೂರಾರು ಸರಕುಗಳನ್ನೆಲ್ಲಾ ಒಂದೊಂದಾಗಿ ಜೋಡಿಸಿ ಸ್ಕೂಟರು ರೂಪ ಪಡೆಯುತ್ತಿದ್ದುದನ್ನು ನೋಡಿ ಅಣ್ಣನಿಗೆ ತುಂಬಾ ಖುಷಿಯಾಗಿ “ಪರ್ವಾಗಿಲ್ಲ ಮಾರಾಯ, ಸುಮಾರಾಗಿ ರಿಪೇರಿ ಕಲ್ತಿದೀಯ?” ಎಂದು ತಲೆದೂಗಿದರು. ನಾನು ಎಂ.ಎ ಪಾಸು ಮಾಡಿದಾಗಲೂ ಅಣ್ಣನಿಗೆ ಅಷ್ಟೇನೂ ಸಂತೋಷವಾಗಿರಲಿಲ್ಲ. ಏಕೆಂದರೆ ಅದನ್ನೆಲ್ಲಾ ಅವರೂ ಸಾಧಿಸಿದ್ದರು. ಆದರೆ ಸ್ಕೂಟರ್ ಸಂಪೂರ್ಣ ಬಿಚ್ಚಿ ರಿಪೇರಿ ಮಾಡಿ ಮತ್ತೆ ಅದನ್ನು ಜೋಡಿಸಿದ್ದು ಅವರ ಜೀವನದಲ್ಲಿ ಅವರು ಸಾಧಿಸದ ಸಾಧನೆಯಾದ್ದರಿಂದ ನಾನು ನಿಜಕ್ಕೂ ಪ್ರತಿಭಾವಂತನೇ ಇರಬಹುದು ಎಂದು ಅವರಿಗೆ ಅನ್ನಿಸಿರಬೇಕು.
ನಾನು ನನ್ನ ಸ್ಕೂಟರು ಸ್ಟಾರ್ಟ್ ಮಾಡಿಕೊಂಡು ಒಂದು ರೌಂಡು ಪರೀಕ್ಷಾರ್ಥ ಪೇಟೆವರೆಗೆ ಹೋಗಿ ಹಿಂದಿರುಗಿ ಬಂದಾಗ ಚಿಂತಾಕ್ರಾಂತರಾಗಿ ನಾನು ರಿಪೇರಿ ಮಾಡುತ್ತಿದ್ದ ಜಾಗದಲ್ಲಿ ನಿಂತಿದ್ದರು. ನನ್ನನ್ನು ನೋಡಿ “ಅಲ್ಲೋ, ಬೇಕಾದಷ್ಟು ಸಾಮಾನು ಜೋಡಿಸುವುದು ಮರೆತು ಇಲ್ಲೇ ಬಿಟ್ಟಿದ್ದೀಯಲ್ಲೋ, ಇದು ಯಾವತರ ರಿಪೇರಿ ನಿಂದು” ಎಂದು ಅಲ್ಲೆಲ್ಲಾ ಚದುರಿ ಬಿದ್ದಿದ್ದ ಅನೇಕ ಸಾಮಾನುಗಳನ್ನು ತೋರಿಸಿದರು.
“ಅವೆಲ್ಲಾ ಬೇಡಾಂತ ಬಿಸಾಕಿ ಬದಲಿಗೆ ಹೊಸವನ್ನು ತಂದು ಹಾಕಿದ್ದೇನಣ್ಣಾ. ಅಷ್ಟು ಸಾಮಾನು ಹಾಕದೆ ಮರೆತರೆ ಆ ಸ್ಕೂಟರ್ ಓಡಿಸಲು ಸಾಧ್ಯವ?” ಎಂದೆ. ಅಣ್ಣನಿಗೆ ಅನುಮಾನ! ಅವನ್ನು ಎಲ್ಲಿ ಜೋಡಿಸುವುದು ಎನ್ನುವುದು ತಿಳಿಯದೆ ಮರೆತು ಇಲ್ಲಿ ಜೋಡಿಸುವುದು ಎನ್ನುವುದು ತಿಳಿಯದೆ ಮರೆತು ಇಲ್ಲಿ ಬಿಸಾಕಿದ್ದಾನೆ ಎಂದು.
ಇದನ್ನೂ ಓದಿ : Poornachandra Tejaswi Death Anniversary: ‘ಹಲ್ಲು ಕಿರಿಯೋ ಮೂತಿಯಷ್ಟೇ ತೆಗೀತೀಯ! ಶಾಸ್ತ್ರಾಚಾರನೂ ತೆಕ್ಕೊ’
ನಮ್ಮ ತೇಜಸ್ವಿ ಎಲ್ಲಾ ಬರಹಗಳನ್ನು ಇಲ್ಲಿ ಓದಿ : https://tv9kannada.com/tag/death-anniversary-of-poornachandra-tejaswi