Poornachandra Tejaswi Death Anniversary: ಬ್ರಿಟೀಷರು ವಾಪಸಾದ ನಂತರ ಈ ಹಳ್ಳಿಯೇಕೆ ಹಾಳೂರಾಯ್ತು?

Poornachandra Tejaswi Death Anniversary: ಬ್ರಿಟೀಷರು ವಾಪಸಾದ ನಂತರ ಈ ಹಳ್ಳಿಯೇಕೆ ಹಾಳೂರಾಯ್ತು?
ಲೇಖಕ ಪೂರ್ಣಚಂದ್ರ ತೇಜಸ್ವಿ ಮತ್ತು ಲೇಖಕಿ ಡಾ. ಜ್ಯೋತಿ ಸಾಮಂತ್ರಿ

Jugari Cross: ನಾಗರೀಕತೆಯೊಳಗೆ ಪ್ಲಾಸ್ಟಿಕ್ ಕಾಲಿಟ್ಟಾಗ ಈ ತೆಳ್ಳಗೆ ಪಾರದರ್ಶಕವಾಗಿ ಮಿಂಚುವ ಮೋಹಿನಿಯ ವಿಶ್ವರೂಪ ಯಾರಿಗೂ ಗೊತ್ತಿರಲಿಲ್ಲ; ಬಳ್ಳಾರಿಯ ಡಾ. ಜ್ಯೋತಿ ಸಾಮಂತ್ರಿ ಅವರಿಗೆ ಈ ಕೃತಿಯ ಈ ಭಾಗ ಬಹಳ ಕಾಡುತ್ತದೆ. 

ಶ್ರೀದೇವಿ ಕಳಸದ | Shridevi Kalasad

|

Apr 05, 2022 | 6:20 PM

Poornachandra Tejaswi Death Anniversary: ಮೇದರಳ್ಳಿ ಅಲ್ಲಿ ಮೊಳಕೆಯೊಡೆದು ಚಿಗುರಿದ್ದಕ್ಕೆ ಕಾರಣ ಅದರ ಆಸುಪಾಸಿನಲ್ಲಿ ಸಾವಿರಾರು ಚದರಮೈಲಿ ಅಕ್ಷಯವಾಗಿ ಬೆಳೆದಿದ್ದ ಹಬ್ಬದಿರು, ವಾಟೆ ಬಿದಿರು, ಕಿರುಬಿದಿರು ಇತ್ಯಾದಿಗಳು, ಅಲ್ಲಿನ ಬಿದಿರು ಎಷ್ಟು ಒಳ್ಳೆಯದೆಂದರೆ ತಲೆಯಿಂದ ಬುಡದವರೆಗೆ ತೆಳ್ಳಗೆ ದಾರದಂತ ಸೀಳಬಹುದಿತ್ತು. ಸಿಂಗಾಪುರದ ಬೆತ್ತದಹಾಗೆ ಬೆಳ್ಳಗೆ ಹೊಳೆಯುವ ಈ ಬಿದಿರು ಬೇಕಾದ ಆಕಾರಕ್ಕೆ ಬಗ್ಗಿಸಿದರೂ ಮುರಿಯದ ಸಿಬಿರೇಳದ ಹೇಳಿದಹಾಗೆ ಕೇಳುತ್ತಿತ್ತು. ಮೇದರ ಹಳ್ಳಿಯಲ್ಲಿ ಮಾಡಿದ ಬತ್ತದ ತಡಿಕೆಗಳೂ, ಬುಟ್ಟಿ, ಮೊರ, ಕೂಣಿಗಳೂ ಕರ್ನಾಟಕದಾದ್ಯಂತ ಹೆಸರುವಾಸಿಯಾಗಿದ್ದವು. ಆದರೆ ಈ ಹಳ್ಳಿ ನಿಜಕ್ಕೂ ಪ್ರವರ್ಧಮಾನಕ್ಕೆ ಬಂದಿದ್ದು ಯೂರೋಪಿಯನ್ನರ ಕಾಲದಲ್ಲಿ. ಕಾಫಿ ತೋಟದ ದೊರೆಗಳಿಗೆ ಕಾಫಿ ಸಸಿಗಳನ್ನು ಬೆಳೆಸಲು ಬೇಕಾಗಿದ್ದ ಬಿದಿರಿನ ಚಿಕ್ಕಚಿಕ್ಕ ಕುಕ್ಕೆಗಳು ಮೇದರ ಹಳ್ಳಿಯಿಂದಲೇ ಸರಬರಾಜಾಗುತ್ತಿದ್ದುದು. ದೊಡ್ಡ ದೊಡ್ಡ ಯೂರೋಪಿಯನ್ ದೊರೆಗಳೆಲ್ಲ ಮೇದರಳಿಗೆ ಭೇಟಿಕೊಟ್ಟು ಮುಂಗಡ ಹಣ ಕೊಟ್ಟು ಲಕ್ಷಾಂತರ ಕಾಫಿ ಕುಕ್ಕೆಗಳಿಗೆ ಆರ್ಡರ್ ಬುಕ್ ಮಾಡುತ್ತಿದ್ದರು. ಕಾಫಿ ತೋಟಗಳು ವಿಸ್ತರಿಸುತ್ತಾ ಹೋದಂತೆ ಮೇದರಳ್ಳಿಯ ವ್ಯವಹಾರಗಳೂ ವಿಸ್ತರಿಸುತ್ತಾ ಹೋದವು.

ತೇಜಸ್ವಿಯವರ ಜುಗಾರಿ ಕ್ರಾಸ್​ನಲ್ಲಿರುವ ‘ಮೇದರಹಳ್ಳಿಯ ಅವಸಾನ’ದಿಂದ ಆಯ್ದ ಭಾಗ ಬಳ್ಳಾರಿಯ ಡಾ. ಜ್ಯೋತಿ ಸಾಮಂತ್ರಿ ಅವರಿಗೆ ಬಹಳ ಕಾಡುತ್ತದೆ. 

ಸ್ವಾತಂತ್ರ್ಯಾನಂತರ ಬ್ರಿಟಿಷರೆಲ್ಲ ಭಾರತದಿಂದ ನಿರ್ಗಮಿಸಿದ ಮೇಲೂ ಮೇದರಹಳ್ಳಿಯ ವಹಿವಾಟೇನೂ ಕಡಮೆಯಾಗಲಿಲ್ಲ. ಮೇದರಳ್ಳಿಯ ಮೇದರಿಗೆಲ್ಲಾ ಕಾಫಿ ತೋಟಗಳಿರುವೆಡೆಗಳಲ್ಲಿ ಬಹುವಚನದ ಮರ್ಯಾದೆಯೇ ಸಿಗುತ್ತಿತ್ತು. ಹಾಗಾದರೆ ಏಕೆ ಈ ಹಳ್ಳಿ ಹಾಳೂರಾಯ್ತು? ಏಕೆ ಕೋಟೆ ಕೊತ್ತಲಗಳು ಏಳುತ್ತವೆ. ನಾಶವಾಗುತ್ತವೆ? ಸೂರ್ಯ ಮುಳುಗದ ಸಾಮ್ರಾಜ್ಯಗಳೂ ಚಕ್ರಾಧಿಪತ್ಯಗಳೂ ನಿಧಾನವಾಗಿ ಚರಿತ್ರೆಯ ಪುಟಗಳಲ್ಲಿ ಅಸ್ತಂಗತ ವಾಗುತ್ತವೆ?

ತಲೆ ಎತ್ತಿದ್ದು ಮತ್ತೆ ಧರೆಗುರುಳಲೇ ಬೇಕೆಂಬ ಜಡ ನಿಯಮವೋ? ಅಥವಾ ಕಾರ್ಯಕಾರಣ ಸಂಬಂಧಗಳ ಕ್ರಿಯಾವಳಿಯೋ? ಅಥವಾ ಪತಿವ್ರತೆಯರ ಶಾಪವೋ? ಮೇದರಹಳ್ಳಿಯ ಮಟ್ಟಿಗಾದರೂ ಇತಿಹಾಸದ ಈ ರಹಸ್ಯವನ್ನು ತಿಳಿಯಲು ಸಾಧ್ಯವೆ?

ನಾಗರೀಕತೆಯೊಳಗೆ ಪ್ಲಾಸ್ಟಿಕ್ ಕಾಲಿಟ್ಟಾಗ ಈ ತೆಳ್ಳಗೆ ಪಾರದರ್ಶಕವಾಗಿ ಮಿಂಚುವ ಮೋಹಿನಿಯ ವಿಶ್ವರೂಪ ಯಾರಿಗೂ ಗೊತ್ತಿರಲಿಲ್ಲ. ಅನೇಕ ಹಳ್ಳಿ, ಮನತನ, ಬುಡಕಟ್ಟುಗಳ ನಿರ್ನಾಮಕ್ಕೆ ಇದು ಕಾರಣವಾದೀತೆಂದು ಯಾರೂ ಕನಸು ಮನಸಿನಲ್ಲಿಯೂ ಊಹಿಸಿರಲಿಲ್ಲ. ಖಾಲಿ ಜಾಗಗಳ ಸಂದುಗೊಂದುಗಳೊಳಗೆಲ್ಲಾ ಹಬ್ಬಿ ಆಕ್ರಮಿಸುವ ಪಾರ್ಥನಿಯಮ್, ಯುಪಟೋರಿಯಮ್ ಕಳೆಗಳಂತೆ ಪ್ಲಾಸ್ಟಿಕ್, ಪಾಲಿಯುರಿಥೇನ್, ಪಾಲಿಎಥಿಲೀನ್, ಪಾಲಿಫೈಬರ್, ಪಾಲಿಮಾರ್, ಹೀಗೆ ನಾನಾ ಅವತಾರಗಳನ್ನೆತ್ತಿ ಮಾರುಕಟ್ಟೆಯ ಎಲ್ಲ ಕ್ಷೇತ್ರಗಳಿಗೆ, ಎಲ್ಲ ಅವಕಾಶಗಳಿಗೆ ಮುತ್ತಿಗೆ ಹಾಕಿತು.

ನಿಧಾನವಾಗಿ ಕಾಫಿ ಮೊಳಕೆಗಳನ್ನು ನೆಡುವ ಬಿದುರಿನ ಕುಕ್ಕೆಗಳಿಗೆ ಬದಲಾಗಿ ಪ್ಲಾಸ್ಟಿಕ್ ಚೀಲಗಳು ಬಂದವು. ಗಾಳಿ ಮಳೆ ಬಿಸಿಲು ಇವು ಯಾವುದಕ್ಕೂ ಜಗ್ಗದ ಈ ತೆಳ್ಳಗಿನ ಕಾಗದದಂಥ ಪ್ಲಾಸ್ಟಿಕ್ ಚೀಲಗಳು ಕಾಫಿ ಪ್ಲಾಂಟರುಗಳ ಮನ ಗೆಲ್ಲಲು ಕೆಲವೇ ವರ್ಷಗಳು ಸಾಕಾದವು. ಮೇದರ ಹಳ್ಳಿಯ ಬಿದುರಿನ ಕುಕ್ಕೆಗಳನ್ನಾದರೂ ಸಾವಿರಗಟ್ಟಲೆ ಸಾಗಿಸುವುದೇ ದೊಡ್ಡ ಗೋಳು. ಅವುಗಳನ್ನು ಪ್ಲಾಸ್ಟಿಕ್ ಚೀಲಗಳಂತೆ ಮಡಚಿ ತುರುಕುವ ಹಾಗೂ ಇಲ್ಲ. ಬಿದುರಿನ ಬುಟ್ಟಿಗಳಿಗೆ ಮಣ್ಣು ತುಂಬಿ ಕಾಫಿ ಸಸಿಗಳನ್ನು ನೆಡುವ ಮೊದಲು ಅವಕ್ಕೆ ಗೆದ್ದಲು ಹಿಡಿಯದಂತೆ ಮೈಲುತುತ್ತದ ನೀರಿನಲ್ಲಿ ಕುದಿಸಬೇಕು. ಎಲ್ಲಕ್ಕಿಂತ ಲಕ್ಷಗಟ್ಟಲೆ ಬೇಕಾದಾಗ ಮೇದರ ಹಳ್ಳಿಯ ಹೆಂಗಸರು ಮಕ್ಕಳಾದಿಯಾಗಿ ಎಲ್ಲ ಬುಟ್ಟಿ ಹಣೆಯಲು ಕುಳಿತರೂ ಸಕಾಲಕ್ಕೆ ಸಾಕಷ್ಟು ದೊರೆಯುತ್ತಿರಲಿಲ್ಲ. ಪ್ಲಾಸ್ಟಿಕ್ ಹಾಗಲ್ಲ. ಒಂದು ಚಿಕ್ಕ ಪ್ಯಾಕೆಟ್ಟಿನಲ್ಲಿ ಒಂದು ಲಕ್ಷ ಚೀಲಗಳಿರುತ್ತವೆ. ತೆಳ್ಳಗೆ ಬಟ್ಟೆಯಂತಿರುವ ಅವುಗಳಲ್ಲಿ ಮಣ್ಣು ತುಂಬಿ ಪಾತಿಗಳಲ್ಲಿ ಕೂರಿಸಿದರೆ ಅವಕ್ಕೆ ತುಕ್ಕು ಹಿಡಿಯುವುದಿಲ್ಲ, ಗೆದ್ದಲು ಹತ್ತಿರ ಸುಳಿಯುವುದಿಲ್ಲ. ಮಳೆ ಗಾಳಿಗೆ ಕುಂಬಾಗುವುದೂ ಇಲ್ಲ. ಬೇಕೆಂದಾಗ ಬೇಕಷ್ಟು ದೊರೆಯುತ್ತದೆ. ಎಲ್ಲೂ ಕಗ್ಗಾಡಿನ ಪಾತಾಳದಲ್ಲಿರುವ ಮೇದರ ಹಳ್ಳಿಗೆ ಹೋಗಿ ಈಗ ಎಷ್ಟಿದಯೋ ಅಷ್ಟು ಕೊಡ್ರಪ್ಪಾ” ಎಂದು ಗೋಗರೆಯುವ ಪ್ರಮೇಯವೇ ಇಲ್ಲ!

ಇದನ್ನೂ ಓದಿ : Poornachandra Tejaswi Death Anniversary: ಕಾಶ್ಮೀರದ ಕಂಟೆಂಡರ್ ಬೀನ್ನು, ಹಾಲೆಂಡಿನ ಆಲೂಗಡ್ಡೆ

ಮೊದಲು ಮೇದರಳ್ಳಿಗೆ ಜನ ಬಂದು ದುಂಬಾಲು ಬಿದ್ದು ಗೋಗರೆದು ಕುಕ್ಕೆ ತೆಗೆದುಕೊಂಡು ಹೋಗುವುದು ತಪ್ಪಿತು. ಆಮೇಲೆ ಅಡ್ವಾನ್ಸ್ ಕೊಟ್ಟು ಆರ್ಡರ್ ಬುಕ್ ಮಾಡುವುದು ನಿಂತಿತು. ಆಮೇಲೆ ಮೇದರೇ ಕುಕ್ಕೆಗಳನ್ನು ಸರದಂತೆ ಪೋಣಿಸಿ ಬಸ್ಸು ಲಾರಿಗಳ ಮೇಲೆ ಗುಡ್ಡ ಹಾಕಿಕೊಂಡು ಪೇಟೆಗೆ ತಂದರೆ ಮಾತ್ರ ಗಿರಾಕಿ ಇತ್ತು. ಕಾಫಿ ಬೆಳೆಗಾರರಲ್ಲಿ ಅನೇಕ ಹಳಬರು “ಏನೇ ಆದರೂ ಪ್ಲಾಸ್ಟಿಕ್ ಕುಕ್ಕೆಗಳಲ್ಲಿ ಬಿದಿರು ಬುಟ್ಟಿಯಲ್ಲಿ ಬಂದ ಹಾಗೆ ಗಿಡ ಬರುವುದಿಲ್ಲ. ಬಿದಿರು ಬುಟ್ಟಿಯಲ್ಲಿ ಗಾಳಿಯಾಡುವ ಹಾಗೆ ಪ್ಲಾಸ್ಟಿಕ್‌ನೊಳಗೆ ಗಾಳಿಯಾಡುವುದಿಲ್ಲ” ಎಂದು ದುಬಾರಿಯಾದರೂ ಬಿದಿರು ಕುಕ್ಕಗಳನ್ನು ಕೊಳ್ಳುತ್ತಿದ್ದರು.

ಆ ವೇಳೆಗೆ ಸರಿಯಾಗಿ ಇನ್ನೂ ಒಂದು ದುರಾದೃಷ್ಟ ಮೇದರ ಹಳ್ಳಿಗೆ ಎರಗಿತು! ಅರವತ್ತು ವರ್ಷಗಳಿಗೊಮ್ಮೆ ಬಿದಿರಿಗೆ ಬರುವ ನರ, ಅಥವಾ ಕಟ್ಟೆ ಪ್ರಾರಂಭವಾಯ್ತು. ಬಿದಿರು ಭತ್ತದ ರೀತಿಯಲ್ಲಿ ತನ್ನ ಬಿಟ್ಟು ಹೂವಾಗಿ ಬಿದಿರಕ್ಕಿ ಹಿಡಿದು ಮುದಿಯಾಗುತ್ತದೆ. ಭತ್ತ ತನ ಬಿಡಲು ಆರು ತಿಂಗಳು ತೆಗೆದುಕೊಂಡರೆ ಬಿದಿರು ಮಾತ್ರ ಅರವತ್ತು ವರ್ಷ ತೆಗೆದುಕೊಳ್ಳುತ್ತದೆ. ಮೇದರ ಹಳ್ಳಿಯ ಸುತ್ತಮುತ್ತ ಇರುವ ಸಾವಿರಾರು ಚದರ ಮೈಲಿಯ ಬಿದಿರು ಯಾವುದೋ ಖಾಯಿಲೆ ಹಿಡಿದಹಾಗೆ ಮೆಲ್ಲಗೆ ಹಳದಿಯಾಗತೊಡಗಿತು. ಮೇದರ ಹಳ್ಳಿಯ ಹಳಬರಿಗಲ್ಲ ಇದೇನೆಂದು ಚೆನ್ನಾಗಿ ಗೊತ್ತಿತ್ತು. ಇನ್ನೆಲ್ಲೋ ಇದ್ದ ಅವರು ಹಿಂದೊಮ್ಮೆ ಅಲ್ಲಿಗೆ ಬಂದು ಹಳ್ಳಿ ಕಟ್ಟಿಕೊಂಡಿದ್ದಕ್ಕೂ ಇದೇ ಕಾರಣವಂತೆ! ಕೆಲವೇ ಕಾಲದೊಳಗೆ ಪ್ರತಿಯೊಂದು ಬಿದಿರಿನ ಕವಲುಕೊಂಬೆಗಳ ತುದಿಗಳಿಂದಲ್ಲ ಗೋಧಿಯ ತೆನೆಗಳಂಥ ದೊಡ್ಡ ದೊಡ್ಡ ತೆನೆಗಳು ಹೊರಟವು. ತನೆಗಳೊಳಗಿನ ಬಿದಿರಕ್ಕಿಯ ಭಾರದಲ್ಲಿ ಬಲವಾದ ಹೆಬ್ಬಿದಿರುಗಳು ಕೂಡ ನೆಲಮುಖ ವಾಗಿ ಬಾಗಿ ಜೋಲತೊಡಗಿದವು. ಅಲ್ಲಿಗೆ ಆ ಬಿದುರಿನ ಆಯುಸ್ಸು ಮುಗಿದಹಾಗೇ! ಇನ್ನು ಅವುಗಳಿಂದ ಉದುರುವ ಬೀಜಗಳಿಂದ ಮತ್ತೆ ಬಿದಿರು ಮೊಳಕೆಯೊಡೆದು ಹುಟ್ಟಿ ಮೇಲೆದ್ದು, ಬುಟ್ಟಿ ಹೆಣೆಯಲು ಬಿದಿರು ದೊರಕಬೇಕಾದರೆ ಕೆಲವು ಕಾಲವೇ ಬೇಕು.

ಇದನ್ನೂ ಓದಿ : Poornachandra Tejaswi Death Anniversary: “ಪರ್ವಾಗಿಲ್ಲ ಮಾರಾಯ, ಸುಮಾರಾಗಿ ರಿಪೇರಿ ಕಲ್ತಿದೀಯ?”

‘ನಮ್ಮ ತೇಜಸ್ವಿ’ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/death-anniversary-of-poornachandra-tejaswi

Follow us on

Most Read Stories

Click on your DTH Provider to Add TV9 Kannada