ಯೇಸುದಾಸ್ರಿಂದ ಹೈದರಾಲಿವರೆಗೆ; ಹಿಂದೂಯೇತರ ಕಲಾವಿದರಿಗೆ ಕೇರಳದ ದೇವಸ್ಥಾನಗಳಲ್ಲಿ ಪ್ರವೇಶ ನಿಷೇಧ ಹೊಸತೇನೂ ಅಲ್ಲ
ಮುಸ್ಲಿಂ ಕುಟುಂಬದಲ್ಲಿ ಜನಿಸಿದ ದಿವಂಗತ ಕಲಾಮಂಡಲಂ ಹೈದರಾಲಿ ಅವರು ಕಥಕ್ಕಳಿ ಗಾಯಕರಾಗಿ ಯಶಸ್ವಿಯಾದ ರಾಜ್ಯದ ಮೊದಲ 'ಹಿಂದೂ ಅಲ್ಲದ' ಕಲಾವಿದರಾಗಿದ್ದರು. ಆದಾಗ್ಯೂ, ಯೇಸುದಾಸ್ ಅವರಂತೆ ಹೈದರಾಲಿ ಅವರ ಹಾಡುಗಳನ್ನು ಆಗಾಗ್ಗೆ ನುಡಿಸುವ ದೇವಾಲಯಗಳು ಕೂಡಾ....
ಮಾರ್ಚ್ ಕೊನೆಯ ವಾರದಲ್ಲಿ ಕೇರಳದ ಕೂಡಲ್ಮಾಣಿಕ್ಯಂ ದೇವಸ್ಥಾನವು (Koodalmanikyam temple) ಭರತನಾಟ್ಯ ನರ್ತಕಿ ವಿಪಿ ಮಾನ್ಸಿಯಾ (VP Mansiya) ಅವರ ಪ್ರದರ್ಶನವನ್ನು ‘ಹಿಂದೂ ಅಲ್ಲ’ ಎಂಬ ಕಾರಣದಿಂದ ನಿರ್ಬಂಧಿಸಿದ ನಂತರ ವಿವಾದಕ್ಕೆ ಕಾರಣವಾಗಿತ್ತು. ನಂತರ, ನರ್ತಕಿ ಸೌಮ್ಯಾ ಸುಕುಮಾರನ್ ಕೂಡ ಕ್ರಿಶ್ಚಿಯನ್ ಎಂಬ ಕಾರಣಕ್ಕೆ ರಾಜ್ಯದ ಎರಡು ದೇವಾಲಯಗಳಲ್ಲಿ ಪ್ರದರ್ಶನ ನೀಡದಂತೆ ತಡೆಯಲಾಯಿತು. ಆದರೆ ಕೇರಳ (Kerala) ದಲ್ಲಿ ಇದು ಹೊಸ ವಿದ್ಯಮಾನವೇನಲ್ಲ. ರಾಜ್ಯದಲ್ಲಿನ ಹಲವಾರು ದೇವಾಲಯಗಳು ಈ ಹಿಂದೆ ‘ಹಿಂದೂಯೇತರ’ ಕಲಾವಿದರಿಗೆ ಪ್ರವೇಶವನ್ನು ನಿರಾಕರಿಸಿವೆ. ಕೇರಳದ ದೇವಾಲಯಗಳಲ್ಲಿ ಕಲಾವಿದರಿಗೆ ಪ್ರವೇಶ ನಿಷೇಧಿಸಿದ ಪ್ರಕರಣಗಳ ಬಗ್ಗೆ ದಿ ಕ್ವಿಂಟ್ನಲ್ಲಿ ಪ್ರಕಟವಾದ ಬರಹ ಇಲ್ಲಿದೆ.
ಕರ್ನಾಟಕ ಮತ್ತು ಹಿನ್ನೆಲೆ ಗಾಯಕ ಕೆಜೆ ಯೇಸುದಾಸ್ (KJ Yesudas) ಅವರು ಹಿಂದೂ ದೇವರುಗಳನ್ನು ಸ್ತುತಿಸುವ ಕೆಲವು ಜನಪ್ರಿಯ ಭಕ್ತಿಗೀತೆಗಳನ್ನು ಹಾಡಿದ್ದಾರೆ. ಅವರಿಗೆ ಕೇರಳದ ಕೆಲವು ಹಿಂದೂ ದೇವಾಲಯಗಳನ್ನು ಪ್ರವೇಶಿಸಲು 50 ವರ್ಷಗಳಿಂದ ನಿರಂತರ ಹೋರಾಟವನ್ನು ನಡೆಸಬೇಕಾಯಿತು. ಯೇಸುದಾಸ್ ಕಳೆದ ಐದು ದಶಕಗಳಿಂದಲೂ ಮಲಯಾಳಂ ಚಿತ್ರರಂಗದ ಬಹುಬೇಡಿಕೆಯ ಗಾಯಕ. ಬಾಲಿವುಡ್‌ನಲ್ಲಿ ಅವರು ಕಮಲ್ ಹಾಸನ್ ಮತ್ತು ಶ್ರೀದೇವಿ ನಟಿಸಿದ ಸದ್ಮಾ (1983) ಸಿನಿಮಾದ ಸುರ್ ಮಯಿ ಆಂಖಿಯೋಂ ಮೇ ಹಾಡು ಅವರ ಎವರ್ ಗ್ರೀನ್ ಹಾಡುಗಳಲ್ಲೊಂದು. ಅಯ್ಯಪ್ಪ ದೇವರನ್ನು ಸ್ತುತಿಸುವ ‘ಹರಿವರಾಸನಂ’ ದಕ್ಷಿಣ ಭಾರತದ ಹಲವಾರು ದೇವಾಲಯಗಳಲ್ಲಿ ನುಡಿಸಲಾಗುತ್ತದೆ.ಇದೇ ಹಾಡು ಶಬರಿಮಲೆಯಲ್ಲಿ ಭಗವಾನ್ ಅಯ್ಯಪ್ಪನಿಗೆ ‘ಲಾಲಿ’ ಹಾಡಾಗಿ ಬಳಸಲಾಗುತ್ತದೆ. ಆದರೆ ಗುರುವಾಯೂರಿನಲ್ಲಿರುವ ಪ್ರಸಿದ್ಧ ಶ್ರೀಕೃಷ್ಣ ದೇವಸ್ಥಾನದೊಳಗೆ ಯೇಸುದಾಸ್ಗೆ ಪ್ರವೇಶವಿಲ್ಲ. ಯಾಕೆಂದರೆ ಅವರು ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದವರು. ಅಂದಹಾಗೆ ಕೆ ಜೋಸೆಫ್ ಯೇಸುದಾಸ್, ತಾನು ಹಿಂದೂ ಧರ್ಮದಲ್ಲಿ ನಂಬಿಕೆಯುಳ್ಳವನು ಎಂದು ಹೇಳಿದ್ದರು.
ದೇವಾಲಯಗಳ ಒಳಗೆ ಕೀಟಗಳನ್ನು ಸಹ ಅನುಮತಿಸಲಾಗಿದೆ, ಆದರೆ ನನಗೆ ಅನುಮತಿ ಇಲ್ಲ 60 ವರ್ಷಗಳ ವೃತ್ತಿಜೀವನದಲ್ಲಿ, ಯೇಸುದಾಸ್ ಹಲವಾರು ಸಂದರ್ಭಗಳಲ್ಲಿ ಗುರುವಾಯೂರ್ ದೇವಸ್ಥಾನವನ್ನು ಪ್ರವೇಶಿಸುವ ಬಲವಾದ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಹಲವು ಬಾರಿ ಅನುಮತಿ ಕೋರಿದ್ದರೂ ಅವರು ‘ಹಿಂದೂ ಅಲ್ಲ’ ಎಂಬ ಕಾರಣಕ್ಕೆ ಗರ್ಭಗುಡಿ ಪ್ರವೇಶಿಸಲು ದೇವಸ್ಥಾನ ಅನುಮತಿ ನೀಡಿರಲಿಲ್ಲ. ಆದಾಗ್ಯೂ, , ದೇವಾಲಯದ ವಾರ್ಷಿಕ ಕರ್ನಾಟಕ ಸಂಗೀತ ಉತ್ಸವ ಚೆಂಬೈ ಸಂಗೀತೋತ್ಸವಕ್ಕಾಗಿ ಅದರ ಆವರಣದ ಹೊರಗೆ ನಡೆದ ಹಲವಾರು ಸಂಗೀತ ಕಚೇರಿಗಳನ್ನು ಅವರು ನೀಡಿದ್ದಾರೆ. ವಿಪರ್ಯಾಸವೆಂದರೆ, ಶ್ರೀಕೃಷ್ಣನನ್ನು ಸ್ತುತಿಸುವ ಅವರ ಹಾಡುಗಳನ್ನು ದೇವಸ್ಥಾನದ ಧ್ವನಿವರ್ಧಕಗಳಲ್ಲಿ ನಿಯಮಿತವಾಗಿ ಪ್ಲೇ ಮಾಡಲಾಗುತ್ತದೆ. ದೇವಾಲಯದ ಪ್ರವೇಶಕ್ಕೆ ಅವಕಾಶ ನೀಡದಿರುವ ಬಗ್ಗೆ ತಮ್ಮ ನೋವನ್ನು ವ್ಯಕ್ತಪಡಿಸಿದ ಯೇಸುದಾಸ್ 2018 ರಲ್ಲಿ “ದೇವಾಲಯದೊಳಗೆ ಕೀಟಗಳಿಗೆ ಅನುಮತಿ ಇದೆ, ಆದರೆ ನನಗೆ ಇಲ್ಲ” ಎಂದು ಹೇಳಿದ್ದರು. “ನಾನು ಜಿರಳೆ ಅಥವಾ ನೊಣವಾಗಿ ಹುಟ್ಟಿದ್ದರೆ ಗುರುವಾಯೂರು ದೇವಸ್ಥಾನವನ್ನು ಪ್ರವೇಶಿಸಲು ಸಾಧ್ಯವಾಗುತ್ತಿತ್ತು” ಎಂದು ಅವರು ಹೇಳಿದರು.
2008ರಲ್ಲಿ, ಕೇರಳದ ಮಲಪ್ಪುರಂನಲ್ಲಿರುವ ಕಡಂಪುಳ ದೇವಿ ದೇವಾಲಯವು ಯೇಸುದಾಸ್ ಅವರಿಗೆ ಪ್ರವೇಶವನ್ನು ನಿರಾಕರಿಸಿತ್ತು. ಆದರೆ ಲ್ಯಾಟಿನ್ ಕ್ಯಾಥೋಲಿಕ್ ಕುಟುಂಬದಲ್ಲಿ ಜನಿಸಿದ ಯೇಸುದಾಸ್ ಅವರು ಕರ್ನಾಟಕದ ಶಬರಿಮಲೆ ಮತ್ತು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಲ್ಯಾಟಿನ್ ಕ್ಯಾಥೋಲಿಕರು ಕೇರಳದಲ್ಲಿ ಒಬಿಸಿ ಕೆಟಗರಿಯಲ್ಲಿದ್ದಾರೆ. ಯೇಸುದಾಸ್ ಅವರ ಪ್ರವೇಶವನ್ನು ನಿರ್ಬಂಧಿಸಿದ ನಂತರ, 2007 ರಲ್ಲಿ ಹಿರಿಯ ಕಾಂಗ್ರೆಸ್ ನಾಯಕ ವಯಲಾರ್ ರವಿ ಅವರಿಗೂ ಗುರುವಾಯೂರ್ ದೇವಾಲಯವನ್ನು ಪ್ರವೇಶಿಸಲು ಅನುಮತಿಸಲಿಲ್ಲ. ಈಳವ (ಒಬಿಸಿ) ಜಾತಿಯವರಾದ ರವಿ ಕ್ರಿಶ್ಚಿಯನ್ ಆದ ಮರ್ಸಿ ರವಿಯನ್ನು ವಿವಾಹವಾಗಿದ್ದೇ ಇದಕ್ಕೆ ಕಾರಣ. ಆ ಸಮಯದಲ್ಲಿ ಅವರು ಕೇಂದ್ರ ವಿದೇಶಾಂಗ ವ್ಯವಹಾರಗಳ ಹಾಲಿ ಸಚಿವರಾಗಿದ್ದರು.
2017ರಲ್ಲಿ ಯೇಸುದಾಸ್ ಅವರು ತಿರುವನಂತಪುರಂನಲ್ಲಿರುವ ಶ್ರೀ ಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ಕೋರಿದ್ದರು. ಕೆಲವು ಚರ್ಚೆಗಳ ನಂತರ ದೇವಾಲಯವು ಆ ವರ್ಷ ಮಹಾನವಮಿ (ಸೆಪ್ಟೆಂಬರ್ 29) ಅಥವಾ ವಿಜಯದಶಮಿ (30 ಸೆಪ್ಟೆಂಬರ್) ಯಂದು ಅವರಿಗೆ ಪ್ರವೇಶವನ್ನು ಅನುಮತಿಸಿತು. ಆದಾಗ್ಯೂ, ಅವರು ಎರಡೂ ದಿನಗಳಲ್ಲಿ ದೇವಾಲಯಕ್ಕೆ ಭೇಟಿ ನೀಡಲಿಲ್ಲ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಆ ಸಮಯದಲ್ಲಿ ಆಡಳಿತ ನಡೆಸುತ್ತಿದ್ದ ಕೇರಳದ ಎಲ್‌ಡಿಎಫ್ ಸರ್ಕಾರವು ಅವರ ಧರ್ಮವನ್ನು ಲೆಕ್ಕಿಸದೆ ಪ್ರತಿಯೊಬ್ಬರನ್ನು ದೇವಾಲಯದ ಒಳಗೆ ಬಿಡಬೇಕು ಎಂದು ಹೇಳಿತ್ತು. ಆದರೆ ಕೇರಳದ ದೇವಸ್ವಂ ಸಚಿವರಾಗಿದ್ದ ಕಡಕಂಪಲ್ಲಿ ಸುರೇಂದ್ರನ್ ಅವರು, ಎಲ್ಲಾ ದೇವಾಲಯಗಳು ತಮ್ಮದೇ ಆದ ನಿಯಮಗಳನ್ನು ಹೊಂದಿದ್ದು, ಅದನ್ನು ರಾತ್ರೋರಾತ್ರಿ ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಹೈದರಾಲಿ ಅವರಿಗೆ ಕಲಾ ಪ್ರದರ್ಶನ ನೀಡಲು ದೇವಾಲದ ಆವರಣ ಗೋಡೆ ಒಡೆಯಲಾಗಿತ್ತು ಮುಸ್ಲಿಂ ಕುಟುಂಬದಲ್ಲಿ ಜನಿಸಿದ ದಿವಂಗತ ಕಲಾಮಂಡಲಂ ಹೈದರಾಲಿ ಅವರು ಕಥಕ್ಕಳಿ ಗಾಯಕರಾಗಿ ಯಶಸ್ವಿಯಾದ ರಾಜ್ಯದ ಮೊದಲ ‘ಹಿಂದೂ ಅಲ್ಲದ’ ಕಲಾವಿದರಾಗಿದ್ದರು. ಆದಾಗ್ಯೂ, ಯೇಸುದಾಸ್ ಅವರಂತೆ ಹೈದರಾಲಿ ಅವರ ಹಾಡುಗಳನ್ನು ಆಗಾಗ್ಗೆ ನುಡಿಸುವ ದೇವಾಲಯಗಳು ಕೂಡಾ ಹೈದರಾಲಿಗೆ ಒಳಗೆ ಪ್ರವೇಶಿಸಲು ಅನುಮತಿಸಲಿಲ್ಲ. ಕಥಕ್ಕಳಿಯ ಸುಮಧುರ ದೃಶ್ಯಗಳಿಗೆ ಮೃದುವಾದ ಮತ್ತು ಶ್ರೀಮಂತ ಧ್ವನಿಗೆ ಹೆಸರುವಾಸಿಯಾದ ಹೈದರಾಲಿ, ಸ್ವತಂತ್ರ ಕಥಕ್ಕಳಿ ಸಂಗೀತ ಪ್ರದರ್ಶನಗಳನ್ನು ಪರಿಚಯಿಸಿದ ಪ್ರವರ್ತಕರಲ್ಲಿ ಒಬ್ಬರು. ತನ್ನ ವೃತ್ತಿ ಜೀವನದಲ್ಲಿ ತಾನು ಎದುರಿಸಿದ ತಾರತಮ್ಯದ ಬಗ್ಗೆ ಆರ್ಕೆಸ್ಕೇಪ್ಸ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೊದಲ್ಲಿ ಹೀಗೆ ಹೇಳಿದ್ದಾರೆ. “ಸಂಗೀತಗಾರ ಬಿಸ್ಮಿಲ್ಲಾ ಖಾನ್‌ಗೆ ಪ್ರಸಿದ್ಧ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಶೆಹನಾಯಿ ನುಡಿಸಲು ಅನುಮತಿ ನೀಡಿದೆ. ಆದರೆ ನನಗೇಕೆ ಇಲ್ಲ ಎಂಬುದು ಅರ್ಥವಾಗುತ್ತಿಲ್ಲ. ನಾನು ಹಿಂದೂ ದೇವರುಗಳನ್ನು ಸ್ತುತಿಸಿ ಹಾಡುಗಳನ್ನು ಹಾಡಿದರೂ ಇಲ್ಲಿನ ದೇವಸ್ಥಾನಗಳು ನನ್ನನ್ನು ಒಳಗೆ ಬಿಡುವುದಿಲ್ಲ. 1946 ರಲ್ಲಿ ಜನಿಸಿದ ಇವರು ಕೇರಳ ಕಲಾಮಂಡಲಂನಲ್ಲಿ ಬಡ ಕುಟುಂಬದಿಂದ ಬಂದ ಮುಸ್ಲಿಂ ಎಂಬ ಕಾರಣಕ್ಕಾಗಿ ತಾರತಮ್ಯವನ್ನು ಎದುರಿಸಿದ್ದೇನೆ ಎಂದು ಹೇಳಿದ್ದಾರೆ.
ನಾನು ಬಡ ಮುಸ್ಲಿಂ ಕುಟುಂಬದ ಕಪ್ಪು ಮತ್ತು ಕುರೂಪಿ ಹುಡುಗನಾಗಿದ್ದರಿಂದ ಎಲ್ಲರೂ ನನ್ನಿಂದ ದೂರ ಉಳಿಯುತ್ತಿದ್ದರು. ಸುಮಾರು ಏಳು ವರ್ಷಗಳ ಕಾಲ ಯಾವುದೇ ದೇವಾಲಯಗಳಲ್ಲಿ ಪ್ರದರ್ಶನ ನೀಡಲು ನನಗೆ ಅವಕಾಶ ನೀಡಲಿಲ್ಲ ಎಂದು ಅವರು ವಿಡಿಯೊ ಸಂದರ್ಶನದಲ್ಲಿ ಹೇಳಿದ್ದಾರೆ.
ಭಾರತ ಸರ್ಕಾರದಿಂದ ಕಲೆ ಮತ್ತು ಸಂಸ್ಕೃತಿಯ ವಿಶ್ವವಿದ್ಯಾನಿಲಯವೆಂದು ಪರಿಗಣಿಸಲ್ಪಟ್ಟಿರುವ ಕೇರಳ ಕಲಾಮಂಡಲಂ, ದೇಶದ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಅಭಿವೃದ್ಧಿ ಹೊಂದಿದ ಕಲಾ ಪ್ರಕಾರಗಳನ್ನು ಕಲಿಯುವ ಪ್ರಮುಖ ಸಂಸ್ಥೆಯಾಗಿದೆ.
ತಮ್ಮ ಜೀವನದ ಘಟನೆಯೊಂದನ್ನು ಹಂಚಿಕೊಂಡ ಹೈದರಾಲಿ, ಅಲಪ್ಪುಳದ ಹರಿಪಾಡ್‌ನಲ್ಲಿರುವ ದೇವಾಲಯವು ವೇದಿಕೆಯಲ್ಲಿ ತನಗೆ ಅವಕಾಶ ಕಲ್ಪಿಸಲು ಅದರ ಹೊರಗೋಡೆಯನ್ನು ಭಾಗಶಃ ಕೆಡವಿತ್ತು ಎಂದಿದ್ದಾರೆ. “ಹರಿಪಾಡ್ ದೇವಸ್ಥಾನದಲ್ಲಿ ನನ್ನ ವಿದ್ಯಾರ್ಥಿಯೊಬ್ಬರ ಆರಂಗೇಟ್ಟಂ (ಮೊದಲ ಸಾರ್ವಜನಿಕ ಪ್ರದರ್ಶನ) ಸಮಯದಲ್ಲಿ, ವಿದ್ಯಾರ್ಥಿ ಮತ್ತು ಅವರ ಕುಟುಂಬ ನಾನು ದೇವಾಲಯದ ಒಳಗೆ ಬರಬೇಕೆಂದು ಒತ್ತಾಯಿಸಿದರು. ಆದರೆ ದೇವಾಲಯವು ನನ್ನನ್ನು ಒಳಗೆ ಬರಲು ಬಯಸಲಿಲ್ಲ. ಚರ್ಚೆ ನಡೆಯಿತು. ಅಂತಿಮವಾಗಿ, ವೇದಿಕೆಗೆ ಹೊಂದಿಕೊಂಡಿದ್ದ ದೇವಾಲಯದ ಹೊರಗೋಡೆಯನ್ನು ಭಾಗಶಃ ಮುರಿದು ವೇದಿಕೆಯನ್ನು ವಿಸ್ತಾರ ಮಾಡಲಾಯಿತು. ನಾನು ದೇವಾಲಯದ ಹೊರಗಿರುವ ವೇದಿಕೆಯ ಭಾಗದಲ್ಲಿ ಹಾಡಿದೆ. ನೃತ್ಯಗಾರರು ಒಳಗಿನಿಂದ ತಮ್ಮ ಪ್ರದರ್ಶನಗಳನ್ನು ನೀಡಿದರು. ನಾನು ಒಳಗೆ ಹೋಗಲು ಸಾಧ್ಯವಾಗದಿದ್ದರೂ ನನ್ನ “ಧ್ವನಿ ಒಳಗಿದೆ” ಎಂದು ನಾನು ತೃಪ್ತಿಕಂಡುಕೊಂಡೆ ಎಂದಿದ್ದರು ಅವರು.
ದೇವಾಲಯಗಳಲ್ಲಿ ಜಾತಿ ತಾರತಮ್ಯ ಕೇವಲ ಧರ್ಮವಷ್ಟೇ ಅಲ್ಲ, ರಾಜ್ಯದ ಕೆಲವು ದೇವಸ್ಥಾನಗಳು ಹಿಂದೂಗಳಾದ ದಲಿತ ಮತ್ತು ಇತರ ಕಲಾವಿದರ ವಿರುದ್ಧವೂ ತಾರತಮ್ಯ ಮಾಡುತ್ತಿವೆ. ಈ ವರ್ಷದ ಫೆಬ್ರುವರಿಯಲ್ಲಿ, ಪ್ರಮುಖ ಕೂಡಿಯಾಟ್ಟಂ ಕಲಾವಿದ ಕಪಿಲ ವೇಣು ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ, ಕೂತಂಬಲಗಳಲ್ಲಿ (ಕೂತ್ತು ಮತ್ತು ಕೂಡಿಯಟ್ಟಂಗಾಗಿ ನಿರ್ಮಿಸಲಾದ ದೇವಾಲಯಗಳ ವೇದಿಕೆ) ಕೆಲವು ಧಾರ್ಮಿಕ ಪ್ರದರ್ಶನಗಳನ್ನು ಚಾಕ್ಯಾರ್‌ಗಳು ಮತ್ತು ನಂಬಿಯಾರ್‌ಗಳಂತಹ ಜಾತಿಯ ಜನರು ಮಾತ್ರ ಪ್ರದರ್ಶಿಸುತ್ತಾರೆ ಎಂದಿದ್ದರು. ಈ ಬಗ್ಗೆ ಫೇಸ್ ಬುಕ್ ಪೋಸ್ಟ್ ನಲ್ಲಿ ಅವರು ಎಲ್ಲಾ ಜಾತಿಗಳ ಕಲಾವಿದರಿಗೆ ಕೂತಂಬಲಗಳನ್ನು ತೆರೆಯುವಂತೆ ಒತ್ತಾಯಿಸಿದ್ದರು. ಇದರ ನಂತರ, ಹಲವಾರು ಇತರ ಕಲಾವಿದರು ಕಪಿಲ ವೇಣು ಅವರ ದನಿಗೆ ದನಿಯಾದರು. ತರುವಾಯ, ಕೊಚ್ಚಿನ್ ದೇವಸ್ವಂ ಬೋರ್ಡ್ ಅಧ್ಯಕ್ಷ ನಂದಕುಮಾರ್ ಅವರು ಕೂತಂಬಲಂಗಳಲ್ಲಿ ಎಲ್ಲಾ ಜಾತಿಗಳ ಕಲಾವಿದರಿಗೆ ಅವಕಾಶ ನೀಡಲಾಗುವುದು ಎಂದು ಹೇಳಿದರು.
ಕಲಾ ಪ್ರಕಾರದ ಎಲ್ಲಾ ನಿಯಮಗಳನ್ನು ಅನುಸರಿಸಿದರೆ ಮಾತ್ರ ಅಂತಹ ಕಲಾವಿದರಿಗೆ ಪ್ರದರ್ಶನ ನೀಡಲು ಅವಕಾಶ ನೀಡಲಾಗುತ್ತದೆ. ಇದಲ್ಲದೆ, ಕೆಲವು ಧಾರ್ಮಿಕ ಕಾರ್ಯಕ್ರಮಗಳ ಮೇಲೆ ಪಾರಂಪರಿಕ ಹಕ್ಕುಗಳನ್ನು ಹೊಂದಿರುವ ಸಾಂಪ್ರದಾಯಿಕ ಸಮುದಾಯಗಳು ಲಭ್ಯವಿಲ್ಲದ ದಿನಗಳಲ್ಲಿ ಮಾತ್ರ ಅವುಗಳನ್ನು ಅನುಮತಿಸಲಾಗುವುದು ಎಂದು ನಂದಕುಮಾರ್ ಹೇಳಿದರು.
ವೈಕಂ ಸತ್ಯಾಗ್ರಹ, ಗುರುವಾಯೂರು ಸತ್ಯಾಗ್ರಹ, ಹಿಂದೂ ದೇವಾಲಯಗಳಿಗೆ ‘ಕೆಳಜಾತಿಯ ಜನರ’ ಪ್ರವೇಶಕ್ಕೆ ದಾರಿಮಾಡಿಕೊಟ್ಟ ದೇಗುಲ ಪ್ರವೇಶ ಚಳವಳಿ ಸೇರಿದಂತೆ ಐತಿಹಾಸಿಕ ಚಳವಳಿಗಳಿಗೆ ಹೆಸರಾಗಿರುವ ಕೇರಳದಂತಹ ಪ್ರಗತಿಪರ ರಾಜ್ಯದಲ್ಲಿನ ದೇವಸ್ಥಾನಗಳಲ್ಲಿ ಇನ್ನೂ ಜಾತಿ ಬೇಧ, ತಾರತಮ್ಯಗಳು ಹಾಸುಹೊಕ್ಕಾಗಿದೆ ಎಂಬುದಕ್ಕೆ ಇತ್ತೀಚಿನ ಪ್ರಕರಣಗಳೇ ಸಾಕ್ಷಿ.
ಇದನ್ನೂ ಓದಿ: ಕೇರಳದ ಕೂಡಲಮಾಣಿಕ್ಯಂ ದೇಗುಲದಲ್ಲಿ ನೃತ್ಯ ಪ್ರದರ್ಶನಕ್ಕೆ ನನಗೂ ಅವಕಾಶ ಕೊಡಲಿಲ್ಲ; ಮತ್ತೊಬ್ಬ ಭರತನಾಟ್ಯ ಕಲಾವಿದೆಯಿಂದ ಆರೋಪ
Published On - 1:19 pm, Wed, 6 April 22