PM Narendra Modi Profile: ಮೋದಿ ಬದುಕು ಸಾಗಿಬಂದ ಹಾದಿಯ ಮೆಲುಕು ಇಲ್ಲಿದೆ

| Updated By: guruganesh bhat

Updated on: Sep 17, 2021 | 8:05 PM

PM Modi Birthday: ರೈಲು ನಿಲ್ದಾಣದಲ್ಲಿ ಬಾಲ್ಯದಲ್ಲಿ ಟೀ ಮಾರುತ್ತಿದ್ದ ಬಾಲಕನೊಬ್ಬ ತನ್ನ ಸತತ ಪರಿಶ್ರಮದಿಂದ ಗ್ರಾಮ ಪಂಚಾಯಿತಿಯಿಂದ ಹಿಡಿದು ಸಂಸತ್ತಿನವರೆಗೆ ವಿವಿಧ ಹಂತಗಳ ಶಕ್ತಿಕೇಂದ್ರಗಳನ್ನು ಹಾದು ಬಂದ ಬಗೆ ಭಾರತದ ಪ್ರಜಾಪ್ರಭುತ್ವಕ್ಕೆ ಇರುವ ಶಕ್ತಿಗೆ ಸಾಕ್ಷಿ ಎನಿಸಿದೆ.

PM Narendra Modi Profile: ಮೋದಿ ಬದುಕು ಸಾಗಿಬಂದ ಹಾದಿಯ ಮೆಲುಕು ಇಲ್ಲಿದೆ
ನರೇಂದ್ರ ಮೋದಿ
Follow us on

ಉತ್ತರ ಗುಜರಾತ್​ನ ಮೆಹ್ಸಾನಾ ಜಿಲ್ಲೆಯ ವಡ್​ನಗರ್​ ಹೆಸರಿನ ಪುಟ್ಟ ಪಟ್ಟಣದಲ್ಲಿ ನರೇಂದ್ರ ಮೋದಿ 17ನೇ ಸೆಪ್ಟೆಂಬರ್ 1950ರಲ್ಲಿ ಜನಿಸಿದರು. ಆಗಿನ್ನೂ ಭಾರತವು ಸ್ವಾತಂತ್ರ್ಯ ಪಡೆದು ಮೂರು ವರ್ಷಗಳಾಗಿದ್ದವು. ದೇಶವು ಸಂವಿಧಾನ ಅಂಗೀಕರಿಸಿ ಮೂರು ತಿಂಗಳೂ ಆಗಿರಲಿಲ್ಲ. ಮೋದಿ ಬಾಲಕರಾಗಿದ್ದಾಗ ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಉತ್ತಮವಾಗಿರಲಿಲ್ಲ. 12X40 ಅಡಿ ವಿಸ್ತೀರ್ಣದ ಪುಟ್ಟ ಮನೆಯಲ್ಲಿ ಕುಟುಂಬ ವಾಸಿಸುತ್ತಿತ್ತು. ಸ್ಥಳೀಯ ರೈಲ್ವೆ ನಿಲ್ದಾಣದಲ್ಲಿ ಇಟ್ಟುಕೊಂಡಿದ್ದ ಟೀ ಅಂಗಡಿಯಿಂದ ಮೋದಿ ಅವರ ತಂದೆ ಕುಟುಂಬ ಪೊರೆಯುತ್ತಿದ್ದರು. ಚಿಕ್ಕಂದಿನಲ್ಲಿಯೇ ಮೋದಿ ಅವರೂ ಟೀ ಅಂಗಡಿ ನಿರ್ವಹಿಸಲು ತಂದೆಗೆ ನೆರವಾಗುತ್ತಿದ್ದರು.

ಬಾಲ್ಯದ ಈ ಅನುಭವಗಳು ಮೋದಿ ಅವರ ಮನಸ್ಸಿನ ಮೇಲೆ ಅಚ್ಚಳಿಯದ ಪ್ರಭಾವ ಬೀರಿತು. ಮೋದಿ ಅವರು ತಮ್ಮ ಓದು ಮತ್ತು ಪಠ್ಯೇತರ ಚಟುವಟಿಕೆಗಳ ನಡುವೆ ಸಮತೋಲನ ಸಾಧಿಸುತ್ತಾ ಕುಟುಂಬಕ್ಕೂ ನೆರವಾಗುತ್ತಿದ್ದರು. ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಚರ್ಚಾಸ್ಪರ್ಧೆ ಮತ್ತು ಓದಿನಲ್ಲಿ ಮೋದಿ ಮುಂದಿದ್ದರು. ಶಾಲೆಯ ಗ್ರಂಥಾಲಯದಲ್ಲಿ ಗಂಟೆಗಟ್ಟಲೆ ಓದಿನಲ್ಲಿ ಮುಳುಗುತ್ತಿದ್ದರು. ಕ್ರೀಡೆಗಳ ಪೈಕಿ ಈಜುವುದು ಎಂದರೆ ಮೋದಿ ಅವರಿಗೆ ಅತ್ಯಂತ ಪ್ರೀತಿಯಿತ್ತು. ಸಮಾಜದ ವಿವಿಧ ಜಾತಿ, ವರ್ಗಗಳಲ್ಲಿ ಸ್ನೇಹಿತರನ್ನು ಸಂಪಾದಿಸಿದ್ದರು. ಸ್ನೇಹಿತರ ಜೊತೆಗೂಡಿ ಹಿಂದೂ-ಮುಸ್ಲಿಮ್ ಹಬ್ಬಗಳನ್ನು ಸಂಭ್ರಮದಿಂದ ಆಚರಿಸುತ್ತಿದ್ದರು.

ಬಾಲ್ಯದಿಂದ ಸಮಾಜ ಸೇವೆಯಲ್ಲಿ ಮೋದಿ ಮುಂದು. ತಾಪಿ ನದಿಯಲ್ಲಿ ಪ್ರವಾಹ ಬಂದು ಜನಜೀವನ ಅಸ್ತವ್ಯಸ್ತಗೊಂಡಾಗ ಮೋದಿ ಅವರಿಗೆ ಕೇವಲ 9 ವರ್ಷ. ಗೆಳೆಯರ ಜೊತೆಗೂಡಿ ಆಹಾರ ವಿತರಣೆ ಕೇಂದ್ರ ಆರಂಭಿಸಿದ್ದ ಮೋದಿ ಪರಿಹಾರ ಕಾರ್ಯಗಳಲ್ಲಿ ಕೈಜೋಡಿಸಿದ್ದರು. ಭಾರತ-ಪಾಕ್ ಯುದ್ಧದ ಪರಿಸ್ಥಿತಿ ವಿಷಮಿಸಿದ್ದಾಗ ರೈಲ್ವೆ ನಿಲ್ದಾಣದಲ್ಲಿ ಟೀ ಸ್ಟಾಲ್ ಆರಂಭಿಸಿ, ಯುದ್ಧಭೂಮಿಗೆ ಹೋಗುವ ಮತ್ತು ಅಲ್ಲಿಂದ ಬರುವ ಸೈನಿಕರಿಗೆ ಟೀ ನೀಡುತ್ತಿದ್ದರು. ವಿವೇಕಾನಂದರ ಕೃತಿಗಳಿಂದ ಪ್ರೇರಣೆ ಪಡೆದು ಅಧ್ಯಾತ್ಮದತ್ತ ಒಲವು ಬೆಳೆಸಿಕೊಂಡರು. ಉಪ್ಪು, ಮೆಣಸಿನಕಾಯಿ, ಎಣ್ಣೆ ಮತ್ತು ಬೆಲ್ಲ ತಿನ್ನುವುದನ್ನು ಬಿಟ್ಟಿದ್ದರು.

ಬಾಲ್ಯದಲ್ಲಿ ಮೋದಿ ಅವರಿಗೆ ಸೇನೆಗೆ ಸೇರುವ ತುಡಿತವಿತ್ತು. ಆದರೆ ಮನೆಯವರ ವಿರೋಧದಿಂದ ಅದು ಈಡೇರಲಿಲ್ಲ. ಜಾಮ್​ನಗರ್ ಸೈನಿಕ ಶಾಲೆಗೆ ಸೇರಬೇಕು ಎಂದುಕೊಂಡರೂ ಶುಲ್ಕ ಪಾವತಿಗೆ ಹಣ ಇಲ್ಲದ ಕಾರಣ ಸಾಧ್ಯವಾಗಲಿಲ್ಲ. ಆದರೆ ಮಾನವ ಸೇವೆಯ ಮೂಲಕ ತಮ್ಮ ಆಶಯ ಈಡೇರಿಸಿಕೊಂಡರು.

17ನೇ ವಯಸ್ಸಿನಲ್ಲಿದ್ದಾಗ ದೇಶ ಸಂಚಾರದ ಇಚ್ಛೆಯನ್ನು ಮನೆಯವರ ಎದುರು ವ್ಯಕ್ತಪಡಿಸಿದರು. ಮನೆಯವರಿಗೆ ಇದರಿಂದ ಆಘಾತವಾದರೂ ಕೊನೆಗೆ ಒಪ್ಪಿಕೊಳ್ಳಲೇಬೇಕಾಯಿತು. ಹಿಮಾಲಯ ಪರ್ವತ, ಪಶ್ಚಿಮ ಬಂಗಾಳದ ರಾಮಕೃಷ್ಣ ಆಶ್ರಮ ಮತ್ತು ಈಶಾನ್ಯ ಭಾರತದ ಹಲವೆಡೆ ಸಂಚರಿಸಿದರು. ದೇಶದ ವಿವಿಧ ಸಂಸ್ಕೃತಿಯ ಪರಿಚಯ ಈ ಸಂಚಾರದಲ್ಲಿ ಆಯಿತು. ಎರಡು ವರ್ಷಗಳ ನಂತರ ಮನೆಗೆ ಹಿಂದಿರುಗಿದರು. ಆದರೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​ಎಸ್​ಎಸ್​) ಅವರನ್ನು ಕೈಬೀಸಿ ಕರೆಯಿತು. ಲಕ್ಷ್ಮಣರಾವ್ ಇನಾಮ್​ದಾರ್ (ವಕೀಲ್ ಸಾಹೇಬ್) ಅವರ ಪ್ರಭಾವ ಇದಕ್ಕೆ ಮುಖ್ಯ ಕಾರಣ. 1972-73ರ ಅವರಧಿಯಲ್ಲಿ ಪ್ರಚಾರಕರಾಗಿ ಗುಜರಾತ್​ ಉದ್ದಗಲಕ್ಕೂ ಓಡಾಡಿದರು. ದೇಶದ ರಾಜಕಾರಣದಲ್ಲಿಯೂ ಸಂಚಲನ ಮೂಡುತ್ತಿದ್ದ ಕಾಲ ಅದು. ಭ್ರಷ್ಟಾಚಾರ ಮತ್ತು ಸ್ವಜನಪಕ್ಷದ ಕಾರಣದಿಂದ ಕಾಂಗ್ರೆಸ್​ನ ಜನಪ್ರಿಯತೆ ಕುಸಿಯುತ್ತಿತ್ತು. 1973ರ ಡಿಸೆಂಬರ್ ತಿಂಗಳಲ್ಲಿ ಜನರ ಆಕ್ರೋಶವು ಸಾರ್ವಜನಿಕವಾಗಿ ಅಭಿವ್ಯಕ್ತಗೊಂಡಿತು.

ಬೆಲೆ ಏರಿಕೆ ವಿರುದ್ಧ ಗುಜರಾತ್​ನ ಮೊರ್ಬಿ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನಾ ಮೆರವಣಿಗೆಗಯು ನವನಿರ್ಮಾಣ ಚಳವಳಿಯಾಗಿ ಯುವ ಆಂದೋಲನದ ರೂಪ ಪಡೆಯಿತು. ಚಳವಳಿಯ ಸಂಘಟನೆಯಲ್ಲಿ ಮೋದಿ ಪ್ರಮುಖ ಪಾತ್ರ ನಿರ್ವಹಿಸಿದರು. ಭ್ರಷ್ಟಾಚಾರದ ವಿರುದ್ಧದ ದನಿ ಎನಿಸಿದ್ದ ಜಯಪ್ರಕಾಶ್ ನಾರಾಯಣ್ ಸಹ ಚಳವಳಿಯಲ್ಲಿ ಪಾಲ್ಗೊಂಡರು. ಅವರನ್ನು ಭೇಟಿಯಾಗುವ ಅವಕಾಶ ಮೋದಿ ಅವರಿಗೆ ಸಿಕ್ಕಿತ್ತು.

ಚಳವಳಿಯ ಪ್ರಭಾವಕ್ಕೆ ಮಣಿದು ಗುಜರಾತ್​ನ ಕಾಂಗ್ರೆಸ್ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕಾಯಿತು. ಆದರೆ 25ನೇ ಜೂನ್ 1975ರಂದು ತುರ್ತುಪರಿಸ್ಥಿತಿ ಹೇರುವ ಮೂಲಕ ಇಂದಿರಾಗಾಂಧಿ ಸರ್ವಾಧಿಕಾರದ ಆಡಳಿತ ಆರಂಭವಾಯಿತು. ಅಟಲ್ ಬಿಹಾರಿ ವಾಜಪೇಯಿ, ಎಲ್​.ಕೆ.ಆಡ್ವಾಣಿ, ಜಾರ್ಜ್ ಫರ್ನಾಂಡಿಸ್, ಮೊರಾರ್ಜಿ ದೇಸಾಯಿ ಸೇರಿದಂತೆ ಹಲವು ಪ್ರಮುಖ ನಾಯಕರನ್ನು ಬಂಧಿಸಲಾಯಿತು. ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿ ಮೋದಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿದ್ದ ಮೋದಿ, ಬದ್ಧತೆ ಮತ್ತು ಕಠಿಣ ಪರಿಶ್ರಮದಿಂದ ಒಂದೊಂದೇ ಹಂತಗಳನ್ನು ಮೇಲೇರಿದರು. ಜನರ ಸಂತಸ, ದುಃಖ, ನೋವಿನ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಹೆಗಲಿಗೆ ಹೆಗಲು ಕೊಟ್ಟು ದುಡಿಯಬೇಕು ಎಂಬುದು ಅವರ ಮಂತ್ರವಾಗಿತ್ತು. ಆರ್​ಎಸ್​ಎಸ್​ಗಾಗಿ ಜೀವನ ಮುಡಿಪಿಡಲು ನಿರ್ಧರಿಸಿದ ನಂತರ ಅವರಿಗೆ ಸಿಕ್ಕ ಮೊದಲ ಜವಾಬ್ದಾರಿ ಎಂದರೆ ಅಹಮದಾಬಾದ್​ನಲ್ಲಿದ್ದ ಸಂಘದ ಕಾರ್ಯಾಲಯವನ್ನು ಸ್ವಚ್ಛವಾಗಿಡುವುದು. ಕಾರ್ಯಾಲಯದ ನೆಲ ಒರೆಸುವುದು, ಹಾಲು ತರುವುದು, ಒಮ್ಮೊಮ್ಮೆ ಹಿರಿಯ ಪ್ರಚಾರಕರ ಒಟ್ಟೆ ತೊಳೆಯುವ ಕೆಲಸವೂ ಮೋದಿ ಅವರದ್ದಾಗಿತ್ತು. ಈ ಕೆಲಸಗಳನ್ನು ಅವರು ತುಂಬಾ ಗೌರವ ಮತ್ತು ಪ್ರೀತಿಯಿಂದ ಮಾಡುತ್ತಿದ್ದರು.

ಸಂಘದ ಹಿರಿಯರ ಸೂಚನೆ ಮೇರೆಗೆ 1987ರ ನಂತರ ಮೋದಿ ಬದುಕಿನಲ್ಲಿ ಮತ್ತೊಂದು ಅಧ್ಯಾಯ ಆರಂಭವಾಯಿತು. ಆರ್​ಎಸ್​ಎಸ್​ ಸೂಚನೆ ಮೇರೆಗೆ ಬಿಜೆಪಿ ಚಟುವಟಿಕೆಗಳಲ್ಲಿ ಅವರು ಸಕ್ರಿಯರಾದರು. ಬಿಜೆಪಿ ಗುಜರಾತ್ ಘಟಕದ ಮಹಾಪ್ರಧಾನ ಕಾರ್ಯದರ್ಶಿಯಾಗಿ ದುಡಿದರು. ಅದೇ ವರ್ಷ ನಡೆದ ಅಹಮದಾಬಾದ್ ನಗರಾಡಳಿತ ಸಂಸ್ಥೆ ಚುನಾವಣೆಯಲ್ಲಿ ಮೋದಿ ಮೋಡಿ ಕೆಲಸ ಮಾಡಿತ್ತು. ಕಠಿಣ ಪರಿಶ್ರಮದಿಂದ ಅವರು ಬಿಜೆಪಿಗೆ ಮೇಲುಗೈ ಸಿಗುವಂತೆ ಮಾಡಿದರು.

1990ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 67 ಸ್ಥಾನ ಗಳಿಸಿತ್ತು. ಅಸ್ತಿತ್ವವೇ ಇಲ್ಲದ ಪಕ್ಷವೊಂದು ವಿಧಾನಸಭೆಯಲ್ಲಿ ದೊಡ್ಡಶಕ್ತಿಯಾಗಿ ಹೊರಹೊಮ್ಮಿದ್ದು ಎಲ್ಲರ ಗಮನ ಸೆಳೆಯಿತು. 1995 ಚುನಾವಣೆಯಲ್ಲಿ ಬಿಜೆಪಿ ಮೊದಲ ಬಾರಿಗೆ ಗುಜರಾತ್​ನ ಎಲ್ಲ 182 ಸ್ಥಾನಗಳಿಗೆ ಸ್ಪರ್ಧಿಸಿತ್ತು. ಶೇ 42.51ರ ಮತ ಪಡೆದು, 121 ಸ್ಥಾನಗಳೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಬಿಜೆಪಿ ರಾಜ್ಯ ಘಟಕದಲ್ಲಿ ಆಂತರಿಕ ಭಿನ್ನಮತ ಹೆಚ್ಚಾಗಿ, ಸಂಘಟನೆ ದುರ್ಬಲವಾಗತೊಡಗಿತು. 1996ರಲ್ಲಿ ಪಕ್ಷ ಸೋಲನುಭವಿಸಬೇಕಾಯಿತು. ಈ ಸಂದರ್ಭದಲ್ಲಿ ಮೋದಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ದೆಹಲಿಯಲ್ಲಿದ್ದರು.

1998ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂತು. ಆದರೆ 2001ರಲ್ಲಿ ಭ್ರಷ್ಟಾಚಾರದ ಆರೋಪಗಳು ವ್ಯಾಪಕವಾಗಿ ಕೇಳಬಿಂದು ಪಕ್ಷದ ಬಗ್ಗೆ ಜನರಲ್ಲಿ ಅಸಹನೆ ಮೊಳೆಯಿತು. ಹೀಗಾಗಿಯೇ 7ನೇ ಅಕ್ಟೋಬರ್ 2001ರಲ್ಲಿ ಪಕ್ಷದ ಹಿರಿಯರು ಮೋದಿ ಅವರಿಗೆ ಮುಖ್ಯಮಂತ್ರಿಯಾಗುವಂತೆ ಸೂಚಿಸಿದರು. ಅಧಿಕಾರದ ಕನಸೇ ಕಾಣದ ವ್ಯಕ್ತಿಯೊಬ್ಬನಿಗೆ ಗುಜರಾತ್​ನ ಪಕ್ಷದ ತಳಹದಿ ಭದ್ರಪಡಿಸಬೇಕೆಂಬ ಸೂಚನೆಯೊಂದಿಗೆ ಮುಖ್ಯಮಂತ್ರಿ ಸ್ಥಾನವನ್ನು ಪಕ್ಷ ಕೊಟ್ಟಿತ್ತು.

ಗೋಧ್ರಾದಲ್ಲಿ ಕೋಮುಗಲಭೆಗಳ ದುರದೃಷ್ಟಕರ ಸಂಗತಿಯ ನಂತರ ಮೋದಿ ವಿರುದ್ಧ ವ್ಯಾಪಕ ಅಪಪ್ರಚಾರಗಳು ನಡೆದವು. ಡಿಸೆಂಬರ್ 2002ರಲ್ಲಿ ವಿಧಾನಸಭೆಯನ್ನು ಅವಧಿಗೆ ಮೊದಲೇ ವಿಸರ್ಜಿಸಿ ಚುನಾವಣೆಗೆ ಹೋದರು. ಜನರಲ್ಲಿ ಭರವಸೆ ಬಿತ್ತಿದರು. 127 ಸ್ಥಾನಗಳಿಸಿದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂತು. 2002ರಿಂದ 2007ರವರೆಗೆ ಮೋದಿ ಒಳ್ಳೇ ಆಡಳಿತ ಕೊಟ್ಟರು. 2007ರಲ್ಲಿ ಮೋದಿ ವಿರುದ್ಧ ‘ಸಾವಿನ ವ್ಯಾಪಾರಿ’ ಎಂಬ ಪ್ರಚಾರದೊಂದಿಗೆ ಕಾಂಗ್ರೆಸ್ ಚುನಾವಣಾ ಪ್ರಚಾರ ನಡೆಸಿತು. ಆದರೂ ಜನರು ಬಿಜೆಪಿಯ 117 ಶಾಸಕರನ್ನು ಆಯ್ಕೆ ಮಾಡಿ ಅಧಿಕಾರಕೊಟ್ಟರು. 2012ರ ಡಿಸೆಂಬರ್​ನಲ್ಲಿ ಮತ್ತೊಮ್ಮೆ ಗುಜರಾತ್​ನಲ್ಲಿ ಬಿಜೆಪಿಯನ್ನು ಮೋದಿ ಅಧಿಕಾರಕ್ಕೆ ತಂದರು.

ಗುಜರಾತ್​ನಲ್ಲಿ ಸಕ್ರಿಯರಾಗಿದ್ದಾಗಲೂ ಮೋದಿ ರಾಷ್ಟ್ರ ರಾಜಕಾರಣದಲ್ಲೂ ಪಕ್ಷ ಪ್ರಬಲವಾಗಿಯೇ ಉಳಿಯುವಂತೆ ಗಮನಹರಿಸುತ್ತಿದ್ದರು. ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ, ಛತ್ತೀಶಗಡಗಳಲ್ಲಿ 1995ರಿಂದಲೂ ಮೋದಿ ಸಕ್ರಿಯರಾಗಿದ್ದರು. 1998ರಲ್ಲಿ ಬಿಜೆಪಿಯಲ್ಲಿ ಮಹತ್ವದ ಸ್ಥಾನ ಎನಿಸಿರುವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೂ ಮೋದಿ ಅವರನ್ನು ಆಯ್ಕೆ ಮಾಡಲಾಗಿತ್ತು.

ನರೇಂದ್ರ ಮೋದಿ ಅವರ ಸಂಘಟನಾ ಸಾಮರ್ಥ್ಯ, ರಾಜಕಾರಣದ ಕುಶಲ ಪಟ್ಟುಗಳನ್ನು ಗಮನಿಸಿಯೇ ಭಾರತೀಯ ಜನತಾ ಪಕ್ಷವು 2014ರ ಲೋಕಸಭೆ ಚುನಾವಣೆಗೂ ಮೊದಲು ಅಂದರೆ 13ನೇ ಸೆಪ್ಟೆಂಬರ್ 2013ರಲ್ಲಿ ಮೋದಿ ಅವರನ್ನು ಎನ್​ಡಿಎ ಮೈತ್ರಿಕೂಟದ ಪ್ರಧಾನ ಮಂಥ್ರಿ ಅಭ್ಯರ್ಥಿಯಾಗಿ ಘೋಷಿಸಲಾಯಿತು.

ರೈಲು ನಿಲ್ದಾಣದಲ್ಲಿ ಬಾಲ್ಯದಲ್ಲಿ ಟೀ ಮಾರುತ್ತಿದ್ದ ಬಾಲಕನೊಬ್ಬ ತನ್ನ ಸತತ ಪರಿಶ್ರಮದಿಂದ ಗ್ರಾಮ ಪಂಚಾಯಿತಿಯಿಂದ ಹಿಡಿದು ಸಂಸತ್ತಿನವರೆಗೆ ವಿವಿಧ ಹಂತಗಳ ಶಕ್ತಿಕೇಂದ್ರಗಳ ಹಾದು ಬಂದ ಬಗೆ ಭಾರತದ ಪ್ರಜಾಪ್ರಭುತ್ವಕ್ಕೆ ಇರುವ ಶಕ್ತಿಗೆ ಸಾಕ್ಷಿ ಎನಿಸಿದೆ. ಸಂಘಟನೆಯಲ್ಲಿ ತೋರಿದ ಶ್ರದ್ಧೆ ಅವರ ಕೈಹಿಡಿಯಿತು. ಜನರ ಮನಗೆದ್ದ ನರೇಂದ್ರ ಮೋದಿ 2014ರಲ್ಲಿ ದೇಶದ ಪ್ರಧಾನಿಯಾದರು. ಅವರ ಆಡಳಿತ ವೈಖರಿಗೆ ಮೆಚ್ಚುಗೆ ಸೂಚಿಸಿದ್ದ ದೇಶದ ಜನರು 2019ರಲ್ಲಿ ಅವರಿಗೆ ಮತ್ತೊಮ್ಮೆ ಪ್ರಧಾನಿಯಾಗುವ ಅವಕಾಶ ನೀಡಿದರು.

ಕೌಟುಂಬಿಕ ಜೀವನ
ನರೇಂದ್ರ ಮೋದಿ ಅವರ ತಾಯಿ ಹಿರಾಬೆನ್ ಮೋದಿ, ತಂದೆ ದಾಮೋದರ್​ದಾಸ್ ಮೋದಿ. ಮೂರು ಸೋದರರು ಇಬ್ಬರು ಸೋದರಿಯರಿದ್ದ ಕುಟುಂಬ ಅವರದು. ಮೋದಿ ಅವರಿಗೆ 1968ರಲ್ಲಿ ಮದುವೆಯಾಯಿತು. ಪತ್ನಿಯ ಹೆಸರು ಜಶೋದಾಬೆನ್. ಆದರೆ ದಂಪತಿ ಒಟ್ಟಿಗೆ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ.

ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣಗಲ್ಲಿ ಹರಿದುಬಂದ ಶುಭಾಶಯಗಳ ಸುರಿಮಳೆ.

ಬೆಂಗಳೂರು: 71ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗಣ್ಯರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

ಬಿಜೆಪಿ ಮುಖಂಡರು, ಕಾರ್ಯಕರ್ತರು, ಮೋದಿ ಅಭಿಮಾನಿಗಳು ಎಲ್ಲರು ಭಿನ್ನ ಭಿನ್ನ ರೀತಿಯಲ್ಲಿ ಶುಭಾಶಯ ಕೋರಿದ್ದಾರೆ.

ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸ್ವಾತಂತ್ರ್ಯದ ನಂತರ ಭಾರತಕ್ಕೆ ದೊರೆತ ಒಬ್ಬ ದಿಟ್ಟ ಸ್ಪಷ್ಟ, ಸಮರ್ಥ ನಾಯಕ, ಭಾರತವನ್ನು ಒಗ್ಗೂಡಿಸಿ ಜನರಲ್ಲಿ ರಾಷ್ಟ್ರಾಭಿಮಾನವನ್ನು ಮೂಡಿಸಿ ಹೊಸ ಭಾರತ ಕಟ್ಟಲು ಅಣಿಯಾಗಿರುವ ನಮ್ಮೆಲ್ಲರ ನೆಚ್ಚಿನ ಪ್ರಧಾನಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜೀ ಅವರಿಗೆ 71 ನೇ ಜನ್ಮ ದಿನದ ಹಾರ್ದಿಕ ಶುಭಾಶಯಗಳು’ ಎಂದು ಕೂ ಮಾಡಿದ್ದಾರೆ.

ಸಂಸದ ಬಿ.ವೈ ರಾಘವೇಂದ್ರ ಅವರು, ‘ವಿಶ್ವನಾಯಕ, ಹೆಮ್ಮೆಯ ಪ್ರಧಾನಮಂತ್ರಿ ಸನ್ಮಾನ್ಯ ಪ್ರಧಾನಿ ಅವರಿಗೆ ಜನ್ಮದಿನದ ಶುಭಾಶಯಗಳು. ದಿಟ್ಟ ನಿರ್ಧಾರ, ತಾಂತ್ರಿಕತೆಯ ಒಲವು, ಸಂವಹನ ಸ್ಪಷ್ಟತೆ, ದೂರದೃಷ್ಟಿ ನಾಯಕತ್ವದಿಂದ ಭಾರತ ಸರ್ವಮಾನ್ಯವಾಗುತ್ತಿದೆ. ಭಗವಂತ ಅವರಿಗೆ ದೀರ್ಘಾಯುಷ್ಯ ಹಾಗೂ ಉತ್ತಮ ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಮ್ಮ ಶುಭಾಶಯ ಕೋರಿದ್ದಾರೆ.


ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ‘ಆತ್ಮನಿರ್ಭರದ ಮೂಲಕ ಭಾರತಕ್ಕೆ ಅಂತ್ಯೋದಯದಂತಹ ಮಾದರಿ ಯೋಜನೆಗಳನ್ನು ಕಲ್ಪಿಸಿದ ನಾಯಕ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿಯವರಿಗೆ, ಜನ್ಮದಿನದ ಶುಭಾಶಯಗಳು’ ಎಂದು ಕೂ ಮಾಡಿದ್ದಾರೆ.

(Prime Minister Narendra Modi Profile Wiki Age Wife Family Caste Biography details in Kannada)

ಇದನ್ನೂ ಓದಿ: PM Modi: ಪ್ರಧಾನಿ ನರೇಂದ್ರ ಮೋದಿ ಜನ್ಮದಿನದಂದು ಅವರ ಕುರಿತ ಕೆಲವು ಕುತೂಹಲಕರ ಸಂಗತಿಗಳು

ಇದನ್ನೂ ಓದಿ: PM Narendra Modi: 71ರ ಹರೆಯದಲ್ಲಿಯೂ ದಣಿವರಿಯದ ನಾಯಕ ನರೇಂದ್ರ ಮೋದಿಯವರ ಆರೋಗ್ಯದ ಗುಟ್ಟೇನು?

Published On - 12:16 am, Fri, 17 September 21