ಈಗಂತೂ ಮಕ್ಕಳ ಇಸ್ಕೂಲ್ ಮನೇಲಲ್ವೇ? ಹಾಗಿದ್ದರೆ ಪಠ್ಯಪುಸ್ತಕ ಬಿಟ್ಟು ಬೇರೇನು ಓದುತ್ತಿವೆ ನಮ್ಮ ಮಕ್ಕಳು ಎನ್ನುವ ಕುತೂಹಲ ಟಿವಿ9 ಕನ್ನಡ ಡಿಜಿಟಲ್ಗೆ ಉಂಟಾಯಿತು. ತಡಮಾಡದೆ ಒಂದಿಷ್ಟು ಮಕ್ಕಳಿಗೆ, ಈ ತನಕ ನಿಮಗೆ ಇಷ್ಟವಾದ ಐದು ಪುಸ್ತಕಗಳು ಮತ್ತವುಗಳ ಬಗ್ಗೆ ದೊಡ್ಡವರ ಸಹಾಯ ಪಡೆದುಕೊಂಡೇ ಬರೆದು ಕಳಿಸಿ ಎಂದು ಕೇಳಲಾಯಿತು. ಮೆಲ್ಲಮೆಲ್ಲಗೆ ‘ಕನ್ನಡ’ದಲ್ಲಿ ಬಂದು ನಮ್ಮನ್ನು ತಲುಪಿದ ಮೇಲ್ಗಳಲ್ಲಿ ಕೆಲವೊಂದಿಷ್ಟನ್ನು ಆಯ್ಕೆ ಮಾಡಲಾಯಿತು. ಈ ಓದು ಮಗು ಓದು ಸರಣಿಯಲ್ಲಿ ಪ್ರಜ್ಞಾವಂತ ಪೋಷಕರ, ಲೇಖಕರ, ಶಿಕ್ಷಕರ ಮತ್ತು ಓದುಬರಹವನ್ನೇ ಬದುಕಿನ ಭಾಗವಾಗಿಸಿಕೊಂಡ ದೊಡ್ಡಮಕ್ಕಳ ಅನುಭವಾಧಾರಿತ ಕಥನಗಳು, ವಿಶ್ಲೇಷಣಾತ್ಮಕ ಮತ್ತು ಮುನ್ನೋಟದಿಂದ ಕೂಡಿದ ಲೇಖನಗಳೂ ಇರುತ್ತವೆ. ಇಷ್ಟೇ ಅಲ್ಲ, ಇಲ್ಲಿ ನೀವೂ ನಿಮ್ಮ ಮಕ್ಕಳೊಂದಿಗೆ ಪಾಲ್ಗೊಳ್ಳಬಹುದು ಹಾಗೆಯೇ ಪ್ರತಿಕ್ರಿಯೆಗಳನ್ನೂ ಹಂಚಿಕೊಳ್ಳಬಹುದು. ಇ-ಮೇಲ್ tv9kannadadigital@gmail.com
ವಿಷ್ಣು ಮಂಜುನಾಥ ಹಟ್ಟಿ ಇಷ್ಟಪಡುವ ಪುಸ್ತಕಗಳು ಇಲ್ಲಿವೆ
ಪು: ಸತ್ಯಹರಿಶ್ಚಂದ್ರ (ಮಕ್ಕಳ ಚಿತ್ರಕಥಾ ಮಾಲಿಕೆ)
ಕನ್ನಡಕ್ಕೆ: ಸು. ರುದ್ರಮೂರ್ತಿಶಾಸ್ತ್ರಿ
ಕಲೆ: ವಿ.ರಾಮಾನುಜ
ಪ್ರ: ಎಸ್ಬಿಎಸ್ ಪಬ್ಲಿಷರ್ಸ್
ನಾನು ಈ ಪುಸ್ತಕವನ್ನು ಹತ್ತು ಸಲ ಓದಿದ್ದೇನೆ. ಏಕೆಂದರೆ ಹರಿಶ್ಚಂದ್ರನು ಸತ್ಯವನ್ನು ಹೇಳುತ್ತಿದ್ದನು. ಅವನು ಸ್ಮಶಾನವನ್ನು ಕಾಯುವ ಪರಿಸ್ಥಿತಿ ಬಂದರೂ ಸತ್ಯ ಹೇಳುವುದನ್ನು ಬಿಡಲಿಲ್ಲ ನೋಡಿ ಅದಕ್ಕೆ. ಹರಿಶ್ಚಂದ್ರನು ಕಷ್ಟದಲ್ಲಿದ್ದಾಗ ಅವನ ಹೆಂಡತಿ ತಾರಾಮತಿ ಮತ್ತು ಮಗ ಲೋಹಿತಾಶ್ವ ಇಬ್ಬರೂ ತಮ್ಮನ್ನು ಮಾರಿಕೊಂಡು ಅವನಿಗೆ ಸಹಾಯ ಮಾಡಿದರು. ಇದು ನನ್ನ ಮನಸ್ಸಿನಲ್ಲಿ ಉಳಿದುಬಿಟ್ಟಿದೆ.
ಪು: ಏಕಲವ್ಯ (ಮಕ್ಕಳ ಚಿತ್ರಕಥಾ ಮಾಲಿಕೆ)
ಕನ್ನಡಕ್ಕೆ: ಸು. ರುದ್ರಮೂರ್ತಿ ಶಾಸ್ತ್ರಿ
ಕಲೆ: ವಿ. ರಾಮಾನುಜ
ಪ್ರ: ಎಸ್ಬಿಎಸ್ ಪಬ್ಲಿಷರ್ಸ್
ಏಕಲವ್ಯನು ಗುರುಗಳಲ್ಲಿ ತುಂಬಾ ಭಕ್ತಿ ಹೊಂದಿದ್ದನು. ಗುರುಗಳು ಅವನಿಗೆ ಬಿಲ್ವಿದ್ಯೆ ಕಲಿಸಲು ತಿರಸ್ಕರಿಸಿದಾಗ ಮಣ್ಣಿನಿಂದ ಗುರುಗಳ ಮೂರ್ತಿಯನ್ನು ಮಾಡಿ ಪೂಜಿಸುತ್ತ ಬಿಲ್ಲುಗಾರಿಕೆಯನ್ನುಅಭ್ಯಾಸ ಮಾಡಿದನು. ಹೀಗೆ ಅಭ್ಯಾಸ ಮಾಡಿಮಾಡಿ ಅರ್ಜುನನಿಗಿಂತಲೂ ಉತ್ತಮ ಬಿಲ್ಲುಗಾರನಾದನು. ಅದಕ್ಕೇ ನನಗೆ ಈ ಕಥೆ ಬಹಳ ಇಷ್ಟವಾಯಿತು.
ಪು: ಕೃಷ್ಣ ಸುಧಾಮ (ಮಕ್ಕಳ ಚಿತ್ರಕಥಾ ಮಾಲಿಕೆ)
ಕನ್ನಡಕ್ಕೆ: ಸು. ರುದ್ರಮೂರ್ತಿ ಶಾಸ್ತ್ರಿ
ಕಲೆ: ವಿ. ರಾಮಾನುಜ
ಪ್ರ: ಎಸ್ಬಿಎಸ್ ಪಬ್ಲಿಷರ್ಸ್
ಕೃಷ್ಣ ಸುಧಾಮರಿಬ್ಬರೂ ಆಪ್ತಮಿತ್ರರಾಗಿದ್ದರು. ಒಬ್ಬರನ್ನು ಬಿಟ್ಟು ಒಬ್ಬರು ಇರುತ್ತಿರಲಿಲ್ಲ. ಇಬ್ಬರೂ ಗಿಡಗಳಿಗೆ ನೀರನ್ನು ಹಾಕುವುದು, ದನಗಳಿಗೆ ಹುಲ್ಲು ಮೇವನ್ನು ಹಾಕುವುದು, ಆಶ್ರಮದ ಬಳಕೆಗೆ ಹೂವು, ಹಣ್ಣುಗಳನ್ನುಸಂಗ್ರಹಿಸಿ ತರುವುದು, ಪಾಠ ಕೇಳುವುದು ಇಬ್ಬರೂ ಒಟ್ಟಿಗೇ. ಆಮೇಲೆ ಶ್ರೀಕೃಷ್ಣನು ದ್ವಾರಕೆಯ ರಾಜನಾಗುತ್ತಾನೆ. ಸುಧಾಮ ಬ್ರಾಹ್ಮಣನಾಗಿದ್ದು ಬಡವನಾಗಿ ಉಳಿಯುತ್ತಾನೆ. ಬದುಕುವುದು ಕಷ್ಟ ಆದಾಗ ಸುಧಾಮನು ಕೃಷ್ಣನ ಬಳಿ ಸಹಾಯ ಕೇಳಲು ಹೋಗುತ್ತಾನೆ. ಆಗ ಕೃಷ್ಣನು ಸುಧಾಮನು ಸಹಾಯ ಕೇಳುವ ಮೊದಲೇ ಅವನಿಗೆ ಗೊತ್ತಾಗದಂತೆ ತಾನೇ ಸಹಾಯ ಮಾಡುತ್ತಾನೆ. ಅದಕ್ಕೇ ನನಗೆ ಈ ಕತೆ ಅಂದರೆ ಬಹಳ ಇಷ್ಟ.
ಪು: ರಾಮ ರಾಜಕುಮಾರ (ಮಕ್ಕಳ ಚಿತ್ರಕಥಾ ಮಾಲಿಕೆ)
ಕನ್ನಡಕ್ಕೆ: ಸು. ರುದ್ರಮೂರ್ತಿ ಶಾಸ್ತ್ರಿ
ಕಲೆ: ವಿ. ರಾಮಾನುಜ
ಪ್ರ: ಎಸ್ಬಿಎಸ್ ಪಬ್ಲಿಷರ್ಸ್
ರಾಮನು ಬಿಲ್ಲನ್ನು ಪ್ರಯೋಗಿಸುವುದರಲ್ಲಿ ನಿಪುಣನಾಗಿದ್ದನು. ಅವನ ಗುರುಗಳು ವಸಿಷ್ಠ ಮುನಿಗಳು. ತಂದೆ ದಶರಥ, ತಾಯಿ ಕೌಸಲ್ಯೆ. ರಾಮನು ಶೂರ, ಸಾಹಸಿ, ದಯಾಳು ಹಾಗೂ ಎಲ್ಲರೂ ಇಷ್ಟಪಡುವಂಥವನಾಗಿದ್ದನು. ಅದಕ್ಕೇ ನನಗೆ ಈ ಕಥೆ ಬಹಳ ಇಷ್ಟ.
ಪು: ಲವಕುಶ
ಲೇ : ಡಾ.ಶಿವರಾಮ ಕಾರಂತ
ಪ್ರ: IBH ಪ್ರಕಾಶನ
ಈ ಪುಸ್ತಕದಲ್ಲಿ ಲವಕುಶರ ಬಗ್ಗೆ ಬರೆದಿದ್ದಾರೆ. ಅವರು ಶ್ರೀರಾಮ ಮತ್ತು ಸೀತಾಮಾತೆಯ ಮಕ್ಕಳು. ಅವರ ಗುರುಗಳು ವಾಲ್ಮೀಕಿ ಮಹರ್ಷಿಗಳು. ಲವಕುಶರು ನನಗೆಇಷ್ಟ. ಏಕೆಂದರೆ ಅವರು ಚುರುಕಾಗಿದ್ದರು. ತಮ್ಮ ತಂದೆಯನ್ನೇ ಯುದ್ಧದಲ್ಲಿ ಎದುರಿಸಿದರು. ಅವರು ಯಜ್ಞ ಮಾಡುವುದು, ಬಿಲ್ವಿದ್ಯೆ, ಶ್ಲೋಕಪಠಣ, ಯೋಗಾಭ್ಯಾಸ ಎಲ್ಲವನ್ನೂ ಕಲಿತಿದ್ದರು. ಅದಕ್ಕೇ ನನಗೆ ಈ ಕಥೆ ಬಹಳ ಇಷ್ಟ. ನಾನು ಈ ಪುಸ್ತಕವನ್ನು ಏಳು ಸಲ ಓದಿದ್ದೇನೆ.
ಓದು ಮಗು ಓದು: ಭಾಷೆ ಸಂವಹನಕ್ಕಷ್ಟೇ ಅಲ್ಲ ಸಂವೇದನೆಗಳನ್ನು ವಿಸ್ತರಿಸುವ ಸಾಧನ