ಓದು ಮಗು ಓದು: ನಾವು ಓದಿದರೆ ನಮ್ಮ ಮಕ್ಕಳೂ ಓದುತ್ತಾರೆ…

|

Updated on: Mar 19, 2021 | 12:39 PM

‘ಮೆಕ್ಸಿಕನ್ ದೇಶದ ಕಥೆ ಹೇಳುವಾಗ, ಅದರಲ್ಲಿ ಪುಟ್ಟ ಮರಿ ಬಿದ್ದು ಕಾಲಿಗೆ ದೊಡ್ಡ ಗಾಯ ಮಾಡಿಕೊಂಡಿರುತ್ತದೆ. ಅದನ್ನು ಹೇಳುವಾಗ ಕೆಚಪ್ ಕಾಲ ಮೇಲೆ ಸುರಿದಿದ್ದರು. ಪುಟ್ಟ ಹುಡುಗ ಅದನ್ನು ಕಂಡು ಅತ್ತರೆ, ಮತ್ತೊಂದು ಮಗು ತನ್ನ ಕೈಯ್ಯಿಂದ ಅದನ್ನು ಒರೆಸುತ್ತಾ ‘ಓಹ್ ಡಸ್ ಇಟ್ ಹರ್ಟ್?’ ಎಂದು ಸಂತೈಸಿತ್ತು. ಆ ಕಥೆ ಮುಗಿಯುವಷ್ಟರಲ್ಲಿ ನನಗೆ ಸ್ಪ್ಯಾನಿಶ್ ಕಲಿತಿದ್ದರೆ! ಅನ್ನಿಸಿತ್ತು. ಅಪ್ರಜ್ಞಾಪೂರ್ವಕವಾಗಿ ಮಕ್ಕಳನ್ನು ಕೇಳುವಿಕೆಯ ಮೂಲಕ ಓದಿನ ಅದ್ಭುತ ಪ್ರಪಂಚಕ್ಕೆ ಪರಿಚಯಿಸುವ ರೀತಿ ಇದು ಎಂದು ಅರಿವಿಗೆ ಬಂದಿತು.‘ ಡಾ. ಕೆ. ಎಸ್​. ಚೈತ್ರ.

ಓದು ಮಗು ಓದು: ನಾವು ಓದಿದರೆ ನಮ್ಮ ಮಕ್ಕಳೂ ಓದುತ್ತಾರೆ...
ಸಾಂದರ್ಭಿಕ ಚಿತ್ರ
Follow us on

ಈಗಂತೂ ಮಕ್ಕಳ ಇಸ್ಕೂಲ್​ ಮನೇಲಲ್ವೇ? ಹಾಗಿದ್ದರೆ ಪಠ್ಯಪುಸ್ತಕ ಬಿಟ್ಟು ಬೇರೇನು ಓದುತ್ತಿವೆ ನಮ್ಮ ಮಕ್ಕಳು ಎನ್ನುವ ಕುತೂಹಲ ಟಿವಿ9 ಕನ್ನಡ ಡಿಜಿಟಲ್​ಗೆ ಉಂಟಾಯಿತು. ತಡಮಾಡದೆ ಒಂದಿಷ್ಟು ಮಕ್ಕಳಿಗೆ, ಈ ತನಕ ನಿಮಗೆ ಇಷ್ಟವಾದ ಐದು ಪುಸ್ತಕಗಳು ಮತ್ತವುಗಳ ಬಗ್ಗೆ ದೊಡ್ಡವರ ಸಹಾಯ ಪಡೆದುಕೊಂಡೇ ಬರೆದು ಕಳಿಸಿ ಎಂದು ಕೇಳಲಾಯಿತು. ಮೆಲ್ಲಮೆಲ್ಲಗೆ ‘ಕನ್ನಡ’ದಲ್ಲಿ ಬಂದು ನಮ್ಮನ್ನು ತಲುಪಿದ ಮೇಲ್​ಗಳಲ್ಲಿ ಕೆಲವೊಂದಿಷ್ಟನ್ನು ಆಯ್ಕೆ ಮಾಡಲಾಯಿತು. ಈ ಓದು ಮಗು ಓದು ಸರಣಿಯಲ್ಲಿ ಪ್ರಜ್ಞಾವಂತ ಪೋಷಕರ, ಲೇಖಕರ, ಶಿಕ್ಷಕರ ಮತ್ತು ಓದುಬರಹವನ್ನೇ ಬದುಕಿನ ಭಾಗವಾಗಿಸಿಕೊಂಡ ದೊಡ್ಡಮಕ್ಕಳ ಅನುಭವಾಧಾರಿತ ಕಥನಗಳು, ವಿಶ್ಲೇಷಣಾತ್ಮಕ ಮತ್ತು ಮುನ್ನೋಟದಿಂದ ಕೂಡಿದ ಲೇಖನಗಳೂ ಇರುತ್ತವೆ. ಇಷ್ಟೇ ಅಲ್ಲ, ಇಲ್ಲಿ ನೀವೂ ನಿಮ್ಮ ಮಕ್ಕಳೊಂದಿಗೆ ಪಾಲ್ಗೊಳ್ಳಬಹುದು ಹಾಗೆಯೇ ಪ್ರತಿಕ್ರಿಯೆಗಳನ್ನೂ ಹಂಚಿಕೊಳ್ಳಬಹುದು. ಇ-ಮೇಲ್  tv9kannadadigital@gmail.com

ದಂತವೈದ್ಯೆ, ಲೇಖಕಿ ಡಾ. ಕೆ. ಎಸ್​. ಚೈತ್ರಾ ಅವರ ಅನುಭವ ಬರಹ ನಿಮ್ಮ ಓದಿಗೆ.

ಕನಸಿಗೆ ರೆಕ್ಕೆ ಕಟ್ಟಿ ಹಾರುತ್ತಾಕಥಾ ಪ್ರಪಂಚದಲ್ಲಿ!
ಅಕ್ಕ ’ನಾನು ಮೊದಲು ಅದನ್ನು ನೋಡಿದ್ದು ಚೆನ್ನಾಗಿದೆ ಅಂತ ಹೇಳಿದ್ದು, ನಂಗೇ ಸಿಗಬೇಕು!’
ತಂಗಿ ’ನೋಡ್ಬಿಟ್ರೆ, ಹೇಳ್ಬಿಟ್ರೆ ಆಯ್ತಾ? ಅಂಗಡಿಗೆ ಹೋಗಿ ತಂದಿದ್ದು ನಾನು ನಂಗೇ ಮೊದಲು!’

ಅಕ್ಕತಂಗಿಯರ ನಡುವೆ ಘನಘೋರ ಕಾಳಗ; ಬೇಸತ್ತು ಬಿಡಿಸಲು ಬಂದ ಅಮ್ಮನ ಮಾತು ‘ಏನ್ರೇ ಇಡೀ ಊರೆಲ್ಲಾ ನಡುಗುವ ಹಾಗೆ ಈ ರೀತಿ ಕಿತ್ತಾಡ್ತೀರಾ? ಏನದು ಸಿಕ್ತಾ! ಅದನ್ನು ತರಲು ದುಡ್ಡು ಕೊಟ್ಟಿದ್ದು ನಾನು, ಮೊದಲು ನನಗೇ’ ಈಗ ಇಬ್ಬರಲ್ಲ ಮೂವರ ನಡುವೆ ಜಗ್ಗಾಟ ಕಿತ್ತಾಟ. ಕಡೆಗೆ ಅಮ್ಮನಾದ ನನ್ನನ್ನು ದೂರ ಇಟ್ಟ ನನ್ನ ಇಬ್ಬರೂ ಹೆಣ್ಣುಮಕ್ಕಳು ಒಟ್ಟಾಗಿ ಒಂದೇ ಪುಸ್ತಕ ಓದುವುದರೊಂದಿಗೆ ಕದನ ವಿರಾಮ ಘೋಷಿಸಿದರು. ಹೊಸ ಕಥೆ, ಕಾದಂಬರಿ ತಂದಾಗೆಲ್ಲ ನಮ್ಮ ಮನೆಯ ದೃಶ್ಯ ಹೀಗೇ ಇರುತ್ತದೆ. ನಾನು, ನನ್ನಮ್ಮಅಪ್ಪತಂಗಿಯರೊಡನೆ ನಡೆಸುತ್ತಿದ್ದದ್ದು ಈಗ ಮಕ್ಕಳೊಡನೆ ಮುಂದುವರಿದಿದೆ ಅಷ್ಟೇ.

ಹಾಗೆ ನೋಡಿದರೆ ಆಟಓದು ಮಕ್ಕಳ ಬದುಕಿನ ಅವಿಭಾಜ್ಯ ಅಂಗವಾಗಿದ್ದ ಸಮೃದ್ಧ ಬಾಲ್ಯ ನನ್ನದು. ಓದು ಎಂದರೆ ಶಾಲಾ ಪುಸ್ತಕಗಳ ಓದಲ್ಲ, ಕತೆಪುಸ್ತಕಗಳು. ಯಾವುದೇ ಲಿಖಿತಮೌಖಿಕ ಪರೀಕ್ಷೆ ಇಲ್ಲದೇ ಕೇವಲ ಖುಷಿಆಸಕ್ತಿಯಿಂದ ನಡೆಯುತ್ತಿದ್ದ ಪಠ್ಯೇತರ ಓದು ನಮ್ಮ ಕನಸಿಗೆ ರೆಕ್ಕೆ ಮೂಡಿಸಿತ್ತು. ಮತ್ತಷ್ಟು ಹಾರುವಓದುವ ತುಡಿತವನ್ನು ಹೆಚ್ಚಿಸಿತ್ತು; ಮುಂದೆ ನಮಗರಿವಿಲ್ಲದೇ ಜೀವನ ಪರೀಕ್ಷೆಯಲ್ಲಿ ದಾರಿದೀಪವಾಯಿತು ಎಂದರೆ ಅತಿಶಯೋಕ್ತಿಯಲ್ಲ. ಬಾಲ್ಯದ ಸವಿಯನ್ನು ಹೆಚ್ಚಿಸಿದ್ದು, ಮನಸ್ಸಿಗೆ ಸಂಸ್ಕಾರ ನೀಡಿದ್ದು, ಮನಸ್ಸಿನ ಒತ್ತಡ ಕಡಿಮೆ ಮಾಡಿದ್ದು, ಸಮಾನ ಆಸಕ್ತಿಯ ಸ್ನೇಹಿತರನ್ನು ಕೊಟ್ಟದ್ದು, ಕಲ್ಪನಾ ಪ್ರಪಂಚ ವಿಸ್ತರಿಸಿದ್ದು ಇನ್ನೂ ಲೆಕ್ಕವಿಲ್ಲದ ಲಾಭ ಸಿಕ್ಕಿದ್ದು ಈ ಓದಿನಿಂದ. ಹಳೆಯದನ್ನೇ ನೆನೆಸಿ ಅದೇ ಶ್ರೇಷ್ಠ, ಹೊಸದು ಸರಿಯಿಲ್ಲ ಎನ್ನುವ ಹಳಹಳಿಕೆ ತಪ್ಪು; ಆದರೂ ಟಿ.ವಿ, ಕಂಪ್ಯೂಟರ್, ಮೊಬೈಲ್, ವಿಡಿಯೋ ಗೇಮ್ಸ್ ಎನ್ನುತ್ತಾ ಇಂದಿನ ಮಕ್ಕಳು ಪುಸ್ತಕ ಸಂಸ್ಕೃತಿಯಿಂದ, ಪಠ್ಯೇತರ ಓದಿನ ಸುಖದಿಂದ ವಂಚಿತರಾಗುತ್ತಾರಲ್ಲಾ ಎಂಬ ಕಸಿವಿಸಿಕಳವಳ ನನ್ನನ್ನು ಕಾಡುತ್ತದೆ.

ಬರೀ ನನಗಲ್ಲ, ವಿಜ್ಞಾನಿಗಳುವೈದ್ಯರುಭಾಷಾತಜ್ಞರು ಕೂಡಾ ಈ ಕುರಿತು ಹಲವಾರು ಸಂಶೋಧನೆಗಳನ್ನು ನಡೆಸಿ ಅಧ್ಯಯನ ನಡೆಸಿದ್ದಾರೆ. ಆ ಅಂಕಿಅಂಶಗಳು ಆತಂಕ ಮೂಡಿಸಿವೆ. ಶಾಲೆಗೆ ಹೋಗುವ ಮಕ್ಕಳು ಮತ್ತು ಹದಿಹರೆಯದವಲ್ಲಿ ಓದುವ ಅಭ್ಯಾಸ ದಿನೇ ದಿನೇ ಕಡಿಮೆಯಾಗುತ್ತಿದೆ. ಮುಖ್ಯ ಕಾರಣಗಳು: 

ಹೆಚ್ಚಿರುವ ಸ್ಕ್ರೀನ್ ಟೈಂ:
 ನಮ್ಮ ಜೀವನ ಸುಲಭವಾಗಿಸಲು ಕಂಡುಹಿಡಿದ ಟಿ.ವಿ, ಕಂಪ್ಯೂಟರ್, ಮೊಬೈಲ್‍ಗಳು ಮನೆಯನ್ನಷ್ಟೇ ಅಲ್ಲ ಜೀವನವನ್ನೇ ಆಕ್ರಮಿಸಿದೆ. ಅಂಗೈಯಲ್ಲಿ ಪ್ರಪಂಚ ತೋರಿಸುತ್ತಲೇ ಪಕ್ಕದಲ್ಲಿರುವವರನ್ನು ಅಪರಿಚಿತರನ್ನಾಗಿಸಿದೆ. ಇದು ಯಂತ್ರಗಳ ದೋಷವಲ್ಲ; ಅದನ್ನು ಸರಿಯಾಗಿ ಬಳಸದ ನಮ್ಮ ತಪ್ಪು!

ಅಂಕಗಳಿಕೆಯ ವ್ಯಾಮೋಹ: ಪಠ್ಯವನ್ನೂ ಓದಿದರೆ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಬಹುದು. ಹೆಚ್ಚು ಅಂಕ ಬಂದರೆ ಉದ್ಯೋಗವಕಾಶ ಹೆಚ್ಚು, ಒಳ್ಳೆ ಉದ್ಯೋಗ ಎಂದರೆ ದೊಡ್ಡ ಸಂಬಳ! ಹಾಗಾಗಿ ದಿನಕ್ಕೆ ಇಪ್ಪತ್ನಾಲ್ಕು ಗಂಟೆ ಪಠ್ಯಪುಸ್ತಕ ಓದು. ಸುಮ್ಮನೇ ಖುಷಿಗೆ ಓದುವ ಪಠ್ಯೇತರ ಓದಿನಿಂದ ಪ್ರಯೋಜನವೇನು ಎಂಬ ಭಾವನೆ ಪೋಷಕರು ಮತ್ತು ಅನಿವಾರ್ಯ ಕಾರಣಗಳಿಂದ ಶಿಕ್ಷಕರಲ್ಲೂ ಹೆಚ್ಚಾಗಿರುವುದು.

ಮಕ್ಕಳಿಗೆ ಸಮಯವೇ ಇಲ್ಲ: ಓದುವ ಪ್ರವೃತ್ತಿ ಕಡಿಮೆಯಾಗಿರುವುದಕ್ಕೆ ನೀಡುವ ಇನ್ನೊಂದು ಕಾರಣವಾದ ಇದು ಸ್ವಲ್ಪ ಮಟ್ಟಿಗೆ ನಿಜವೇ! ಮಕ್ಕಳನ್ನು ಸಕಲಕಲಾವಲ್ಲಭರನ್ನಾಗಿಸುವ ಪೋಷಕರ ಪ್ರಯತ್ನದಲ್ಲಿ ಯಾರಿಗೂ ಸಮಯವಿಲ್ಲ. ಅಷ್ಟಾಗಿಯೂ ಎಲ್ಲರಿಗೂ ಮೊಬೈಲ್, ಟಿ.ವಿ, ಕಂಪ್ಯೂಟರ್​ಗಳಿಗೆ ಸಮಯವಿದೆ. ಅವೆಲ್ಲವೂ ಇರಲಿ; ಆದರೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ನೆರವಾಗುವ, ಮನರಂಜನೆಯನ್ನೂ ನೀಡುವ ಓದುವ ಪ್ರವೃತ್ತಿಗೆ ಹೇಗಾದರೂ ಸಮಯ ಕೊಡಲೇಬೇಕು.

ಕಾರಣ ಏನೇ ಇರಲಿ: ಪುಸ್ತಕ ಓದುವ ಅಭ್ಯಾಸ ಈಗಿನ ಮಕ್ಕಳಿಗೆ ಕಡಿಮೆ ಎಂಬುದನ್ನು ಒಪ್ಪಿಕೊಳ್ಳುತ್ತಲೇ ನಾವೇನು ಮಾಡಬಹುದು ಎಂಬುದನ್ನು ನಿರ್ಧರಿಸಬೇಕು. ಹಾಗಾಗಿ ದೂರುವ ಮೊದಲು ಪೋಷಕರಾದ ನಮ್ಮ ಬದಲಾದ ಜೀವನ ಶೈಲಿಯತ್ತ ಗಮನ ಹರಿಸುವುದು ಮುಖ್ಯ. ಓದು ಅತ್ಯುತ್ತಮ ಹವ್ಯಾಸಗಳಲ್ಲಿ ಒಂದು ಹೇಳಲಾಗುತ್ತದೆ. ಆದರದು ಮಕ್ಕಳಾದ ನಮಗೆ ಹವ್ಯಾಸವಾಗಿರಲಿಲ್ಲ, ಸ್ವಭಾವವೇ ಆಗಿತ್ತು, ಆಗಿದೆ! ಅದಕ್ಕೆ ಕಾರಣ ಮನೆಯಲ್ಲಿದ್ದ ವಾತಾವರಣ. ಹುಟ್ಟಿನಿಂದ ಜೋಗುಳವಷ್ಟೇ ಸಹಜವಾಗಿತ್ತು ಪದ್ಯಗಳು, ಕತೆಗಳು. ಆನಂತರ ದಿನವೂ ಬಿಡುವು ಸಿಕ್ಕಾಗಲೆಲ್ಲಾ ಕೈಯಲ್ಲಿ ಪುಸ್ತಕ ಹಿಡಿದ ಅಮ್ಮ ಮತ್ತು ಓದಲು ಸಮಯ ಸಿಗದಿದ್ದರೂ ರಾತ್ರಿ ಊಟಕ್ಕೆ ಕುಳಿತಾಗ ಅಮ್ಮನನ್ನು ಏನು ಓದಿದೆ ಎಂದು ವಿಚಾರಿಸಿ ತಿಳಿವ ಅಪ್ಪ, ಇಬ್ಬರೂ ಓದನ್ನು ನಮ್ಮ ಸ್ವಭಾವವಾಗಿಸಿದವರು! ಅಂದರೆ ಮಕ್ಕಳ ಓದಿನ ಹವ್ಯಾಸ ರೂಪಿಸುವಲ್ಲಿ ಪೋಷಕರ ಪಾತ್ರ ಬಹು ದೊಡ್ಡದು.

ಸಾಂದರ್ಭಿಕ ಚಿತ್ರ

ಬಾಲ್ಯದಿಂದಲೇ ಮಕ್ಕಳಿಗೆ ಓದುವ ವಾತಾವರಣ ಕಲ್ಪಿಸುವುದು ಮುಖ್ಯ. ಮಕ್ಕಳಿಗೆ ಓದಲು ಅಕ್ಷರ ಬರಬೇಕು ನಿಜ. ಆದರೆ ಹಾಗೆ ಓದುವ ಆಸಕ್ತಿ ಮೂಡಿಸುವ ಕೆಲಸ ಕತೆ ಹೇಳುವುದರಿಂದ ಆರಂಭವಾಗಬೇಕು. ಶಾಲೆಗೆ ಹೋಗುವ ಮುನ್ನ ರಜೆಯಲ್ಲಿ ಅಜ್ಜನ ಮನೆಗೆ ಹೋದಾಗ ರಾತ್ರಿ ಮೊಮ್ಮಕ್ಕಳೆಲ್ಲಾ ಅಮ್ಮಮ್ಮನ ಪಕ್ಕ ಮಲಗಿ ಕತೆ ಕೇಳುತ್ತಾ ಹೂಂ ಗುಟ್ಟುತ್ತಾ ಹಾಗೇ ನಿದ್ದೆ ಹೋದದ್ದು ಅಮೂಲ್ಯ ನೆನಪು. ಹಾಗೆ ಕತೆ ಕೇಳಿ ಆಸಕ್ತಿ ಹುಟ್ಟಿ, ಮತ್ತಷ್ಟು ಓದುವ ಆಸೆಯಿಂದ, ಅಕ್ಷರ ಬೇಗ ಕಲಿತು ಕತೆ ಪುಸ್ತಕ ಹಿಡಿದಿದ್ದು ಸುಳ್ಳಲ್ಲ. ಇದು ನಾಲ್ಕೈದು ದಶಕಗಳ ಹಿಂದೆ ಮಕ್ಕಳೆಲ್ಲರ ಅನುಭವ. ಎರಡು ದಶಕಗಳ ಹಿಂದೆ ಅಮೆರಿಕೆಯಲ್ಲಿ ನೆಲೆಸಿದ್ದಾಗ ಆಗಾಗ್ಗೆ ಪಬ್ಲಿಕ್ ಲೈಬ್ರರಿಗೆ ಹೋಗುತ್ತಿದ್ದೆ. ತೊದಲು ನುಡಿಗಳನ್ನಾಡುವ ಕಂದಮ್ಮಗಳನ್ನು ತಾಯಂದಿರು ಕಂಕುಳಲ್ಲಿ ಎತ್ತಿಕೊಂಡು ಬರುತ್ತಿದ್ದರೆ ನನಗೆ ಎಲ್ಲಿಲ್ಲದ ಅಚ್ಚರಿ. ಅಂಬೆಗಾಲಿಡುವ ಮಕ್ಕಳು, ಆಗಾಗ್ಗೆ ಎಡವಿ ಬೀಳುತ್ತಾ ಹೆಜ್ಜೆಯಿಡುವ ಪುಟಾಣಿಗಳು, ಅಮ್ಮನ ಮಡಿಲಲ್ಲಿ ಮಲಗಿ ಬಾಟಲಿ ಹಿಡಿದು ಹಾಲು ಕುಡಿವ ಕಂದಮ್ಮಗಳು ಹೀಗೆ ಎಲ್ಲರನ್ನೂ ಒಳಗೊಂಡೇ ‘ಸ್ಟೋರಿ ಟೈಂ’ ನಡೆಯುತ್ತಿತ್ತು. ಇಲ್ಲೇ ಕೂರಬೇಕು, ಹೀಗೇ ಮಾಡಬೇಕು ಎಂಬ ಕಟ್ಟುಪಾಡು ಒಂದೂ ಇಲ್ಲ. ಸುಲಭವಾಗಿ ಸಿಗುವ ವಸ್ತುಗಳಾದ ಕರ್ಚಿಫ್, ರಿಬ್ಬನ್, ರಟ್ಟು, ಟಾರ್ಚ್ ಇವುಗಳನ್ನು ಬಳಸಿ ಬೇರೆ ಬೇರೆ ದೇಶದ ಪುಟ್ಟ ಕತೆಗಳನ್ನು ಹಾವಭಾವ, ಧ್ವನಿಯ ಏರಿಳಿತಗಳು, ಅತ್ಯಂತ ಪರಿಣಾಮಕಾರಿಯಾಗಿ ಹೇಳುತ್ತಿದ್ದರು. ಈಗಲೂ ನೆನಪಿದೆ, ಮೆಕ್ಸಿಕನ್ ದೇಶದ ಕತೆ ಹೇಳುತ್ತಿದ್ದರು. ಅದರಲ್ಲಿ ಪುಟ್ಟ ಮರಿಗೆ ಬಿದ್ದು ಕಾಲಿಗೆ ದೊಡ್ಡ ಪೆಟ್ಟಾಗಿ ರಕ್ತ ಸುರಿಯುತ್ತದೆ. ಅದನ್ನು ಹೇಳುವಾಗ ಕೆಚಪ್ ಕಾಲ ಮೇಲೆ ಸುರಿದಿದ್ದರು. ಪುಟ್ಟ ಹುಡುಗ ಅದನ್ನು ಕಂಡು ಅತ್ತರೆ, ಮತ್ತೊಂದು ಮಗು ತನ್ನ ಕೈಯ್ಯಿಂದ ಅದನ್ನು ಒರೆಸುತ್ತಾ ‘ಓಹ್ ಡಸ್ ಇಟ್ ಹರ್ಟ್?’ ಎಂದು ಸಂತೈಸಿತ್ತು. ಆ ಕತೆ ಮುಗಿಯುವಷ್ಟರಲ್ಲಿ ನನಗೆ ಸ್ಪಾನಿಶ್ ಕಲಿತಿದ್ದರೆ ಪುಸ್ತಕ ಓದಿ ಎಷ್ಟೆಲ್ಲಾ ಓದಬಹುದಿತ್ತು ಎನಿಸಿತ್ತು! ಇದು ಅಪ್ರಜ್ಞಾಪೂರ್ವಕವಾಗಿ ಮಕ್ಕಳನ್ನು ಕೇಳುವಿಕೆಯ ಮೂಲಕ ಓದಿನ ಅದ್ಭುತ ಪ್ರಪಂಚಕ್ಕೆ ಪರಿಚಯಿಸುವ ರೀತಿ ಎಂದು ಅರಿವಿಗೆ ಬಂದಿತ್ತು.

ಆದರೀಗ ಆಗುತ್ತಿರುವುದೇನು? ಕತೆ ಹೇಳಲು ಅಮ್ಮಅಪ್ಪರಿಗೆ ಪುರುಸೊತ್ತಿಲ್ಲ, ಅಜ್ಜ–ಅಜ್ಜಿ ಇರುವುದೆಲ್ಲೋ ಗೊತ್ತಿಲ್ಲ. ಆಧುನಿಕ ಸ್ಪರ್ಧಾತ್ಮಕ ಒತ್ತಡದ ಬದುಕಿನ ನಡುವೆ ಕತೆ ಹೇಳಲುಓದಲು ಸಮಯವೆಲ್ಲಿ? ಮಕ್ಕಳ ಉಸ್ತುವಾರಿ ಮಾಡಲು, ಅವರ ಕುತೂಹಲ ತಣಿಸಲು ಹುಟ್ಟಿಕೊಂಡ ಹೊಸ ಉಪಾಯ ಟಿ.ವಿ, ಕಂಪ್ಯೂಟರ್, ಮೊಬೈಲ್ ಗಳ ಬಳಕೆ. ಒಂದು ರೀತಿಯಲ್ಲಿ ಖರ್ಚಿಲ್ಲದ ಬೇಬಿಸಿಟರ್​ಗಳು. ಆದರೆ ಇವುಗಳ ಅತಿಯಾದ ಬಳಕೆಯಿಂದ ಉಂಟಾದ ಅನೇಕ ದುಷ್ಪರಿಣಾಮಗಳಲ್ಲಿ ಒಂದು ಓದುವ ಪ್ರವೃತ್ತಿಯೇ ಮಾಯವಾಗುತ್ತಿರುವುದು. ತಮ್ಮ ಕೆಲಸ ಮಾಡುತ್ತಾ ಪೋಷಕರು ವ್ಯಸ್ತರಾದರೆ ಮಕ್ಕಳು ಉತ್ಸವ ಮೂರ್ತಿಗಳಂತೆ ಸೋಫಾದಲ್ಲಿ ಪ್ರತಿಷ್ಠಾಪನೆಯಾಗುತ್ತಾರೆ. ಮಾತು ಕಿವಿಗೆ ಬೀಳದೇ, ಭಾಷೆ ಕಲಿಯುವುದು ಹೇಗೆ? ಪರಸ್ಪರ ಮಾತು ಕೇಳದೇ, ಮುಖ ಕಾಣದೇ ಸಂಬಂಧ ಬೆಳೆಯುವುದಾದರೂ ಹೇಗೆ? ಹೀಗಾಗಿಯೇ ಯಂತ್ರಗಳೊಂದಿಗೆ ಬೆಳೆದ ಮಗು ಭಾವನಾತ್ಮಕವಾಗಿ ಬೆಳೆಯುವುದಿಲ್ಲ. ಹಾಗಾಗಿಯೇ ಭಾಷೆಯ ಬಗ್ಗೆ ಆಸಕ್ತಿಯೇ ಇಂದಿನ ಮಕ್ಕಳಲ್ಲಿ ಪುಸ್ತಕ ಓದುವ ಅಭ್ಯಾಸ ಕಡಿಮೆಯಾಗಿರುವುದಂತೂ ಸರಿ, ಜತೆಗೇ ಭಾಷಾ ಕಲಿಕೆ, ಓದುವ ಸಾಮರ್ಥ್ಯ, ಯೋಚನಾ ಶಕ್ತಿ, ನಿದ್ದೆ, ಸೃಜನಶೀಲತೆ ಮತ್ತು ನೆನಪಿನ ಶಕ್ತಿ ಕುಂಠಿತವಾಗಿರುವುದು ಕಂಡುಬರುತ್ತದೆ. ಭಾಷೆ ಕಲಿಸಲು, ಓದುಬರಹದಲ್ಲಿ ಆಸಕ್ತಿ ಮೂಡಿಸಲು ಕತೆ ಹೇಳುವುದು ಮತ್ತು ಕೇಳುವುದು ಅತ್ಯುತ್ತಮ ವಿಧಾನ.

ಈ ನಿಟ್ಟಿನಲ್ಲಿ ಕೋವಿಡ್ 19 ಒಂದಷ್ಟು ಸಹಾಯ ಮಾಡಿತು ಎನ್ನುವುದನ್ನು ಒಪ್ಪಲೇಬೇಕು. ಮಧ್ಯಮ ವರ್ಗದ ಜನರಿಗೆ ಮಕ್ಕಳೊಂದಿಗೆ ಸಮಯ ಕಳೆಯುವ ಮನಸ್ಸಿದ್ದರೂ ಕೆಲಸಕ್ಕೆ ಹೋಗುವ ಅನಿವಾರ್ಯತೆ. ಆದರೆ ಕೋವಿಡ್‍ನ ಲಾಕ್​ಡೌನ್​ನಿಂದ ಮನೆಯಲ್ಲೇ ಇರಬೇಕಾದ ಪರಿಸ್ಥಿತಿ. ಹೊರಗೆ ಹೋಗುವಂತಿಲ್ಲ, ಬೇರೇನೂ ಮಾಡುವಂತಿಲ್ಲ. ಸಮಯ ಕಳೆಯಲು, ಕಾಡುವ ಚಿಂತೆ ದೂರಮಾಡಲು ಕಂಡುಕೊಂಡ ಒಂದು ಉಪಾಯ ಮಕ್ಕಳೊಡನೆ ಸಮಯ ಕಳೆಯುವುದು. ಒಳಾಂಗಣ ಆಟ, ಹಳೆದಿನಗಳ ಮೆಲುಕು ಜತೆ ಕತೆ ಹೇಳುವುದು, ಪುಸ್ತಕ ಓದುವುದು ಇವೂ ಮತ್ತೆ ಜಾರಿಗೆ ಬಂತು.ಇದೇ ಸಮಯದಲ್ಲಿ ಮಕ್ಕಳು ಮತ್ತಷ್ಟು ಟಿವಿ, ಮೊಬೈಲ್‍ಗೆ ದಾಸಾನುದಾಸರಾದರು ಎಂಬ ಮಾತನ್ನೂ ತಳ್ಳಿ ಹಾಕುವಂತಿಲ್ಲ. ಹಾಗೆಂದು ಮಕ್ಕಳನ್ನು ಈ ಎಲ್ಲಾ ಸಾಧನಗಳಿಂದ ದೂರವಿಡಬೇಕು ಎಂಬುದು ಅಸಾಧ್ಯ ಮತ್ತು ಅನಗತ್ಯ. ಕಾಲಕ್ಕೆ ತಕ್ಕಂತೆ ಬದಲಾಗುತ್ತಲೇ ಅದನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಅಳವಡಿಸಿಕೊಳ್ಳುವ ಜಾಣ್ಮೆ ನಮಗಿರಬೇಕು. ಸರಿಯಾಗಿ ಬಳಕೆಯಾದಲ್ಲಿ ಹಲವಾರು ಪ್ರಯೋಜನಗಳೂ ಇವೆ. ಉದಾಹರಣೆಗೆ ಆಡಿಯೋ ಬುಕ್ಸ್ ಇನ್ನೂ ಭಾಷೆ ಓದಲು ಬರದ ಮಕ್ಕಳಿಗೆ ಕತೆ ಕೇಳಲು ಸೂಕ್ತ. ಹಾಗೆಯೇ ಚಿತ್ರವಿರುವ ಆಡಿಯೋ ವಿಡಿಯೋ ಪುಸ್ತಕಗಳು ಮಕ್ಕಳಿಗೆ ಕೇಳಿನೋಡಿ ಆಕರ್ಷಕವೆನಿಸಿ ಇನ್ನೂ ಹೆಚ್ಚಿನದನ್ನು ಓದಿನ ಮೂಲಕ ಹುಡುಕುವ ಪ್ರಯತ್ನಕ್ಕೆ ಪೂರಕವಾಗುತ್ತದೆ.

ಡಾ. ಕೆ. ಎಸ್. ಚೈತ್ರಾ ಮತ್ತು ಮಕ್ಕಳು

ಈ ನಿಟ್ಟಿನಲ್ಲಿ ಮೈಲಾಂಗ್ ಬುಕ್ಸ್, ಬುಕ್ ಬ್ರಹ್ಮ, ಪ್ರಥಮ್ ಬುಕ್ಸ್ ಮತ್ತು ಇನ್ನೂ ಹಲವು ಜನಪ್ರಿಯವಾಗಿವೆ. ಈ ಕೋವಿಡ್ ಸಂದರ್ಭದಲ್ಲಿ ಮಕ್ಕಳು ತಾವು ನೋಡಿದ ‘ಬಂದೀಶ್ ಬ್ಯಾಂಡಿಟ್ಸ್’ ಸರಣಿಯಿಂದ ಹಿಂದೂಸ್ತಾನಿ ಸಂಗೀತಕ್ಕೆ ಸಂಬಂಧಿಸಿದ ಪುಸ್ತಕಗಳನ್ನು, ಅಂಬೇಡ್ಕರ್ ಜೀವನಾಧಾರಿತ ‘ಮಹಾನಾಯಕ’ ಧಾರಾವಾಹಿಯಿಂದ ಅವರ ಜೀವನ ಚರಿತ್ರೆ ಓದುತ್ತಿದ್ದಾರೆ. ಹಾಗೆಯೇ ‘Anne with an E’ ಸರಣಿಯಿಂದ ನಾನು ಆ ಸರಣಿ ಪುಸ್ತಕ ಹುಡುಕಿದರೆ, ‘ಲಿಟಲ್ ವಿಮೆನ್’ ನೋಡಿ ಜೇನ್ ಆಸ್ಟೆನ್‍ಳ ಕೃತಿಗಳ ಮರುಓದು ಆರಂಭಿಸಿದ್ದೇನೆ. ಹೀಗೆ ಮನರಂಜನೆಯ ಜತೆಗೇ ಹೊಸ ಪುಸ್ತಕಗಳ ಪರಿಚಯ, ಹೆಚ್ಚಿದ ವಿಶ್ಲೇಷಣಾ ಶಕ್ತಿ, ಹಳೆಯ ಪುಸ್ತಕಗಳ ಮರುಓದು ಹೀಗೆ ಕಲಿಕೆಗೆ, ಓದುವ ಸಂಸ್ಕೃತಿಗೆ ಈ ಸ್ಕ್ರೀನ್ ಟೈಂ ನೆರವಾಗಲು ಸಾಧ್ಯವಿದೆ. ಆದರೆ ಕ್ರಿಯಾತ್ಮಕ, ಸೃಜನಾತ್ಮಕ, ಸಾಮಾಜಿಕ ಬೆಳವಣಿಗೆಗೆ ಅದು ಅಡ್ಡಿಯಾಗಬಾರದು.

ಇದು ಮಧ್ಯಮವರ್ಗದ ಕುಟುಂಬದವರ ಮಾತಾಯಿತು. ಆದರೆ ವಿದ್ಯಾಭ್ಯಾಸ ಮಟ್ಟ ಹೆಚ್ಚಿಲ್ಲದ, ಆರ್ಥಿಕ ಅನುಕೂಲತೆಯೂ ಇರದ ಕೆಳವರ್ಗದ ಶ್ರಮಿಕರ ಮಕ್ಕಳ ಪಾಡು? ಸರ್ಕಾರಿ ಶಾಲೆಗಳಲ್ಲಿ ಪುಟ್ಟದಾದರೂ ಗ್ರಂಥಾಲಯಗಳಿವೆ. ಇಂಥ ಮಕ್ಕಳಲ್ಲಿ ಓದಿನ ಅಭಿರುಚಿ ಹೆಚ್ಚಿಸಲು ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಅದಲ್ಲದೇ ಹೆಚ್ಚಿನ ಓದಿಗಾಗಿ ಸಾರ್ವಜನಿಕ ಗ್ರಂಥಾಲಯಗಳಿವೆ. ನಮ್ಮ ಮನೆಯ ಹತ್ತಿರದಲ್ಲಿರುವ ಸರ್ಕಾರಿ ಗ್ರಂಥಾಲಯದಲ್ಲಿ ಮಕ್ಕಳಿಗಾಗಿ ಇಂಗ್ಲೀಷ್, ಕನ್ನಡ ಮತ್ತು ಹಿಂದಿಯ ಸಾಕಷ್ಟು ಪುಸ್ತಕಗಳಿವೆ. ಶಿಕ್ಷಕರು ತಂಡತಂಡವಾಗಿ ಅನೇಕ ಮಕ್ಕಳನ್ನು ಅಲ್ಲಿಗೆ ಕರೆದುಕೊಂಡು ಬಂದಿದ್ದನ್ನು ನಾನು ನೋಡಿ, ಖುಷಿಪಟ್ಟಿದ್ದೇನೆ. ಆದರೆ ಕೋವಿಡ್ ಸಂದರ್ಭದಲ್ಲಿ ಅವೂ ಮುಚ್ಚಿದ್ದವು. ಸಮಾಧಾನಕರ ಸಂಗತಿಯೆಂದರೆ ತಂತ್ರಜ್ಞಾನದ ನೆರವಿನಿಂದ ಅವೂ ಡಿಜಿಟಲ್ ಆಗಿ ಮಕ್ಕಳ ಮತ್ತು ಲಕ್ಷಾಂತರ ಓದುಗರ ಪುಸ್ತಕ ಸಂಸ್ಕೃತಿ, ಅಭಿರುಚಿ ಜೀವಂತವಾಗಿಟ್ಟಿರುವುದು.

ಶಾಲೆಗೆ ಹೋಗುವ ಮಕ್ಕಳು ತಮ್ಮ ಹೆಚ್ಚಿನ ಸಮಯ ಕಳೆಯುವುದು ಶಿಕ್ಷಕರೊಂದಿಗೇ! ನಮಗೆ ವಿಜ್ಞಾನ ವಿಷಯ ಕಲಿಸುತ್ತಿದ್ದವರೂ ಕನ್ನಡ ಮತ್ತು ಇಂಗ್ಲಿಷ್ ಪುಸ್ತಕಗಳ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಶಾಲೆಯಲ್ಲಿ ವಾರಕ್ಕೆರಡು ದಿನ ಲೈಬ್ರರಿ ಪಿರಿಯಡ್ ಇರುತ್ತಿತ್ತು. ಪುಸ್ತಕಗಳ ದೊಡ್ಡ ಕಟ್ಟನ್ನು ತಂದು ಕ್ಲಾಸಿನಲ್ಲಿ ಹಂಚಲಾಗುತ್ತಿತ್ತು. ಒಂದು ಕ್ಲಾಸಿನಲ್ಲಿ ಪುಸ್ತಕ ಓದಿದರೆ ಮುಂದಿನ ಕ್ಲಾಸಿನಲ್ಲಿ ಅದರ ಬಗ್ಗೆ ಸಂವಾದ ನಡೆಯುತ್ತಿತ್ತು. ಕನ್ನಡ ಮತ್ತು ಇಂಗ್ಲೀಷಿನ ಕೆಲವು ಅತ್ಯುತ್ತಮ ಪುಸ್ತಕಗಳನ್ನು ಓದಿದ್ದು ನಮ್ಮ ಕನ್ನಡ ಶಾಲಾ ಕೊಠಡಿಯ ಡೆಸ್ಕಿನಲ್ಲಿ ಕುಳಿತು ಎಂಬುದು ನನಗೆ ಈಗಲೂ ಹೆಮ್ಮೆಯ ಸಂಗತಿ. ಪ್ರತೀ ತರಗತಿಯ ಕೊನೆಯ ಐದು ನಿಮಿಷ ಶಿಕ್ಷಕರು ತಾವು ಓದಿದ ಒಂದು ಪುಸ್ತಕದ ಪುಟ್ಟ ಭಾಗ ಹೇಳುತ್ತಿದ್ದರು. ಊಟದ ವಿರಾಮದಲ್ಲಿ ಆ ಪುಸ್ತಕದ ಕುರಿತು ಹುಡುಕಾಟ. ಲೈಬ್ರರಿಯಲ್ಲಿ ಸಿಗದಿದ್ದರೆ ಹುಟ್ಟುಹಬ್ಬಕ್ಕೆ ಅದನ್ನೇ ಉಡುಗೊರೆಯಾಗಿ ಕೇಳುವ ನಿರ್ಧಾರವನ್ನು ನಾವು ಮಾಡುತ್ತಿದ್ದೆವು. ಆದರಿಂದು ಓದು ಎಂದರೆ ಬರೀ ಅಂಕ ಗಳಿಕೆಗೆ ಎನ್ನುವಂತಾಗಿ ಭಾಷಾವಿಷಯಗಳ ಪಠ್ಯ ಪುಸ್ತಕಗಳನ್ನೇ ಕೇಳುವವರಿಲ್ಲ. ಹೀಗಿರುವಾಗ ಇನ್ನಿತರ ಪುಸ್ತಕ ಓದಿ ಎಂದು ಹೇಳುವವರು ಯಾರು? ಇದು ಇಂದಿನ ವಾಸ್ತವ. ಈ ಎಲ್ಲಾ ಅಂಶಗಳು ಓದಿನ ಸುಖದಿಂದ ಮಕ್ಕಳನ್ನು ವಂಚಿತರನ್ನಾಗಿ ಮಾಡುತ್ತಿದೆ.

ಓದುವುದನ್ನು ಮಕ್ಕಳ ಬದುಕಿನ ಭಾಗವಾಗಿಸಲು ಪೋಷಕರಾಗಿ ನಾವು ಅಳವಡಿಸಿಕೊಂಡಿರುವ ಕೆಲವು ಉಪಾಯಗಳು ಹೀಗಿವೆ. ನಾವು ಓದುವ ಅಭ್ಯಾಸವಿಟ್ಟುಕೊಂಡರೆ ಅನುಕರಣಾಶೀಲರಾದ ಮಕ್ಕಳು ಅದನ್ನು ರೂಢಿಸಿಕೊಳ್ಳುತ್ತಾರೆ. ಹಾಗಾಗಿ ಕೆಲವೇ ಕೆಲವು ಪುಸ್ತಕಗಳಾದರೂ ಸರಿಯೇ ಮನೆಯ ರೂಮಿನ ಮೂಲೆಯಲ್ಲಿ ಒಂದು ಕುರ್ಚಿ, ಟೇಬಲ್ ಮತ್ತು ಒಂದಷ್ಟು ಪುಸ್ತಕಗಳನ್ನು ಸುಲಭವಾಗಿ ಕೈಗೆ ಸಿಗುವ ಹಾಗೆ ಇಟ್ಟಿದ್ದೇವೆ. ಪದೇ ಪದೇ ತಿರುಗಾಡುವಾಗ ಪುಸ್ತಕ ಕಣ್ಣಿಗೆ ಬಿದ್ದು ಕುತೂಹಲಕ್ಕಾದರೂ ಓದೋಣ ಅನಿಸುತ್ತದೆ.ದಿನವೂ ಹಲ್ಲುಜ್ಜಲು, ಮುಖ ತೊಳೆಯಲು, ಊಟ ಮಾಡಲು ಹೇಗೆ ಮಕ್ಕಳಿಗೆ ಕಲಿಸುತ್ತೇವೋ ಹಾಗೆಯೇ ಓದುವುದನ್ನು ಕಲಿಸಿದ್ದೇವೆ. ಹಗಲುರಾತ್ರಿ ಹೀಗೇ ಇದೇ ಸಮಯ ಎಂದಲ್ಲ. ನಿರ್ದಿಷ್ಟ ಸಮಯ ಒಳ್ಳೆಯದಾದರೂ ಅನುಕೂಲಕ್ಕೆ ತಕ್ಕಂತೆ ಐದು ನಿಮಿಷವಾದರೂ ಓದುವುದು ದಿನಚರಿಯ ಭಾಗವಾಗಿದೆ. ಓದುವ ಹೊಸತರಲ್ಲಿ ಮಕ್ಕಳೊಡನೆ ಕುಳಿತು ನಾವೂ ಓದಿ ಮಕ್ಕಳಿಗೆ ಓದಿಸಿ ಆನಂದಿಸುವುದನ್ನು ಮಾಡುತ್ತಿದ್ದೆವು. ಏಕೆಂದರೆ ಧ್ವನಿ ಬದಲಿಸಿ, ಸಂಭಾಷಣೆ ರೂಪದಲ್ಲಿ, ಏರಿಳಿತಗಳೊಡನೆ ಹೇಳಿದಾಗ ಮಕ್ಕಳಿಗೆ ಮುಂದೆ ಓದಲು ಕುತೂಹಲ ಮೂಡುತ್ತದೆ. ಮಕ್ಕಳ ಗಮನ ಸೆಳೆಯುವ, ಅವರಿಗೆ ಆಕರ್ಷಕ ಎನ್ನಿಸುವ ಪುಸ್ತಕಗಳನ್ನು ಆರಿಸುವುದರ ಬಗ್ಗೆ ಗಮನ ಹರಿಸಿದ್ದೇವೆ.

ಸೂಕ್ತವಲ್ಲದ ಪುಸ್ತಕ ಕೊಟ್ಟಾಗ ಮಕ್ಕಳು ಓದುವುದನ್ನೇ ನಿಲ್ಲಿಸುತ್ತಾರೆ. ಹಾಗಾಗಿ ವಯಸ್ಸಿಗೆ ತಕ್ಕಂತೆ ಪುಸ್ತಕಗಳ ಆಯ್ಕೆ ಇರಲಿ. ಚಿಕ್ಕ ಮಕ್ಕಳಿಗೆ ದೊಡ್ಡ ಅಕ್ಷರ, ಬಣ್ಣದ ಚಿತ್ರಗಳ ಪುಸ್ತಕ, ಒಂದರಿಂದ ಐದನೇ ತರಗತಿ ಮಕ್ಕಳಿಗೆ ಕತೆ, ಸಂಭಾಷಣೆ, ಜೀವನಚರಿತ್ರೆ, ಕಾಮಿಕ್ಸ್ ಸೂಕ್ತ. ಹೈಸ್ಕೂಲಿಗೆ ಬರುವಷ್ಟರಲ್ಲಿ ಮಕ್ಕಳು ತಮ್ಮದೇ ಆದ ಓದುವ ಅಭಿರುಚಿ ಬೆಳೆಸಿಕೊಂಡಿರುತ್ತಾರೆ. (ರಾಮಾಯಣಮಹಾಭಾರತದ ಕತೆ ಆಸಕ್ತಿಯಿಂದ ಕೇಳುತ್ತಿದ್ದ ನನ್ನ ಪುಟ್ಟ ಮಕ್ಕಳು ಈಗ ಹದಿಹರೆಯದಲ್ಲಿ ಲೇಖಕಿ ಕವಿತಾ ಕೇನ್‍ರವರ ಪೌರಾಣಿಕ ಪಾತ್ರಗಳ ಆಧಾರಿತ ಹೊಸ ದೃಷ್ಟಿಯ ಕಾದಂಬರಿಗಳ ಚರ್ಚೆ ನಡೆಸುತ್ತಿದ್ದಾರೆ!). ಪರಿಣಾಮವಾಗಿ ಮಕ್ಕಳು ತಮ್ಮದೇ ಆದ ಪುಟ್ಟ ಲೈಬ್ರರಿ ಮನೆಯಲ್ಲಿ ಮಾಡಿಕೊಂಡಿದ್ದಾರೆ. ಪ್ರವಾಸತಿರುಗಾಟ, ಸಿನಿಮಾದ ಜತೆ ವಾರಕ್ಕೊಮ್ಮೆ ಪಬ್ಲಿಕ್ ಲೈಬ್ರರಿಗೆ ಭೇಟಿ ನಮ್ಮ ಮನೆಯ ರೂಢಿ. ಹೊಸ ಪುಸ್ತಕಗಳನ್ನು ಓದುವ ಸಂಭ್ರಮ, ಬೇಕಾದ ಪುಸ್ತಕ ಹುಡುಕುವ ಖುಷಿ ಜತೆಗೆ ಸಮಾನ ಅಭಿರುಚಿಯ ಸ್ನೇಹಿತರನ್ನೂ ಇಲ್ಲಿ ಸಂಪಾದಿಸಿದ್ದೇವೆ. ಮಕ್ಕಳು ಒಳ್ಳೆಯ ನಡತೆ ತೋರಿಸಿದಾಗ, ಏನನ್ನಾದರೂ ಸಾಧಿಸಿದಾಗ, ಹುಟ್ಟುಹಬ್ಬದ ಶುಭ ಸಂದರ್ಭಗಳಲ್ಲಿ ಸಿಹಿ ತಿಂಡಿಬಟ್ಟೆಆಟದ ಸಾಮಾನಿನ ಜತೆ ಪುಸ್ತಕವನ್ನು ಉಡುಗೊರೆಯಾಗಿ ನೀಡುವ ಪರಿಪಾಠವನ್ನೂ ಇಟ್ಟುಕೊಂಡಿದ್ದೇವೆ. ನಮ್ಮ ಮಟ್ಟಿಗೆ ಸಫಲವಾದದ್ದು ಇತರರಿಗೂ ಪ್ರಯೋಜನವಾಗಬಹುದು.

ಪುಸ್ತಕಗಳ ಪ್ರಪಂಚ ಅದ್ಭುತವಾದದ್ದು,ಅಮೂಲ್ಯವಾದದ್ದು, ಮತ್ತು ಅಗಾಧವಾದದ್ದು. ಆಳಕ್ಕಿಳಿದಷ್ಟೂ ಹೊಸ ಹೊಸ ಮುತ್ತುಹವಳರತ್ನಗಳು ಸಿಗುತ್ತಲೇ ಇರುತ್ತವೆ. ನನ್ನ ಸೀಮಿತ ಓದಿನ ಅನುಭವದಲ್ಲಿ ಮಕ್ಕಳುದೊಡ್ಡವರು ಒಟ್ಟಿಗೇ ಆನಂದಿಸಬಹುದಾದ ಕೆಲವು ‘ಎವರ್ ಗ್ರೀನ್’ ಪುಸ್ತಕಗಳು ಹೀಗಿವೆ.

ಕವಿತೆ

ಜಿ.ಪಿ.ರಾಜರತ್ನಂ ‘ಕಂದನ ಕಾವ್ಯಮಾಲೆ’

ಬೊಳುವಾರು ಮಹಮದ್ ಕುಂಙ ಅವರು ಸಂಗ್ರಹಿಸಿರುವ ‘ತಟ್ಟು ಚಪ್ಪಾಳೆ ಪುಟ್ಟ ಮಗು’

ದಿನಕರ ದೇಸಾಯಿಯವರ ಸಮಗ್ರ ಚುಟುಕುಗಳು

ಮುಪ್ಪಿನ ಷಡಕ್ಷರಿ ‘ತಿರುಕನ ಕನಸು’

ಕುವೆಂಪು ‘ ಬೊಮ್ಮನ ಹಳ್ಳಿಯ ಕಿಂದರಿಜೋಗಿ’

ಕತೆಗಳು

ಚಂದಮಾಮಾ, ಬಾಲಮಿತ್ರ, ಪುಟಾಣಿ ಮುಂತಾದ ಮಕ್ಕಳ ಪತ್ರಿಕೆಗಳು

ಅಮರಚಿತ್ರ ಕತೆಗಳು

ಪಂಚತಂತ್ರ

ಎಳೆಯರ ರಾಮಾಯಣ

ಕಿಶೋರ ಭಾಗವತ

ರಾಷ್ಟ್ರೋತ್ಥಾನ ಸಾಹಿತ್ಯದ ಭಾರತ ಭಾರತಿ ಪುಸ್ತಕಗಳು

ಡಾ.ಅನುಪಮಾ ನಿರಂಜನದಿನಕ್ಕೊಂದು ಕತೆ’

ಸಿಸು ಸಂಗಮೇಶ ‘ನರಿಯ ಫಜೀತಿ’

ವೈದೇಹಿ ‘ಅರ್ಧಚಂದ್ರ ಮಿಠಾಯಿ’

ಜೀವನಚರಿತ್ರೆ

ಎಚ್ ನರಸಿಂಹಯ್ಯರ ಹೋರಾಟದ ಹಾದಿ

ಕುಂವೀ ಅವರ ಗಾಂಧಿ ಕ್ಲಾಸು

ವೈಜ್ಞಾನಿಕ

ಶ್ರೀ ಗೋಪಾಲ ಕೃಷ್ಣ ಅಡಿಗರ ‘ಭೂ ಗರ್ಭ ಯಾತ್ರೆ’

ರಾಜಶೇಖರ ಮಠ ಭೂಸನೂರ ‘ಅಟ್ಲಾಂಟಿಸ್’

ಡಾ.ಬಿ.ಜಿ.ಎಲ್ ಸ್ವಾಮಿಯವರ ‘ಹಸಿರು ಹೊನ್ನು’

ಪೂರ್ಣಚಂದ್ರ ತೇಜಸ್ವಿ ‘ಮಿಲೇನಿಯಂ ಸೀರೀಸ್’

ಅನುವಾದಿತ

ನಾ.ಕಸ್ತೂರಿ ‘ಪಾತಾಳದಲ್ಲಿ ಪಾಪಚ್ಚಿ’

ಎಸ್.ಅನಂತನಾರಾಯಣ ‘ಪ್ಲಮ್ ನದಿಯ ತೀರದಲ್ಲಿ’

ಇಂಗ್ಲೀಷ್ ಕೃತಿಗಳು

ಮೈ ಎಕ್ಸ್​ಪಿರಿಮೆಂಟ್ ವಿತ್ ಟ್ರೂತ್

ಮೆಲೋರಿ ಟವರ್ಸ್

ಮಾಲ್ಗುಡಿ ಡೇಸ್

ದಿ ಡೈರಿ ಆಫ್ ಅ ಯಂಗ್ ಗರ್ಲ್

ಲಿಟಲ್ ಹೌಸ್ ಆನ್ ಪ್ರಯರಿ

ಮೈ ಬಾಯ್​ಹುಡ್​ ಡೇಸ್

ಸರ್ ರಸ್ಕಿನ್ ಬಾಂಡ್, ಎನಿಡ್ ಬ್ಲೈಟನ್, ರೊಹಾಲ್ಡ್ ಡಾಲ್ ಅವರ ಕೃತಿಗಳು

ಕಾದಂಬರಿ

ಕೆ.ವಿ.ಅಯ್ಯರ್ ‘ಶಾಂತಲಾ’

ಶಿವರಾಮ ಕಾರಂತರ ‘ಕುಡಿಯರ ಕೂಸು’

ಮಾಸ್ತಿ ‘ಚಿಕವೀರ ರಾಜೇಂದ್ರ’

ತ್ರಿವೇಣಿ ‘ಕಾಶಿ ಯಾತ್ರೆ’

ಎಂ.ಕೆ.ಇಂದಿರಾ ‘ತುಂಗಭದ್ರ’

ಪರಿಚಯ: ಮೂಲತಃ ಶಿವಮೊಗ್ಗೆಯವರಾಗಿದ್ದು ಬೆಂಗಳೂರಿನಲ್ಲಿ ನೆಲೆಸಿರುವ ಇವರು ವೃತ್ತಿಯಲ್ಲಿ ದಂತವೈದ್ಯೆ, ಪ್ರವೃತ್ತಿಯಲ್ಲಿ ಲೇಖಕಿ ಮತ್ತು ದೂರದರ್ಶನ ನಿರೂಪಕಿ. ಉತ್ತಮ ನೃತ್ಯ ಸಂಗೀತ ಕಲಾವಿದೆಯಾಗಿರುವ ಚೈತ್ರಾ, ಭರತನಾಟ್ಯದಲ್ಲಿ ದೂರದರ್ಶನದ ಗ್ರೇಡೆಡ್​  ಕಲಾವಿದೆ ಮತ್ತು ಶಿಕ್ಷಕಿ. ನೃತ್ಯ-ಸಂಗೀತ-ಸಂಸ್ಕೃತಿಯಪ್ರಚಾರ-ಅಭಿವೃದ್ಧಿಗಾಗಿ ಇರುವ ಶ್ರೀವಿಜಯ ಕಲಾನಿಕೇತನದ ಟ್ರಸ್ಟಿಯಾಗಿದ್ದಾರೆ.

https://tv9kannada.com/read-child-read-series-by-gowri-darshan

 

Published On - 6:06 pm, Thu, 14 January 21