ಈಗಂತೂ ಮಕ್ಕಳ ಇಸ್ಕೂಲ್ ಮನೇಲಲ್ವೇ? ಹಾಗಿದ್ದರೆ ಪಠ್ಯಪುಸ್ತಕ ಬಿಟ್ಟು ಬೇರೇನು ಓದುತ್ತಿವೆ ನಮ್ಮ ಮಕ್ಕಳು ಎನ್ನುವ ಕುತೂಹಲ ಟಿವಿ9 ಕನ್ನಡ ಡಿಜಿಟಲ್ಗೆ ಉಂಟಾಯಿತು. ತಡಮಾಡದೆ ಒಂದಿಷ್ಟು ಮಕ್ಕಳಿಗೆ, ಈ ತನಕ ನಿಮಗೆ ಇಷ್ಟವಾದ ಐದು ಪುಸ್ತಕಗಳು ಮತ್ತವುಗಳ ಬಗ್ಗೆ ದೊಡ್ಡವರ ಸಹಾಯ ಪಡೆದುಕೊಂಡೇ ಬರೆದು ಕಳಿಸಿ ಎಂದು ಕೇಳಲಾಯಿತು. ಮೆಲ್ಲಮೆಲ್ಲಗೆ ‘ಕನ್ನಡ’ದಲ್ಲಿ ಬಂದು ನಮ್ಮನ್ನು ತಲುಪಿದ ಮೇಲ್ಗಳಲ್ಲಿ ಕೆಲವೊಂದಿಷ್ಟನ್ನು ಆಯ್ಕೆ ಮಾಡಲಾಯಿತು. ಈ ಓದು ಮಗು ಓದು ಸರಣಿಯಲ್ಲಿ ಪ್ರಜ್ಞಾವಂತ ಪೋಷಕರ, ಲೇಖಕರ, ಶಿಕ್ಷಕರ ಮತ್ತು ಓದುಬರಹವನ್ನೇ ಬದುಕಿನ ಭಾಗವಾಗಿಸಿಕೊಂಡ ದೊಡ್ಡಮಕ್ಕಳ ಅನುಭವಾಧಾರಿತ ಕಥನಗಳು, ವಿಶ್ಲೇಷಣಾತ್ಮಕ ಮತ್ತು ಮುನ್ನೋಟದಿಂದ ಕೂಡಿದ ಲೇಖನಗಳೂ ಇರುತ್ತವೆ. ಇಷ್ಟೇ ಅಲ್ಲ, ಇಲ್ಲಿ ನೀವೂ ನಿಮ್ಮ ಮಕ್ಕಳೊಂದಿಗೆ ಪಾಲ್ಗೊಳ್ಳಬಹುದು ಹಾಗೆಯೇ ಪ್ರತಿಕ್ರಿಯೆಗಳನ್ನೂ ಹಂಚಿಕೊಳ್ಳಬಹುದು.
ಇ-ಮೇಲ್: tv9kannadadigital@gmail.com
ಬೆಂಗಳೂರಿನ ಟಿ.ಎಸ್. ಮೈತ್ರಿಯ ಆಯ್ಕೆಗಳು ಇಲ್ಲಿವೆ.
ನಾನು ನನ್ನ ಅಪ್ಪ ಸೇರಿ ಈ ಪುಸ್ತಕಗಳ ಪಟ್ಟಿ ಮಾಡಿ ಅವುಗಳ ಬಗ್ಗೆ ಬರೆದಿದ್ದೇವೆ. ನ್ಯಾಶನಲ್ ಬುಕ್ ಟ್ರಸ್ಟ್, ಚಿಲ್ಡ್ರನ್ಸ್ ಬುಕ್ ಟ್ರಸ್ಟ್, ಪ್ರಥಮ್ ಬುಕ್ಸ್‌ನಂತಹ ಪ್ರಕಾಶಕರ ಹಲವಾರು ಪುಸ್ತಕಗಳು ನನಗಿಷ್ಟವಾದರೂ ಪಟ್ಟಿ ತೀರಾ ಉದ್ದ ಆಗಬಹುದು ಅನ್ನಿಸಿ ಕೈಬಿಟ್ಟೆವು. ಹಾಗೆಯೇ ‘ಸ್ಟೋರೀಸ್ ಫಾರ್ ಕಿಡ್ಸ್ ಹೂ ಡೇರ್ ಟು ಬಿ ಡಿಫರೆಂಟ್’ನಂತಹ ಸಂಕಲನಗಳನ್ನು, ಮಕ್ಕಳು ತಯಾರಿಸಬಹುದಾದ ಅಡುಗೆ ಪದಾರ್ಥಗಳಿರುವ ರೆಸಿಪಿ ಪುಸ್ತಕಗಳನ್ನೂ ಈ ಪಟ್ಟಿಯಿಂದ ಹೊರಗಿಟ್ಟೆವು.
ಪು: ರೈತರ ಹುಡುಗ
ಮೂಲ: ಲಾರಾ ಇಂಗಲ್ಸ್ ವೈಲ್ಡರ್
ಕನ್ನಡಕ್ಕೆ: ಪ್ರೊ. ಎಸ್. ಅನಂತನಾರಾಯಣ
ಪ್ರ: ಗಂಗಾ ತರಂಗ, ಮೈಸೂರು
ನೂರಾರು ವರ್ಷಗಳ ಹಿಂದೆ ಅಮೆರಿಕಾದ ಜನಜೀವನ ಹೇಗಿತ್ತು ಎನ್ನುವುದನ್ನು ಪರಿಚಯಿಸುವ, ಬಹಳ ಜನಪ್ರಿಯವಾದ, ಪುಸ್ತಕಗಳ ಸರಣಿಯನ್ನು ಲಾರಾ ಇಂಗಲ್ಸ್ ವೈಲ್ಡರ್ ಬರೆದಿದ್ದರು. ಅದೆಲ್ಲ ಇಲ್ಲಿನದೇ ಕತೆಯೇನೋ ಎನ್ನುವಷ್ಟು ಆಪ್ತವಾಗಿ ಪ್ರೊ. ಎಸ್. ಅನಂತನಾರಾಯಣರು ಆ ಪುಸ್ತಕಗಳನ್ನು ಕನ್ನಡಕ್ಕೆ ತಂದಿದ್ದರು. ಈ ಸರಣಿಯ ಪುಸ್ತಕಗಳನ್ನು ನನ್ನ ಅಪ್ಪನೂ ಓದಿದ್ದರು. ಈಗ ನಾನು ಅಮ್ಮನಿಂದ ಹೇಳಿಸಿಕೊಂಡು ಓದುತ್ತಿರುವೆ. ಈ ಸರಣಿಯ ಪುಸ್ತಕಗಳಲ್ಲಿ ಮೂರನೆಯದು – ಆಲ್ಮಾಂಜೋನ ಬಾಲ್ಯವನ್ನು ಕುರಿತ ‘ರೈತರ ಹುಡುಗ’ – ಸದ್ಯಕ್ಕೆ ನನ್ನ ಫೇವರಿಟ್ ಎನಿಸಿಕೊಂಡಿದೆ. ಆಲ್ಮಾಂಜೋ ಮತ್ತವನ ಅಣ್ಣ-ಅಕ್ಕಂದಿರ ಚಟುವಟಿಕೆಗಳು ಹಾಗೂ ಚೇಷ್ಟೆಯ ಜೊತೆಯಲ್ಲಿ ಅವರು ತಿನ್ನುವ ತಿನಿಸುಗಳ ರುಚಿಕರ ವರ್ಣನೆ ಈ ಪುಸ್ತಕದ ವೈಶಿಷ್ಟ್ಯ.
ಪು: The Magic of the Lost Temple
ಲೇ: ಸುಧಾ ಮೂರ್ತಿ
ಪ್ರ: ಪಫಿನ್ ಬುಕ್ಸ್
ಮಕ್ಕಳಿಗಾಗಿ ನಮ್ಮ ಪರಿಸರದಲ್ಲೇ ನಡೆಯುವ ಕತೆಗಳನ್ನು ಹೇಳುತ್ತಿರುವ ಲೇಖಕರಲ್ಲಿ ಶ್ರೀಮತಿ ಸುಧಾ ಮೂರ್ತಿಯವರು ಪ್ರಮುಖರು. ಅವರ ಜನಪ್ರಿಯ ಕೃತಿಗಳ ಸಾಲಿನಲ್ಲಿ ‘ದ ಮ್ಯಾಜಿಕ್ ಆಫ್ ದ ಲಾಸ್ಟ್ ಟೆಂಪಲ್’ ಕೂಡ ಒಂದು. ಕರ್ನಾಟಕದ ಹಳ್ಳಿಯೊಂದರಲ್ಲಿ ನಡೆಯುವ ಈ ಕತೆಯಲ್ಲಿರುವ ಕಥಾನಾಯಕಿ ನೂನಿಯ ಸಾಹಸಗಳಿಂದಾಗಿ ನನಗಿದು ಇಷ್ಟ, ಅದರಲ್ಲಿ ಗ್ರಾಮೀಣ ಬದುಕಿನ ವಿವರಗಳೂ ಸೊಗಸಾಗಿ ಸೇರಿಕೊಂಡಿವೆ ಎನ್ನುವ ಕಾರಣದಿಂದ ನನ್ನ ಅಪ್ಪನಿಗೂ ಈ ಪುಸ್ತಕ ಇಷ್ಟ.
ಪು: Great Stories for Children
ಲೇ: ರಸ್ಕಿನ್ ಬಾಂಡ್
ಪ್ರ: ರೂಪಾ ಪಬ್ಲಿಕೇಶನ್ಸ್
ಹಿಮಾಲಯದ ಸುತ್ತಮುತ್ತಲ ಪ್ರದೇಶಗಳಲ್ಲಿ ನಡೆಯುವ ಕತೆಗಳನ್ನು ಮಕ್ಕಳಿಗೂ ದೊಡ್ಡವರಿಗೂ ಇಷ್ಟವಾಗುವಂತೆ ಸೊಗಸಾಗಿ ಹೇಳುವುದು ರಸ್ಕಿನ್ ಬಾಂಡ್ ಅವರ ಬರಹದ ವೈಶಿಷ್ಟ್ಯ. ಅವರು ಬರೆದಿರುವ ಮಕ್ಕಳ ಕತೆಗಳ ಪೈಕಿ ಆಯ್ದ ಹತ್ತೊಂಬತ್ತು ಈ ಸಂಕಲನದಲ್ಲಿವೆ. ರಸ್ಕಿನ್ ಬಾಂಡ್ ಅವರ ಬರಹದ ಪರಿಚಯ ಮಾಡಿಸುವ ಉದ್ದೇಶದಿಂದ ನನಗೆ ಅಪ್ಪ ಕೊಡಿಸಿದ ಮೊದಲ ಪುಸ್ತಕ ಇದು. ಅವರ ಇನ್ನಿತರ ಕೆಲ ಪುಸ್ತಕಗಳನ್ನು ಓದಿನ ನಂತರವೂ, ನನಗೆ ಇನ್ನೂ ಅಚ್ಚುಮೆಚ್ಚು. ಅವರ ಇನ್ನೊಂದು ಪುಸ್ತಕಕ್ಕೆ ನನ್ನ ಸೋದರತ್ತೆ ರಸ್ಕಿನ್ ಬಾಂಡ್ ಹಸ್ತಾಕ್ಷರವನ್ನೂ ಹಾಕಿಸಿಕೊಟ್ಟಿದ್ದಾರೆ!
ಪು: Fing
ಲೇ: ಡೇವಿಡ್ ವಾಲಿಯಮ್ಸ್
ಪ್ರ: ಹಾರ್ಪರ್ ಕಾಲಿನ್ಸ್
ಈಚಿನ ವರ್ಷಗಳಲ್ಲಿ ಜಗತ್ತಿನೆಲ್ಲೆಡೆಯ ಮಕ್ಕಳಿಗೆ ಇಷ್ಟವಾಗಿರುವ ಲೇಖಕರ ಸಾಲಿನಲ್ಲಿ ಡೇವಿಡ್ ವಾಲಿಯಮ್ಸ್‌ಗೆ ಮಹತ್ವದ ಸ್ಥಾನ ಇದೆ ಎಂದು ಅಮ್ಮ ಹೇಳುತ್ತಿದ್ದರು. ಹಾಸ್ಯಮಯ ಶೈಲಿ, ವಿಲಕ್ಷಣ ಚಿತ್ರಗಳು ಆತನ ಪುಸ್ತಕಗಳ ವಿಶೇಷ. ಆತ ಬರೆದಿರುವ ‘ಫಿಂಗ್’ ಎಂಬ ಪುಸ್ತಕ ನನಗೆ ಎಷ್ಟು ಇಷ್ಟವೆಂದರೆ ಹತ್ತು ಸಲ ಓದಿ ಮುಗಿಸಿದ್ದೇನೆ. ಕಥಾನಾಯಕಿ ಮರ್ಟಲ್ ಮೀಕ್ ಮಾಡುವ ರಾದ್ಧಾಂತಗಳ ಬಗ್ಗೆ ಓದಿ ನನಗಂತೂ ಖುಷಿಯೋ ಖುಷಿ. ಆಕೆಗೆ ಪುಸ್ತಕ ಕಂಡರೆ ಇಷ್ಟವೇ ಇರುವುದಿಲ್ಲ!
ಪು: I’m going to eat this ANT
ಲೇ :ಕ್ರಿಸ್ ನೇಯ್ಲರ್-ಬ್ಯಾಲೆಸ್ಟೆರಾಸ್
ಪ್ರ: ಬ್ಲೂಮ್ಸ್‌ಬರಿ
ತೀರಾ ಸಿಲ್ಲಿ ಎನಿಸಬಹುದಾದ, ಆದರೆ ಓದಿದ ತಕ್ಷಣ ನಗು ತರಿಸುವ ಹಲವು ಚಿತ್ರಮಯ ಕತೆ ಪುಸ್ತಕಗಳು ಇಂಗ್ಲಿಷಿನಲ್ಲಿವೆ. ಇದು ಅಂಥದ್ದೇ ಒಂದು ಪುಸ್ತಕ. ಆಂಟ್-ಈಟರ್ (ಇರುವೆಬಾಕ) ಪ್ರಾಣಿಯು ತಾನು ತಿನ್ನಬೇಕೆಂದಿರುವ ಇರುವೆಯೊಂದನ್ನು ಹೇಗೆ ತಿನ್ನುತ್ತೇನೆ ಎಂದು ವಿವರಿಸುವ, ಕಡಿಮೆ ಪಠ್ಯ-ಜಾಸ್ತಿ ಚಿತ್ರಗಳಿರುವ ತಮಾಷೆಯ ಕತೆ ಈ ಪುಸ್ತಕದಲ್ಲಿದೆ. ಕತೆ ಚಿಕ್ಕದೇ ಆದರೂ ಇಂಗ್ಲಿಷಿನ ಹೊಸ ಪದಗಳನ್ನು, ಅದರ ಪ್ರಯೋಗವನ್ನು ಸೊಗಸಾಗಿ ಪರಿಚಯಿಸುವುದು ಈ ಪುಸ್ತಕದ ವೈಶಿಷ್ಟ್ಯ. ಇಲ್ಲಿರುವ ಇರುವೆ ಐಸ್-ಕ್ರೀಂ ಮತ್ತು ಇರುವೆ ಲಾಲಿಪಾಪ್‌ಗಳ ವರ್ಣನೆ ನನಗೆ ಇಷ್ಟ. ಕೊನೆಗೆ ಇರುವೆಬಾಕದ ಕತೆ ಏನಾಯಿತು ನಾ ಹೇಳಲ್ಲ! ನೀವೇ ಓದಿ.
ಓದು ಮಗು ಓದು: ಏನೋ ಅಸಾಮಾನ್ಯವಾದುದು ಘಟಿಸುತ್ತದೆ ಎನ್ನುವುದನ್ನು ನಾನೂ ನಂಬುತ್ತೇನೆ…