ಕೊರೊನಾ! ಹೇಳಬೇಕೆ, ಕೇಳಬೇಕೆ ನಮ್ಮೆಲ್ಲರ ಮನೆ-ಮನಸ್ಸುಗಳ ಪರಿಸ್ಥಿತಿ ಮತ್ತು ಮಕ್ಕಳನ್ನು ನಿಭಾಯಿಸುವಿಕೆಯ ಬಗ್ಗೆ. ಆದರೂ ಸುಮ್ಮನಿರುವುದು ಹೇಗೆ? ನಮ್ಮ ಮಕ್ಕಳು ಓದಬೇಕು. ಆದಷ್ಟು ಪಠ್ಯದ ಹೊರತಾಗಿ ಓದಬೇಕು. ಭವಿಷ್ಯದ ರೋಬೋಟ್ಗಳಾಗುವುದನ್ನು ತಪ್ಪಿಸಲಾದರೂ ಒಂದು ಸಣ್ಣ ಪ್ರಯತ್ನ ಮಾಡಬೇಕು ಎಂಬ ಕಾಳಜಿಯ ಹಿನ್ನೆಲೆಯಲ್ಲಿ ಒಂದು ವಾರದ ತನಕ ಟಿವಿ9 ಕನ್ನಡ ಡಿಜಿಟಲ್- ಓದು ಮಗು ಓದು ಸರಣಿಯನ್ನು ಪ್ರಕಟಿಸಲಾಯಿತು. ಸಾಕಷ್ಟು ಮಕ್ಕಳು ತಮಗಿಷ್ಟವಾದ ಪುಸ್ತಕಗಳ ಬಗ್ಗೆ ‘ಪೋಷಕರ ಸಹಾಯ ಪಡೆದುಕೊಂಡೇ’ ಬರೆದು ಕಳಿಸಿದರು. ಹಾಗೆ ಹೇಳಲು ಕಾರಣವಿತ್ತು, ನಗರದ ಮಕ್ಕಳಿಗೆ ಕನ್ನಡ ಸ್ವಲ್ಪ ದುಬಾರಿಯೇ. ಆದರೂ ಭಾಷೆಗಿಂತ ಅವರ ಓದಿನ ಆಯ್ಕೆ, ಆಲೋಚನಾ ವಿಧಾನ ಇನ್ನಿತರ ಮಕ್ಕಳಿಗೂ ತಲುಪಲಿ ಎನ್ನುವ ಉದ್ದೇಶ ಮುಖ್ಯವಾಗಿತ್ತು.
ಇದರೊಂದಿಗೆ ಓದುತ್ತ ಓದುತ್ತ ಬರೆಯುವುದನ್ನೂ ಹೇಗೆ ಕಲಿತೆವು ಎಂದು ಕೆಲ ದೊಡ್ಡಮಕ್ಕಳೂ ಬರೆದರು. ಓದುವುದರಿಂದ ಏನೇನು ಅವಕಾಶಗಳು ದೊರೆತವು ಎಂದೂ ಹಂಚಿಕೊಂಡರು. ಹಾಗೇ ಓದುಬರಹದಿಂದ ಮೊಳೆತ ಸೂಕ್ಷ್ಮತನ, ರೂಢಿಸಿಕೊಂಡ ಸಾಮಾಜಿಕ ಪ್ರಜ್ಞೆಯ ಬಗ್ಗೆಯೂ ಹಂಚಿಕೊಂಡರು. ಇದೆಲ್ಲದಕ್ಕೆ ಪೂರಕವಾಗಿ ಮಕ್ಕಳ ಬಗ್ಗೆ ಪ್ರೀತಿ ಮತ್ತು ಸಾಮಾಜಿಕ ಕಾಳಜಿಯುಳ್ಳ ಲೇಖಕರು, ಬರಹಗಾರರು, ಪೋಷಕರು, ಶಿಕ್ಷಕರು ಉತ್ಸಾಹದಿಂದ ತಮ್ಮ ವಿಚಾರಗಳನ್ನು ಲೇಖನಗಳ ಮೂಲಕ ಕಟ್ಟಿಕೊಟ್ಟರು.
ಮೇಲ್ವರ್ಗದ ಮಕ್ಕಳಿಗೆ ಪಠ್ಯದ ಹೊರತಾಗಿಯೂ ಏನು ಓದಬೇಕು ಎಂಬ ನಿರ್ದೇಶನವಿರುತ್ತದೆ. ಮಧ್ಯಮ ವರ್ಗದ ಮಕ್ಕಳ ಮನೆಯಲ್ಲಿ ಪೂರಕ ಪ್ರಯತ್ನಗಳೂ ನಡೆಯುತ್ತಿರುತ್ತವೆ. ಆದರೆ ಕೆಳಮಧ್ಯಮ ವರ್ಗದ ಮತ್ತು ಹಳ್ಳಿಗಳ ಮಕ್ಕಳಿಗೆ? ಪೋಷಕರಿಗೆ ಆಸೆ ಇದ್ದರೂ ಮಾರ್ಗದರ್ಶನ ಮತ್ತು ಸೌಲಭ್ಯದ ಕೊರತೆ, ಅಸಹಾಯಕತೆ. ಹೀಗಿರುವಾಗ ಹಳ್ಳಿಗಳಲ್ಲಿ ನಮ್ಮ ಮಕ್ಕಳು ಆನ್ಲೈನ್ ಶಿಕ್ಷಣ ಪಡೆಯಲು ಪರದಾಡುತ್ತಿರುವ ಸಂದರ್ಭದಲ್ಲಿ ಪಠ್ಯೇತರ ಓದು ಹೇಗಿದೆ ಎಂದು ಯೋಚಿಸುವುದೇ ಅಸಮಂಜಸವೆನ್ನಿಸಿಬಿಟ್ಟಿತು. ಈ ಬಗ್ಗೆ ಕೆಲ ಶಿಕ್ಷಕರು ತಾವು ಇಷ್ಟು ವರ್ಷಗಳ ಕಾಲ ಶಾಲೆಗಳಲ್ಲಿ ಪಠ್ಯೇತರ ಓದಿಗಾಗಿ ಮಾಡಿದ ಪ್ರಯತ್ನಗಳನ್ನು ಹುರುಪಿನೊಂದಿಗೆ ಮಾತುಗಳಲ್ಲಿ ಮೆಲುಕು ಹಾಕಿದರೂ ಬರೆಯುವ ಉತ್ಸಾಹ ತೋರಲಿಲ್ಲ. ಈ ಸಾಮಾಜಿಕ ಅಂತರ ನಮ್ಮ ಎದೆಗಳನ್ನು ವಿಚಿತ್ರವಾಗಿ ಹೆಪ್ಪುಗಟ್ಟಿಸಿರುವುದಂತೂ ಸತ್ಯ.
ಆದರೂ ನಗರದ ಪುಸ್ತಕದಂಗಡಿಗಳು ಮೆಲ್ಲಗೆ ಉಸಿರಾಡುತ್ತಿವೆ. ಮಕ್ಕಳು ಪೋಷಕರ ಬೆರಳು ಹಿಡಿದುಕೊಂಡು ಪುಸ್ತಕದಂಗಡಿಗಳಿಗೆ ಭೇಟಿ ಕೊಡುತ್ತಿದ್ದಾರೆ ಎನ್ನುವುದು ಆಶಾಭಾವನೆ ಕೊಡುತ್ತದೆಯಾದರೂ ಹಳ್ಳಿಮಕ್ಕಳ ಹಾಡುಪಾಡು ಎದೆಯೊಳಗೇ ಉಳಿದುಕೊಳ್ಳುತ್ತದೆ.
ಸರಣಿಯಲ್ಲಿ ಪಾಲ್ಗೊಂಡ ಎಲ್ಲರಿಗೂ ಧನ್ಯವಾದಗಳು. ಸರಣಿಯ ಎಲ್ಲಾ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ https://tv9kannada.com/tag/book-reading