ದೇಶದಲ್ಲೆಡೆ ಹಬ್ಬಿರುವ ಕೊರೊನಾದಿಂದ ತತ್ತರಿಸಿ ಹೋಗಿರುವ ರಾಜ್ಯಗಳಲ್ಲಿ ತಮಿಳುನಾಡು ಸಹ ಒಂದು. ಮಹಾಮಾರಿಯ ವಿರುದ್ಧ ಹೋರಾಡುತ್ತಿರುವ ಈ ರಾಜ್ಯವು ಸಾಕಷ್ಟು ಸಾವು ನೋವು ಅನುಭವಿಸಿದೆ. ಈ ಮಧ್ಯೆ ವಿಶ್ವವಿಖ್ಯಾತ ಇಶಾ ಪ್ರತಿಷ್ಠಾನವು ಕೊವಿಡ್ ವಿರುದ್ಧದ ಹೋರಾಟಕ್ಕೆ ಸಹಾಯ ಹಸ್ತವನ್ನ ಚಾಚಿದೆ.
ಸದ್ಗುರು ಜಗ್ಗಿ ವಾಸುದೇವ್ ತಮ್ಮ ಕೈಯಾರೇ ಬಿಡಿಸಿರುವ ಎರಡು ಅದ್ಭುತವಾದ ಚಿತ್ರಕಲೆಗಳ ಮಾರಾಟದಿಂದ ಬರೋಬ್ಬರಿ 9 ಕೋಟಿ ರೂಪಾಯಿ ಸಂಗ್ರಹವಾಗಿದೆ. ಅದನ್ನು ಸದ್ಗುರು ಇಶಾ ಔಟ್ರೀಚ್ ಸಂಸ್ಥೆಯು ಕೊವಿಡ್ನಿಂದ ಸಂಕಷ್ಟ ಎದುರಿಸುತ್ತಿರೋರ ನೆರವಿಗೆ ಬಳಸಿಕೊಳ್ಳಲು ಮುಂದಾಗಿದೆ.
ಇದನ್ನು ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಲಾಕ್ಡೌನ್ನಿಂದ ಸಂಕಷ್ಟ ಎದುರಿಸುತ್ತಿರೋರಿಗೆ ಆಹಾರ ಪೂರೈಸಲು ಬಳಸಲಾಗುತ್ತಿದೆ. ಜೊತೆಗೆ, ವೈದ್ಯಕೀಯ ಸಿಬ್ಬಂದಿಗೆ PPE ಕಿಟ್ ಹಾಗೂ ಕೊವಿಡ್ ಆಸ್ಪತ್ರೆಗಳಿಗೆ ಇತರೆ ಸುರಕ್ಷತಾ ಪರಿಕರಗಳನ್ನು ನೀಡಲು ಸಹ ಬಳಸಲಾಗುತ್ತಿದೆ.
ಪರಿಪೂರ್ಣವಾಗಿ ಬಾಳೋಣ (To Live totally) ಎಂಬ ಶೀರ್ಷಿಕೆಯಡಿ ರಚಿಸಲಾಗಿದ್ದ ಆಯಿಲ್ ಪೇಂಟಿಂಗ್ ಸರಿಸುಮಾರು 4.1 ಕೋಟಿ ರೂಪಾಯಿ ಗಳಿಸಿದ್ದರೆ, ಇತ್ತೀಚೆಗೆ ಏಪ್ರಿಲ್ನಲ್ಲಿ ಅಗಲಿದೆ ನೆಚ್ಚಿನ ಹೋರಿ ಭೈರವನ ನೆನಪಿನಲ್ಲಿ ಗೋಮಯ, ಸುಣ್ಣ, ಅರಿಶಿನ ಮತ್ತು ಕಲ್ಲಿದ್ದಲನ್ನು ಬಳಸಿ ಸದ್ಗುರು ಬಿಡಿಸಿರುವ ಅಮೋಘವಾದ ‘ಭೈರವ’ ಚಿತ್ರಕಲೆ ಬರೋಬ್ಬರಿ 5.1 ಕೋಟಿ ಗಳಿಸಿದೆ.
#BeatTheVirus ಎಂಬ ಹೆಸರಿನಲ್ಲಿ ಇಶಾ ಔಟ್ರೀಚ್ ಸಂಸ್ಥೆಯು ನಡೆಸುತ್ತಿರುವ ಅಭಿಯಾನಕ್ಕೆ ನನ್ನ ಅಳಿಲು ಸೇವೆ ಎಂದು ಸದ್ಗುರು ಜಗ್ಗಿ ವಾಸುದೇವ್ ಹಂಚಿಕೊಂಡಿದ್ದಾರೆ. ಕೊರೊನಾದಿಂದ ಕಂಗಾಲಾಗಿರುವ ಸಾವಿರಾರು ಜನರ ಹಸಿವು ನೀಗಿಸಲು ಇದರ ಸದ್ಬಳಕೆಯಾಗಿರೋದಾಗಿ ಸಂತಸ ವ್ಯಕ್ತಪಡಿಸಿದ್ದಾರೆ.
Published On - 5:39 pm, Mon, 6 July 20