ಸಂಜೆ ಆದ್ರೆ ಸಾಕು ಬಿಸಿ ಬಿಸಿಯಾದ ಟೇಸ್ಟಿ ಟೇಸ್ಟಿ ಮಸಾಲ ಪುರಿ, ಬೇಲ್ ಪುರಿ, ಪಾನಿಪೂರಿ ಕಣ್ಣ ಮುಂದೆ ಬಂದು ನಮಗೊಂದು ಕರೆ ಓಲೆ ಕೊಟ್ಟು ಹೋಗುತ್ತೆ. ಮನಸ್ಸು ಕರಗಿ ಅದನ್ನು ಸವಿಯ ಬೇಕು ಎಂದು ಅನ್ನಿಸುತ್ತೆ. ಅದರಲ್ಲೂ ನಮ್ಮ ಸಿಲಿಕಾನ್ ಸಿಟಿಯ ಬಹುತೇಕ ಮಂದಿ ಚಾಟ್ಸ್ ಪ್ರಿಯರು. ಅದಕ್ಕಾಗಿಯೇ ದೊಡ್ಡ ದೊಡ್ಡ ರೆಸ್ಟೋರೆಂಟ್ಗಳಲ್ಲೂ ಚಾಟ್ಸ್ ಇದ್ದೇ ಇರುತ್ತೆ. ಜೊತೆಗೆ ಗಲ್ಲಿ ಗಲ್ಲಿಗಳಲ್ಲೂ ಚಾಟ್ಸ್ ಅಂಗಡಿಗಳು, ಸ್ಟಾಲ್ಗಳು ಇದ್ದೇ ಇರುತ್ತವೆ. ಹೀಗಾಗೆ ನಾವು ಇಂದು ನಿಮಗಾಗಿ 67 ವರ್ಷ ಹಳೆಯ ತನ್ನ ರುಚಿಯಿಂದ ಅನೇಕ ಚಾಟ್ಸ್ ಪ್ರಿಯರ ಮನ ಗೆದ್ದ ಚಾಟ್ ಅಂಗಡಿಯನ್ನು ಪರಿಚಯಿಸುತ್ತಿದ್ದೇವೆ. ಅದುವೇ ಅರಳಿಮರ ಪಾನಿಪೂರಿ. ಇದರ ಹೆಸರ ಹಿಂದೆ ಹೋಗಬೇಡಿ ಇದು ಕೇವಲ ಪರಿಚಯಕ್ಕಾಗಿ, ಹಳೆ ಕಾಲದಲ್ಲಿ ಗೂಗಲ್ ಮ್ಯಾಪ್ ಇರಲಿಲ್ಲ ಹೀಗಾಗಿ ಸಾಮಾನ್ಯವಾಗಿ ಇಂತಹ ಹೆಸರುಗಳಿಂದ ತಮ್ಮ ಸ್ಥಳದ ಪರಿಚಯವಾಗುತ್ತಿತ್ತು.
ಅರಳಿಮರ ಪಾನಿಪೂರಿ
ಸಂಜೆ ಸುಮಾರು 5 ಗಂಟೆಯ ಸಮಯ ತಂಪಾದ ಅರಳಿಮರದ ಕೆಲಗೆ ಘಮಘಮಿಸುವ ಬಿಸಿ ಬಿಸಿಯಾದ ಪಾನಿಪೂರಿಯನ್ನು ಬಾಯಲ್ಲಿ ಇಟ್ಟು ಒಂದು ಕ್ಷಣ ಕಣ್ಣು ಮುಚ್ಚಿ ಅದರಲ್ಲಿ ಬೆರೆತಿರುವ ಪ್ರತಿಯೊಂದು ಹಸಿರು ಬಟಾನಿ, ಮಸಾಲೆಯ ಸ್ವಾದವನ್ನು ಸವಿಯುವುದೇ ಒಂದು ಚಂದ.. ಹೌದು ಅನೇಕ ಕಡೆ ನೀವು ಪಾನಿಪೂರಿಯನ್ನು ಟೇಸ್ಟ್ ಮಾಡಿರಬಹುದು. ಆದ್ರೆ ಅರಳಿಮರ ಪಾನಿಪೂರಿ ಭಾರಿ ಡಿಫ್ರೆಂಟ್.. ಏಕೆಂದರೆ ಇಲ್ಲಿ ಸಿಗುವ ಟೇಸ್ಟ್ ತುಂಬಾನೆ ವಿಭಿನ್ನ.
ಚಾಮರಾಜಪೇಟೆಯ ಉಮಾ ಟಾಕಿಸ್ ಹತ್ತಿರವಿರುವ 1953ರಲ್ಲಿ ಸ್ಟಾರ್ಟ್ ಆದ ಈ ಚಾಟ್ಸ್ ಸುಮಾರು 67 ವರ್ಷಗಳಿಂದ ಜನರ ನಾಲಿಗೆಗೆ ರುಚಿ ರುಚಿಯಾದ ಚಾಟ್ಸ್ ಬಡಿಸುತ್ತಿದೆ. ಪಾನಿ ಪೂರಿ, ಬೇಲ್ ಪುರಿ, ಮಸಾಲ ಪುರಿ, ಆಲೂ ಪುರಿ, ಸೇವ್ ಪೂರಿ, ದಹಿ ಪೂರಿ ನೋಡಲು ಎಷ್ಟು ಚಂದವೋ ತಿನ್ನಲೂ ಅಷ್ಟೇ ಚಂದವಾಗಿರುತ್ತೆ, ನಾಲಿಗೆ ನೀರಲ್ಲಿ ಮಿಂದು ಸ್ವಾದಕ್ಕಾಗಿ ಚಡಪಡಿಸುವಂತೆ. ಇಲ್ಲಿ ತಯಾರಾಗುವ ಎಲ್ಲಾ ಮಸಾಲೆ, ಪದಾರ್ಥವೂ ಅಂದೇ ಮಾಡಿ ತರಲಾಗುತ್ತೆ. ಸ್ವಚ್ಛತೆ, ಸ್ವಾದಕ್ಕೆ ಮೊದಲ ಆದ್ಯತೆ. ಇಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಕೈಗವಸು ಹಾಕಿ ಸರ್ವ್ ಮಾಡ್ತಾರೆ. ಸಂಜೆ 5 ಗಂಟೆ ನಂತರವಂತೂ ಇಲ್ಲಿ ನಿಲ್ಲಲೂ ಜಾಗವಿಲ್ಲದಂತೆ ನೂರಾರು ಜನ ಚಾಟ್ಸ್ ಸವಿಯಲು ಮುಗಿಬೀಳ್ತಾರೆ.
ಒಬ್ಬರು ಆರ್ಡರ್ ತಗೊಂಡ್ರೆ ಮೂವರು ಅದರ ತಯಾರಿ ಮಾಡ್ತಾರೆ. ಸರ್ವ್ ಮಾಡುವವರ ಕೈಗಳಂತೂ ಮಿಷನ್ಗಳಂತೆ ಕೆಲಸ ಮಾಡುತ್ತದೆ. ಚಾಟ್ಸ್ ಸವಿಯಲು ಬಂದವರೂ ನಿಂತು ಕಾಯುವಂತಾಗಬಾರದೆಂದು ಬೇಗ ಬೇಗನೇ ನಿಮ್ಮ ಚಾಟ್ಸ್ಗಳನ್ನು ನಿಮಗೆ ತಲುಪಿಸಲಾಗುತ್ತೆ. ಅಲ್ಲಿ ನಡೆಯುವ ಪ್ರಕ್ರಿಯೆಯೇ ಒಂದು ರೀತಿಯ ಮೋಜುಗ.. ಎಲ್ಲವೂ ಸ್ಪೀಡ್ ಆಗಿ ಸರ್ವ್ ಮಾಡಲಾಗುತ್ತೆ. ಎಷ್ಟೇ ಜನ ಬಂದರೂ ಪ್ರೀತಿಯಿಂದ ಸೌಜನ್ಯದಿಂದ ಚಾಟ್ಸ್ ಸರ್ವ್ ಮಾಡಲಾಗುತ್ತೆ. ಒಂದು ಪ್ಲೇಟ್ ತಿಂದ ಮೇಲೆ ಮತ್ತೊಂದು ಪ್ಲೇಟ್ ಚಾಟ್ ತಿನ್ನಬೇಕು ಅನ್ನಿಸುತ್ತೆ. ಅಜಿರ್ಣ ಫೀಲ್ ಬರೋದಿಲ್ಲ. ಹೀಗಾಗಿ ಅನೇಕ ಬೆಂಗಳೂರಿಗರ, ಚಾಟ್ ಪ್ರಿಯರ ಮೊದಲ ಆದ್ಯತೆ ಅರಳಿಮರ ಪಾನಿಪೂರಿ. ಸಂಜೆ 5 ರಿಂದ ರಾತ್ರಿ 10 ಗಂಟೆಯ ವರೆಗೆ ಪ್ರತಿದಿನವೂ ಈ ಸೇವೆ ಜಾರಿಯಲ್ಲಿರುತ್ತೆ.
ಅರಳಿಮರ ಪಾನಿಪೂರಿಯೇ ಏಕೆ?
ಸಾಮಾನ್ಯವಾಗಿ ನಾವು ಪಾನಿಪೂರಿ ತಿನ್ನಲು ಹೋದ್ರೆ ಮೊದಲು ಆದ್ಯತೆ ನೀಡುವುದು ಸ್ವಚ್ಛತೆ, ಸ್ವಾದ, ಪರಿಮಳ, ಆಕರ್ಷಣೆಗೆ.. ಇದೆಲ್ಲವೂ ಇಲ್ಲಿ ಸಿಗುತ್ತೆ. ಅನೇಕ ಮಂದಿ ಟೇಸ್ಟ್, ಫುಡ್ನಲ್ಲಿ ಕಾಂಪ್ರೋಮೈಸ್ ಆಗಲ್ಲ. ಅಂತವರಿಗೆ ಇದು ಹೇಳಿ ಮಾಡಿಸಿದಂತೆ. ಸ್ಪೈಸಿ ಅಂಡ್ ಟೇಸ್ಟಿ. ಈ ಮೊದಲು ಬಿಸಿ ನೀರಿನಲ್ಲಿ ತೊಳೆದ ಪ್ಲೇಟ್ಗಳಲ್ಲಿ ಚಾಟ್ಸ್ ಸರ್ವ್ ಮಾಡಲಾಗುತ್ತಿತ್ತು. ಆದ್ರೆ ಕೊರೊನಾ ಸಮಯದಿಂದಾಗಿ ಯೂಸ್ ಅಂಡ್ ಥ್ರೋ ಪ್ಲೇಟ್ಗಳಲ್ಲಿ ಚಾಟ್ಸ್ ನೀಡಲಾಗುತ್ತೆ. ಇನ್ನು ವಿಶೇಷ ಅಂದ್ರೆ ಇಲ್ಲಿ ಬಡಿಸುವ ಮಸಾಲೆಗೆ 65 ವರ್ಷಗಳ ಇತಿಹಾಸವಿದೆ. ಮೂರು ತಲೆ ಮಾರಿನಿಂದಲೂ ಒಂದೇ ರೀತಿಯ ಮಸಾಲೆ ಹಾಗೂ ಸ್ವಾದವನ್ನು ನೀಡುತ್ತಿದ್ದಾರೆ.
ಮುತ್ತಜ್ಜ ಹೇಳಿಕೊಟ್ಟಿದ್ದ ವಿಧಾನದಲ್ಲೇ ಎಲ್ಲವೂ ತಯಾರಾಗುತ್ತೆ. ಸ್ವತಃ ಮಾಲೀಕರೇ ಉತ್ತಮ ಕ್ವಾಲಿಟಿಯ ಮಸಾಲೆ ಪದಾರ್ಥಗಳನ್ನು ಆರಿಸಿ ಅದನ್ನು ಹುರಿದು ರುಬ್ಬಿ ಮನೆಯಲ್ಲೇ ಮಸಾಲೆ ತಯಾರಿಸುತ್ತಾರೆ. ಇಂದಿನ ಕಾಲದಲ್ಲಿ ಬಳಸುವ ಟೇಸ್ಟಿಂಗ್ ಪೌಡರ್, ಕಲರ್, ಇತ್ಯಾದಿ ಯಾವುದೂ ಬಳಸುವುದಿಲ್ಲ. ಆರ್ಗ್ಯನಿಕ್ ಪದಾರ್ಥಗಳನ್ನು ಮಾತ್ರ ಬಳಸಲಾಗುತ್ತೆ. ಹಾಗೂ ಪೂರಿಯನ್ನು ಎರಡು ಬಾರಿ ರೋಸ್ಟ್ ಮಾಡಲಾಗುತ್ತೆ. ಇದರ ಜೊತೆ ಸಿಗುವ ಪಾನಿ ಕೂಡ ವಿಶೇಷವಾಗಿರುತ್ತೆ. ಪಾನಿಗೆ ಮೆಣಸು, ಜೀರಿಗೆ, ಪುದೀನಾ ಸೇರಿದಂತೆ ಸುಮಾರು 18ರಿಂದ 20 ಬಗೆಯ ಪದಾರ್ಥಗಳನ್ನು ಬೆರೆಸಲಾಗುತ್ತೆ. ಇದೊಂದು ಕಷಾಯದ ರೀತಿ ಕೆಲಸ ಮಾಡುತ್ತೆ. ಆರೋಗ್ಯಕ್ಕೆ ಉತ್ತಮ.
ಎಂದೂ ನಿಲ್ಲದೆ ತುಂಬ ವರ್ಷಗಳಿಂದ ಈ ಚಾಟ್ಸ್ ಕೋಟ್ಯಂತರ ಜನರಿಗೆ ತನ್ನ ಸ್ವಾದವನ್ನು ಪರಿಚಯಿಸಿದೆ. ಬೇರೆ ಅಂಗಡಿಗಳಿಗಿಂತ ಇಲ್ಲಿ ತುಂಬಾನೇ ಯುನೀಕ್ ಆದ ಟೇಸ್ಟ್ ತಿನ್ನೋದಕ್ಕೆ ಸಿಗುತ್ತೆ. ಅಲ್ಲದೆ ಚಾಟ್ಸ್ ಬೇಗ ಜೀರ್ಣ ಆಗಲ್ಲ. ಮಸಾಲೆ ದೇಹಕ್ಕೆ ಒಳ್ಳೇದಲ್ಲ ಅಂತಾರೆ. ಆದ್ರೆ ಇವರು ಹೋಮ್ ಮೇಡ್ ಮಸಾಲೆ ಬಳಸೋದ್ರಿಂದ ಆರೋಗ್ಯಕ್ಕೂ ಹಾನಿಯಾಗಲ್ಲ. ಅಜೀರ್ಣ ಫೀಲ್ ಕೂಡ ಇರಲ್ಲ ಅಂತಾರೆ ಚಾಟ್ಸ್ ಪ್ರಿಯೆ ಪವಿತ್ರಾ.
1953ರಲ್ಲಿ ಪ್ರಾರಂಭವಾದ ಅರಳಿಮರ ಪಾನಿಪೂರಿ
1953ರಲ್ಲಿ ಮುದುಕಿ ಹುಚ್ಚಯ್ಯ ಎನ್ನುವವರು ಮೊದಲ ಬಾರಿಗೆ ಈ ಪಾನಿಪೂರಿ ಸ್ಟಾಲ್ನ ಆರಂಭಿಸಿದ್ರು. ಆ ವೇಳೆ ಕೆ.ಆರ್ ಮಾರುಕಟ್ಟೆಯ ನಗರ ಪೇಟೆಯಲ್ಲಿ ಮೊದಲ ಅಂಗಡಿ ಆರಂಭವಾಯ್ತು. ಪ್ರಸಕ್ತ ಈಗ ಚಾಮರಾಜಪೇಟೆ ಬಳಿಯ ಉಮಾ ಥಿಯೇಟರ್ ಸಮೀಪ ಮಾದೇಶ್ವರ ದೇವಸ್ಥಾನದ ಎದುರಿಗೆ ಅರಳಿಮರ ಪಾನಿ ಪೂರಿ ಅಂಗಡಿ ಇದೆ. ಮೂರು ತಲೆಮಾರುಗಳಿಂದ ನಡೆಯುತ್ತಿರುವ ಈ ಅಂಗಡಿಯನ್ನು ಮುತ್ತಜ್ಜನ ನೆರವಿನಿಂದ ಈಗ ಪುನೀತ್ ಹೆಗಡೆ ಮತ್ತು ಅವರ ತಂದೆ ನಡೆಸಿಕೊಂಡು ಹೋಗುತ್ತಿದ್ದಾರೆ. “ನನ್ನ ಅಜ್ಜ ಹೇಳಿಕೊಟ್ಟ ರೆಸಿಪಿಯನ್ನೇ ಈಗಲೂ ಬಳಸುತ್ತೇವೆ. ಅಜ್ಜ ಮಾಡುತ್ತಿದ್ದ ವಿಧಾನದಲ್ಲಿ ಚಾಟ್ಸ್ ತಯಾರಾಗುತ್ತವೆ. ಟಾಪ್ ಕ್ವಾಲಿಟಿ ಪದಾರ್ಥಗಳನ್ನೇ ಬಳಸಲಾಗುತ್ತೆ. ಹೈಜೆನಿಕ್ ಮತ್ತು ಆರ್ಗ್ಯನಿಕ್ಗೆ ನಮ್ಮ ಮೊದಲ ಆದ್ಯತೆ. ಚಾಟ್ಸ್ ಸವಿದ ಹಿರಿಯ ನಾಗರೀಕರು ಈಗಲೂ ನಿಮ್ಮ ಸ್ವಾದದಲ್ಲಿ ಬದಲಾವಣೆಯಾಗಿಲ್ಲ. ನಿಮ್ಮ ಅಜ್ಜನ ರುಚಿಯನ್ನೇ ಹೋಲುತ್ತೆ ಎಂದು ಹೊಗಳುತ್ತಾರೆ” ಎಂದು ಅರಳಿಮರ ಪಾನಿಪೂರಿ ನಡೆಸುತ್ತಿರುವ ಪುನೀತ್ ಹೆಗಡೆ ಹೇಳ್ತಾರೆ.
ಇದನ್ನೂ ಓದಿ: Street Food: ವೀಕೆಂಡ್ಗಾಗಿ ಒಮ್ಮೆ ಟ್ರೈ ಮಾಡಬಹುದು ಶ್ರೀನಗರದ ಅಮೃತ್ ಚಾಟ್ಸ್
Published On - 4:01 pm, Sat, 20 March 21