Sign In

By signing in or creating an account, you agree with Associated Broadcasting Company's Terms & Conditions and Privacy Policy.

Street Food: ವೀಕೆಂಡ್​ಗಾಗಿ ಒಮ್ಮೆ ಟ್ರೈ ಮಾಡಬಹುದು ಶ್ರೀನಗರದ ಅಮೃತ್ ಚಾಟ್ಸ್

Street Food: ಸ್ಟ್ರೀಟ್ ಫುಡ್ ಇಷ್ಟಪಡುವವರಿಗೆ ಬೆಂಗಳೂರಿನ ಶ್ರೀನಗರದಲ್ಲಿ ಇರುವ ಅಮೃತ್ ಚಾಟ್ಸ್ ಇಷ್ಟವಾಗಬಹುದು. ಒಮ್ಮೆ ಇಲ್ಲಿ ಖಂಡಿತಾ ಟ್ರೈ ಮಾಡಬಹುದು. ಮಸಾಲೆಪೂರಿ, ಪಾನಿಪೂರಿ, ಬೇಲ್ ಪುರಿ ಹೀಗೆ ಯಾವುದಾದರೂ ಸರಿ, ಎಲ್ಲವೂ ಸೂಪರ್.

Street Food: ವೀಕೆಂಡ್​ಗಾಗಿ ಒಮ್ಮೆ ಟ್ರೈ ಮಾಡಬಹುದು ಶ್ರೀನಗರದ ಅಮೃತ್ ಚಾಟ್ಸ್
ಸ್ಟ್ರೀಟ್ ಫುಡ್
Follow us
Srinivas Mata
|

Updated on:Mar 06, 2021 | 12:06 PM

ಮಸಾಲೆಪೂರಿ, ಪಾನಿಪೂರಿ, ಬೇಲ್ ಪುರಿ ಇವೆಲ್ಲ ಬಹುತೇಕ ಎಲ್ಲ ಕಡೆಯೂ ಒಂದೇ ಥರ ಇರುತ್ತೆ. ಆದರೆ ಕೆಲವು ಕಡೆ ಮಾತ್ರ ಬಹಳ ಸ್ಪೆಷಲ್ ಅಂತ ಜನರೇ ಒಪ್ಪಿಕೊಂಡಿರ್ತಾರೆ. ಒಂದು ವೇಳೆ ಚಾಟ್ಸ್ ಮಾರುವವರು ರಜಾ ಮಾಡಿದರೆ ಚಾಟ್ಸ್​ಗಳ ಮೇಲೇ ಮುನಿಸಿಕೊಂಡಂತೆ ಆ ದಿನ ತಿನ್ನೋದೇ ಇಲ್ಲ. ಈ ದಿನ ಟಿವಿ9 ಕನ್ನಡ ಡಿಜಿಟಲ್​ ಓದುಗರಿಗಾಗಿ ಅಂಥ ಚಾಟ್ಸ್ ಮಾಡೋರನ್ನ ಪರಿಚಯ ಮಾಡ್ತಿದ್ದೀವಿ. ಇವರ ಹೆಸರು ಕೆ.ಬಿ.ಭೈರಯ್ಯ. ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗದವರು. ಬೆಂಗಳೂರಿನ ಶ್ರೀನಗರದಲ್ಲಿ ಇರುವ ಅರಸುಕುಮಾರ್ ಪಾರ್ಕ್ ಎದುರಿಗೆ ಅಮೃತ್ ಚಾಟ್ಸ್ ಅನ್ನೋ ಅಂಗಡಿ ನಡೆಸುತ್ತಾರೆ.

ಪಾನಿಪೂರಿ, ಮಸಾಲೆಪೂರಿ, ಸೇವ್​ಪೂರಿ, ಬೇಲ್ ಪುರಿ​​, ದಹೀಪುರಿ, ಆಲೂಪೂರಿ, ಸಮೋಸ… ಓಹ್ ಎಲ್ಲವೂ ಸೂಪರ್. ಯಾವುದರಿಂದ ಶುರು ಮಾಡೋಣ, ನಮಗೆ ಹೇಗೆ ಗೊತ್ತಾಗುತ್ತದೆ ಇಲ್ಲಿ ಚಾಟ್ಸ್ ತುಂಬ ಚೆನ್ನಾಗಿರುತ್ತೆ ಅನ್ನೋ ವಿಚಾರ ಅಂತ ಕೆಲವರಿಗೆ ಪ್ರಶ್ನೆ ಬರುತ್ತದೆ. ಮಸಾಲೆಪೂರಿಯಿಂದಲೇ ಶುರು ಮಾಡಿ, ಆದರೆ ಆ ನಂತರ ಬೇಲ್ ಪುರಿ ತಿನ್ನದೆ ಬರಬಾರದು. ಇನ್ನು ಪಾನಿಪೂರಿ ನಾನೇನು ತಪ್ಪು ಮಾಡಿದ್ದೆ ಎಂದು ಕೇಳುತ್ತಿರುವಂತೆ ನಿಮಗೆ ಅನಿಸಬಹುದು. ಆದ್ದರಿಂದ ಒಬ್ಬರಿಗಿಂತ ಹೆಚ್ಚಿಗೆ ಜನ ಹೋಗಿ ಆಗ ಎಲ್ಲವನ್ನೂ ಟೇಸ್ಟ್ ಮಾಡಬಹುದು. ಇನ್ನು ಸಂಜೆ 5 ಗಂಟೆಯಿಂದ ರಾತ್ರಿ 10 ಗಂಟೆ ತನಕ ವಾರದ ಎಲ್ಲ ದಿನವೂ ಈ ಚಾಟ್ಸ್ ತೆರೆದಿರುತ್ತೆ.

ದಶಕಗಳಿಂದ ಚಾಟ್ಸ್ ಮಾರಾಟ: ದಶಕಗಳಿಂದ ಭೈರಯ್ಯನವರು ಚಾಟ್ಸ್ ಮಾರಾಟ ಮಾಡಿಕೊಂಡು ಬರುತ್ತಿದ್ದಾರೆ. ಮೊದಲಿಗೆ ಅವರು ಹತ್ತಾರು ವರ್ಷ ಚಾಮರಾಜಪೇಟೆಯಲ್ಲಿ ಇರುವ ಕರ್ನಾಟಕ ಬೇಲ್ ಹೌಸ್​ನಲ್ಲಿ ಕೆಲಸ ಮಾಡುತ್ತಿದ್ದರು. ಆ ಕಾರಣಕ್ಕೋ ಏನೋ ಇವರು ಸಿದ್ಧ ಮಾಡುವ ಮಸಾಲೆ, ಬೇಲ್ ಪುರಿಯಲ್ಲೂ ಕರ್ನಾಟಕ ಬೇಲ್ ಹೌಸ್ ಸ್ವಾದ ಗಮನಿಸಬಹುದು. ಈ ಪ್ರಶ್ನೆಯನ್ನೇ ಅವರನ್ನೂ ಕೇಳಲಾಯಿತು. ಅದಕ್ಕೆ ಯಾವುದೇ ಹಿಂಜರಿಕೆಯಿಲ್ಲದೆ ಅವರು ನೀಡಿದ ಉತ್ತರ: ಹೌದು, ಹತ್ತಾರು ವರ್ಷ ಅಲ್ಲೇ ಇದ್ದುದರಿಂದ ರುಚಿಯೂ ಹಾಗೇ ಅನಿಸುತ್ತದೆ.

KB Bhyrayya

ಕೆ.ಬಿ.ಭೈರಯ್ಯ

ವಾರದ ಎಲ್ಲ ದಿನವೂ ಜನ ಇರ್ತಾರೆ. ಆದರೆ ವೀಕೆಂಡ್​​ಗಳಲ್ಲಿ ಸಾಮಾನ್ಯಕ್ಕಿಂತ ಜನ ಜಾಸ್ತಿ ಇರ್ತಾರೆ. ಹಾಗಂತ ನನ್ನ ಶ್ರದ್ಧೆಯಲ್ಲಿ ಸ್ವಲ್ಪವೂ ಕಡಿಮೆ ಆಗಲ್ಲ. ಪೂರ್ತಿ ಖಾಲಿ ಆದ ಮೇಲೆ ಏನನ್ನೋ ಹೊಂದಾಣಿಕೆ ಮಾಡಿದರೆ ಇನ್ನೂ ನಾಲ್ಕು ಕಾಸು ಆಗುತ್ತೆ ಅಂತ ಯೋಚನೆ ಮಾಡದೆ ಕೊನೆ ಮಾಡಿಬಿಡ್ತೀನಿ. ಏಕೆಂದರೆ ಒಂದು ಸಲ ರುಚಿ ಹಾಳಾದರೆ ಅಥವಾ ಕಸ್ಟಮರ್​ಗೆ ಇಷ್ಟ ಆಗಲಿಲ್ಲ ಅಂದುಬಿಟ್ಟರೆ ಮತ್ತೆ ಬರಲ್ಲ. ಆದ್ದರಿಂದ ಈ ವಿಷಯದಲ್ಲಿ ಬಹಳ ಹುಷಾರಾಗಿ ಇರ್ತೀನಿ. ಇನ್ನು ರೇಟ್ ವಿಚಾರಕ್ಕೆ ಬಂದರೆ, ಕೊರೊನಾ ಬಂದ ಮೇಲೆ ಎಲ್ಲಕ್ಕೂ ಬೆಲೆ ಹೆಚ್ಚಾಗಿದೆ. ಆದರೂ ಉಳಿದ ಕಡೆ ಎಷ್ಟಿದೆಯೋ ಅದೇ ಬೆಲೆ ಉಳಿಸಿಕೊಂಡಿದ್ದೀನಿ.

ಮನೆಯಲ್ಲಿ ತಯಾರಾಗುವ ಪದಾರ್ಥಗಳು: ನಾನು ಮಾರಾಟ ಮಾಡೋದರಲ್ಲಿ ಬಹುತೇಕ ನಮ್ಮ ಮನೆಯಲ್ಲಿ ಮಾಡೋದು. ಸ್ವಚ್ಛತೆ ಕಡೆ ಹೆಚ್ಚು ನಿಗಾ ವಹಿಸುತ್ತೇವೆ. ನೀವು ನನ್ನ ಜತೆ ಬಂದರೆ ಕಣ್ಣಾರೆ ನೋಡಬಹುದು. ಆ ಕಾರಣಕ್ಕೆ ರುಚಿ ಕೂಡ ಒಂದೇ ಥರ ಇರುವುದಕ್ಕೆ ಸಾಧ್ಯವಾಗಿದೆ. ಪಾರ್ಕ್ ಎದುರಿಗೆ ಇರೋ ಚಾಟ್ಸ್ ಅನ್ನೋದು ನನ್ನ ಗುರುತು. ಚಾಟ್ಸ್ ತಿಂದು ಹೋಗುವಾಗ, ಚೆನ್ನಾಗಿತ್ತು ಅನ್ನೋ ಮಾತು ಇನ್ನೊಂದಿಷ್ಟು ಖುಷಿಯನ್ನು ನೀಡುತ್ತದೆ ಎನ್ನುತ್ತಾ ಮತ್ತೆ ತಮ್ಮ ಕೆಲಸ ಮುಂದುವರಿಸಿದರು ಭೈರಯ್ಯ.

Published On - 11:56 am, Sat, 6 March 21