Jelly Fish: ಮೂರ್ತಿ ಚಿಕ್ಕದಾದರೂ ಜೆಲ್ಲಿ ಫಿಶ್ ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡಿದೆ ಅಮರತ್ವದ ರಹಸ್ಯ

|

Updated on: May 29, 2024 | 11:55 AM

ಲೋಳೆ ಮೀನು, ಅಂಬಲಿ ಮೀನು, ಕುಂದಾಪುರ ಕಡೆ ತಜ್ಜು ಮೀನು ಎಂದು ಕರೆಯಲ್ಪಡುವ ಜೆಲ್ಲಿ ಫಿಶ್ ಇತರೆ ಮೀನುಗಳಿಗಿಂತ ತುಂಬಾ ಡಿಫರೆಂಟ್. ಇವು ಜಗತ್ತಿನ ಪ್ರತಿಯೊಂದು ಸಮುದ್ರದಲ್ಲಿಯೂ ಸಾಮಾನ್ಯವಾಗಿಯೇ ಕಾಣಸಿಗುತ್ತವೆ. ಆದರೆ ನಿಮಗೆ ಗೊತ್ತಾ? ಇದು ವಿಶ್ವದ ಏಕಮಾತ್ರ ಚಿರಂಜೀವಿ ಮೀನು. ಮೆದುಳು, ಹೃದಯಾ, ರಕ್ತ ಇಲ್ಲದೇ ಜೀವಿಸುತ್ತಿರುವ ಇವು, ಟ್ರಾನ್ಸ್ ಡಿಫರೆನ್ಸಿಯೇಶನ್ ಪ್ರಕ್ರಿಯೆಯ ಮೂಲಕ ತಮ್ಮ ಹಾಳಾದ ದೇಹದ ಕೋಶಗಳನ್ನು ರಿಪೇರಿ ಮಾಡಿಕೊಂಡು ಹೊಸತಾಗುತ್ತವೆ. ಈ ಪ್ರಕ್ರಿಯೆ ನಿರಂತರವಾಗಿ ಮುಂದುವರೆಯುತ್ತಲೇ ಇರುತ್ತದೆ. ಹೀಗಾಗಿ ಇದಕ್ಕೆ ಸಾವು ಎಂಬುದೇ ಎದುರಾಗುವುದಿಲ್ಲ.

Jelly Fish: ಮೂರ್ತಿ ಚಿಕ್ಕದಾದರೂ ಜೆಲ್ಲಿ ಫಿಶ್ ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡಿದೆ ಅಮರತ್ವದ ರಹಸ್ಯ
ಜೆಲ್ಲಿ ಫಿಶ್
Follow us on

ಸಮುದ್ರವು ಅಗಾಧ ವಿಸ್ಮಯಗಳ ಒಡಲು. ಇಲ್ಲಿ ಹಲವು ವೈವಿಧ್ಯಮಯ ಜಲಚರಗಳ ರಾಶಿ ಇದೆ. ಇಂತಹ ಸ್ವಚ್ಛಂದ ಸಮುದ್ರಗಳ ಮೇಲ್ಮೈಯಲ್ಲಿ ಯಾರ ಭಯವೂ ಇಲ್ಲದೆ ಹಾಯಾಗಿ ತೇಲುವ ಛತ್ರಿ ಆಕಾರದ ಪಾರದರ್ಶಕ ಜೀವಿಯನ್ನು ನೀವು ನೋಡಿಯೇ ಇರುತ್ತೀರಿ. ಕಣ್ಣಿಗೆ ಆಕರ್ಷಕ, ಮನಸ್ಸಿಗೆ ಒಂದು ರೀತಿ ಖುಷಿ ನೀಡುವ ಈ ಜೆಲ್ಲಿ ಮೀನುಗಳು ತನ್ನ ಒಡಲಲ್ಲಿ ಊಹೆಗೂ ಮೀರಿದ ಆಶ್ಚರ್ಯಕರ ವಿಚಾರಗಳನ್ನು ಅಡಗಿಸಿಕೊಂಡಿವೆ. ಬೋಟಿಂಗ್ ಮಾಡುವಾಗ, ಈಜಾಡುವಾಗ, ಸಮುದ್ರದ ಕಿನಾರೆಗಳಲ್ಲಿ ಅಲ್ಲಲ್ಲಿ ಕಂಡು ಬರುವ ಈ ಜೆಲ್ಲಿ ಮೀನುಗಳು ನೋಡಲು ಬೆಳ್ಳನೆಯ ಜೆಲ್ಲಿ ರೂಪದಲ್ಲಿರುತ್ತವೆ. ಹಾಗಾಗಿ ನಾವು ಇದು ಸಾಧು ಪ್ರಾಣಿ, ಮನುಷ್ಯರಿಗೆ ನೋವು ಮಾಡುವುದಿಲ್ಲ ಎಂದು ಕೊಂಡಿರುತ್ತೇವೆ. ಆದರೆ ಇವು ನೋಡಲು ಇಷ್ಟು ಸುಂದರವೋ ಅಷ್ಟೇ ಆತಂಕಕಾರಿಯೂ ಹೌದು.

ಚಪ್ಪಟೆ ಹುಳುಗಳು, ಪಾಲಿಪ್ಸ್, ನಕ್ಷತ್ರಮೀನು, ಸಮುದ್ರ ಎನಿಮೋನ್, ಪೊರಿಫೆರಾ ಎಂಬ ಸಮುದ್ರ ಜೀವಿಗಳಲ್ಲಿ ಹೃದಯ ಇರುವುದಿಲ್ಲ ಎಂದು ನಾವು ಕೇಳಿದ್ದೇವೆ. ಆದರೆ ಜೆಲ್ಲಿ ಮೀನುಗಳಲ್ಲಿ ಮೆದುಳು, ಹೃದಯ, ರಕ್ತ ಯಾವುದೂ ಇರುವುದಿಲ್ಲ. ಇವು 95 ಪ್ರತಿಶತ ನೀರಿನಿಂದಾಗಿರುತ್ತವೆ. ಇವು ತಮ್ಮ ದೇಹದಾದ್ಯಂತ ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ಪ್ರಸಾರ ಮಾಡಲು ಸಹಾಯ ಮಾಡುವ ಸರಳವಾದ ವ್ಯವಸ್ಥೆಯನ್ನು ಹೊಂದಿರುತ್ತವೆ.

ಇಡೀ ಪ್ರಪಂಚದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಜಾತಿಯ ಜೆಲ್ಲಿ ಮೀನುಗಳನ್ನು ನಾವು ನೋಡಬಹುದು. ವಿವಿಧ ಆಕಾರ, ಗಾತ್ರಗಳಲ್ಲಿ ಕಂಡು ಬರುವ ಇವುಗಳಲ್ಲಿ ಕೆಲವು ವಿಷಕಾರಿ ಜೆಲ್ಲಿ ಮೀನುಗಳು ಸಹ ಇವೆ. ಹಲವು ದೇಶಗಳಲ್ಲಿ ಜೆಲ್ಲಿ ಮೀನುಗಳಿದ್ದಾವೆ ಸಮುದ್ರಕ್ಕೆ ಇಳಿಯಬೇಡಿ ಎಂಬ ಬೋರ್ಡ್​ಗಳನ್ನು ಸಹ ಹಾಕಿರುತ್ತಾರೆ. ಅಷ್ಟರ ಮಟ್ಟಿಗೆ ಇವು ಭಯವನ್ನು ಹುಟ್ಟಿಸಿವೆ. ವಿಶ್ವದ ಅತಿದೊಡ್ಡ ಜೆಲ್ಲಿ ಮೀನು ನೋಮುರಾ ಜೆಲ್ಲಿ ಮೀನು, ಸ್ಟೈಜಿಯೊಮೆಡುಸಾ ಗಿಗಾಂಟಿಯಾ, ಇದು ಕಳೆದ 100 ವರ್ಷಗಳಲ್ಲಿ ಕೇವಲ 17 ಬಾರಿ ಅಷ್ಟೇ ಕಾಣಿಸಿಕೊಂಡಿವೆ.

ಇನ್ನು ಅಚ್ಚರಿಯ ವಿಚಾರವೆಂದರೆ ಈ ಭೂಮಿಯ ಮೇಲೆ ಡೈನೋಸಾರ್‌ಗಳು ಹುಟ್ಟುವ ಮುಂಚಿನಿಂದಲೇ ಅಂದರೆ 500 ಮಿಲಿಯನ್ ವರ್ಷಗಳ ಹಿಂದೆಯೇ ಜೆಲ್ಲಿ ಮೀನುಗಳ ವಿಕಸನವಾಗಿತ್ತು ಎಂದು ಕೆಲವು ವಿಜ್ಞಾನಿಗಳು ವಾದ ಮಂಡಿಸಿದ್ದಾರೆ.

ಸಿಂಹದ ಮೇನ್ ಜೆಲ್ಲಿ ಮೀನು (ಸೈನಿಯಾ ಕ್ಯಾಪಿಲಾಟಾ) ಅತ್ಯಂತ ದೊಡ್ಡ ಜೆಲ್ಲಿ ಮೀನು. ಇದು ಆರೂವರೆ ಅಡಿ ವ್ಯಾಸದ ಗಂಟೆಯನ್ನು ಹೊಂದಿರುತ್ತದೆ ಮತ್ತು 440 ಪೌಂಡ್‌ಗಳಷ್ಟು ತೂಕವಿರುತ್ತದೆ. ಜೆಲ್ಲಿ ಮೀನುಗಳು ಕೇಂದ್ರ ನರಮಂಡಲ, ರಕ್ತಪರಿಚಲನಾ ವ್ಯವಸ್ಥೆ ಮತ್ತು ಉಸಿರಾಟದ ವ್ಯವಸ್ಥೆಯನ್ನು ಹೊಂದಿರುವುದಿಲ್ಲ. ಕಶೇರುಕ ಪ್ರಾಣಿಗಳಿಗೆ ಹೋಲಿಸಿದರೆ, ಅವು ಅತ್ಯಂತ ಸರಳವಾದ ಜೀವಿಗಳು.

ಜೆಲ್ಲಿ ಮೀನುಗಳ ರಚನೆ

ಇವುಗಳು ಅಲೆಅಲೆಯಾದ ಗಂಟೆಗಳು (ಹೊಟ್ಟೆಯನ್ನು ಒಳಗೊಂಡಿರುತ್ತವೆ) ಮತ್ತು ತೂಗಾಡುವ, ಸಿನಿಡೋಸೈಟ್-ಸ್ಪ್ಯಾಂಗ್ಲ್ಡ್ ಗ್ರಹಣಾಂಗಗಳಿಂದ ಮಾಡಲ್ಪಟ್ಟಿದೆ. ಇವುಗಳ ಬಹುತೇಕ ಅಂಗರಹಿತ ದೇಹಗಳು ಕೇವಲ ಮೂರು ಪದರಗಳನ್ನು ಒಳಗೊಂಡಿರುತ್ತವೆ. ಹೊರ ಎಪಿಡರ್ಮಿಸ್, ಮಧ್ಯದ ಮೆಸೊಗ್ಲಿಯಾ ಮತ್ತು ಒಳಗಿನ ಗ್ಯಾಸ್ಟ್ರೋಡರ್ಮಿಸ್. ಜೆಲ್ಲಿ ಮೀನುಗಳಲ್ಲಿ ಹೈಡ್ರೋಸ್ಟಾಟಿಕ್ ಅಸ್ಥಿಪಂಜರವಿರುತ್ತದೆ. ಇದು ವಾಸ್ತವವಾಗಿ ನೂರಾರು ಮಿಲಿಯನ್ ವರ್ಷಗಳ ಹಿಂದೆ ವಿಕಾಸದ ಒಂದು ನಾವೀನ್ಯತೆಯಾಗಿದೆ.

ಕೆಳಭಾಗದಲ್ಲಿ ತೂಗಾಡುವ ಉದ್ದನೆಯ ಕಾಲುಗಳ ಮೂಲಕವೇ ಇವು ಎಲ್ಲವನ್ನು ಗ್ರಹಿಸುವುದು. ಕೆಲವು ಜೆಲ್ಲಿ ಮೀನುಗಳು ಈ ಗ್ರಹಣಾಂಗಗಳನ್ನು ಸಮುದ್ರದಾಳದಲ್ಲಿ ಬಂಡೆಗಳಿಗೆ ಲಂಗರು ಹಾಕಿಕೊಂಡು ಬದುಕುತ್ತವೆ. ತನಗೆ ಅಪಾಯವಿದೆ ಎಂದು ತಿಳಿಯುತ್ತಿದ್ದಂತೆ ಆ ಗ್ರಹಣಾಂಗಗಳಿಂದ ಕುಟುಕುತ್ತವೆ. ಈ ರೀತಿ ಕುಟುಕಿಸಿಕೊಂಡ ಮನುಷ್ಯ ಉರಿಯಿಂದಲೇ ನರಳಿ ನರಳಿ ಸಾಯುತ್ತಾನೆ.

ಇನ್ನು ಜೆಲ್ಲಿ ಮೀನುಗಳು ಹೈಡ್ರೋಸ್ಟಾಟಿಕ್ ಅಸ್ಥಿಪಂಜರಗಳನ್ನು ಹೊಂದಿರುವ ಏಕೈಕ ಪ್ರಾಣಿಗಳಲ್ಲ. ಸ್ಟಾರ್ಫಿಶ್, ಎರೆಹುಳುಗಳು ಮತ್ತು ಇತರ ಹಲವಾರು ಅಕಶೇರುಕಗಳಲ್ಲಿಯೂ ಈ ರೀತಿಯ ಅಸ್ತಿಪಂಜರವನ್ನು ಕಾಣಬಹುದು.

ಜೆಲ್ಲಿ ಮೀನುಗಳ ಜೀವಿತಾವಧಿ ಎಷ್ಟು ವರ್ಷ?

ಮೆರೈನ್ ಕನ್ಸರ್ವೇಶನ್ ಸೊಸೈಟಿ ಪ್ರಕಾರ, ಹೆಚ್ಚಿನ ಸಣ್ಣ ಜಾತಿಯ ಜೆಲ್ಲಿ ಮೀನುಗಳು ಕೆಲವೇ ಗಂಟೆಗಳ ಕಾಲ ಮಾತ್ರ ಜೀವಿಸುತ್ತವೆ, ಸಿಂಹದ ಮೇನ್ ಜೆಲ್ಲಿ ಮೀನುಗಳಂತಹ ದೊಡ್ಡ ಜಾತಿಯ ಜೆಲ್ಲಿ ಮೀನುಗಳು ಎರಡು ವರ್ಷಗಳವರೆಗೆ ಬದುಕಬಲ್ಲವು. ಆದರೆ ಮತ್ತೊಂದಷ್ಟು ಜೆಲ್ಲಿ ಮೀನುಗಳು ನೂರಾರು ವರ್ಷಗಳ ಕಾಲ ಬದುಕಿದ್ದವು ಎಂಬುವುದಕ್ಕೆ ಪುರಾವೆಗಳಿವೆ. ಟರ್ರಿಟೊಪ್ಸಿಸ್ ಡೊಹ್ರ್ನಿ (Turritopsis dohrnii) ಎಂಬ ಜೆಲ್ಲಿ ಮೀನು ಅಮರತ್ವ ಪಡೆದಿದೆ.

ಕೆಲ ಜೆಲ್ಲಿ ಫಿಶ್​ಗಳು ನಿರ್ದಿಷ್ಟ ವಯಸ್ಸಿಗೆ ಬರುತ್ತಿದ್ದಂತೆ ತಮ್ಮ ವಯಸ್ಸಾದ ಜೀವಕೋಶಗಳನ್ನು ನವೀಕರಿಸಿಕೊಂಡು ಮತ್ತೆ ಹೊಸತಾದ ಜೀವಿಗಳಾಗಿ ಬದಲಾಗುವ ಶಕ್ತಿಯನ್ನು ಹೊಂದಿವೆ. ಇವುಗಳ ದೇಹಸ್ಥಿತಿ ಎಷ್ಟೇ ವಿಷಮ ಸ್ಥಿತಿಯಲ್ಲಿದ್ದರೂ ನಿರ್ದಿಷ್ಟವಾದ ವಯಸ್ಸಿನ ನಂತರ ಇವುಗಳು ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಮತ್ತೆ ಬಾಲ್ಯವನ್ನು ಪಡೆಯುತ್ತವೆ.

ಸ್ಪ್ಯಾನಿಷ್ ಸಂಶೋಧಕರು ಅದರ ಅಮರತ್ವದ ರಹಸ್ಯವನ್ನು ಬಿಚ್ಚಿಡಲು Turritopsis dohrnii ಎಂಬ ಜೆಲ್ಲಿ ಮೀನುಗಳ ಜೀನೋಮ್ ಅನ್ನು ಪರೀಕ್ಷಿಸಿದ್ದರು. ಈ ವೇಳೆ ಸಾವನ್ನು ತಪ್ಪಿಸುವುದರ ಜೊತೆಗೆ ದೀರ್ಘಾಯುಷ್ಯಕ್ಕೆ ಕೊಡುಗೆ ನೀಡುವ ಹಲವಾರು ಪ್ರಮುಖ ಜೀನೋಮ್‌ಗಳು ಕಂಡು ಬಂದಿವೆ.

ಸ್ಪೇನ್‌ನ ಒವಿಡೊ ವಿಶ್ವವಿದ್ಯಾಲಯದ ಡಾ. ಕಾರ್ಲೋಸ್ ಲೋಪೆಜ್ ಓಟಿನ್ ನೇತೃತ್ವದ ಸಂಶೋಧಕರ ತಂಡವು ನಿರ್ದಿಷ್ಟ ಜೆಲ್ಲಿ ಮೀನುಗಳ ಜಿನೋಮ್ ಸೀಕ್ವೆನ್ಸಿಂಗ್ ಅನ್ನು ಮ್ಯಾಪ್ ಮಾಡಿತ್ತು.

ಇತರ ಜೆಲ್ಲಿ ಮೀನುಗಳಂತೆ, ಟರ್ರಿಟೊಪ್ಸಿಸ್ ಡೊಹ್ರ್ನಿ ಎರಡು ಜೀವನ ಚಕ್ರ ಹೊಂದಿದ್ದು ಒಂದು ಸಮುದ್ರದ ತಳದಲ್ಲಿರುವ ಅವರ ಅಲೈಂಗಿಕ ಹಂತ, ಅಲ್ಲಿ ಆಹಾರದ ಅನುಪಸ್ಥಿತಿಯಲ್ಲಿ ಬದುಕುವುದು ಅವರ ಮುಖ್ಯ ಉದ್ದೇಶವಾಗಿದೆ. ಪರಿಸ್ಥಿತಿಗಳು ಅನುಕೂಲಕರವಾದಾಗ, ಜೆಲ್ಲಿ ಮೀನುಗಳು ಲೈಂಗಿಕವಾಗಿ ಸಂತಾನೋತ್ಪತ್ತಿ ಮಾಡುತ್ತವೆ. ಅನೇಕ ಜೆಲ್ಲಿ ಮೀನುಗಳು ವಯಸ್ಸಾದ ಪ್ರಕ್ರಿಯೆಯನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯವನ್ನು ಹೊಂದಿವೆ, ಇವುಗಳಲ್ಲಿ ಹೆಚ್ಚಿನವು ಲೈಂಗಿಕ ಪ್ರಬುದ್ಧತೆಯನ್ನು ತಲುಪಿದ ನಂತರ ಈ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ. ಆದರೆ Turritopsis dohrnii ಪ್ರಕರಣದಲ್ಲಿ ಈ ರೀತಿ ಇಲ್ಲ. ಸಾವು ಹತ್ತಿರ ಬರುತ್ತಿದ್ದಂತೆ ವೃದ್ಧಾಪ್ಯದಿಂದ ನೇರ ಜನನಾವಸ್ಥೆಗೆ ಬರುವ ಈ ಪರಿವರ್ತನೆಗೆ ಟ್ರಾನ್ಸ್ ಡಿಫರೆನ್ಸಿಯೇಶನ್ ಎಂದು ಕರೆಯಲಾಗುತ್ತೆ. ಹೀಗಾಗಿ 2 ಸಾವಿರ ವಿದಧ ಜೆಲ್ಲಿ ಫಿಶ್​ಗಳಲ್ಲಿ ಕೆಲವು ಮಾತ್ರ ಅಮರತ್ವ ಪಡೆದಿವೆ. ಇನ್ನು ಜೆಲ್ಲಿ ಫಿಶ್ ಅಷ್ಟೇ ಅಲ್ಲ ಹೈಡ್ರಾ ಮತ್ತು ಪ್ಲಾನೇರಿಯವರ್ಮ್ ಎಂಬ ಜೀವಿಗಳು ಕೂಡ ಅಮರತ್ವದ ವರದಾನವನ್ನು ಪಡೆದಿವೆ.

ಅಮರತ್ವ ಪಡೆದ ಜೆಲ್ಲಿ ಫಿಶ್ ಸಾಯುವುದೇ ಇಲ್ವಾ?

ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಂದು ಜೀವಿ ಕೂಡ ಸಾಯಲೇ ಬೇಕು. ಆದರೆ ಟರ್ರಿಟೊಪ್ಸಿಸ್ ಡೊಹ್ರ್ನಿ ಜೆಲ್ಲಿ ಫಿಶ್ ಅಮರತ್ವದ ವರದಾನ ಪಡೆದಿದೆ. ಇತರ ಪ್ರಾಣಿಗಳು ಈ ಜೆಲ್ಲಿ ಫಿಶ್​ಗಳನ್ನು ಕೊಲ್ಲುವವರೆಗೂ ಟ್ರಾನ್ಸ್ ಡಿಫರೆನ್ಸಿಯೇಶನ್ ಕ್ರಿಯೆ ಸತತವಾಗಿ ನಡೆಯುತ್ತಲೇ ಇರುತ್ತದೆ. ವಿಜ್ಞಾನಿಗಳು ಇದುವರೆಗೆ ನಡೆಸಿರುವ ಪರೀಕ್ಷೆಯಲ್ಲಿ ಟುರ್ರಿಟೋಪ್ಸಿಸ್ ಜೆಲ್ಲಿ ಮೀನು ನೈಸರ್ಗಿಕವಾಗಿ ಸತ್ತ ಬಗ್ಗೆ ಒಂದೇ ಒಂದು ಉದಾಹರಣೆಯೂ ಸಿಕ್ಕಿಲ್ಲ. ಸಾಮಾನ್ಯವಾಗಿ

ಜೆಲ್ಲಿ ಫಿಶ್​ಗಳ ಮರುಹುಟ್ಟಿನ ರಹಸ್ಯವೇನು?

ಜೆಲ್ಲಿ ಫಿಶ್​ಗಳು ಪಾಲಿಪ್ (ಬಾಲ್ಯಾವಸ್ಥೆ) ಸ್ಥಿತಿಗೆ ಮರಳುವಾಗ ಪಾಲಿಪ್​ಗಳ ಕಾಲೋನಿಯನ್ನೇ ಮರುನಿರ್ಮಾಣಮಾಡುತ್ತದೆ. ಈ ಸಮೂಹವು ಒಂದಕ್ಕೊಂದು ಅಂಟುಕಂಡು ನೂತನ ಜೀವಿಯನ್ನು ಉತ್ಪತ್ತಿ ಮಾಡುತ್ತವೆ. ಈ ರೀತಿ ಮರುಹುಟ್ಟು ಪಡೆದ ಜೀವಿ ಹೊಸ ಸಮೂಹ ರಚಿಸಲು ಆರಂಭಿಸುತ್ತದೆ. ಈ ಪ್ರಕ್ರಿಯೆ ನಿರಂತರವಾಗಿ ಮುಂದುವರಿಯುತ್ತದೆ. ಹೀಗಾಗಿ ಇದಕ್ಕೆ ಸಾವು ಎಂಬುದೇ ಎದುರಾಗುವುದಿಲ್ಲ. ಈ ಗುಣ ಹಲ್ಲಿ ಮತ್ತು ಸರಿಸೃಪ ಮೊದಲಾದವುಗಳಲ್ಲಿ ಕೊಂಚಮಟ್ಟಿಗೆ ಕಾಣಬಹುದು. ಹಲ್ಲಿ, ಓತಿಕೇತಗಳು ಅಪಾಯ ಕಂಡು ಬಂದಾಗ ತಮ್ಮ ಬಾಲವನ್ನು ಉದುರಿಸಿ ಎಸ್ಕೇಪ್ ಆಗುತ್ತವೆ. ಉದುರಿದ ಬಾಲ ವಿಲವಿಲನೆ ಒದ್ದಾಡುವುದನ್ನು ನೋಡಿ ಬೇಟೆ ಅಲ್ಲೇ ಇದೆ ಎಂದು ಭಾವಿಸಿ ಅದರ ಮೇಲೆ ವೈರಿ ದಾಳಿ ಮಾಡುತ್ತದೆ. ಇತ್ತ ಸುರಕ್ಷಿತವಾದ ಹಲ್ಲಿಗೆ ಕೆಲವು ದಿನಗಳಲ್ಲೇ ಹೊಸ ಬಾಲ ಬೆಳೆಯುತ್ತದೆ. ಆದರೆ ಇವುಗಳು ಕೇವಲ ಒಂದು ಅಂಗವನ್ನು ಮಾತ್ರ ಮರಳಿಪಡೆಯಬಹುದೇ ಹೊರತು ಜೆಲ್ಲಿ ಫಿಶ್​ನಂತೆ ಮತ್ತೆ ಹೊಸಜನ್ಮ ಪಡೆಯಲಾರವು.

ಜೆಲ್ಲಿ ಮೀನುಗಳು ಅಪಾಯಕಾರಿ ಹೇಗೆ?

ಜೆಲ್ಲಿ ಫಿಶ್​ಗಳಲ್ಲಿ ಎಲ್ಲವೂ ವಿಷಕಾರಿಯಾಗಿರುವುದಿಲ್ಲ. ಕೆಲವು ಮಾತ್ರ ವಿಷಕಾರಿಯಾಗಿರುತ್ತವೆ. ಮೆರೈನ್ ಕನ್ಸರ್ವೇಶನ್ ಸೊಸೈಟಿಯ ಪ್ರಕಾರ, ಬಾಕ್ಸ್ ಜೆಲ್ಲಿ ಮೀನುಗಳು ಇತರೆ ಜಾತಿಯ ಜೆಲ್ಲಿ ಮೀನುಗಳಿಗಿಂತ ಭಿನ್ನ. ಆಸ್ಟ್ರೇಲಿಯನ್ ಬಾಕ್ಸ್ ಜೆಲ್ಲಿ ಮೀನುಗಳು ಅತ್ಯಂತ ವಿಷಕಾರಿ. ಅವು ನೋಡಲು ಸುಂದರ ಹಾಗೂ ಅಮಾಯಕ ಸಮುದ್ರ ಜೀವಿಗಳಂತೆ ಕಾಣಿಸುತ್ತವೆ. ಆದರೆ ಅವು ಬಹಳ ಅಪಾಯಕಾರಿಯಾಗಿರುತ್ತವೆ. ಬಾಕ್ಸ್ ಜೆಲ್ಲಿ ಫಿಶ್ ಅಥವಾ ಕ್ಯೂಬೋಜೋವಾನ್‌ಗಳು ಎರಡು ಡಜನ್‌ಗಳಷ್ಟು ಅಂದರೆ 24 ಕಣ್ಣುಗಳನ್ನು ಹೊಂದಿವೆ. ಬಾಕ್ಸ್ ಜೆಲ್ಲಿ ಫಿಶ್ 360 ಡಿಗ್ರಿ ವ್ಯಾಪ್ತಿಯಲ್ಲಿ ದೃಷ್ಟಿಯನ್ನು ಹಾಯಿಸಬಲ್ಲದು.

ಬಾಕ್ಸ್ ಜೆಲ್ಲಿ ಫಿಶ್​ಗಳ ಹಿಂದೆ ಜಡೆಯಂತೆ ಕಂಡುಬರುವ ಗ್ರಹಣಾಂಗಗಳ ಮೂಲಕ ಕುಟುಕಿದರೆ ಮನುಷ್ಯ ಸಾಯುವ ಹಂತಕ್ಕೆ ತಲುಪಿಬಿಡುತ್ತಾನೆ. ಇವುಗಳ ಹೊರ ಕವಚದಲ್ಲಿ ಸಣ್ಣ ಮುಳ್ಳುಗಳ ಮಾದರಿಯ ರಚನೆಯಿದೆ. ಮುಟ್ಟಲು ಬಂದರೆ ಸ್ವರಕ್ಷಣೆಗೆ ರಾಸಾಯನಿಕವನ್ನು ಬಿಡುಗಡೆ ಮಾಡುತ್ತವೆ. ಮುಳ್ಳುಗಳ ಮೂಲಕ ಅದು ನಮ್ಮ ದೇಹ ಪ್ರವೇಶಿಸಿದಾಗ ತೀವ್ರ ತುರಿಕೆಯಾಗುತ್ತದೆ. ಮುಟ್ಟಿದವರು ಮೃತಪಟ್ಟ ನಿದರ್ಶನಗಳಿವೆ.

ವರ್ಷಕ್ಕೆ 20-40 ಸಾವು

ಕೆಲ ಮಾಹಿತಿಗಳ ಪ್ರಕಾರ, ವಿಷಕಾರಿ ಜೆಲ್ಲಿ ಮೀನುಗಳ ಕುಟುಕಿನಿಂದಾಗಿ ವರ್ಷಕ್ಕೆ 20-40 ಮಂದಿ ಮೃತಪಟ್ಟಿದ್ದಾರೆ. ಆದರೆ ಹೆಚ್ಚಿನ ಪ್ರಕರಣಗಳು ವರದಿಯಾಗುವುದೇ ಇಲ್ಲ. ಹೀಗಾಗಿ ನಿಖರವಾದ ಡೇಟಾವನ್ನು ಪಡೆಯುವುದು ಕಷ್ಟ. ಸರ್ಫ್ ಲೈಫ್ ಸೇವಿಂಗ್ ಆಸ್ಟ್ರೇಲಿಯ (SLSA) 2014-2015 ರ ವಾರ್ಷಿಕ ವರದಿಯ ಪ್ರಕಾರ, ಆಸ್ಟ್ರೇಲಿಯಾದಲ್ಲಿ ಒಂದು ವರ್ಷಕ್ಕೆ ಸುಮಾರು 23,500 ಮಂದಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಇನ್ನು ದಕ್ಷಿಣ ಇಟಲಿಯಲ್ಲಿ ಐದು ವರ್ಷಗಳ ಅವಧಿಯಲ್ಲಿ ಅಂದಾಜು 400,000 ಯುರೋಗಳನ್ನು ಜೆಲ್ಲಿ ಮೀನು ಕುಟುಕು ಸಂಬಂಧಿತ ವೈದ್ಯಕೀಯ ಸೇವೆಗೆ ಖರ್ಚು ಮಾಡಲಾಗಿದೆ. ಕರ್ನಾಟಕದ ಉಡುಪಿ, ಗೋಕರ್ಣದ ಬೀಚ್​ಗಳಲ್ಲಿ ಪ್ರವಾಸಿಗರು ಜೆಲ್ಲಿ ಫಿಶ್​ಗಳ ಕಡಿತವಾಗಿ ಉರಿಯಿಂದ ಒದ್ದಾಡಿದ ಘಟನೆಗಳು ಸಹ ನಡೆದಿವೆ.

ಜೆಲ್ಲಿ ಮೀನು ಕಚ್ಚಿದರೆ ಚಿಕಿತ್ಸೆ ಹೇಗೆ?

ವಿನೆಗರ್ ಬಾಕ್ಸ್ ಜೆಲ್ಲಿ ಮೀನುಗಳ ಕುಟುಕುಗಳಿಗೆ ಸಹಾಯ ಮಾಡುತ್ತದೆ. ಜೊತೆಗೆ ಜೆಲ್ಲಿ ಮೀನು ಕಚ್ಚಿದ ದೇಹದ ಭಾಗಕ್ಕೆ ಸಮುದ್ರದ ಉಪ್ಪು ನೀರಿನಿಂದ ತೊಳೆಯಬೇಕು. ಗ್ರಹಣಾಂಗಗಳು ಮತ್ತು ವಿಷವನ್ನು ತೆಗೆಯಬೇಕು. ಈ ವೇಳೆ ಕೈಗೆ ಗ್ಲೋಸ್ ಹಾಕುವುದನ್ನು ಮರೆಯಬೇಡಿ. ಉರಿಯನ್ನು ಕಡಿಮೆ ಮಾಡಲು ವಿನೆಗರ್ ಅಥವಾ ಆಲ್ಕೋಹಾಲ್ ಅನ್ನು ಗಾಯದ ಮೇಲೆ ಹಾಕಬಹುದು.  ನೋವನ್ನು ಕಡಿಮೆ ಮಾಡಲು ಗಾಯಕ್ಕೆ ಲೋಷನ್ ಅಥವಾ ಹೈಡ್ರೋಕಾರ್ಟಿಸೋನ್ ಕ್ರೀಮ್ ಅನ್ನು ಸಹ ಬಳಸಬಹುದು. ನೋವು ಮತ್ತು ಊತ ಕಡಿಮೆ ಮಾಡಲು ಐಸ್ ಪ್ಯಾಕ್ ಅಥವಾ ಬಿಸಿನೀರಿನ ಶಾಖ ಸಹ ಕೊಡಬಹುದು. ಆದರೆ ವೈದ್ಯ ಬಳಿ ಹೋಗಿ ಚಿಕಿತ್ಸೆ ಪಡೆಯುವುದು ಕಡ್ಡಾಯ.

ಸಮುದ್ರದ ಸ್ವಚ್ಛತೆಯಲ್ಲಿ ಜೆಲ್ಲಿ ಮೀನುಗಳ ಕೊಡುಗೆ

ಇನ್ನು ವಿಶೇಷವೆಂದರೆ ನವೆಂಬರ್ 3 ರಂದು ವಿಶ್ವದಾದ್ಯಂತ ಜೆಲ್ಲಿ ಮೀನುಗಳ ದಿನವನ್ನು ಆಚರಿಸಲಾಗುತ್ತೆ. ಜೆಲ್ಲಿ ಮೀನು ಮತ್ತು ಸಮುದ್ರ ಪರಿಸರ ವ್ಯವಸ್ಥೆಯಲ್ಲಿ ಅವುಗಳ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಸಾಗರವನ್ನು ಆರೋಗ್ಯಕರವಾಗಿಡಲು ಇವು ಸಹಾಯ ಮಾಡುತ್ತವೆ.

ಜೆಲ್ಲಿ ಮೀನುಗಳು ಸಮುದ್ರದಲ್ಲಿ ಸಿಗುವ ಪ್ಲ್ಯಾಂಕ್ಟನ್ ಅನ್ನು ತಿನ್ನುತ್ತವೆ. ಜೆಲ್ಲಿ ಮೀನುಗಳನ್ನು ಆಮೆಗಳು, ಮೀನುಗಳು ಮತ್ತು ಕಡಲ ಪಕ್ಷಿಗಳಂತಹ ಅನೇಕ ಇತರ ಸಮುದ್ರ ಪ್ರಾಣಿಗಳು ಸಹ ತಿನ್ನುತ್ತವೆ. ಸಮುದ್ರವನ್ನು ಆರೋಗ್ಯವಾಗಿಡಲು ಜೆಲ್ಲಿ ಮೀನುಗಳ ಕೊಡುಗೆ ಇದೆ. ಈ ಜೆಲ್ಲಿ ಮೀನುಗಳು ನೀರಿನಿಂದ ತ್ಯಾಜ್ಯ ಉತ್ಪನ್ನಗಳನ್ನು ತೆಗೆದುಹಾಕುತ್ತವೆ. ಸಮುದ್ರವನ್ನು ಗಾಲೀಜು ಮಾಡುವ ಕೆಲ ಜೀವಿಗಳನ್ನು ಮತ್ತು ಇತರ ಸಮುದ್ರ ಜೀವಿಗಳ ಜನಸಂಖ್ಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.

ಜೆಲ್ಲಿ ಮೀನುಗಳು ಮಾಂಸಾಹಾರಿಗಳು. ಇವು ಝೂಪ್ಲ್ಯಾಂಕ್ಟನ್, ಸಣ್ಣ ಮೀನುಗಳು ಮತ್ತು ಇತರ ಜೆಲ್ಲಿ ಮೀನುಗಳನ್ನು ತಿನ್ನುತ್ತವೆ ಎನ್ನಲಾಗುತ್ತೆ. ಇನ್ನು ಜೆಲ್ಲಿ ಮೀನುಗಳು ಸಸ್ಯಗಳನ್ನು ಸಹ ತಿನ್ನುತ್ತವೆ ಎಂದು ನ್ಯಾಷನಲ್ ಜಿಯಾಗ್ರಫಿಕ್ ವರದಿ ಮಾಡಿದೆ.

ಕೆಲವು ಜಾತಿಯ ಜೆಲ್ಲಿ ಫಿಶ್​ಗಳ ಬಾಯಿಯು ಅವುಗಳ ಘಂಟೆಯಾಕಾರದ ದೇಹದ ಕೆಳಭಾಗದಲ್ಲಿರುತ್ತದೆ. ಜೆಲ್ಲಿ ಫಿಶ್​ಗಳು ಬಾಯಿಯಿಂದಲೇ ತಿಂದು ಬಾಯಿಯಿಂದಲೇ ತ್ಯಾಜ್ಯವನ್ನು ಹೊರ ಹಾಕುತ್ತವೆ. ಅವುಗಳಿಗೆ ಗುದದ್ವಾರ ಇರುವುದಿಲ್ಲ. ಕೆಲವು ಇತರೆ ಜೆಲ್ಲಿ ಮೀನುಗಳಿಗೆ ಬಾಯಿಯೇ ಇರುವುದಿಲ್ಲ. ಅವು ಪರ್ಯಾಯವಾಗಿ, ತಮ್ಮ ಅಂಗಾಂಗದ ಮೂಲಕ ಆಹಾರವನ್ನು ಸೇವಿಸುತ್ತವೆ ಎಂದು ಅಮೇರಿಕನ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿ ವರದಿ ಮಾಡಿದೆ.

ಜೆಲ್ಲಿ ಮೀನುಗಳು ತಮ್ಮ ಆಹಾರವನ್ನು ಬೇಗನೆ ಜೀರ್ಣಿಸಿಕೊಳ್ಳುತ್ತವೆ. ಜೀಣಿಸಿಕೊಳ್ಳಲಾಗಲಿಲ್ಲವೆಂದರೆ ಅವುಗಳು ಸಮುದ್ರದೊಳಗೆ ಸರಿಯಾಗಿ ತೇಲಲು ಸಾಧ್ಯವಾಗುವುದಿಲ್ಲ ಎಂದು ನ್ಯಾಷನಲ್ ಜಿಯಾಗ್ರಫಿಕ್ ವರದಿ ಮಾಡಿದೆ. ಜೆಲ್ಲಿ ಮೀನುಗಳಿಗೆ ಹೃದಯ, ಮೂಳೆ, ರಕ್ತ ಇಲ್ಲ. ಹಾಗಾಗಿ ಅವುಗಳಿಗೆ ನೋವು ಆಗುವುದಿಲ್ಲ. ಮನುಷ್ಯರು ಅನುಭವಿಸುವ ರೀತಿಯಲ್ಲಿ ಇವುಗಳು ನೋವನ್ನು ಅನುಭವಿಸುವುದಿಲ್ಲ.

ಜೆಲ್ಲಿ ಮೀನು ನಿಜಕ್ಕೂ ಮೀನುಗಳೆನಾ?

ಜೆಲ್ಲಿ ಮೀನುಗಳು ಅಕಶೇರುಕಗಳು. ಅಂದರೆ ಅವುಗಳಿಗೆ ಬೆನ್ನೆಲುಬು ಇಲ್ಲ. ಸಾಮಾನ್ಯವಾಗಿ ಮೀನುಗಳು ತಮ್ಮ ಬೆನ್ನೆಲುಬುಗಳ ಸುತ್ತಲೂ ಕೇಂದ್ರೀಕೃತವಾಗಿರುತ್ತವೆ. ಆದ್ದರಿಂದ ತಾಂತ್ರಿಕವಾಗಿ ಬೆನ್ನೆಲುಬು ಇಲ್ಲದ ಈ ಜೆಲ್ಲಿ ಮೀನುಗಳು ತಮ್ಮ ಹೆಸರಿನಲ್ಲಿ “ಮೀನು” ಹೊಂದಿದ್ದರೂ ನಿಜವಾಗಿಯೂ ಇವು ಮೀನುಗಳಲ್ಲ.

ವಿಜ್ಞಾನಿಗಳು ವಿಶ್ವದ ಅತ್ಯಂತ ಚಿಕ್ಕ ಜೆಲ್ಲಿ ಮೀನುಗಳನ್ನು ಕಂಡುಕೊಂಡಿದ್ದಾರೆ. ಅದು ಇರುಕಂಡ್ಜಿ ಜೆಲ್ಲಿ ಮೀನು. ಅದರ ಗಾತ್ರದ ಹೊರತಾಗಿಯೂ – ಇದು ವಿಶ್ವದ ಅತ್ಯಂತ ವಿಷಕಾರಿ ಜೆಲ್ಲಿ ಮೀನುಗಳಲ್ಲಿ ಒಂದಾಗಿದೆ.

ಜೆಲ್ಲಿ ಮೀನುಗಳನ್ನು ಆಹಾರವಾಗಿಯೂ ಬಳಸುತ್ತಾರೆ

ಚೀನಾ, ಜಪಾನ್ ಮತ್ತು ಕೊರಿಯಾ ಸೇರಿದಂತೆ ಕೆಲವು ದೇಶಗಳಲ್ಲಿ ಜೆಲ್ಲಿ ಮೀನುಗಳನ್ನು ಆಹಾರವಾಗಿಯೂ ಬಳಸುತ್ತಾರೆ. ತಿನ್ನಲು ಯೋಗ್ಯ ಎನ್ನಲಾಗುವ, ವಿಷಕಾರಿ ಅಲ್ಲದ ಜೆಲ್ಲಿ ಮೀನುಗಳನ್ನು ಒಣಗಿಸಿ ಅಥವಾ ಉಪ್ಪು ನೀರಿನಲ್ಲಿ ನೆನೆಸಿಟ್ಟು ತಿನ್ನುತ್ತಾರೆ. 12 ಜಾತಿಯ ಜೆಲ್ಲಿ ಮೀನುಗಳನ್ನು ಆಹಾರಕ್ಕಾಗಿ ಬಳಸಬಹುದು ಎಂದು ವರದಿಯೊಂದು ತಿಳಿಸಿದೆ.

ಚೀನಾದಲ್ಲಿ, ಸಂಸ್ಕರಿಸಿದ ಜೆಲ್ಲಿ ಮೀನುಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಮತ್ತು ಬೇಯಿಸಿ ಅಥವಾ ಹಸಿಯಾಗಿ ತಿನ್ನಲಾಗುತ್ತದೆ. ಹಾಗೂ ಎಣ್ಣೆ, ಸೋಯಾ ಸಾಸ್, ವಿನೆಗರ್ ಮತ್ತು ಮಸಾಲೆಗಳನ್ನು ಹಾಕಿ ತರಕಾರಿಗಳೊಂದಿಗೆ ತಿನ್ನಲಾಗುತ್ತೆ. ಇನ್ನು ಭಾರತದಲ್ಲೂ ಕೆಲ ಕಡೆ ತಮ್ಮದೇ ಆದ ಶೈಲಿಯಲ್ಲಿ ಮಸಾಲೆ ಹಾಕಿ ಬೇಯಿಸಿ ತಿನ್ನುವುದನ್ನು ನಾವು ನೋಡಬಹುದು.

ಬಾಹ್ಯಾಕಾಶದಲ್ಲಿ ಜೆಲ್ಲಿ ಮೀನು?

ಕೆಲ ವರದಿಗಳ ಪ್ರಕಾರ, 1991ರ ಇಸವಿಯಲ್ಲಿ ನಾಸಾ 2,000ಕ್ಕೂ ಹೆಚ್ಚು ಜೆಲ್ಲಿ ಮೀನುಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿತ್ತು. ಅಲ್ಲಿಯೂ ಕೂಡ ಅವು ಸಂತಾನೋತ್ಪತ್ತಿ ಮಾಡಿದ್ದವು ಮತ್ತು ಈ ಪ್ರಯೋಗದ ಅಂತ್ಯದ ವೇಳೆಗೆ ಸುಮಾರು 60,000 ಜೆಲ್ಲಿ ಮೀನುಗಳಿದ್ದವು.

ಇನ್ನು ಅಚ್ಚರಿ ಎಂದರೆ ಸರಿಸುಮಾರು 50% ಜೆಲ್ಲಿ ಮೀನುಗಳು ಬಯೋಲುಮಿನೆಸೆಂಟ್ (bioluminescent) ಆಗಿರುತ್ತವೆ. ಅಂದರೆ ಕತ್ತಲ ಸಮಯದಲ್ಲಿ ಇವುಗಳು ಸಮುದ್ರದಲ್ಲಿ ಬೆಳಕನ್ನು ಉತ್ಪಾದಿಸಬಲ್ಲವು ಎಂದು PETA (People for the Ethical Treatment of Animals) ಕಂಡುಕೊಂಡಿದೆ. ಈ ಜೀವಿಗಳು ಕತ್ತಲೆಯಲ್ಲಿ ಹೊಳೆಯುವಾಗ ಹೊರಸೂಸುವ ರೋಮಾಂಚಕ, ವರ್ಣರಂಜಿತ ಬೆಳಕಿನ ಮೂಲಕ ತಮ್ಮನ್ನು ರಕ್ಷಿಸಿಕೊಂಡು ತಮ್ಮ ಬೇಟೆಯನ್ನು ಆಕರ್ಷಿಸಿ ಬೇಟೆಯಾಡುತ್ತೆ.

“ಲಂಡನ್ ಸೀ ಲೈಫ್ ಅಕ್ವೇರಿಯಂ”ನಲ್ಲಿ ಬ್ಯಾರೆಲ್ ಜೆಲ್ಲಿ ಮೀನುಗಳಿಗಾಗಿ ವಿಶೇಷ ಪ್ರದರ್ಶನವಿಡಲಾಗಿದೆ. ವಿಜ್ಞಾನಿಗಳು ಪ್ರಯೋಗಾಲಯದಲ್ಲಿ ಜೆಲ್ಲಿ ಮೀನುಗಳನ್ನು ಬೆಳೆಸುವ ಮಾರ್ಗವನ್ನು ಕೂಡ ಕಂಡುಹಿಡಿದಿದ್ದಾರೆ.

ಜೆಲ್ಲಿ ಮೀನುಗಳು ಗುಂಪಾಗಿಯೂ ಸಮುದ್ರದಲ್ಲಿ ಕಾಣಿಸಿಕೊಳ್ಳುವುದರಿಂದ ಈ ಗುಂಪನ್ನು ಸ್ಮ್ಯಾಕ್‌ ಎಂದು ಕರೆಯಲಾಗುತ್ತದೆ. ಏಕಕಾಲಕ್ಕೆ ಅನೇಕ ಜೆಲ್ಲಿ ಮೀನುಗಳು ಒಟ್ಟುಗೂಡುವುದನ್ನು ಬ್ಲೂಮ್‌ (ಹೂವಿನಂತ ರಚನೆ) ಎಂದು ಕರೆಯಲಾಗುತ್ತದೆ.

ಹೃದಯಾ, ಮೆದುಳು, ರಕ್ತ, ಮೂಳೆಗಳೇ ಇಲ್ಲದ ಜೆಲ್ಲಿ ಮೀನುಗಳು ಸಮುದ್ರದಲ್ಲಿ ಹೇರಳವಾಗಿ ಕಂಡು ಬರುತ್ತವೆ. ಆದರೆ ಇವುಗಳ ವಿಸ್ಮಯ ರಹಸ್ಯಗಳ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವಿಲ್ಲ. ಜೆಲ್ಲಿ ಮೀನುಗಳು ಕಡಲ ಒಡಲಲ್ಲಿ ಬೆಳಕನ್ನು ಚಲ್ಲಿ ಪ್ರಕಾಶಿಸುತ್ತವೆ. ಸಮುದ್ರದಲ್ಲಿನ ಪಾಚಿ, ಸಣ್ಣ ಜೀವಿಗಳನ್ನು ತಿಂದು ಸಮುದ್ರದ ಸ್ವಚ್ಛತೆ ಕಾಪಾಡುತ್ತೆ. ಸಮುದ್ರದ ಸೌಂದರ್ಯ ಹೆಚ್ಚಿಸಿ ಆಹಾರವಾಗಿಯೂ ಉಪಯುಕ್ತವಾಗುವ ಜೆಲ್ಲಿ ಮೀನುಗಳು ತನ್ನ ಒಡಲಲ್ಲಿ ರಹಸ್ಯಗಳನ್ನು ಬಚ್ಚಿಟ್ಟುಕೊಂಡಿವೆ.

Published On - 11:54 am, Wed, 29 May 24