Ramanavami : ಯಕ್ಷಗಾನದ ವೇಷ ಕಳಚಿದಂತೆ ವೇಷ ಕಳಚಬಹುದೇ ರಾಮ?

|

Updated on: Apr 21, 2021 | 3:02 PM

‘ನಮಗೆ ಬೇಕು ಕಾಡಿನಲ್ಲಿ ಶಬರಿಯ ಪ್ರೀತಿಗೆ ಕರಗಿದ ರಾಮ. ಅವಳ ಎಂಜಲನ್ನು ಸ್ವೀಕರಿಸಿ ಅವಳನ್ನು ಆಲಂಗಿಸಿದ ರಾಮ, ಎಲ್ಲರನ್ನೂ ಆಲಂಗಿಸುವ ರಾಮ. ಸಮತ್ವ ಅಂದರೆ ಇದೇ ಅಲ್ಲವಾ? ಎಲ್ಲ ಜಾತಿ, ಜನಾಂಗ, ಧರ್ಮ ಆಚರಣೆ ಎಲ್ಲವನ್ನೂ ಆಲಂಗಿಸುವ ಆ ಪುರುಷೋತ್ತಮನ ರೂಪುರೇಖೆ, ಆ ತಾಯ್ತನದ ರಾಮನ ಸೈರಣೆ ನಮಗಿಂದು ಬೇಕು. ಆತ ದೈವತ್ವದ ಆವರಣ ಕಳಚಿ, ಧರ್ಮದ ಆವರಣ ಕಳಚಿ, ರಾಜಕೀಯದ ಆವರಣ ಕಳಚಿ ಆತ ಶಬರಿಯ ರಾಮನಾಗಿ, ಕೌಸಲ್ಯೆಯ ರಾಮನಾಗಿ, ವಾಲ್ಮೀಕಿಯ ಕಾವ್ಯಧ್ಯಾನದ ರಾಮನಾಗಿ ನಮ್ಮೆದೆಯಲ್ಲಿ ಉಳಿಯಬೇಕು, ಬೆಳೆಯಬೇಕು. 

Ramanavami : ಯಕ್ಷಗಾನದ ವೇಷ ಕಳಚಿದಂತೆ ವೇಷ ಕಳಚಬಹುದೇ ರಾಮ?
ಡಾ. ಗೀತಾ ವಸಂತ.
Follow us on

ನಾತಿಚರಾಮಿ; ನಿನ್ನ ಅನುಮತಿ ಇಲ್ಲದೆ, ನಿನ್ನ ಅಭಿಪ್ರಾಯವೂ ಇಲ್ಲದೆ ಒಂದು ಹೆಜ್ಜೆಯನ್ನೂ ಮುಂದಿಡಲಾರೆ ಅನ್ನುವ ಆ ಒಂದು ಪತಿಧರ್ಮವೂ ಇತ್ತಲ್ಲ? ಅವನ ಜೀವಸಖಿಯಾಗಿ, ಅವನ ನೆರಳಾಗಿ, ಏನನ್ನೂ ಪ್ರಶ್ನಿಸದೆ ಕಾಡಿನಲ್ಲಿ ಅವನನ್ನು ಹಿಂಬಾಲಿಸಿದ ಆ ಜೀವ ಅವನ ಜೀವದ ಭಾಗ ಜೀವೈಕ್ಯವಾದ ನಿಜ ಅರ್ಥದ ಅರ್ಧಾಂಗಿಯಾದ ಸೀತೆಯನ್ನು ಆತ ಯಾಕೆ ಮುಖ್ಯ ಅಂತ ಪರಿಭಾವಿಸಲಿಲ್ಲ? ಅಗಸನ ಮಾತು ಮುಖ್ಯ ಅನ್ನಿಸಿದ ಹಾಗೆ ಸೀತೆಯ ಭಾವನೆಗಳು ಸೀತೆಯ ಬದುಕು, ಆಕೆಯ ನಿಷ್ಠೆ ಇವೆಲ್ಲ ಯಾಕೆ ರಾಮನಿಗೆ ಮುಖ್ಯ ಅನ್ನಿಸಲಿಲ್ಲ ಅನ್ನುವುದು ನಿಜವಾಗಿಯೂ ಕಾಡ್ತದೆ. ವಾಲಿವಧೆ ಸಂದರ್ಭ, ರಾಕ್ಷಸರ ಸಂಹಾರ ಸಂದರ್ಭ ಹೀಗೆ ಈ ದೃಷ್ಟಿಕೋನದ ಹಿಂದೆಯೂ ಪ್ರಶ್ನೆಗಳು ಇವೆ.

ರಾಮನ ಜೊತೆ ನನ್ನ ನೆನಪುಗಳೇನು? ರಾಮನಿಗೆ ನನ್ನ ಪ್ರಶ್ನೆಗಳಿವೆಯಾ? ಥಣ್ಣಗೆ ಕೂತು ಯೋಚಿಸುತ್ತೇನೆ ಈ ದಿನ. ಹೌದು, ಕವಿತೆ ಎಂಬ ರೆಂಬೆಯ ಮೇಲೆ ಕೂತು ಕೂಗುವ ಎದೆಕೋಗಿಲೆಯಂಥ ರಾಮನಿಗೆ ನನ್ನ ಪ್ರಶ್ನೆಯಿಲ್ಲ. ಅವನೊಂದಿಗೆ ನನ್ನದು ತಾದಾತ್ಮ ಭಾವ. ಆದರೆ ಧರ್ಮಕಾರಣ, ರಾಜಕಾರಣ, ರಾಜಕಾರಣದಲ್ಲಿ ಉರಿದ ರಾಮನಿಗೆ ಪ್ರಶ್ನೆಗಳಿವೆ. ಧರ್ಮಸೂಕ್ಷ್ಮದಲ್ಲಿ ನರಳಿದ ರಾಮನಿಗೆ ನನ್ನ ಪ್ರಶ್ನೆಗಳಿವೆ. ಬಾಲ್ಯದ ಗುಹೆಯನ್ನು ಥಣ್ಣಗೆ ಪ್ರವೇಶಿಸಿದಾಗ ಅಲ್ಲಿಯ ಮೂಡುವ ಚಿತ್ರಣಗಳನ್ನು ನೋಡುವುದೇ ಎಷ್ಟು ಆಹ್ಲಾದ. ಮಲೆನಾಡಿನ ಎಲ್ಲರ ಮನೆಯ ಜಗುಲಿಯ ಪ್ರಧಾನ ಬಾಗಿಲ ಮೇಲೆ ದೇವರ ಫೋಟೋಗಳಿರುತ್ತಿದ್ದವು. ಅಲ್ಲಿ ರಾಮ ಇರಲೇಬೇಕಿತ್ತು. ಯಾಕೆಂದರೆ ರಾಮ ಕುಟುಂಬವತ್ಸಲ. ಅವನ ಪಕ್ಕದಲ್ಲಿ ಪ್ರಿಯ ಸತಿ ಸೀತೆ, ಇನ್ನೊಂದು ಪಕ್ಕದಲ್ಲಿ ಅತ್ಯಂತ ಪ್ರೀತಿಯ ತಮ್ಮ ಲಕ್ಷ್ಮಣ. ಕಾಲಬುಡದಲ್ಲಿ ಹನುಮಂತ. ಅವನನನ್ನು ಸೇವಕನೆಂದು ದಾಸನೆಂದು ಹೇಳೋದಕ್ಕೆ ಸಾಧ್ಯವಿಲ್ಲ. ಹನುಮಂತನ ಎದೆ ಬಗೆದರೆ ರಾಮನಿದ್ದಾನೆ. ರಾಮ ಹನುಮಂತನನನ್ನು ಎದೆಗಾನಿಸಿಕೊಂಡಿದ್ಧಾನೆ.  ಇಲ್ಲಿ ದಾಸ್ಯಭಾವವಿಲ್ಲ. ಅಧಿಕಾರ ಸಂಬಂಧವಿಲ್ಲ. ಒಂದು ಕುಟುಂಬ ವತ್ಸಲ, ತಾಯ್ತನ ಭಾವವನ್ನು ಈ ಫೋಟೋದಲ್ಲಿ ಕಾಣುತ್ತಾ ಬಂದೆ ಬಂದೆ. ನಮ್ಮ ತಲೆಮಾರಿನ ಎಲ್ಲರ ಬಾಲ್ಯವೂ ರಾಮಾಯಣಗಳಿಂದ ಕೂಡಿದ ಭಾವ.

ರಾಮ ಕೂಡ ನಮ್ಮ ನಿಮ್ಮ ಹಾಗೆ ಚಂದ್ರ ಬೇಕೆಂದು ಹಟ ಮಾಡಿದವನು. ಕನ್ನಡಿಯಲ್ಲಿ ಚಂದ್ರನನ್ನು ಕೌಸಲ್ಯ ತೋರಿಸಿದಾಗ ಕೇಕೆ ಹಾಕಿದವನು. ಕೌಸಲ್ಯೆಯ ತೋಳತೊಟ್ಟಿಲಲ್ಲಿ ಆಡಿಬೆಳೆದವನು ರಾಮ, ಅವನಲ್ಲಿರುವ ಈ ತಾಯ್ತನ ತುಂಬಾ ಅಪ್ಯಾಯಮಾನ. ಆತ ತಾಯಂದಿರ ಜೊತೆಗೇ ಬೆಳೆದ ಕಥೆಯನ್ನೇ ನೋಡುತ್ತೇವೆ. ಅಲ್ಲಿ ದಶರಥನ ಪ್ರವೇಶ ಆಗುವುದು ನಂತರ. ರಾಮ ತಂದೆಗೆ ಮಗನಾಗಿ ಮಾಡುವ ಕರ್ತವ್ಯಗಳನ್ನು ಮಾಡಿ ಪಿತೃವಾಕ್ಯಪರಿಪಾಲಕನೆಂದು ಅನ್ನಿಸಿಕೊಂಡ. ಇಲ್ಲಿ ಪಿತೃವ್ಯವಸ್ಥೆಯ ಭಾಗವಾಗಿ ಕಾಣುವ ರಾಮ ಬೇರೆ, ತಾಯಂದಿರ ಜೊತೆಗೆ ಬೆಳೆದ ರಾಮ ಬೇರೆ. ಕೈಕೇಯಿ ಮಾತಿಗೂ ಬೆಲೆ ಕೊಟ್ಟ. ಕಾಡಿಗೆ ಹೋಗಬೇಕಾಗಿ ಬಂದಾಗ ಸ್ವಲ್ಪವೂ ವಿಚಲಿತನಾಗಲಿಲ್ಲ. ಅಧಿಕಾರದ ದಾಹ ಕಾಡಲೇ ಇಲ್ಲವಾ? ಕಾಡಿಗೆ ಹೋಗಿಬಿಟ್ಟ. ಈ ಕಾಡಿನಲ್ಲೇ ಕಾಣುವ ರಾಮ ಇದಾನಲ್ಲ, ಕುವೆಂಪು ಸೃಷ್ಟಿಸಿದ ರಾಮ. ಯೋಗಿ ರಾಮ. ಆತ ಕಾಡಿನಲ್ಲಿ ನಾವೆಲ್ಲ ಅಂದುಕೊಂಡ ಹಾಗೆ ಕಷ್ಟಪಟ್ಟು ಕಾಲ ಕಳೆಯಲಿಲ್ಲ.

ಕುವೆಂಪು ಸೃಷ್ಟಿಸಿದ ರಾಮ ಆಪ್ತರಾಮ. ಕಾಡಿಗೆ ಹೋಗುವುದೆಂದರೆ ಪ್ರಕೃತಿ ಮಡಿಲಿಗೆ ವಾಪಾಸು ಹೋದಹಾಗೆ, ತಾಯ ಗರ್ಭವನ್ನು ಮತ್ತೆ ಸೇರಿದ ಹಾಗೆ. ಅಂದರೆ ನಾಗರಿಕತೆಯ ಪೂರ್ವಲೋಕಕ್ಕೆ ಆತ ಹೋದ. ಅಯೋಧ್ಯೆ ಎನ್ನುವುದು ನಾಗರಿಕಯಿಂದ, ಯುದ್ಧಗಳಿಂದ, ಅಧಿಕಾರದಿಂದ ಪೀಡಿತವಾದ ಪ್ರದೇಶವಾಗಿತ್ತು. ಅದಕ್ಕೇ ಕುವೆಂಪು ಅವರಿಗೆ ಸಹ್ಯಾದ್ರಿ ಶ್ರೇಣಿಯ ಗಿರಿಶೃಂಗಗಳ ಉನ್ನತಿಯಲ್ಲಿ ಧ್ಯಾನಸ್ಥನಾದ ರಾಮ ಆತ ಒಬ್ಬ ಯೋಗಿಯ ಹಾಗೆ ಕಾಣುತ್ತಾನೆ. ತಪ ಎನ್ನುವುದು ತಾನಾಗಿಯೇ ಹೊಮ್ಮಿದ್ದು. ಕಾಡಿನ ಮೌನ ಏಕಾಂತ ಪ್ರಕೃತಿಯ ಮರ್ಮರ, ಪ್ರಕೃತಿಯ ಸೂಕ್ಷ್ಮ ಧ್ವನಿಗಳು, ಧ್ಯಾನ ತಲ್ಲೀನತೆ, ಬೀಸುವ ಗಾಳಿ, ಜುಳುಜುಳು ಹರಿಯುವ ನೀರು, ಪ್ರತಿಯೊಂದರ ಕಂಪನವನ್ನೂ ಅದರಿಂದ ಸಂಗೀತವನ್ನು ಕೇಳಬಲ್ಲ ಸೂಕ್ಷ್ಮಗೊಂಡ ರಾಮ ಧ್ಯಾನಲೀಲನಾಗಿ ಒಬ್ಬ ಋಷಿಯೇ ಆಗಿಬಿಡುತ್ತಾನೆ. ಅಂತಹ ರಾಮನನ್ನು ಚಿತ್ರಿಸುತ್ತಾರೆ ಕುವೆಂಪು. ಅಂತಹ ರಾಮ ಅಪ್ಯಾಯಮಾನವಾಗ್ತಾನೆ.

ಸೌಜನ್ಯ : ಅಂತರ್ಜಾಲ

ಆದ್ದರಿಂದಲೇ ರಾಮ ಕೇವಲ ಕ್ಷತ್ರೀಯರ ಕ್ಷಾತ್ರತೇಜಕ್ಕಿಂತ, ಯುದ್ಧದಾಹಕ್ಕಿಂತ ಭಿನ್ನವಾಗಿ ಯೋಚಿಸುವುದಕ್ಕೆ ಸಾಧ್ಯವಾಯಿತೇನೋ ಅಂತ ನಮಗೆ ಅನ್ನಿಸುವ ಥರದ ರಾಮ ಇಲ್ಲಿ ಕಾಣುತ್ತಾನೆ. ಇಲ್ಲೆಲ್ಲಾ ರಾಮ ನಮಗಿಷ್ಟ ಆಗುತ್ತಾನೆ. ಅಜ್ಜ ಸ್ನಾನ ಮಾಡಿಕೊಂಡು ಬರುವಾಗ, ಇದೇ ಮಂತ್ರ ಹೇಳುತ್ತಿದ್ದರು.

ರಾಮಾಯ ರಾಮಭದ್ರಾಯ

ರಾಮಚಂದ್ರಾಯ ವೇದಸೇ

ರಘುನಾಥಾಯ ನಾಥಾಯ

ಸೀತಾಯಾಃ ಪತಯೇ ನಮಃ

ಶ್ರೀರಾಮ ರಾಮೇತಿ ರಮೆ ರಾಮೆ

ಮನೋರಮೆ ಸಹಸ್ರ ನಾಮ

ತತ್ತುಲ್ಯಂ ರಾಮ ನಾಮ ವರಾನನೇ

ರಾಮಚಂದ್ರ, ರಾಮಭದ್ರ ಎಂಥ ಆಹ್ಲಾದಕರ ಹೆಸರುಗಳು. ಆದರೆ ಇವನು ಪರಿಪೂರ್ಣನಾಗುವುದು ಸೀತೆಯ ಪತಿಯಾದಾಗಲೇ. ಸೀತೆಯ ಪತಿ ಅನ್ನುವ ಅಸ್ತಿತ್ವ ಕೂಡ ಇದೆ ಅವನಿಗೆ. ಪತಿಧರ್ಮ ಕೂಡ ಇದೆ ರಾಮನಿಗೆ. ರಾಮ ಈ ಎರಡೂ ಧರ್ಮಸಂಕಷ್ಟಗಳ ನಡುವೆ ನಲುಗುತ್ತಾನಲ್ಲ? ಈ ಕಾಡಿನ ಬದುಕು ಮುಗಿದು ಕಾಡಿನಲ್ಲಿ ಸೀತೆಯ ಅಪರಹರಣವಾಗಿ ರಾವಣನ ಜೊತೆಗೆ ರಾಮನ ಯುದ್ಧ ಅನಿವಾರ್ಯವಾಗಿ ಘಟಿಸುತ್ತದೆ. ರಾವಣನನ್ನು ರಾಮ ಗೆಲ್ಲುತ್ತಾನೆ. ಇದನ್ನೇ ನಮ್ಮ ಮಹಾಕಾವ್ಯಗಳು ಒಳಿತು ಮತ್ತು ಕೆಡುಕಿನ ಸಂಘರ್ಷವಾಗಿ ನೋಡಿವೆ. ರಾಮ ಎಲ್ಲ ಒಳಿತುಗಳ ಮೊತ್ತ. ರಾಮ ಅನ್ನುವವನು ಇದ್ದನಾ? ಅವನು ಇತಿಹಾಸವಾ? ಪುರಾಣವಾ ಎನ್ನುವ ಚರ್ಚೆಗಳೆಲ್ಲ ಇವೆ. ರಾಮ ವಾಲ್ಮೀಕಿಯ ಚಿತ್ತಹುತ್ತಗಟ್ಟಿದಾಗ ಮೂಡಿದ ಒಂದು ಪುರುಷೋತ್ತಮನ ಪಾತ್ರ. ಅಡಿಗರು ಹೇಳಿದಂತೆ, ಚಿತ್ತಗಟ್ಟದೆ ಕೆತ್ತೀತೇ ಅಂತಹ ಪುರುಷೋತ್ತಮನ ರೂಪರೇಖೆ? ಬಹುಶಃ ರಾಮನಂತಹ ಸಮಚಿತ್ತದಂಥ, ಸಮಪ್ರೀತಿಯ ಅಂಥ ಒಂದು ಪುರುಷಾಕಾರ ಇರಬೇಕು ಅನ್ನುವುದೇ ನಮ್ಮ ಕನಸು. ಅಂತಹ ಕನಸಾಗಿ ಅಂತಹ ಧ್ಯಾನವಾಗಿ ವಾಲ್ಮೀಕಿಯಲ್ಲಿ ಮೂಡಿದವನು ರಾಮ.

ರಾಮ ನಾಮಜಪವಾಗಿ ನಮ್ಮನ್ನು ಕಾಡಿದ್ದಾನೆ. ಅನೇಕ ಸಂತರು, ಯೋಗಿಗಳು ಈ ರಾಮನಾಮವನ್ನೇ ಜಪವಾಗಿಸಿ ತಪವಾಗಿಸಿ ಮನಸಿನಿಂದ ಏನೇನೋ ಸಾಧಿಸಿದ್ಧಾರೆ. ರಾಮನಾಮ ಜಪ ಮಾಡುವ ಅಜ್ಜಿ ನನ್ನ ಮನಸಿನಲ್ಲಿ ಮೂಡುತ್ತಾರೆ. ಹೀಗೆ ನಮ್ಮ ಜೀವನಗಳಲ್ಲಿ ಧ್ಯಾನದ ಕೇಂದ್ರವಾಗಿ, ಭಕ್ತಿಯ ಆರಾಧನೆಯ ಕೇಂದ್ರವಾಗಿ ಬದುಕಿನ ಪಾಠವಾಗಿ ಎಂಥ ಕ್ಷಣಗಳಲ್ಲೂ ಕ್ಷೋಭೆಗೊಳ್ಳದೆ ಚಿತ್ತದ ಸಮತೆಯನ್ನು ಸಾಮರಸ್ಯವನ್ನು ಸಾಧಿಸುವ ಒಂದು ಗುರುವಾಗಿ ತಾಯಿಯಾಗಿ ರಾಮ ಕಾಡುತ್ತಿದ್ದ.

ಆದರೆ ನಂತರದ ಭಾಗ ಇದೆಯಲ್ಲ. ಆ ರಾಜಕಾರಣದ ಭಾಗ, ಅಲ್ಲಿ ರಾಮನ ಪಾತ್ರ ಕದಡಿ ಹೋಗುತ್ತದೆ. ತುಂಬು ಗರ್ಭಿಣಿ ಸೀತೆಯನ್ನು ಕಾಡಿಗೆ ಕಳಿಸುತ್ತಾನೆ ರಾಮ. ಅನೇಕರ ಪ್ರಶ್ನೆಗಳಿರುವುದು. ಅದಕ್ಕೆ ಇಡೀ ರಾಮಾಯಣದ ದೃಷ್ಟಿಕೋನ ಕೊಡುವ ಕಾರಣ ಏನೆಂದರೆ, ಆತನಿಗೆ ಒಂದು ರಾಜಧರ್ಮ ಇದೆ. ಆತ ಮನುಷ್ಯ ಹೌದು. ಆದರೆ ಆತ ರಾಜ. ರಾಜನಿಗೆ ಪ್ರತಿಯೊಬ್ಬ ಪ್ರಜೆಯ ಅಭಿಪ್ರಾಯ ಮುಖ್ಯ. ಪ್ರತಿಯೊಬ್ಬ ಪ್ರಜೆಯ ಭಾವನೆಯೂ ಮುಖ್ಯ. ರಾಮ ತುಂಬಾ ಪ್ರಜಾಪ್ರಭುತ್ವವಾದಿ. ಅಗಸನ ಮಾತಿಗೂ ಬೆಲೆಕೊಟ್ಟ. ಆದ್ದರಿಂದ ಆತ ಸೀತೆಯನ್ನು ಕಾಡಿಗೆ ಕಳಿಸಿದ. ಆದರೆ ಪ್ರಶ್ನೆ ಇರುವುದು ಏನೆಂದರೆ, ಪತಿಧರ್ಮವೂ ಇತ್ತಲ್ಲ ಅವನಿಗೆ? ನಾತಿಚರಾಮಿ; ನಿನ್ನ ಅನುಮತಿ ಇಲ್ಲದೆ, ನಿನ್ನ ಅಭಿಪ್ರಾಯವೂ ಇಲ್ಲದೆ ಒಂದು ಹೆಜ್ಜೆಯನ್ನೂ ಮುಂದಿಡಲಾರೆ ಅನ್ನುವ ಆ ಒಂದು ಪತಿಧರ್ಮವೂ ಇತ್ತಲ್ಲ? ಅವನ ಜೀವಸಖಿಯಾಗಿ, ಅವನ ನೆರಳಾಗಿ, ಏನನ್ನೂ ಪ್ರಶ್ನಿಸದೆ ಕಾಡಿನಲ್ಲಿ ಅವನನ್ನು ಹಿಂಬಾಲಿಸಿದ ಆ ಜೀವ ಅವನ ಜೀವದ ಭಾಗ ಜೀವೈಕ್ಯವಾದ ನಿಜ ಅರ್ಥದ ಅರ್ಧಾಂಗಿಯಾದ ಸೀತೆಯನ್ನು ಆತ ಯಾಕೆ ಮುಖ್ಯ ಅಂತ ಪರಿಭಾವಿಸಲಿಲ್ಲ? ಅಗಸನ ಮಾತು ಮುಖ್ಯ ಅನ್ನಿಸಿದ ಹಾಗೆ ಸೀತೆಯ ಭಾವನೆಗಳು ಸೀತೆಯ ಬದುಕು, ಆಕೆಯ ನಿಷ್ಠೆ ಇವೆಲ್ಲ ಯಾಕೆ ರಾಮನಿಗೆ ಮುಖ್ಯ ಅನ್ನಿಸಲಿಲ್ಲ ಅನ್ನುವುದು ನಿಜವಾಗಿಯೂ ಕಾಡ್ತದೆ. ವಾಲಿವಧೆ ಸಂದರ್ಭ, ರಾಕ್ಷಸರ ಸಂಹಾರ ಸಂದರ್ಭ ಹೀಗೆ ಈ ದೃಷ್ಟಿಕೋನದ ಹಿಂದೆಯೂ ಪ್ರಶ್ನೆಗಳು ಇವೆ.

ಇಲ್ಲಿ ನಾನು ಮೊದಲೇ ಹೇಳಿದ ಹಾಗೆ ರಾಜಕಾರಣ ಪ್ರವೇಶ ಮಾಡಿತು. ಆಳುವುದು, ಸಾಮ್ರಾಜ್ಯ ಸ್ಥಾಪಿಸುವುದು, ಅಶ್ವಮೇಧ ಮಾಡುವುದು. ಆ ಮೂಲಕ ಆಳುವ ಒಂದು ಹಂಬಲ ಇದೆಯಲ್ಲ. ಎಲ್ಲವನ್ನೂ ಕಬಳಿಸುವ, ಎಲ್ಲವನ್ನೂ ಗೆಲ್ಲವು, ಅದರ ಮೇಲೆ ಒಡೆತನ ಸ್ಥಾಪಿಸುವ ಈ ಭಾವ ಇದನ್ನು ಕ್ಷಾತ್ರ ಗುಣ, ಕ್ಷತ್ರೀಯರ ಸಹಜ ಗುಣ ಅಂತ ನೋಡುತ್ತಾ ಇವರನ್ನು ಆರಾಧಿಸುತ್ತಾ, ಅವರ ಭುಜಬಲ ತೋಳ್ಬಲದ ಪರಾಕ್ರಮ ಅಂತ ಯುದ್ಧದಲ್ಲಿ ವಿಜೃಂಭಿಸಿದ ರೀತಿಯನ್ನು ವರ್ಣಿಸುತ್ತ ಬಂದ ಕವಿಗೆ ರಾಮನನ್ನೂ ಕೂಡ ಹೀಗೆ ತೋರಿಸುವ ಅನಿವಾರ್ಯತೆ ಇತ್ತು ಅನ್ನಿಸುತ್ತದೆ.

ಸೌಜನ್ಯ : ಅಂತರ್ಜಾಲ

ಇಲ್ಲೆಲ್ಲ ನಮಗೆ ರಾಮನ ಈ ತಾಯ್ತತನದ ಆಯಾಮ ನಿಧಾನವಾಗಿ ಮರೆಯಾಗುತ್ತಾ ರಾಜಾರಾಮ ಕಾಣಿಸುತ್ತಾನೆ.  ರಾಜನಾದ ರಾಮನಿಗೆ ಸೀತೆಯ ನಿಡುಸುಯಿಲು, ಅವಳ ಅಂತರಂಗ, ಅವಳ ಆಪ್ತತೆ ಅವಳ ನಿಷ್ಠೆ, ಪ್ರೇಮ ಸಹನೆ ತ್ಯಾಗ ಯಾವುದೂ ಮುಖ್ಯ ಅನ್ನಿಸಲಿಲ್ಲವಾ ರಾಮ? ಯಾಕೆ ನಿನ್ನ ಹೃದಯದ ಬಡಿತದ ಜೊತೆ ಒಂದಾಗಿ ಹೋದ ಜೀವದ ನಿಟ್ಟುಸಿರು ನಿನಗೆ ಕೇಳಲಿಲ್ಲ? ಯಾಕೆ ನೀನು ಮನುಷ್ಯನಾಗಲಿಲ್ಲ ಬರೀ ರಾಜನಾದೆ? ಹೀಗೆ ವೇಷಗಳನ್ನ ಕಳಚಬಹುದಾ ಯಕ್ಷಗಾನದಲ್ಲಿ ವೇಷ ಕಳಚಿದ ಹಾಗೆ? ಮನುಷ್ಯರಾಮ ಬೇರೆ ಪತಿರಾಮ, ಮಗರಾಮಮ, ರಾಜರಾಮ ಬೇರೆ. ಇದೆಲ್ಲ ನಮ್ಮ ನಾಗರೀಕತೆಯ ದುರಂತ ಅಲ್ವಾ? ನಮ್ಮನ್ನೇ ನಾವು ಛಿದ್ರಗೊಳಿಸಿಕೊಳ್ಳುವುದು? ಪೂರ್ಣವನ್ನೇ ಕಾಣಲಾಗದೆ ಹೋಗುವುದು? ಹಾಗೆ ನೋಡಿದರೆ, ಯೋಗಿರಾಮ ನಿನ್ನ ಪೂರ್ಣತೆಯನ್ನು ಪೂರ್ಣತೆಯ ಆನಂದವನ್ನು ಹುಡುಕಿದ್ದೆಯಲ್ಲವಾ? ಯಾಕೆ ರಾಜನಾದಾಗ ಮತ್ತೆ ರಾಜಧರ್ಮವನ್ನು ನೀನು ತೊಡಲೇಬೇಕಾಯಿತು? ಹೀಗೆ ಲೌಕಿಕಕ್ಕೆ ಇಳಿಯಬೇಕಾಯಿತು? ಎನ್ನುವುದೇ ಪ್ರಶ್ನೆ. ಇಂಥ ಪ್ರಶ್ನೆಗಳನ್ನು ಎಚ್. ವಿ. ಸಾವಿತ್ರಮ್ಮ ಕೇಳಿದ್ದಾರೆ. ದು. ಸರಸ್ವತಿ ‘ಸಣ್ಣ ತಿಮ್ಮಿ ರಾಮಾಯಣ’ದಲ್ಲಿ ಕೇಳಿದ್ಧಾರೆ. ಬೌದ್ಧ, ಜೈನ ರಾಮಾಯಣಗಳೂ ಬೇರೆ ರೀತಿಯಿಂದ ನೋಡಿವೆ. ಈಗಂತೂ ಜೈಶ್ರೀರಾಮ ಅನ್ನುವ ಕೂಗು ಒಳಗಿನ ಭಕ್ತಿಯ ಆರ್ದ್ರತೆಯಿಂದ ಹುಟ್ಟದೆ ಎಲ್ಲೋ ಒಂದು ಯುದ್ಧೋನ್ಮಾದದಿಂದ ಹುಟ್ಟಿದ ಹಾಗೆ ಕೇಳುತ್ತಿದೆಯಲ್ಲ? ಏನನ್ನೋ ರಾಜಕಾರಣದ, ವಾದದ ಸ್ಥಾಪನೆಗಾಗಿ ಯಾವುದೋ ಒಂದು ಅಧಿಕಾರದ ಸ್ಥಾಪನೆಗಾಗಿ ಮಾಡಿದ ಕೂಗಿನ ಹಾಗೆ ರಣಕೇಕೆಯ ಹಾಗೆ ಕೆಲವೊಮ್ಮೆ ಕೇಳಿ ನಮ್ಮ ಎದೆ ಝಲ್ಲೆನ್ನಿಸುವಂತೆ ಮಾಡುತ್ತದಲ್ಲ? ಇಂಥ ರಾಮ ಬೇಕಾ? ನಮಗೆ ಬೇಕು ಕಾಡಿನಲ್ಲಿ ಶಬರಿಯ ಪ್ರೀತಿಗೆ ಕರಗಿದ ರಾಮ. ಅವಳ ಎಂಜಲನ್ನು ಸ್ವೀಕರಿಸಿ ಅವಳನ್ನು ಆಲಂಗಿಸಿದ ರಾಮ, ಎಲ್ಲರನ್ನೂ ಆಲಂಗಿಸುವ ರಾಮ ಬೇಕು . ಸಮತ್ವ ಅಂದರೆ ಇದೇ ಅಲ್ಲವಾ? ಎಲ್ಲ ಜಾತಿ, ಜನಾಂಗ, ಧರ್ಮ ಆಚರಣೆ ಎಲ್ಲವನ್ನೂ ಆಲಂಗಿಸುವ ಆ ಪುರುಷೋತ್ತಮನ ರೂಪುರೇಖೆ, ಆ ತಾಯ್ತನದ ರಾಮನ ಸೈರಣೆ ನಮಗಿಂದು ಬೇಕು. ಆತ ದೈವತ್ವದ ಆವರಣ ಕಳಚಿ, ಧರ್ಮದ ಆವರಣ ಕಳಚಿ, ರಾಜಕೀಯದ ಆವರಣ ಕಳಚಿ ಆತ ಶಬರಿಯ ರಾಮನಾಗಿ, ಕೌಸಲ್ಯೆಯ ರಾಮನಾಗಿ, ವಾಲ್ಮೀಕಿಯ ಕಾವ್ಯಧ್ಯಾನದ ರಾಮನಾಗಿ ನಮ್ಮೆದೆಯಲ್ಲಿ ಉಳಿಯಬೇಕು, ಬೆಳೆಯಬೇಕು.

*
ಪರಿಚಯ : ಕವಿ, ಕಥೆಗಾರರು ಮತ್ತು ವಿಮರ್ಶಕರಾದ ಡಾ. ಗೀತಾ ವಸಂತ ಅವರು ಶಿರಸಿಯ ಎಕ್ಕಂಬಿ ಬಳಿಯ ಕಾಟೀಮನೆಯಲ್ಲಿ ಹುಟ್ಟಿದ್ದು. ಈಗ ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿ. ‘ಚೌಕಟ್ಟಿನಾಚೆಯವರು’ ಕಥಾ ಸಂಕಲನ. ‘ಪರಿಮಳದ ಬೀಜ’ ಕವನಸಂಕಲನ. ಬೆಳಕಿನ ಬೀಜ, ಬೇಂದ್ರೆ ಕಾವ್ಯ – ಅವಧೂತ ಪ್ರಜ್ಞೆ, ಹೊಸ ದಿಗಂತದ ಹೊಸದಾರಿ ವಿಮರ್ಶಾ ಕೃತಿಗಳು. ಸ್ವಾತಂತ್ರ್ಯೋತ್ತರ ಕಥನ ಸಾಹಿತ್ಯದಲ್ಲಿ ಸ್ತ್ರೀವಾದಿ ಚಿಂತನೆಗಳು ಅವರ ಮಹಾಪ್ರಬಂಧ.

ಇದನ್ನೂ ಓದಿ : ಅವಿತಕವಿತೆ: ಜೀವರಸ ಕುಡಿದು ಮತ್ತೇರಿ ಹುಟ್ಟಬೇಕು ಮತ್ತೆ ಮತ್ತೆ

shriramanavami special write up by writer geeta vasant

Published On - 1:58 pm, Wed, 21 April 21