ನೀರಿಗಾಗಿ ಹಾಹಾಕಾರ ಸೃಷ್ಟಿಯಾದಾಗ ಸಮಾಜವನ್ನು ಸಮತಲ ಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ನೀರ ಕಾಳಜಿ ಈ ಸಂದರ್ಭದಲ್ಲಿ ಬಹಳ ಮುಖ್ಯ ಎನಿಸಿಕೊಳ್ಳುತ್ತದೆ. ಇಂತಹ ಸಾಮಾಜಿಕ ಕಳಕಳಿಯನ್ನು ಹೊತ್ತ ಅದಷ್ಟೋ ಜನರು ನಮ್ಮ ನಡುವೆ ಇದ್ದಾರೆ. ಅದರಲ್ಲೂ ಮುಂದಿನ ಪೀಳಿಗೆಗೆ ನೀರನ್ನು ಉಳಿಸಬೇಕು ಎಂಬ ಮಹತ್ತರವಾದ ಆಕಾಂಕ್ಷೆಯ ಜೊತೆಗೆ ಒಂದಷ್ಟು ಅಧಿಕಾರಿಗಳು ಶ್ರಮಿಸಿದ್ದಾರೆ. ಅಂತಹವರ ಪಟ್ಟಿಗೆ ನಿವೃತ್ತ ಐಎಎಸ್ ಅಧಿಕಾರಿ ಮದನ ಗೋಪಾಲ್ ಕೂಡ ಸೇರಿಕೊಂಡಿದ್ದಾರೆ. ಕೆರೆ ಅಭಿವೃದ್ಧಿ ಕಾರ್ಯದಲ್ಲಿ ಸದಾ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅವರು ಕೆರೆಗಳ ಪಾಲನೆ ಹೇಗೆ ಎನ್ನುವುದರ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಸುಧಾರಣೆಗಳನ್ನು ತರಲು ಜನರನ್ನು ಮತ್ತು ಸಮುದಾಯವನ್ನು ನಾವು ನಂಬಬೇಕು. ಬೆಂಗಳೂರಿನಲ್ಲಿ ಕುಳಿತು ಎಲ್ಲಾ ಸುಧಾರಣೆಗಳನ್ನು ಅಥವಾ ನಿರ್ವಹಣೆ ಮಾಡುತ್ತೇನೆ ಎಂದರೆ ಅದು ಸಾಧ್ಯವಾಗುವುದಿಲ್ಲ. ಅಲ್ಲಿರುವ ಸ್ಥಳೀಯ ಸಂಸ್ಥೆಗಳು, ಗ್ರಾಮಸಭೆಗಳು, ಆಯಾ ಕೆರೆ ಬಳಕೆದಾರರ ಸಂಘ, ಅವರಿಗೊಂದು ಮಾರ್ಗಸೂಚನೆ ನೀಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಒಳಗೆ ಅದನ್ನು ತಂದು ವಿಶೇಷ ಎಕಾನಮಿ ಕಮಿಟಿ ಮಾಡಬೇಕು. ಆಗ ಗ್ರಾಮ ಪಂಚಾಯತಿಗಳು ಅದನ್ನು ಸರಿಯಾಗಿ ನೋಡಿಕೊಳ್ಳಲು ಸಾಧ್ಯ. ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಸಾಕಷ್ಟು ಕೆಲಸ ಇದೆ. ಅವರೇ ಇದನ್ನೆಲ್ಲಾ ಮಾಡುತ್ತಾರೆ ಎಂದರೆ ಕಷ್ಟ. ಹೀಗಾಗಿ ಇದಕ್ಕೊಂದು ವಿಶೇಷ ತಂಡ ರಚನೆ ಮಾಡುವುದು ಅಗತ್ಯ. ಆ ಕಾರಣದಿಂದ ಕೆರೆ ಬಳಕೆದಾರರ ಸಂಘಗಳನ್ನು ರಚಿಸಿದೆವು. ಈ ಸಂಘದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಜೊತೆಗೆ ಕೆರೆಗಳನ್ನು ಅವಲಂಬಿಸಿ ಜೀವನ ನಡೆಸುತ್ತಿರುವವರು ಇದ್ದರು. ಸಮಾಜದ ಎಲ್ಲರೂ ಮುಂದೆ ಬಂದರೆ ಮಾತ್ರ ಕೆರೆಗಳ ಸುಧಾರಣೆ ಸಾಧ್ಯ.
ಕೆರೆ ಬಳಕೆದಾರರ ಸಂಘ
ಕೆರೆ ಬಳಕೆದಾರರ ಸಂಘಗಳು 2003ರಿಂದ ಕಾರ್ಯನಿರ್ವಹಿಸಲು ಆರಂಭಿಸಿದವು. ಮೊದಲು ಈ ಸಂಘವನ್ನು ನಾವು ಮಾಡುವಾಗ (ವಾಟರ್ ಸೊಸೈಟಿ) ನೀರಾವರಿ ಸಚಿವರಾಗಿ ಎಚ್.ಕೆ ಪಾಟೀಲ್ ಇದ್ದರು. ಅವರು ಈ ಸಂಘಗಳ ಬಗ್ಗೆ ಯೋಚಿಸಿದ ನಂತರವೇ ಯೋಜನೆ ಜಾರಿಗೆ ತಂದರು. ದೊಡ್ಡದೊಡ್ಡ ನೀರಾವರಿ ಯೋಜನೆಗಳು ಮತ್ತು ಕೆರೆಗಳಿಗೆ ಗುಣಾತ್ಮಕ ವ್ಯತ್ಯಾಸ ಇದೆ. ಇದನ್ನು ಮನಗಂಡೇ ಅವರು ನೊಂದಾಯಿತ ಸಂಘಗಳ ರಚನೆಗೆ ಅನುಮತಿ ನೀಡಿದರು.
ಜಲಸಮೃದ್ಧಿ ಯೋಜನೆಯಲ್ಲಿ ಕೇವಲ ನೀರಾವರಿ ಆಧರಿತ ಜನರಷ್ಟೇ ಅಲ್ಲ. ಮೀನುಗಾರಿಕೆ ಸಂಘದವರು ಇರಬೇಕು. ಆ ಗ್ರಾಮದಲ್ಲಿನ ಚುನಾಯಿತ ಜನರು ಇರಬೇಕು. ಜಲಾನಯನ ಪ್ರದೇಶದಲ್ಲಿರುವ ರೈತರ ಜೊತೆಗೆ ಚರ್ಚೆ ಮಾಡಬೇಕು. ಜಲಾನಯನ ಪ್ರದೇಶ ಇಲ್ಲ ಎಂದರೆ ಕೆರೆಗಳು ಸತ್ತು ಹೋಗುತ್ತದೆ. ಕೆರೆಗಳು ಚೆನ್ನಾಗಿ ಇರಬೇಕು ಎಂದರೆ ಜಲಾನಯನ ಪ್ರದೇಶದ ಸದಸ್ಯರು ಕೆರೆಗಳ ಬಗ್ಗೆ ಗಮನ ಕೊಡಬೇಕು.
ಕೆರೆ ಬಳಕೆದಾರರ ಸಂಘಕ್ಕೆ ಉತ್ತೇಜನ ನೀಡಿದ ಅಂಶ
ಜಲ ಸಮೃದ್ಧಿ ಯೋಜನೆ ಸಂಘ ರಾಜ್ಯಮಟ್ಟದ ಯೋಜನೆ, ಅದರ ಅಡಿಯಲ್ಲಿ ಕೆರೆ ಬಳಕೆದಾರರ ಸಂಘ ಬರುತ್ತದೆ. ಆಯಾ ಕೆರೆಗಳಿಗೆ ಸಂಬಂಧಪಟ್ಟಂತೆ ಒಂದು ಕೆರೆ ಬಳಕೆದಾರರ ಸಂಘವನ್ನು ರೂಪಿಸುತ್ತೇವೆ. ರಾಜಸ್ತಾನದಲ್ಲಿ ರಾಜೇಂದ್ರ ಸಿಂಗ್ ಅವರ ನೇತೃತ್ವದಲ್ಲಿ ನದಿಗಳ ಪುನರುಜ್ಜೀವನದ ಬಗ್ಗೆ ಒಂದು ಪರಿಕಲ್ಪನೆ ವಿಕಾಸವಾಗಿದೆ. ಆಗ ನಾನು ರಾಜೇಂದ್ರ ಸಿಂಗ್ ಅವರನ್ನು ಭೇಟಿ ಮಾಡಿದ್ದೆ. ‘ಆಜ್ ಬಿ ಕಡಿ ಹೇ ತಲಾಬ್‘ ಪುಸ್ತಕ ಬರೆದಿರುವ ಅನುರಾಗ್ ಮಿಶ್ರಾ ಅವರನ್ನು ಭೇಟಿಯಾಗಿದ್ದೆ. ಆ ಪುಸ್ತಕ ಕೂಡ ಈ ಯೋಜನೆಗೆ ಉತ್ತೇಜನ ನೀಡಿತು. ಗ್ರಾಮದ ಸಮಗ್ರ ಅಭಿವೃದ್ಧಿ ಆಗಬೇಕಾದರೆ. ಗ್ರಾಮದ ಸಂಘಗಳ ಮೂಲಕ ಆಗಬೇಕು ಎಂಬ ಅಣ್ಣ ಹಜಾರೆಯವರ ಪರಿಕಲ್ಪನೆ ನಮಗೂ ಇಷ್ಟವಾಯಿತು. ಆಗ ಕರ್ನಾಟಕದಲ್ಲಿ ಕೆರೆಗಳ ಪುರುಜ್ಜಿವನ ನಿರ್ವಹಣೆ ಈ ಸಂಘಗಳ ಮೂಲಕವೇ ಆಗಬೇಕು ಎನ್ನುವುದು ಸ್ಪಷ್ಟವಾಗಿ ನಮಗೆ ತಿಳಿಯಿತು. ನಾವು ಅದರಂತೆಯೇ ಮುಂದುವರೆದವು. ನಂತರದ ದಿನಗಳಲ್ಲಿ ನಾವು ಮಾಡಿದ ಕೆಲಸದ ಫಲಿತಾಂಶ ತಿಳಿದು ಸಂತೋಷವಾಯಿತು.
ಪರಿಕಲ್ಪನೆ ಮತ್ತು ನಿರೂಪಣೆ: ಪ್ರೀತಿ ಶೆಟ್ಟಿಗಾರ್
ಇದನ್ನೂ ಓದಿ: ನೀರೆಚ್ಚರದ ಬದುಕು | ಬೆಂಗಳೂರಿನಲ್ಲಿ ಇಂಗುಬಾವಿ ಜಾಗೃತಿ, ಇದು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ
(Madan Gopal Shares Procedure and execution plans of Lake Users Association PSG)