ಕರ್ನಾಟಕದಲ್ಲಿ ಯೂರಿಯಾ ಕೊರೆತೆಗೆ ಕಾರಣವೇನು? ವಿಧಾಸಭೆಯಲ್ಲಿ ಉತ್ತರ ನೀಡಿದ ಕೃಷಿ ಸಚಿವ
ಕರ್ನಾಟಕದಲ್ಲಿ ಯೂರಿಯಾ ಗೊಬ್ಬರದ ತೀವ್ರ ಕೊರತೆಯಿಂದ ರೈತರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ವಿಪಕ್ಷಗಳು ಈ ಸಮಸ್ಯೆಯನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿವೆ. ರಸಗೊಬ್ಬರ ಕೊರತೆಗೆ ಕಾರಣ ಎಂದು ಸರ್ಕಾರ ವಿಧಾನಸಭೆಯಲ್ಲಿ ಹೇಳಿದೆ. ಕಾಳಸಂತೆಯಲ್ಲಿ ಗೊಬ್ಬರ ಮಾರಾಟವನ್ನೂ ತಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಬೆಂಗಳೂರು, ಆಗಸ್ಟ್ 13: ಕರ್ನಾಟಕದಲ್ಲಿ (Karnataka) ಯೂರಿಯಾ (Urea) ಗೊಬ್ಬರ ಅಭಾವ ಸೃಷ್ಟಿಯಾಗಿದ್ದು, ಈ ಸಂಬಂಧ ರೈತರು ರಸ್ತೆಗಳಿದು ಪ್ರತಿಭಟನೆ ನಡೆಸಿದ್ದಾರೆ. ಯೂರಿಯಾ ಗೊಬ್ಬರ ಕೊರತೆಯಿಂದ ರೈತರು ಪರದಾಡುತ್ತಿರುವ ವಿಚಾರವನ್ನು ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಬುಧವಾರ (ಆ.13) ವಿಧಾಸಭೆಯಲ್ಲಿ ಪ್ರಸ್ತಾಪಿಸಿದವು. ಬಿಜೆಪಿ ಮತ್ತು ಜೆಡಿಎಸ್ ನಾಯಕರ ಪ್ರಶ್ನೆಗಳಿಗೆ ಕೃಷಿ ಸಚಿವ ಚಲುವರಾಯಸ್ವಾಮಿ (Chaluvarayaswamy) ಉತ್ತರ ನೀಡಿದ್ದಾರೆ.
“ಕರ್ನಾಟಕಕ್ಕೆ 11.95 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಬೇಕೆಂದು ಕೇಂದ್ರ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದೆವು. ಆದರೆ, ಕೇಂದ್ರ ಸರ್ಕಾರ 11.17 ಲಕ್ಷ ಮೆಟ್ರಿಕ್ ಟನ್ ಮಾತ್ರ ರಸಗೊಬ್ಬರ ಪೂರೈಸಿದೆ. ಹೀಗಾಗಿ, ಕಳೆದ ಏಪ್ರಿಲ್‌ನಿಂದ ಈವರೆಗೆ ವಿಭಾಗವಾರು ಸಭೆ ನಡೆಸಿ, ಮುಖ್ಯಮಂತ್ರಿಗಳು ಮತ್ತು ನಾನು (ಚಲುವರಾಯಸ್ವಾಮಿ) ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ರಸಗೊಬ್ಬರ ಪೂರೈಸುವಂತೆ ಮನವಿ ಮಾಡಿದ್ದೇವೆ. ಕೇಂದ್ರ ಸರ್ಕಾರದ ಜೊತೆ ನಮ್ಮ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ” ಎಂದು ಹೇಳಿದರು.
“ಡಿಎಪಿ ಗೊಬ್ಬರವನ್ನು ಕಡಿಮೆ ಬಳಕೆ ಮಾಡಿ ಅಂತ ಕೇಂದ್ರ ಸರ್ಕಾರ ಹೇಳಿದೆ. ಡಿಎಪಿ ಹೆಚ್ಚು ಬಳಕೆಯಿಂದ ಮಣ್ಣಿನ ಸ್ವತ್ವ ಕಡಿಮೆಯಾಗುತ್ತದೆ. ಹೀಗಾಗಿ, 70,000 ಮೆಟ್ರಿಕ್ ಟನ್ ಕಡಿಮೆ ಬಳಕೆ ಮಾಡಲಾಗುತ್ತಿದೆ. ಹಂತ ಹಂತವಾಗಿ ಯೂರಿಯಾ ಬಳಕೆ ಮಾಡಲು ಸಲಹೆ ನೀಡಿದ್ದೇವೆ” ಎಂದರು.
“ರೈತರು ಸಮಾಧಾನದಿಂದ ಇರುವಾಗ ನೀವು ರಾಜಕಾರಣ ಮಾಡಿದ್ದೀರಿ. ಕೇಂದ್ರ ಸರ್ಕಾರ 2.70 ಲಕ್ಷ ಮೆಟ್ರಿಕ್ ಟನ್ ಕಡಿಮೆ ರಸಗೊಬ್ಬರ ಪೂರೈಸಿದ್ದರೂ ನಿಭಾಯಿಸಿದ್ದೇವೆ. ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ 2.75 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಬರಬೇಕಿದೆ. ನೀವು, ರಾಜಕಾರಣ ಮಾಡಿದಾಗ ವಾಸ್ತವ ಸತ್ಯ ಏನೆಂದು ಹೇಳಬೇಕಾಯಿತು” ಎಂದು ಹೇಳಿದರು.
ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ಪ್ರಸ್ತಾಪ
“ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ವಿಚಾರವಾಗಿ ಈ ಹಿಂದಿನ ಸರ್ಕಾರ 9 ಕೇಸ್‌ಗಳನ್ನು ಹಾಕಿ ಸಿಐಡಿ ತನಿಖೆಗೆ ವಹಿಸಿತ್ತು. ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ಈಗಿನ ಸಮಸ್ಯೆ ಅಲ್ಲ. ಈ ಹಿಂದಿನಿಂದಲೂ ಕಾಳಸಂತೆಯಲ್ಲಿ ರಸಗೊಬ್ಬರ ಮಾರುತ್ತಿದ್ದಾರೆ. ಪ್ರಸಕ್ತ ವರ್ಷ 24 ಗಂಟೆ ನಿಗಾವಹಿಸಿ 450 ಮೆಟ್ರಿಕ್ ಟನ್ ಗೊಬ್ಬರ ಜಪ್ತಿ ಮಾಡಿದ್ದೇವೆ” ಎಂದು ತಿಳಿಸಿದರು.
ಇದನ್ನೂ ಓದಿ: ಕರ್ನಾಟಕದಿಂದ ಅಕ್ರಮವಾಗಿ 15 ಟನ್ ಯೂರಿಯಾ ಕೇರಳಕ್ಕೆ ಸಾಗಾಟ!
“ಕೃಷಿ ಇಲಾಖೆಯಲ್ಲಿ ಎರಡು ವರ್ಷ ಏನೂ ಸಮಸ್ಯೆ ಇಲ್ಲದೆ ನಿಭಾಯಿಸಿದ್ದೇನೆ. ಈ ಬಾರಿ ಮಾತ್ರ ಏಕೆ ಸಮಸ್ಯೆ ಆಗಿದೆ? ರೈತರಿಗೆ ಯಾವ ರೀತಿ ಸ್ಪಂದಿಸಬೇಕು, ಏನೆಲ್ಲಾ ಮಾಡಬೇಕು ಮಾಡಿದ್ದೇನೆ. ನಾನು ಆತ್ಮಸಾಕ್ಷಿಯಿಂದ, ಬದ್ಧತೆಯಿಂದ ಕೆಲಸ ಮಾಡುತ್ತಿದ್ದೇನೆ. ಈ ಬಾರಿ ನೀವು ರಾಜಕಾರಣ ಮಾಡದಿದ್ದರೆ ಬೀದಿಗೆ ಬರುತ್ತಿರಲಿಲ್ಲ. ಕೇಂದ್ರ ಸರ್ಕಾರದ ಜೊತೆ ಸಹಯೋಗದೊಂದಿಗೆ ನಿಭಾಯಿಸುತ್ತಿದ್ದೆ. ಕೇವಲ ಕರ್ನಾಟಕದಲ್ಲಿ ಮಾತ್ರ ಕೊರತೆ ಆಗಿಲ್ಲ, ತೆಲಂಗಾಣ, ಆಂಧ್ರದಲ್ಲಿ ರೈತರು ರಸಗೊಬ್ಬರ ಕೊರತೆಯಿಂದ ಗಲಾಟೆ ಮಾಡಿದ್ದಾರೆ. ಕರ್ನಾಟಕದಲ್ಲಿ ರಸಗೊಬ್ಬರ ಕೊರತೆ ಕಡಿಮೆಯಾಗಿದೆ” ಎಂದು ಸಭೆಗೆ ತಿಳಿಸಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:17 pm, Wed, 13 August 25