ಕ್ರಿಮಿನಲ್ ವ್ಯಕ್ತಿಯನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಮಾಡಿತೇ ಸರ್ಕಾರ?: ಸಿಡಿದೆದ್ದ ಯತ್ನಾಳ್
ವಿಜಯಪುರ ಜಿಲ್ಲೆಗೆ ಪಬ್ಲಿಕ್ ಪ್ರಾಸಿಕ್ಯೂಟರ್ (ಪಿಪಿ) ಆಗಿ ಸೈಯದ್ ಬಾಷಾ ಖಾದ್ರಿ ಅವರನ್ನು ಸರ್ಕಾರ ನೇಮಕ ಮಾಡಿದೆ. ಈ ನೇಮಕಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಪಿಪಿ ಆಗಿ ಸೈಯದ್ ಬಾಷಾ ಖಾದ್ರಿ ಅವರನ್ನು ನೇಮಕ ಮಾಡಿರುವುದನ್ನು ಸರ್ಕಾರ ಹಿಂಪಡೆಯಬೇಕು. ಸೈಯದ್ ಬಾಷಾ ಖಾದ್ರಿ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದರು.

ಬೆಂಗಳೂರು, ಆಗಸ್ಟ್ 13: ವಿಜಯಪುರ (Vijayapura) ಜಿಲ್ಲೆಗೆ ಸರ್ಕಾರಿ ಅಭಿಯೋಜಕರಾಗಿ (Public Prosecutor) ಸರ್ಕಾರಿ ವಕೀಲ ಸೈಯದ್ ಬಾಷಾ ಖಾದ್ರಿ ಅವರನ್ನು ನೇಮಕ ಮಾಡಿದಕ್ಕೆ ವಿಧಾನಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಆಕ್ಷೇಪ ವ್ಯಕ್ತಪಡಿಸಿದರು. “ಸೈಯದ್ ಬಾಷಾ ಖಾದ್ರಿ ಓರ್ವ ಕ್ರಿಮಿನಲ್, ಕೊಲೆಗಡುಕ. ಸೈಯದ್ ಕ್ರಿಮಿನಲ್ ಶಿಕ್ಷೆಗೆ ಗುರಿಯಾಗಿ ಗಡಿಪಾರು ಶಿಕ್ಷೆಗೂ ಗುರಿಯಾಗಿದ್ದನು. ಇಂತಹ ಕ್ರಿಮಿನಲ್ ವ್ಯಕ್ತಿಯನ್ನು ಸರ್ಕಾರಿ ಅಭಿಯೋಜಕರಾಗಿ ಸರ್ಕಾರ ನೇಮಿಸಿದೆ. ಇದು ಸರ್ಕಾರದಿಂದ ಓಲೈಕೆಯ ಅತಿರೇಕತನ, ತಕ್ಷಣ ವಜಾಮಾಡಬೇಕೆಂದು ವಿಧಾನಸಭೆಯಲ್ಲಿ ಆಗ್ರಹಿಸಿದರು.
ಇದಕ್ಕೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಉತ್ತರ ನೀಡಿದರು. ಸೈಯದ್ ಬಾಷಾ ಖಾದ್ರಿಯನ್ನು ಒಂದು ವರ್ಷದ ಅವಧಿಗೆ ಆಯ್ಕೆ ಮಾಡಲಾಗಿದೆ. ಗಡಿಪಾರಾದ ವಕೀಲ ಕೋರ್ಟ್ಗೆ ಬಂದು ವಕಾಲತ್ತು ಮಾಡಲು ಆಗುವುದಿಲ್ಲ. ಖಾದ್ರಿಯ ಪೊಲೀಸ್ ದಾಖಲೆಯನ್ನು ಸರ್ಕಾರ ಪರಿಶೀಲಿಸಿಲ್ಲ ಎಂದು ಹೇಳಿದರು.
ಬಸನಗೌಡ ಪಾಟೀಲ್ ಯತ್ನಾಳ್: ಸೈಯದ್ ಬಾಷಾ ಖಾದ್ರಿ ವಜಾಮಾಡದಿದ್ದರೇ ಧರಣಿ ಕೂರುವುದಾಗಿ ಎಚ್ಚರಿಕೆ ಎಚ್ಚರಿಕೆ ನೀಡಿದರು.
ಹೆಚ್ಕೆ ಪಾಟೀಲ್: ಸರ್ಕಾರದ ಹಂತದಲ್ಲಿ ಪರಿಶೀಲಿಸುತ್ತೇವೆ. ಚರ್ಚೆ ನಡೆಸಿ ಕ್ರಮಕೈಗೊಳ್ಳುತ್ತೇವೆ ಎಂದು ಉತ್ತರಿಸಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಸ್ಪೀಕರ್ ಯು ಟಿ ಖಾದರ್, ಸೋಮವಾರ ಇದಕ್ಕೆ ಉತ್ತರ ಕೊಡಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಧರಣಿ ಕೈಬಿಟ್ಟರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:54 pm, Wed, 13 August 25



