AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಾತಂತ್ರ್ಯ ದಿನಾಚರಣೆಗೆ ಮಾಣಿಕ್ ಷಾ ಮೈದಾನ ಸಜ್ಜು: ಸಾರ್ವಜನಿಕರಿಗೆ ಇ-ಪಾಸ್, ಸಂಚಾರ ನಿಷೇಧ!

79th Independence Day: 79ನೇ ಸ್ವಾತಂತ್ರ್ಯ ದಿನಾಚರಣೆಗೆ ಕ್ಷಣಗಣನೆ ಶುರುವಾಗಿದೆ. ಇತ್ತ ಬೆಂಗಳೂರಿನ ಮಾಣಿಕ್‌ಷಾ ಪರೇಡ್ ಮೈದಾನ ಕೂಡ ಸ್ವಾತಂತ್ರ್ಯ ದಿನಾಚರಣೆಗೆ ಸಜ್ಜಾಗಿದೆ. ಇದೇ ಮೊದಲ ಬಾರಿಗೆ ಪರೇಡ್ ವೀಕ್ಷಣೆಗೆ ಸಾರ್ವಜನಿಕರಿಗೆ ಇ-ಪಾಸ್​​ ಸೌಲಭ್ಯವನ್ನು ಒದಗಿಸಲಾಗಿದೆ. ಕೆಲ ಮಾರ್ಗಗಳಲ್ಲಿ ಸಂಚಾರ ನಿರ್ಬಂಧ ಹೇರಲಾಗಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ.

ಸ್ವಾತಂತ್ರ್ಯ ದಿನಾಚರಣೆಗೆ ಮಾಣಿಕ್ ಷಾ ಮೈದಾನ ಸಜ್ಜು: ಸಾರ್ವಜನಿಕರಿಗೆ ಇ-ಪಾಸ್, ಸಂಚಾರ ನಿಷೇಧ!
ಮಾಣಿಕ್‌ಷಾ ಪರೇಡ್ ಮೈದಾನ
ಶಾಂತಮೂರ್ತಿ
| Updated By: ಗಂಗಾಧರ​ ಬ. ಸಾಬೋಜಿ|

Updated on:Aug 14, 2025 | 7:53 AM

Share

ಬೆಂಗಳೂರು, ಆಗಸ್ಟ್ 14: ಆಗಸ್ಟ್ ತಿಂಗಳು ಬಂದರೆ ಥಟ್ ಅಂತಾ ನೆನಪಾಗುವುದು ಸ್ವಾತಂತ್ರ್ಯ ದಿನಾಚರಣೆ (Independence Day). ಆಕರ್ಷಕ ಪಥ ಸಂಚಲನ, ಬೈಕ್ ಸ್ಟಂಟ್ ಜೊತೆಗೆ ಮೈನವಿರೇಳಿಸುವ ರೋಮಾಂಚನ ಕ್ಷಣಗಳನ್ನ ಕಣ್ತುಂಬಿಕೊಳ್ಳಲು ಜನರು ಕಾತುರರಾಗಿದ್ದಾರೆ. 79ನೇ ಸ್ವಾತಂತ್ರ್ಯ ದಿನಾಚರಣೆಗೆ ಸಿಲಿಕಾನ್ ಸಿಟಿಯ ಮಾಣಿಕ್ ಷಾ ಪರೇಡ್ ಮೈದಾನ (Manik Shaw Parade Ground) ಸಜ್ಜಾಗಿದೆ. ಹಾಗಾದರೆ ಈ ಬಾರಿಯ ವಿಶೇಷತೆಗಳೇನು ಎಂದು ತಿಳಿಯಿರಿ.

ರಾಜಧಾನಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವದ ಭರ್ಜರಿ ಸಿದ್ಧತೆ ಮಾಡಲಾಗಿದೆ. ಆಗಸ್ಟ್‌ 15 ರಂದು ಬೆಳಗ್ಗೆ 9 ಗಂಟೆಗೆ ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸ್ವಾತಂತ್ರ್ಯೋತ್ಸವದ ಪ್ರಮುಖ ಆಕರ್ಷಣೆಯಾದ ಪರೇಡ್​ನ ಅಂತಿಮ ಹಂತದ ರಿಹರ್ಸಲ್‌ ನಡೆಯುತ್ತಿದ್ದು, ನಿನ್ನೆ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಹಾಗೂ ಪೊಲೀಸ್‌ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಪರೇಡ್‌ ರಿಹರ್ಸಲ್‌ನಲ್ಲಿ ಭಾಗಿಯಾಗಿ ಸಿದ್ಧತೆಗಳನ್ನ ಪರಿಶೀಲಿಸಿದರು.

ಇದನ್ನೂ ಓದಿ: Independence Day 2025: ಸ್ವಾತಂತ್ರ್ಯ ದಿನದಂದು ಮಾಡುವ ಕೇಸರಿ, ಬಿಳಿ, ಹಸಿರು ಬಣ್ಣದ ಈ ತಿನಿಸುಗಳು ರುಚಿಕರ ಮಾತ್ರವಲ್ಲ ಆರೋಗ್ಯಕ್ಕೂ ಪ್ರಯೋಜನಕಾರಿ

ಇನ್ನು ಈ ಬಾರಿ ಸ್ವಾತಂತ್ರ್ಯೋತ್ಸವ ಪರೇಡ್‌ನಲ್ಲಿ ಒಟ್ಟು 30 ತುಕಡಿಗಳಿಂದ ಸುಮಾರು 1 ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗಲಿದ್ದು, ಗೋವಾ ಪೊಲೀಸರ ವಿಶೇಷ ತಂಡ ಕೂಡ ಪರೇಡ್‌‌ನಲ್ಲಿ ಭಾಗಿಯಾಗಲಿದೆ. ಕೆಸ್​​ಆರ್​​ಪಿ (KSRP), ಬಿಎಸ್​ಎಫ್​ (BSF) ಮತ್ತು ಸಿಎಆರ್​ (CAR), ಟ್ರಾಫಿಕ್‌ ಪೊಲೀಸ್‌, ಡಾಗ್‌ ಸ್ಕ್ವಾಡ್‌, ಪೊಲೀಸ್‌ ಬ್ಯಾಂಡ್‌ ಸೇರಿದಂತೆ ವಿವಿಧ ತಂಡಗಳು ಗೌರವ ರಕ್ಷೆ ಸ್ವೀಕರಿಸಲಿದ್ದು, ವಿವಿಧ ಶಾಲೆಗಳ ಮಕ್ಕಳು ಸಾಂಸ್ಕೃತಿಕ ಕಾರ್ಯಗಳನ್ನ ನಡೆಸಿಕೊಡಲಿದ್ದಾರೆ. ಇನ್ನು ಭದ್ರತಾ ದೃಷ್ಟಿಯಿಂದ ಮೈದಾನದ ಸುತ್ತ 100 ಸಿಸಿಟಿವಿ ಅಳವಡಿಸಲಾಗಿದ್ದು, 2 ಬ್ಯಾಗೇಜ್‌ ಸ್ಕ್ಯಾನರ್‌ಗಳನ್ನ ಅಳವಡಿಸಲಾಗಿದೆ. ಅಲ್ಲದೇ ಕಾರ್ಯಕ್ರಮಕ್ಕೆ ಬರುವವರಿಗೆ ಕಾರ್ಯಕ್ರಮ ನಡೆಯುವ ಜಾಗದಲ್ಲಿ ಮೊಬೈಲ್‌ ಬಳಕೆಯನ್ನ ಕೂಡ ನಿಷೇಧಿಸಲಾಗಿದೆ ಎಂದು  ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಸಿಲಿಕಾನ್ ಸಿಟಿ ಜನರಿಗೆ ಸುವರ್ಣ ಅವಕಾಶ

ಇನ್ನು ಈ ಬಾರಿ ಸ್ವಾತಂತ್ರ್ಯೋತ್ಸವದ ಪರೇಡ್ ವೀಕ್ಷಣೆಗೆ ಸಿಲಿಕಾನ್ ಸಿಟಿ ಜನರಿಗೆ ಸುವರ್ಣ ಅವಕಾಶ ನೀಡಲಾಗಿದ್ದು, ಈ ವರ್ಷ 3 ಸಾವಿರ ಸಾರ್ವಜನಿಕರಿಗೆ ಪರೇಡ್ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಸಾರ್ವಜನಿಕರು ಆನ್‌ಲೈನ್ ಪೋರ್ಟಲ್ ಸೇವಾ ಸಿಂಧೂವಿನಲ್ಲಿ ಉಚಿತ ಪಾಸ್ ಅಪ್ಲೈ ಮಾಡಿ ಪಡೆಯುವುದಕ್ಕೆ ಅವಕಾಶ ನೀಡಲಾಗಿದೆ. ಜೊತೆಗೆ ಈ ವರ್ಷ ರಾಜ್ಯದ ಗ್ಯಾರಂಟಿ ಸ್ಕಿಮ್​​ಗಳ ಬಗ್ಗೆ ಗಮನ ಸೆಳೆಯಲು ಸರ್ಕಾರ ಸಜ್ಜಾಗಿದ್ದು, ಗ್ಯಾರಂಟಿ ಸ್ಕಿಮ್​ಗಳ ಮಹತ್ವ ಸಾರುವ ನೃತ್ಯ ರೂಪಕಗಳನ್ನ ಬಿಬಿಎಂಪಿಯ ಶಾಲಾ ವಿದ್ಯಾರ್ಥಿಗಳು ಪ್ರದರ್ಶನ ನೀಡಲಿದ್ದಾರೆ. ಇತ್ತ ಈಗಾಗಲೇ ಮಾಣಿಕ್ ಷಾ ಮೈದಾನದಲ್ಲಿ ಸಿದ್ಧತೆಗಳು ಪೂರ್ಣಗೊಂಡಿದ್ದು, ಬಿಬಿಎಂಪಿಯ ವತಿಯಿಂದ ಎಲ್ಲಾ ವ್ಯವಸ್ಥೆ ಮೇಲ್ವಿಚಾರಣೆ ಮಾಡಲಾಗಿದೆ.

ಇನ್ನು ಎಂದಿನಂತೆ ಮಾಣಿಕ್ ಷಾ ಮೈದಾನ ಸುತ್ತಮುತ್ತ ಸಂಚಾರ ನಿರ್ಬಂಧ ಇರಲಿದ್ದು, ಕೆಲ ರಸ್ತೆಗಳಲ್ಲಿ ಪಾರ್ಕಿಂಗ್​ಗೆ ನಿಷೇಧ ಹೇರಲಾಗಿದೆ. ಸಂಚಾರಕ್ಕೆ ಅಡಚಣೆಯಾಗದಂತೆ ನಿಗಾವಹಿಸುವ ಜೊತೆಗೆ ಮೈದಾನದ ಭದ್ರತೆಗೆ 2 ಸಾವಿರ ಪೊಲೀಸರನ್ನ ನಿಯೋಜಿಸಲಾಗಿದ್ದು, ಕೆಲ ರಸ್ತೆಗಳ ಸಂಚಾರ ನಿರ್ಬಂಧಿಸಲಾಗಿದೆ.

ಎಲ್ಲೆಲ್ಲಿ ಸಂಚಾರ ನಿಷೇಧ?

  • ಮಾಣಿಕ್ ಷಾ ಮೈದಾನ ಸುತ್ತಮುತ್ತ
  • BRV ಜಂಕ್ಷನ್ ನಿಂದ ಕಾಮರಾಜ ಜಂಕ್ಷನ್​
  • ಕಬ್ಬನ್ ಪಾರ್ಕ್ ಸುತ್ತಮುತ್ತಲಿನ ರಸ್ತೆ
  • ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣ
  • ಕಬ್ಬನ್ ರಸ್ತೆ, ಸಿ.ಟಿ.ಓ ವೃತ್ತದಿಂದ ಕೆ.ಆರ್.ರಸ್ತೆ ಮತ್ತು ಕಬ್ಬನ್ ರಸ್ತೆ ಜಂಕ್ಷನ್​
  • ಎಂ.ಜಿ.ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ರಸ್ತೆವರೆಗೆ

ಇದನ್ನೂ ಓದಿ: Independence Day 2025: ಸ್ವಾತಂತ್ರ್ಯೋತ್ಸವದಂದು ಬೆಳಗ್ಗಿನ ಉಪಹಾರಕ್ಕೆ ತಯಾರಿಸಿ ತ್ರಿವರ್ಣ ಇಡ್ಲಿ

ಒಟ್ಟಿನಲ್ಲಿ ಬ್ರಿಟೀಷರ ದಾಸ್ಯದಿಂದ ಸ್ವಾತಂತ್ರ್ಯ ಪಡೆದ ಸಿಹಿನೆನಪಿನ ಅಂಗವಾಗಿ ದೇಶಪ್ರೇಮದ ಸಂದೇಶ ಸಾರುವ ಸ್ವಾತಂತ್ರ್ಯೋತ್ಸವದ ಆಚರಣೆಗೆ ರಾಜಧಾನಿ ಸಜ್ಜಾಗಿದ್ದು, ಈ ಬಾರಿ ಸಾರ್ವಜನಿಕರಿಗೆ ಕೂಡ ಇ ಪಾಸ್ ನೀಡುವ ಮೂಲಕ ಪರೇಡ್ ವೀಕ್ಷಣೆಗೆ ಅವಕಾಶ ನೀಡಿರುವುದು ಸಿಟಿ ಜನರ ಕಾತುರವನ್ನ ಮತ್ತಷ್ಟು ಹೆಚ್ಚಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:49 am, Thu, 14 August 25