Independence Day 2025: ಸ್ವಾತಂತ್ರ್ಯ ದಿನದಂದು ಮಾಡುವ ಕೇಸರಿ, ಬಿಳಿ, ಹಸಿರು ಬಣ್ಣದ ಈ ತಿನಿಸುಗಳು ರುಚಿಕರ ಮಾತ್ರವಲ್ಲ ಆರೋಗ್ಯಕ್ಕೂ ಪ್ರಯೋಜನಕಾರಿ
ಪ್ರತಿಯೊಬ್ಬರೂ ಸ್ವಾತಂತ್ರ್ಯ ದಿನವನ್ನು ತಮ್ಮದೇ ಆದಂತಹ ರೀತಿಯಲ್ಲಿ ಆಚರಿಸುತ್ತಾರೆ. ಆದ್ರೆ ಈ ವಿಶೇಷ ದಿನದಂದು, ಕೆಲವರು ಯಾವುದೋ ಒಂದು ಭಾಗದಲ್ಲಿ ಧ್ವಜದ ಬಣ್ಣಗಳನ್ನು ಅಳವಡಿಸಿಕೊಳ್ಳಲು ಬಯಸುತ್ತಾರೆ. ಅದು ಅವರ ಬಟ್ಟೆಯಲ್ಲಾಗಲಿ ಅಥವಾ ಆಹಾರದಲ್ಲಾಗಲಿ, ಆ ಬಣ್ಣಗಳನ್ನು ಸೇರಿಸಿಕೊಳ್ಳುತ್ತಾರೆ. ಅದು ತಪ್ಪಲ್ಲ. ಅದರಲ್ಲಿಯೂ ತಮ್ಮ ಆಹಾರದಲ್ಲಿ ತ್ರಿವರ್ಣ ಬಣ್ಣಗಳನ್ನು ಬಳಸುವುದಾದರೆ ಅದನ್ನು ಕೂಡ ಆರೋಗ್ಯಕರ ಮಾದರಿಯಲ್ಲಿ ಬಳಕೆ ಮಾಡಬಹುದು. ಹಾಗಾದರೆ ನಮ್ಮ ಧ್ವಜದ ತ್ರಿವರ್ಣ ಬಣ್ಣವನ್ನು ಖಾದ್ಯದಲ್ಲಿ ನೋಡಲು ಯಾವ ರೀತಿಯ ತರಕಾರಿ ಅಥವಾ ಪದಾರ್ಥಗಳನ್ನು ಬಳಸಬೇಕು? ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಿ.

ಬಣ್ಣ ಬಣ್ಣದ ತಿನಿಸುಗಳನ್ನು ನೋಡುವುದು ನಮ್ಮ ಕಣ್ಣಿಗೆ ಒಂದು ರೀತಿಯ ಹಬ್ಬವಿದ್ದಂತೆ. ಮಾತ್ರವಲ್ಲ ಈ ರೀತಿ ಕಲರ್ ಫುಲ್ ಆಹಾರಗಳು ಆರೋಗ್ಯಕ್ಕೂ ಒಳ್ಳೆಯದು. ಜೊತೆಗೆ ಇವುಗಳಿಂದ ಪೋಷಕಾಂಶಗಳು ಕೂಡ ದೊರೆಯುತ್ತವೆ. ಬೆಳಿಗ್ಗಿನ ಉಪಹಾರ ಆರೋಗ್ಯಕರವಾಗಿಯೂ ನೋಡುವುದಕ್ಕೆ ಸುಂದರವಾಗಿಯೂ ಇದ್ದಲ್ಲಿ ಕಣ್ಣಿಗೂ ತೃಪ್ತಿ ಸಿಗುತ್ತದೆ ಜೊತೆಗೆ ಹೊಟ್ಟೆಯೂ ತುಂಬುತ್ತದೆ. ವಿಶೇಷವಾಗಿ, ಅಂತಹ ಆಹಾರಗಳು ಮಕ್ಕಳಿಗೆ ತುಂಬಾ ಇಷ್ಟವಾಗುತ್ತದೆ. ಹಾಗಾಗಿ ಅವುಗಳನ್ನು ತಿನ್ನುವುದಕ್ಕೆ ಹೆಚ್ಚಿನ ಒಲವು ತೋರುತ್ತಾರೆ. ಇದಲ್ಲದೆ, ಆರೋಗ್ಯಕರ ತರಕಾರಿ ಮತ್ತು ಪದಾರ್ಥಗಳನ್ನು ಬಳಸಿ ಆಹಾರಗಳನ್ನು ತಯಾರಿಸುವುದರಿಂದ ಇದು ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿರುತ್ತದೆ. ಹಾಗಾಗಿ ಈ ಸ್ವಾತಂತ್ರ್ಯ ದಿನದಂದು ತ್ರಿವರ್ಣ ಬಣ್ಣದಿಂದ (tricolor recipes) ಆರೋಗ್ಯಕರ ತಿಂಡಿ ತಯಾರಿಸಿ ಸೇವನೆ ಮಾಡಿ. ಹಾಗಾದರೆ ನಮ್ಮ ಧ್ವಜದ ತ್ರಿವರ್ಣ ಬಣ್ಣದಿಂದ ಖಾದ್ಯ ತಯಾರಿಸಿ ಅವುಗಳಿಂದ ಸಿಗುವ ಆರೋಗ್ಯ (Health) ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಿ.
ತ್ರಿವರ್ಣ ಬಣ್ಣದಿಂದ ಇಡ್ಲಿ, ದೋಸೆ ಮಾಡಿ
ಮೂರು ಬಣ್ಣ ಬರಲು ನಾವು ಆಹಾರದಲ್ಲಿ ರವೆ ಅಥವಾ ಅಕ್ಕಿಯನ್ನು ಬಳಸಬಹುದು ಇದು ನಮಗೆ ಬೇಕಾಗಿರುವ ಬಿಳಿ ಬಣ್ಣವನ್ನು ನೀಡಲು ಸಹಾಯ ಮಾಡುತ್ತದೆ. ದೋಸೆ ಮಾಡುವುದಾದರೆ ಓಟ್ಸ್ ಅಥವಾ ಅವಲಕ್ಕಿಯನ್ನು ಕೂಡ ಬಳಸಬಹುದು. ಇನ್ನು ಕೇಸರಿ ಬಣ್ಣಕ್ಕಾಗಿ ನಾವು ಕ್ಯಾರೆಟ್ ಬಳಕೆ ಮಾಡಬಹುದು ಇನ್ನು ಹಸಿರು ಬಣ್ಣಕ್ಕಾಗಿ ಪಾಲಕ್, ಸಬ್ಬಸ್ಸಿಗೆ ಮತ್ತಿತರ ಸೊಪ್ಪನ್ನು ಬಳಕೆ ಮಾಡಬಹುದು ಇಲ್ಲವಾದಲ್ಲಿ ಕೊತ್ತಂಬರಿ ಸೊಪ್ಪನ್ನು ಉಪಯೋಗ ಮಾಡಬಹುದು. ಇವುಗಳಿಗೆ ಮತ್ತಷ್ಟು ರುಚಿ ನೀಡಲು ತೆಂಗಿನ ತುರಿಯನ್ನು ಕೂಡ ಬಳಸಬಹುದು. ನೀವು ಈ ರೀತಿಯ ಪದಾರ್ಥಗಳನ್ನು ಮಾಮೂಲಿ ದೋಸೆ, ಇಡ್ಲಿ ಮಾಡುವ ಹಾಗೆಯೇ ಮಾಡಿ ಮಕ್ಕಳಿಗೆ ಬಡಿಸಬಹುದು. ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದ ಈ ಇಡ್ಲಿ ಅಥವಾ ದೋಸೆ ತುಂಬಾ ರುಚಿಕರವಾಗಿರುವುದಲ್ಲದೆ, ಎಲ್ಲರ ಆರೋಗ್ಯಕ್ಕೂ ಒಳ್ಳೆಯದು. ಮಕ್ಕಳು ಕೂಡ ಇವುಗಳನ್ನು ನೋಡಿ ಖುಷಿ ಪಡುತ್ತಾರೆ.
ಇದನ್ನೂ ಓದಿ: Independence Day 2025: ಸ್ವಾತಂತ್ರ್ಯೋತ್ಸವದಂದು ಬೆಳಗ್ಗಿನ ಉಪಹಾರಕ್ಕೆ ತಯಾರಿಸಿ ತ್ರಿವರ್ಣ ಇಡ್ಲಿ
ಯಾವ ರೀತಿಯ ಪ್ರಯೋಜನಗಳು ಸಿಗುತ್ತವೆ?
- ನೀವು ಬಳಸುವ ತರಕಾರಿಗಳು ಮತ್ತು ಆಹಾರ ಪದಾರ್ಥಗಳಲ್ಲಿ ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು, ಖನಿಜಗಳು ಮತ್ತು ಇತರ ಪೋಷಕಾಂಶಗಳಿವೆ. ವಿಶೇಷವಾಗಿ, ಹೆಚ್ಚಿನ ಪ್ರೋಟೀನ್ ಆಹಾರಗಳನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
- ವಿವಿಧ ಬಣ್ಣಗಳಲ್ಲಿ ಕಾಣಿಸಿಕೊಳ್ಳುವುದರಿಂದ, ಮಕ್ಕಳು ಅವುಗಳನ್ನು ತಿನ್ನುವ ಸಾಧ್ಯತೆ ಹೆಚ್ಚು. ಮಾತ್ರವಲ್ಲ ಇದು ಉತ್ತಮ ಪ್ರೋಬಯಾಟಿಕ್ ಆಹಾರವಾಗಿದ್ದು, ಮೂಳೆಗಳು ಮತ್ತು ಹಲ್ಲುಗಳಿಗೆ ತುಂಬಾ ಒಳ್ಳೆಯದು.
- ಕ್ಯಾರೆಟ್ ಆಹಾರದಲ್ಲಿ ಸೇರಿಸುವುದು ಕಣ್ಣಿನ ದೃಷ್ಟಿ ಮತ್ತು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು. ಇನ್ನು ಪಾಲಕ್ ಸೊಪ್ಪು ಕಬ್ಬಿಣ, ವಿಟಮಿನ್ ಸಿ, ಇ, ಫೈಬರ್ ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಹಾಗಾಗಿ ಇವೆಲ್ಲವೂ ಮಕ್ಕಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
- ಈ ದೋಸೆ ಅಥವಾ ಇಡ್ಲಿ ಬಹಳಷ್ಟು ಫೈಬರ್ ಅನ್ನು ಹೊಂದಿರುತ್ತವೆ. ಆದ್ದರಿಂದ, ಇದು ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ. ಮಾತ್ರವಲ್ಲ ಕ್ಯಾರೆಟ್ ಸೇವನೆ ಕಣ್ಣು ಮತ್ತು ಚರ್ಮಕ್ಕೆ ತುಂಬಾ ಒಳ್ಳೆಯದು.
- ಇನ್ನು ಕೊತ್ತಂಬರಿ ಸೊಪ್ಪು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದಲ್ಲದೆ, ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ತೆಂಗಿನಕಾಯಿ ಬಳಸುವುದರಿಂದ ತಕ್ಷಣದ ಶಕ್ತಿ ಸಿಗುತ್ತದೆ ಮತ್ತು ಆರೋಗ್ಯಕ್ಕೆ ಒಳ್ಳೆಯದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




