ಹಿರಣ್ಯಾಕ್ಷನ ಸಂಹಾರಕ್ಕೆ ಮಹಾವಿಷ್ಣು ವರಾಹ ರೂಪದಲ್ಲಿಯೇ ಅವತರಿಸುವುದು ಏಕೆ?

|

Updated on: Aug 27, 2020 | 2:38 PM

ಲೋಕ ರಕ್ಷಣೆಗಾಗಿ ಮಹಾವಿಷ್ಣು ಕಾಲಕ್ಕೆ ತಕ್ಕಂತೆ ದಶಾವತಾರಗಳನ್ನು ತಳೆದಿದ್ದಾನೆ. ಆ ಪೈಕಿ ಶ್ರೀಮನ್ನಾರಾಯಣ ತಳೆದ ಮೂರನೇ ಅವತಾರವಾದ್ರೂ ಯಾವುದು ಅನ್ನೋದ್ರ ಬಗ್ಗೆ ಇಲ್ಲಿದೆ ಮಾಹಿತಿ. ಧರ್ಮ ಸಂಸ್ಥಾಪನೆಗಾಗಿ ಶ್ರೀಮನ್ನಾರಾಯಣ ತಳೆದ ದಶಾವತಾರಗಳ ಪೈಕಿ ಮೂರನೇ ಅವತಾರವೇ ವರಾಹ ಅವತಾರ. ಚೈತ್ರ ಬಹುಳ ತ್ರಯೋದಶಿಯ ಮಧ್ಯಾಹ್ನದ ಸಮಯದಲ್ಲಿ ವಿಷ್ಣು ವರಾಹ ಅವತಾರ ತಳೆದ ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ ವರಾಹ ಅವತಾರದಲ್ಲಿ ಮಹಾವಿಷ್ಣುವು ಹಂದಿಯ ತಲೆ, ಮಾನವನ ದೇಹವುಳ್ಳ ರೂಪದಲ್ಲಿ ಅವತರಿಸಿದ ಎಂದು ಹೇಳಲಾಗುತ್ತೆ. ಅಷ್ಟಕ್ಕೂ, ಮಹಾವಿಷ್ಣು ಹಂದಿಯ ರೂಪದಲ್ಲಿ […]

ಹಿರಣ್ಯಾಕ್ಷನ ಸಂಹಾರಕ್ಕೆ ಮಹಾವಿಷ್ಣು ವರಾಹ ರೂಪದಲ್ಲಿಯೇ ಅವತರಿಸುವುದು ಏಕೆ?
Follow us on

ಲೋಕ ರಕ್ಷಣೆಗಾಗಿ ಮಹಾವಿಷ್ಣು ಕಾಲಕ್ಕೆ ತಕ್ಕಂತೆ ದಶಾವತಾರಗಳನ್ನು ತಳೆದಿದ್ದಾನೆ. ಆ ಪೈಕಿ ಶ್ರೀಮನ್ನಾರಾಯಣ ತಳೆದ ಮೂರನೇ ಅವತಾರವಾದ್ರೂ ಯಾವುದು ಅನ್ನೋದ್ರ ಬಗ್ಗೆ ಇಲ್ಲಿದೆ ಮಾಹಿತಿ.

ಧರ್ಮ ಸಂಸ್ಥಾಪನೆಗಾಗಿ ಶ್ರೀಮನ್ನಾರಾಯಣ ತಳೆದ ದಶಾವತಾರಗಳ ಪೈಕಿ ಮೂರನೇ ಅವತಾರವೇ ವರಾಹ ಅವತಾರ. ಚೈತ್ರ ಬಹುಳ ತ್ರಯೋದಶಿಯ ಮಧ್ಯಾಹ್ನದ ಸಮಯದಲ್ಲಿ ವಿಷ್ಣು ವರಾಹ ಅವತಾರ ತಳೆದ ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ

ವರಾಹ ಅವತಾರದಲ್ಲಿ ಮಹಾವಿಷ್ಣುವು ಹಂದಿಯ ತಲೆ, ಮಾನವನ ದೇಹವುಳ್ಳ ರೂಪದಲ್ಲಿ ಅವತರಿಸಿದ ಎಂದು ಹೇಳಲಾಗುತ್ತೆ. ಅಷ್ಟಕ್ಕೂ, ಮಹಾವಿಷ್ಣು ಹಂದಿಯ ರೂಪದಲ್ಲಿ ಅವತರಿಸಿದ್ದಾದ್ರೂ ಏಕೆ ಅನ್ನೋದಾದ್ರೆ..

ಪುರಾಣಗಳ ಪ್ರಕಾರ ಮಹಾವಿಷ್ಣುವಿನ ವಾಸಸ್ಥಾನವಾದ ವೈಕುಂಠದ ದ್ವಾರಪಾಲಕರಾದ ಜಯ ವಿಜಯರೊಂದಿಗೆ ವರಾಹ ಅವತಾರದ ಕತೆ ಆರಂಭವಾಗುತ್ತೆ. ಒಮ್ಮೆ ಮಹಾವಿಷ್ಣುವನ್ನು ಭೇಟಿ ಮಾಡಲು ನಾಲ್ವರು ಋಷಿ ಕುಮಾರರು ವೈಕುಂಠಕ್ಕೆ ಬರುತ್ತಾರೆ.

ದ್ವಾರ ಪಾಲಕರಾದ ಜಯ ವಿಜಯರಿಗೆ ಶಾಪ:
ವೈಕುಂಠದ ಏಳನೇ ದ್ವಾರದಲ್ಲಿ ಋಷಿ ಕುಮಾರರನ್ನ ದ್ವಾರಪಾಲಕರಾದ ಜಯ ವಿಜಯರು ತಡೆಯುತ್ತಾರೆ. ಅವರ ಮಧ್ಯೆ ವಾಗ್ವಾದವೂ ನಡೆಯುತ್ತದೆ. ನಾಲ್ವರು ಋಷಿ ಕುಮಾರರ ಬಗ್ಗೆ ತಿಳಿಯದೆ, ಅವರು ಬ್ರಹ್ಮನ ಮಾನಸ ಪುತ್ರರು ಎಂಬುದನ್ನೂ ತಿಳಿಯದೆ ದ್ವಾರ ಪಾಲಕರಾದ ಜಯ ವಿಜಯರು ಅವರೊಂದಿಗೆ ಜಗಳಕ್ಕೆ ನಿಲ್ಲುತ್ತಾರೆ.

ಎಷ್ಟೇ ಕೇಳಿದರು ಮಹಾ ವಿಷ್ಣುವಿನ ದರುಶನಕ್ಕೆ ಬಿಡುವುದಿಲ್ಲ, ಕೋಪಗೊಂಡ ಋಷಿ ಕುಮಾರರು ನಿಮ್ಮಲ್ಲಿನ ದೈವತ್ವವು ಮಾಯವಾಗಲಿ, ನೀವು ಸಾಮಾನ್ಯರಂತೆ ಭೂಮಿಯ ಮೇಲೆ ಜನಿಸಿರೆಂದು ಶಾಪವನ್ನ ನೀಡುತ್ತಾರೆ.

ಕೊನೆಗೆ ದ್ವಾರ ಪಾಲಕರಾದ ಜಯ ವಿಜಯರಿಗೆ ತಮ್ಮ ತಪ್ಪಿನ ಅರಿವಾಗುತ್ತೆ. ಅಹಂಕಾರದಿಂದ ಋಷಿ ಕುಮಾರರ ಶಾಪಕ್ಕೆ ಗುರಿಯಾದ ಜಯ ವಿಜಯರಿಗೆ ಲಕ್ಷ್ಮೀ ನಾರಾಯಣರು ಒಂದು ಸಲಹೆ ನೀಡುತ್ತಾರೆ. ಹಾಗೆ ನೀಡುವ ಸಲಹೆಯೇ ಭೂ ಲೋಕದಲ್ಲಿ ನನ್ನ ಭಕ್ತರಾಗಿ ಏಳು ಜನ್ಮಗಳನ್ನೆತ್ತಿ ಮತ್ತೆ ವೈಕುಂಠಕ್ಕೆ ಬರುತ್ತಿರೋ ಅಥವಾ ಶತ್ರುಗಳಾಗಿ ಮೂರು ಜನ್ಮಗಳನ್ನೆತ್ತಿ ಮತ್ತೆ ವೈಕುಂಠಕ್ಕೆ ಬರುತ್ತಿರೋ ಎಂಬ ಸಲಹೆ.

ನಾವು ಹೆಚ್ಚು ಕಾಲ ನಿಮ್ಮಿಂದ ದೂರವಿರಲು ಸಾಧ್ಯವಿಲ್ಲ, ಶತ್ರುಗಳಾಗಿ ಮೂರು ಜನ್ಮವನ್ನ ಎತ್ತಿ ನಾವು ಶೀಘ್ರವಾಗಿ ನಿಮ್ಮಲ್ಲಿಗೆ ಸೇರುತ್ತೆೇವೆಂದು ಜಯ ವಿಜಯರು ಹೇಳಿದ ನಿಮಿತ್ತ, ಜಯ ವಿಜಯರು ಹಿರಣ್ಯಾಕ್ಷ, ಹಿರಣ್ಯಕಶಿಪುವಾಗಿ ಭೂ ಲೋಕದಲ್ಲಿದ್ದ ಋಷಿ ಕಶ್ಯಪ ಮತ್ತು ದಿತಿ ದಂಪತಿಗಳ ಮಕ್ಕಳಾಗಿ ಜನಿಸುತ್ತಾರೆ.

ಈ ರಾಕ್ಷಸ ಸಹೋದರರು ದುಷ್ಟತನದಿಂದ ಬ್ರಹ್ಮಾಂಡದಲ್ಲಿ ಅನಾಹುತವನ್ನು ಸೃಷ್ಟಿಸ್ತಾರೆ. ಅದ್ರಲ್ಲೂ ಹಿರಿಯ ಸಹೋದರ ಹಿರಣ್ಯಾಕ್ಷ ಬ್ರಹ್ಮನನ್ನು ಕುರಿತು ತಪಸ್ಸು ಮಾಡುತ್ತಾನೆ. ಬ್ರಹ್ಮನಿಂದ ತನಗೆ ಯಾವುದೇ ಪ್ರಾಣಿ ಅಥವಾ ಮನುಷ್ಯನಿಂದ ಸಾವು ಬಾರದಂತೆ ವರ ಪಡೆಯುತ್ತಾನೆ.

ಬ್ರಹ್ಮನಿಂದ ವರ ಪಡೆದು ಅಹಂಕಾರದಿಂದ ಮೆರೆಯುತ್ತಿದ್ದ ಹಿರಣ್ಯಾಕ್ಷ ಭೂಮಿಯ ಮೇಲಿದ್ದ ಜನರನ್ನೂ, ದೇವತೆಗಳನ್ನೂ ಹಿಂಸಿಸ್ತಾನೆ. ಕಾರಣ, ಹಿರಣ್ಯಾಕ್ಷನಿಗೆ ಇಡೀ ಭೂಮಿಯನ್ನು ತನ್ನ ವಶದಲ್ಲಿ ಇಟ್ಟುಕೊಳ್ಳಬೇಕೆಂಬ ದುರಾಸೆ ಇತ್ತು.

ಭೂಮಿಯನ್ನು ಕದ್ದು ಮಹಾಸಾಗರಕ್ಕೆ ಎಸೆದ ಹಿರಣ್ಯಾಕ್ಷ:
ಒಮ್ಮೆ ಹಿರಣ್ಯಾಕ್ಷ ತನ್ನ ಬಳಿ ಇದ್ದ ವಿಶೇಷ ವರದಿಂದ ದೇವತೆಗಳ ಶಕ್ತಿ ಕುಂದಿಸುವೆ ಎಂದು ಘರ್ಜಿಸಿದ. ಅದಕ್ಕಾಗಿ ಹಿರಣ್ಯಾಕ್ಷ ಮಾಡಿದ್ದೇನು ಗೊತ್ತಾ? ಭೂಮಿಯನ್ನು ಕದ್ದು ಮಹಾಸಾಗರಕ್ಕೆ ಎಸೆದಿದ್ದು. ಸಾಗರದಲ್ಲಿದ್ದ ಭೂದೇವಿಯನ್ನು ರಕ್ಷಿಸುವ ಸಲುವಾಗಿ, ಮಹಾವಿಷ್ಣು ವರಾಹ ಅವತಾರ ತಳೆಯುತ್ತಾನೆ.

ಬ್ರಹ್ಮನಿಂದ ವರವನ್ನು ಪಡೆಯುವಾಗ ಹಿರಣ್ಯಾಕ್ಷನು ತನ್ನ ನಾಶಕ್ಕೆ ಹೆಸರಿಸಿದ ಪ್ರಾಣಿಗಳ ಪಟ್ಟಿಯಲ್ಲಿ ಹಂದಿಯನ್ನು ಸೇರಿಸಿರೋದಿಲ್ಲ. ಈ ಕಾರಣದಿಂದಾಗಿ, ದೊಡ್ಡ ದಂತಗಳನ್ನು ಹೊಂದಿದ ವರಾಹ ರೂಪವನ್ನು ತಳೆದು ಘರ್ಜಿಸುತ್ತಾ ಜಲ ಪ್ರವೇಶಿಸಿದ.

ಸಾಗರದೊಳಗಿದ್ದ ಭೂಮಿಯನ್ನು ತನ್ನ ಕೋರೆ ಹಲ್ಲುಗಳ ಮಧ್ಯೆ ಹಿಡಿದಿಟ್ಟುಕೊಂಡ. ಕೋರೆಗಳ ಮಧ್ಯೆ ಇರಿಸಿಕೊಂಡೇ ಪೃಥ್ವಿಯನ್ನು ಮೇಲಕ್ಕೆ ತಂದ. ನಂತರ ಹಿರಣ್ಯಾಕ್ಷನನ್ನು ಸಂಹರಿಸಿದ.

ಅಗ್ನಿ ಪುರಾಣ, ಭಾಗವತ ಪುರಾಣ, ದೇವಿ ಭಾಗವತ ಪುರಾಣ, ಪದ್ಮ ಪುರಾಣ, ವರಾಹ ಪುರಾಣ, ವಾಯು ಪುರಾಣ ಮತ್ತು ವಿಷ್ಣು ಪುರಾಣ ಸೇರಿದಂತೆ ವಿವಿಧ ಪುರಾಣಗಳು ವರಾಹದ ಈ ಕಥೆಯನ್ನು ನಿರೂಪಿಸುತ್ತವೆ.

ಮಹಾವಿಷ್ಣುವಿನ ವರಾಹ ಅವತಾರಕ್ಕೆ ಸಾಕ್ಷಿಯಾಗಿ ಆಂಧ್ರಪ್ರದೇಶದ ತಿರುಮಲದಲ್ಲಿ ಶ್ರೀ ವರಾಹಸ್ವಾಮಿ ದೇವಸ್ಥಾನವಿದೆ. ತಿಮ್ಮಪ್ಪನ ದೇವಸ್ಥಾನದ ಉತ್ತರಕ್ಕಿರುವ ಈ ದೇವಾಲಯವನ್ನು ಆದಿ-ವರಾಹ ಕ್ಷೇತ್ರ ಎಂದು ಕರೆಯಲಾಗುತ್ತೆ.

ತಿರುಪತಿಯಲ್ಲಿ ತಿಮ್ಮಪ್ಪ ನೆಲೆ ನಿಲ್ಲೋಕೆ ಸ್ಥಳ ನೀಡಿದವನು ಇದೇ ವರಾಹ ಸ್ವಾಮಿ. ಹೀಗಾಗೇ ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನಕ್ಕೂ ಮುನ್ನ ಕ್ಷೇತ್ರಪಾಲಕನಾದ ವರಾಹ ಸ್ವಾಮಿಯ ದರ್ಶನ ಮಾಡಬೇಕೆಂಬ ನಿಯಮವಿದೆ. ವರಾಹಸ್ವಾಮಿಯ ದರ್ಶನ ಮಾಡದೆ ತಿರುಪತಿ ಯಾತ್ರೆ ಪೂರ್ಣವಾಗಲ್ಲ ಅನ್ನೋ ನಂಬಿಕೆ ಇದೆ.

Published On - 2:24 pm, Thu, 27 August 20