ಮಹಾವಿಷ್ಣು ದುಷ್ಟರ ಸಂಹಾರಕ್ಕಾಗಿ ಮತ್ತು ಶಿಷ್ಟರ ರಕ್ಷಣೆಗಾಗಿ ನಾನಾ ಅವತಾರಗಳನ್ನ ಎತ್ತಿದ್ದಾನೆ. ಪ್ರತಿಯೊಂದು ಅವತಾರದಲ್ಲೂ ಧರ್ಮ ಸಂಸ್ಥಾಪನೆಯ ಬಗ್ಗೆ ಉಲ್ಲೇಖಿಸಿದ್ದಾನೆ. ಯುಗ ಯುಗಳ ಹಿಂದೆ ಪ್ರಳಯ ಕಾಲ ಸಮೀಪಿಸುವ ಸಂದರ್ಭದಲ್ಲಿ, ಭೂಮಂಡಲವನ್ನ ಸತ್ಯವ್ರತನೆಂಬ ರಾಜನು ಆಳುತ್ತಿದ್ದನು. ಸತ್ಯವ್ರತನು ನಾರಾಯಣನ ಪರಮ ಭಕ್ತನಾಗಿದ್ದನು. ತನ್ನ ಬದುಕಿನಲ್ಲಿ ವೈರಾಗ್ಯವನ್ನ ಹೊಂದಿದ ಸತ್ಯವ್ರತ ತನ್ನ ಸಿರಿ ಸಂಪತ್ತು ಹಾಗೂ ಸಾಮ್ರಾಜ್ಯವನ್ನ ತೊರೆದು, ಕೃತಮಲೆ ಎಂಬ ನದಿ ತೀರದಲ್ಲಿ ಪರ್ಣ ಕುಟೀರವನ್ನ ನಿರ್ಮಿಸಿ, ಕೇವಲ ಜಲಪಾನ ಮಾಡುತ್ತಾ, ಶ್ರೀಹರಿಯನ್ನ ಕುರಿತು ಘೋರವಾದ ತಪಸ್ಸಿಗೆ ಮುಂದಾದನು.
ಈ ನಡುವೆ ಒಂದು ದಿನ ಸತ್ಯವ್ರತ ನೀರನ್ನು ಕುಡಿಯಲು ನದಿ ತೀರಕ್ಕೆ ಬಂದನು. ಬೊಗಸೆಯಲ್ಲಿ ನೀರನ್ನ ಎತ್ತಿಕೊಂಡಂಥ ಸಂದರ್ಭದಲ್ಲಿ ಸತ್ಯವ್ರತನ ಕೈಯಲ್ಲಿ ಸಣ್ಣ ಮೀನೊಂದು ಸಹ ಸಿಲುಕಿಕೊಂಡಿತು. ಅದನ್ನು ನದಿಯಲ್ಲಿ ಬಿಡಬೇಕೆನ್ನುವಷ್ಟರಲ್ಲಿ ಆ ಮೀನು ರಾಜಾ ದಯವಿಟ್ಟು ನನ್ನನ್ನು ನದಿಯಲ್ಲಿ ಬಿಡಬೇಡ. ದೊಡ್ಡ ಮೀನುಗಳಿಂದ ನನ್ನನ್ನು ರಕ್ಷಿಸು ಎಂದು ಮನವಿ ಮಾಡಿಕೊಂಡಿತು.
ಮೀನು ಮಾತನಾಡುವುದನ್ನು ಕಂಡು ಆಶ್ಚರ್ಯ ಚಕಿತನಾದ ಸತ್ಯವ್ರತನು ಅದರ ಮೇಲೆ ದಯೆ ತೋರಿ, ಅದನ್ನು ತನ್ನ ಕಮಂಡಲದಲ್ಲಿ ಇರಿಸಿಕೊಂಡು ಕುಟೀರಕ್ಕೆ ಬಂದನು. ಮರುದಿನವೇ ಆ ಮೀನು ಕಮಂಡಲದ ತುಂಬಾ ಬೆಳೆದುಬಿಟ್ಟಿತು. ಇದರಿಂದ ಆಶ್ಚರ್ಯಗೊಂಡ ಸತ್ಯವ್ರತನು ಆ ಮೀನನ್ನ ಎತ್ತಿ ದೊಡ್ಡದಾದ ಪಾತ್ರೆಗೆ ಹಾಕಿದನು. ಆದರೆ, ಒಂದೇ ಘಳಿಗೆಯಲ್ಲಿ ಆ ಮತ್ಸ್ಯವು ಪಾತ್ರೆಯ ತುಂಬಾ ಬೆಳೆದು ರಾಜನಿಗೆ ಮತ್ತಷ್ಟು ಆಶ್ಚರ್ಯವನ್ನುಂಟು ಮಾಡಿತು.
ಇದ್ದಕ್ಕಿದ್ದಂತೆ ದೊಡ್ಡದಾಗುತ್ತಿದ್ದ ಮೀನನ್ನ ಕಂಡ ಸತ್ಯವ್ರತನು ಗಾಬರಿಗೆ ಒಳಗಾದನು. ಕೊನೆಗೆ ಸಮುದ್ರಕ್ಕೆ ಆ ಮೀನನ್ನ ತಂದು ಬಿಟ್ಟನು. ನಂತರ ಆ ಮೀನು ಸಮುದ್ರದ ಗಾತ್ರಕ್ಕೆ ತಕ್ಕಂತೆ ಬೆಳೆಯಲಾರಂಭಿಸಿತು. ಆಗ ರಾಜನು ಎಲೆ ಮತ್ಸ್ಯವೇ ನೀನು ಮಾನವರಂತೆ ಮಾತನಾಡಿ ಕೆಲವೇ ದಿನಗಳಲ್ಲಿ ಅಸಾಧಾರಣವಾಗಿ ಬೆಳೆದಿರುವೆ. ನೀನು ಯಾರು? ಸಾಮಾನ್ಯ ಮತ್ಸ್ಯವಂತೂ ಅಲ್ಲವೇ ಅಲ್ಲ. ಶ್ರೀಮನ್ನಾರಾಯಣನೇ ನನ್ನನ್ನು ಪರೀಕ್ಷಿಸಲು ಮತ್ಸ್ಯರೂಪದಿಂದ ಬಂದಿರುವನೆಂದು ನನ್ನ ಬಲವಾದ ನಂಬಿಕೆ ಎಂದು ಹೇಳುತ್ತಾ, ರಾಜನು ಮೀನಿನ ಎದುರು ಕರ ಜೋಡಿಸಿ ಶಿರಬಾಗಿ ಭಗವಂತನನ್ನು ಸ್ತುತಿಸ ತೊಡಗಿದನು.
ವಿಷ್ಣುವಿನ ಮತ್ಸ್ಯ ಅವತಾರ
ಶ್ರೀಹರಿಯು ಹೇಳಿದಂತೆ ಏಳನೆಯ ದಿನ ಇದ್ದಕಿದ್ದಂತೆ ಬಿರುಗಾಳಿ ಸಹಿತವಾದ ಗುಡುಗು ಸಿಡಿಲುಗಳಿಂದ ಕೂಡಿದ ಅತ್ಯಂತ ವಿನಾಶಕಾರಿಯಾದ ಮಳೆ ಬೀಳತೊಡಗಿತು. ಇಡೀ ಭೂಭಾಗವೇ ಜಲಾವೃತವಾಯಿತು. ಮಹಾ ಪ್ರಳಯ ಇಡೀ ಸೃಷ್ಟಿಯನ್ನೇ ಆಹುತಿ ತೆಗೆದುಕೊಳ್ಳುವಷ್ಟು ಪ್ರಬಲವಾಯಿತು.
ರಾಜನು ಏಕಾಗ್ರಚಿತ್ತನಾಗಿ ಶ್ರೀಹರಿಯನ್ನು ಧ್ಯಾನಿಸುತ್ತ ಶಾಂತನಾಗಿ ಕುಳಿತಿದ್ದನು, ಅಷ್ಟರಲ್ಲಿ ಸಪ್ತಋಷಿಗಳು ಕುಳಿತಿದ್ದ ದೋಣಿಯು ರಾಜನಲ್ಲಿಗೆ ಬಂದಿತು. ಸತ್ಯವ್ರತನು ಬೀಜ ಹಾಗೂ ವನಸ್ಪತಿಗಳೊಂದಿಗೆ ದೋಣಿಯಲ್ಲಿ ಕುಳಿತುಕೊಂಡನು. ಸಪ್ತಋಷಿಗಳು ರಾಜನಿಗೆ ಅಭಯವನ್ನಿಟ್ಟು ಶ್ರೀಹರಿಯ ಧ್ಯಾನದಲ್ಲಿ ತನ್ಮಯರಾಗಿರಲು ಸೂಚಿಸಿದರು.
ಮಹಾ ಮಳೆ, ಪ್ರಳಯದ ಭೀಕರತೆಯಿಂದ ಎಲ್ಲೆಲ್ಲೂ ನೀರು ಆವರಿಸಿತು, ಖಾಲಿ ನೆಲವು ಸಾಗರದಂತೆ ಜಲಾವೃತವಾಯಿತು. ಸಾಗರದ ಬೃಹದಾಕಾರದ ತೆರೆಗಳ ಹೊಯ್ದಾಟದಲ್ಲಿ ದೋಣಿಯು ಅಲ್ಲೋಲ ಕಲ್ಲೋಲವಾಗುತ್ತಿದ್ದರೂ ರಾಜನು ಹರಿಯನ್ನು ಧ್ಯಾನಿಸುತ್ತ ಧೈರ್ಯದಿಂದ ಇದ್ದನು. ಅಷ್ಟರಲ್ಲಿ ಬಂಗಾರದ ಬಣ್ಣದ ಬೃಹದಾಕಾರದ ಮತ್ಸ್ಯವು ವಿಹರಿಸುತ್ತ ದೋಣಿಯ ಸಮೀಪಕ್ಕೆ ಬರುವುದನ್ನು ಕಂಡರು.
ಹೊಸ ಪ್ರಕೃತಿ, ಹೊಸ ಸೃಷ್ಟಿಯನ್ನ ಕಂಡು ಸತ್ಯವ್ರತನು ಆಶ್ಚರ್ಯ ವ್ಯಕ್ತಪಡಿಸಿದನು. ಆಗ ಮತ್ಸ್ಯ ರೂಪದಲ್ಲಿದ್ದ ಮಹಾವಿಷ್ಣುವು ಪ್ರತ್ಯಕ್ಷವಾಗಿ ಪ್ರಳಯದಿಂದ ಭೂಮಿಯನ್ನ ರಕ್ಷಿಸಲು, ಪ್ರಕೃತಿಯನ್ನ ರಕ್ಷಿಸಲು ತಾನು ಈ ಅವತಾರ ತಾಳಿದೆ ಎಂದು ಹೇಳಿದ. ಅಷ್ಟೆ ಅಲ್ಲ ಧರ್ಮ ಸಂಸ್ಥಾಪನೆಗಾಗಿ ತಾನು ಮತ್ತೊಂದು ಅವತಾರದಲ್ಲಿ ಬರುವುದಾಗಿ ಹೇಳಿ ಅಲ್ಲಿಂದ ಮಾಯವಾದ. ಈ ರೀತಿ ಆ ಯುಗದಲ್ಲಿ ಮಹಾ ವಿಷ್ಣುವು ಮತ್ಸ್ಯ ಅವತಾರದಲ್ಲಿ ಬಂದು, ಮನುಕುಲವನ್ನ ರಕ್ಷಿಸಿದನು. ಅಂದಿನಿಂದ ಶುರುವಾದ ಸೃಷ್ಟಿಗೆ ಸತ್ಯವ್ರತನೇ ಮೊದಲ ಪುರುಷನಾದ ಎಂದು ಪುರಾಣ ಗ್ರಂಥದಲ್ಲಿ ಉಲ್ಲೇಖಿಸಲಾಗಿದೆ.
Published On - 2:48 pm, Wed, 26 August 20